ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಮನಸ್ಸಿನ ಮಾಲಿನ್ಯ ಸರಿಪಡಿಸಿಕೊಳ್ಳೋಣ

 ಬಾಳಿನಲ್ಲಿ ಮಾನವನಾದರೆ ಗಂಡಾಗಿ ಹುಟ್ಟಬೇಕು. ರಾತ್ರಿ ಎಷ್ಟು ಹೊತ್ತಿನ ವರೆಗೂ ಎಲ್ಲೂ,ಯಾರ ಜೊತೆಯೂ ಕೇವಲ ಒಂದು ಚಡ್ಡಿ ತೊಟ್ಟರೂ ಯಾರೂ ಏನೂ ಅನ್ನಲಾರರು. ಜೊತೆಗೆ ಅವರ ಮಾನ ಮರ್ಯಾದೆ ಹೋಗದು. ಮನೆಯ ಹಿರಿಯರ ಕಡಿವಾಣ ಇರದು. ಹೆಣ್ಣು ಮಕ್ಕಳಿಗೆ ಇದ್ದ ಹಾಗೆ ಅವರಿಗೆ ಅಲ್ಲಿ ಹೋಗಬೇಡ, ಇಲ್ಲಿ ಬರಬೇಡ, ಅವನ ಬಳಿ ಮಾತನಾಡಬೇಡ, ಯಾರದೇ ಬೈಕಿನಲ್ಲಿ , ಕಾರಿನಲ್ಲಿ ಓಡಾಡಬೇಡ, ಅದೂ ಇದೂ ತಿನ್ನಬೇಡ ಹೀಗೆ ಕಂಡೀಷನ್ ಇಲ್ಲ. ಆದರೆ ಅದೇ ಬದುಕಾಗಬಾರದು. ಪರರನ್ನು ಅವಂಬಿಸಿಯೇ ಬದುಕು ಸಾಗಿದರೆ ತನ್ನತನ ಇರದು. ತಾನು ಹುಟ್ಟಿದ ಬಳಿಕ ಮರದಂತೆ ನಾಲ್ಕು ಜನರಿಗೆ ನೆರಳಾದರೂ ಕೊಡಬೇಕು ಅಲ್ಲವೇ! ಹೂ ಹಣ್ಣು ಕೊಡಲು ಸಾಧ್ಯ ಆಗದೇ ಇದ್ದರೂ ಸಹ ಆದೀತು ಅಲ್ಲವೇ? ಪರೋಪಕಾರಿ ಆಗಿರ ಬೇಕೇ ಹೊರತು ಪರ ಉಪದ್ರವಿ ಆಗಬಾರದು.

    ಹಿಂದಿನ ಕಾಲದಲ್ಲಿ ಪ್ರತಿ ಸಂಜೆ ಸ್ನಾನ ಮಾಡಿ ದೀಪ ಬೆಳಗಿಸಿ ಭಜನೆ ಹಾಡಿದ ಬಳಿಕ ಒಳ್ಳೆಯ ಮನಸ್ಸು, ನೆಮ್ಮದಿ, ಧನಾತ್ಮಕ ಶಕ್ತಿ, ಉದಾತ್ತ ಆಲೋಚನೆಗಳು ಬರುತ್ತಿದ್ದವು. ಇಂದಿನ ದಿನಗಳಲ್ಲಿ ಟಿವಿ ಸೀರಿಯಲ್ ಗಳ ನಾಟಕ ಹೆಚ್ಚಿನ ಮಹಿಳೆಯರ ಮನಸ್ಸನ್ನು ಹಾಳು ಮಾಡಿ ಮನಸ್ಸಿನ ಮಾಲಿನ್ಯಕ್ಕೆ ಎಡೆ ಮಾಡಿ ಸಂಸಾರ ಹಾಳು ಮಾಡಿದೆ ಮತ್ತು ಮಾಡುತ್ತಿದೆ ಎಂದರೆ ತಪ್ಪಾಗದು.


  ನಿನ್ನೆ ನವೆಂಬರ್ ಹನ್ನೊಂದು, ಕರ್ನಾಟಕದ ವೀರ ಮಹಿಳೆ ಒನಕೆ  ಓಬವ್ವನ ಜನ್ಮದಿನ. ಕರ್ನಾಟಕದ ಮಹಿಳೆಯರು ಅನಾದಿ ಕಾಲದಿಂದಲೂ ಶೂರ, ದಿಟ್ಟ ವೀರರು ಎಂಬುದಕ್ಕೆ ಸಾಕ್ಷಿ ಅವಳು. ಆ ದಿಟ್ಟತನವನ್ನು ಇಂದಿನ ಮಹಿಳೆ ತೋರದೆ ಇದ್ದರೆ ಈಗಿನ ಹಾಗೆಯೇ ದೌರ್ಜನ್ಯ, ಕೊಲೆ , ಹಿಂಸೆ, ಮಾನಸಿಕ ಹಾಗೂ ದೈಹಿಕ ಹಿಂಸಾಚಾರಗಳು ನಡೆಯುತ್ತಲೇ ಇರುತ್ತವೆ. ಹೆಣ್ಣನ್ನು ಯಾವ ರೀತಿಯಿಂದಲೂ ಆಗಬಹುದು, ದೈಹಿಕವಾಗಿ ಅನುಭವಿಸಬೇಕು ಎಂಬ ವಾಂಛೆಯು ಅವಳನ್ನು ಸಾಯಿಸಿ ಶವದ ಜೊತೆ ಚಕ್ಕಂದವಾಡುವವರೆಗೂ ಈ ತಾಂತ್ರಿಕ ಯುಗದಲ್ಲಿ ತಲುಪಿದೆ ಎಂದರೆ ಜನರ ಮನಸ್ಸು ಎಷ್ಟು ಮಲಿನಗೊಂಡಿರಬೇಕು! ಯೋಚಿಸಬೇಕಾದ ಸಂಗತಿ. ಮತ್ತಿನ ಮತ್ತಲ್ಲಿ ತಾಯಿ ಯಾರು ಅಕ್ಕ ತಂಗಿಯರು ಯಾರು ಮಗಳು ಯಾರು ಎಂದು ಆಲೋಚಿಸದೆ ತನ್ನ ಆಸೆಯ ಕೈಗೆ ಮನಸ್ಸು ಕೊಟ್ಟ ಭೂಪನನ್ನು ಕೊಂದರೂ ಪಾಪ ಬಾರದು. ಎಲ್ಲರೂ ಕೆಟ್ಟವರೆ ಎಂದಲ್ಲ. ಆದರೆ ಕೆಟ್ಟ ಹುಳಗಳು ಈಗಲೂ ಇವೆ ಎನ್ನುವುದು ಸತ್ಯ. ಅದು ಗಂಡು ಮತ್ತು ಹೆಣ್ಣು ಇಬ್ಬರಲ್ಲಿಯೂ. ಕಾಟ ಕೊಡುವ ಅತ್ತೆ, ನಾದಿನಿ, ಓರಗಿತ್ತಿ, ಸವತಿ ಎಲ್ಲರೂ ಹೆಂಗಸರೇ. ಹೆಣ್ಣನ್ನು ಕೀಳಾಗಿ ನೋಡುವ ಪತಿ, ಮಾವ, ಭಾವಂದಿರು, ಉಳಿದ ಅಪರಿಚಿತ ಗಂಡಸರು ಮೇಲ್ ಎಂದು ಕರೆಸಿಕೊಳ್ಳಲು ಅನ್ ಲಾಯಕ್ ಅಲ್ಲವೇ?
    ಅದರ ಜೊತೆ ಪರಿಸರವೂ ಹೆಣ್ಣೆಂದು ನಂಬುವವರು ನಾವು. ಮಾನವರ ದಬ್ಬಾಳಿಕೆ ಪ್ರಕೃತಿ ಮಾತೆಯ ಮೇಲೂ ನಡೆದು ಅವಳನ್ನೂ ಬೆತ್ತಲಾಗಿಸಿ ಆಗಿದೆ. ಈಗ ಪರಿಸರ ಉಳಿಸಿ ಎಂಬ ಕೂಗು ನಾವೇ ಹಾಕಬೇಕಿದೆ. ಕಾರಣ ನಮ್ಮ ಕಾಲಿಗೆ ಕೊಡಲಿ ಹಾಕಿ ಕೊಂಡವರು ನಾವೇ. ಈಗ ಬೊಬ್ಬಿಟ್ಟರೆ ಎಂಬ ಯಾವ ಪ್ರಯೋಜನವೂ ಇಲ್ಲ. ಇದೀಗ ಹಬ್ಬ ಅದರಲ್ಲೂ ಎಲ್ಲರೂ ಆಚರಿಸುವ ದೀಪಾವಳಿ ಹಬ್ಬ ದಿವಾಳಿಯಾಗಿ ಬಂದಿದೆ. ಕಾರಣ ಈ ವರ್ಷ ಎಲ್ಲಾ ಪಟಾಕಿಗಳನ್ನು ಹಚ್ಚುವ ಹಾಗಿಲ್ಲ. ಕೇವಲ ಗ್ರೀನ್ ಸೀಲ್ ಇರುವ ಪರಿಸರ ಸ್ನೇಹಿ ಪಟಾಕಿಗಳನ್ನು ರಾತ್ರಿ ಎಂಟರಿಂದ ಹತ್ತರ ವರೆಗೆ ಮಾತ್ರ ಹಚ್ಚಿ ಖುಷಿ ಪಡಿ ಎಂದು ಮೇಲಿನಿಂದ ಆದೇಶ ಬಂದಿದೆ. ಮಣ್ಣಿನ ಹಣತೆಯಿಂದ ದೀಪ ಹಚ್ಚೋಣ ಬಿಡಿ. ಕುಂಬಾರರಿಗೆ ಸಹಾಯ ಆಗುತ್ತದೆ. ಹಾಗೆಯೇ ಪಟಾಕಿ, ಸ್ವಲ್ಪ ಶಾಪಿಂಗ್ ಕಟ್ ಮಾಡಿ ಸ್ವಲ್ಪ ಪರಿಸರ ಶುದ್ಧ, ಹಾಗೆಯೇ ಬಡವರಿಗೆ ಒಂದಿಷ್ಟು ದಾನ ಮಾಡಿ ಮನಸ್ಸಿನ ಮಾಲಿನ್ಯವನ್ನು ಕೂಡ ಸರಿಪಡಿಸಿಕೊಳ್ಳೋಣ ಅಲ್ಲವೇ? ಯಾರಿಗೆ ಗೊತ್ತು ಯಾವಾಗ ಪಟ್ಟ ಬಿದ್ದು ಸಾಯುತ್ತೇವೆ ಅಂತ? ಸಾಯುವ ಕೊನೆ ಕ್ಷಣದವರೆಗೂ ಕೈಲಾದ ಸಹಾಯ ಮಾಡೋಣ. ಇತರರ ಮನಸ್ಸು ನೋಯೊಸದೆ ಇರೋಣ ಅಲ್ಲವೇ? ನೀವೇನಂತೀರಿ?


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top