ಅಂಕಣ ಬರಹ

ಗಜಲ್ ಲೋಕ

ಡಾ. ಮಲ್ಲಿನಾಥ ಎಸ್. ತಳವಾರ

ಶರಣಯ್ಯ ದಿದ್ದಿಗಿ ಯವರ

ಗಜಲ್ ಗಳಲ್ಲಿ ಜೀವನ ಪ್ರೀತಿ..

ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…

“ಪ್ರತಿ ಮನುಷ್ಯನಲ್ಲೂ ಅ-ಹತ್ತು ಇಪ್ಪತ್ತು ಜನರು ಇರುತ್ತಾರೆ
ಯಾರನ್ನಾದರೂ ನೋಡಬೇಕಾದರ ಹಲವು ಬಾರಿ ನೋಡಬೇಕು”
-ನಿದಾ ಫಾಜಲಿ

     ಮನುಷ್ಯನ ಜೀವನದಲ್ಲಿ ಸಮಯ ಬಹು ವಿಧವಾದ ಪಾತ್ರವನ್ನು ನಿರ್ವಹಿಸುತ್ತದೆ. ಇದಕ್ಕೆ ಹಲವರು ಕಾಲ, ಹಣೆಬರಹ ಎಂತಲೂ ಕರೆಯುವವರಿದ್ದಾರೆ. ಸಮಯವು ನಿಧಾನವಾಗಿ ಚಲಿಸುತ್ತದೆಯಾದರೂ ತ್ವರಿತವಾಗಿ ಹಾದುಹೋಗುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ‘ಸಮಯ’ ಎಂದರೆ ಜೀವನ; ಸಮಯವನ್ನು ವ್ಯರ್ಥ ಮಾಡಿದರೆ ಅದರೊಂದಿಗೆ ಜೀವನವೇ ವ್ಯರ್ಥವಾಗುತ್ತದೆ. ಸಮಯವನ್ನು ಕರಗತ ಮಾಡಿಕೊಂಡವರು ಮಾತ್ರ ತಮ್ಮ ಜೀವನವನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ಯಾರು ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆಯೊ ಅವರಿಗೆ ಸಾಕಷ್ಟು ಸಮಯ ಲಭಿಸುತ್ತದೆ. ಆಲಸ್ಯ ಎನ್ನುವುದು ನಿನ್ನೆಯೊಂದಿಗೆ ಇಟ್ಟುಕೊಳ್ಳುವ ಮತ್ತು ಇಂದಿನದನ್ನು ತಪ್ಪಿಸುವ ಕಿರಾತಕ ಕಲೆಯಾಗಿದೆ. ಈ ಕಾರಣಕ್ಕಾಗಿಯೇ ಸಾಮಾನ್ಯ ಜನರು ಕೇವಲ ಸಮಯವನ್ನು ಕಳೆಯುವುದರ ಬಗ್ಗೆ ಯೋಚಿಸಿದರೆ ಮಹಾನ್ ಜನರು ಅದನ್ನು ಬಳಸುವ ಕ್ರಮ ಕುರಿತು ಯೋಚಿಸುತ್ತಾರೆ. ಜೀವನದಲ್ಲಿ ನಾವು ಎಂದಿಗೂ ಆತುರಪಡದಿದ್ದರೆ ಎಲ್ಲದಕ್ಕೂ ಸಮಯವನ್ನು ಕಂಡುಕೊಳ್ಳಬಹುದು. ಯಾವಾಗಲೂ ಬಹುಕಾರ್ಯ ಎಂಬುದು ನಮ್ಮ ಗಮನವನ್ನು ವಿಭಜಿಸಿ, ಗೊಂದಲ ಮತ್ತು ದುರ್ಬಲ ಗಮನಕ್ಕೆ ಕಾರಣವಾಗುತ್ತದೆ. ಪ್ರತಿ ವ್ಯವಹಾರದಲ್ಲಿ ಆತುರವು ವೈಫಲ್ಯಗಳನ್ನು ತರುತ್ತದೆ. ಕಾಲ ಯಾರಿಗೂ ಕಾಯುವುದಿಲ್ಲ. ಸಮಯವು ಕೆಲವೊಮ್ಮೆ ಹಕ್ಕಿಯಂತೆ ಹಾರುತ್ತದೆ. ಇನ್ನೂ ಕೆಲವೊಮ್ಮೆ ಬಸವನ ಹುಳುವಿನಂತೆ ತೆವಳುತ್ತದೆ; ಸಮಯ ವೇಗವಾಗಿ ಅಥವಾ ನಿಧಾನವಾಗಿ ಹಾದುಹೋಗುತ್ತದೆಯೇ ಎಂಬುದನ್ನು ಗಮನಿಸದಿದ್ದಾಗ ಮಾತ್ರ
ಮನುಷ್ಯನು ಹೆಚ್ಚು ಸಂತೋಷವಾಗಿರಲು ಸಾಧ್ಯ. ಅಂತೆಯೇ ಸಮಯವನ್ನು ಕಳೆಯುವ ರೀತಿಯ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯ ಎನ್ನಲಾಗುತ್ತದೆ. ನಮ್ಮ ಯಶಸ್ಸು ನಮ್ಮ ‘ಮುಕ್ತ’ ಸಮಯವನ್ನು ನಾವು ಹೇಗೆ ಕಳೆಯುತ್ತೇವೆ ಎಂಬುದರ ನೇರ ಅನುಪಾತದಲ್ಲಿದೆ. ನಾವು ಎಲ್ಲಾ ಸಮಯದಲ್ಲೂ ನಿನ್ನೆ ಬಗ್ಗೆ ಯೋಚಿಸುತ್ತಿದ್ದರೆ ಉತ್ತಮವಾದ ನಾಳೆ ಲಭಿಸಲು ಸಾಧ್ಯವಿಲ್ಲ. “ನಾನು ಯಾವಾಗಲೂ ವರ್ತಮಾನದಲ್ಲಿ ವಾಸಿಸುತ್ತೇನೆ. ಭವಿಷ್ಯ ನನಗೆ ಗೊತ್ತಿಲ್ಲ. ಭೂತಕಾಲ ನನ್ನ ಬಳಿ ಇಲ್ಲ” ಎಂಬ ಪೋರ್ಚುಗೀಸ್ ಕವಿ ಫರ್ನಾಂಡೊ ಪೆಸೊವಾ ರವರ ಹೇಳಿಕೆ ಬದುಕಿಗೆ ಊರುಗೋಲಾಗಿದೆ. ನಾವು ನಮ್ಮನ್ನು ಗೌರವಿಸುವವರೆಗೆ, ನಮ್ಮ ಸಮಯವನ್ನು ನಾವು ಗೌರವಿಸಲು ಆಗುವುದಿಲ್ಲ. ನಮ್ಮ ಸಮಯವನ್ನು ನಾವು ಗೌರವಿಸುವವರೆಗೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಳೆದು ಹೋದ ಸಮಯ ಯಾವತ್ತೂ ಮರಳಿ ಸಿಗುವುದಿಲ್ಲ. ಇದು ಎಲ್ಲ ಕಾಲಕ್ಕೂ ಉತ್ತಮ ಸಲಹೆಗಾರ, ಸಲಹೆಗಾರತಿ ಎನ್ನಬಹುದು. ಇಂಥಹ ಸಮಯವನ್ನು ಸೆರೆ ಹಿಡಿಯುವ ಶಕ್ತಿ ಇರೋದು ಕೇವಲ ಸಾಹಿತ್ಯಕ್ಕೆ ಮಾತ್ರ! ಈ ಸಾಹಿತ್ಯದ ಸಂಜೀವಿನಿಯಾದ ಕಾವ್ಯ, ಅದರಲ್ಲೂ ವಿಶೇಷವಾಗಿ ಗಜಲ್ ಸಮಯದ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಬಂದಿರುವುದಕ್ಕೆ ಧೀರ್ಘವಾದ ಪರಂಪರೆಯೇ ನಮ್ಮ ಮುಂದಿದೆ. ಇದರೊಂದಿಗೆ ನಮ್ಮ ಕನ್ನಡ ಪರಂಪರೆಯೂ ನಿಧಾನವಾಗಿ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೆ ಪೂರಕವಾಗಿ ಇಂದು ಕನ್ನಡದಲ್ಲಿ ಗಜಲ್ ಬರಹ ಪ್ರವರ್ಧಮಾನಕ್ಕೆ ಬರುತ್ತಿರುವುದು, ಅಸಂಖ್ಯಾತ ಬರಹಗಾರರು ಗಜಲ್ ಬರೆಯುತ್ತಿರುವುದು ಕಂಡು ಬರುತ್ತಿದೆ. ಅವರುಗಳಲ್ಲಿ ಶಾಯರ್ ಶ್ರೀ ಶರಣಯ್ಯ ಬಿ. ದಿದ್ದಿಗಿ ಯವರೂ ಒಬ್ಬರು.

       ಶ್ರೀ ಶರಣಯ್ಯ ಬಿ. ದಿದ್ದಿಗಿ ಯವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಿದ್ದಿಗಿಯಲ್ಲಿ ಶ್ರೀ ಬಸಯ್ಯ ಸ್ವಾಮಿ ಹಾಗೂ ಶ್ರೀಮತಿ ಅನ್ನಪೂರ್ಣಮ್ಮ ದಂಪತಿಗಳ ಮಗನಾಗಿ ೧೯೮೪ ರ ಜುಲೈ ೦೧ ರಂದು ಜನಿಸಿದರು. ಎಂ.ಎ., ಬಿ.ಎಡ್ ಪದವೀಧರರರಾದ ಇವರು ಪ್ರಾಥಮಿಕ ಹಾಗೂ ಶಾಲಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಬಿ.ಇ.ಓ ಆಫೀಸಿನ ಶಿಕ್ಷಣ ಸಂಯೋಜಕರಾಗಿ ಸೇವೆಯನ್ನು ಸಲ್ಲಿಸಿ ಪ್ರಸ್ತುತವಾಗಿ ಮಾನ್ವಿ ತಾಲೂಕಿನ ಬ್ಯಾಗವಾಟ್ ನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷೆಯ ಬಗೆಗೆ ವಿಶೇಷ ಆಸಕ್ತಿ ಹೊಂದಿರುವ ಇವರು ತಮ್ಮ ಶಿಕ್ಷಣದೊಂದಿಗೆ ಸಾಹಿತ್ಯದಲ್ಲೂ ಕೃಷಿ ಮಾಡುತ್ತ ಕಥೆ, ಕಾವ್ಯ, ಲೇಖನ, ವಿಮರ್ಶೆ ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಶ್ರೀಯುತರು ‘ಬಿಸಿಯುಸಿರ ಹಾಡು’ ಎಂಬ ಗಜಲ್ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

       ಸದಾ ಓದು, ಬರಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಶರಣಯ್ಯ ನವರ ಅನೇಕ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಅಕ್ಷರ ಪ್ರೀತಿಯನ್ನು ಸಾರಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿ ರಾಜ್ಯದ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ.

      ಪ್ರೇಮನಗರಿಯಲ್ಲಿ ಪ್ರೇಮದ ಮನೆ ಅಡಗಿದೆ. ಪ್ರೀತಿಯ ಭಾವ ತುಂಬಿದ ಹೃದಯಗಳಲ್ಲಿ ಮಾತ್ರ ಗಜಲ್ ಹುಟ್ಟುತ್ತದೆ. ಈ ಗಜಲ್ ಎನ್ನುವಂತದ್ದೇ ಅನನ್ಯ ಹಾಗೂ ಅನುಪಮವಾದ ಅಮಲು ತುಂಬಿದ ಪ್ರೀತಿಯ ಮದಿರೆ. ಪ್ರೀತಿಯ ಅಮಲು ಶಾಯರ್ ಗಳಿಗೆ ಹೊಸ ಮತ್ತು ಸುಂದರವಾದ ಕನಸುಗಳನ್ನು, ಸುಂದರವಾದ ಆಲೋಚನೆಗಳನ್ನು ತೋರಿಸುತ್ತದೆ. ಪ್ರೀತಿಯು ಸುಖನವರ್ ಗಳನ್ನು ಜೀವನದಲ್ಲಿ ಪ್ರಯಾಣಿಕರನ್ನಾಗಿ ಮಾಡುತ್ತದೆ. ಆ ಪ್ರಯಾಣ ಎಂದಿಗೂ ಕೊನೆಗೊಳ್ಳದ ಜಗತ್ತಾಗಿದ್ದು ಜೀವನದ ಮೊದಲು ಮತ್ತು ನಂತರವೂ ಅದು ಸದಾ ಜೀವಂತವಾಗಿರುತ್ತದೆ. ಈ ನೆಲೆಯಲ್ಲಿ ಗಜಲ್ ಎಂಬುದು ತನ್ನ ಪದಗಳು ಮತ್ತು ವಾಕ್ಯಗಳ ಸಹಾಯದಿಂದ ಪ್ರೀತಿಯನ್ನು ವ್ಯಕ್ತಪಡಿಸುವ ಚಿರಾಗ್ ಆಗಿದೆ. ಈ ಹಿನ್ನೆಲೆಯಲ್ಲಿ ಶಾಯರ್ ಶ್ರೀ ಶರಣಯ್ಯ ದಿದ್ದಿಗಿ ಯವರ ‘ಬಿಸಿಯುಸಿರ ಹಾಡು’ ಗಜಲ್ ಸಂಕಲನವನ್ನು ಗಮನಿಸಿದಾಗ ಕೌಟುಂಬಿಕ ಪರಿಚಯ, ತಾಯಿಯ ಪ್ರೀತಿ, ಹಸಿವಿನ ಅಮೃತ, ಬಡತನದ ಬವಣೆ, ಪ್ರೀತಿ, ಪ್ರೇಮ, ನಿರೀಕ್ಷೆ, ಕನವರಿಕೆ, ಪ್ರಣಯ, ವಿರಹ, ಸಾಮಾಜಿಕ ವ್ಯವಸ್ಥೆ, ಬದುಕಿನ ವಿವಿಧ ಆಯಾಮಗಳು, ಜೀವನಾನುಭವ, ವ್ಯಕ್ತಿ ಪರಿಚಯ, ಧರ್ಮ, ರಾಜಕೀಯ ವ್ಯವಸ್ಥೆಯ ಪೊಳ್ಳುತನ…. ಮುಂತಾದ ವೈವಿಧ್ಯಮಯ ವಿಷಯಗಳು ಸಹೃದಯ ಓದುಗರನ್ನು ಮುಖಾಮುಖಿಯಾಗುತ್ತವೆ.‌

“ಇಳಿಸಂಜೆಗೆ ಹೊರಳಿದಾಗ ಬಾಡುವ ಹೂವಂತೆ ನಗುವು ಬಾಡದಿರಲಿ
ಇಳಿವಯಸಿಗೆ ಜಾರಿದಾಗ ಕಾಡುವ ನೋವಂತೆ ಮನವು ನೋಯದಿರಲಿ”

ಗಜಲ್ ಗೋ ದಿದ್ದಿಗಿ ಯವರು ಮೇಲಿನ ಷೇರ್ ನಲ್ಲಿ ರೂಪಕಗಳನ್ನು ತುಂಬಾ ಅರ್ಥವತ್ತಾಗಿ ಬಳಸಿದ್ದಾರೆ. ಹೂವು ಎಷ್ಟೇ ಸುವಾಸನೆ ಬೀರಿದರೂ ಅದರ ಕಾಲಾವಧಿ ತುಂಬಾನೇ ಕಡಿಮೆ. ಆದರೆ ಮನುಷ್ಯನ ನಗು ಮಾತ್ರ ಹೂವಿನಂತೆ ಬೇಗನೆ ಕಮರಬಾರದು, ಜೀವನದುದ್ದಕ್ಕೂ ಇರಬೇಕು ಎಂದು ಶಾಯರ್ ಅವರು ಹೇಳುತ್ತ, ನೋವು ಯಾವತ್ತೂ ಮನಸನ್ನು ನೋಯಿಸದಿರಲಿ ಎಂಬ ಭಾವವನ್ನು ಅರುಹಿದ್ದಾರೆ. ಇಲ್ಲಿ ಸಕಾರಾತ್ಮಕ ಧೋರಣೆಯ ನೆರಳಿದೆ.

“ಮಾತಿಗಿಂತ ಮೌನವನ್ನು ಅಪ್ಪಿಕೊಂಡು ಸುಮ್ಮನಿರುತ್ತೇವೆ ನಾವೇನು ಮೂಕರಲ್ಲ
ದುರಾಸೆಗೆ ಜೈಕಾರ ಹಾಕದೆ ಎದೆಯುಬ್ಬಿಸಿ ನಡೆಯುತ್ತೇವೆ ನಾವು ಅಹಂಕಾರಿಗಳಲ್ಲ”

ಈ ಮೇಲಿನ ಷೇರ್ ನಲ್ಲಿ ಬಳಕೆಯಾದ ‘ಮೂಕರಲ್ಲ’, ‘ಅಹಂಕಾರಿಗಳಲ್ಲ’ ಎನ್ನುವ ಕವಾಫಿ ಮನುಷ್ಯನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮನುಷ್ಯ ಮೇಲುನೋಟಕ್ಕೆ ಒಂದು ತರಹ ಕಂಡರೆ ಆಂತರ್ಯದಲ್ಲಿ ಬೇರೆ ರೀತಿನೇ ಕಾಣುತ್ತಾರೆ. ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು’ ಎಂಬ ಗಾದೆಮಾತನ್ನು ಸುಖನವರ್ ಶರಣಯ್ಯ ದಿದ್ದಿಗಿ ಯವರು ಷೇರ್ ನಲ್ಲಿ ದಾಖಲಿಸಿದ್ದಾರೆ. ನಾವು ಯಾರನ್ನು ಮೂಕರೆನ್ನಬೇಕು, ಯಾರನ್ನು ಅನ್ನಬಾರದು ಎನ್ನುವ ವಿಷಯದೊಂದಿಗೆ ಅಹಂಕಾರ ಎಂದರೆ ಏನು, ಅದು ಹೇಗಿರಬೇಕು ಎಂಬುದರ ಸೂಕ್ಷ್ಮ ಜಿಜ್ಞಾಸೆ ಇಲ್ಲಿದೆ. ಈ ಸೆಲೆಯಲ್ಲಿ ಜೀವನದ ಪಾಠವನ್ನು ನಾವು ಕಂಡುಕೊಳ್ಳಬಹುದು.

       ಪ್ರೀತಿ ಮತ್ತು ವಾತ್ಸಲ್ಯಕ್ಕೆ ಇನ್ನೊಂದು ಹೆಸರೇ ಗಜಲ್. ಪ್ರೀತಿಯ ಭಾವನೆಯು ಒಬ್ಬ ವ್ಯಕ್ತಿಯನ್ನು ಅತ್ಯಂತ ಸುಂದರವಾದ ಮತ್ತು ವಿಭಿನ್ನ ಜಗತ್ತಿಗೆ ಕರೆದೊಯ್ಯಲು ಪ್ರೇರೇಪಿಸುತ್ತದೆ. ಈ ನೆಲೆಯಲ್ಲಿ ಗಜಲ್ ಗೋ ಶರಣಯ್ಯ ದಿದ್ದಿಗಿ ಯವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.‌

“ಇಲ್ಲಿ ಉಡುಗೆಗೆ ಬೆಲೆ ಇದೆ ಮನುಷ್ಯನಿಗಲ್ಲ
ನನಗೆ ದೊಡ್ಡ ಬಟ್ಟಲು ನೀಡಿ, ಮದ್ಯ ಕಡಿಮೆ ಇರಲಿ”
-ಬಶೀರ್ ಬದ್ರ

ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top