ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜ್ಯೋತಿ , ಡಿ.ಬೊಮ್ಮಾಕವಿತೆ-

ಅಡುಗೆಮನೆ ಎಂದರೆ ಬರಿ ಬೇಯಿಸಿ ಪರರ
ಹೊಟ್ಟೆ ತುಂಬಿಸುವ ಸ್ಥಳವಲ್ಲ ಅವಳಿಗೆ..
ಅಲ್ಲಿ , ಅವಳೊಳಗಿನ ಬಿಕ್ಕಳಿಕೆಗಳು
ಮನದ ಬಿಕ್ಕಟ್ಟುಗಳು
ದೇಹದ ತಾಕಲಾಟಗಳೊಂದಿಗೆ
ಸ್ವಗತದಲ್ಲಿ ಸಂಭಾಷಿಸುತ್ತ
ತನ್ನ ತಾನೆ ಸಂತೈಸಿಕೊಳ್ಳುವ ಆಪ್ತ ವಲಯ.

ಕಪಾಟಿನಲ್ಲಿಟ್ಟ ದಿನಸಿ ಡಬ್ಬಿಗಳು
ಸೆಲ್ಫಿನೊಳಗಿನ ಪಾತ್ರೆಗಳು
ಮೂಲೆಯಲ್ಲಿರುವ ಗ್ರೈಂಡರ್
ಗೋಡೆಗಾನಿಸಿದ ಪ್ರೀಜ್
ಕಸಬರಿಗೆ , ನೀರಿನ ಹಂಡೆ , ಈಳಿಗೆ ಮಣೆ
ಎಲ್ಲವೂ ಅವಳ ಆಪ್ತ ಸಂಗಾತಿಗಳು.

ದಿನದ ಬಹುಭಾಗ ನಿರ್ಜೀವ ವಸ್ತುಗಳೊಂದಿಗೆ
ಕಳೆವ ಅವಳು ಅವು ಹಳತಾದಷ್ಟು ಅವಗಳೊಂದಿಗೆ
ಬೆಸೆವ ಗಾಢ ಅನುಭಂಧಕ್ಕೆ
ಸೋಜಿಗ ಪಡುತ್ತ ..
ಹಳಸುವ ಜೀವಂತ ಸಂಬಂಧ ಗಳಿಗೆ
ಮೂಕಳಾಗಿರುವಳು.

ಹಿಟ್ಟಿನ ಡಬ್ಬಿ , ಅಕ್ಕಿ ಡಬ್ಬಿ , ಹಾಲು , ಮೊಸರು
ತರಕಾರಿ , ಮುಸುರೆ ಪಾತ್ರೆಗಳೊಂದಿಗೆ
ಒಡನಾಡುತ್ತ..
ಹೊರಗಿನ ಪ್ರಪಂಚಕ್ಕಲ್ಲದೆ
ಮನೆಯವರಿಗೂ ಅಪರಿಚಿತಳಾದದ್ದು
ಅರಿವಿಗೆ ಬಾರದು..!

ಅವಳೆಂದರೆ ಅಡುಗೆ ಮನೆ.
ಅವಳೆಂದರೆ ಪಾತ್ರೆ , ದಿನಸಿಗಳು.
ಅವಳೆಂದರೆ ಪೂಜೆ , ವ್ರತಗಳು.
ಅವಳೆಂದರೆ ಅಡುಗೆ ಮನೆ ಅಧಿಪತ್ಯದ ಲ್ಲಿ
ಸಂಭ್ರಮಿಸುವಳು..!

ಒಂದೊಮ್ಮೆ ಅವಳು ಬಂದಂತೆ ಆ ಅಡುಗೆ
ಮನೆಗೊಬ್ಬಳ ಹೊಸಬಳ ಆಗಮನ..
ಇಷ್ಟು ದಿನ ತನ್ನೊಬ್ಬಳಿಗೆ ಸೀಮಿತವಾದ ವಲಯ
ಮತ್ತೊಬ್ಬಳೊಂದಿಗೆ
ಹಂಚಿಕೊಳ್ಳಲಾಗದ
ವಹಿಸಲಾಗದ ತಾಕಲಾಟಗಳು.

ಮಸಾಲೆ ಪಾತ್ರೆ , ಸೌಟು , ಚಮಚಗಳು
ತುಸು ಸ್ಥಾನ ಪಲ್ಲಟವಾದರು
ಎನೋ ಇರಿಸು ಮುರಿಸು.

ಆಗಷ್ಟೆ ಬಂದವಳಿಗೂ ಬೇಕು
ಅಡುಗೆ ಮನೆ ಅಧಿಪತ್ಯ.
ದಿನಸಿಗಳ ಪಾರುಪತ್ಯ.

ಮೆಲ್ಲಗೆ ಅಡುಗೆಮನೆಯಿಂದ ಶುರುವಾಗುವ
ಹೊಗೆ ಯಾವಾಗ ಜ್ವಲಿಸ ತೊಡಗುವದೋ
ಅರಿವಿಗೆ ಬಾರದು..

ಅಲ್ಲಿಗೆ ಮತ್ತೊಂದು ಅಡುಗೆ ಮನೆಯ ಉಗಮ.
ಅದಕ್ಕೊಬ್ಬಳೆ ಯಜಮಾನಿ.
ಪಾತ್ರೆ , ಡಬ್ಬಿ , ದಿನಸಿ , ಎಲ್ವಕ್ಕೂ
ಅವಳೆ ಸರ್ವಾಧಿಕಾರಿ.. ಮತ್ತೊಬ್ಬಳ ಪ್ರವೇಶವಾಗುವವರೆಗೂ..

ಮತ್ತಜ್ಜಿ , ಅಜ್ಜಿ , ಅಮ್ಮ , ನಾನು , ಮಗಳು , ಮೊಮ್ಮಗಳು
ಎಲ್ಲರೂ ಅಡುಗೆಮನೆ ಚಕ್ರಾಧಿಪತ್ಯದ ಆಕಾಂಕ್ಷಿಗಳೆ
ಇದು ಸರ್ವಕಾಲದ ಸತ್ಯ.


About The Author

Leave a Reply

You cannot copy content of this page

Scroll to Top