ಅಂಕಣ ಬರಹ

ಪುಸ್ತಕ ಪ್ರಪಂಚ

ವೈ.ಎಂ.ಯಾಕೊಳ್ಳಿ

ಸ್ಪೂರ್ತಿ ಸುಮಗಳು

ಪುಸ್ತಕದ ಹೆಸರು : ಸ್ಪೂರ್ತಿ ಸುಮಗಳು..
ಕೃತಿಕಾರರ ಹೆಸರು:ಶ್ರೀಮತಿ ದಾಕ್ಷಾಯಣಿ ಶಂಕರ ಮಂಡಿ
ಪ್ರಕಾಶನ : ಸ್ಪೂರ್ತಿ ಪ್ರಕಾಶನ ಮಹಾಲಿಂಗಪೂರ
ಪುಟಗಳು:೬೦
ಬೆಲೆ : ೯೦ರೂ
ಪುಸ್ತಕ ದೊರೆಯುವ ಸ್ಥಳ: ಸ್ಪೂರ್ತಿ ಪ್ರಕಾಶನ ಮಹಾಲಿಂಗಪೂರ
ಮೊಬೈಲ್ ಸಂಖ್ಯೆ: ೯೦೩೫೩೬೭೭೧೪

ಮೂಲತ: ಇಂಗ್ಲೀಷ್ ಸ್ನಾತಕೋತ್ತರ ಪದವಿ ಓದಿ.ಈಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ದಾಕ್ಷಾಯಣಿ ಮಂಡಿಯವರು ಸಾಹಿತ್ಯ ಕ್ಷೇತ್ರದಲ್ಲಿ ಯೂ ಸೈ ಎನಿಸಿಕೊಂಡಿ ದ್ದಾರೆ.ಅವರ ಸ್ಪೂರ್ತಿ ಯ ಸುಮಗಳು( ಕವನ ಸಂಕಲನ) ಮತ್ತು ವಚನ ಸ್ಪೂರ್ತಿ ( ಆಧುನಿಕ ವಚನ ಸಂಕಲನ) ಎಂಬ ಎರಡು ಕೃತಿಗಳು ಪ್ರಕಟವಾಗಿವೆ.
ಮಹಾಲಿಂಗಪೂರದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಶ್ರೀ ಮತಿ ದಾಕ್ಷಾಯಣಿ ಶಂಕರ ಮಂಡಿಯವರು.ಎಂ.ಎ.ಎಂ.ಇಡಿ ಪದವೀಧರರು.ತಮ್ಮ ಸಾಹಿತ್ಯಕ ಸಾಂಸ್ಕೃತಿಕ ಸಾಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಜಿಲ್ಲಾ ಮಟ್ಟ ರಾಜ್ಯಮಟ್ಟದ ಅನೇಕ ಪ್ರಶಸ್ತಿ ಪಡೆದಿರುವ ಇವರು ಜಿಲ್ಲಾ ಮಟ್ಟ , ರಾಜ್ಯಮಟ್ಟ ಸಮಾವೇಶ,ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಮಾಡಿದ್ದಾರೆ.
ಅವರ ಮೊದಲ ಕವನ ಸಂಕಲನ ‘ ಸ್ಪೂರ್ತಿಯ ಸುಮಗಳು’ ೨೦೨೧ ರಲ್ಲಿ ಸ್ಪೂರ್ತಿ ಪ್ರಕಾಶನ ಮಹಾಲಿಂಗಪೂರದಿಂದ ಪ್ರಕಟವಾಗಿದೆ. ಹಿರಿಯ ವಿದ್ವಾಂಸರಾದ ಡಾ.ಅಶೋಕ ನರೋಡೆಯವರು ಮುನ್ನುಡಿ ಬರೆದು ಹಾರೈಸಿದ್ದರೆ, ಇನ್ನೋರ್ವ ಹಿರಿಯರಾದ ಮುಧೋಳದ ಡಾ ಸಿದ್ದು ದಿವಾಣ ಅವರ ಬೆನ್ನುಡಿ ಯ ಆಶಿರ್ವಾದ ಮಾಡಿದ್ದಾರೆ. ಮೊದಲ ಸಂಕಲನ ತರುವಾಗ ಕವಿಗಳಲ್ಲಿ ಇರುವ ಖುಷಿ ,ತಲ್ಲಣ, ತಳಮಳ ಎಲ್ಲವೂ ಈ ಸಂಕಲನದಲ್ಲಿದೆ. ೬೦ ಕವಿತೆಗಳನ್ನು ಒಳಗೊಂಡ ಈ ಸಂಕಲನ ಅನೇಕ ಭಾವಗಳಿಂದ ಕೂಡಿದೆ.
ಮಹಾಲಿಂಗಪೂರದ ಆರಾಧ್ಯ ದೇವರಾದ ಶ್ರೀ ಮಹಾಲಿಂಗೇಶ್ವರರನ್ನು ಕುರಿತು ಒಂದು ಭಕ್ತಿಗೀತೆಯೊಂದಿಗೆ ಈ ಸಂಕಲನ ಆರಂಭಿಸುತ್ತಾರೆ. ಗುರು ಮಹಾಲಿಂಗೇಶ್ವರರ ಚರಿತ್ರೆಯು ಕವಿತೆಯ ರೂಪಧರಿಸಿದೆ. ಹಾಗೆಯೇ ಗಣೇಶ ಮತ್ತು ಜೋಳಿಗೆಯ ಮಹಾಂತರು ಎಂಬ ಎರಡು ಕವಿತೆಗಳು ಭಕ್ತಿ ತುಂಬಿದ ರಚನೆಗಳಾಗಿವೆ. ಗಣೇಶನನ್ನು ನೆನೆಯದವರು ಯಾರಿದ್ದಾರೆ? ಗಣಪತಿಯನ್ನು ‘ಆದಿ ಪೂಜಿತ ಗಣಪ ‘ ಎಂದು ಕರೆದು ಅವನು ಎಲ್ಲರ ಕಷ್ಟ ಗಳನ್ನು ಪರಿಹರಿಸುವ ದೇವರು ಎಂದು ಅವರು ಕರೆಯುತ್ತಾರೆ. “ಜೋಳಿಗೆಯ ಮಹಾಂತರು” ಎಂಬ ಕವಿತೆ ಇಲ್ಲಕಲ್ಲ ಚಿತ್ರರಗಿ ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಮಹಾಂತ ಶ್ರೀಗಳ ಮಹಾಂತ ಜೋಳಿಗೆಯ ಕಥೆಯನ್ನು ಗುರುತಿಸುತ್ತದೆ. ಅಲ್ಲದೇ ಈ ಭಕ್ತಿ ಭಾವದ ರಚನೆಗಳಲ್ಲಿ ಜಗತ್ತಿಗೆ ಕೊಡುತ್ತಿರುವ ಸೂರ್ಯನ ಬೆಳಕನ್ನು ಮನದಣಿಯೆ ಮೆಚ್ಚುವ ಕವಿಯತ್ರಿ ಸೂರ್ಯನಿಗೆ ಕೋಟಿ ವಂದನೆ ಸಲ್ಲಿಸುತ್ತಾರೆ. ಬಹಳ ಹಿಂದೆಯ ಶರಣರು ಸೂರ್ಯನ ಕೊಡುಗೆಯನ್ನು ಕೊಂಡಾಡಿದ್ದರು .’ಲೋಕದ ಚೇಷ್ಟೆಗೆ ರವಿ ಬೀಜ’ ಎನ್ನುವ ಮಾತು ನೆನಪಿಡಬೇಕು. ಹಾಗೆಯೇ ಇಲ್ಲಿ ಕವಿಯಿತ್ರಿ ಕೂಡಾ

ನಿನ್ನಿಂದ ಆಗುವದು ಜೀವಿಗಳಲಿ ಸಂಚಲನ
ಜಗದಲ್ಲಿ ನೀ ದೇವ ಎನ್ನುವ ಆಚರಣ
ನಮಗಾಗಿ ತುಂಬುತಿರುವೆ ಹಸಿರಿನಲಿ ಉಸಿರು
ನಿನ್ನ ಪ್ರಭೆಯಿಂದಲೇ ಭೂತಾಯಿಯ ಬಸಿರು

ಎಂದು ಸೂರ್ಯನ ಕರುಣೆಯನ್ನು ಕಾವ್ಯವಾಗಿಸಿದ್ದಾರೆ. ರವಿಯ‌ ಕರುಣೆಯನ್ನು‌ ಕವಿಯತ್ರಿ ಬಣ್ಣಿಸುವ ರೀತಿ ವಿನೂತನವಾಗಿದೆ.

ಗುರುವನ್ನು ಎಲ್ಲ ಶಿಷ್ಯರೂ ಕೊಂಡಾಡುವರೇ .ಜಗತ್ತಿನ ಮೇಲಿರುವ ಸೃಷ್ಟಿಯಲ್ಲಿ ಎಲ್ಲರೂ ಗುರುವಿನ ಕೈಯಲ್ಲಿ ಬೆಳೆದು ದೊಡ್ಡವರಾದರೇ.ಈ ಋಣ ಅವರಿಂದ ಗುರುಕಾಣಿಕೆ ರೂಪದಲ್ಲಿ ‘ ಗುರುವಂದನ’ ಎಂಬ ಪದ್ಯ ಬರೆಸಿದೆ. ಸ್ನೇಹಿತರೆಲ್ಲ ಸೇರಿ ಗುರುವಂದನ ಮಾಡಿದ ಸೊಗಸು ಅಲ್ಲಿ ಸುಂದರವಾಗಿ ಮೂಡಿ ಬಂದಿದೆ.

ಶ್ರೀಮತಿ ಮಂಡಿಯವರು ರನ್ನ ನಾಡಿನವರು .ಕವಿ ರನ್ನನ ಮೆಲ ಅವರಿಗೆ ಭಕ್ತಿ. ಹಾಗಾಗಿ ರನ್ನ ಕವಿಯನ್ನು ಕುರಿತ ಪದ್ಯದಲ್ಲಿ ‘ಮಹಾಕವಿ ರನ್ನ ಎಂಬ ಹೆಸರಿನಲ್ಲಿಯೇ ಕವಿತೆ ಬರೆದಿದ್ದಾರೆ.


ನಿನ್ನೈದು ಕಾವ್ಯಗಳು ಕನ್ನಡಕೆ ಕನ್ನಡಿ
ಬರೆದಿರುವಿ ಕರುಣ,ವೀರ ರೌದ ರಸಗಳ ಮುನ್ನುಡಿ
ಅದರಿಂದ ನೀನಾಗಿರುವೆ ಕನ್ನಡಾಂಬೆಯ ಹೊನ್ನುಡಿ
ನಿನ್ನ ಬಗ್ಗೆ ನುಡಿಯಲಾರರು ಅನ್ಯರು ಮಾರ್ನುಡಿ


ಹೀಗೆ ರನ್ನಬಕವಿ ಬರೆದ ಸಾಹಸ ಭೀಮ ವಿಜಯ,ಅಜಿತನಾಥ ಪುರಾಣ,ಚಕ್ರೇಶ್ವರ ಚರಿತೆ,ಪರಶುರಾಮ ಚರಿತೆ,ಮತದತು ರನ್ನ‌ಕಂದಗಳನ್ನು ನೆನೆಸುತ್ತಾರೆ. ಅವರು ರನ್ನನನ್ನು ‘ ಕನ್ನಡಬೆಯ ಹೊನ್ನುಡಿ ‘ ಎಂದು ಹೊಗಳಿದ್ದು ಸಹಜವಾಗಿದೆ. ಅಂತ್ಯಪ್ರಾಸಗಳ ಹೊಂದಾಣಿಕೆಯಲ್ಲಿ ಕವಿತೆ ಅಲಂಕೃತ ಗೊಂಡಿದೆ. ಈ ಭಕ್ತಿ ಭಾವದ ಕವಿತೆಗಳಲ್ಲಿ ಬಸವಣ್ಣನವರ ನ್ನು ಕುರಿತು ಬರೆದ ” ಶರಣ ಬಸವಣ್ಣ “ಕವಿತೆಯೂ ಸೇರಿದೆ.
ಒಬ್ಬ ವ್ಯಕ್ತಿಯ ಬೆಳವಣಿಗೆಯನ್ನು ನಿರ್ದರಿಸುವವರು ಅನೇಕ ಜನ. ಅದರಲ್ಲಿಯೂ ಮದುವೆಯಾದ ಹೆಣ್ಣುಮಕ್ಕಳ ಬೆಳವಣಿಗೆಯ ಹಿಂದೆ ಗಂಡನ ಮನೆಯವರ ಸಹಕಾರ ಇದ್ದೇ ಇರುತ್ತದೆ. ಶ್ರೀಮತಿ ದಾಕ್ಷಾಯಣಿ ಮಂಡಿ ಯವರು ತಮ್ಮ ಯಜಮಾನರ ಸಹಾಯ ಸಹಕಾರವನ್ನು ಹೆಚ್ಚು ನೆನೆಸಿದ್ದಾರೆ. ಅವರ ಕಾವ್ಯನಾಮವೇ ಅವರ ಯಜಮಾನರ ಹೆಸರನ್ನು ಒಳಗೊಂಡಿದೆ. ಅವರು ಶಂಕರ ಪ್ರಿಯೆ ಎಂಬ ಕಾವ್ಯನಾಮ ದಿಂದ ಕವಿತೆಗಳನ್ನು ವಚನಗಳನ್ನು ಬರೆದಿದ್ದಾರೆ. ಸತಿ ಪತಿ ಬಂಧದ ಕುರಿತು ತುಂಬ ಗೌರವದಿಂದ ಕವಿತೆ ರಚಿಸಿರುವ ಶ್ರೀಮತಿ ಮಂಡಿ ಯವರ ‘ಸತಿ ಪತಿ ‘ಯಂತಹ ಕವಿತೆಗಳ ನಮ್ಮ ಗಮನ ಸೆಳೆಯುತ್ತವೆ. ಈ ಸಂಕಲನದ ಶೀರ್ಷಿಕೆಯಾದ ಸ್ಪೂರ್ತಿಯ ಸುಮಗಳು ಕವಿತೆಯಲ್ಲಿ ತಮ್ಮ ಬಾಳಿಗೆ ಸ್ಪೂರ್ತಿಯಾದ ಕುಟುಂಬದವರನ್ನು ನೆನೆಯುತ್ತಾರೆ. ತಮ್ಮ ಪತಿಯನ್ನು ನೆನೆದು
ನನ್ನ ಬಾಳಿಗೆ ಭವ್ಯವಾದ ಕನಸುಗಳನ್ನು


ತುಂಬುತ್ತಾ ಸಾಗಿದವರು ನೀವು
ಸನಿಹವಿದು ಕಷ್ಟ ಸುಖಗಳ ಸವಾಲುಗಳನ್ನು
ಎದುರಿಸಲು ಕಲಿಸಿದವರು ನೀವು


ಎಂದು ತುಂಬ ಕೃತಜ್ಞತೆಯಿಂದ ಬರೆಯುವದನ್ನು ಕಾಣುತ್ತೇವೆ. ಗಂಡ ಹೆಂಡತಿಯರ ನಡುವಿನ ಈ ಕೃತಜ್ಞತಾ ಭಾವವೇ ಕಡಿಮೆಯಾಗುತ್ತರುವ ಇಂದಿನ ಸಂದರ್ಭದಲ್ಲಿ ಈ ಕವಿತೆ ನಮಗೆ ಮುಖ್ಯ ಎನಿಸುತ್ತದೆ. ಭಾವಯಾನ ಕವಿತೆಯಲ್ಲಿಯೂ ಸಂಸಾರ ರಥವನ್ನು ಎಳೆಯುವ ಬಗ್ಗೆ ತಾತ್ವಿಕ ಚಿಂತನೆಗಳಿವೆ.
ನಮ್ಮ ನೆಲ, ದೇಶದ ಮಹತಿ ಸಾರಿದರೆ ‘,ಎಷ್ಟು ಚಂದ ನಮ್ಮ ಭಾಷೆ” ಕವಿತೆ ಕನ್ನಡ ಭಾಷೆಯ ಹಿರಿಮೆ ಸಾರಿದೆ.ತವರನ್ನು ನೆನೆಯದ ಹೆಣ್ಣುಮಗಳಿದ್ದಾಖೆಯೇ?.ಹಾಗೆಯೆ ಶ್ರೀ ಮತಿ ಮಂಡಿಯವರೂ ತವರಿನ ಸಿರಿ ಕವಿತೆಯಲ್ಲಿ ತವರಿನ ಸಂಪತ್ತನ್ನು ಬಣ್ಣಿಸುತ್ತಾರೆ.” ನಮ್ನಪ್ಪ” ಕವಿತೆಯಲ್ಲಿ ಅಪ್ಪನ ಚಿತ್ರಣವಿದೆ.
ಹೆಣ್ಣಿನ ಕೋರಿಕೆ ಯಂತಹ ಕವಿತೆಗಳಲ್ಕಿ ಸ್ತ್ರೀ ಶೋಷಣೆಯ ವಿರುದ್ಧದ ದನಿಯಿದೆ.ಹೆಣ್ಣಿಗೆ ಅಳುತ್ತಾ ಕೂಡುವದರಿಂದ ಏಬೂ ಆಗದು ಎಂದು ಹೇಳುವ ಕವಯಿತ್ರಿ


ಹಂಚಿಕೊಳ್ಳಬೇಡ ನಿನ್ನ ವೇದನೆ
ಮಾಡಿ ತೋರಿಸುವ ಸಾಧನೆ


ಎನ್ನುತ್ತಾರಾದರೂ ಇಲ್ಲಿ ಸಾಧನೆ ಮಾಡಿದ ಮೇಲೂ ನಿಂದನೆ ನಿಲ್ಲದಿರುವದನ್ನು ಗಮನಿಸಿದ್ದಾರೆ.” ಸ್ತ್ರೀ ಮಾಡುವಖು ಎಲ್ಲರ ಪೋಷಣೆ ,ಆದರೂ ನಡೆದಿದೆ ಅವಳ ಶೋಷಣೆ” ಎನ್ನುವ ಸಾಲುಗಳಿಗೆ ಉತ್ತರವೇ ಇಲ್ಲ ಎನ್ನುವದೂ ಸ್ಪಷ್ಟ.
ಸಾಮಾಜಿಕ ದೃಷ್ಟಿಕೋನದ ಕವಿತೆಗಳು ಇಲ್ಲಿವೆ” ಜಾತಿ ಜಂಜಡ” ದಂತಹ ಕವಿತೆಗಳು ಈ ಭಾಗದ ಕವಿತೆಗಳಲ್ಕಿ ಗಮನ ಸೆಳೆಯುತ್ತವೆ.ಸನಾಜದಲ್ಲಿ ಹೆಚ್ಚುತ್ತಿರುವ ಬ್ರಷ್ಟತೆ ಕಂಡ ಕವಯಿತ್ತಿ” ಬಡಜನರನ್ನು ಕೊಲ್ಲುತ್ತಿರುವ ಕೊಲೆಗೊಡುಕ ” ಎಂದು ಸಾರಿರುವದು ಸಹವಾಗಿದೆ.

ಏಕೆ ಹೀಗಿದೆ ಈ ಜಗತ್ತು
ಅರಳುವ ದಿನಗಳನ್ನು ಬಾಡಿಸಿತ್ತು
ಹೆಣ್ಣಿನ ಸದ್ದಡಗಿಸಲು ಹೊರಟಿತ್ತು


ಎಂದು ಹೇಳುವ ಈ‌ಕವಿಯತ್ರಿ ಹೆಣ್ಣಿನ ಸಕಲ ಪಾತ್ರಗಳನ್ನು ಚಿತ್ರಿಸಿತ್ತಾರೆ.
ಒಟ್ಟಾರೆ ಈ ಸಂಕಲನದ ಕವಿತೆಗಳು ಮೊದಲ ಸಂಕಲನವೆಂಬ ರಿಯಾಯಿತಿ ಬಿಟ್ಟು ಓದುವಂತಿ ವೆ.ಒಂದು ಕವಿತೆ ಶ್ರೇಷ್ಠವಾಗುವದು ಅದು ಆಧುನಿಕ ಸಂದರ್ಭದ ರೂಪಕಗಳನ್ನು ದುಡಿಸಿಕೊಂಡಾಗ..ನಮ್ಮ ಕವಿಯತ್ರಿಯರು ಈಚೆಗೆ ಕನ್ನಡ ಕಾವ್ಯಲೋಕದಲ್ಲಿ ನಡೆಯುತ್ತಿರುವ ಹೊಸ ಹೊಸ ಬದಲಾವಣೆಗಳಿಗೆ ಪಕ್ಕಾಗಿ ತಮ್ಮನ್ಬೂ ರೂಪಿ ಸಿಕೊ ಳ್ಳಬೇಕಿದೆ.ಮುಂದಿನ ಸಂಕಲನ ಗಳಲ್ಲಿ ಅಂತಹ ಕವಿತೆಗಳನ್ನು ಶ್ರೀ ಮತಿ ದಾಕ್ಷಾಯಣಿ ಮಂಡಿಯವರು ರಚಿಸಲಿ ಎಂದು ಶುಭ ಹಾರೈಸುತ್ತೇನೆ.

——————

ಡಾ.ವೈ.ಎಂ.ಯಾಕೊಳ್ಳಿ

ಸಮಕಾಲಿನ ಸಂದರ್ಭದ ಮಹತ್ವದ ಕವಿ,ವಿಮರ್ಶಕರಾಗಿರುವ ಇವರು ಕಾವ್ಯ,ವಿಮರ್ಶೆ,ಸಂಶೋಧನೆ,ಸಂಪಾದನೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ೪೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸದ್ಯಕ್ಜೆ ಬೆಳಗಾವಿ ಜಿಲ್ಲೆಯ ಸವದತದತಿ ತಾಲೂಕಿನ ಯಕ್ಕುಂಡಿ ಸರಕಾರಿ ಪದವಿ‌ಪೂರ್ವ ಕಾಲೆಜಿನಲ್ಲಿ ಪ್ರಾಚಾರ್ಯರರಾಗಿದ್ದಾರೆ.೧೯೯೨ ರಲ್ಲಿ ಮೊದಲ ಸಂಕಲನ ನಿಟ್ಟುಸಿರು ಬಿಡುತ್ತಿದೆ ಕವಿತೆ ಕವನ ಸಂಕಲನ ಪ್ರಕಟಿಸಿದ ಇವರು ಏಳು ಕವನ ಸಂಕಲನ ಒಂದು ಕಥಾ ಸಂಕಲನ ಹತ್ತಕ್ಕು ಹೆಚ್ಚು ವಿಮರ್ಶಾಕೃತಿಗಳು ,ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು ಸಂಶೋಧನ ಮಹಾ ಪ್ರ ಬಂಧಮೊದಲಾದ ಕೃತಿಗಳನ್ನು ಹೊರತಂದಿದ್ದಾರೆ.
ಸಂಚಯ,ಸಂಕ್ರಮಣ ಕಾವ್ಯ ಪ್ರಶಸ್ತಿ,ಡಾ ಹಿರೆಮಲ್ಲೂರು ಈಶ್ವರನ್ ಪುರಸ್ಕಾರ,ಕರ್ನಾಟಕ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ,ಇನ್ನು ಅನೇಕ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗಲೂ ನಾಡಿನ ಹಲವು ಪತ್ರಿಕೆ,ಸಾಮಾಜಿಕ ಜಾಕತಾಣಗಳಲ್ಲಿ ನಿರಂತರ ಬರವಣಿಗೆಯಲ್ಲಿ ತೊಡಗಿದ್ದಾರೆ.

Leave a Reply

Back To Top