ಚರ್ಚೆ

ಕನ್ನಡ ಸಂಸ್ಕೃತಿಯ ಕಡೆಗಣನೆ

Kolata - Alchetron, The Free Social Encyclopedia

ಮಲ್ಲಿಕಾರ್ಜುನ ಕಡಕೋಳ

ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ ? ಹೀಗಾಗಿ ದೊಡ್ಡ ದೊಡ್ಡ ಬಜೆಟ್ಟಿನ, ಯಥೇಚ್ಛ ಪ್ರಮಾಣದ ಆಮದಾನಿ ಬರುವ ಇಲಾಖೆಯ ಮಂತ್ರಿ ಪದವಿ ಮೇಲೆಯೇ ಅಧಿಕ ಕಣ್ಣುಗಳು. ಊಟದ ಜತೆಗೆ  ಉಪ್ಪಿನಕಾಯಿ ಸೈಡಿಗಿರಲಿ ಎಂಬಂತೆ ಆದಾಯದ ಖಾತೆಗಳ ಜತೆಗೆ ಇದನ್ನು  ನೆಂಚಿಗೆಗೆಂಬಂತೆ ಕನ್ನಡ-ಸಂಸ್ಕೃತಿ ಇಲಾಖೆಯ ಮಂತ್ರಿ ಪದವಿಯ ಬಳಕೆಯಾಗಿರುವುದೇ ಅಧಿಕ.

ಸಂಸ್ಕೃತಿ - ತಂತ್ರಜ್ಞಾನ ಕನ್ನಡ ಮತ್ತು ...

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆಂದೇ ಎಕ್ಸ್ ಕ್ಲೂಸಿವ್ ಆದಂತಹ ಸಚಿವರಾಗಿ ಪ್ರಮಾಣವಚನ ಪಡೆದು ಪೂರ್ಣ ಪ್ರಮಾಣದ ನ್ಯಾಯದೊರಕಿಸಿ ಕೊಟ್ಟ ನಿದರ್ಶನಗಳು ಕ್ವಚಿತ ಎಂದೇ ಖಚಿತವಾಗಿ ಹೇಳಬಹುದು. ಕೆ. ಎಚ್. ಶ್ರೀನಿವಾಸ್, ಡಾ. ಜೀವರಾಜ ಆಳ್ವ… ಹೀಗೆ ಒಂದೆರಡ್ಮೂರು  ನಿದರ್ಶನಗಳು ದೊರಕಬಹುದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಇಂತಹ ನಿದರ್ಶನಗಳು ಇಲ್ಲವೆಂದೇ ಹೇಳಬಹುದು. ಬೇಕೋ ಬೇಡವೋ ಎನ್ನುವವರಿಗೆ ಇಲಾಖೆಯ ಉಸಾಬರಿ. ಹೀಗೆ ಬೇಡದವರಿಗೆ ಬೇಡದ ಖಾತೆ ದೊರಕಿದಾಗ ಇಲಾಖೆಯ ಅಭ್ಯುದಯ ಕನಸಿನ ಮಾತೇ. ಇದು ನಮ್ಮ ಕನ್ನಡದ ಸರ್ಕಾರಗಳು, ಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಕುರಿತಾಗಿ ಹೊಂದಿರುವ ಅನನ್ಯತೆಯೇ ? ಮಾತೆತ್ತಿದರೆ ಕನ್ನಡ ಮತ್ತು ಸಂಸ್ಕೃತಿ ಕುರಿತು ಅಪಾರ ಕಳಕಳಿ ತೋರುವ ರಾಜಕಾರಣಿಗಳಿಗೇ ಇಲಾಖೆ ಕುರಿತು ಖರೇ ಖರೇ ಕಾಳಜಿ ಇಲ್ಲ. ಪ್ರಾಯಶಃ ಅವರೆಲ್ಲರ ಲೆಕ್ಕಾಚಾರವೆಂದರೆ ಈ ಇಲಾಖೆಯ ಬಜೆಟ್ ಅಲ್ಪ ಪ್ರಮಾಣದ್ದು. ಅಜಮಾಸು ನಾಲ್ಕುನೂರು ಕೋಟಿ. ಪ್ರಾಯಶಃ  ಕೆಲವು ಪ್ರಾಧಿಕಾರ, ನಿಗಮ, ಮಂಡಳಿಗಳಿಗಿರಬಹುದಾದಷ್ಟು ಬಜೆಟ್. ಲಾಭಮಾಡಿ ತೋರಿಸಬೇಕೆಂದರೆ ಅದು ಕೆಲವರ ಪ್ರಕಾರ ಅನುತ್ಪಾದಿತ.

   ಈ ಬಾರಿ ನಾಲ್ಕುನೂರು ಕೋಟಿಯಲ್ಲಿ ಅರ್ಧದಷ್ಟು ಹಣ ಮಾತ್ರ ಇಲಾಖೆಗೆ ಮೀಸಲಿಟ್ಟಿರುವಾಗ ಕನ್ನಡ ಸಂಸ್ಕೃತಿಯ ಕುರಿತು ಸರಕಾರದ ಕಾಳಜಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ಧದಷ್ಟು ಕಡಿಮೆ ಹಣದಲ್ಲಿ ಕನ್ನಡದ ಸಂಸ್ಕೃತಿ ಕೆಲಸ ಹೇಗೆ ಸಾಧ್ಯ ? ಹತ್ತಾರು ಉತ್ಸವ, ಇಪ್ಪತ್ತೆಂಟು ಜಯಂತಿ, ಹತ್ತಿಪ್ಪತ್ತು ಸಂಖ್ಯೆಯ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಮಾಡುವ ಪ್ರಮುಖ ಜವಾಬ್ದಾರಿ ಇಲಾಖೆಯದು.  ಸಣ್ಣದೊಂದು ಜಿಲ್ಲಾಮಟ್ಟದ ಕಚೇರಿಯಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿವರೆಗೂ ಸಾಮಾನ್ಯ ಕಲಾವಿದ, ಸಾಹಿತಿ, ಜನಪದರಿಗೆ ನಿಲುಕದ ಯೋಜನೆಗಳು. ಈಗೆಲ್ಲವೂ ಗಣಕೀಕರಣದ ಗಮ್ಮತ್ತು. ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಬೇಕು. ತಮಟೆ, ಡೊಳ್ಳು, ಹಲಗೆ, ನುಡಿಸುವ ಹಳ್ಳಿಯ ಅನಕ್ಷರಸ್ಥ ಕಲಾವಿದನಿಗಿದು ನಿಲುಕದ ನಕ್ಷತ್ರ. ಬಹುಪಾಲು ಬುದ್ದಿವಂತ, ಜಾಣರಿಗೇ ಆನ್ ಲೈನ್ ಅರ್ಜಿ ಸಲ್ಲಿಸುವುದು ಹರಸಾಹಸದ ಕೆಲಸ. ಕಡೆಯಪಕ್ಷ ಇದನ್ನಾದರೂ ಇಲಾಖೆ ಸರಳಗೊಳಿಸಬೇಕಿದೆ. ಆದರೆ ಕಲಾವಿದರಿಗೆ ಗೌರವಧನ ” ಆರ್ಟಿಜಿಎಸ್ ” ಮೂಲಕ ಸಲ್ಲಿಕೆಯಾಗುವುದು ಸ್ವಾಗತಾರ್ಹ. ಇನ್ನು ಮಾಸಾಶನ ಮಂಜೂರಾತಿಗಾಗಿ ಗ್ರಾಮೀಣ ಕಲಾವಿದರು ವರ್ಷಗಟ್ಟಲೇ ಕಾಯಬೇಕು. ಕೆಲವರು ಕಾದು ಕಾದೂ ಸತ್ತೇ ಹೋಗುತ್ತಾರೆ. ಹೀಗಾಗಿ ಮಾಸಾಶನ ಕೆಲವರ ಪಾಲಿಗೆ ಒಮ್ಮೊಮ್ಮೆ ಮರಣ ಶಾಸನದಂತಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ - ಕರ್ನಾಟಕ ...

  ಸಂಸ್ಕೃತಿಯ ಸಂಪ್ರೀತಿ, ಅಂತಃಕರಣದ ಆಡುಂಬೊಲ ಆಗಬೇಕಿದ್ದ ಇಲಾಖೆ, ಇತರೆ ಬ್ಯುರೋಕ್ರಟಿಕ್ ಇಲಾಖೆಗಳ ತರಹ  ದಿನೆ ದಿನೇ ಸಂವಹನಶೀಲತೆ, ಸಹೃದಯತೆ, ಸಾಂಸ್ಕೃತಿಕ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದೆ. ಜನಸಂಸ್ಕೃತಿಯಿಂದ ದೂರ ದೂರ ಸರಿಯುತ್ತಿದೆ. ಕೆಲವು ನಿರ್ದಿಷ್ಟವಾದ ವಾರ್ಷಿಕ ಅನುದಾನಗಳ ಮಂಜೂರಾತಿಯಲ್ಲಿ ಯಥೇಚ್ಛ ಭ್ರಷ್ಟಾಚಾರ. ಇದಕ್ಕಾಗಿಯೇ ಮಧ್ಯವರ್ತಿ ಏಜೆಂಟರುಗಳಿದ್ದಾರೆ. ಈ ಏಜೆಂಟರು ಸರ್ಕಾರದ ಉನ್ನತ ಅಧಿಕಾರ ಮಟ್ಟದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡುವಲ್ಲಿ ನಿಸ್ಸೀಮರು. ಒಬ್ಬರೇ ಬೇರೆ ಬೇರೆ ಹೆಸರುಗಳಲ್ಲಿ ಕಲಾತಂಡ ಕಟ್ಟಿಕೊಂಡಿರುತ್ತಾರೆ. ಅವರಿಗೆಲ್ಲ ಉಲ್ಲೇಖಿತ ಏಜೆಂಟರು ಅನುದಾನ, ಇತರೆ ಕಾರ್ಯಕ್ರಮ ಕೊಡಿಸುವಲ್ಲಿ, ನಡೆಯದ ಕಾರ್ಯಕ್ರಮಗಳ ಜಿಎಸ್ಟಿ ಸಮೇತವಾದ ವ್ಯವಸ್ಥಿತ ದಾಖಲೆಪತ್ರಗಳನ್ನು ಒದಗಿಸುವಲ್ಲಿ ಇವರು ನಿಪುಣ ಪ್ರಳಯಾಂತಕರು.

   ಇಂತಹ (ಅ)ವ್ಯವಹಾರದಲ್ಲಿ ಬೆಂಗಳೂರಿಗೆ ಮಾತ್ರ ಅಗ್ರಸ್ಥಾನ ಎಂದುಕೊಳ್ಳಬೇಕಿಲ್ಲ. ದೂರದ ಬೀದರ, ಬಿಜಾಪುರಗಳೇನು ಹಿಂದೆ ಬಿದ್ದಿಲ್ಲ. ಇದೆಲ್ಲದಕ್ಕು ಅಧಿಕಾರಿಗಳ ಫುಲ್ ಸಹಕಾರವಿಲ್ಲದೇ ಸಾಧ್ಯವಿಲ್ಲ. ಕೆಲವು ಮಹಿಳಾ ಅಧಿಕಾರಿಗಳು ಸಹ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ನಿಗೂಢವೇನಲ್ಲ. ಯಾವುದೇ ಸೃಜನಶೀಲ ಕಲೆ ಸರಕಾರದ ಅನುದಾನಗಳನ್ನೇ ಅವಲಂಬಿಸಿ ಬದುಕಬಾರದು. ಹಾಗೆ ಬದುಕಿದಾಗ ಅವುಗಳ ಆತ್ಮಸಾಕ್ಷಿಯ ಗೌರವಕ್ಕೆ ಕುಂದುಂಟು. ಆತ್ಮಗೌರವ ಕಳೆದುಕೊಂಡ ಕಲೆ ಮತ್ತು ಕಲಾವಿದರು ಬಹುಕಾಲ ಬದುಕುವುದಿಲ್ಲ. ಹಾಗೆಂದು ಸರ್ಕಾರದ ಧನಸಹಾಯ ಬೇಡವೆಂಬುದಲ್ಲ. ಅನುದಾನಕ್ಕಾಗಿಯೇ ಕಲಾತಂಡಗಳೆಂಬುದಲ್ಲ. ಈಗ್ಗೆ ಆರೇಳು ದಶಕಗಳ ಹಿಂದೆ ಇಂತಹ ಯಾವ ಆಸೆಬುರುಕತನ ಇಲ್ಲದೇ ಬಹುಸಂಖ್ಯೆಯಲ್ಲಿ ನಾಟಕ ಸಂಸ್ಥೆಗಳು ನವರಸಭರಿತ ರಂಗಸಂಸ್ಕೃತಿಯ ಸಂಚಲನೆ ಮೂಡಿಸಿದ್ದವು. ಈಗಿನಂತೆ ಫುಲ್ ಕಾಮೆಡಿ ಎಂಬ ಟ್ಯಾಗ್ ಲೈನ್ ಹಾಕಿಕೊಂಡು, ಏಕರಸ ಪ್ರಧಾನದ  ಹಾಸ್ಯಕ್ಕಾಗಿಯೇ ನಾಟಕಗಳೆಂದು ಬಿಂಬಿತವಾಗಿರಲಿಲ್ಲ. ಹೌದು ಆಗ ಅಕ್ಷರಶಃ  ಹಾಸ್ಯರಸ ಋಷಿಗಳಿದ್ದರು.

   ಸಂಸ್ಕೃತಿಯ ಸದವಕಾಶ ಮತ್ತು ಸೌಲಭ್ಯಗಳ ಕುರಿತು ಸಣ್ಣದೊಂದು ನಿದರ್ಶನ ಇಲ್ಲಿ ಉಲ್ಲೇಖಿಸುವೆ. ಅಮೆರಿಕೆಯ “ಅಕ್ಕ” ಫೆಸ್ಟಿವಲ್ ಸೇರಿದಂತೆ ಬಹುಪಾಲು ಅವಕಾಶಗಳು ಬೆಂಗಳೂರು ಕಡೆಯವರಿಗೇ ದಕ್ಕುತ್ತವೆ. ಅದಕ್ಕೆಲ್ಲ ದೊಡ್ಡಮಟ್ಟದ ಲಾಬಿ. ಯಾಕಂದರೆ ಬೆಂಗಳೂರು ಗು-ಲಾಬಿ ನಗರ ಅಲ್ಲವೇ ? ಹೀಗಾಗಿ ಮತ್ತೆ, ಮತ್ತೆ ಸಿಕ್ಕವರಿಗೇ ಮತ್ತೆ ಮತ್ತೆ ಅವಕಾಶಗಳು. ಒಂದು ಡಜನ್ನಿಗೂ ಹೆಚ್ಚಿಗಿರುವ ಅಕಾಡೆಮಿಗಳು, ಅಲ್ಲದೆ ಪ್ರಾಧಿಕಾರ, ಬಹುಪಾಲು ಪ್ರತಿಷ್ಠಾನಗಳು ಬೆಂಗಳೂರಿನಲ್ಲಿಯೇ ಗೂಟ ಹೊಡೆದುಕೊಂಡಿವೆ. ವಾಸ್ತವವಾಗಿ ಈಗ ಆಗಿರುವುದು ಕರ್ನಾಟಕದ ರಾಜಕೀಯ ಏಕೀಕರಣ. ಅದರಲ್ಲೂ ಎರಡು ಪ್ರಮುಖ ಜಾತಿಗಳ ಏಕೀಕರಣ. ಸಾಂಸ್ಕೃತಿಕ ಏಕೀಕರಣ ಆಗಬೇಕಿದೆ. ಅದರ ಮೂಲಕ ಸಮಗ್ರ ಕರ್ನಾಟಕದ ಸಾಂಸ್ಕೃತಿಕ ವಿಕೇಂದ್ರೀಕರಣದ  ಸಂಪನ್ನತೆ ಸಮೃದ್ಧಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನೀಡಿರುವ “ಸಾಂಸ್ಕೃತಿಕ ನೀತಿ ವರದಿ”ಯನ್ನು ಜಾರಿಗೆ ತರಬೇಕಿದೆ. ಸೋಜಿಗದ ಸಂಗತಿ ಎಂದರೆ ಯಾವುದೇ ಸರಕಾರಗಳು ಅಸ್ತಿತ್ವಕ್ಕೆ ಬಂದಾಗಲೂ ಕನ್ನಡದ ಅಸ್ಮಿತೆ ಹಾಗೂ ಅಭಿವೃದ್ಧಿ ಕುರಿತಾದ ಇಂತಹ ಜನಸಂಸ್ಕೃತಿಪರ  ವರದಿಗಳನ್ನು ನೇಪಥ್ಯಕ್ಕೆ ನುಸುಳಿಸುವ ಹುನ್ನಾರಗಳು ಜಾಣತನದಿಂದಲೇ ಜರುಗುತ್ತವೆ. 

Baraguru Ramachandrappa to chair Kannada Sahitya Sammelan at ...

  ಕೆಲವು ಅಕಾಡೆಮಿಗಳು ಸಾಂಸ್ಕೃತಿಕ ಕ್ರಿಯಾಶೀಲತೆ ಕಳೆದುಕೊಂಡು ಸರಕಾರಿ ಕಚೇರಿಗಳಂತಾಗಿ ಅವು ಪ್ರಶಸ್ತಿಗಳನ್ನು ನೀಡುವ ಯಂತ್ರಗಳಾಗಿವೆ. ಮತ್ತೆ ಕೆಲವು ನೀಡಿದ ಪ್ರಶಸ್ತಿ ವಾಪಸು ಪಡೆಯುವ ನಿರ್ದಯ ಸ್ಥಿತಿ ತಲುಪಿವೆ. ಅವುಗಳ ಏಕತಾನತೆ ಮತ್ತು ಇತರೆ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ಇನ್ನೊಮ್ಮೆ ಬರೆದರಾಯಿತು. ಈ ಬಾರಿಯಂತು ಹಣದ ಕೊರತೆ ಎಂದು ಅವು ಕೊರಗುವಂತಾಗಿದೆ. ಸರಕಾರ ಯಾವ ಪಕ್ಷದ್ದೇ ಇರಲಿ ಕೆಲವರಿಗೆ ಕೆಲವು ಅಕಾಡೆಮಿಗಳ ಸದಸ್ಯತ್ವ ಖಾಯಂ. ಇಂತಹ ಅವಕಾಶವಾದಿಗಳ ಕುರಿತು ಸರ್ಕಾರ ಮತ್ತು ಇಲಾಖೆ ಎಚ್ಚರ ವಹಿಸಬೇಕಿದೆ. ಇನ್ನೊಂದೆಡೆ  ಕೋಟಿ, ಕೋಟಿ ಹಣ ಖರ್ಚುಮಾಡುವ ರಂಗಾಯಣಗಳು ಏಕತಾನೋತ್ಸವಗಳ ಕೊರೋನಾ ರೋಗದಿಂದ ಬಳಲುತ್ತಿವೆ. ದಶಕಗಳೇ ಕಳೆದರೂ ಜನ ಸಾಮಾನ್ಯರಿಗೆ ರಂಗಾಯಣಗಳ ಪೂರ್ಣ ಪರಿಚಯವೇ ಆಗಿಲ್ಲ. ಜಾಗತಿಕ ಮಟ್ಟದಲ್ಲಿ ಗುರುತರಗೊಂಡಿರುವ ಮೈಸೂರು ರಂಗಾಯಣ  ಜಿಲ್ಲೆಯಾಚೆ ಹೊರ ಜಿಲ್ಲೆಯ ಸಾಮಾನ್ಯ ರಂಗಾಸಕ್ತರ ಗಮನ ಸೆಳೆಯಲಿಲ್ಲ. ಇನ್ನು ಅವುಗಳ ರಂಗ ಸಂಸ್ಕೃತಿಯ ಲಾಭದ ವಿಷಯ ಬಹುದೂರದ ಮುಗಿಲಮಾತು. ಶೇಕಡಾ ಹತ್ತರಷ್ಟು ಜನರನ್ನೂ ರಂಗಾಯಣಗಳು ತಲುಪಿಲ್ಲ. ಜನಸಾಮಾನ್ಯರಿಗೆ ಇವರ ನಾಟಕಗಳು ಅರ್ಥವಾಗುವುದಿಲ್ಲ. ಸಾಮಾನ್ಯರಿಗಾಗಿ ರಂಗಾಯಣ ಅಲ್ಲ  ಬುದ್ದಿಜೀವಿಗಳಿಗೆ ರಂಗಾಯಣ ಎನ್ನುವಂತಾಗಿದೆ. ಅದಕ್ಕೆಂದೇ ಕೆಲವರ ಕಣ್ಣಿಗೆ ರಂಗಾಯಣಗಳು ಬಿಳಿಯಾನೆಗಳಂತೆ ಹೊಳೆಯುತ್ತಿವೆ.  ಜನಮಾನಸದಲ್ಲಿ ಕಂಪನಿ ಶೈಲಿಯ ವೃತ್ತಿ ನಾಟಕಗಳು ಇವತ್ತಿಗೂ ಜನಜನಿತ. ದುರಂತವೆಂದರೆ ಅವು ಸದಭಿರುಚಿ ಬೆಳೆಸುವ ರಂಗಪರಂಪರೆಯಿಂದ ದೂರ ಸರಿದಿವೆ. ಸೋಜಿಗವೆಂದರೆ ಇದುವೇ ಪ್ರಜಾಸತ್ತಾತ್ಮಕ  ರಂಗಸಂಸ್ಕೃತಿಯ ಗೆಲುವು‌ ಎಂಬಂತಾಗಿದೆ.

  ಮೊನ್ನೆ, ಮೊನ್ನೆಯಷ್ಟೇ ನಿಧನರಾದ ಪಾಟೀಲ ಪುಟ್ಟಪ್ಪನಂಥವರು, ಅವರ ಪೂರ್ವದ ಕೆ. ವಿ. ಪುಟ್ಟಪ್ಪ, ದ. ರಾ. ಬೇಂದ್ರೆ, ಡಾ. ರಾಜಕುಮಾರ್ ಅಂಥವರು ಸರಕಾರದ ಸಾಂಸ್ಕೃತಿಕ ಮತ್ತು ಕನ್ನಡ ವಿರೋಧಿ ನೀತಿಗಳ ಕುರಿತು ಮಾತನಾಡಿದರೆ ಅಂದು ಪ್ರಭುತ್ವ ಕಣ್ಣು, ಕಿವಿ ತೆರೆದು ಗಂಭೀರವಾಗಿ ಆಲಿಸುತ್ತಿತ್ತು. ಕೂಡಲೇ ವಿಧಾನಸೌಧದ ಮೂರನೇ ಮಹಡಿ ಸೂಕ್ತ ಪರಿಹಾರಕ್ಕೆ  ಮುಂದಾಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಸರ್ಕಾರದ ಇಂತಹ ಅಸಡ್ಡೆತನಗಳ ಬಗ್ಗೆ ಯಾರಾದರೂ  ಧ್ವನಿ ಎತ್ತಿದರೆ ಸಾಕು, ಅದು ಯಾರ ಧ್ವನಿ ?, ಯಾವ ಧ್ವನಿ ? ಅದು ಎಡನೋ, ಬಲನೋ ? ಎಂದು ಅನುಮಾನಿಸುವ ಮಟ್ಟ ಮುಟ್ಟಿರುವುದು ಬಹುದೊಡ್ಡ ಸಾಂಸ್ಕೃತಿಕ ದುರಂತ. ಇದು ಕನ್ನಡ ಸಂಸ್ಕೃತಿಯ ಕಡೆಗಣನೆ ಮಾತ್ರವಲ್ಲ. ಕನ್ನಡ ಭಾಷೆ, ಸಂಸ್ಕೃತಿ ಮಾತ್ರವಲ್ಲ ಒಟ್ಟು ಬದುಕಿನ ಮೇಲೆ ಬೀಸುತ್ತಿರುವ ವಿಷಮ ಪಾರಮ್ಯದ ಗಾಳಿಯ ದುರಿತಕಾಲವೆಂದೇ ಭಾವಿಸಬೇಕಾಗುತ್ತದೆ.

**********

Leave a Reply

Back To Top