ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಮಧುಕೇಶವ ಭಾಗ್ವತ ರವರ ಗಜಲ್ ಗಳಲ್ಲಿ
ಪ್ರಕೃತಿಯ ಸೊಬಗು
ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿರುವಿರಿ ಎಂಬ ಭಾವದೊಲವಿನೊಂದಿಗೆ ತಮ್ಮ ಮುಂದೆ ಗಜಲ್ ಗಂಗೆ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…
“ಅವಳ ತುಟಿಗಳ ಮೃದುತ್ವ ಏನೆಂದು ಹೇಳಲಿ
ಗುಲಾಬಿಯ ಒಂದು ಪಕಳೆಯಂತಿದೆ”
-ಮೀರ್ ತಖಿ ಮೀರ್
ಮಾತು ಮಾನವನ ನಿಜವಾದ ಆಸ್ತಿ. ಈ ಮಾತು ಮಾನವನಿಗೆ ಯಾವಾಗ ಬಂತೆಂದು ಹೇಳುವುದು ಕಷ್ಟ. ಮೊದಲಿಗೆ ಮಾನವ ಮಾತಿಲ್ಲದೆ ತನ್ನ ಆಂಗಿಕ ಅಭಿನಯ, ಹಾವ ಭಾವಗಳ ಮೂಲಕವೇ ತನ್ನ ಭಾವನೆಗಳನ್ನು ವಾಸ್ತವವಾಗಿ ಬರೆಯಲು ಕಲಿಯುವುದು ಓದಲು ಕಲಿಯುವ ಒಂದು ಭಾಗವಾಗಿದೆ. ಬರವಣಿಗೆ ಎನ್ನುವುದು ಓದುವ ಮೇಲಿನ ಶ್ರದ್ಧೆಯಿಂದ ಹೊರಬರುತ್ತದೆ. ಅಂತೆಯೇ ಸೃಜನಶೀಲ ಬರವಣಿಗೆಯ ಜೊತೆಗೆ ಸೃಜನಶೀಲ ಓದುವಿಕೆಯೂ ಇದೆ. ಶಬ್ದಗಳನ್ನು ಆಡುತ್ತ, ಆ ಶಬ್ದಗಳನ್ನು ಜೋಡಿಸಿ ಮಾತನಾಡುವುದನ್ನು ರೂಢಿಸಿಕೊಂಡ. ಮಾತು ಅವನಿಗೆ ಒಂದು ವರವಾಯಿತು. ಮುಂದೆ ಅದೇ ಮಾತು ಭಾಷೆಯ ರೂಪ ತಳೆದಾಗ ಆ ಮಾತಿಗೆ ಮತ್ತಷ್ಟು ಮೌಲ್ಯ ಬರಲಾರಂಭಿಸಿತು. ಮಾತು ಮತ್ತು ಭಾಷೆ ಮಾನವ ಪ್ರಾಣಿಯನ್ನು ಇತರ ಪ್ರಾಣಿಗಳಿಗಿಂತ ಶ್ರೇಷ್ಠನನ್ನಾಗಿಸಿತು. ಈ ಮಾತು, ಭಾಷೆ ಎಂಬುದೇ ಸಾಹಿತ್ಯಕ್ಕೆ ವೇದಿಕೆಯೊಂದನ್ನು ಒದಗಿಸಿತು. ವಾಸ್ತವವಾಗಿ ಬರೆಯಲು ಕಲಿಯುವುದು ಓದಲು ಕಲಿಯುವ ಒಂದು ಭಾಗವಾಗಿದೆ. ಬರವಣಿಗೆ ಎನ್ನುವುದು ಓದುವ ಮೇಲಿನ ಶ್ರದ್ಧೆಯಿಂದ ಹೊರಬರುತ್ತದೆ. ಅಂತೆಯೇ ಸೃಜನಶೀಲ ಬರವಣಿಗೆಯ ಜೊತೆಗೆ ಸೃಜನಶೀಲ ಓದುವಿಕೆಯೂ ಇದೆ. ಇದು ಸಮಾಜದ ಏರಿಳಿತವನ್ನು ತನ್ನ ಅಕ್ಷರಗಳ ಮೂಲಕ ಓದುಗರ ಎದೆಗೆ ರವಾನಿಸುತ್ತದೆ. ಇಲ್ಲಿ ಅನುವಾದದ ಪಾತ್ರ ಅವಿಸ್ಮರಣೀಯ. ಇದು ಶಬ್ಧದಿಂದ ಶಬ್ಧಕ್ಕೆ ದಾಟಿಸುವ ಶುಷ್ಕ ಕೆಲಸವಲ್ಲ. ಬದಲಿಗೆ ಮೂಲದ ಲಯ ಮತ್ತು ಅರ್ಥಗಳ ಸಮರ್ಥ ಅಭಿವ್ಯಕ್ತಿಯ ವಿಧಾನವಾಗಿದೆ. ಸಂವೇದನೆಶೀಲತೆಯನ್ನು ಮೈಗೂಡಿಸಿಕೊಂಡ ಬರಹಗಾರರಿಗೆ ಅನುವಾದ ಕೂಡ ಒಂದು ಸೃಜನಶೀಲ ಪ್ರಕ್ರಿಯೆಯೇ ಆಗಿದೆ. ಆವಾಗ ಅನುವಾದವು ಮೂಲದ ಪುನರ್ ಸೃಷ್ಟಿ ಎಂಬಂತೆ ಫೀಲ್ ನೀಡುತ್ತದೆ. ಇದು ಸಾಧ್ಯವಾಗಬೇಕಾದರೆ ಮೂಲ ಸಾಹಿತಿಯ ಪರಕಾಯ ಪ್ರವೇಶವನ್ನು ಅನುವಾದ ಬಯಸುತ್ತದೆ. ಮೂಲ ಕೃತಿಯೊಂದಿಗೆ ಏರ್ಪಡುವ ಒಂದು ತಾದಾತ್ಮ್ಯಾನುಭೂತಿ ಅನುವಾದವನ್ನು ಸತ್ವಪೂರ್ಣಗೊಳಿಸುತ್ತದೆ. ಇದು ಸಾಧ್ಯವಾಗುವುದು ಅನ್ಯ ಭಾಷೆಯ ಸಾಂಸ್ಕೃತಿಕ ಅಂಶಗಳ ಅರಿವು ಅನುವಾದಕರಿಗೆ ಇದ್ದಾಗ ಮಾತ್ರ!! ಇಡೀ ಭೂಮಿಯನ್ನು ಬೆಸೆಯುವ ಬಹುಮುಖಿ ಸಂಸ್ಕೃತಿಯನ್ನು ಅನುವಾದ ತನ್ನ ಒಡಲಲ್ಲಿ ಕಾಪಿಟ್ಟುಕೊಂಡು ಬರುತ್ತಿದೆ. ಕನ್ನಡ ಸಾರಸ್ವತ ಲೋಕ ತನ್ನ ಹೃದಯದ ಕಿಟಕಿ ಬಾಗಿಲುಗಳನ್ನು ತೆರೆದುಕೊಂಡು ಎಲ್ಲಿಂದಲಾದರೂ ಬರುವ ಶುದ್ಧ ಬೆಳಕನ್ನು ಧಾರಾಳವಾಗಿ ಸ್ವೀಕರಿಸುತ್ತ ಬಂದಿದೆ. ಇದು ಎಷ್ಟರಮಟ್ಟಿಗೆ ಎಂದರೆ ಅದನ್ನು ತನ್ನದಾಗಿಸಿಕೊಂಡು ವಿಸ್ತಾರಗೊಳಿಸುವ ಹೃದಯ ವೈಶಾಲ್ಯತೆಯನ್ನು ಹೊಂದಿದೆ. ಭಾಷೆಯ ಮಡಿವಂತಿಕೆಯನ್ನು ಬದಿಗೊತ್ತಿ ಅನುವಾದದ ಮೂಲಕ ವೈವಿಧ್ಯಮಯ ಸಂಸ್ಕೃತಿಯ ಅರಿವನ್ನು, ಜೀವಮಿಡಿತದ ಧ್ವನಿಯನ್ನು ಆಪ್ತವಾಗಿಸುವ ಮನುಷ್ಯ ಪ್ರೀತಿಯ ದರ್ಶನ ಮಾಡಿಸುವ ಹಲವು ಕಾವ್ಯ ಪ್ರಕಾರಗಳಲ್ಲಿ ಗಜಲ್ ಮುಂಚೂಣಿಯಲ್ಲಿದೆ. ಈ ಕಾರಣಕ್ಕಾಗಿಯೋ ಏನೋ ಇಂದು ಕನ್ನಡದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಕನ್ಯೆಯ ಹಿಂದೆ ಬಿದ್ದು ಅಶಅರ್ ಗುಂಗಲ್ಲಿ ಮುಳುಗಿದ್ದಾರೆ. ಅವರುಗಳಲ್ಲಿ ಶ್ರೀ ಮಧುಕೇಶವ ಭಾಗ್ವತ ರವರು ಒಬ್ಬರು.
ಶ್ರೀ ಮಧುಕೇಶವ ಭಾಗ್ವತ ರವರು ಶ್ರೀ ನರಸಿಂಹ ಭಾಗ್ವತ ಹಾಗೂ ಶ್ರೀಮತಿ ಲಕ್ಷ್ಮೀ ಭಾಗ್ವತ ದಂಪತಿಗಳ ಮಗನಾಗಿ ೧೯೬೯ ರ ಜುಲೈ ೧೫ ರಂದು ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಗುಂದ ಎಂಬ ಹಳ್ಳಿಯಲ್ಲಿ ಜನಿಸಿದ್ದಾರೆ. ತಂದೆಯವರ ಅಕಾಲಿಕ ಮರಣದಿಂದ ಕುಂದಾಪುರದ ಉಪ್ಪಿನಕುದ್ರಿನ ಅಜ್ಜಿ ಮತ್ತು ಮಾವನ ಮನೆಯಲ್ಲಿ ಬೆಳೆದರು. ಅಲ್ಲಿಯೇ ಆರಂಭದ ಶಿಕ್ಷಣ ಪಡೆದು ನಂತರ ಮಂಗಳೂರಿನಲ್ಲಿ 'ಡಿಪ್ಲೊಮಾ ಇನ್ ಆಟೋಮೊಬೈಲ್ಸ್ ಎಂಜಿನಿಯರಿಂಗ್' ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಪ್ರಸ್ತುತವಾಗಿ ಇವರು ಯಲ್ಲಾಪುರದಲ್ಲಿ ಸ್ವಂತ 'ಆಟೋಮೊಬೈಲ್ಸ್ ಮತ್ತು ಸರ್ವಿಸ್ ಸೆಂಟರ್' ಒಂದನ್ನು ಪ್ರಾರಂಭಿಸಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಸಾಹಿತ್ಯದ ವಿಹಾರಕ್ಕೆ ಸದ್ವಿನಿಯೋಗಿಸುಕೊಂಡು ಕಾವ್ಯ, ಭಾವಗೀತೆ, ಚುಟುಕು, ಭಕ್ತಿಗೀತೆ, ಮುಕ್ತಕ, ರುಬಾಯಿ, ಅಬಾಬಿ ಹಾಗೂ ಗಜಲ್ ನಂತಹ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಶ್ರೀಯುತರು "ಚಿಗುರು" ಎಂಬ ಕಥಾ ಸಂಕಲನ, "ನಂದಗೋಪನ ಉಲಿಗಳು" ಎಂಬ
ಮುಕ್ತಕಗಳ ಸಂಕಲನ ಹಾಗೂ ‘ಮಧುರ ಭಾವ ಸಂಗಮ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಭಾಗ್ವತ ರವರ ಸಾಹಿತ್ಯದ ಹಲವು ಬರಹಗಳು ರಾಗ ಸಂಗಮ, ಕಸ್ತೂರಿ ಹಾಗೂ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತಮ್ಮ ಬಿಡುವಿರದ ದಿನಚರಿಯಲ್ಲೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯದ ಒಲವನ್ನು ಹಂಚಿಕೊಂಡಿದ್ದಾರೆ. ಇವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ 'ಪೂರ್ಣಚಂದ್ರ ತೇಜಸ್ವಿ' ಪ್ರಶಸ್ತಿಯು ಪ್ರಮುಖವಾಗಿದೆ.
ಚದುರಿ ಬಿದ್ದಿರುವ ಎಲ್ಲರನ್ನೂ ಎಲ್ಲವನ್ನೂ ಅಂತಃಕರಣದ ಸೂತ್ರದಲ್ಲಿ ಪೋಣಿಸುವ ಯತ್ನವೇ ಗಜಲ್. ಸುಮ್ಮನೆ ಭಾವಾಭಿವ್ಯಕ್ತಿಯಾಗಿ ಗುನುಗುನಿಸಿದ ಗಜಲ್ ಗಳಲ್ಲಿ ಅರ್ಥಪೂರ್ಣವಾದ ಜೀವನ ಜಿಜ್ಞಾಸೆ ಇದೆ, ಪ್ರತಿಮೆ ರೂಪಕಗಳಿವೆ. ಮನುಷ್ಯ ಸಂಬಂಧಗಳ ಬೆಚ್ಚನೆ ನಂಟಿನ ರೂಹುಗಳಿವೆ. ನೋವನ್ನೂ ಸಂತೈಸುವ, ಸಾವನ್ನೂ ಪ್ರೀತಿಸುವ ಕಲೆ ಗಜಲ್ ಗೆ ಕರಗತವಾಗಿದೆ. ಹೆಣ್ಣನ್ನು ಗೌರವಿಸುವ, ಪ್ರೀತಿಸುವ ಪರಂಪರೆಯನ್ನು ತನ್ನ ಅಶಅರ್ ಮೂಲಕ ಮಾಡುತ್ತ ಬಂದಿದೆ. ಈ ಕಾರಣಕ್ಕಾಗಿಯೇ ಗಜಲ್ ಎಂದರೆ ಬೆಣ್ಣೆಗಿಂತಲೂ ಮೃದು, ಕೋಮಲ. ಹಲ್ಲುಗಳ ಮಧ್ಯೆಯಿರುವ ನಾಲಿಗೆಯಂತೆ!! ಈ ದಿಸೆಯಲ್ಲಿ ಶಾಯರ್ ಮಧುಕೇಶವ ಭಾಗ್ವತ ರವರ "ಮಧುರ ಭಾವ ಸಂಗಮ" ಸಂಕಲನವನ್ನು ಗಮನಿಸಿದಾಗ ಸ್ನೇಹ, ಗುರುಹಿರಿಯರ ಆಶೀರ್ವಾದ, ಕಾಯಕ, ಹಸಿರಿನ ಮಹತ್ವ, ಸನ್ಮಾನಗಳ ಹೊಣೆಗಾರಿಕೆ, ನಡೆ-ನುಡಿಯಲ್ಲಿ ಸಾಮ್ಯತೆ, ಹೊಂಗನಸು, ಜೀವನಪ್ರೀತಿ, ಸಂತಸ, ದುಃಖ, ಬೇಸರ, ಅಸಮಾಧಾನ, ಸಾಮಾಜಿಕ ವಿಡಂಬನೆ, ಮೌಲ್ಯಗಳ ತಾಕಲಾಟ, ಸಂಬಂಧಗಳ ಬವಣೆ, ದೈವ ಭಕ್ತಿ, ದೇಶಭಕ್ತಿ, ಕನ್ನಡ ನಾಡು ನುಡಿಯ ವರ್ಣನೆ, ಯೌವ್ವನದ ಆಯಾಮಗಳು, ರಾಧಾ-ಮಾಧವರ ಪ್ರೇಮ ಸಲ್ಲಾಪ, ಪ್ರೀತಿಯ ಕನವರಿಕೆ, ವಿರಹದ ದಳ್ಳುರಿ, ಪ್ರಣಯದ ಕಾವು... ಎಲ್ಲವೂ ಒಪ್ಪವಾಗಿ ಜೋಡಿಸಿಟ್ಟ ಅನುಭವವಾಗುತ್ತದೆ.
“ಹೊಲದ ಮಣ್ಣಲಿ ಉಳುಮೆಯ ಮಾಡುತ ಸಂತಸವ ಪಡೆಯುವೆನು ತಾಯಿ
ನೆಲದ ಋಣವ ನೆನೆದು ಧ್ವಜಕೆ ನಮಿಸುತ ನಡೆಯುವೇನು ತಾಯಿ”
ಇಲ್ಲಿ ಬಳಕೆಯಾಗಿರುವ ‘ತಾಯಿ’ ಎನ್ನುವ ರದೀಫ್ ವಿಶಾಲ ಅರ್ಥವನ್ನು ಹೊಂದಿದೆ. ಗಜಲ್ ಗೋ ಮಧುಕೇಶವ ಭಾಗ್ವತ ರವರು ವತನ್ ನ ಪ್ರೀತಿ ಜೊತೆಗೆ ಮಣ್ಣಿನ ಮಮತೆಯನ್ನೂ ಸಾರಿದ್ದಾರೆ. ಇದು ಮೇಲ್ನೋಟಕ್ಕೆ ಸಾಂಪ್ರದಾಯಿಕ ಮನೋಭಾವ ಎನಿಸಿದರೂ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಒಕ್ಕಲುತನವನ್ನು ಪ್ರೀತಿಸುವ, ರೈತರನ್ನು ಗೌರವಿಸುವ ನೆಲೆಯಲ್ಲಿ ಈ ಷೇರ್ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದರೊಂದಿಗೆ ನೆಲದ ಋಣದ ಅಸ್ಮಿತೆಯನ್ನು ದಾಖಲಿಸುತ್ತದೆ.
“ಒಳ್ಳೆಯ ವಿಷಯಗಳು ಬಾಳಿನ ಯಾನದಲಿ ಸ್ಪೂರ್ತಿ ನೀಡಲಿ ಗೆಳೆಯಾ
ಹಳ್ಳಿಯ ಬದುಕು ನಗರ ವಾಸಿಗಳಿಗೆ ಪ್ರೇರಣೆ ಕೊಡಲಿ ಗೆಳೆಯಾ”
ಭಾಗ್ವತರವರದು ಸಾತ್ವಿಕ ಬದುಕು. ತಮ್ಮ ಜೀವನದಲ್ಲಿ ಕಂಡುಂಡ ಅನುಭವಿಗಳಿಗೆ ಭಾವದುಂಗುರ ತೊಡಿಸಿರುವುದು ಈ ಷೇರ್ ನೋಡಿದಾಗ ಮನದಟ್ಟಾಗುತ್ತದೆ. ಜೀವನದಲ್ಲಿ ಒಳ್ಳೆಯದು ನಡೆಯುತ್ತದೆ, ಕೆಟ್ಠದೂ ನಡೆಯುತ್ತದೆ. ಕೆಟ್ಟದನ್ನು ಮರೆತು ಒಳ್ಳೆಯದನ್ನು ಮೆಲುಕು ಹಾಕುತ್ತಾ ಸಾಗುವುದರಲ್ಲಿಯೇ ಬಾಳಿನ ಸಾರ್ಥಕತೆ ಇದೆ. ಅಂತೆಯೇ ಸುಖನವರ್ ಭಾಗ್ವತ ರವರು ಇಲ್ಲಿ ಬಾಳ ಪಯಣ ಕುರಿತು ಹೇಳುತ್ತ, ಗ್ರಾಮೀಣ ಬದುಕಿನ ಫಲವಂತಿಕೆಯನ್ನು ಅರುಹಿದ್ದಾರೆ.
ಇಂದಿನ ಜಾಗತೀಕರಣದ ದಿನಗಳಲ್ಲಿ ‘ಬಿಡುವು’ ಎನ್ನುವುದು ಮುಗಿಲ ಮಲ್ಲಿಗೆಯೇ ಆಗಿದೆ. ಎಲ್ಲರೂ ಒತ್ತಡದತ್ತ ಮುಖಮಾಡಿ ನಿಂತಿದ್ದಾರೆ. ಇಲ್ಲಿ ಕಂಬನಿ ಮಿಡಿಯುವ ಕಂಗಳಿಗೇನೂ ಬರವಿಲ್ಲ, ಬರವಿರೋದು ಕಂಬನಿ ಒರೆಸುವ ಬೆರಳುಗಳು! ಆ ಬೆರಳುಗಳ ಕೆಲಸವನ್ನು ಗಜಲ್ ತುಂಬಾ ಪ್ರೀತಿಯಿಂದ, ಮಮತೆಯಿಂದ ಮಾಡುತ್ತ ಬಂದಿದೆ. ಇಂಥಹ ಅನುಪಮ ಗಜಲ್ ಸಾಹಿತ್ಯ ಲೋಕದಲ್ಲಿ ಶಾಯರ್ ಮಧುಕೇಶವ ಭಾಗ್ವತ ರವರು ಹೆಚ್ಚು ಹೆಚ್ಚು ಗಜಲ್ ಗಳನ್ನು ರಚಿಸಲಿ, ಸಂಕಲನಗಳ ಮೂಲಕ ಓದುಗರ ಮನವನ್ನು ತಣಿಸಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
“ನನ್ನ ಜೊತೆ ಏನು ಜಿದ್ದೊ ಅವಳದು ದೇವರೇ ಬಲ್ಲ
ಸಮಾಧಾನವಾಗಲು ನನ್ನ ಒಂದು ನೋಟ ಸಾಕು”
-ಮುಹಮ್ಮದ್ ರಫಿ ಸೌದಾ
ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ. ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್...!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ,
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ವಿಸ್ತೃತವಾಗಿ ಗಜಲ್ ಕವಿಯನ್ನು ಪರಿಚಯಿಸುವ ತಮ್ಮ ಲೇಖನ ಗಮನ ಸೆಳೆಯುವಂತಿದೆ