ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಸೌಲಭ್ಯಗಳ ಬೆನ್ನು ಹತ್ತಿದಾಗ……

 ಶಿಕ್ಷಣ ರಂಗದಲ್ಲಿ ಮಕ್ಕಳ ಶ್ರೆಯೋಭಿವೃದ್ಧಿಗಾಗಿ ಅನೇಕ ಸೌಲಭ್ಯಗಳು ಇರುವದನ್ನು ಕಾಣಬಹುದು. ಉಚಿತ ಪಠ್ಯಪುಸ್ತಕ, ಸಮವಸ್ತ್ರ  ಬೈಸಿಕಲ್‌, ಶೋ ಮತ್ತು ಸಾಕ್ಸ, ಅಕ್ಷರ ದಾಸೋಹ, ಕ್ಷೀರಭಾಗ್ಯ, ಚೆಕ್ಕಿ, ಬಾಳೆಹಣ್ಣು, ಮೊಟ್ಟೆ,ವಿದ್ಯಾರ್ಥಿ ವೇತನಗಳು  ಇತ್ಯಾದಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಾವಿರಾರು ಸೌಲಭ್ಯಗಳನ್ನು ಕಾಣಬಹುದು.  ಆದರೆ ಈ ಎಲ್ಲ ಸೌಲಭ್ಯಗಳ  ಆಚೆ ಕ್ಷಣ ಆಲೋಚನೆ ಮಾಡಬೇಕಿದೆ. ಸೌಲಭ್ಯ ಗಳ ಬೆನ್ನು ಹತ್ತಿ ಮಾನವೀಯತೆಯನ್ಮು ಮರೆಯುತ್ತಿದೆವೆಯೇ ಎಂಬುದನ್ನು ಕ್ಷಣ ಆಲೋಚಿಸಬೇಕಿದೆ. ಸೌಲಭ್ಯಗಳು ಮಗುವಿನ ಶ್ರೇಯೋಭಿವೃದ್ಧಿಗೆ ಮಾತ್ರ ಇವೆ ಅದೇ ಸೌಲಭ್ಯಕ್ಕಾಗಿ ಮಗು ಇಲ್ಲ. ಈ ಮಾತನ್ನು ಇಲ್ಲಿ ಏಕೆ ಪ್ರಸ್ತಾಪಿಸಿದೆ ಎಂದರೆ ಇತ್ತೀಚಿನ ಒಂದು ಘಟನೆ ನನ್ನನ್ನು ಈ ನಿಟ್ಟಿನಲ್ಲಿ ಆಲೋಚಿಸುವಂತೆ, ವಿಮರ್ಶಿಸುವಂತೆ ಮಾಡಿದೆ.
9 ನೇಯ ತರಗತಿಯಲ್ಲಿಯ ಒಂದು ವಿಕಲಚೇತನ ಮಗು. ಆತನ ಕಾಲುಗಳು ಸ್ವಲ್ಪ ಸೊಟ್ಟಗಾಗಿದ್ದು, ಆತ ನಡೆಯಲು ಸ್ವಲ್ಪ ಕಷ್ಟ ಎದುರಿಸುತ್ತಿದ್ದ. ಎಲ್ಲ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿರುವಾಗ ಆಶೆಗಳ ಕಣ್ಣುಗಳನ್ನರಳಿಸಿ ಆ ಮಕ್ಕಳನ್ನು ನೋಡುತ್ತಾ ಶಾಲಾ ವರಾಂಡದಲ್ಲಿ ಕುಳಿತುಕೊಳ್ಳುತ್ತಿದ್ದ. ಅದನ್ನು ಸದಾ ಗಮನಿಸಿದ ನಾನು ಈ ಮಗು ಸಹ ಎಲ್ಲ ಮಕ್ಕಳಂತೆ ಆಟವಾಡುತ್ತಿದ್ದರೆ ಎಷ್ಟು ಚೆಂದ ಅಲ್ವಾ ಅನಿಸುತ್ತಿತ್ತು. ಹೀಗೆ ಐದಾರು ತಿಂಗಳು ಕಳೆದವು ಅಷ್ಟರಲ್ಲಿ ನಮ್ಮ ಶಾಲೆಗೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ವೈದೈರು ಬಂದರು. ಎಲ್ಲರನ್ನೂ ತಪಾಸಣೆ ಮಾಡಿ ಸಲಹೆ ಸೂಚನೆ ನೀಡುತ್ತಿದ್ದರು. ದೃಷ್ಟಿ ದೋಷ ಇದ್ದವರಿಗೆ  ತಪಾಸಣೆ ಮಾಡಿ ಉಚಿತ ಚಸ್ಮಾ ಸಹ ನೀಡಿದರು. ಆಗ ನಾನು ವೈದ್ಯರ ಬಳಿ ಹೋಗಿ ಈ ಮಗುವನ್ನು ತೋರಿಸಿ, ಈತನ ಕಾಲುಗಳನ್ನು ಸರಿಪಡಿಸಬಹುದೇ ಎಂದು ಕೇಳಿದೆ. ಅದಕ್ಕೆ ಅವರು ತಪಾಸಣೆ ಮಾಡಿ ನೋಡುವಾ ಎಂದರು. ನೋಡಿ, ದಯಮಾಡಿ ಆತನಿಗೆ ಸಹಾಯ ಮಾಡಿ. ಆ ಮಗು ಪ್ರತಿದಿನ ಎಲ್ಲ ಮಕ್ಕಳು ಮೈದಾನದಲ್ಲಿ ಆಡುವದನ್ನು ನೋಡುತ್ತಿರುವಾಗ ಆ ಮಗು ಸಹ ಇತರರಂತೆ ಆಡುತ್ತಿದ್ದರೆ ಎಷ್ಟು ಚೆನ್ನ ಅನಿಸುತ್ತದೆ. ಆತನ ಬಾಲ್ಯವನ್ನು ಸವಿಯಲು ನಾವೆಲ್ಲ ಹೇಗಾದರೂ ಮಾಡಿ ಸಹಾಯ ಮಾಡಬೇಕು.  ಇನ್ನು ಆತ ಅತ್ಯಂತ ಬಡ ಕುಟುಂಬದಲ್ಲಿಯ ಮಗು ಆತನಿಗೆ ಹಣಕಾಸಿನ ಬಗ್ಗೆ ಸಹ ತೊಂದರೆ ಆದ್ದರಿಂದ ವೈದ್ಯಕೀಯ ಖರ್ಚು ಸಹ ಭರಿಸಲಾಗುವದಿಲ್ಲ. ಏನಾದರೂ ಉಚಿತವಾಗಿ ಮಾಡುವಂತಿದ್ದರೆ ಸಹಾಯವಾಗಬಹುದು ಎಂದೆನು. ಆಗ ಎಲ್ಲ ಪರೀಕ್ಷಿಸಿ ಮೇಲಾಧಿಕಾರಿಗಳ ಗಮನಕ್ಕೆ ಹಾಗೂ ಇತರ ಉನ್ನತ ವೈದ್ಯರ ಗಮನಕ್ಕೆ ತರುತ್ತೇನೆ ಎಂದು ಹೇಳಿ ಹೋರಟರು.
ಎರಡು ಮೂರು ದಿನಗಳಲ್ಲಿ ಆ ವೈದ್ಯರ ಪೋನ ರಿಂಗಾಯಿತು. ಕುತೂಹಲದಿಂದ ಪೋನ್‌ ಕೈಗೆತ್ತಿಗೊಂಡೆ. ಆಗ ಅತ್ತ ಕಡೆಯಿಂದ ವೈದ್ಯರು ಮಾತುಗಳು,” ಮೇಡಂ ತಾವು ಹೇಳಿದಂತೆ ಆ ಮಗುವಿಗೆ ಒಂದು ಚಿಕ್ಕ ಆಪರೇಶನ್‌ ಮಾಡಿ ಆತನ ಕಾಲನ್ನು ಸಂಪೂರ್ಣ ಸರಿ ಮಾಡಬಹುದು ಅಷ್ಟೇ ಅಲ್ಲ ಸಂಪೂರ್ಣ ಉಚಿತವಾಗಿ ನಮ್ಮ ಸರಕಾರಿ ಆಸ್ಪತ್ರೆಯಲ್ಲಿಯೇ ಮಾಡಬಹುದು. ಆ ಬಗ್ಗೆ ನಮ್ಮ ಮೇಲಾಧಿಕಾರಿಗಳು ಹಾಗೂ ಸಿನೀಯರ್‌ ಡಾಕ್ಟರ್‌ ಸಹ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ತಾವು ಆ ಮಗು ಈಗಾಗಲೇ ಆಸ್ಪತ್ರೆಗೆ ತೋರಿಸಿದ ಚೀಟಿ ಹಾಗೂ ದಾಖಲೆಗಳನ್ನು  ಕೊಟ್ಟು ತಂದೆಯೊಂದಿಗೆ  ನಮ್ಮ ಆಸ್ಪತ್ರೆಗೆ ಕಳಿಸಿ ಎಂದರು. ಆಗ ಅತ್ಯಂತ ಸಂತೋಷದಿಂದ ಆ ಮಗುವನ್ನು ತರಗತಿಯಿಂದ ಕರೆಯಿಸಿ ವಿಷಯ ತಿಳಿಸಿದೆ ಮಗು ಸಹ ಸಂತೋಷಪಟ್ಟಿತು ಹಾಗೂ ತಂದೆಗೆ ಎಲ್ಲವನ್ನೂ ತಿಳಿಸುವದಾಗಿ ಹೇಳಿತು. ತದನಂತರ ಎರಡು ಮೂರು ದಿನಗಳಾದರೂ ಆ ಮಗುವಿನ ತಂದೆ ಅಥವಾ ತಾಯಿ ಶಾಲೆಯ ಕಡೆಗೆ ಸುಳಿಯಲಿಲ್ಲ. ಅತ್ತ ವೈದ್ಯರಿಂದ ಮೇಲಿಂದ ಮೇಲೆ ಕರೆಗಳು. ಏನಾಯ್ತು ಮೇಡಂ ಆ ಪಾಲಕರು ಇನ್ನೂವರೆಗೆ ಬಂದು ಬೇಟಿಯಾಗಿಲ್ಲ. ಏನು ಎಂಬುದನ್ನು ತಿಳಿಸಿ ಎಂದರು. ಆಗ ತಂದೆಗೆ ಪೋನ್‌ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಏನು ಎಂಬುದು ಅರ್ಥವಾಗ್ಲಿಲ್ಲ. ಆಗ ಮಗುವನ್ನು ಕರೆದು ಕೇಳಿದೆ, ಆಗ ಮಗು ಬೇಡ ಬಿಡಿ ಮೇಡಂ ಎಂದಿತು. ಏಕೆ ಎಂದು ಕೇಳಿದಾಗ ಸುಮ್ಮನೇ ನೆಲ ನೋಡುತ್ತಾ ಬೇಜಾರದಿಂದ ನಿಂತಿತು.
ಆಗ ನಾನು ನೇರವಾಗಿ ಮಗುವಿನ ಮನೆಗೆ ಹೋದೆನು ಆತನ ತಂದೆಯೊಂದಿಗೆ ಮಾತನಾಡಿ, ನಿಮ್ಮ ಮಗು ಎಲ್ಲರ ಮಗುವಿನಂತೆ ಆಗುತ್ತದೆ. ಅಲ್ಲದೇ ಯಾವುದೇ ಖರ್ಚು ಸಹ ನೀವು ಭರಿಸುವ ಅಗತ್ಯವಿಲ್ಲ, ಎಂದು ವೈದ್ಯರು ತಿಳಿಸಿದ್ದಾರೆ. ನೀವು ವೈದ್ಯರ ಕಡೆಗೆ ಹೋಗಿ ಬೇಟಿ ಆಗಿ ಬನ್ನಿ ಎಂದೆನು. ಆಗ ಪಾಲಕರು ಮೇಡಂ ನಾವು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ ಉತ್ತರಿಸುತ್ತೀರಾ ಎಂದರು. ಕೇಳಿ ಎಂದೆ. ನನ್ನ ಮಗ ಶಾಲೆಯನ್ನು ಕಲಿತರೆ ಅವನಿಗೆ ನೌಕರಿ ಸಿಗುವುದು ಖಚಿತವೇ ಎಂದು ಕೇಳಿದರು. ಆಗ ನಾನು ನೌಕರಿ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಉತ್ತಮ ಪ್ರಜೆಯಾಗಿ ಯಾವುದಾದರೂ ಉದ್ಯೋಗ ಮಾಡಿಕೊಂಡು ಬದುಕುವ ಸಾಮರ್ಥ್ಯ ಬರುತ್ತದೆ ಎಂದು ಹೇಳಬಹುದು ಎಂದೆನು. ಆಗ ಮತ್ತೇಕೆ ಮೇಡಂ ಆತನ ಕಾಲನ್ನು ಸರಿ ಮಾಡಿಸಿ ಆತನಿಗೆ ಬರುವ ವಿಕಲಚೇತನ ಮಾಶಾಸನಕ್ಕೆ ಕಡಿತ ಮಾಡುತ್ತೀರಿ. ನಮಗೆ ಆತನ ಕಾಲನ್ನು ಸರಿ ಮಾಡಿಸುವುದು ಬೇಡ. ಅದರಿಂದ ಅವನ ಮಾಶಾಸನ ಕಡಿತವಾಗಬಹುದು. ಈಗ ಪ್ರತಿ ತಿಂಗಳು 1400 ರೂ ಆತನಿಗೆ ಹಣ ಬರುತ್ತೆ ನಮ್ಮ ಮನೆ ಖರ್ಚಿಗೆ ಆಸರೆಯಾಗಿದೆ. ನಮಗೆ ಅಷ್ಟೇ ಸಾಕು. ನಾನು ಡಾಕ್ಡರ್‌ ಹತ್ತಿರ ಹೋಗಲ್ಲ. ಎಂದರು. ಅವರ ಮಾತನ್ನು ಕೇಳಿ ವಿಧಿಯಿಲ್ಲದೇ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ಆ ಮಗು ನನ್ನನ್ನು ಇಣುಕಿ ಇಣುಕಿ ನೋಡುತ್ತಿತ್ತು. ನಾನು ಅಸಾಯಕಳಾಗಿ ಮನೆಗೆ ಮರಳಿದೆ.
ಈ ಘಟನೆ  ನನಗೆ ಆತ್ಯಂತ ಅಂತರಾವಲೋಕನದ ಪ್ರಶ್ನೆಗಳನ್ನು ಮೂಢಿಸಿತು. ಮಗನ ಆರೋಗ್ಯಕ್ಕಿಂತ ಮಾಶಾಸನವೇ ಮುಖ್ಯವಾಯಿತೇ? ಅವರ ಮನೆಯ ಪರಿಸ್ಥಿತಿ ಅವರಿಗೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತೇ?  ಇತರ ಮಕ್ಕಳಂತೆ ತಮ್ಮ ಮಗು ಸಾಮಾನ್ಯನಂತೆ ಇರುವುದು ಬೇಡವಾಯಿತೇ? ಮಗುವಿನ ಆಶೆಯ ಏನಿತ್ತು? ಮಗುವಿಗೆ  ಆಡುವ ಅವಕಾಶ ಕಿತ್ತುಕೊಳ್ಳಲು ದೊಡ್ಡವರೇ ಕಾರಣರಾದರೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಕಾಡತೊಡಗಿದವು ಇದು ಕೇವಲ ಸಾಂದರ್ಭಿಕವಾದ ಒಂದು ಘಟನೆಯನ್ನು ಮಾತ್ರ ನಾನು ಇಲ್ಲಿ ಬಿಚ್ಚಿಟ್ಟಿದ್ದೇನೆ ಇಂತಹ ಅನೇಕ ಪ್ರಶ್ನೆಗಳು ಪ್ರತಿದಿನ ಶಾಲಾ ಶಿಕ್ಷಕರಿಗೆ ಕಾಡುತ್ತವೆ ಆದರೆ ಉತ್ತರ ಮಾತ್ರ ಸಿಗುತ್ತಿಲ್ಲ. ಇದಕ್ಕೆ ಕಾರಣ ಪರಿಸ್ಥಿಯೇ ಅಥವಾ ಅತಿಯಾಸೆಯೇ ಅರ್ಥವಾಗುತ್ತಿಲ್ಲ. ಇಂದಿನ‌ ಮಾಶಾಸನಕ್ಕಾಗಿ ನಾಳೆಯ ಭವಿಷ್ಯಕಿತ್ತುಕೊಳ್ಳುತ್ತಿದ್ದೆವೆಯೇ ಎಂಬ ವಿಷಯ ಮೆಲಕು ಹಾಕುತ್ತಾ ಕುಳಿತೆ. ಬುದ್ಧಿಜೀವಿಗಳಾದ ನಾವು ಇದರ ಬಗ್ಗೆ ಆಲೋಚಿಸಬೇಕಿದೆ ಎನಿಸಿತು. ಮಕ್ಕಳ ಭವಿಷ್ಯಕ್ಕಾಗಿ ಸದಾ ಶ್ರಮಿಸೋಣ ಮಕ್ಕಳನ್ನೇ ನಮ್ಮ ಆಸ್ತಿಯನ್ನಾಗಿ ಮಾಡೋಣ. ಏನಂತೀರಾ…..


ಡಾ ದಾನಮ್ಮ  ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

3 thoughts on “

  1. ನಿಮಗೆ ಸ್ವಲ್ಪ ಶ್ರಮವಾದರೂ ಅಡ್ಡಿಯಿಲ್ಲ, ಮಗುವಿನ ಭವಿಷ್ಯಕ್ಕಾಗಿ ಪಾಲಕರನ್ನು ಒಪ್ಪಿಸಲು ಮತ್ತೆ ಪ್ರಯತ್ನಿಸಿರಿ ಮೇಡಮ್.

  2. ನಿಮ್ಮ ಪ್ರಯತ್ನಕ್ಕೆ ಮತ್ತು ಶ್ರದ್ಧಾಪೂರ್ವಕವಾಗಿ ಮಾಡುವ ನಿಮ್ಮ ಕಾಳಜಿಗೆ ನನ್ನ ಶರಣು ಮೇಡಂ

Leave a Reply

Back To Top