ಗೊಂಬೆಯೇ ಏನು ನಿನ್ನ ಮಹಿಮೆಯೇ?
ನಾಗರೇಖಾ ಗಾಂವಕರ್
ಗೊಂಬೆಯೇ ಏನು ನಿನ್ನ ಮಹಿಮೆಯೇ?
ಆಕೆ ಮುದ್ದು ಮುದ್ದಾದ ಗೊಂಬೆ. ಎಂಥ ಚೆಂದ ಅಂದ. ಅದೆಂತಹ ನುಣುಪು.. ಒನಪು.. ನವಿರು ಹೊಂಬಣ್ಣದ ಮೈಗಂಪು. ಗೊಂಬೆ ಬಂಗಾರದ ಗೊಂಬೆ. ಹೀಗೆ ಹೇಳುವುದು ಸುಂದರವಾದ ಹುಡುಗಿಗೆ ಮಾತ್ರ ಎಂಬುದು ನನಗೆ ಸುಮಾರು ಏಳೆಂಟು ವರ್ಷಗಳಾದಾಗ ಅರಿವಾಗತೊಡಗಿತ್ತು. ಆದರೆ ನನ್ನ ಒಂದೇ ದುಃಖ ನನಗ್ಯಾರೂ ಹಾಗೇ ಕರೆಯುತ್ತಲೇ ಇಲ್ಲವಲ್ಲ ಎಂಬ ಕೊರಗು. ಹತ್ತು ಹಲವು ಬಾರಿ ನನ್ನ ಅಕ್ಕಂದಿರಿಗೆ ಆ ಪದವಿ ಸಿಕ್ಕಾಗಲೆಲ್ಲಾ ನನ್ನ ಹೊಟ್ಟೆಗ್ಯಾರೋ ಚೂರಿಯಿಂದ ಇರಿದಂತೆ, ಕರಳು ಕತ್ತರಿಸಿದಂತೆ, ಸಣ್ಣ ಕಿಚ್ಚು ದೇಹದ ತುಂಬಾ ವ್ಯಾಪಿಸಿ ಹೊತ್ತಿಕೊಂಡಂತೆ.
ಗೊಂಬೆಯಂತಾಗುವುದು ಹೇಗೆ? ನನ್ನ ಮೊರೆ ಕೇಳುವವರ್ಯಾರು? ಗೊಂಬೆಯಂತಹ ನುಣುಪು ಚರ್ಮವನ್ನು ರೇಷ್ಮೆಗೂದಲನ್ನು ಪಡೆಯುವುದು ಹೇಗೆ? ಅದೆಷ್ಟೋ ಬಾರಿ ಈ ವಿಚಾರಗಳು ಮನಸ್ಸನ್ನು ಕದಡಿ, ಮೂರು ಹೊತ್ತು ಅದನ್ನೆ ಯೋಚಿಸುವಂತೆ ಮಾಡಿಬಿಡುತ್ತಿದ್ದವು. ನನ್ನಜ್ಜಿ ಹೇಳುತ್ತಿದ್ದ ರಾಜಕುಮಾರಿಯ ಕಥೆಯಲ್ಲಿ ಬಡ ಹುಡುಗಿಯೊಬ್ಬಳು ದೇವರ ಅನುಗ್ರಹದಿಂದ ಹೊಂಬಣ್ಣದ ಮೈಕಾಂತಿಯನ್ನು, ಚಿನ್ನದ ಕೂದಲನ್ನು ಹೊಂದಿ, ಸುಂದರಿಯಾದದ್ದು, ರಾಜಕುಮಾರನೊಬ್ಬ ಆಕೆಯನ್ನೇ ವರಿಸಿದ್ದು, ಇಂತಹ ಅನೇಕ ಕಥೆಗಳು ಸದಾ ನನ್ನ ತಲೆಯಲ್ಲಿ ಗುಂಯ್ಗುಡುತ್ತಿದ್ದವು.
ಹರೆಯಕ್ಕೆ ಬರುತ್ತಲೇ ಗೊಂಬೆಯಂತಾಗುವ ಇರಾದೆ ಕಡಿಮೆಯಾಗುವ ಬದಲು ಹೆಚ್ಚೇ ಆಯಿತೆನ್ನಿ. ಗೊಂಬೆಯಂತೆ ಕಾಣಬೇಕೆಂಬ ಹಂಬಲ ಹೆಚ್ಚುತ್ತ ನಾ ಪ್ರಾರ್ಥಿಸದ ದೇವರಿಲ್ಲ. ಹರಕೆ ಹೊರದ ಗುಡಿಗಳಿಲ್ಲ. ಪೀಚಲು ದೇಹದ ನಾನು ಬಣ್ಣದಲ್ಲೂ ಗೋದಿ ಗೋದಿ. ಅಮ್ಮನೊಂದಿಗೆ ಊರ ಗುಡಿಗಳಿಗೆ ಹೋದಾಗಲೆಲ್ಲಾ ದೇವರ ಮುಂದೆ ನಿಂತು ಊದುಬತ್ತಿ ಬೆಳಗಿಸುತ್ತಿದ್ದದ್ದು, ನನ್ನ ಮೈ ಬಣ್ಣ ಹುಣ್ಣಿಮೆಯ ಚಂದಿರನಂತೆ ಆಗಲೆಂದು, ‘ಗೊಂಬೆ’ ಎಂದು ಎಲ್ಲರೂ ನನ್ನ ಕರೆಯುವಂತಾಗಲೆಂದೇ ಆಗಿತ್ತು. ಊರದೇವಿ ಮಾತ್ರ ಅಲ್ಲದೇ ನಮ್ಮೂರ ಕಾಯ್ವ ಬೀರದೇವ, ಹಾಗೂ ರಾಕೇಶ್ವರರು ನನ್ನನ್ನು ಗೊಂಬೆಯನ್ನಾಗಿಸುವ ಭರವಸೆ ಕೊಟ್ಟಿದ್ದರು. ಹಾಗಿತ್ತು ನನ್ನ ಹರಕೆಗಳು. ಬೇಡಿದರೆ ದೇವರನ್ನೇ ಬೇಡಬೇಕಂತೆ. ಕೊಟ್ಟರ ಕೊಡತಾನ ಶಿವನೆಲ್ಲ, ಕೊಡವ್ರ ಹೊಟ್ಟಮಾತು ಶಿವಬಲ್ಲ ಎಲ್ಲೋ ಕೇಳಿದ ಕವಿವಾಣಿ ಅದು ಸತ್ಯವೆನಿಸಿತ್ತು.
ಕೊನೆಗೂ ಒಂದು ದಿನ ನಾನು ಗೊಂಬೆಯಂತೆ ಕಂಡಿದ್ದೆ. ಅದ್ಯಾದಾಗ ಅಂತಾ ಗೊತ್ತಾ? ಅದೇ ನನ್ನ ಮದುವೆಯ ದಿನ. ಒಂದೀಡಿ ದಿನ ನಮ್ಮನೆಯಲ್ಲಿಯೇ ಠಿಕಾಣಿ ಹೂಡಿದ ಬ್ಯೂಟಿಷಿಯನ್ ನಮ್ಮ ಹಳ್ಳಿಯ ಮನೆಯಲ್ಲಿ ಅದೆಂಥದ್ದೋ ಖುಷಿಪಟ್ಟಿದ್ದಳು. ತೆಂಗಿನ ತೋಟದ ಮಧ್ಯೆಯ ನಮ್ಮ ಮನೆಯಲ್ಲಿ ಪಟ್ಟಣದ ನಿವಾಸಿಯಾದ ಆಕೆಗೆ ಯಾವುದೋ ರೆಸಾರ್ಟನಲ್ಲಿ ಉಳಿದುಕೊಂಡ ಅನುಭವ ಕೊಟ್ಟಿತ್ತಂತೆ. ಆದರೂ ರಾತ್ರಿಯೆಲ್ಲ ಒಂದೇ ಸಮ ವಿಚಾರಿಸುತ್ತಲೂ ಇದ್ದಳು. ಇಲ್ಲೆಲ್ಲೂ ಆನೆ ಹುಲಿ ರಾತ್ರಿ ಸಮಯದಲ್ಲಿ ಬರುವುದಿಲ್ಲ ಅಲ್ಲವೇ? ನಿಮಗೆ ರಾತ್ರಿ ಇಲ್ಲಿ ಹೆದರಿಕೆ ಆಗಲ್ವೆ? ಅನ್ನುತ್ತ ಅದೂ ಇದೂ ಪ್ರಶ್ನೆ ಕೇಳಿದ್ದಳು. ನಮಗೋ ನಡುರಾತ್ರಿ ಬೇಕಾದರೂ ನೈಸರ್ಗಿಕ ಕ್ರೀಯೆಗಳ ಜರೂರು ಬಂದಾಗಲೆಲ್ಲಾ ಹಳ್ಳಕ್ಕೇ ಹೋಗಿ ಗೊತ್ತು. ಒಂದು ಟಾರ್ಚು ಹಿಡಿದು ಮನೆ ಪಕ್ಕೆಯ ಹಳ್ಳಕ್ಕೆ ಹೊರಟು ಆರಾಂ ಆಗಿ ಕೂತು ಮುಗಿಸಿ ಬರುವವರೆಗೂ ಯಾವ ಅಂಜಿಕೆ ಗಿಂಜಿಕೆ ಕಾಡುತ್ತಿರಲಿಲ್ಲ. ಆದರೆ ದೆವ್ವದ ಹೆಸರೆತ್ತಿದರೆ ಮಾತ್ರ ಯೌವನಕ್ಕೆ ಬಂದ ಮೇಲೂ ಸಣ್ಣದಾಗಿ ಮೈ ರೋಮಗಳು ಹೆದರಿಕೆಯಿಂದ ನಿಮಿರಿನಿಲ್ಲುತ್ತಿದ್ದವು. ಬ್ಯೂಟಿಷಿಯನ್ ಒಂದು ದಿನವನ್ನೂ ಒಂದರ್ಥದಲ್ಲಿ ಭಯದ ನೆರಳಿನ ರೋಮಾಂಚನದಲ್ಲಿಯೇ ಕಳೆದಳು. ಆಕೆ ಬಂದ ದಿನ ಅಂದರೆ ಮದುವೆಯ ಹಿಂದಿನ ದಿನ ಅದೇ ಅರಿಸಿನ ಹಚ್ಚುವ ದಿನ ಅಂತಾರಲ್ಲ.. ಅಂದು ಅಲ್ಪಸ್ವಲ್ಪ ಮೇಕಪ್ ಮಾಡಿದ್ದಳು. ಮುಖದ ಮೇಲಿನ ರೋಮಗಳನ್ನೆಲ್ಲಾ ಅದೆಂಥದ್ದೋ ವ್ಯಾಕ್ಸಿಂಗ್ ಅಂತ ಹೇಳಿ ಕಿತ್ತು ತೆಗೆದಿದ್ದಳು. ನನಗೆ ಆ ದಿನ ನನ್ನ ಮುಖ ನಾರದ ಮುನಿಯ ಮುಖದಂತೆ ಕಾಣುತ್ತಿತ್ತು. ಮಾರನೇ ದಿನವೇ ಮದುವೆ. ಮುಂಜಾನೆ ಚಹ ಕುಡಿದು ಸ್ನಾನ ಮುಗಿಸಿ ಬಂದ ನನ್ನ ಹಿಡಿದು ಕೂತವಳು ನನ್ನ ಮುಖವನ್ನು ಟಿಸ್ಯೂ ಪೇಪರಿಂದ ಚೆನ್ನಾಗಿ ಒರೆಸಿ, ಕೊಳೆ ತೆಗೆದು, ನಂತರ ಬಗೆಬಗೆಯ ಕ್ರೀಮುಗಳನ್ನು ಒಂದಾದ ಮೇಲೊಂದು ಬಳಿದು ಇದ್ದ ಸಣ್ಣಪುಟ್ಟ ಕಲೆಗಳು ಎಲ್ಲೂ ಕಾಣದಂತೆ ಮೇಕಪ್ಪು ಹಾಕಿಬಿಟ್ಟಳು. ಹುಬ್ಬು ಕಣ್ಣುಗಳಿಗೆಲ್ಲಾ ಕಾಜಲ್ ಮಸ್ಕರಾ ಮತ್ತಿಕೊಂಡರೆ ತುಟಿಗೆ ಲಿಪಸ್ಟಿಕ್ ಹಚ್ಚಿ ಹೊಳೆಯುಂತೆ ಕಾಣಲು ಗ್ಲೋಸ್ ಮೆತ್ತಿದ್ದಳು. ನನ್ನ ಗೊಂಬೆಯಂತೆಯೇ ಅಲಂಕರಿಸಿಬಿಟ್ಟಳು. ನಾನು ಮದುವೆಯ ಖುಷಿಗಿಂತ ಈ ಕಲ್ಪನೆಯಲ್ಲಿಯೇ ಹೆಚ್ಚು ಖುಷಿಯಾಗಿದ್ದೆ. ಅನ್ನಿ!. ಕನ್ನಡಿಯಲ್ಲಿ ಮಂಜಿನಷ್ಟು ಬೆಳ್ಳಗೆ ಹೊಳೆವ ನನ್ನ ಮುಖ ನೋಡಿ ನನಗೇ ನಂಬಲಾಗಿರಲಿಲ್ಲ. ಆದರೆ ಬಣ್ಣ ಮೆತ್ತಿದ ಮುಖ ಕಿಲಕಿಲ ಎನ್ನುವ ಸಹಜ ಮುಖದಂತೆ ಆರಾಂ ಎನ್ನಿಸುತ್ತಿರಲಿಲ್ಲ. ಲಿಪಸ್ಟಿಕ್ ಭಾರಕ್ಕೆ ಕೆಂಪಾದ ತುಟಿಗಳ ಮುಚ್ಚಲಾಗುತ್ತಿರಲಿಲ್ಲ. ನಕ್ಕರೂ ನಕ್ಕಂತಾಗುತ್ತಿರಲಿಲ್ಲ. ಆದರೆ ಚಿಕ್ಕಂದಿನ ಕನಸು ಮಾತ್ರ ನನಸಾಗಿತ್ತು. ಏನಕೇನ ಪ್ರಕಾರೇಣ ಸುಂದರ ಗೊಂಬೆ ಉದ್ಭವಃ ಅಂತೂ ದೇವರು ಕೊನೆಗೂ ನನ್ನ ಹರಕೆ ಪೂರೈಸಿದ್ದ.
ನನ್ನ ಗೊಂಬೆ ಪುರಾಣ ಇಷ್ಟಕ್ಕೇ ಮುಗಿಯಲಿಲ್ಲ. ಗೊಂಬೆಯಂತಿಲ್ಲದ ನಾನು ಕಡೇ ಪಕ್ಷ ಒಂದು ಗೊಂಬೆಯನ್ನಾದರೂ ಹೊಂದಿದ್ದೆ ಎಂದರೆ ನೀವು ನಂಬಲೇಬೇಕು. ಊರಲ್ಲಿ ಜಾತ್ರೆ ಹಬ್ಬಗಳೇನಾದರೂ ಇದ್ದಾಗಲೇ ಬರುವ ಗೊಂಬೆಯಂಗಡಿಯೆಂದರೆ ನನಗೆ ಪಂಚಪ್ರಾಣ. ಈಗಲ್ಲ ಒಂದಾನೊಂದು ಕಾಲದಲ್ಲಿ. ಗೊಂಬೆಯಾಡಿಸುವುದೆಂದರೆ ಅದೇ ಹುಮ್ಮಸ್ಸು. ನಮ್ಮ ಪಕ್ಕದ ಮನೆಯ ಮಾಸ್ತರ ರಾಮಣ್ಣನ ಮಗಳ ಬಳಿ ಯಾವಾಗಲೂ ಬಗೆಬಗೆಯ ಗೊಂಬೆಗಳಿರುತ್ತಿದ್ದವು. ಆಕೆಯನ್ನು ಕಾಡಿ ಬೇಡಿ ಇಸಿದುಕೊಂಡು ಆಡುತ್ತಿದ್ದೆ. ಆದರೆ ನನ್ನ ಬಳಿ ಗೊಂಬೆಗಳಿರಲಿಲ್ಲ. ನನ್ನಪ್ಪ ಆಟಿಕೆ ಗೊಂಬೆಗಳಿಗೆ, ಇಲ್ಲ ಸಾಮಾನುಗಳಿಗೆ ಹಣ ಹಾಕಿ ತೆಗೆಸಿಕೊಡುವಷ್ಟು ಶ್ರೀಮಂತನೂ ಆಗಿರಲಿಲ್ಲ. ಅಲ್ಲದೇ ಹಣ ಇದ್ದರೂ ಆಟಕ್ಕೆಲ್ಲ ಉದ್ದಕ್ಕೂ ಬಿದ್ದುಕೊಂಡಿರುವ ಗದ್ದೆ ಬಯಲಿರುವಾಗ ಈ ಗೊಂಬೆ ಹಿಡಿದು ಆಡುವುದು ಏನು ಚೆನ್ನ? ಎನ್ನುವ ಜಾಯಮಾನದವನಾಗಿದ್ದರು. ಆಟಿಕೆಗಳಿಗೆ ಸುಮ್ಮನೇ ಹಣ ಖರ್ಚು ಎಂದು ಲೆಕ್ಕ ಹಾಕುವ ದಿನಮಾನಗಳವು. ಹೆತ್ತವರು ಇದ್ದ ಮೂವರು ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟು ಕೈತೊಳೆದುಕೊಂಡರೆ ಸಾಕು ಈ ಜನ್ಮ ಎಂಬಷ್ಟರ ಮಟ್ಟಿಗೆ ವರದಕ್ಷಿಣೆಯ ಹಾವಳಿಗೆ ಬೇಸತ್ತ ದಿನಗಳಾಗಿದ್ದವು. ಕೆಲವೊಮ್ಮೆ ಮಕ್ಕಳ ಬಯಕೆಯನ್ನು ಇಡೇರಿಸಲಾಗದ ಅಸಹಾಯಕತೆಗೆ ನಿಟ್ಟುಸಿರು ಬಿಡುವ ಅವರನ್ನು ಹೆಚ್ಚು ಸತಾಯಿಸುತ್ತಿರಲಿಲ್ಲ ನಾವು.
ಆದರೂ ಅಂದೊಮ್ಮೆ ನನ್ನ ಅಪ್ಪನ ಜೊತೆ ಸಂತೆಗೆ ಹೋದಾಗ, ಪೇಟೆ ಬೀದಿಯ ಸಾಲು ಸಾಲು ಅಂಗಡಿಗಳು ಬರಿಯ ಬೊಂಬೆಗಳನ್ನು ಮಾರುತ್ತಿದ್ದವು. ನನ್ನ ಹಠಕ್ಕೋ, ಕೈಯಲ್ಲಿ ಆ ದಿನ ಒಂದಿಷ್ಟು ಹಣ ಇದ್ದದ್ದಕ್ಕೋ ಅಪ್ಪ ಪ್ರೀತಿಯಿಂದಲೇ ಒಂದು ಗೊಂಬೆ ಕೊಡಿಸಿದ್ದರು. ಆ ಕಾಲಕ್ಕೆ 25 ರೂ ಕೊಟ್ಟು ಖರೀದಿಸಿದ ಗೊಂಬೆ ಅದಾಗಿತ್ತು. ನನಗೆ ಹೆಣ್ಣು ಗೊಂಬೆಗಳೆಂದರೆ ಇಷ್ಟವಾಗಿತ್ತು. ಯಾಕೆಂದರೆ ಅವುಗಳಿಗೆ ಚಂದದ ಫ್ರಾಕುಗಳು ಇರುತ್ತಿದ್ದವಲ್ಲಾ.? ನುಣೂಪಾದ ಕೂದಲು, ಮಿಟುಕಿಸುವ ಕಣ್ಣು ಎಲ್ಲವೂ ಚೆಂದ. ಆದರೆ ಆ ದಿನ ನನಗೆ ದಕ್ಕಿದ್ದು ಹೆಣ್ಣು ಗೊಂಬೆಯಲ್ಲ. ಬದಲಿಗೆ ಸಣ್ಣ ಪೋರನ ಗೊಂಬೆ. ಅದಕ್ಕೆ ಸಣ್ಣ ಚೊಣ್ಣ ಬಿಟ್ಟರೆ ಮೇಲಂಗಿ ಇರಲಿಲ್ಲ.ಚೊಣ್ಣವನ್ನು ತೆಗೆದು ಹಾಕಿ ಮಾಡಬಹುದಿತ್ತು. ಅದು ಬಾಲ್ಯದಲ್ಲಿ ನನ್ನ ಪ್ರಾಣವಾಗಿತ್ತು. ಥೇಟ್ ತಾಯಿ ತನ್ನ ಮಗುವನ್ನು ಲಾಲಿಸಿದಂತೆ ನಾನದನ್ನು ಲಾಲಿಸುತ್ತಿದ್ದೆ. ನಾನದರ ತಾಯಿಯಾಗಿದ್ದೆ. ಅದಕ್ಕೆ ಹಾಲೂಡಿಸುವುದು, ಮೂತ್ರಮಾಡಿಸುವುದು, ಹುಷಾರಿಲ್ಲದಿದ್ದರೆ ಡಾಕ್ಟರ ಕಡೆಗೆ ಕರೆದೊಯ್ಯುವುದು, ಅದೂ ಅಲ್ಲದೇ ಬಹಿರ್ದೆಸೆಗೆ ಕೊಂಡೊಯ್ದು ಪ್ರಕ್ಷಾಳನ ಮಾಡಿಸುವುದು ಎಲ್ಲವನ್ನೂ ಥೇಟ್ ಅಮ್ಮನಂತೆ ನಟಿಸುತ್ತಿದ್ದೆ. ಅದು ಯಾರೂ ನನ್ನ ಗಮನಿಸುತ್ತಿಲ್ಲ ಎಂದು ಗ್ರಹಿಸಿಕೊಂಡಾಗ ಮಾತ್ರ.
ಒಂದು ದಿನ ಶಾಲೆಗೆ ರಜಾ ದಿನವಾಗಿತ್ತು. ನಾನು ಯಾರೂ ಕಾಣದ ಜಾಗ ಹುಡುಕಿ ಕೂತು ನನ್ನ ಬಾಲಗೊಂಬೆಯನ್ನು ತೋಳಲ್ಲಿ ಒರಗಿಸಿಕೊಂಡು ಅಮ್ಮನಾಗಿ ಹಾಲುಣಿಸುತ್ತಾ ಲಾಲಿ ಹಾಡುತ್ತಿದೆ. ನನ್ನಣ್ಣ ಅಲ್ಲಿಗೆ ಬಂದಿರುವುದ ಗಮನಿಸದಷ್ಟು ನಾನು ತಲ್ಲೀನೆ. ಅಮ್ಮನಲ್ಲವೇ? ಮಕ್ಕಳೇ ಆಕೆಯ ಬದುಕಲ್ಲವೇ? ನನ್ನ ಗೊಂಬೆ ಬಾಲ ನನ್ನನ್ನೇ ನೋಡುತ್ತಿರುವಂತೆ, ನಗುತ್ತಿರುವಂತೆ ನನಗನ್ನಿಸಿತ್ತು. ನನ್ನ ಮಳ್ಳಾಟವನ್ನು ಕಂಡ ನನ್ನಣ್ಣ ನಗು ತಡೆಯದೇ ಗಹಗಹಿಸಿ ನಗಲಾರಂಭಿಸಿದ. ಆ ಸದ್ದಿಗೆ ಮನೆಮಂದಿಯೆಲ್ಲಾ ಅಲ್ಲಿ ಜಮಾಯಿಸಿದ್ದರು. ನಾನಾದರೋ ನಾಚಿಕೆಯಿಂದ ತೋಯ್ದು ತೊಪ್ಪೆಯಾಗಿದ್ದೆ.
ಮಾಸ್ತರ ರಾಮಣ್ಣನ ಮಗಳ ಬಳಿ ಹಲವು ಗೊಂಬೆಗಳಿದ್ದರೆ, ನನ್ನ ಬಳಿ ಇದ್ದದ್ದು ಇದೊಂದೇ ಗೊಂಬೆಯಾಗಿತ್ತು. ನಮ್ಮ ಮನೆಮುಂದಿನ ರಸ್ತೆ ದಾಟಿದರೆ ಸಿಗುವ ಹಾಲಕ್ಕಿ ಕೇರಿಯ ಸುಕ್ರಿ ಕೂಡಾ ನಮ್ಮ ವಾರಗೆಯವಳೇ ಆಗಿದ್ದಳು. ರಾಮಣ್ಣನ ಮಗಳು ಜ್ಯೋತಿ ತನ್ನ ಗೊಂಬೆಗಳನ್ನು ಆಡಲು ತರುವಾಗ ಧಿಮಾಕು ಮಾಡುತ್ತಿದ್ದಳು. ತನ್ನ ಬಳಿ ಮಾತ್ರ ಬಗೆಬಗೆಯ ಗೊಂಬೆ ಇರುವುದು ಆಕೆಗೆ ದೊಡ್ಡಸ್ತಿಕೆಯಾಗಿತ್ತು. ಆದರೆ ಪಾಪ ಸುಕ್ರಿ ಬಡವಳು. ಸಪ್ಪೆ ಮುಖ ಹಾಕಿ ನಮ್ಮ ಬೊಂಬೆಗಳನ್ನೆ ನೋಡುತ್ತ ಇರುತ್ತಿದ್ದಳು. ಆಗಾಗ ನಾನು ನನ್ನ ಬಾಲನನ್ನು ಆಕೆಯ ಕೈಗಿತ್ತರೂ, ಆಕೆ ಎಲ್ಲಾದರೂ ನನ್ನ ಮಗನ ಕರೆದೊಯ್ದರೆ ಎಂಬ ಹೆದರಿಕೆಗೆ ಬೇಗನೇ ಇಸಿದುಕೊಳ್ಳುತ್ತಿದ್ದೆ.
ಒಂದು ಸರ್ತಿ ಊರಿನ ಅಗಸೆಬಾಗಿಲಲ್ಲಿ ಇರುವ ನರಸಿಂಹ ದೇವಸ್ಥಾನದ ಜಾತ್ರೆಗೆ ಹೊರಟಿದ್ದೆವು. ಅದು ಪ್ರತಿ ವರ್ಷ ನಡೆಯುವ ಜಾತ್ರೆ. ದೇವರಿಗೆ ಹಣ್ಣುಕಾಯಿ ಮಾಡಿಸಿ, ಹರಕೆ ಇದ್ದರೆ ತೀರಿಸಿಕೊಂಡು, ದೇವರ ಪ್ರಸಾದ ಉಂಡು ಬರುವ ಕ್ರಮ. ನಂತರ ಬರುವ ಬೆಂಡು ಬತ್ತಾಸು ಅಂಗಡಿ, ಬೊಂಬೆಯಂಗಡಿ, ಬಳೆಯಂಗಡಿಗೆ ಹೆಣ್ಮಕ್ಕಳ ಟೋಳಿ ಸುತ್ತುವರೆಯುತ್ತಿತ್ತು. ಆ ದಿನ ಸುಕ್ರಿ ತನ್ನ ತಂದೆಯ ಕೈಹಿಡಿದು ಜಗ್ಗುತ್ತಿದ್ದಳು. ತನಗೊಂದು ಗೊಂಬೆ ಕೊಡಿಸೆಂದು ಅಂಗಲಾಚುತ್ತಿದ್ದಳು. ಬಡವನಾದ ಆತ ತನ್ನ ಅಂಗಿಯ ಕಿಸೆಯಲ್ಲಿ ಚಿಲ್ಲರೆ ಹುಡುಕುತ್ತಿದ್ದ. ಎಲ್ಲಾ ಒಟ್ಟಾಗಿಸಿದರೂ ಅಂಗಡಿಯಾತ ಹೇಳಿದ ಹದಿಮೂರು ರೂಪಾಯಿಗಳು ಅಲ್ಲಿರಲಿಲ್ಲ. ಮಗಳ ಚಿಕ್ಕ ಆಸೆಯನ್ನು ಪೂರೈಸಲಾಗದ ಹತಾಶೆಗೋ ಏನೋ? ಅವಳಪ್ಪ ಅವಳನ್ನೇ ಮತ್ತೆ ಬೈಯತೊಡಗಿದ. ಮನೀಲಿ ಏಡೆಡು [ಎರಡೆರಡು] ಬೊಂಬ್ಯವು ಬಿದ್ಕಂಡ್ಯೋ! ಜೇಮಂತೇ ಇರ್ವವು. ಅವ್ನೇ ಆಡ್ಸು. ಇದೆಂಥಕೆ? ಅವ್ನಾ ಸಮತ್ನಾಗೇ ನೋಡ್ಕಣುಕೇ ಆಗುದಿಲ್ಲಾ.. ನೀಂಕಡೆ. ಅವ್ರ ಸಂತೀಗೇ ಜಗಳಾಡ್ತೇ ಕುಳ್ತೀ. ಸುಮ್ನೇ ನಡೀ ಮನೀಗೇ ಎನ್ನುತ್ತ ಜಾರಿದ ತನ್ನ ಹಪ್ಪಾದ ಹಳೆ ಮುಂಡು ಎತ್ತಿ ತೊಡೆವರೆಗೂ ಕಟ್ಟಿಕೊಂಡು ಭರಭರ ಮನೆಯ ಕಡೆ ನಡೆಯಲಾರಂಭಿಸಿದ. ಆಕೆ ಮಾತಿಲ್ಲದೇ ತಂದೆಯ ಹಿಂಬಾಲಿಸಿದ್ದಳು. ಆಕೆ ಮ್ಲಾನತೆಯಿಂದ ಕಳೆಗುಂದಿದ್ದಳು. ಜನನಿಬಿಡ ಆ ಜಾತ್ರೆ ಗದ್ದಲದಲ್ಲಿ ಪಿಳಪಿಳ ಕಣ್ಣು ಬಡಿಯುತ್ತಿದ್ದರೂ ಆಕೆಯ ನಿಯಂತ್ರಣ ಮೀರಿ ಕಣ್ಣೀರು ಉಕ್ಕಿತ್ತು. ಆಕೆಯನ್ನು ದೂರದಿಂದಲೇ ಗಮನಿಸುತ್ತಿದ್ದ ನನ್ನ ಕಣ್ಣುಗಳಲ್ಲೂ ಅನಿಯಂತ್ರಿತವಾಗಿ ಜಿನುಗಿದ ಹನಿ. ನಮ್ಮನೆಯ ಪರಿಸ್ಥಿತಿ ಆಕೆ ಮನೆಯ ಸ್ಥಿತಿಗಿಂತ ಕೊಂಚ ಅಷ್ಟೇ ಚೆನ್ನಾಗಿತ್ತು. ಹಾಗಾಗಿ ಆಕೆಯ ಭಾವನೆಗಳು ನನ್ನದೂ ಆಗಿದ್ದವಲ್ಲ. ನಾವು ಗೊಂಬೆ ಆಡಿಸುತ್ತಿದ್ದೆವೋ ಇಲ್ಲ ಗೊಂಬೆಯೇ ನಮ್ಮನ್ನು ಆಡಿಸುತ್ತಿತ್ತೋ? ಮೇಲೆ ಕೂತವನ ಕರಾಮತ್ತೋ?
ಗೊಂಬೆ ಎಂಬ ಗಾರುಡಿಗ ಕಾಡಿದ್ದು ಇದಿಷ್ಟೇ ಅಲ್ಲ. ಇನ್ನೊಂದು ಸ್ವಾರಸ್ಯವಿದೆ ಕೇಳಿ. ಮೂವರು ಹೆಣ್ಣು ಮಕ್ಕಳು ಮೂವರು ಸುಪುತ್ರರ ತಂದೆ ನನ್ನಪ್ಪ. ಇದ್ದ ಹಣದಲ್ಲಿಯೇ ಆಗಾಗ ಅದೂ ಇದೂ ತಿಂಡಿಗಳ ತಂದು ಮಕ್ಕಳಿಗೂ, ಮಕ್ಕಳ ತಾಯಿಗೂ ಖುಷಿಪಡಿಸುವ ಜಾಯಮಾನದವರು. ಹಾಗೇ ತಂದಾಗಲೆಲ್ಲಾ ಆನೆ ಹೊಟ್ಟೆಗೆ ಕಾಸಿನ ಮಜ್ಜಿಗೆ ಅನ್ನೋ ಹಾಗೆ ನಮಗೆ ಕೊಟ್ಟಷ್ಟೂ ಸಾಲುತ್ತಿರಲಿಲ್ಲ. ಇನ್ನೂ ತಿನ್ನುವ ಆಸೆ. ಅದಕ್ಕೆ ಅದೇನೇನೋ ಉಪಾಯಗಳು. ಅಂತಹ ಉಪಾಯದಲ್ಲಿ ಬೆರಕಿ ನನ್ನ ದೊಡ್ಡಕ್ಕ. ಅಪ್ಪ ಅದೊಂದು ದಿನ ಬೆಳಗಾವಿಯಿಂದ ಬರುತ್ತಾ ಹಾಲಿನ ಕುಂದಾ ತಂದಿದ್ದರು. ಆಕೆಗೆ ಕೊಟ್ಟಿದ್ದು ಸಾಲದಾಗಿತ್ತು. ತನ್ನ ಪಾಲಿನದನ್ನು ಗಬಗಬ ತಿಂದು ಮುಗಿಸಿದವಳಿಗೆ ಇನ್ನೂ ತಿನ್ನುವ ಆಸೆ ಹುಟ್ಟಿರಬೇಕು. ಅದೇನೋ ಉಪಾಯ ಹೊಂಚಿದ್ದು, ಮನೆ ಕಿಬಳಿಯಲ್ಲಿ ಬೆಳೆದ ಕೆಸುವಿನ ಗಿಡಗಳ ನಡುವೆ ಅದ್ಯಾವುದೋ ಹಳೆಯ ಸಣ್ಣ ದೇವರ ಗೊಂಬೆ ಇಟ್ಟು, ಕೆಸುದಂಟನ್ನು ಚಿವುಟಿ, ಅದರ ರಸಕ್ಕೆ ಕುಂಕುಮ ಲೇಪಿಸಿ, ಗೊಂಬೆಯ ಮೈಗೆಲ್ಲಾ ಆ ರಸ ಬೀಳುವಂತೆ ಮಾಡಿದ್ದಳು. ನಾನೋ ಪೆದ್ದ ಶಿಖಾಮಣಿ. ಕೊಟ್ಟಿದ್ದನ್ನು ಬೇಗ ತಿನ್ನದೇ ಹಾಗೇ ಇಷ್ಟಿಷ್ಟೇ ನೆಕ್ಕುತ್ತಾ, ನಂಜುತ್ತಾ, ತಿನ್ನುತ್ತಿದ್ದೆ. ಆಕೆ ಲಗುಬಗೆಯಿಂದ ಬಂದು ಕೆಸುವಿನ ಬುಡದಲ್ಲಿ ದೇವರ ಗೊಂಬೆ ಮೂಡಿದೆಯೆಂದೂ, ರಕ್ತ ಕಣ್ಣೀರು ಬರುತ್ತಿದೆಯೆಂದೂ, ಹೆದರಿಸಿ ಕರೆದೊಯ್ದಳು. ಅಲ್ಲಿ ದೇವರಿಗೆ ಹಸಿವೆಯಾಗಿದೆಯೆಂದೂ, ನಾನು ತಿನ್ನುತ್ತಿರುವ ಕುಂದಾ ಕೊಟ್ಟರೆ ಅದು ಸರಿಯಾಗುವುದೆಂದೂ ಹೇಳಿದಳು. ಅವಳ ಮಾತು ನಂಬಿ ನಾನು ಆಸೆಯನ್ನು ಕಟ್ಟಿಕೊಂಡು, ದೇವರು ಮುನಿದರೆ ಗತಿಯೇನು? ಎಂದು ಹೆದರಿ ನನ್ನ ಪಾಲಿನ ಕುಂದಾ ಅಲ್ಲಿಟ್ಟು ಬಂದೆ. ಮಾರನೇ ದಿನ ಅದು ಅಲ್ಲಿರಲಿಲ್ಲ. ದೇವರಗೊಂಬೆ ಅದನ್ನು ತಿಂದಿತೆಂದು ಅಕ್ಕ ಹೇಳಿದಳು. ನಾನದನ್ನು ನಂಬಿದೆ.ಹೀಗೆ ಹಲವು ಬಾರಿ ನನ್ನ ಪಾಲಿನ ತಿನಿಸುಗಳು ಗೊಂಬೆಯ ಹೆಸರಿನಲ್ಲಿ ನನ್ನಕ್ಕನ ಉದರ ಸೇರುತ್ತಿದ್ದವು. ಇದರ ರಹಸ್ಯ ಬಯಲಾದದ್ದು ಅದೇಷ್ಟೋ ವರ್ಷಗಳಾದ ಮೇಲೆಯೇ.
ಗೊಂಬೆಯೇ ನಿನ್ನ ಮಹಿಮೆ ಅಪಾರ. ಎನಿಸಿದ್ದು ಸುಳ್ಳಲ್ಲ.
ಆದರೂ ನನಗೆ ಈಗಲೂ ಗೊಂಬೆ ಎಂದರೆ ಇಷ್ಟ. ಗೊಂಬೆ ಹಾಗೇ ಕಾಣಬೇಕೆಂಬ ಹಂಬಲ ಇನ್ನೂ ಬಿಟ್ಟಿಲ್ಲ. ಯಾರಾದರೂ ಈ ಧಡೂತಿ ದೇಹವನ್ನು ಗೊಂಬೆಯಂತೆ ಎತ್ತಿ ಲಾಲಿಸಬಾರದೇ? ಪಾಲಿಸಬಾರದೇ? ಎನಿಸುತ್ತದೆ. ಈಗ ನಾನು ಥೇಟ್ ಗೊಂಬೆಯಂತಾಗಿದ್ದೇನೆ! ಹೊಲ ಇಲ್ಲ ಗದ್ದೆ ಬದುವಿಗೆ ನಿಲ್ಲಿಸುವ ಬೆದರುಗೊಂಬೆ. ಗೊಂಬೆಯಾಗುವುದು ಕಷ್ಟದ ಕೆಲಸವಲ್ಲ! ಎಂಬುದು ಈಗ ಅರಿವಾಗಿದೆ.
ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೇ ರಾಜಕುಮಾರಿ!!!.
**********
ರೇಖಾಜೀ ಬೊಂಬೆ ಕತೆ ಮತ್ತು
ನಿಮ್ಮ ನಿರೂಪಣ ಶೈಲಿ ಫೈನ್…
ಅಭಿನಂದನೆಗಳು..
-ಎನ್ಟಿ
ಧನ್ಯವಾದ. ಖುಷಿಯಾಯ್ತು
ಎಲ್ಲಾ ಹೆಣ್ಣುಮಕ್ಕಳ ಬಾಲ್ಯದ ನವಿರು ಭಾವನೆಗಳು ಗೊಂಬೆಯಲ್ಲಿ ಅಡಗಿರುತ್ತವೆ ಎಂಬುದು ಖಂಡಿತ ನಿಜ ; ಲಲಿತ ಪ್ರಭಂದ ಅತ್ಯಂತ ಆಹ್ಲಾದಕರವಾಗಿದೆ, ಅಭಿನಂದನೆಗಳು ☺️
ಧನ್ಯವಾದ ಮೇಡಂ .
ಚೆಂದದ ನಿರೂಪಣೆ.
ಧನ್ಯವಾದ ಮೇಡಂ