ಗಝಲ್
ಎ.ಹೇಮಗಂಗಾ
ಸ್ವಾರ್ಥ ಲಾಲಸೆಗಳೇ ತುಂಬಿ ತುಳುಕಾಡುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ
ಅಸಮಾನತೆಯ ಗೋಡೆಗಳು ಮತ್ತೆ ಎದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ
ನೀ ತೋರಿದ ಆದರ್ಶದ ಹಾದಿಯ ಪಾಲಿಸುವವರೆಷ್ಟು ನಮ್ಮ ನಡುವೆ ?
ಭ್ರಷ್ಟಾಚಾರದ ಕಬಂಧಬಾಹುಗಳಲಿ ಜೀವ ನರಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ
ನೀ ಸಾರಿದ ತತ್ವಗಳು ನಿಸ್ಸತ್ವಗೊಂಡು ಮೂಲೆಗುಂಪಾಗಿ ಕಳೆದುಹೋಗಿವೆ
ಜಾತಿ ವೈಷಮ್ಯದಲಿ ನಿಷ್ಪಾಪಿಗಳು ನಲುಗಿದರೂ ಬಾಳು ಸಾಗುತ್ತಲೇ ಇದೆ ಬಾಪೂ
ಕಾಮಪಿಪಾಸುಗಳೆದುರು ನಡುರಾತ್ರಿ ಒಂಟಿ ಹೆಣ್ಣು ನಿರ್ಭಯದಿ ನಡೆವುದೆಂತು ?
ನೂರಾರು ‘ ನಿರ್ಭಯ ‘ರ ಬಲಿಯಾಗುತ್ತಿದ್ದರೂ ಬಾಳು ಸಾಗುತ್ತಲೇ ಇದೆ ಬಾಪೂ
ದರ್ಪ,ದಬ್ಬಾಳಿಕೆಯ ಅಗ್ನಿಕುಂಡಕೆ ಎಂದೋ ಅಹಿಂಸೆಯ ಆಹುತಿಯಾಗಿದೆ
ಹಿಂಸೆ, ಅನೀತಿಯೇ ಆಯುಧವಾದರೂ ಬಾಳು ಸಾಗುತ್ತಲೇ ಇದೆ ಬಾಪೂ
ಸಹಿಷ್ಣುತೆ, ಸೌಹಾರ್ದತೆ ಎಲ್ಲವೂ ಉಳಿದಿವೆ ನಿಘಂಟಿನ ಪುಟಪುಟಗಳಲಿ
ಅಸಹನೆಯೇ ಬೆಂಕಿಯಂತೆ ಆವರಿಸಿದರೂ ಬಾಳು ಸಾಗುತ್ತಲೇ ಇದೆ ಬಾಪೂ
ಅಸುನೀಗಿವೆ ಸತ್ಯ , ನ್ಯಾಯಗಳಿಂದು ಅಮಾನುಷ ಕೈಗಳು ಕೊರಳು ಹಿಸುಕಿರಲು
ರಾಮರಾಜ್ಯದ ಕನಸು ಕನಸಾಗಿಯೇ ಉಳಿದರೂ ಬಾಳು ಸಾಗುತ್ತಲೇ ಇದೆ ಬಾಪೂ
******