ಪ್ರೇಮಾ ಟಿ.ಎಂ.ಆರ್ ಶಿಕ್ಷಕ ಪರಂಪರೆಗೊಂದು ನುಡಿ ನಮನ

ವಿಶೇಷ ಲೇಖನ

ಪ್ರೇಮಾ ಟಿ.ಎಂ.ಆರ್

ಶಿಕ್ಷಕ ಪರಂಪರೆಗೊಂದು ನುಡಿ ನಮನ    

ನನ್ನ ಓದುಗರೇ .. ದೇಶ ಶಿಕ್ಷಕ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಶುಭ ಸಂದರ್ಭದಲ್ಲಿ ನಮ್ಮ ದೇಶ ಕಂಡ ನಮ್ಮ ಶಿಕ್ಷಕರ ಕುರಿತು ಒಂದಷ್ಟು ನಿಮ್ಮೊಡನೆ ಹಂಚಿಕೊಳ್ಳಲಿದ್ದೇ ನೆ. ಭಾರತ ಅಖಂಡ ಗುರು ಪರಂಪರೆಯನ್ನು ಹೊಂದಿದ ಒಂದು ಸಂಸ್ಕೃತಿ. ಗುರುಗಳನ್ನು ಅನನ್ಯ ಭಕ್ತಿ ಭಾವಗಳಿಂದ ನಮಿಸುವ ಪೂಜಿಸುವ ಸಂಸ್ಕೃತಿ ನಮ್ಮದು.  ಇಲ್ಲಿ ಅದೆಷ್ಟೋ ಶ್ರೇಷ್ಠ ಗುರುಗಳು ಆಗಿ ಹೋಗಿದ್ದಾರೆ. ಪುರಾಣ ಕಾಲದಲ್ಲಿ ಭಾರತದಲ್ಲಿ ಗುರು ಶಿಷ್ಯ ಪರಂಪರೆ ಪ್ರಸಿದ್ಧವಾಗಿದ್ದ ಕಾಲ.  ಅಂದು ನಮ್ಮಲ್ಲಿ ಗುರುಕುಲ ಪದ್ಧತಿಯಲ್ಲಿ ವಿದ್ಯೆ ಕಲಿಸಲಾಗುತ್ತಿತ್ತು. ವಿದ್ಯಾಕಾಂಕ್ಷಿಗಳು ಗುರುಗಳ ಸಾನಿಧ್ಯದಲ್ಲಿದ್ದುಕೊಂಡು  ಗುರುಗಳ ಸೇವೆ ಮಾಡಿಕೊಂಡು ಅಲ್ಲಿನ ರೀತಿ ನೀತಿ ನಿಯಮಗಳಿಗೆ ಸಂಯ್ಯಮಗಳಿಗೆ ಬದ್ಧರಾಗಿದ್ದುಕೊಂಡು ವಿದ್ಯಾರ್ಜನೆ ಮಾಡುತ್ತಿದ್ದರು. ಇದು ಎಲ್ಲರಿಗೂ ಅನ್ವಯಿಸುತ್ತಿತ್ತು.  ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಎಂದು ಸಮಸ್ತ ವಿಶ್ವವೇ ಭಾರತದ ಗುರು ವ್ಯಾಸರನ್ನು ಒಪ್ಪಿಕೊಂಡಿದ್ದನ್ನು ನಾವು ಕಾಣುತ್ತೆವೆ. ವ್ಯಾಸರು ಸರ್ವ ವಿದ್ಯಾ ಪಾರಂಗತರಾಗಿದ್ದು ಬ್ರಹತ್ ವೇದವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಜನಸಾಮಾನ್ಯರಿಗೆ ವೇದದ ಸಾರಗಳು ನಿಲುಕುವಂತೆ ಮಾಡಿದ ಪರಮ ಗುರು. ಅವರು ಸಮತೆ ಮಮತೆ ಮಾನವೀಯತೆಯಿಂದ ಇಡೀ ವಿಶ್ವದೌನ್ಯತ್ತಕ್ಕೆ ಬೆಳೆದುನಿಂತಿದ್ದನ್ನು ನಾವು ಕಾಣುತ್ತೇವೆ.  ವ್ಯಾಸರಿಂದ ಹಿಡಿದು ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮನ ಗುರುಗಳಾದ ವಸಿಷ್ಠ ವಿಶ್ವಾಮಿತ್ರರು ಶ್ರೀ ಕೃಷ್ಣನ ಗುರು ಸಾಂದೀಪನಿ, ಗುರು ದ್ರೋಣಾಚಾರ್ಯರು, ಗುರು ಪರಶುರಾಮರು ಹೀಗೆ ಅದೆಷ್ಟೋ ಶ್ರೇಷ್ಠ ಗುರುಗಳು ಪುರಾಣದಲ್ಲಿ ಹೆಸರಾಗಿದ್ದಾರೆ.  ಹಾಗೇ ಇತಿಹಾಸದ ಕಾಲಕ್ಕೆ ಬಂದರೆ ಭಾರತದಲ್ಲಿ ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರ ಗುಪ್ತ ಮೌರ್ಯ ನ ಗುರು, ಸಾಧಿಸುವ ಛಲವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲವೆಂದು ಸಾರಿದ ಛಲವಂತ ಚಾಣಕ್ಯನ ಹೆಸರು ಶಾಶ್ವತವಾಗಿ ಚರಿತ್ರೆಯ ಪುಟಗಳಲ್ಲಿ ನಿಂತಿದೆ. ಇಂದಿಗೂ ಮಹಾನ್‌ ತತ್ವ ಜ್ಞಾನಿ  ಕೌಟಿಲ್ಯನ ಅರ್ಥ ಶಾಸ್ತ್ರ ಹಾಗೂ ನೀತಿ ಶಾಸ್ತ್ರವು ನಮ್ಮ ಓದಿಗೆ ಒದಗುತ್ತದೆ.  ಮರಾಠಾ ಸಾಮ್ರಾಜ್ಯದ ಸ್ಥಾಪಕ ವೀರಯೋಧ ಶಿವಾಜಿ ಮಹಾರಾಜರನ್ನು ತಿದ್ದಿ ತೀಡಿದ ಗುರು ಸಮರ್ಥ ರಾಮದಾಸರನ್ನು ಮರೆಯಲಾಗದು. ಇತಿಹಾಸದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡ ಮಹಾನ ಗುರುಗಳು ಇವರು.  ಭಾರತದ ಧೀಮಂತ ಪುತ್ರ ವಿಶ್ವದೆತ್ತರಕ್ಕೇರಿ ನಿಂತ ಯುಗಪುರುಷ ವಿವೇಕಾನಂದರನ್ನು ಕೆತ್ತಿದ ಮಹಾಗುರು ಪರಮ ಹಂಸರ ಹೆಸರು ಚರಿತ್ರೆಯಲ್ಲಿ ಶಾಶ್ವತವಾಗಿ ಕುಂಡರಿಸಿದಂತಿದೆ. “ಏಳು ಎಚ್ಚರಗೊಳ್ಳು ಗುರಿ ಮುಟ್ಟುವ ತನಕ ವಿಶ್ರಮಿಸಬೇಡ” ಎಂದು ಕರೆನೀಡಿದ  ವಿವೇಕಾನಂದರು ಸ್ವತಃ ಶ್ರೇಷ್ಠ ಶಿಕ್ಷಕ ಎಂದು ಜನಮನದಲ್ಲಿ ನೆಸಿದ್ದಾರೆ.  ಸತ್ಯ ಅಹಿಂಸೆಯನ್ನು ಬೋಧಿಸಿದ ಬೌದ್ಧ ಧರ್ಮದ ಸ್ಥಾಪಕ ಭಗವಾನ್ ಬುದ್ಧನನ್ನು ಭಾರತದ ಮೊದಲ ಶಿಕ್ಷಕ ಎಂದು ಇತಿಹಾಸ ನಂಬುತ್ತದೆ. ಮೊದಲು ನಿನ್ನ ಮನಸ್ಸನ್ನು ಗೆಲ್ಲು,  ಆಗ ನಿಜವಾದ ಗೆಲುವು ನಿನ್ನದಾಗುತ್ತದೆ ಎಂದು ಕರೆನೀಡಿದ ಬುದ್ಧನ ಹೆಸರು ಇತಿಹಾಸದಲ್ಲಿ ಸದಾ ಹಸಿರಾಗಿರುತ್ತದೆ.


           ಒಂದು ಕಾಲಕ್ಕೆ ಗುರು ಬ್ರಹ್ಮ ಗುರೋರ್ವಿಷ್ಣು ಗುರುರ್ದೇವೋ ಮಹೇಶ್ವರ ಎಂದು ಗುರುಗಳನ್ನು ತ್ರಿಮೂರ್ತಿಗಳ ಸ್ವರೂಪವೆಂದು ತಿಳಿದು ಪೂಜಿಸಲಾಗುತ್ತಿದ್ದ ಸಂಸ್ಕೃತಿ ನಮ್ಮದು.  ಭಾರತಕ್ಕೆ ಪರಕೀಯರ ಆಗಮನದ ನಂತರ, ದೇಶ ಪರಕೀಯರ ಆಡಳಿತದಿಂದ ನಲುಗುತ್ತಿರುವ ಹೊತ್ತಿಗೆ , ವಿದ್ಯಾರ್ಜನೆ ಎಜುಕೇಶನ್ ಆಗಿ ಶಿಕ್ಷಣ ಅನ್ನಿಸಿಕೊಂಡ ಮೇಲೆ, ಗುರು ಪದಕ್ಕೆ ಪರ್ಯಾಯ ಪದವಾಗಿ ಗುರು ಶಿಕ್ಷಕ ಅನ್ನಿಸಿಕೊಂಡರು. ಹಾಗೆಂದು ಶಿಕ್ಷಕರ ಜವಾಬ್ದಾರಿ ಸಮಾಜದಲ್ಲಿ  ಅವರಿಗಿರುವ ವರ್ಚಸ್ಸು ಅವರ ಮೇಲಿರುವ ಗೌರವಕ್ಕೆ ಎಲ್ಲೂ ಚ್ಯುತಿಯಾಗಿಲ್ಲ. ಇಂದಿಗೂ ಸಂಸ್ಕಾರಯುತ ಸುಸಂಸ್ಕೃತ ಸಮಾಜದ ವಿಷಯ ಬಂದಾಗೆಲ್ಲ ಸಮಾಜ ಶಿಕ್ಷಕರೆಡೆಗೆ ಮುಖ ಮಾಡುತ್ತದೆ . ವಿದ್ಯಾರ್ಥಿಗಳನ್ನು ಸಂಪನ್ನರಾಗಿಸಿ ಅತಿದೊಡ್ಡ ಸಂಪತ್ತಾಗಿಸಿ ಸಮಾಜಕ್ಕೆ ಸಲ್ಲುವಂತೆ ಮಾಡುವ ಗುರುತರ ಹೊಣೆಗಾರಿಕೆ ಶಿಕ್ಷಕರದ್ದು. ಈ ನಿಟ್ಟಿನಲ್ಲಿ ಮಮತೆ ಸಮತೆ  ಸಹನೆ ಸಂಯ್ಯಮ ಮಾನವೀಯತೆ   ಶಿಕ್ಷಕರಲ್ಲಿ ಅತ್ಯವಶ್ಯವಾಗಿ ಇರಬೇಕಾದ ಅಮೂಲ್ಯ ಗುಣಗಳು. ಈ ಮೌಲ್ಯಗಳನ್ನು ತನ್ನಲ್ಲಿ ಅಳವಡಿಸಿಕೊಂಡು ತನ್ನ ವಿದ್ಯಾರ್ಥಿಗಳು ತನ್ನನ್ನು ಅನುಸರಿಸುವಂತೆ ಪ್ರೇರಣೆಯಾಗಬೇಕಾದದ್ದು ಶಿಕ್ಷಕರ ಕರ್ತವ್ಯ..ಶಿಕ್ಷಕನೆಂದರೆ ನಿಂತ ನೀರಲ್ಲ.. ನಿರಂತರ ಹರಿವ ಶುದ್ಧ ನದಿಯಂತೆ ಅವರು.  ಯಾವಲ್ಲಿಂದೆಲ್ಲ ಒಳಿತಾದ ಹೊಸತು ಬರಲಿ , ಅದನ್ನು ತನ್ನ ಅನುಭವದ ತೆಕ್ಕೆಯಲ್ಲಿ ಶೋಧಿಸಿ,  ತನ್ನ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ.  ನಿರಂತರ ಕ್ರಿಯಾಶೀಲತೆಯೇ ಶಿಕ್ಷಕ ವೃತ್ತಿ. ಮಕ್ಕಳೆಂದರೆ ಸದಾ ಚಿಮ್ಮುವ ಚೇತನದ ಚಿಲುಮೆಯಿದ್ದಂತೆ.  ಅವರ ಉತ್ಸಾಹವನ್ನು ಸರಿಯಾದ ದಿಶೆಯಲ್ಲಿ ಹರಿಯುವಂತೆ ಮಾಡುವ ಕಲೆ ಶಿಕ್ಷಕರಿಗಿರಬೇಕು. ಜಗದ ಕತ್ತಲ ಕಣಕೆ ಬೆಳಕಾಗಿ ಬಿರಿಯಬೇಕಾದ ಅನಿವಾರ್ಯತೆ ಶಿಕ್ಷಕರದ್ದು.  ವಿದ್ಯಾರ್ಥಿಗಳನ್ನು ತನ್ನ ಪ್ರಭಾವಕ್ಕೊಳಪಡಿಸುವ ಸಾತ್ವಿಕ ಶಕ್ತಿ ಶಿಕ್ಷಕರು. ಗುರು ಅಥವಾ ಶಿಕ್ಚಕರು ದೈವೀ ಸ್ವರೂಪದ ಮೂರ್ತ ರೂಪ. ಸಾವಿರಾರು ಸೂರ್ಯ ಚಂದ್ರರು ಹುಟ್ಟಿ ಬಂದರೂ ಹೊರ ಜಗತ್ತಿಗೆ ಬೆಳಕು ನೀಡಬಹುದು, ಒಳಗಿನ ಅಂಧಕಾರ ವನ್ನು ಕಳೆಯಲು ನಡೆದಾಡುವ ಶಿಕ್ಷಕರೇ ಬೇಕು. ಮಾನವನನ್ನು ಒಂದು ಸತ್ಪಥ ಅಂದರೆ ಶಕ್ತಿಪಥದತ್ತ ಒಯ್ಯುವವರು ಶಿಕ್ಷಕರು. ಸಂತ ಕಬೀರರ  ಒಂದು ಮಾತನ್ನ ನಾನಿಲ್ಲಿ  ಹೇಳೋಕೆ ಇಷ್ಟಪಡುತ್ತೇನೆ “ದೇವರು ಹಾಗೂ ಗುರು ಇಬ್ಬರೂ ಒಟ್ಟಿಗೆ ನನ್ನೆದುರು ಬಂದರೆ ನಾನು ಮೊದಲಿಗೆ ಗುರುವನ್ನು ವಂದಿಸುತ್ತೇನೆ ಯಾಕೆಂದರೆ ನನಗೆ ದೇವರನ್ನು ಪರಿಚಯಿಸಿದವನು ಗುರು”.  ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ “ನನ್ನೆಲ್ಲ ಶಂಕೆಗಳನ್ನು ದೂರ ಮಾಡುವವನು ಗುರು. ಆದ್ದರಿಂದ ನಾನು ಗುರುವಿಗೆ ಬಾಗುತ್ತೇನೆ”. ಹೌದು ಮಕ್ಕಳ ಶಂಕೆಗಳಿಗೆಲ್ಲ ಉತ್ತರ ಶಿಕ್ಷಕರಲ್ಲಿ ಇರಲೇಬೇಕು.  ಭಾರತದಲ್ಲಿ ಗುರು  ಪರಂಪರೆ ಹೇಗೋ ಶಿಕ್ಷಕ ಪರಂಪರೆ ಕೂಡ ಅಷ್ಟೇ ಶ್ರೀಮಂತವಾಗಿದೆ ಮಹಾನ್ ಗುರುಗಳ, ಶ್ರೇಷ್ಠ ಶಿಕ್ಷಕರ ಮಾತು ಬಂದಾಗೆಲ್ಲ ಇಡೀ ವಿಶ್ವವೇ ಭಾರತದೆಡೆ ಹೊರಳಿ ನೋಡುತ್ತದೆ. ಸಂಸ್ಕೃತ ದಲ್ಲಿ ಒಂದು ಮಾತಿದೆ “ಅಧಿಗತ ತತ್ವಹ ಶಿಷ್ಯತಾಯ ಉದ್ಯತಹ ಸತತಂ”ಎಂದು “ನಿತ್ಯ ನಿರಂತರವಾಗಿ ಶಿಷ್ಯರ ಹಿತವನ್ನು ಬಯಸುವವನು ಗುರು “.ಈ ಮಾತು ಶಿಕ್ಷಕರಿಗೂ ಅನ್ವಯವಾಗುತ್ತದೆ. ಕಾಲ ದೇಶವ ಮೀರಿ ಜಾತಿಪಂಥಗಳ ತೂರಿ ಜಗದೆದೆಯ ಮನೋವ್ಯಾಕುಲಗಳನ್ನು ಕಳೆದು ಜೀವ ಜೀವಗಳ ಭಾವಭಾವಗಳ ಬೆಸೆವ ಅಂತಸ್ಸತ್ವ ಶಿಕ್ಷಕರದು. ಶಿಕ್ಷಕರು ಸದಾ ಅಧ್ಯಯನ ಶೀಲರಾಗಿದ್ದು ನಿತ್ಯ ಹೊಸತನ್ನು ಅರಿತು ಅದನ್ನು ತನ್ನ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಈ ಮಾತುಗಳಿಂದ ಶಿಕ್ಷಕರ ಜವಾಬ್ದಾರಿಯುತವಾದ  ಸ್ಥಾನಮಾನದ ಕಲ್ಪನೆ ನಮಗಾಗುತ್ತದೆ. ವಿವೇಕಾನಂದರು ಒಂದ್ಕಡೆ ಹೇಳ್ತಾರೆ “ಯಾರು ಗುರುವನ್ನು ಪೂಜಿಸುತ್ತಾರೋ, ಯಾರು ಶಿಕ್ಷಕರನ್ನು ಗೌರವಿಸುತ್ತಾರೋ ಅವರು ಜಗತ್ತನ್ನು ಗೆಲ್ಲುತ್ತಾರೆ.” ಜಗತ್ತನ್ನು ಜಯಿಸುವ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುವ ಗುರುತರ ಹೊಣೆ ಶಿಕ್ಷಕರದ್ದು.  ಶಿಕ್ಷಕರೆಂದರೆ ಬರೀ ಶಿಕ್ಷಕರಲ್ಲ. ಅವರ ಬದುಕೆಂದರೆ ನಿತ್ಯ ಸತ್ಯ ಶಿಸ್ತು ನಿಯತ್ತು ನಿಯಮ ಸಂಯ್ಯಮ ಶೃದ್ಧೆ  ನಿಷ್ಠೆ. ತಮ್ಮ ಈ ಗುಣಗಳಿಂದ ಸದಾ ತನ್ನ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಲೇ ಇರುವವನು ಶಿಕ್ಷಕ. ತಾಯಿತಂದೆಯರನ್ನು ಗೋಚರ ರೂಪದ ದೇವರುಗಳೆಂದು ನಂಬಲಾಗಿದೆ. ಮಕ್ಕಳ ಬದುಕಿನಲ್ಲ ಹೆತ್ತವರಿಗೆ ಮೊದಲ ಸ್ಥಾನ..‌ಆದರೆ ಶಿಕ್ಷಕರು ಹೆತ್ತದ್ದಲ್ಲ ಹೊತ್ತಿದ್ದಲ್ಲ ತನ್ನಲ್ಲಿರುವ ಸಮಸ್ತ ಜ್ಞಾನವನ್ನು  ವಿದ್ಯಾರ್ಥಿಗಳಿಗೆ ಎರವ ಶಿಕ್ಷಕರದ್ದು ಬದುಕಿನಲ್ಲಿ ಎಲ್ಲರಿಗಿಂತ ಮಿಗಿಲಾದ ಅತ್ಯುನ್ನತ ಸ್ಥಾನ . ತಾನೆಂಬ ತನ್ನನ್ನು ಬದಿಗಿಟ್ಟು ಸದಾ ತನ್ನ ವಿದ್ಯಾರ್ಥಿಗಳ ಹಿತವನ್ನು ಕಾಯುವ ಶಿಕ್ಷಕರು ನಿಜಕ್ಕೂ ವಿಸ್ಮಯ..ನಿಜವಾದ ಶಿಕ್ಷಕ  ಬದಲಾಗದವನು , ಶಾಂತಿಯುತವಾದ ಚೇತನದ ಪ್ರತಿನಿಧಿಯೂ,  ಕಾಲದೇಶಗಳ ವ್ಯಾಪ್ತಿಯನ್ನು ಮೀರಿ ನಿಲ್ಲುವವನು,  ಉದಾತ್ತನೂ ಆಗಿರುತ್ತಾನೆ. ನಮ್ಮಲ್ಲಿ ಒಂದು ಮಾತಿದೆ “ಅನ್ನ ದಾನಂ ಪರಂ ದಾನಂ‌,  ವಿದ್ಯಾ ದಾನಂ ಮತಪರಂ‌,  ಅನ್ನೇನ ಕ್ಷಣಿಕ ತೃಪ್ತಿ ಯಾವ ಜೀವಂಚ ವಿದ್ಯೆಯಾ. ಜೀವನದಲ್ಲಿ ಸದಾ ಜೊತೆಗಿರುವ  ವಿದ್ಯೆ ಒಂದು ಶ್ರೇಷ್ಠ ದಾನ . ಅದು ಎಷ್ಟು ಹಂಚಿದರೂ ಕ್ಷೀಣಿಸದ ಸಂಪತ್ತು . ಅಂತಹ ಜ್ಞಾನದ ಸಂಪತ್ತನ್ನು ದಾನ ಮಾಡುವ ಹಂಚುತ್ತಲೇ ಇರುವ ಶಿಕ್ಷಕರು ಧನ್ಯರು..  ನಮ್ಮಲ್ಲಿ ತಾಯಿಯನ್ನು ಮೊದಲ ಗುರು ಎಂದು ಮನ್ನಿಸಲಾಗುತ್ತದೆ . ಇದರರ್ಥ ತಾಯಿ ಮಾತೃತ್ವನ್ನೂ ಮೀರಿ ಗುರು ಅಥವಾ ಶಿಕ್ಷಕಿ ಅನ್ನಸಿಕೊಳ್ಳುತ್ತಾಳೆ.  ಅಲ್ಲಿಗೆ ಬದುಕಿಗಿಂತಲು ಹಿರಿದು ಬದುಕುವ ರೀತಿ ಎಂದು ವಿಶ್ವವೇ ಒಪ್ಪಿಕೊಂಡಂತಾಯಿತು.  ಬದುಕು ಕೊಡುವ ಹೆತ್ತವರಿಗಿಂತ ಬದುಕುವ ರೀತಿಯನ್ನು ಕಲಿಸುವ‌ ಶಿಕ್ಷಕರು ತಾಯಿ ತಂದೆಗೂ  ಮೀರಿದವರು . ನಮ್ಮ ಪುರಾಣಗಳಲ್ಲಿ ಯಾವೆಲ್ಲ ಮಹಾ ಪುರುಷರು ನಮ್ಮ ಚರಿತ್ರೆಯಲ್ಲಿ ಮಹಾನ್ ರಾಜರುಗಳು ಮಹಾನ್ ವ್ಯಕ್ತಿಗಳು ಆಗಿ ಹೋಗಿದ್ದಾರೋ .. ಇಂದಿಗೂ ಚರಿತ್ರೆಯ ಪುಟಗಳಲ್ಲಿ  ಯಾರೆಲ್ಲರ ಹೆಸರು ಸುವರ್ಣ ಅಕ್ಷರಗಳಲ್ಲಿ ಬರೆದಿಡಲ್ಪಟ್ಟಿದೆಯೋ  ಅವರೆಲ್ಲರ ಹಿಂದೆ ಅವರ ಗುರುಗಳು ಅವರ ಶಿಕ್ಷಕರು ಇದ್ದಾರೆಂಬುದನ್ನು ಮರೆಯಬಾರದು.


           ಸತತ ನಲ್ವತ್ತು ವರ್ಷಗಳ ಕಾಲ ಶಿಕ್ಷಕರಾಗಿದ್ದು ನಮ್ಮ ದೇಶದ ಉಪಾಧ್ಯಕ್ಷರಾಗಿದ್ದು ತದನಂತರ ರಾಷ್ಟ್ರದ ಮೇರು ಸ್ಥಾನ ವಾದ ರಾಷ್ಟಾಧ್ಯಕ್ಷ ಪದವಿಯಲ್ಲಿದ್ದ ಡಾ ಸರ್ವಂಪಲ್ಲಿ ರಾಧಾಕೃಷ್ಣನ್ ಮಹಾನ್ ತತ್ವ ಜ್ಞಾನಿಯಾಗಿದ್ದರು.  ಅವರು ಶಿಕ್ಷಕ ವೃತ್ತಿಯಲ್ಲಿನ  ಉದಾತ್ತತೆ ಔದಾರ್ಯ ಶಿಕ್ಷಕರ
ತ್ಯಾಗ ಮನೋಭಾವಗಳನ್ನು , ಸಮಾಜಕ್ಕೆ ಅವರು ಸಲ್ಲಿಸುವ ಅನನ್ಯಕೊಡುಗೆಗಳನ್ನು ಅರಿತು  ಸ್ವತಃ ಅನುಭವಿಸಿ ತನ್ನ ಜನ್ಮದಿವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆಂತಲೇ ಅವರ ಜನ್ಮ  ದಿನಾಚರಣೆಯನ್ನು ಶಿಕ್ಷಕ ದಿನಾಚರಣೆಯಾಗಿ ದೇಶದಲ್ಲಿ ಆಚರಿಸಲಾಗುತ್ತದೆ.  ವಿದ್ಯಾರ್ಥಿಗಳನ್ನು ಸ್ವಯಂ ಚಿಂತನೆಗೆ ಹಚ್ಚುವವನು ,  ಅವರು ಸ್ವಯಂ ಚಿಂತಿಸುವಂತೆ  ಪ್ರೇರೇಪಿಸುವವನು ನಿಜವಾದ ಶಿಕ್ಷಕನೆಂದು ಅವರು ನಂಬಿದ್ದರು . ಜ್ಞಾನ ಮತ್ತು ವಿಜ್ಞಾನ ದಿಂದ ಬದುಕು ಸಂತಸದಾಯಕವಾಗಿರುತ್ತದೆ ಎಂದು ಅವರು ಹೇಳುತ್ತಿದ್ದರು.  ಭಾರತ ಕಂಡ ಮಹಾನ್ ಶಿಕ್ಷಕ ಎಂದು ಅವರು ಇಂದಿಗೂ ಗೌರವಿಸಲ್ಪಡುತ್ತಿದ್ದಾರೆ. ಅವರ   ಬದುಕು ಇಂದಿಗೂ ವಿಶ್ವದ ಅದೆಷ್ಟೋ ಶಿಕ್ಷಕರಿಗೆ ಪ್ರೇರಣೆಯನ್ನು ನೀಡುತ್ತಿದೆ.


     ಗುರುಪರಂಪರೆ ಹೇಗೋ ಹಾಗೆಯೇ ಅಖಂಡ ಶ್ರೀಮಂತ ಶಿಕ್ಷಕ ಪರಂಪರೆಯನ್ನು ಕೂಡ ಹೊಂದಿದ ರಾಷ್ಟ್ರ ನಮ್ಮದು. ಅದೆಷ್ಟೋ ಸುಪ್ರಸಿದ್ದ ಶಿಕ್ಷಕರು ಇಲ್ಲಿ ಇದ್ದರು, ಇಂದಿಗೂ ಇದ್ದಾರೆ. ಕೇವಲ ವಿದ್ಯೆಯನ್ನು ಕಲಸುವದಷ್ಟೇ ಅವರ ಕೆಲಸವಲ್ಲ ತಮ್ಮ ವಿಚಾರಗಳಿಂದ ಸದಾಚಾರಗಳಿಂದ ಸಮಾಜದ ಮೇಲೆ ಸತ್ಪ್ರಭಾವವನ್ನು ಬೀರುತ್ತಾರೆ. ಮೊದಲ ಮಹಿಳಾ ಶಿಕ್ಷಕಿ ಎಂದು ಭಾರತದ ಇತಿಹಾಸದ  ಪುಟಗಳಲ್ಲಿ ದಾಖಲಾದ ಸಾವಿತ್ರಿಬಾಯಿ ಪುಲೆ ಒಬ್ಬ ಸುಪ್ರಸಿದ್ಧ ಶಿಕ್ಷಕಿ. ಕೆಳವರ್ಗದ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ತೆರೆದು ಅವರಿಗೆ ಶಿಕ್ಷಣ ನೀಡಿದ ಛಲಗಾತಿ ಇವರು. ಹೆಜ್ಜೆಹೆಜ್ಜೆಗೆ ಸಾಂಪ್ರದಾಯಕ ಮನಸ್ಸುಗಳ ವಿರೋಧ ಕಟ್ಟಿಕೊಂಡೇ ಈ ಮಹಾತಾಯಿ ಮಾಡಿದ ಸಾಧನೆಗೆ ಕೋಟಿ ನಮನಗಳು ಸಲ್ಲಬೇಕು.  ನಮ್ಮರಾಷ್ಟ್ರಗೀತೆಯನ್ನು ಬರೆದ ಸುಪ್ರಸಿದ್ಧ ಕವಿ ಹಾಗೂ ಮಹಾನ್ ರಾಷ್ಟ್ರಭಕ್ತ ರವೀಂದ್ರ ನಾಥ ಠಾಗೋರ್ ಅತ್ಯುತ್ತಮ ಶಿಕ್ಷಕರಾಗಿದ್ದರು . ಸತ್ಯಮೇವ ಜಯತೇ ಎಂಬ ಘೋಷ ವಾಕ್ಯವನ್ನು ಜನರಲ್ಲಿ ಬಿತ್ತಿದ ಪಸಿದ್ಧ ಶಿಕ್ಷಣ ತಜ್ಞ ಮದನ್ ಮೋಹನ ಮಾಲವೀಯ ಅವರು ಅತ್ಯುತ್ತಮ ಶಿಕ್ಷಕರಾಗಿ ಕೂಡ ಹೆಸರಾಗಿದ್ದರು. ನಮ್ಮದೇಶದ ಹೆಮ್ಮೆಯ ರಾಷ್ಟ್ರಾಧ್ಯಕ್ಷರಾಗಿದ್ದ  ಮಿಸೈಲ್ ಮ್ಯಾನ್ ಎಂದು ಪ್ರಸಿದ್ದರಾದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಕೂಡ ಹೆಸರಾಂತ ಶಿಕ್ಷಕರಾಗಿದ್ದರು. ನೀವು ಸೂರ್ಯನಂತೆ ಹೊಳೆಯಬೇಕೆಂದರೆ ಸೂರ್ಯನಂತೆ ಸುಟ್ಟುಕೊಳ್ಳುವದನ್ನು ಕಲಿಯಿರಿ ಎಂದು ಕರೆನೀಡಿದ ಕಲಾಂ ಶಿಕ್ಷಕರಾಗಿ ವಿಜ್ಞಾನಿಯಾಗಿ ಗಳಿಸಿಕೊಂಡ ಪ್ರೀತಿ ಅನನ್ಯ. ಪ್ರಸಿದ್ದ ಶಿಕ್ಷಣ ತಜ್ಞ ಸ್ವಾಮಿ ದಯಾನಂದ ಸರಸ್ವತಿಯವರು ಕೂಡ ಉತ್ತಮ ಶಿಕ್ಷಕರಾಗಿದ್ದರು. ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಇವರು “ಜಗತ್ತಿಗೆ ಒಳಿತನ್ನು ಮಾಡಿ . ಆಗ ಒಳಿತು ನಿಮ್ಮನ್ನು ಅರಸಿಕೊಂಡು ಬರುತ್ತದೆ” ಎಂದು ತನ್ನ  ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಹೀಗೆ ನಮ್ಮ  ಶಿಕ್ಷಕರ ಪರಂಪರೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
          ವಿದ್ಯೆ ಒಂದು ಅತ್ಯಂತ ಬೆಲೆ ಬಾಳುವ ಸಂಪತ್ತು. ಅದನ್ನು ಎಷ್ಟೇ ದಾನ ಮಾಡಿದ್ರೂ ಆ ಜ್ಞಾನ ವೃದ್ದಿಸುತ್ತದೆಯೇ ಹೊರತು ಕ್ಷೀಣಿಸುವದಿಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದು.  ಶಿಕ್ಷಕರು ಕೇವಲ ವಿಷಯ ಜ್ಞಾನವನ್ನು ನೀಡದೇ ಮಕ್ಕಳಲ್ಲಿ ಸಮತೆ ಮಮತೆ ಮಾನವೀಯತೆಯನ್ನು ಎರೆದು ಅವರ ವ್ಯಕ್ತಿತ್ವವನ್ನು ಕಟೆಯುವ ಕಲಾಕಾರರೂ ಕೂಡ ಆಗಿರುತ್ತಾರೆ.    ಶ್ರೇಷ್ಠ ಶಿಕ್ಷಕರು ಜ್ಞಾನದ ಕಣಜವಿದ್ದಂತೆ. ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದು. ಹಿಂದಿಗೂ ಇಂದಿಗೂ ಮುಂದೆಯೂ ಶಿಕ್ಷಕರಿಗೆ ಸಮಾಜದಲ್ಲಿ ಸದಾ ಅತ್ಯುನ್ನತ ಸ್ಥಾನಮಾನ ಇದ್ದೇ ಇದೆ.   ಸುಸಂಸ್ಕೃತ ಎನ್ನುವದಕ್ಕೆ ಸಾಕಾರ ರೂಪವೇ ಶಿಕ್ಷಕ.   ಸುಸಂಸ್ಕೃತ ಸಮಾಜ ಎಂದು ನಾವೇನನ್ನು ಕರೆಯುತ್ತೇವೆಯೋ ಆ ಸಮಾಜದ ರುವಾರಿಯೇ ಶಿಕ್ಷಕರು.  ಶಿಕ್ಷಕರ ಹಾಗೂ ಮಕ್ಕಳ ಬಂಧ ನಿಜಕ್ಕೂ ಒಂದು ಅನನ್ಯ ವಾದಂತಹ ಭಾವದ ಬಂಧ. ಶಿಕ್ಷಕ ವೃತ್ತಿ ಒಂದು ನಿಸ್ವಾರ್ಥ ಹಾಗೂ ಪವಿತ್ರವಾದ ವೃತ್ತಿ. ಶಿಕ್ಷಕರದ್ದು ಮೌಲ್ಯಯುತವಾದ ಬದುಕು. ಅಂದಿನ ಆ ಮಟ್ಟದ ಪವಿತ್ರತೆ ನಿಸ್ವಾರ್ಥತೆ ಇಂದಿನ ಶಿಕ್ಷಕರಲ್ಲಿ ಕಾಣಲಾಗದು ಎಂಬ ಕೂಗು ಇಂದು ಎಲ್ಲೆಡೆ ಕೇಳಿ ಬರುತ್ತಿದೆ. ಹಾಗೆಂದೂ ಸಮಸ್ತ ಶಿಕ್ಷಕ ಸಮೂಹದೆಡೆ ನಾವು ಬೊಟ್ಟು ಮಾಡುವಂತಿಲ್ಲ
ಇತ್ತೀಚೆಗೆ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಹಾಗೂ ತಂತ್ರಜ್ಞಾನದ ಅತಿಯಾದ ಬಳಕೆ ಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಕೊಂಡಿ ಸವಕಲಾಗುತ್ತಿದೆ, ಇವರಿಬ್ಬರ ನಡುವಿನ ಬಂಧದ ಬೆಸುಗೆ ಜಾಳು ಜಾಳಾಗುತ್ತಿದೆ,  ವಿದ್ಯಾರ್ಥಿಗಳು ಭಾವರಹಿತರು ಹಾಗೂ ಅವಿದೇಯರೂ ಆಗುತ್ತಿದ್ದಾರೆ, ಇದರಿಂದ ಶಿಕ್ಷಕರು ಕಲಿಸುವಿಕೆಯಲ್ಲಿ  ಮೊದಲಿನಷ್ಟು ತಾದಾತ್ಮ್ಯ ರಾಗುತ್ತಿಲ್ಲ ಎಂಬ ಮಾತು ಕೂಡ ಇತ್ತೀಚೆಗೆ ಪದೇಪದೇ ಕೇಳಿ ಬರುತ್ತಿದೆ. ಹೀಗಾದಲ್ಲಿ ಸಮಾಜದ ಬೆಳವಣಿಗೆಗೆ ಇದು ಮಾರಕ.  ಅದೇನೆ ಇರಲಿ ಕೊನೆಯದಾಗಿ ಹೇಳುವದೇನೆಂದರೆ ಶಿಕ್ಷಕರೆಂಬ ಗುರುವೆಂದರೆ ಬರೀ ಗುರುವಲ್ಲಯ್ಯ.. ಗುರುವೆಂದರೆ ಸತ್ಯ ಜ್ಞಾನ ನಿಯಮ ನಿಷ್ಠೆ ಬೆಳಕು ನಿಸ್ವಾರ್ಥ ತ್ಯಾಗ ಮಮತೆ ವಾತ್ಸಲ್ಯ ಸಂಸ್ಕೃತಿ ಸಂಸ್ಕಾರ ತುಂಬಿದ ಮಹಾ ಸಾಗರವಯ್ಯಾ.. ಎನ್ನುತ್ತ… ಇಂದಿಗೂ ಎಲೆಯ ಮರೆಯ ಕಾಯಿಯಮತೆ ಅದೆಷ್ಟೋ ಶ್ರೇಷ್ಠ ಶಿಕ್ಷಕರು ಮೋಂಬತ್ತಿಯಂತೆ ತಾವುರಿದು, ಗಂಧದ ಕೊರಡಂತೆ ತಮ್ಮ ತಾವು ತೇದುಕೊಂಡು ಸಮಾಜವನ್ನು ಬೆಳಗುವ ಕಾರ್ಯದಲ್ಲಿ ತತ್ಪರರಾಗಿರುವ ಎಲ್ಲ ಶಿಕ್ಷಕರನ್ನು ನೆನೆದು, ಹಾಗೇ ನಮ್ಮ ನಿಮ್ಮ ಬದುಕಿನಲ್ಲಿ ಬಂದ ಎಲ್ಲ ಶಿಕ್ಷಕರನ್ನು ನೆನೆದು ಶರಣೆನ್ನುತ್ತ ,  ಮತ್ತೊಮ್ಮೆ ಶ್ರೇಷ್ಠ ಶಿಕ್ಷಕರಾದ ಡಾ. ಸರ್ವಂಪಲ್ಲಿ ರಾಧಾಕೃಷ್ಣನ್ ಅವರನ್ನು ನೆಪಿಸಿಕೊಂಡು ಅವರ ದಿವ್ಯಾತ್ಮಕ್ಕೆ ವಂದಿಸುತ್ತ ವಿಶ್ರಮಿಸುತ್ತೇನೆ…


Leave a Reply

Back To Top