ಪ್ರಜ್ವಲಾ ಶೆಣೈ ಗುರುವಿಗೊಂದು ನಮನ

ವಿಶೇಷ ಲೇಖನ

ಪ್ರಜ್ವಲಾ ಶೆಣೈ

ಗುರುವಿಗೊಂದು ನಮನ

ಗುರು ಎಂದೊಡನೆ ಅದೇನೋ ಭಕ್ತಿ ಭಾವ,ಶೃದ್ಧಾ ಭಾವ,ಕೃತಜ್ಞತಾ ಭಾವ ನಮ್ಮಲ್ಲಿ ಮೂಡುತ್ತದೆ. ಮುಗ್ಧ  ಮನಸ್ಸುಗಳನ್ನು ತಿದ್ದಿ ತೀಡಿ ಅದಕ್ಕೆಸುಂದರ ರೂಪ ಕೊಡುವವರು ಗುರುಗಳು.ಪುಟ್ಟ ಮಗುವೊಂದು ಮೊದಲ ಹೆಜ್ಜೆ ಇಡುವಂತೆ ಮೊದಲ ಅಕ್ಷರ ಕಲಿತ ಪ್ರಾಥಮಿಕ ಶಾಲೆಯೂ ನೆನಪಾಗುತ್ತದೆ.ಆಗುಂಬೆಯ ತಪ್ಪಲಲ್ಲಿರುವ ಹಚ್ಚ ಹಸಿರಿನ ಸೊಬಗಿನಿಂದ ಕಂಗೊಳಿಸುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮೇಶ್ವರ ನನ್ನ ಶಾಲೆ ಎಂದು ಹೇಳಲು ಹೆಮ್ಮೆಯಾಗುತ್ತದೆ.ಗಂಡು, ಹೆಣ್ಣು, ಜಾತಿ,ಧರ್ಮದ ಬೇಧ ಭಾವವಿಲ್ಲದೆ ಸ್ವಚ್ಛಂದವಾಗಿ ಹಾರಾಡಿದ ಶಾಲೆಯ ನೆನಪುಗಳು ಮೊನ್ನೆ ಮೊನ್ನೆ ನಡೆದಂತೆ ಭಾಸವಾಗುತ್ತದೆ.ಸದಾ ನಗುಮೊಗದ ಭೋಜ ಮಾಸ್ಟರ್,ಸರಳ ನುಡಿಯ ಮುರಳೀಧರ್ ಮಾಸ್ಟರ್,,ಶಿಸ್ತಿನ ಸಿಪಾಯಿ ಲಕ್ಷ್ಮೀನಾರಾಯಣ್ ಮಾಸ್ಟರ್ ,ಮೃದು ಹೃದಯಿ ಸುಶೀಲಾ ಟೀಚರ್,ಹಸನ್ಮುಖಿ ಚಂಪಕ ಟೀಚರ್, ಸದಾ ಕ್ರಿಯಾಶೀಲ ಮಂಜುನಾಥ್ ಮಾಸ್ಟರ್ ಈಗಲೂ ನೆನಪಾಗುತ್ತಾರೆ.ಎಲ್ಲರೂ ನನ್ನ ಅಚ್ಚು ಮೆಚ್ಚಿನ ಅಧ್ಯಾಪಕರು.ತನ್ನ ಮಕ್ಕಳಂತೆ ಕಾಳಜಿಯ ತೋರುವವರು.
   ಬಾಲ್ಯದ ದಿನಗಳಿಂದ  ಈವರೆಗೂ ಬಹಳಷ್ಟು ಕಾಡುವ ,ಆಗಾಗ ನೆನಪಾಗುವ ಶಿಕ್ಷಕರಲ್ಲಿ ನನ್ನ ನೆಚ್ಚಿನ ಭೋಜ ಮಾಸ್ಟರ್ ಒಬ್ಬರು.ಇವರ ನೆನಪಾದಾಗೆಲ್ಲ ಕಣ್ಣು ನನಗರಿವಿಲ್ಲದೆ ತೇವಗೊಳ್ಳುತ್ತದೆ. ಇವರು ನನ್ನ ನೆಚ್ಚಿನ ಕನ್ನಡ ಅಧ್ಯಾಪಕರು,ಸಾಹಿತ್ಯದ ಅಭಿರುಚಿಯನ್ನು ನನ್ನಲ್ಲಿ ಚಿಗುರಿಸಿದವರು.ಕನ್ನಡವೆಂದರೆ ನನಗೆ ಮೊದಲಿನಿಂದಲೂ ಅಚ್ಚು ಮೆಚ್ಚು.ದಿನದ ಮೊದಲ ಅವಧಿ  ಕನ್ನಡ ಎಂದರೆ ಯಾವಾಗಲೂ ಮುಖ ಅರಳುತ್ತಿತ್ತು.ಅವರ ಕನ್ನಡದ ಪಾಠ ಕೇವಲ ಪಠ್ಯಕ್ಕಷ್ಟೆ ಸೀಮಿತವಾಗಿರದೆ  ಜೀವನಾನುಭವ,ಸಮಾಜದ ನೈಜ ಘಟನೆಗಳನ್ನು ಒಳಗೊಂಡಿರುತ್ತಿತ್ತು.ಪಾಠದ ಕೊನೆಯ ನೀತಿ ಹೇಳುವಾಗಲಂತೂ ನಾನು ಭಾವುಕಳಾಗುತ್ತಿದ್ದೆ. ನಾನು 7ನೇ ತರಗತಿಯಲ್ಲಿ ಇರುವಾಗ ಶಾಲೆಯಲ್ಲಿ ಪ್ರವಾಸ ಏರ್ಪಡಿಸಿದ್ದರು.ಮನೆಯ ಆರ್ಥಿಕ ಸಮಸ್ಯೆಯಿಂದ 100ರೂ ಕೊಡಲಾಗದೆ ನಾನು ಪ್ರವಾಸಕ್ಕೆ ಬರುವುದಿಲ್ಲ ಸರ್ ಎಂದಿದ್ದೆ. ಈ ಮಾತನ್ನು ಹೇಳುವಾಗ ನನಗರಿವಿಲ್ಲದೇ ಕಣ್ಣು ತುಂಬಿ ಬಂದಿತ್ತು.ಅದಾಗಲೇ ಎರಡು ವರ್ಷದಿಂದ ಅಪ್ಪ ಮನೆಯಲ್ಲಿ ಇರಲಿಲ್ಲ.ತನ್ನ ಮಕ್ಕಳನ್ನು ಸಾಕಲು ಅಮ್ಮ ಪಡುತ್ತಿದ್ದ ಸಂಕಷ್ಟವನ್ನು ನೋಡಿಯೇ ಪ್ರವಾಸದ ಆಸೆಯನ್ನು ಕೈ ಬಿಟ್ಟಿದ್ದೆ.ಇದೆಲ್ಲವನ್ನು ಹೇಳದೇ ಹೋದರೂ  ನನ್ನ ಮನದಿಂಗಿತ ಅರಿತ ಶಿಕ್ಷಕರು ತಾನೇ ನೂರು ರೂ  ಕೊಟ್ಟು ಪ್ರವಾಸಕ್ಕೆ ಕರೆದೊಯ್ದಿದ್ದರು.ಪ್ರವಾಸ ಮುಗಿಸಿ ಹಿಂದಿರುಗುವಾಗ ಜೋರಾಗಿ ನಿದ್ದೆ ಬಂದು ಮಾಸ್ಟರ್ ಕಾಲ ಮೇಲೆ ಪುಟ್ಟ ಮಗುವಿನಂತೆ ಮಲಗಿದ್ದೆ. ನಾನು ಬೀಳದಂತೆ ಗಟ್ಟಿಯಾಗಿ ಹಿಡಿದಿದ್ದು ನಿದ್ದೆಗಣ್ಣಲ್ಲಿ ಭಾಸವಾಗುತ್ತಿತ್ತು.ನನ್ನ ತಂದೆಯ ಸ್ನೇಹಿತರು ಎನ್ನುವ ಕಾರಣಕ್ಕೋ ಏನೋ ಬಹಳ ಆಪ್ತರಾಗಿದ್ದರು.ಅಪ್ಪನ ನೆನಪಾಗಿ ಅಂತರಾಳ ಅಳುತ್ತಿರುವುದು ಅವರಿಗೆ ಅರಿವಾಗುತ್ತಿತ್ತೋ ಏನೋ ಮಮತೆಯಿಂದ  ತಲೆ ನೇವರಿಸುತ್ತಿದ್ದರು. ಅದೆಷ್ಟೋ ಬಾರಿ ನನ್ನ ಕಷ್ಟದ ದಿನಗಳಲ್ಲಿ  ನನಗೆ ಸಹಾಯಹಸ್ತ ಚಾಚಿ ಬದುಕುವ ಭರವಸೆಯನ್ನು ತುಂಬಿದ್ದರು.7ನೇ  ತರಗತಿಯ ಪಬ್ಲಿಕ್ ಪರೀಕ್ಷೆಯ ಸಂದರ್ಭದಲ್ಲಿ ವಿಶಿಷ್ಟ  ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 500  ರೂ ನಗದು ಹಾಗೂ ಕೆಲವು ಉಡುಗೊರೆಗಳನ್ನು  ನೀಡಿರುವುದು ಇವರ ಉದಾರ ಮನೋಭಾವಕ್ಕೆ ಮತ್ತೊಂದು ಸಾಕ್ಷಿ.7ನೇ ತರಗತಿ ಮುಗಿದು ಹೈಸ್ಕೂಲ್ ಸೇರಿದರೂ ಇವರ ನೆನಪು ಆಗಾಗ  ಕಾಡುತ್ತಿತ್ತು. ಸಮಯ ಸಿಕ್ಕಾಗೆಲ್ಲ  ಇವರನ್ನು ನೋಡುವ ಸಲುವಾಗಿ ಶಾಲೆಗೆ ಹೋಗಿ ಇವರನ್ನು ಭೇಟಿ ಯಾಗುತ್ತಿದ್ದೆ.  ಇವರೊಡನೆ ಮಾತಾಡಿ ದಾಗೆಲ್ಲ ಬಹಳ ಭಾವುಕಳಾಗುತ್ತಿದ್ದೆ.ಪಿ .ಯು.ಸಿ ಮುಗಿಸಿ D.Ed ಸೇರುವಾಗಲೂ ಭೇಟಿಯಾಗಿ ಇವರ ಆಶೀರ್ವಾದ ಪಡೆದಿದ್ದೆ.ಉತ್ತಮ ಶಿಕ್ಷಕಿಯಾಗು  ಎಂದು ಮನದುಂಬಿ ಹರಸಿದ್ದರು.ಮುಂದೆ ಶಿಕ್ಷಕ ತರಬೇತಿ ಮುಗಿದು ಮತ್ತೆ ಭೇಟಿಯಾಗಬೇಕು ಎನ್ನುವಷ್ಟರಲ್ಲಿ ಅದ್ಯಾವ ಕೆಟ್ಟ ದೃಷ್ಟಿ ಬಿದ್ದಿತೋ ಏನೋ ?ಅದೊಂದು ದಿನ ಯಾರಿಗೂ ಹೇಳದೆ ಕಾಲನ ಕರೆಗೆ ಓಗೊಟ್ಟು ನಮ್ಮಿಂದ ದೂರವಾದರು.ಇವರು ನಮ್ಮಿಂದ  ದೂರವಾಗಿ 15 ವರ್ಷ ಸಂದರೂ ಇಂದಿಗೂ ನನ್ನ ಹೃದಯದಲ್ಲಿ ಎಂದೂ ಮರೆಯದ ನೆನಪಾಗಿ ನೆಲೆಸಿದ್ದಾರೆ. ಇವರ  ನೇರನುಡಿ,ಸ್ವಾಭಿಮಾನ,ಧೈರ್ಯ,ವಿದ್ಯಾರ್ಥಿಗಳ ಬಗ್ಗೆ ಇವರಿಗಿರುವ ಕಾಳಜಿ ನನಗೆ ಎಂದೆಂದಿಗೂ ಸ್ಫೂರ್ತಿ. ದೇಹ ಅಳಿದರೂ ಹೆಸರು ಶಾಶ್ವತವಾಗಿ ನೆಲೆಸುವಂತಹ ಇಂತಹ ಶಿಕ್ಷಕರು ಸಮಾಜಕ್ಕೆ ಮಾದರಿ.ಅಲ್ಲವೇ? ನೀವೇನಂತೀರಿ?

————————————

ಪ್ರಜ್ವಲಾ ಶೆಣೈ

One thought on “ಪ್ರಜ್ವಲಾ ಶೆಣೈ ಗುರುವಿಗೊಂದು ನಮನ

Leave a Reply

Back To Top