ನಿಜವಾದ ಶಿಕ್ಷಣ, ಲೇಖನ ಗಿರಿಜಾ ಇಟಗಿ

ಲೇಖನ

ಗಿರಿಜಾ ಇಟಗಿ

ನಿಜವಾದ ಶಿಕ್ಷಣ

 ಶಿಕ್ಷಕ ಎಂದರೆ ಮಕ್ಕಳ ಮನಸನ್ನು ತಿದ್ದುವ,ಬುದ್ಧಿಯ ಬೀಜ ಬಿತ್ತುವ, ದುರ್ಗುಣ ಕಳೆಯುವ, ಬಾಳಿಗೆ ಬೆಳಕನ್ನು ಬೀರುವ,ಜ್ಞಾನದ ಜ್ಯೋತಿ ಬೆಳಗುವ,ನೀತಿಯ ಮಾತು ಹೇಳುವ,ಶಿಸ್ತನ್ನು ಕಲಿಸುವ,,ಪ್ರೀತಿ ತೋರುವ ವ್ಯಕ್ತಿಯೇ ಶಿಕ್ಷಕ

ಇಂತಹ ಗುರುತರವಾದ ಜವಾಬ್ದಾರಿ ಶಿಕ್ಷಕನ ಮೇಲಿದೆ.
ಈ ಹೊರೆಯನ್ನು ಹೊತ್ತ ಶಿಕ್ಷಕನಿಂದಲೇ ದೇಶದ ಭವಿಷ್ಯ ನಿಂತಿದೆ.
 ಇದನ್ನು ಅರಿತ ಡಾ|| ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಹೇಳಿದರು.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರುವನ್ನು ದೇವರ ಸಮಾನವೆಂದು ಗೌರವಿಸುತ್ತಾ ಬಂದಿದ್ದಾರೆ.
 ಬ್ರಹ್ಮ,ವಿಷ್ಣು,ಮಹೇಶ್ವರನಿಗೆ ಸಮಾನದ ಗುರುವಿಗೆ ನಮಿಸುವ ವಿಷಯ ಎಲ್ಲರಿಗೂ ತಿಳಿದಿರುವಂತಹುದೆ.

ಹರ ಮುನಿದರೆ ಗುರು ಕಾಯುವ ಆದರೆ ಗುರು ಮುನಿದರೆ ಹರನು ಕಾಯಲಾರ ಎನ್ನುವ ಹೇಳಿಕೆಯು ಕೂಡಾ ಅಷ್ಟೆ ಸತ್ಯವಾದದು.

ಹೆಲೆನ್ ಕೆಲರ್ ಬಹು ಅಂಗಾಂಗ ವೈಫಲ್ಯತೆಯನ್ನು ಹೊಂದಿದವಳು. ಅದೇ ರೀತಿ ಪಂಡಿತ ಪುಟ್ಟರಾಜ ಗವಾಯಿ   ಅಂಧರಾಗಿದ್ದರು.
ಇವರನ್ನೂ ಮಹಾನ್ ಸಾಧಕರನ್ನಾಗಿ ಮಾಡಿದ ಕೀರ್ತಿ ಅವರ ಗುರುಗಳಿಗೆ ಸಲ್ಲುತ್ತದೆಯಲ್ಲವೇ.
ಹರ ಮುನಿದರೆ ಗುರು ಕಾಯುವ ಎನ್ನುವ ಮಾತು ಇಲ್ಲಿ ಅನ್ವಯಿಸುತ್ತದೆ.

ಮುಂದುವರೆದು ಶಿಕ್ಷಕರನ್ನು ಶಿಲ್ಪಿಗೆ ಹೋಲಿಸುತ್ತಾರೆ.
ಒಬ್ಬ ಶಿಲ್ಪಿ ಕಗ್ಗಲ್ಲನ್ನು ಕಡೆದು ಒಂದು ಸುಂದರ ಮೂರ್ತಿಯನ್ನಾಗಿ ಮಾಡುವಂತೆ, ಶಿಕ್ಷಕನೂ ಕೂಡಾ ಏನು ಅರಿಯದ  ಮಗುವನ್ನು ಒಂದು ಸುಂದರ ಮೂರ್ತಿಯನ್ನಾಗಿ ಮಾಡುತ್ತಾನೆ.

ದೇಶದ ಭವಿಷ್ಯದ ನಿರ್ಮಾತನಾದ ಶಿಕ್ಷಕ ಇಂದೂ ಯಾರಿಗೂ ಬೇಡವಾಗಿದ್ದಾನೆ.
ಇಂದು ಶಿಕ್ಷಕ ಎಲ್ಲರಿಂದಲೂ ನಿರ್ಲಕ್ಷಿಸಲ್ಪಟ್ಟಿದ್ದಾನೆ.
ಶಿಕ್ಷಣ ಬೇಕು, ಆದರೆ ಶಿಕ್ಷಕ ಬೇಡ ಎನ್ನುವ ಪರಿಸ್ಥಿತಿ ಉಂಟಾಗಿದೆ.

ಕಾಲಜ್ಞಾನಿಯಾದ‌ ಅಲ್ಲಮಪ್ರಭುದೇವರ ವಚನವನ್ನು ನಾವಿಲ್ಲಿ ಸ್ಮರಿಸಬಹುದು

ಕೃತಯುಗದಲ್ಲಿ‌ ಶ್ರೀಗುರು ಶಿಷ್ಯಂಗೆ‌ ಬಡಿದು ವಿದ್ಯೆಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ,
ತೇತ್ರಾಯುಗದಲ್ಲಿ ಶ್ರೀಗುರು‌ ಶಿಷ್ಯಂಗೆ ಬಯ್ದು ವಿದ್ಯೆಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ,
ದ್ವಾಪಾರ ಯುಗದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ‌ ವಿದ್ಯೆಯ ಕಲಿಸಿದರೆ ಆಗಲಿ‌ ಮಹಾಪ್ರಸಾದವೆಂದೆನಯ್ಯಾ,
ಕಲಿಯುಗದಲಿ‌ ಶ್ರೀಗುರು ಶಿಷ್ಯಂಗೆ ವಂದಿಸಿ ವಿದ್ಯೆಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ,
‘ಗುಹೇಶ್ವರ’ ನಿಮ್ಮ ಕಾಲದ ಕಲಿತನಕ್ಕೆ ಆನು ಬೆರಗಾದೆನಯ್ಯಾ

ಎಂಬುದು ಅಕ್ಷರಶಃ‌ ಸತ್ಯವೆನಿ
ಸುತ್ತಿದೆ.
ವಿದ್ಯಾರ್ಥಿಗಳಿಗೆ ಶಾಲೆಗೆ ಕರೆತಂದು ಗೋಗರೆದು ವಿದ್ಯೆ ಕಲಿಸುವ ಸ್ಥಿತಿ ಬಂದೊದಗಿದೆ.

ಇದಕ್ಕೆ‌ ಕಾರಣ ಹಲವಾರು ಇರಬಹುದು.ಬದಲಾದ ಶಿಕ್ಷಣ ನೀತಿ,ಕೆಲವು ಶಿಕ್ಷಕರಲ್ಲಿ ವೃತ್ತಿಯ ಬಗೆ  ಇರುವ ಪ್ರಾಮಾಣಿಕತೆಯ ಕೊರತೆ,ವೃತ್ತಿ ನಿಷ್ಠೆ, ವಿಧ್ಯಾರ್ಥಿಗಳಿಗೆ ಕಲಿಕೆಯಲ್ಲಿರುವ ನಿರಾಸಕ್ತಿ, ಪಾಲಕರ ಸಹಯೋಗದ ಕೊರತೆ……ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಪಟ್ಟಿಯೇ ಬೆಳೆಯುತ್ತದೆ.

ಆದರೆ ಪ್ರಮುಖವಾದುದು ನೈತಿಕತೆಯ ಕೊರತೆ.
ಇಂದು ಮಕ್ಕಳಿಗೆ‌ ಕಲಿಸುವಾಗ  ಭಾಷೆ,ವಿಜ್ಞಾನ,ಗಣಿತ, ಇತಿಹಾಸ ಎಲ್ಲವನ್ನೂ ಕಲಿಸುತ್ತೆವೆ.
ಆದರೆ ಶ್ರಮ ಮಾತ್ರ‌ ಶೂನ್ಯವಾಗಿದೆ.
ಗಾಳಿಯ ಜೊತೆ ಗುದ್ದಾಡಿ ಮೈಯನ್ನು ನೋಯಿಸಿ ಕೊಂಡಂತಾಗಿದೆ.
ಇಂದು ಹತ್ತು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯನ್ನು ತಯಾರು ಮಾಡುವದು ತುಂಬಾ ಕಷ್ಟವಾಗಿದೆ.
ಇಂದು ಪ್ರತಿಯೊಬ್ಬ ಶಿಕ್ಷಕ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ಕೊಡಬೇಕು ಎಂಬ ಉತ್ಸಾಹದಿಂದ ತನ್ನ ವೃತ್ತಿಗೆ ಇಳಿಯುತ್ತಾನೆ.
ತನ್ನಲ್ಲಿರುವ ಪ್ರತಿಭೆಯನ್ನು ಧಾರೆಯೆರೆಯಲು ಪ್ರಯತ್ನಿಸುತ್ತಾನೆ.
ಆದರೆ ಈ ಶ್ರಮ ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿದಾಗ ಮಾತ್ರ ಸಾರ್ಥಕವೆನಿಸುತ್ತದೆ.
ವಿದ್ಯೆ ಎಂದರೆ ಕೇವಲ ವೃತ್ತಿಯನ್ನು ಕಟ್ಟಿಕೊಡುವದು,ಜ್ಞಾನಾರ್ಜನೆ ಮಾತ್ರವಲ್ಲ.
ಆ ಮಗುವಿನ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸವಾಗಬೇಕು.
ಆ ವಿದ್ಯಾರ್ಥಿ ರಾಷ್ಟ್ರದ ಅಭ್ಯುಧ್ಯಯಕ್ಕೆ ಸಹಕಾರಿಯಾಗಬೇಕು.ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.
ಸಮಾಜಕ್ಕೆ ಹೊರೆಯಾಗದೆ ಸಮಾಜಮುಖಿಯಾಗಬೇಕು.
ಆಗ ಮಾತ್ರ ಶಿಕ್ಷಕರಿಗೆ ಅವರ ವೃತ್ತಿಗೆ ಮನ್ನಣೆ ಸಿಕ್ಕಂತೆ.
ಇಂತಹ ಮಕ್ಕಳ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಎಲ್ಲಾ ಶಿಕ್ಷಕಬಂಧುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು


ಗಿರಿಜಾ ಇಟಗಿ

Leave a Reply

Back To Top