ಇಂದಿರಾ ಮೋಟೆಬೆನ್ನೂರ ಹೇಳಿ ಬಿಡು ಈಗಲೇ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಹೇಳಿ ಬಿಡು ಈಗಲೇ

ಪಕ್ಕದಲ್ಲೇ ಬರುತಿರುವ
ನೀನು ಸಿಕ್ಕಲೇ ಇಲ್ಲ..
ಪಕ್ಕದಲ್ಲೇ ನುಡಿಯುತಿರುವ
ನಿನ್ನ ದನಿ ದಕ್ಕಲೇ ಇಲ್ಲ…

ಒಲ್ಲೆ ಎನ್ನುವವರ ಕರೆದು
ಮಣೆ ಹಾಕಿ ಮಾತಾಡಿಸುತ
ಜೊತೆ ಬರುವೆನೆಂದವರ ಬದಿಗೆ
ತಳ್ಳಿ ನಡೆಯುತಿಹೆಯಲ್ಲ…

ಉಗಿಬಂಡಿ ಉರುಳುತಿಹ
ಎರಡು ಹಳಿಗಳ ತೆರದಿ
ಜೊತೆಯಲ್ಲೇ ಸಾಗಿದರೂ
ಸಂಧಿಸಲಾರದ ಸಂಧಿಗ್ಧತೆ…

ಪರಸ್ಪರ ನೋಡಬಹುದಿತ್ತು
ಅದಕ್ಕೂ ದಪ್ಪ ತೆರೆ ಎಳೆದುಬಿಟ್ಟೆ
ಕೊನೆ ಪಕ್ಷ ಮಾತಾಡಬಹುದಿತ್ತು
ಮೌನ ಆಳ ಕಂದಕವ ಕೊರೆದಿಟ್ಟೆ…

ಕಣ್ಣು ತುಂಬಿಕೊಳ್ಳಬಹುದಿತ್ತು
ದಪ್ಪ ಬಟ್ಟೆ ಕಟ್ಟಿ ಬಿಟ್ಟೆ…
ಗಾವುದ ದೂರವೂ ಇಲ್ಲ.
ಕೈ ಚಾಚಿದರೆ ನಿಲುಕುವಷ್ಟು ಸಮೀಪ…
ಸಾವಿರ ಮೈಲು ಯೋಜನ ದೂರ ತಳ್ಳಿಬಿಟ್ಟೆ …

ನಿತ್ಯ ನನ್ನ ಮನೆಯಂಗಳದಲ್ಲೇ
ಸುಳಿದಾಡುತಿರುವೆ..ಸತ್ಯವಿದು..
ಹಿಂದೆ ಮುಂದೆ ಸುಳಿಯುತಿರುವೆ..
ನಿನಗೂ ತೊರೆಯುವ ಮನವಿಲ್ಲ..
ಮತ್ತೇಕೆ ಈ ಮುನಿಸು
ಈ ಮೌನ .. ಈ ದೂರ…

ಕಾರಣವಿಲ್ಲದೆ ಶಿಕ್ಷೆ..
ಪ್ರಶ್ನಿಸಿದಾಗ ಗಡೀಪಾರು..
ಕರಿನೀರು…ಭಯಂಕರ…
ಪ್ರೀತಿ ಕೋಟೆ ಸಾಮ್ರಾಜ್ಯದ

ಹೃದಯ ಸಾಮ್ರಾಟನ ಆಜ್ಞೆ
ಉಲ್ಲಂಘಿಸುವರಾರು?
ಅನ್ಯಾಯ ಅಲ್ಲವೇ..?
ವಿದಾಯದ ಮೊದಲೊಂದು
ಭೇಟಿ ,ಮಾತು, ಕಾರಣ ಬೇಕಿತ್ತು….

ನಿನ್ನ ಹೃದಯಕ್ಕೂ ಬರೆ ಇಟ್ಟಾರೂ
ಯಾರಾದರೂ ಜೋಕೆ…
ನಿನ್ನ ಮನಸಿಗೂ ತೆರೆ ಎಳೆದು
ಸುಟ್ಟಾರೂ ಜೋಕೆ….

ನನ್ನ ಹೃದಯ ಒಡೆದು ಅತ್ತದ್ದು ಸಾಕೇ…
ಇನ್ನೂ ನೋವು ನೀಡಿ ಬಳಲಿಸುವುದು
ಬಾಕಿ ಇದ್ದರೆ ಹೇಳಿ ಬಿಡು ಈಗಲೇ…
ಒಡೆದ ಹೃದಯ ಚೂರುಗಳ ಹೆಕ್ಕಿ
ಜೋಡಿಸಿ ಇಡುವೆ ಮತ್ತೆ ನಿನ್ನ ಮುಂದೆ….

——————————-

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

4 thoughts on “ಇಂದಿರಾ ಮೋಟೆಬೆನ್ನೂರ ಹೇಳಿ ಬಿಡು ಈಗಲೇ

  1. ಬಹಳ ಸುಂದರವಾಗಿ ಮೂಡಿಬಂದಿದೆ ನಿಮ್ಮ ಕವನ ಮೇಡಂ ( Angelina G)

  2. ಸ್ಪಂದಿಸಿದ ಹೂ ಮನಕೆ ವಂದನೆಗಳು…ಏಂಜಲೀನಾ ಮೇಡಂ….

  3. ಸುಂದರ ಭಾವ ಮ್ಯಾಡಮ್ ಕವನ ಚೆನ್ನಾಗಿದೆ

    1. ಸ್ಪಂದನೆಗೆ ಆತ್ಮೀಯ ವಂದನೆಗಳು ಮೀನಾಕ್ಷಿ ಮೇಡಂ….

Leave a Reply

Back To Top