ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ನಂಬಿಕೆ ಮೂಢನಂಬಿಕೆಯಾಚೆಯೂ
ಪ್ರೀತಿಯ ಹೊನಲು ಹರಿಯಲಿ…
ಅವಳ ಕಾಲ್ಗುಣದಿಂದ ನಮ್ಮನೆ ಸಂಪತ್ತು ತುಂಬಿ ತುಳುಕಾಕತೈತಿ, ಅವಳು ಯಾವಾಗ ನಮ್ಮನೆಗೆ ಕಾಲಿಟ್ಟಳೋ ಆ ಗಳಿಗೆಯಿಂದ ಮನೆ ಹಾಳಾಗಿ ಹೋಯಿತು..”
“ಇವರು ಯಾವಾಗ ಬಂದ್ರೂ…ಆವಾಗ್ಲಿಂದ ಮಳೆ ಬರದೆ, ಬರಗಾಲ ಬಿದೈತಿ, ಇವರು ಕಾಲ್ಗುಣ ಚಲೋ ಇಲ್ಲ ತಮ್ಮೋ…”
“ಬೆಕ್ಕು ಅಡ್ಡೋಯಿತು ಸ್ವಲ್ಪ ನಿಂತುಕೊಂಡು ಹಾಗೋ ಆಗೋ ಕೆಲ್ಸನೂ ಆಗೋದಿಲ್ಲ..”
ಹೀಗೆ ಮೇಲಿನ ಸನ್ನಿವೇಶಗಳನ್ನು ನಾವು ಒಂದಿಲ್ಲ ಒಂದು ಸಮಯದಲ್ಲಿ ಕೇಳುತ್ತಲೇ ಇರುತ್ತೇವೆ. ಪ್ರಸ್ತುತ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಯಾಂತ್ರಿಕೃತವಾಗಿ.. ಎಲ್ಲಾ ರಂಗಗಳಲ್ಲಿ ಮುಂದುವರೆದಿರುವುದು ಕಣ್ಣಿಗೆ ಕಟ್ಟುವಂತೆ ಇದ್ದರೂ ಕೂಡ ನಮ್ಮ ನಂಬಿಕೆಗಳಾಚೆ ಮೂಢನಂಬಿಕೆಗಳಿಗೇನು ಕೊರತೆಯಿಲ್ಲ..!! ಮನುಷ್ಯ ಮನುಷ್ಯನಿಗಾಗಲಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳಿರಬೇಕು ಆದರೆ ಆ ನಂಬಿಕೆಗಳೇ ಅತಿಯಾದಾಗ ಕೆಲವು ಸಲ ಅಂದುಕೊಂಡ ಕೆಲಸಗಳು, ನಿರೀಕ್ಷಿಸಿದ ಆಸೆಗಳು ಕೈಗೂಡದೇ ಹೋಗಬಹುದು. ಆಗ ಆ ವ್ಯಕ್ತಿಯ ಬಗ್ಗೆ , ವ್ಯಕ್ತಿತ್ವದ ಬಗ್ಗೆ ತಿರಸ್ಕಾರ ಭಾವನೆ ಮೂಡುವುದು ಸಹಜ..! ಇಂತಹ ತಿರಸ್ಕಾರ ಭಾವ ಮೂಡುವುದಕ್ಕಿಂತಲೂ ನಾವು ಸಹಜವಾಗಿ ಆಲೋಚನೆ ಮಾಡಿದಾಗ ವ್ಯಕ್ತಿಯೇ ವ್ಯಕ್ತಿತ್ವ ಮತ್ತು ಆತನ ಪಾತ್ರವನ್ನು ಪರಿಗಣಿಸಬೇಕೆ ಹೊರತು ಆತನ ಮೇಲೆ ಅತಿಯಾದ ನಂಬಿಕೆಯನ್ನು ಇಡಬಾರದು.
ಅಷ್ಟಕ್ಕೂ ಪ್ರಕೃತಿ ಕೆಲವು ಸಲ ಮುನಿದರೆ ವ್ಯಕ್ತಿತಾನೆ ಏನು ಮಾಡಬಲ್ಲ..? ಪ್ರಾಣಿಗಳು ಏನು ಮಾಡಬಲ್ಲವೋ..? ಅಡ್ಡ ಹೋದ ಬೆಕ್ಕು ತನ್ನ ಪಾಡಿಗೆ ತಾನು ಆಹಾರ ಹುಡುಕಿಕೊಂಡು ಹೋಗುವುದು ಸಹಜವಾದುದು. ಕೆಲಸಕ್ಕೆ ಹೋಗುತ್ತಿರುವ ವಿಧವೆಯು ತನ್ನ ಪಾಡಿಗೆ ತಾನು ಬದುಕು ಕಟ್ಟಿಕೊಳ್ಳಲಿಕ್ಕೆ ಹೋಗುವುದು ವಾಸ್ತವ. ಯಾವುದೇ ಒಬ್ಬ ವ್ಯಕ್ತಿಯಾಗಲಿ, ಕಾರ್ಯ, ಕ್ರಿಯಾ ಕಾರಣಗಳಿಗೆ ಆತನನ್ನು ಜವಾಬ್ದಾರಿತವನ್ನಾಗಿ ಮಾಡುವುದು ಸರಿಯಾದ ಕ್ರಮವಲ್ಲ.
ವೈಜ್ಞಾನಿಕವಾಗಿ ಬದುಕಬೇಕಾದ ಕಾಲಘಟ್ಟದಲ್ಲಿ ನಾವು ಇನ್ನೂ ಮೂಢನಂಬಿಕೆಯ ಪರಿಧಿಯೊಳಗೆ ಬದುಕುತ್ತಿರುವುದು ಅಸಹನಿಯವೆನಿಸುತ್ತದೆ.
ಮದುವೆಯಾಗಿ ಹೊಸ ಮಾಲಗಿತ್ತಿಯಾಗಿ ಗಂಡನ ಮನೆಗೆ ಬಂದ ಮಹಿಳೆಯು ಒಳ್ಳೆಯದಕ್ಕೂ ಕಾರಣವಾಗಬಹುದು, ಕೆಟ್ಟದ್ದಕ್ಕೂ ಕಾರಣವಾಗಬಹುದು, ಆದರೆ ಆಕೆಯ ಕಾಲುಗುಣದಿಂದಲ್ಲ ಆಕೆಯು ಮಾಡುವ ಕೆಲಸ, ಕಾರ್ಯ, ನಡೆದುಕೊಳ್ಳುವ ರೀತಿಯಲ್ಲಿ ಮತ್ತು ಆ ಕುಟುಂಬದ ಮೇಲೆ ಬೀರುವ ವ್ಯಕ್ತಿತ್ವದಿಂದ ಅಂತಹ ಕುಟುಂಬದ ಮೇಲೆ ಫಲಿತಾಂಶ ಇದಕ್ಕೆ ಕಾರಣವೇ ಹೊರತು ಕಾಲ್ಗುಣವಲ್ಲ..!!
ಇನ್ನೂ ನಮ್ಮ ಸಮಾಜದಲ್ಲಿ ಹತ್ತು ಹಲವಾರು ಹಲವಾರು ಮೂಢನಂಬಿಕೆಗಳು ನಮ್ಮ ಕಣ್ಣೆದುರಿಗೆ ಇವೆ. ನಾವು ಒಳ್ಳೆಯದರ ಬಗ್ಗೆ, ಧನಾತ್ಮಕ ಚಿಂತನೆಗಳ ಬಗ್ಗೆ, ಆಲೋಚಿಸಬೇಕೇ ಹೊರತು ಋಣಾತ್ಮಕವಾಗಿ ಆಲೋಚಿಸಿ ನಮ್ಮ ಮನಸ್ಸನ್ನು ಕಲುಷಿತಗೊಳಿಸಿಕೊಳ್ಳುತ್ತೇವೆ. ಬಹುತೇಕ ಶ್ರಮಿಕ ತಳಸಮುದಾಯಗಳನ್ನು ಹೀಯಾಳಿಸಿ ಮಾತನಾಡುವ ಅಲ್ಲದೇ ಒಬ್ಬ ವ್ಯಕ್ತಿಯ ಮೇಲೆ, ಒಂದು ಪ್ರಾಣಿಯ ಮೇಲೆ… ಹೀಗೆ ಗುರುತರವಾದ ಅಪವಾದವನ್ನು ಮಾಡಿ ಮೂಢನಂಬಿಕೆಗಳಿಗೆ ನೀರೆರೆಯುತ್ತೇವೆ.
“ಮುಂಜಾನೆದ್ದು ಅವರ ಮುಖವನ್ನು ನೋಡಬಾರದು…, ಬೆಕ್ಕು ಅಡ್ಡ ಬಂದಿದೆ ಹೋಗಬಾರದು…, ತುಂಬಿದ ಕೊಡ ಎದುರು ಬಂದರೆ ಮಾತ್ರ ಹೋಗಬೇಕು, ಖಾಲಿ ಕೂಡ ಇದ್ದರೆ ಹೋಗಬಾರದು, ಅಯ್ಯೋ ದೀಪವಾಯಿತು ಇದು ಅಪಶಕುನದ ಸಂಗತಿ.., ಎಲ್ಲಿಯೋ ಕಾಗೆ ಜೋರಾಗಿ ಕೂಗುತ್ತಿವೆ, ನಮಗೆ ಕೆಟ್ಟ ಸುದ್ದಿ ಬರುತ್ತದೆ…” ಹೀಗೆ ಮೂಢನಂಬಿಕೆಗಳಿಗೆ ಇಂಬು ಕೊಡುವಂತಹ ಮಾತುಗಳು ಸಮಾಜದಲ್ಲಿ ಪ್ರಚಲಿತ ವಿದ್ದರೇ ವ್ಯಕ್ತಿಗೆ ವ್ಯಕ್ತಿಗಳ ನಡುವೆ ವೈಮನಸ್ಸು ಮೂಡುತ್ತದೆ. ಇದು ಆರೋಗ್ಯಕರ ಸಮಾಜದ ಬೆಳವಣಿಗೆಯಲ್ಲ..!!
ನಾವು ನಮ್ಮ ವ್ಯಕ್ತಿತ್ವವನ್ನು ನಮ್ಮ ಕಾರ್ಯಗಳ ಮೂಲಕ, ಕೆಲಸದ ಮೂಲಕ, ಗುರುತುರವದಂತಹ ಹೆಜ್ಜೆ ಗುರುತುಗಳನ್ನು ಈ ಸಮಾಜಕ್ಕೆ ನೀಡುವುದರ ಮೂಲಕ ನಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸಬೇಕೆ ಹೊರತು ಯಾರನ್ನೋ ನಿಂದಿಸಿ, ಯಾರನ್ನು ತೆಗಳಿ ಇನ್ಯಾವುದೋ ಸಮುದಾಯವನ್ನು ಹೀಯಾಳಿಸಿ ಮಾತನಾಡುವುದರಿಂದ ಸಮಾಜವಾಗಲಿ ವ್ಯಕ್ತಿಯಾಗಲಿ, ಕುಟುಂಬವಾಗಲಿ ಉದ್ಧಾರವಾಗುವುದಿಲ್ಲ. ನಮ್ಮ ಬದುಕು ಪ್ರೀತಿಯ ನಂಬಿಕೆಯಲ್ಲಿ ಇರಬೇಕೆ ಹೊರತು ಮೂಢನಂಬಿಕೆಯಿಂದ ಅಲ್ಲ ಎನ್ನುವ ಎಚ್ಚರಿಕೆ ನಮ್ಮೊಳಗೆ ತುಂಬಿರಬೇಕು.
ಯಾರೋ ಅವರ ಕುರಿತು, ಆ ಸಮುದಾಯದ ಕುರಿತು, ಆ ಪಕ್ಷಿ ಪ್ರಾಣಿಗಳ ಕುರಿತು ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಾರೆಂದರೆ ನಾವು ಅದಕ್ಕೆ ಕಿವಿಗೊಡಬಾರದು. ಒಂದು ವೇಳೆ ಕಿವಿಗೊಡುವುದಾದರೆ ಪೂರ್ವಾಪರ ಆಲೋಚಿಸಿ, ವಿಷಯವನ್ನು ಪರಮಾರ್ಶಿಸಿ, ವೈಜ್ಞಾನಿಕವಾಗಿ ಚಿಂತನೆಗೆ ಒಳಪಡಿಸಿ ನಾವು ನಿರ್ಧರಿಸಿ ಮಾತನಾಡಬೇಕು. ಇಲ್ಲದೇ ಹೋದರೆ ನಮ್ಮ ಮಾತುಗಳು ಬೆಲೆ ಕಳೆದುಕೊಂಡು ಕಾಲಕಸವಾಗಿ ಬಿಡುತ್ತವೆ ಎನ್ನುವ ಎಚ್ಚರಿಕೆ ಸದಾ ಇರಬೇಕು.
ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರಮದಾಯಕ ತಳಸಮುದಾಯಗಳನ್ನು ನಾವು ಪ್ರೀತಿಯಿಂದಲೇ ಕಾಣಬೇಕು. ಅವರು ಇದ್ದಾಗ ತಾನೇ ನಮ್ಮ ಸಮಾಜವೂ ವ್ಯಕ್ತಿಗಳೂ ಸ್ವಚ್ಛವಾಗಿ ಇರಲು ಸಾಧ್ಯ..!! ಮಡಿ ಮಾಡುವ ಮಡಿವಾಳರು, ಕ್ಷೌರ ಮಾಡುವ ಕ್ಷೌರಿಕರು, ಬಡಿಗೇರ, ಚಮ್ಮಾರಿಕೆ, ಕಮ್ಮಾರಿಕೆ, ಬೀದಿ ಶುಚಿಗೊಳಿಸುವ ಎಲ್ಲರೂ ನಮ್ಮವರೇ..!! ಅವರು ಇದ್ದಾಗ ಮಾತ್ರ ಸಮಾಜ ಸ್ವಚ್ಛ ಆರೋಗ್ಯವಾಗಿರಲು ಸಾಧ್ಯ.
ಅವರು ಅಡ್ಡ ಬಂದರೆಂದು ಅವರನ್ನು ಹೀಯಾಳಿಸುವುದಲ್ಲ. ನಿಜವಾಗಿಯೂ ಅವರು ನಮಗೆ ತಾಯಿಯ ಸ್ವರೂಪವಿದ್ದಂತೆ ಏಕೆಂದರೆ ಅವರು ತಮ್ಮ ವೈಯಕ್ತಿಕ ಆರೋಗ್ಯವನ್ನು ಲೆಕ್ಕಿಸದೆ ಸಾಮಾಜಿಕ ಆರೋಗ್ಯವನ್ನು ನೋಡಿಕೊಳ್ಳುತ್ತಾರೆ.
ಕಾಗೆ ತನ್ನ ಬಳಗವನ್ನು ಕರೆದು ಉಣ್ಣುವುದು ಕಾಗೆಯೂ ಕೂಡ ನಮಗೆ ಪಾಠವಾಗಬಲ್ಲದು. ಕಾಗೆಯಿಂದ ಒಳ್ಳೆಯದನ್ನು ಕಲಿಯೋಣ. ಹಾಗೆಯೇ ಕೊಂಕು ಮಾತುಗಳಿಗೆ, ಅಪಹಾಸ್ಯದ ಮಾತುಗಳಿಗೆ ಸಮಾಜದಲ್ಲಿ ಬೆಲೆ ಕೊಡದೆ, ಮೂಢನಂಬಿಕೆಯ ಬಲೆಯಿಂದ ಹೊರ ಬಂದು, ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ಇಂತಹ ಅಶಿಕ್ಷಿತ ವರ್ತನೆಗಳು ದೂರವಾಗಬಲ್ಲವು. ಇಲ್ಲವಾದರೆ ನಮ್ಮ ಗರ್ವ, ಅಹಂಕಾರದರೊಳಗೆ ಇನ್ನೊಬ್ಬರನ್ನು ತೆಗಳಿಬಿಡುವ ಸಾಧ್ಯತೆಯೇ ಹೆಚ್ಚು. ಈ ಸಮಾಜಕ್ಕೆ ಪ್ರತಿಯೊಬ್ಬರ ಕೊಡುಗೆಯೂ ಅನನ್ಯ. ಹಾಗಾಗಿ ಎಲ್ಲರನ್ನೂ ಗೌರವದಿಂದ ಕಾಣುವ ಭಾವನೆ ನಮ್ಮದಾಗಲಿ.
ಈ ಭೂಮಿಯ ಮೇಲೆ ಪಶು, ಪಕ್ಷಿ, ಪ್ರಾಣಿಗಳಿಗೆ ಬದುಕುವ ಹಕ್ಕಿದೆ. ಅವುಗಳನ್ನು ಕೊಂದು, ಚಿತ್ರಹಿಂಸೆ ಮಾಡಿ ಅವುಗಳನ್ನು ನಾಶಪಡಿಸುವುದರಿಂದ ನಮಗೆ ಯಾವುದೇ ಲಾಭವಾಗುವುದಿಲ್ಲ. “ಎಲ್ಲರಂತೆ ನಾನು” ಎನ್ನುವ ಪ್ರೀತಿಯ ಹೊನಲಿನೊಳಗೆ ನಂಬಿಕೆಗಳನ್ನು ಪ್ರೀತಿಯಿಂದ ಉಳಿಸಿಕೊಂಡು ಮೂಢನಂಬಿಕೆಗಳನ್ನು ದೂರತಳ್ಳಿಬಿಡೋಣ. ಒಳಿತು ಕೆಡುಕುಗಳನ್ನು ಸಮಾನವಾಗಿ ಸ್ವೀಕರಿಸಿ, ಈ ಬದುಕನ್ನು ಹಸನಗೊಳಿಸಬೇಕಾಗಿದೆ. ಅಂತಹ ಹಸನಗೊಳಿಸುವ ಮನಸ್ಸು ನಮ್ಮೆಲ್ಲರದಾಗಲಿ ಎಂದು ಆಶಿಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.
ಯಾರಿಗೋ ತಮಗಾದ ಅನುಭವಗಳನ್ನು ಸಾರ್ವತ್ರಿಕ ಸತ್ಯಗಳನ್ನಾಗಿ ಮಾಡಿ ಮೌಢ್ಯತೆ ಬಿತ್ತಿದ್ದಾರೆ, ಬಿತ್ತುತ್ತಿದ್ದಾರೆ. ಬರೀ ಶೋಷಣೆ ಅಷ್ಟೇ. ಸತ್ಯಾಸತ್ಯತೆ ಪರಾಮರ್ಶೆ ಮಾಡುವುದಿಲ್ಲ. ಕಾಕತಾಳೀಯ ಘಟನೆಗಳಿಗೆ ಬಣ್ಣ ಹಚ್ಚಿ ವರ್ಣಿಸುತ್ತಾರೆ. ಬಸವಾದಿ ಶರಣರು ಮೌಢ್ಯತೆ ನಿವಾರಣೆಗೆ ಹೊರಾಟವನ್ನೇ ಮಾಡಿದರು. ಆದರೂ ಅದು ಪಾಪಿ ಚಿರಾಯು ಎಂಬಂತಿದೆ ನಮ್ಮ ಸಮಾಜದಲ್ಲಿ. ವಿದ್ಯಾವಂತರೇ ಮೌಢ್ಯತೆಗೆ ಶರಣಾಗುತ್ತಿರುವುದು ವಿಷಾದನೀಯ.
ಸಮಯೋಚಿತ ಒಳ್ಳೆಯ ಲೇಖನ. ಅಭಿನಂದನೆಗಳು.