ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮ ಭೂಮಿಯ


    ಈ ವಾರಕ್ಕೆ ಸರ್ವ ಓದುಗರಿಗೆ ಸ್ವಾಗತ ಕೋರುತ್ತಾ ನಿಮ್ಮ ಸಹೃದಯಕ್ಕೆ ನಾ ಸದಾ ಚಿರಋಣಿ. ಒಂದೊಂದು ಅಕ್ಷರವನ್ನೂ ತಿದ್ದಿ ತೀಡಿ ಕಲಿಸಿ ಬೆಳೆಸಿದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ, ಕಾಲೇಜು ಹಾಗೂ ಉನ್ನತ ತರಗತಿಗಳಲ್ಲಿ ಬೋಧಿಸಿದ ನನ್ನೆಲ್ಲಾ ಗುರು ವೃಂದದ ಪಾದಾರವಿಂದಕ್ಕೆ ನಮಿಸುತ್ತಾ, ಮೊದಲ ಗುರು ಅಮ್ಮನಿಗೂ , ನನ್ನೊಡನೆ ವಿದ್ಯಾರ್ಥಿಗಳಿಗೆ ಬೋಧಿಸುತ್ತ, ಬೋಧಿಸುವ ಕಾಯಕವನ್ನು ಜೀವನದ ಧ್ಯೇಯ, ವೃತ್ತಿ ಹಾಗೂ ಪ್ರವೃತ್ತಿಯಾಗಿಸಿಕೊಂಡ  ಸರ್ವ ಗುರು ಸಂಕುಲಕ್ಕೆ ಶಿಕ್ಷಕರ ದಿನದ ಶುಭಾಶಯಗಳನ್ನು ಕೋರುತ್ತೇನೆ.
      ಒಂದೆಡೆ ವಿಪರೀತ ಹರ್ಷದಲ್ಲಿ ಈ ಅಂಕಣ ಪ್ರಾರಂಭಿಸಿರುವೆ.

ಇನ್ನೊಂದೆಡೆ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಇರುವ ಕಾರಣ ನನ್ನ ಆರೋಗ್ಯ  ಹದಗೆಟ್ಟು ಹೋಗಿದೆ. ಕಾರಣ ಇಷ್ಟೇ. ಬೆಂಗಳೂರಿನಲ್ಲಿ ಇರುವ ವಿಪರೀತ ಜನದಟ್ಟಣೆ ಹಾಗೂ ವಾಹನಗಳ ಸಂಖ್ಯೆಯ ಏರುವಿಕೆಯಿಂದಾಗಿ ಇಲ್ಲಿನ ಪರಿಸರ ಪೂರ್ತಿ ಬಿಸಿಯಾಗಿ ಗಾಳಿ ಎಲ್ಲಾ ವಿಷಯುಕ್ತವಾಗಿದೆ. ಇದು ಹೊರಗಿನಿಂದ  ಬಂದ ಜನರಿಗೆ ಆದಷ್ಟು ಬೇಗ ಹೊಂದಾಣಿಕೆ ಆಗಲು ಸಾಧ್ಯವಾಗದ ಹಾಗೆ ಮಾಡುತ್ತದೆ. ಎಷ್ಟೇ ಒಳ್ಳೆಯ ಶಕ್ತಿಯುತ ಜನರಿಗೂ ಇಲ್ಲಿನ ಬಿಸಿಲಿನಲ್ಲಿ ಒಂದು ದಿನ ರಸ್ತೆ ಬದಿ ನಡೆದರೆ ಇಲ್ಲಿನ ವಿಷಪೂರಿತ ಮಲಿನ ಗಾಳಿಯ ಅನುಭವ ದೇಹದ ಮೇಲೆ ಆಗಿಯೇ ಆಗುತ್ತದೆ. ಇಲ್ಲೇ ಇದ್ದವರಿಗೆ ದೇಹ ಹೊಂದಾಣಿಕೆ ಆಗಿಬಿಟ್ಟಿದೆ. ಹೊರಗಿನಿಂದ ಬಂದವರು ಸರಿಯಾಗಿ ಇಲ್ಲಿಗೆ ಹೊಂದಿಕೊಳ್ಳಲು ಬಹಳ ಕಾಲ ಬೇಕಾಗಬಹುದು. ವಿಪರೀತ ಬಿಸಿಲು ಹಾಗೂ ಮೈ ಪೂರ್ತಿ ಬೆವರಿನಿಂದ ತೊಯ್ದು ಒದ್ದೆಯಾಗುವ ದಕ್ಷಿಣ ಕನ್ನಡದ ಊರುಗಳಲ್ಲಿ ಇದ್ದು ಇಲ್ಲಿಗೆ ಬಂದು ತಕ್ಷಣ ಹೊಂದಿಕೊಳ್ಳಲು ಕಷ್ಟವೇ ಸರಿ. ಚೆನ್ನಾಗಿಯೇ ಇದ್ದರೆ ಓಕೆ.ಒಮ್ಮೆ ವೈರಲ್ ಶೀತ, ತಲೆನೋವು ಜ್ವರ ಪ್ರಾರಂಭವಾದರೆ ಸಾಕು. ಸಧ್ಯಕ್ಕೆ ಕಡಿಮೆ ಆಗುವ ಲಕ್ಷಣವೇ ಇಲ್ಲ, ಇದರ ಜೊತೆಗೆ ಕೆಮ್ಮು ಫ್ರೀ. ಹಾಗೆಯೇ ಇಲ್ಲಿನ ಬೋರ್ ನೀರಿಗೆ ಮೈಯ ಚರ್ಮವೆಲ್ಲಾ ಒಣಗಿ ಸುಕ್ಕಾಗಿ ತಲೆ ಕೂದಲಲ್ಲಿ ಹೊಟ್ಟಾಗಿ, ಚರ್ಮ ಹಾವಿನ ಪೊರೆಯ ಹಾಗೆ ಆಗಿ ಬಿಡುತ್ತದೆ. ತಂಪು ಹವೆಯಿದ್ದರೂ ದೇಹ ಒಣಗುವ ಕಾರಣ ಭೂ ವಾತಾವರಣ ವಿಪರೀತ ವಾಹನದ ಹೊಗೆಯಿಂದ ದೇಹದ ಚರ್ಮ ಒಣಗಿ ಹೋಗುತ್ತದೆ. ಇಲ್ಲಿನ ಹವಾಮಾನಕ್ಕೆ ಹೊಂದಾಣಿಕೆ ಆದ ದೇಹಕ್ಕೆ ಇದರ ತೊಂದರೆ ಇಲ್ಲ ಅನ್ನಿಸುತ್ತದೆ.


     ನಮ್ಮ ಪರಿಸರ, ನಮ್ಮ ಭೂಮಿ, ನಮ್ಮ ನೆಲ, ನಮ್ಮ ಜಲ, ಪಂಚ ಭೂತ ಎನ್ನುತ್ತಾ ಭೂಮಿಯನ್ನು ಪೂಜೆ ಮಾಡುವ ನೆಪ ಮಾತ್ರ ಇಂದಿನ ಜನರಲ್ಲಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಸಾವಿರಾರು ಆಚರಣೆಗಳು ವೇದಿಕೆಯಲ್ಲಿ ಮಾತ್ರ. ವನ ಮಹೋತ್ಸವದ ದಿನ ನೆಟ್ಟ ಗಿಡ ಮರುದಿನವೇ ಒಣಗಿ ಹೋಗಿರುತ್ತದೆ. ಮತ್ತೆ ಅದಕ್ಕೆ ನೀರು ಹಾಕುವ ಗತಿಯಿಲ್ಲ. ಇನ್ನು ವೇದಿಕೆಯಲ್ಲಿ ಉದ್ದುದ್ದ ಭಾಷಣ ಮಾಡುವುದರಲ್ಲಿ ನಾವು ನಿಸ್ಸೀಮರು. ಆದರೆ ನಿಜವಾಗಿ ಪ್ರಕೃತಿ ಉಳಿಸುವ ಕಾರ್ಯ ಅದೆಷ್ಟು ಆಗಿದೆಯೋ ಅದು ನಮ್ಮ ಬಿಸಿಯಾಗುತ್ತಿರುವ ಭೂಮಿಯಲ್ಲಿ, ತೇಲಿ ಬರುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ, ರಾಶಿ ಬಿದ್ದಿರುವ ಕಸದ ಗುಡ್ಡಗಳಲ್ಲಿ ನಮಗಿರುವ ಪ್ರಕೃತಿ ಮಾತೆಯ ಕಾಳಜಿ ಕಾಣುತ್ತದೆ. ಎಲ್ಲೋ ಅಲ್ಲಲ್ಲಿ ಒಬ್ಬೊಬ್ಬ ಪರಿಸರ ಕಾಳಜಿ ಇರುವ ವ್ಯಕ್ತಿಗಳು ಗಿಡ ಮರ ನೆಟ್ಟು, ನೀರು ಇಂಗಿಸಿ, ನದಿ ಸ್ವಚ್ಛಗೊಳಿಸಿ, ಊರನ್ನು ಹಸಿರಾಗಿಸಿ ಪ್ರಕೃತಿಗೆ ಒಳಿತು ಮಾಡಿರುವುದು ಬಿಟ್ಟರೆ ನಾವೆಲ್ಲರೂ ಪ್ಲಾಸ್ಟಿಕ್, ಚೂಯಿಂಗ್ ಗಮ್ ನಿಂದ ಹಿಡಿದು ಬಳಸಿದ ಪೇಸ್ಟ್, ಬ್ರಷ್ ಎಲ್ಲವನ್ನೂ  ಭೂಮಿಗಿಳಿಸಿ ನಿರಾಳರಾಗುವ ನಾವು. ರೈತರೂ ಕೂಡಾ ಹಣದ ಆಸೆ, ಬೆಳೆ ಉತ್ತಮವಾಗಿ ಬರಲು ವಿವಿಧ ರಾಸಾಯನಿಕಗಳನ್ನು ಮಣ್ಣಿಗೆ ಸುರಿದು ಉತ್ತಮ ಬೆಳೆ ಪಡೆದು ಅದನ್ನು ಒಳ್ಳೆಯ ಬೆಲೆಗೆ ಮಾರುತ್ತಾರೆ. ರಾಸಾಯನಿಕ ವಿಷ ಸುರಿದ ತಾವೇ ಬೆಳೆದ ಬೆಳೆಯನ್ನು ಉಪಯೋಗಿಸದ ರೈತರ ಸಂಖ್ಯೆಯೂ ಕಡಿಮೆ ಇಲ್ಲ ಬಿಡಿ. ಹೆಚ್ಚುತ್ತಿರುವ ಜನಸಂಖ್ಯೆಗೆ ಬೇಕಾದ ಆಹಾರವನ್ನು ಕಡಿಮೆ ಆಗದ ಹಾಗೆ ಪೂರೈಸುವ ಜವಾಬ್ದಾರಿಯೂ ರೈತರ ಮೇಲೆ ಇದೆ ಅಲ್ಲವೇ? ಪಾಪ ಅವರಾದರೂ ಏನು ಮಾಡಿಯಾರು? ಇನ್ನು ಬೇಡಿಕೆ ಹೆಚ್ಚಿದರೂ ಹಣ ದಲ್ಲಾಳಿಯ ಪಾಲಿಗೆ, ಮಾರಾಟಗಾರರಿಗೆ ಹೊರತು ಕಷ್ಟ ಪಟ್ಟ ರೈತರಿಗೆ ಸಿಗುವ ಹಣ ಕೊಂಚವೇ. ಇದು ನಮ್ಮ ಜೀವನ ಪದ್ಧತಿಯೇ ಆಗಿ ಹೋಗಿದೆ ಬಿಡಿ. ಕಾಲಾಯ ತಸ್ಮಯೇ ನಮಃ ಎನ್ನ ಬೇಕಷ್ಟೆ! ಬೇರೇನೂ ವಿಧಿ ಇಲ್ಲ. ರಾಸಾಯನಿಕ ಇಲ್ಲದ ಸಾವಯವ ಆಹಾರ ತುಂಬಾ ತುಟ್ಟಿ. ಅದನ್ನು ಎಲ್ಲರೂ ಬಳಸಲು ಸಾಧ್ಯ ಆಗದ ಮಾತು. ಬಡ ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳು ಭಾರತದಲ್ಲಿ ಅಧಿಕ ಆಗಿರುವ ಕಾರಣ ಅವರ ಬದುಕು ಯಾವಾಗಲೂ ದುಸ್ತರವೇ. ಆರಕ್ಕೆ ಏರುವುದಿಲ್ಲ,ಮೂರಕ್ಕೆ ಇಳಿಯುವುದಿಲ್ಲ ಅಂಥವರ ಬದುಕು. ಇನ್ನು ಗಂಡ ಕುಡುಕನಾಗಿದ್ದು ಅವನು ದುಡಿದ ಎಲ್ಲಾ ಹಣ ಕುಡಿತ, ಗೆಳೆಯರು ಅಂತ ಖರ್ಚು ಮಾಡಿ ಮಹಿಳೆಯೇ ಕುಟುಂಬ ನೋಡಿಕೊಳ್ಳುವ ಅನಿವಾರ್ಯತೆ, ಗಂಡ ಸತ್ತು ಮಹಿಳೆ ಕುಟುಂಬದ ಭಾರ ಎಳೆಯುವ ಕುಟುಂಬಗಳು ನಮ್ಮ ದೇಶದಲ್ಲಿ ಹಲವಾರು ಇರುವ ಕಾರಣ ಬಡತನ ಇನ್ನೂ ಇದೆ. ಇಂತಹ ದೇಶಕ್ಕೆ ಗುಣಮಟ್ಟದ ಬದಲು ಪ್ರಮಾಣವನ್ನು ಮಾನದಂಡವಾಗಿ ಇಡಬೇಕಾಗುತ್ತದೆ. ಹೀಗಾಗಿಯೇ ಸರಕಾರದ ಉಚಿತ ಪಡಿತರ ವಿತರಣೆಯ ಸಾಮಾಗ್ರಿಗಳಿಗೆ ಬಹು ಬೇಡಿಕೆ. ಅಲ್ಲಿ ಸಿಗುವ ಅಕ್ಕಿ, ಗೋಧಿ , ರಾಗಿ, ಎಣ್ಣೆ, ಸಕ್ಕರೆಗೆ ಜನ ಸರತಿಯ ಸಾಲಲ್ಲಿ ನಿಂತು, ಪಡೆದು, ರಿಕ್ಷಾ ಮಾಡಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಹೀಗಿರುವಾಗ ಎಲ್ಲವನ್ನೂ ಒಳ್ಳೆಯ ಗುಣಮಟ್ಟದಲ್ಲಿಯೇ ಬಯಸಲು ಸಾಧ್ಯವೇ? ಆದರೂ ಭಾರತೀಯರಲ್ಲಿ ಇರುವ ಕಡಿಮೆ ಬೆಲೆಯ ಕೊಳ್ಳುಬಾಕ ಸಂಸ್ಕೃತಿಯನ್ನು ಚೀನಾ ದೇಶದ ಜನ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಚೀನಾ ಬಜಾರ್ ಭಾರತದಲ್ಲಿ ನೆಲೆ ಊರುವಂತೆ ಮಾಡಿ ಬಿಟ್ಟಿದ್ದಾರೆ ಅಲ್ಲವೇ! ಅಲ್ಲಿ ಸಿಗುವ ಕಡಿಮೆ ಬೆಲೆಯ ಎಲ್ಲಾ ವಸ್ತುಗಳೂ, ಬಳಸಿ ಬಿಸಾಕುವ ವಸ್ತುಗಳೂ ಪರಿಸರಕ್ಕೆ ಮಾರಕವೇ. ಆದರೂ ಜನರ ಆಸೆ ಕಡಿಮೆ ಆಗಿಲ್ಲ.


   ಭೂಮಿಯನ್ನು ಮನುಷ್ಯನ ಹೊರತು ಯಾವುದೇ ಪ್ರಾಣಿ ಪಕ್ಷಿಗಳೂ ಭೂಮಿಯನ್ನು ಹಾಳು ಮಾಡಲಾರವು. ಎಲ್ಲವೂ ತಮ್ಮ ಆಹಾರಕ್ಕಾಗಿ , ಅವಾಸಕ್ಕಾಗಿ, ಬದುಕಿಗಾಗಿ ಅವಲಂಬಿಸಿರುವ ಏಕೈಕ ಜಾಗ ಭೂಮಿ. ಅದನ್ನು ಚೆನ್ನಾಗಿ ಕಾಯ್ದುಕೊಳ್ಳಬೇಕಾದುದು ನಮ್ಮ ಧರ್ಮ. ಆದರೆ ಮನುಷ್ಯ ಬುದ್ಧಿ ಜೀವಿ ಆಗಿದ್ದರೂ ಕೂಡಾ ತನ್ನ ವಿಪರೀತ ದುರಾಸೆಯಿಂದ ಭೂಮಿಯ ಒಳಗೆ ಕೈ ಹಾಕಿ ಭೂಮಿಯನ್ನು ಬರಿದು ಮಾಡಿರುವುದೇ ಅಲ್ಲದೆ, ಮಣ್ಣು, ನೀರು, ಗಾಳಿಗೂ ವಿಷ ಹಾಕಿ ಇನ್ನು ಮುಂದಿನ ಜನಾಂಗ ಒಳ್ಳೆಯ ಬದುಕು ನಡೆಸಲು ಕೂಡಾ ಸಾಧ್ಯವಾಗದ ಹಾಗೆ ಮಾಡಿರುವುದು ವಿಪರ್ಯಾಸವೇ ಸರಿ.
   ಪ್ರತಿಯೊಬ್ಬ ಮಾನವನೂ ತಾನು ಪರಿಸರವನ್ನು ಸ್ವಚ್ಚವಾಗಿ ಇಡುತ್ತೇನೆ ಎಂಬ ಪಣ ತೊಟ್ಟರೆ ಗಾಂಧಿ ಜಯಂತಿ ಆಚರಣೆ ಸಾರ್ಥಕವಾದಂತೆ. ಅಲ್ಲದೆ ನನ್ನಿಂದ ಪರಿಸರಕ್ಕೆ  ಹಾನಿ ಆಗುವ ಯಾವ ವಸ್ತುವೂ ಎಸೆಯಲ್ಪಡುವುದಿಲ್ಲ ಎಂಬ ಧ್ಯೇಯ ವಾಕ್ಯವನ್ನು ಎಲ್ಲರೂ ಪಾಲಿಸಬೇಕು. ಐಸ್ ಕ್ರೀಂ ಕಪ್, ಚಾಕೋಲೇಟ್ ಪೇಪರ್ ಗಳನ್ನು ಕಂಡ ಕಂಡಲ್ಲಿ ಎಸೆಯುವುದನ್ನು ತಪ್ಪಿಸಬೇಕು. ನನ್ನಿಂದ ಪರಿಸರ ಹಾಳಾಗಬಾರದು ಎಂಬುದನ್ನು ಮನದಲ್ಲಿ ಇರಿಸಬೇಕು. ಎಲ್ಲರೂ ಈ ರೀತಿ ವರ್ತಿಸಿದರೆ ಶಿಕ್ಷಕರಿಗೂ ಸಂತೋಷ. ವಿದ್ಯಾರ್ಥಿಗಳು ಶಿಕ್ಷಕರಿಗೆ ಖುಷಿ ಪಡಿಸಲು ಈ ಶಿಕ್ಷಕರ ದಿನಾಚರಣೆಯ ಬಳಿಕ ನಾವೆಂದೂ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವುದಿಲ್ಲ ಎಂದು ಪಣ ತೊಡಿ. ಶಿಕ್ಷಕರನ್ನು ಸಂತಸವಾಗಿ ಇಡಲು ನಿಮ್ಮ ತರಗತಿ ಹಾಗೂ ಶಾಲೆಯ ಪರಿಸರ ಶುಚಿ ಇಡಿ. ಅಷ್ಟೇ ಸಾಕು. ನಮ್ಮ ದೇಹ, ಮನೆ, ಶಾಲೆ, ಸುತ್ತ ಮುತ್ತ, ಪ್ರಕೃತಿ, ಭೂಮಿ ಎಲ್ಲವೂ ನಮ್ಮದೇ, ಎಲ್ಲವನ್ನೂ ಶುಚಿಯಾಗಿ ಇಡೋಣ, ಮುಂದಿನ ಜನಾಂಗಕ್ಕೆ ಒಳ್ಳೆಯ ಭೂಮಿಯನ್ನು  ಧಾರೆ ಎರೆಯುವ ಕಾರ್ಯ ಮಾಡೋಣ. ನೀವೇನಂತೀರಿ?

——————–
ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

 


     

Leave a Reply

Back To Top