ಇಮಾಮ್ ಮದ್ಗಾರ ಕತ್ತಲಾಗಲಿ

ಕಾವ್ಯಸಂಗಾತಿ

ಇಮಾಮ್ ಮದ್ಗಾರ

ಕತ್ತಲಾಗಲಿ

ನಿನ್ನ ಕಣ್ಣಂಚು ಕಳಿಸಿದ
ಸಂದೇಶ ಓದಿಯೇ..
ಹಿಡಿದುಸಿರು ಬಿಡಲಾಗುತ್ತಿಲ್ಲ
ಆಲಂಗಿಸ ಬೇಡ ಕನಸಿನಲಿ
ಮನಸು ಕನಲಿದರೆ ಹೇಗೆ ?

ಕಣ್ಣು ಝಳಪಿಸಬೇಡ
ಸಾಜನ್
ಕಣ್ಣ ಹೊಳಪು
ವಿರಹ ದುರಿಯ ಕಿಡಿಗೆ
ಕರಗಿ ಹೋದೀತು !

ಎರಡು ಕಣ್ಗಳು ಕೂಡಿ
ಒಂದೇ ಕಣ್ಣಿನ ಸೂಜಿಗೆ
ದಾರ ಹಾಕಲು ಹೆಣಗುತ್ತವೆ
ಗೊತ್ತಾ ?

ನೆನೆಯದೇ ಈಜು ಎಂದು
ಮೀನಿಗೆ ಹೇಳಿದರೆ
ಹೂಬಿಟ್ಬ ಬಳ್ಳಿಗೆ ಬಾಗದಿರೆಂದು ಹೇಳಿದರೆ ?

ಪ್ರೀತಿಯ ಕೋಟೆಕಟ್ಟಿ
ಕಾಯಬೇಡ
ಕತ್ತಲಾದರೂ ಆಗಲಿ
ಚಂದ್ರ ಬೆಳಗಲಿ ಭೂಮಿ

ನಿನ್ನ ಬತ್ತಳಿಕೆ ಬರಿದಾಗುವದಿಲ್ಲ
ನಂಗೊತ್ತು…
ನೀ ಬಿಡುವ ಬಾಣ
ಗುರಿತಪ್ಪುವದಿಲ್ಲ.

ನೀ ಕೊಡಿಸಿದ ಬೆಳ್ಳಿಯ
ಕಾಲ್ಗೆಜ್ಜೆ ಘಲ್ಲೆಂದರೇ..
ಸಾಕು ಅದೇ ನನಗೆ
ಸಪ್ತ ಸ್ವರ !!

ನೆತ್ತರ ಬರಹ ಬೇಡ
ನಿನ್ನ ಮುತ್ತಿನ ಮಧುವೇ
ಸಾಕೆನಗೆ ಅದೇ..
ಕಾಮನಬಿಲ್ಲು !!


ಇಮಾಮ್ ಮದ್ಗಾರ

Leave a Reply

Back To Top