ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಸ್ಮಿತಾ ರಾಘವೇಂದ್ರ ರವರ
ಗಜಲ್ ಗಳಲ್ಲಿ ಮಣ್ಣಿನ ಸೊಗಡು
ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಚೆನ್ನಾಗಿರುವಿರಿ ಎಂಬ ಸದಾಶಯದೊಂದಿಗೆ ತಮ್ಮ ಮುಂದೆ ಗಜಲ್ ಝಮಝಮ್ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳ ಶಾಯರಾ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಏನಿದ್ದರೂ ಇವಾಗ ಗಜಲಯಾನ…
“ಕಳೆದುಕೊಳ್ಳುತ್ತದೆ ಬಡತನವು ಎಲ್ಲ ವಸಂತವನ್ನು
ಕಳೆದುಕೊಳ್ಳುತ್ತಾನೆ ಮನುಷ್ಯನು ತನ್ನ ವಿಶ್ವಾಸಾರ್ಹತೆಯನ್ನು”
-ವಲಿ ದಕ್ಕನಿ
ಜೀವನ ಸ್ವಯಂ ಅನ್ವೇಷಣೆಯ ಪ್ರಯಾಣ. ನಾವು ಒಳಗೆ ಹೆಚ್ಚುಹೆಚ್ಚು ಪರಿಶೋಧಿಸುತ್ತಿದ್ದಂತೆ ಜಗತ್ತು ಅಷ್ಟೇ ಹೆಚ್ಚೆಚ್ಚು ಅರ್ಥವಾಗುತ್ತದೆ. ಸಂತೋಷ, ಸಂಭ್ರಮ ಎನ್ನುವುದು ಹೊರಗೆ ಹುಡುಕಿದರೆ ಸಿಗುವಂತದ್ದಲ್ಲ. ಅದು ನಮ್ಮೊಳಗೆ ಸುಪ್ತದೀಪ್ತಿಯಾಗಿದ್ದು, ಆವಿಷ್ಕಾರಕ್ಕಾಗಿ ಕಾಯುತ್ತಿರುತ್ತದೆ. ಕಾರಣ ಮನಸ್ಸು ಬೇಡದ ಆಲೋಚನೆಗಳಿಂದ ತುಂಬಿರುವಾಗ ಅದು ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತದೆ. ಅದೇ ಎಚ್ಚರವಾಗಿದ್ದಾಗ ತನ್ನ ಸ್ಪಷ್ಟತೆಯನ್ನು ಮರಳಿ ಪಡೆಯುತ್ತದೆ. ಉದಾತ್ತ ಮನಸ್ಸಿನವರು ಯಾವತ್ತೂ ಶಾಂತ ಮತ್ತು ಸ್ಥಿರತೆಯನ್ನು ಹೊಂದಿದ್ದರೆ ಚಿಕ್ಕ ಜನರು ಅಂದರೆ ಸಂಕುಚಿತ, ಸಣ್ಣ ಮನಸ್ಸಿನವರು ಯಾವಾಗಲೂ ಚಿಂತಿತರಾಗಿಯೇ ಉಳಿಯುತ್ತಾರೆ. ಅಂತೆಯೇ ಬುದ್ಧಿವಂತರು ಎಂದಿಗೂ ನಿರ್ಣಯಿಸುವುದಿಲ್ಲ. ಅವರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಭೂತಕಾಲದಲ್ಲಿ ನೆಲೆಸದೆ, ಭವಿಷ್ಯದ ಕನಸು ಕಾಣದೆ ; ಪ್ರಸ್ತುತ ಕ್ಷಣದಲ್ಲಿ ಮಾತ್ರ ಮನಸ್ಸನ್ನು ಕೇಂದ್ರೀಕರಿಸುತ್ತಾರೆ. ನಮ್ಮ ಜೀವನದ ನಿಜವಾದ ಸಾರವು ಸಂಪೂರ್ಣವಾಗಿ ಪ್ರಸ್ತುತದಲ್ಲಿದೆ. ನಮ್ಮ ನೋವು, ದುಗುಡ, ದುಮ್ಮಾನ ಎನ್ನುವಂತದ್ದು ಸ್ವತಃ ಶಾಲೆಯಾಗಿದ್ದು ನಮಗೆ ಅನುಪಮವಾದ ಪಾಠವನ್ನು ಕಲಿಸುತ್ತಲೆ ಇರುತ್ತವೆ. ಈ ಕಾರಣಕ್ಕಾಗಿಯೇ ನಮ್ಮ ಸಂತೋಷವು ಸುಂದರವಾದ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. ಮಾನವೀಯತೆಯು
ನಂಬಿಕೆ, ಭರವಸೆ ಮತ್ತು ಏಕತೆಯನ್ನು ಬಿತ್ತಿದಾಗ ಮಾತ್ರ ಸಂತೋಷದ ಉದ್ಯಾನವನವು ಅರಳುತ್ತದೆ, ಜೀವನಶ್ರದ್ಧೆಯು ಚಿಗುರುತ್ತದೆ. ಬದುಕಿನ ಬಂಡಿ ಸಾಗಲು ಕಾಯಕದ ರಸ್ತೆ ಬೇಕು. ಅದು ಹೇಗಿರಬೇಕು ಎನ್ನುವುದಕ್ಕಿಂತ ಅನ್ಯಾಯ, ಅಸತ್ಯ, ಅನೀತಿ, ಅಕ್ರಮ, ಅನೈತಿಕತೆ, ಅಪ್ರಾಮಾಣಿಕತೆಯಿಂದ ಕೂಡಿರಬಾರದು ಎಂಬುದಷ್ಟೇ ಮುಖ್ಯವಾಗುತ್ತದೆ. ಸಮಾಜದ ಪ್ರತಿಬಿಂಬವಾದ ಸಾಹಿತ್ಯವೂ ಇದನ್ನೇ ಹೇಳುತ್ತ, ಬಿತ್ತುತ ಬಂದಿದೆ. ವಿಶೇಷವಾಗಿ ಅನುಭಾವ, ಸೂಫಿ ಸಾಹಿತ್ಯ ಮಾನವೀಯತೆಯ ರಾಯಭಾರಿ ಎಂದರೆ ಕೇಳಲು ಮನಸ್ಸಿಗೆ ಒಂಥರಾ ಹಿತ ಎನಿಸುತ್ತದೆ. ಇನ್ನೂ ಸೂಫಿಸಂನ ಝಮಝಮ್ ನಲ್ಲಿ ಅರಳಿದ ಗಜಲ್ ಜಗತ್ತಿನಾದ್ಯಂತ ಪ್ರೀತಿಯ ಅತ್ತರ್ ಸಿಂಪಡಿಸುತ್ತಿದೆ. ಕಳೆದೊಂದು ದಶಕದಲ್ಲಿ ಈ ಅತ್ತರ್ ಗೆ ಮನಸೋಲದವರೇ ಇಲ್ಲ. ಹಾಗಾಗಿಯೇ ಇಂದು ಕನ್ನಡ ಸಾರಸ್ವತ ಲೋಕದಲ್ಲಿ ಗಜಲ್ ಪ್ರೇಮಿಗಳ ದಂಡು ಹುಬ್ಬೇರಿಸುವಂತೆ ಬೆಳೆಯುತಿದೆ. ಅವರುಗಳಲ್ಲಿ ಶ್ರೀಮತಿ ಸ್ಮಿತಾ ರಾಘವೇಂದ್ರ ರವರೂ ಕೂಡ ಒಬ್ಬರು.
ಶ್ರೀಮತಿ ಸ್ಮಿತಾ ರವರು ಮೇ ೨೩ ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹತ್ತಿರದ ಮಳವಳ್ಳಿಯಲ್ಲಿ ಕೃಷಿ ಕುಟುಂಬದ ಶ್ರೀ ಗಣೇಶ ಹೆಬ್ಬಾರ ಹಾಗೂ ಶ್ರೀಮತಿ ಸುಲೋಚನಾ ಹೆಬ್ಬಾರ ದಂಪತಿಗಳ ಮಗಳಾಗಿ ಜನಿಸಿದರು. ಪಿಯುಸಿ ಶಿಕ್ಷಣ ಮುಗಿಸಿರುವ ಇವರು ಉತ್ತರ ಕನ್ನಡ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಎನ್ನುವ ಗಂಗಾವಳಿ ನದಿ ತಟದ ಗ್ರಾಮದ ಕೃಷಿಕ ಶ್ರೀ ರಾಘವೇಂದ್ರ ಭಟ್ ಅವರೊಂದಿಗೆ ಮದುವೆಯಾಗಿ ತಮ್ಮನ್ನೂ ಬೇಸಾಯದಲ್ಲಿ ತೊಡಗಿಸಿಕೊಂಡು ಸಂತೃಪ್ತ ಜೀವನವನ್ನು ಸಾಗಿಸುತ್ತಿದ್ದಾರೆ. “ಬದುಕನ್ನು ಕೊಟ್ಟಿದ್ದು ಮತ್ತು ಅರ್ಥ ಮಾಡಿಸಿದ್ದು ನನಗೆ ಕೃಷಿ” ಎನ್ನುವ ಇವರಿಗೆ ಅಡುಗೆ ಮನೆಗಿಂತ ಕೃಷಿಯಲ್ಲಿಯೇ ಹೆಚ್ಚು ಆಸಕ್ತಿ ಎಂಬುದು ಅವರ ಬದುಕು, ಬರಹದಿಂದ ಮನವರಿಕೆಯಾಗುತ್ತದೆ. ಭೂಮಿತಾಯಿಯ ಸೇವೆಯೊಂದಿಗೆ ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರು ಕಥೆ, ಕವನ, ಭಾವಗೀತೆ, ಚುಟುಕು, ಲೇಖನ, ಹೈಕು ಹಾಗೂ ಗಜಲ್…ಹೀಗೆ ಹಲವು ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡುತ್ತಿದ್ದಾರೆ. ೨೦೧೯ ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿಗೆ ಕೊಡಮಾಡುವ ಸಹಾಯ ಧನ ಯೋಜನೆಯಡಿ ‘ಕನಸು ಕನ್ನಡಿ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಸಂಗೀತ, ಯಕ್ಷಗಾನ, ಜಾನಪದ ಸೇರಿ ಹಲವು ಬಗೆಯ ಕಲೆಯನ್ನು ಕರಗತ ಮಾಡಿಕೊಂಡಿರುವ ಶ್ರೀಮತಿ ಸ್ಮಿತಾ ರಾಘವೇಂದ್ರ ರವರು ತಾಳ ಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥದಾರಿಯಾಗಿಯೂ ಪಾತ್ರ ನಿರ್ವಹಿಸುವ ಮೂಲಕ ತಮ್ಮ ಹವ್ಯಾಸದ ಕ್ಷಿತಿಜವನ್ನು ವಿಸ್ತರಿಸಿದ್ದಾರೆ.
ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಅನೇಕ ಬರಹಗಳು ಪ್ರಕಟಗೊಂಡಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿ ಹಾಗೂ ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ವಾಚನ ಮಾಡಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಗುರುಕುಲ ಪ್ರತಿಷ್ಠಾನದ ‘ಸಾಹಿತ್ಯ ಶರಭ’ ಪ್ರಶಸ್ತಿ ಪ್ರಮುಖವಾಗಿದೆ.
ಗಜಲ್ ಎಂಬುದು ಯಾವ ಧರ್ಮಕ್ಕೂ ಸೇರಿಲ್ಲ. ಅದರ ಧರ್ಮವೇ ಪ್ರೀತಿ. ಪ್ರೀತಿಯಲ್ಲಿ ಬೀಳುವುದು ಜೀವನದ ಬಹು ದೊಡ್ಡ ಉನ್ನತಿ. ಪ್ರೀತಿಯಲ್ಲಿ ಎಲ್ಲರೂ ಸೇವಕರು, ಎಲ್ಲರೂ ರಾಜರು. ಅದರಲ್ಲಿ ತಾರತಮ್ಯಕ್ಕೆ ಆಸ್ಪದವೇ ಇಲ್ಲ. ಇನ್ನೂ ಮನುಷ್ಯ ಅಳೆಯಬಹುದಾದ ಹೃದಯವು ಹೃದಯವೇ ಅಲ್ಲ. ಈ ನೆಲೆಯಲ್ಲಿ ಪ್ರತಿಯೊಂದು ಉದಾರ ಹೃದಯವೂ ಗಜಲ್ ನ ದೇವಾಲಯ. ಇಂಥಹ ಗಜಲ್ ಮಧುರ ಭಾವದ ಅನುಭೂತಿ. ಇದು ಅಲೌಕಿಕದ ಸೆಲೆಯಲ್ಲಿ ಅರಳುವ ಲೌಕಿಕ ಜೀವನದ ಪ್ರತಿಬಿಂಬವಾಗಿದೆ. “ಸೂಫಿಸಂ ಎನ್ನುವುದು ಮನುಷ್ಯನು ತನ್ನನ್ನು ತಾನು ಅರಿತುಕೊಳ್ಳುವ ಮತ್ತು ಶಾಶ್ವತತೆಯನ್ನು ಸಾಧಿಸುವ ಜ್ಞಾನವಾಗಿದೆ” ಎಂಬ ಅಫಘಾನ ಲೇಖಕ ಮತ್ತು ಚಿಂತಕ ಇದ್ರೀಸ್ ಶಾ ರವರ ಮಾತು ಗಜಲ್ ನ ಜೀವಾಳವಾಗಿದೆ. ಈ ಸೆಲೆಯಲ್ಲಿ ನಾವು ಹೊರಗೆ ಸುಂದರವಾಗಿದ್ದರೆ ಜನರ ಕಣ್ಣುಗಳು ನಮ್ಮ ಮೇಲಿರುತ್ತವೆ. ಆದರೆ ನಾವು ಒಳಗೆ ಸುಂದರವಾಗಿದ್ದರೆ ಜನರ ಹೃದಯವು ನಮ್ಮ ಮೇಲೆ ಇರುತ್ತದೆ ಎಂಬುದನ್ನು ಗಜಲ್ ತನ್ನ ಅಶಅರ್ ಮೂಲಕ ಪ್ರತಿಧ್ವನಿಸುತ್ತ ಬಂದಿದೆ. ಈ ದಿಸೆಯಲ್ಲಿ ಸುಖನವರ್ ಶ್ರೀಮತಿ ಸ್ಮಿತಾ ರಾಘವೇಂದ್ರ ಭಟ್ ಅವರ ‘ಕನಸು ಕನ್ನಡಿ’ ಎಂಬ ಗಜಲ್ ಸಂಕಲನವನ್ನು ಗಮನಿಸಬಹುದು. ಈ ಸಂಕಲನದಲ್ಲಿ ಸುತ್ತಮುತ್ತಲ ಲೋಕ, ಕೃಷಿ ಕಾಯಕ, ಮನೆಕೆಲಸ, ಪ್ರಕೃತಿ, ಸಾಮಾನ್ಯ ಜನಜೀವನ, ಕುಟುಂಬ, ಮನೆ, ಮಕ್ಕಳು, ಯಾವುದೋ ಆರ್ತನಾದದ ಕೂಗಿಗೆ ಓಗೊಡುವ ಅಂತರಂಗ… ಹೀಗೆ ಎಲ್ಲವೂ ಹಾಸು ಹೊಕ್ಕಾಗಿ ತೆರೆದುಕೊಳ್ಳುತ್ತದೆ.
“ಮಂದಿರಕೋ ಮಸಣಕೋ ಮುಡಿಗೋ ಗಮ್ಯ ಯಾರಿಗೆ ಗೊತ್ತು
ತುಟಿ ಬಿರಿದು ನಗುವ ಹೂವಂತೆ ಬದುಕಿಬಿಡು ಸುಮ್ಮನೆ”
ಮನುಷ್ಯನ ಜೀವನ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ. ತುಂಬಾ ಮೌಲ್ಯಯುತವಾದದ್ದು ಹಾಗೂ ಅಷ್ಟೇ ನಿಗೂಢತೆಯ ಗೂಡು. ಯಾವಾಗ, ಎಲ್ಲಿ, ಹೇಗೆ, ಯಾರಿಂದ ಬದುಕು ಕವಲೊಡೆಯುತ್ತದೆ ಎಂದು ಹೇಳಲಾಗದು. ಆದರೆ ಒಂದು ಮಾತ್ರ ಹೇಳಬಹುದು, ಅದೆಂದರೆ ನಮಗೆ ಎದುರಾದ ಸನ್ನಿವೇಶಗಳನ್ನು ಪ್ರಜ್ಞಾವಂತಿಕೆಯಿಂದ ಸ್ವೀಕರಿಸುವುದು ಮತ್ತು ಎದುರಿಸುವುದು. ಇಲ್ಲಿ ಗಜಲ್ ಗೋ ಸ್ಮಿತಾ ರಾಘವೇಂದ್ರ ರವರು ಮನುಷ್ಯನು ಹೂವಿನಂತೆ ಜೀವನವನ್ನು ಸಾಗಿಸಬೇಕು ಎಂಬುದನ್ನು ಬಹು ಮಾರ್ಮಿಕವಾಗಿ ನುಡಿದಿದ್ದಾರೆ. ಹೂವಿಗೆ ತನ್ನ ಡೆಸ್ಟಿನಿ ಗೊತ್ತಿರುವುದಿಲ್ಲ, ಅದಕ್ಕಾಗಿ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಸದಾ ಪರಿಮಳವನ್ನು ಹರಡುತ್ತಲೇ ಇರುವಂತೆ ಬದುಕಬೇಕು ಎನ್ನುತ್ತಾರೆ.
“ತೊದಲು ನುಡಿಯಲಿ ತಡವರಿಸುವುದು ಪ್ರತಿ ಹೆಜ್ಜೆ
ಅಂಧಕಾರಕೆ ಜ್ಜಾನದೀವಿಗೆಯಾಗಲು ಬೇಕು ಗುರು”
ಕಾಲದ ತಿರುವಿನಲ್ಲಿ ಗುರು-ಶಿಷ್ಯರ ಸಂಬಂಧ ಹಚ್ಚ ಹಸಿರಾಗಿರದೆ ಹಳಸುತ್ತಿರುವುದು ನೇಸರನಷ್ಟೇ ಸ್ಪಷ್ಟ. ಆದರೆ ‘ದೀಪ’ ಬೆಳಕನ್ನು ನೀಡುವುದನ್ನು ಮರೆತಿಲ್ಲ, ಮರೆಯುವುದಿಲ್ಲ ಎಂಬುದು ಅಷ್ಟೇ ಸತ್ಯ! ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಹೆತ್ತವರ, ಸಮಾಜದ ಹಾಗೂ ಅವನ, ಅವಳ ಪಾತ್ರ ಒಂದು ತೂಕವಾದರೆ ಮತ್ತೊಂದು ತೂಕ ಅವರ ಗುರುಗಳದ್ದು. ತಪ್ಪು ಹೆಜ್ಜೆ ಇಡುವುದು ಕಲಿಕಾರ್ಥಿಯ ಸಾಮಾನ್ಯ ನಡೆಯಾದರೆ, ಅಷ್ಟೇ ಸಾಮಾನ್ಯ ಕ್ರಿಯೆ ಎಂದರೆ ಆ ಹೆಜ್ಜೆಯನ್ನು ಸರಿಪಡಿಸುವುದು. ಇಲ್ಲಿ ಸುಖನವರ್ ಶ್ರೀಮತಿ ಸ್ಮಿತಾ ರಾಘವೇಂದ್ರ ರವರು ಅಂಧಕಾರವನ್ನು ಕಳೆಯುವ ದೀವಿಗೆಯೆಂದರೆ ಅದು ಗುರು ಎಂಬುದನ್ನು ತುಂಬಾ ಅಭಿಮಾನದಿಂದ ಹಾಗೂ ಅಷ್ಟೇ ಉತ್ಪ್ರೇಕ್ಷೆಯಲ್ಲದೆ ಹೇಳಿದ್ದಾರೆ.
ನಮ್ಮನ್ನು ಮನುಷ್ಯರನ್ನಾಗಿಸುವುದು ನಮ್ಮ ತೋರಿಕೆಗಳಲ್ಲ, ಬದಲಾಗಿ ನಮ್ಮ ಹೃದಯಗಳು. ಶಾಂತಿ ಮತ್ತು ಅಸೂಯೆ ಯಾವತ್ತೂ ಒಂದೇ ಹೃದಯದಲ್ಲಿ ಇರಲು ಸಾಧ್ಯವಿಲ್ಲ. ಮುರಿದ ಹೃದಯವು ವಾಸಿಯಾದಾಗ, ಅದು ಪ್ರಪಂಚದ ಎಲ್ಲಕ್ಕಿಂತ ಬಲವಾಗಿರುತ್ತದೆ ಎಂಬುದನ್ನು ಗಜಲ್ ಅನಾದಿಕಾಲದಿಂದಲೂ ಸಾಬೀತು ಪಡಿಸುತ್ತ ಬಂದಿದೆ. ಶಾಂತಿಯುತ ವಿರಾಮದೊಂದಿಗೆ ಹೃದಯದ ಮೌಲ್ಯವು ಹೆಚ್ಚಾಗುತ್ತದೆ. ಸಾಂಸ್ಕೃತಿಕ ಲೋಕದಲ್ಲಿ ಹಾಡು ಮುಗಿದರೂ ಸಂಗೀತ ಮುಗಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಶಾಯರಾ ಶ್ರೀಮತಿ ಸ್ಮಿತಾ ರಾಘವೇಂದ್ರ ಭಟ್ ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
“ಯಾರಾದರೂ ಅರ್ಥ ಮಾಡುಕೊಳ್ಳುವಿರಾದರೆ ಒಂದು ಮಾತು ಹೇಳಲೇ
ಪ್ರೀತಿ ಎನ್ನುವುದು ಅಪರಾಧವಲ್ಲ ದೈವಾನುಗ್ರಹ”
-ಫಿರಾಕ್ ಗೋರಕಪುರಿ
ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ. ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
,