ಅಂಕಣ ಬರಹ
ವತ್ಸಲಾ ಶ್ರೀಶ
ನಾವುಮರೆತ ಮಹಿಳಾಸ್ವಾತಂತ್ರ್ಯ ಹೋರಾಟಗಾರರು
ಆಲದ ಮರ,ಉದಾದೇವಿ ಪಾಸಿ ಮತ್ತು ಬ್ರಿಟಿಷ್ ಸೈನ್ಯ
ಇತಿಹಾಸದ ಕೆಲವು ಪುಟಗಳು ಮಸುಕಾಗಿದೆಯೋ ಅದೃಶ್ಯವಾಗಿದೆಯೋ ಅರಿವಾಗುತ್ತಿಲ್ಲ…ಇತಿಹಾಸಕಾರರೇಕೆ ಇದರ ಬಗ್ಗೆ ತಾತ್ಸಾರ ತೋರುತ್ತಿರುವರೋ ಅರ್ಥವಾಗುತ್ತಿಲ್ಲ..ಪ್ರಾಣದ ಹಂಗು ತೊರೆದು ಭಾರತಾಂಬೆಯ ಮಡಿಲಿನಲ್ಲಿ ಮಡಿದ ಅವಳ ಮಕ್ಕಳ ರಕ್ತಕ್ಕೆ ಪ್ರತಿ ರಕ್ತ ತರ್ಪಣ ನೀಡಿ ಮಣ್ಣಾದವರ ಹೆಸರುಗಳೇಕೆ ಮರೆಯಾಯ್ತು?..ಅವರ ವೀರ ಕತೆಗಳನ್ನು ಒಂದೆರಡು ಸಾಲಿನಲ್ಲಿ ಮುಗಿಸಿ ಬಿಡುವ ತಾರತಮ್ಯವೇಕೆ?..ಅಂತಹ ವೀರರ ಕತೆಗಳು ಯುವ ಪೀಳಿಗೆಗಳಿಗೆ ಹಾಗೂ ಮುಂದಿನ ಜನಾಂಗಕ್ಕೆ ತಲುಪಿಸುವ ಕೆಲಸವಾಗಬೇಕಿದೆ…
ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ಮಡಿದ ವೀರ ವನಿತೆ ಉದಾ ದೇವಿಯ ಸಾಹಸದ ಕತೆಯಿದು.
ಲಕ್ನೋದ ಬಳಿಯ ಉಜಿರಿಯಾವ್ ಗ್ರಾಮದ ಬಳಿ ದಲಿತ ವರ್ಗವಾದ ಪಾಸಿ ಎಂಬ ಜಾತಿಯ ಅತೀ ಬಡ ಕುಟುಂಬದಲ್ಲಿ ಉದಾ ದೇವಿಯ ಜನನವಾಗುತ್ತದೆ. ಇವಳು ಬಾಲ್ಯದಲ್ಲಿಯೇ ಧೈರ್ಯವಂತಳಾಗಿರುತ್ತಾಳೆ.ಹಿಂದಿನ ಕಾಲದ ಸಂಪ್ರದಾಯದಂತೆ ಅವಳ ಮದುವೆ ಸಣ್ಣ ವಯಸ್ಸಿನಲ್ಲಿ ಮಕ್ಕಾ ಪಾಸಿ ಎಂಬ ಯುವಕನೊಂದಿಗೆ ನಡೆಯುತ್ತದೆ. ಹಾಗೂ ಅಲ್ಲಿ ಅವಳಿಗೆ ಜಗರಾಣಿ ಎಂಬ ಹೆಸರಿಡಲಾಗುತ್ತದೆ. ಗಂಡನಾದ ಮಕ್ಕ ಪಾಸಿ ಅವಧ್ ನವಾಬನಾದ ವಾಜಿದಲಿ ಶಾಹ್ ನ ಸೈನ್ಯದಲ್ಲಿ ಸೈನಿಕನಾಗಿದ್ದ. ಆಗ ಅಲ್ಲಿ ಬ್ರಿಟಿಷರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಅದಕ್ಕಾಗಿ ವಾಜಿದ್ ಅಲೀಷಹ ಮಹಿಳಾ ಸೈನಿಕರ ತಂಡವೊಂದಬನ್ನು ರಚಿಸಿದನು. ಅಲ್ಲಿ ಉದಾದೇವಿ ಸಾಮಾನ್ಯ ಸೈನಿಕಳಾಗಿ ಸೈನ್ಯ ಕ್ಕೆ ಸೇರುತ್ತಾಳೆ.ಅಲ್ಲಿ ಅವಳಿಗೆ ಸೈನ್ಯದ ತರಬೇತಿ ನಡೆಯಿತು. ಅವಳ ಧೈರ್ಯ ಪರಾಕ್ರಮವನ್ನು ಕಂಡ ನವಾಬ್ ಹಾಗೂ ಅವನ ಹೆಂಡತಿ ,ಹಜರತ್ ಬೇಗಂ ಅವಳಿಂದ ಪ್ರೇರಣೆಗೆ ಒಳಗಾದರು ಎಂದೇ ಹೇಳಲಾಗಿದೆ..
ಅವಳ ಧೈರ್ಯ ಸಾಹಸವನ್ನು ಕಂಡ ಜನರು ಅಗಲೇ ಅವಳ ಮೇಲೆ ಹಾಡುಗಳನ್ನು ಕಟ್ಟಿ ಅವಳ ಗುಣಗಾನ ಮಾಡುತ್ತಿದ್ದರು. ಅದರಲ್ಲೊಂದು…
ಕೋಯಿ ಉನ್ ಕೋ ಹಬ್ಸಿನ್ ಕೆಹ್ತಾ
ಕೋಯಿ ಕೆಹ್ತಾ ನೀಚ್ ಅಚೂದ್
ಅಬ್ಲಾ ಕೋಯಿ ಇನ್ಹೇ ಬತ್ ಲಾಯೆ
ಕೋಯಿ ಕಹೇ ಉನ್ಹೇ ಮಜ್ಬೂತ್
ಹಬ್ಸೀನ್= ಆಫ್ರಿಕನ್ ಸೈನಿಕ
ಕೆಲ ದಿನಗಳಲ್ಲಿ ವಾಜಿದಲಿ ಷಾಹ್ ನು ಹಜರತ್ ಬೇಗಂ ಸೇರಿ ತನ್ನ ೧೩ ಜನ ರಾಣಿಯರಿಗೆ ತಲಾಖ್ ನೀಡಿ ನೇಪಾಳಕ್ಕೆ ಹೋಗುತ್ತಾನೆ.. ಹಜರತ್ ಬೇಗಂ ಆಗ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾಳೆ. ಅಸಾಧಾರಣ ಶೌರ್ಯ ಹಾಗೂ ಸಾಹಸಿ ಮಹಿಳೆಯಾದ ಉದಾ ದೇವಿಯನ್ನು ಮಹಿಳೆಯರ ತಂಡದ ಕಮಾಂಡರ್ ಆಗಿ ನೇಮಿಸುತ್ತಾಳೆ.೧೦ ಮೇ ೧೮೫೭ ನೇ ವರ್ಷ. ಉತ್ತರ ಭಾರತದಲ್ಲಿ ಆಂಗ್ಲರ ವಿರುದ್ಧ ಎಲ್ಲರೂ ಹೋರಾಟಕ್ಕೆ ಇಳಿದಿದ್ದರು. ಹೋರಾಟದ ತೀವ್ರತೆ ಎಷ್ಟಿತ್ತೆಂದರೆ ಲಕ್ನೋದ ಹತ್ತಿರವಿರುವ ಚಿನ್ಹಟ್ ಎಂಬಲ್ಲಿ ಜೂನ್ ೧೦, ೧೮೫೭ ರಂದು ಬ್ರಿಟಿಷರಿಗೆ ಹಾಗೂ ಕ್ರಾಂತಿಕಾರಿ ಗಳ ನಡುವೆ ಭೀಕರ ಯುದ್ದ ಸಂಭವಿಸುತ್ತದೆ. ಹೆನ್ರಿ ಲಾರೆನ್ಸ್ ನೇತೃತ್ವದ ಬ್ರಿಟಿಷ್ ಸೈನ್ಯಕ್ಕೆ ಸೋಲು ಸಂಭವಿಸಿತು. ಹಾಗೂ ಇದರಿಂದ ಬ್ರಿಟಿಷರಿಗೆ ಮುಖಭಂಗವಾಯಿತು. ಇದೇ ಯುದ್ಧದಲ್ಲಿ ಉದಾ ದೇವಿಯ ಪತಿಯಾದ ಮಕ್ಕಾ ಪಾಸಿ ವೀರ ಮರಣವನ್ನು ಹೊಂದುತ್ತಾನೆ. ಇದರಿಂದ ಉದಾದೇವಿಗೆ ತುಂಬಾ ನೋವಾಗುತ್ತದೆ. ತನ್ನ ಪತಿಯ ಸಾವಿಗೆ ಉತ್ತರವಾಗಿ ತಾನು ಏನಾದರೂ ಮಾಡಬೇಕೆಂದು ಅವಳು ಯೋಚಿಸುತ್ತಾಳೆ. ಹಾಗೂ ತನ್ನ ಪತಿ ಯ ಶವದೆದುರು ಪತಿಯನ್ನು ಕೊಂದವರನ್ನು ಮುಗಿಸುವೆನೆಂಬ ಪ್ರತಿಜ್ಞೆ ಮಾಡುತ್ತಾಳೆ. ಎಂದು ಇತಿಹಾಸದಲ್ಲಿ ಹೇಳಲಾಗುತ್ತದೆ. ತನ್ನ ಪತಿಯ ಸಾವಿನ ಪ್ರತೀಕಾರವನ್ನು ತೀರಿಸಿಕೊಳ್ಳಲು ಉದಾ ದೇವಿ ಸರಿಯಾದ ಸಮಯವನ್ನು ಕಾಯುತ್ತಿದ್ದಳು. ಅದಾಗಲೇ ಸೋತು ಹೋಗಿದ್ದ ಬ್ರಿಟಿಷರು ಸೇಡು ತೀರಿಸಿಕೊಳ್ಳಲು ಕುಟಿಲ ಷಡ್ಯಂತ್ರವೊಂದನ್ನು ಮಾಡುತ್ತಾರೆ. ಸಿಕಂದರಾ ಬಾಗ್ ನಲ್ಲಿ ಎರಡು ಸಾವಿರ ಕ್ರಾಂತಿಕಾರಿ ಸೈನಿಕರು ಆಶ್ರಯ ಪಡೆದಿರುವುದು ಅವರಿಗೆ ತಿಳಿಯುತ್ತದೆ.. 14 ನವೆಂಬರ್ 1857ರಲ್ಲಿ ಕೋಲಿನ್ ಕ್ಯಾಂಪ್ವೆಲ್ ನಾಯಕತ್ವದಲ್ಲಿ ಬ್ರಿಟಿಷ್ ಸೇನೆ ಸಿಕಂದರ ಭಾಗ್ ಗೆ ಮುತ್ತಿಗೆ ಹಾಕಿತು.ಅಲ್ಲಿ ಕ್ರಾಂತಿಕಾರಿ ಗಳು ನಿದ್ರೆಯಲ್ಲಿರುವಾಗ ಅವರ ಮೇಲೆ ಆಕ್ರಮಣ ಮಾಡಿತು.ಆಗ ಅಲ್ಲಿ ಉದಾ ದೇವಿಯ ಮಹಿಳಾ ಸೈನ್ಯ ವೂ ಇತ್ತು. ಯುದ್ದದ ಸೂಚನೆಯೂ ಇಲ್ಲದೆ ಮೋಸದಿಂದ ಬ್ರಿಟಿಷರು ಮಾಡಿದ ದಾಳಿಯಿಂದ ಸಾವಿರಾರು ಕ್ರಾಂತಿಕಾರಿಗಳು ಮರಣ ಹೊಂದಿದರು. ಸೋಲು ಹತ್ತಿರದಲ್ಲೇ ಇರುವಂತೆ ಉದಾ ದೇವಿಗೆ ಅನಿಸಿತು. ಆದರೂ ಕ್ರಾಂತಿಕಾರಿಗಳೆಲ್ಲರೂ ವೀರಾವೇಶದಿಂದ ಬ್ರಿಟಿಷರೊಡನೆ ಸೆಣಸಾಡಿದರು ಎಂಬ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಕೊನೆಗೆ ಬ್ರಿಟಿಷ್ ಸೈನ್ಯ ಆ ಪ್ರದೇಶವನ್ನು ತನ್ನ ಪೂರ್ಣ ಹಿಡಿತದಲ್ಲಿಟ್ಟುಕೊಂಡು ನಿಯಂತ್ರಿಸಿತು. ಆದರೂ ಈ ಸಮಯವನ್ನು ಹೇಗಾದರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಉದಾ ದೇವಿ ಯೋಚಿಸಿದಳು. ಬ್ರಿಟಿಷರನ್ನು ಹಿಮ್ಮೆಟ್ಟಿಸುವುದಕ್ಕಾಗಿಯೂ ತನ್ನ ಪತಿಯ ಸಾವಿನ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿಯೂ ಇದೇ ಸರಿಯಾದ ಸಮಯ ಎಂದು ಅವಳು ಯೋಚಿಸುತ್ತಾಳೆ. ಅವಳು ಪುರುಷರ ವೇಷವನ್ನು ಧರಿಸಿ ಕೈಯಲ್ಲಿ ಬಂದೂಕು ಹಿಡಿಯುತ್ತಾಳೆ .ತನ್ನ ಮೈಯನ್ನೆಲ್ಲಾ ಆಲದ ಮರದ ಎಲೆಗಳಿಂದ ಮುಚ್ಚಿ ಆಲದ ಮರವೊಂದನ್ನು ಏರುತ್ತಾಳೆ.. ಅದರ ಒಂದು ಕೊಂಬೆಯಲ್ಲಿ ಕುಳಿತುಕೊಳ್ಳುತ್ತಾಳೆ. ಬ್ರಿಟಿಷರ ಸೈನ್ಯ ಮೈದಾನದ ಒಂದು ಭಾಗದಿಂದ ಬರುವುದನ್ನೇ ಕಾಯುತ್ತಿದ್ದ ಉದಾದೇವಿ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಗುಂಡಿನ ಮಳೆ ಗರೆಯುತ್ತಾಳೆ. ಆಲದ ಮರದ ಎಲೆಗಳ ಮಧ್ಯದಿಂದ ಗುಂಡಿನ ಸುರಿಮಳೆ ನಡೆಯುತ್ತದೆ.. ಉದಾದೇವಿ ಇಬ್ಬರು ದೊಡ್ಡ ಬ್ರಿಟಿಷ್ ಅಧಿಕಾರಿಗಳಾದ ಕೂಪರ್ ಮತ್ತು ಲ್ಯಾಮ್ಸಟಿನ್ ಸಮೇತ 32 ಬ್ರಿಟಿಷ್ ಸೈನಿಕರನ್ನು ಹೊಡೆದುರುಳಿಸುತ್ತಾಳೆ…ಬ್ರಿಟಿಷರಿಗೆ ಗುಂಡಿನ ದಾಳಿಯಾಗುವುದು ತಿಳಿಯುತ್ತಿತ್ತು. ಎಲ್ಲಿಂದ ಎಂಬುದು ಗೊತ್ತಾಗುತ್ತಿರಲಿಲ್ಲ. ಮರದಿಂದ ಗುಂಡಿನ ಸುರಿಮಳೆ ಆಗುತ್ತಿತ್ತು ಹೊರತು ಅಲ್ಲಿ ಆ ದಟ್ಟ ಮರದಲ್ಲಿ ಯಾರು ಇರುವರು ಎಂದು ತಿಳಿಯುವುದಿಲ್ಲ. ಬ್ರಿಟಿಷ್ ಅಧಿಕಾರಿ ಮೇಜರ್ ಡೌನ್ ಸನ್ ಆ ಕಡೆಗಾಗಿ ಬರುತ್ತಾನೆ . ಅಲ್ಲಿ ಸತ್ತು ಬಿದ್ದಿದ್ದ ಸೈನಿಕರನ್ನು ನೊಡಿ ಕಕ್ಕಾ ಬಿಕ್ಕಿಯಾದನು.ಚತುರ ಸೇನಾನಿ ಕ್ಯಾಪ್ಟನ್ ವ್ಯಾಲೆಸ್ ನನ್ನು ಕರೆಯುತ್ತಾನೆ. ಮರದ ಕೆಳಗೆ ಹೋದ ಕ್ಯಾಪ್ಟನ್ ವ್ಯಾಲೆಸ್ ಮರದಲ್ಲಿ ಒಬ್ಬ ಸೈನಿಕ ಕುಳಿತಿದ್ದಾನೆ ಅವನು ಗುಂಡಿನ ದಾಳಿ ಮಾಡಿದ್ದಾನೆ ಎಂದು ಕೂಗಿ ಹೇಳುತ್ತಾನೆ ಮೇಜರ್ ಮರದೆಡೆಗೆ ಗುಂಡಿನ ದಾಳಿ ಮಾಡಲು ಸೂಚನೆ ನೀಡುತ್ತಾನೆ. ಹಾಗೂ ಗುಂಡಿನ ದಾಳಿಮಾಡಲಾಗುತ್ತದೆ. ಆಗ ಉದಾದೇವಿ ಬಳಿಯಲ್ಲಿ ಮದ್ದುಗುಂಡುಗಳು ಖಾಲಿಯಾಗಿರುತ್ತದೆ..ಪ್ರತಿದಾಳಿ ಸಾಧ್ಯವಾಗುವುದಿಲ್ಲ. ಅವಳ ದೇಹಕ್ಕೆ ಗುಂಡು ತಾಗುತ್ತದೆ .ಅವಳಿಗೆ ವೀರ ಮರಣ ಪ್ರಾಪ್ತವಾಗುತ್ತದೆ.ಅವಳು ಕೆಳಕ್ಕೆ ಬಿದ್ದ ಕೂಡಲೇ ಬ್ರಿಟಿಷ್ ಸೈನಿಕರು ಅವಳನ್ನು ಸುತ್ತುವರಿಯುತ್ತಾರೆ.. ಬಿದ್ದ ರಭಸಕ್ಕೆ ಜಾಕೆಟ್ ಬಿಚ್ಚಿ ಕೊಳ್ಳುತ್ತದೆ.ಪ್ಯಾಂಟನ್ನು ಧರಿಸಿ ಅದರ ಮೇಲೆ ಕೋಟನ್ನು ಹಾಕಿ ಗಂಡಸಿನ ವೇಷದಲ್ಲಿದ್ದ ಉದಾದೇವಿಯನ್ನು ಅವನೊಬ್ಬ ಪುರುಷ ಸೈನಿಕ ಎಂದು ತಿಳಿದಿದ್ದರು. ಡೌನ್ಸನ್ ಮತ್ತು ವ್ಯಾಲೆಸ್ ಹತ್ತಿರ ಬಂದಾಗ ರಕ್ತಸಿಕ್ತವಾಗಿ ದೇಹ ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದ ಆ ಸೈನಿಕ ಒಬ್ಬ ಮಹಿಳೆ ಎಂದು ಗೊತ್ತಾದಾಗ ಆ ಅಧಿಕಾರಿಗಳು ದಂಗಾಗಿ ಹೋಗುತ್ತಾರೆ.. ಅವಳ ಶೌರ್ಯ ಪರಾಕ್ರಮವನ್ನು ಕಂಡ ಬ್ರಿಟಿಷ್ ಅಧಿಕಾರಿ ಕ್ಯಾಂಪ್ವಲ್ ತನ್ನ ತಲೆಯಿಂದ ಹ್ಯಾಟ್ ತೆಗೆದು ಸಲಾಂ ಮಾಡಿ ಅವಳಿಗೆ ಗೌರವ ಸಲ್ಲಿಸಿದನು. ಹಾಗೂ ಶ್ರದ್ದಾಂಜಲಿ ಅರ್ಪಿಸಿದನು.ಅವಳೊಬ್ಬಳು ಶೌರ್ಯ ಸಾಹಸಿ ಮಹಿಳೆ ಎಂದು ತಿಳಿದ ಅಧಿಕಾರಿ ಅವಳ ಸಾಹಸಕ್ಕೆ ಆಶ್ಚರ್ಯ ಚಕಿತನಾಗಿ ಭಾವುಕತೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಾನೆ..ಹೇಳುತ್ತಾನೆ.. ಆ ಮರದಲ್ಲಿ ಅವಿತು ಕುಳಿತು ಯುದ್ದ ಮಾಡಿದವಳು ಇಂತಹ ಪರಾಕ್ರಮಿ ಮಹಿಳೆ ಎಂದು ಗೊತ್ತಿದ್ದರೆ ನನಗೆ ಎಷ್ಟು ಸಾರಿ ಸಾವು ಬರುವುದಾದರೂ ನಾನು ಎದೆಯೊಡ್ಡುತ್ತಿದ್ದೆ..ಹಾಗೂ ಅವಳ ಮೇಲೆ ಪ್ರತಿದಾಳಿ ಮಾಡಲು ಖಂಡಿತಾ ಹೇಳುತ್ತಿರಲಿಲ್ಲ ಎನ್ನುತ್ತಾನೆ..ಆದರೆ ಅಂದು ಅವಳಲ್ಲಿ ಗುಂಡುಗಳು ಬಾಕಿ ಇದ್ದಿದ್ದರೆ ಡೌನ್ ಸನ್ ಮತ್ತು ವ್ಯಾಲೆಸ್ ಬದುಕುಳಿಯುತ್ತಿರಲಿಲ್ಲ. ಉದಾ ದೇವಿಯ ಈ ಧೈರ್ಯ ಸಾಹಸಕ್ಕೆ ಭಾರತದ ಇತಿಹಾಸಕಾರರು ಸರಿಯಾದ ಮನ್ನಣೆ ನೀಡಲಿಲ್ಲ ಎಂದು ಹೇಳಬಹುದು. ಈ ವಿಷಯವನ್ನು ಭಾರತದಲ್ಲಿ ಅಷ್ಟು ದೊಡ್ಡದಾಗಿ ಪತ್ರಿಕೆಗಳು ಪ್ರಕಟ ಮಾಡದಿದ್ದರೂ ಬ್ರಿಟಿಷ್ ಪತ್ರಕರ್ತರು ಹಾಗೂ ಅಧಿಕಾರಿಗಳು ಈ ಒಂದು ಘಟನೆಯನ್ನು ಪತ್ರಿಕೆಗಳಲ್ಲಿ ಬರೆದರು. ಬ್ರಿಟಿಷ್ ಸಾರ್ಜೆಂಟ್ ಫೋಕ್ಸ್ ಮಿಚೆಲ್ ಅವಳ ಹೆಸರನ್ನು ನಮೂದಿಸದೆ ಸಿಕಂದರಾ ಬಾಗ್ ನಲ್ಲಿ ಆಲದ ಮರದಲ್ಲಿ ಒಬ್ಬ ಮಹಿಳೆಯ ಹೋರಾಟವನ್ನು ದಾಖಲಿಸಿದ್ದಾರೆ. ಅದರಲ್ಲಿ 32 ಬ್ರಿಟಿಷ್ ಅಧಿಕಾರಿಗಳನ್ನು ಕೊಂದ ಬಳಿಕ ವೀರ ಮರಣವನ್ನು ಅಪ್ಪಿದ ಮಹಿಳೆಯ ವಿವರಗಳು ಇದೆ. ತತ್ಕಾಲೀನ ಸಂಪಾದಕರಾದ ಲಂಡನ್ ನ ವಿಲಿಯಂ ಹಾರ್ವರ್ಡ್ ಸೆಲ್ ಈ ಹೋರಾಟದ ಡಿಸ್ಪ್ಯಾಚ್ ಲೆಟರ್ ನಲ್ಲಿ ಪುರುಷ ವೇಷ ಧರಿಸಿ ಬ್ರಿಟಿಷ್ ಸೈನ್ಯದ ಮೇಲೆ ಆಲದ ಮರದಲ್ಲಿ ಕುಳಿತು ಆಕ್ರಮಣ ಮಾಡಿದ ಈ ಮಹಿಳೆಯ ಹೋರಾಟದ ಕಥೆ ಹಾಗೂ ಈ ಘಟನೆಯಿಂದ ಬ್ರಿಟಿಷ್ ಸೈನ್ಯ ದಂಗಾಗಿ ಹೋಗಿತ್ತು ಎಂಬ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಆಗ ಇಂಗ್ಲೆಂಡಿನ ಪತ್ರಿಕೆಗಳಲ್ಲಿಯೂ ಕೂಡ ಉದಾ ದೇವಿಯ ವೀರಗಾಥೆಯ ಬಗ್ಗೆ ಪ್ರಸಾರವಾಗಿದೆ ಎನ್ನಲಾಗುತ್ತಿದೆ. ಲಂಡನ್ ಟೈಮ್ಸ್ ನಲ್ಲಿ ಪ್ರಕಟವಾದ ವಿಷಯಗಳ ಆಧಾರದ ಮೇಲೆಯೇ ಕಾರ್ಲ್ ಮಾರ್ಕ್ಸ್ ತಮ್ಮ ಟಿಪ್ಪಣಿಯಲ್ಲಿ ಸಿಕಂದರ ಭಾಗ ಬಗ್ಗೆ ಉಲ್ಲೇಖಿಸಿದ್ದಾರೆ. ನಾವು ಇಂತಹ ವಿಷಯಗಳ ಬಗ್ಗೆ ಓದುವಾಗ ಆ ಕಾಲಘಟ್ಟಕ್ಕೆ ನಮ್ಮನ್ನು ನಾವು ಕೊಂಡೊಯ್ಯಬೇಕು..ಬರೀ 3೦ ವರ್ಷಗಳ ಹಿಂದಿನ ನಮ್ಮ ಬದುಕು ಯೋಚಿಸಿದರೇ ಇಂದಿಗೂ ಅಂದಿಗೂ ಇರುವ ವ್ಯತ್ಯಾಸವನ್ನು ನಾವು ಗಮನಿಸಬಹುದು..ಇದು ಆಗಿರುವುದು ಹೆಚ್ಚು ಕಡಿಮೆ ನೂರೈವತ್ತು ವರ್ಷಗಳ ಹಿಂದೆ ..ಆಗಿನ ಕಾಲದಲ್ಲಿ ಸರಕು ಸಾಗಾಣಿಕೆ..ಓಡಾಟ..ಇಂತಹ ಚಟುವಟಿಕೆಗಳಿಗೆ ಬೇಕಾದ ಹಣಕಾಸು ಆಹಾರಧಾನ್ಯಗಳ ಸಂಗ್ರಹ..ಮಾಹಿತಿ ಸಂಗ್ರಹಣೆ..ರವಾನೆ..ಇವುಗಳೆಲ್ಲದರ ಬಗ್ಗೆ ಯೋಚಿಸಿದಾಗ ಇಂತಹ ಒಂದು ಹೋರಾಟಕ್ಕೆ ದೇಶಪ್ರೇಮಿ ಗಳು ಅದೆಷ್ಟು ಕಷ್ಟ , ಸವಾಲುಗಳನ್ನು ಎದುರಿಸಿರಬಹುದು ಎಂದು ಅಲೋಚನೆಗೆ ಬೀಳುವಂತಾಗುತ್ತದೆ.. ಯಾವುದೇ ಲಾಭವಿಲ್ಲದೆ ಬರೀ ದೇಶಕ್ಕಾಗಿ ಹೋರಾಡಿದ ಆ ನಿಸ್ವಾರ್ಥ ದೇಶಪ್ರೇಮಿಗಳ ಹೋರಾಟದ ರೋಚಕ ಕತೆಗಳು ದೇಶದ ಎಲ್ಲಾ ಜನರಿಗೂ ಮುಟ್ಟುವುದರಲ್ಲಿ ವಿಫಲವಾಗಿದೆ ಎನ್ನಬಹುದು…ದಿವಂಗತ ಪಾಸಿ ಬಾಬು ರಾವ್ ಸಹಾಯ್ ಚೌಧರಿ (ಮಾಜಿ ಎಮ್.ಎಲ್. ಸಿ) ಮಾತಾ ಉದಾ ದೇವಿಯ ಮರಿಮಗನಾಗಿದ್ದರು..ಉದಾದೇವಿಯ ವಂಶಸ್ಥರು ಈಗಲೂ ಲಕ್ನೋ ದ ಹುಸೇನ್ ಜಂಗ್ ಚೌರಾಸಿಯ ಬಳಿ ವಾಸಿಸುತ್ತಿದ್ದಾರೆ. ಮಾತಾ ಉದಾದೇವಿಯ ಮರಿಮಗಳಾದ ಶ್ರೀಮತಿ ರಾಜೇಶ್ವರಿ ದೇವಿ ಪಾಸಿ ಸಮಾಜದ ಕಾರ್ಯಕ್ರಮ ಗಳಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸುತ್ತಾರೆ. ಇತ್ತೀಚೆಗೆ ಮಾತಾ ಉದಾ ದೇವಿಯ ಮೂರ್ತಿ ಸಿಕಂದರ ಬಾಗ್ ನಲ್ಲಿ ಸ್ಥಾಪಿತವಾಗಿದೆ. ಮಾತಾ ಉದಾ ದೇವಿ ಭಾರತೀಯರ ಹೆಮ್ಮೆ ..ಆದರೆ ಇತಿಹಾಸದ ಪುಟಗಳಲ್ಲಿ ಮಾತಾ ಉದಾದೇವಿ ಹೆಸರು ಅದೃಶ್ಯವಾಗಿರುವುದು ಖೇದವೇ ಸರಿ..
(ಆಧಾರ: ನ್ಯೂಸ್ ಚಾನಲ್ಸ್, ಅಂತರ್ಜಾಲ)
———————————————
ವತ್ಸಲಾ ಶ್ರೀಶ
ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ ಮೊದಲ ಗಜ಼ಲ್ ಕೃತಿಯಾಗಿ ಹೊರಬಂದಿದೆ.