ಹಮೀದಾ ಬೇಗಂ ದೇಸಾಯಿಯವರ ಬೇಗಂ ಗಜಲ್ ಗುಚ್ಛ ಅವಲೋಕನ ಶಬಾನಾ ಅಣ್ಣಿಗೇರಿ

ಪುಸ್ತಕ ಸಂಗಾತಿ

ಹಮೀದಾ ಬೇಗಂ ದೇಸಾಯಿಯವರ

ಬೇಗಂ ಗಜಲ್ ಗುಚ್ಛ

ಅವಲೋಕನ

ಗಜಲ್ ಮೂಲತಃ ಅರಬಿ ಶಬ್ದ. ಹೆಂಗಸರೊಡne ಮಾತನಾಡುವುದು, ಸಂಭಾಷಿಸುವುದು,ಪ್ರೇಮ,ಮೋಹ ,ಅನುರಾಗ ವ್ಯಕ್ತಪಡಿಸುವುದು ಎಂದು ಅರ್ಥ. ಗಜಲ್ ಉರ್ದು ಕಾವ್ಯದ ಪ್ರತಿಷ್ಠೆ. ದ್ವಿಪದಿಗಳಿಂದ ರಚಿತವಾದರೂ ಇದರ ಮೂಲ ಈರಾನ್ ನ ಚಾಮ ಎಂಬ ಕಾವ್ಯ ಪ್ರಕಾರದಿಂದ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಭಾರತಕ್ಕೆ ಪ್ರವೇಶಿಸಿದ ಗಜಲ್ ನಲ್ಲಿ ಈ ದೇಶದ ರೀತಿ,  ನೀತಿ ,ಹಸಿರು, ಗಾಳಿ ,ನೆಲ,ಜಲ ಹೀಗೆ ಅನೇಕ ವಿಷಯಗಳನ್ನೊಳಗೊಂಡು ಇದು ಭಾರತೀಯ ಕಾವ್ಯವಾಗಿದೆ. ಉರ್ದು ಭಾಷೆಯ ಗಜಲ್ ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರು ಶಾಂತರಸರು.ಅವರು ಉರ್ದು ಭಾಷೆಯನ್ನು ಅಭ್ಯಾಸ ಮಾಡಿರುವುದರಿಂದ ಇದು ಸಾಧ್ಯವಾಯಿತು. ಒಂದು ದ್ವಿಪದಿ ಗಜಲಿನ ಒಂದು ಅಂಗವಾಗಿರುವಂತೆ ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ. ಗಜಲ್ ನಲ್ಲಿ ಮತ್ಲಾ ,ಕಾಫಿಯಾ,ರದೀಫ್,ಮಕ್ತಾ ಎಂಬ ನಾಲ್ಕು ಅಂಗಗಳಿರುತ್ತವೆ.ಗಜಲ್ ಒಂದು ಪ್ರಸಿದ್ಧ ಮತ್ತು ಪರಿಶುದ್ಧ ಕಾವ್ಯ. ಪ್ರೇಮ ವಿಷಯವನ್ನು ಇಷ್ಟು ವ್ಯಾಪಕವಾಗಿ ಸಮಾಲೋಚಿಸಿದ ಅಥವಾ ಬೋಧಿಸಿದ ಕಾವ್ಯ ಪ್ರಕಾರ ಇನ್ನೊಂದಿಲ್ಲ.ಈ ವಿಷಯವನ್ನು ಒಬ್ಬ ಶಾಯರ್ ಅಥವಾ ಗಜಲ್ ಕಾರರು ನಿರೂಪಿಸುವಲ್ಲಿ ತೋರುವ ಕಾಳಜಿ, ತನ್ಮಯತೆ ಬೆರಗುಗೊಳಿಸುವಂತದ್ದು. ನಜೀರ್ ಚಂದಾವರ,ಎಚ್.ಎಸ್.ಮುಕ್ತಾಯಕ್ಕ ,ಡಾ ಬಸವರಾಜ ಸಬರದ, ಚಿದಾನಂದ ಸಾಲಿ, ಆರಿಫ್ ರಾಜಾ, ಶಾರದಾ ಮುಳ್ಳೂರು, ಡಾ ದಸ್ತಗೀರ್ ಸಾಬ್ ದಿನ್ನಿ ,ಹೇಮಲತಾ ವಸ್ತ್ರದ ಇನ್ನೂ ಹಲವು ಕನ್ನಡದ ಕವಿಗಳು ಗಜಲ್ ಬರವಣಿಗೆಯನ್ನು ಮುಂದುವರೆಸಿದ್ದಾರೆ. ಗಜಲ್ ಕಾವ್ಯ ಪರಂಪರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ.ಅಲ್ಲದೇ ಈಗ ಉಜ್ವಲ ಭವಿಷ್ಯವೂ ಕಾದಿದೆ ಎನ್ನಬಹುದು.
   ಹೆಣ್ಣೆಂದರೆ ನೋಡುವುದು ದುನಿಯಾ ಗುಲಾಮಳೆಂದು
   ಹೆಣ್ಣೆಂದರೆ ತಿಳಿಯುವದು ದುನಿಯಾ ಆಟಿಕೆಯೆಂದು.
                 ಮಹಿಳೆಯನ್ನು ಗುಲಾಮಳೆಂದು ಆಟಿಕೆ ವಸ್ತುವೆಂದು ನೋಡುವುದು.ನಾವು ವಾಸಿಸುವ ಪ್ರಪಂಚದಲ್ಲಿ ಬೇರೂರಿರುವ ಸಾಮಾಜಿಕ ವ್ಯವಸ್ಥೆಯಾಗಿದ್ದು ಜೀವನದ ಎಲ್ಲಾ ಅಂಶಗಳಲ್ಲಿ ಅದು ವೃತ್ತಿ ಪರವಾಗಿರಲಿ ಅಥವಾ ವೈಯಕ್ತಿಕವಾಗಿರಲಿ ಪುರುಷ ಪ್ರಧಾನವಾಗಿರುತ್ತದೆ.ಪುರುಷ ಪ್ರಾಬಲ್ಯದ ಸಮಾಜವು ಪಿತೃಪ್ರಭುತ್ವದ ಸಾಮಾಜಿಕ ವ್ಯವಸ್ಥೆಯನ್ನು ಅನುಸರಿಸುತ್ತದೆ. ಅಲ್ಲಿ ನಿಯಮ ತಯಾರಕರು ಹೆಚ್ಚಾಗಿ ಪುರುಷರು.ಹೆಂಡತಿಗೆ ಸ್ವತಂತ್ರತೆ ನೀಡದೆ ಕೇವಲ ಭೋಗದ ವಸ್ತುವೆಂದು ಅರಿತು,ವಂಶ ಮುಂದುವರೆಸುವ ಯಂತ್ರವೆಂದು ತಿಳಿದು ಹೆಣ್ಣಿಗೆ ಸ್ವತಂತ್ರತೆ ನೀಡುವುದಿಲ್ಲ. ಇಂತಹ ಸಮಸ್ಯೆಯನ್ನು, ಸಾಮಾಜಿಕ ನಿಯಮವನ್ನು ಹಮೀದಾ ಬೇಗಂರವರು ತಮ್ಮ ಗಜಲ್ ಮೂಲಕ ಧಿಕ್ಕರಿಸಿದ್ದಾರೆ.
    ಅದೆಷ್ಟು ತುಳಿಯುವೆ ತುಳಿ ಮಣ್ಣಾದರೂ ಹೆಣ್ಣಾಗಿ ಹುಟ್ಟುವೆ ನಾನು
    ನೀನೆಷ್ಟು ನಿಂದಿಸಿ ನೋಯಿಸಿ ಜರಿದರೂ ಶಕ್ತಿಯಾಗಿ ಮೆಟ್ಟುವೆ ನಾನು
               ಹೆಣ್ಣು ಎಂದ ಮಾತ್ರಕ್ಕೆ ಸಮಾಜ ಗುರಿ ಸಾಧಿಸಲು ,ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಿಡುವುದಿಲ್ಲ. ಸದಾಕಾಲ ನಿಯಮ,ಕಟ್ಟಳೆಗಳ ಮದ್ಯ ನಿಲ್ಲಿಸಿ ಬಿಡುತ್ತಾರೆ. ಹೆಣ್ಣಿಗೆ ವಿದ್ಯೆ ಪಡೆಯಲು ನಿಯಮ ,ಮನೆ ಕೆಲಸಗಳಲ್ಲಿ ನಿಯಮ, ಪರಿಸರದಲ್ಲಿ ಬೆಳೆಯಲು ನಿಯಮಗಳನ್ನು ಹಾಕಿ ಬೆಳೆಯಲು ಅವಕಾಶ ನೀಡುವುದಿಲ್ಲ. ಪಂಜರದಲ್ಲಿ ಪಕ್ಷಿಯನ್ನು ಹಾಕಿದಂತೆ ಮಹಿಳೆಗೆ ನಿಯಮ ಎಂಬ  ಪಂಜರದಲ್ಲಿ ಹಾಕಿ ಸದಾಕಾಲ ತಮ್ಮ ಕಡಿವಾಣದಲ್ಲಿ ನಿಂದಿಸಿದರೂ , ನಿಯಮ ಹಾಕಿದರೂ ಶಕ್ತಿಯಾಗಿ ನಿಂತು ಸಾಧಿಸಿ ತೋರಿಸುವೆ,ಮನದೊಳಗಿನ ಕಿಚ್ಚನ್ನು ಹೊರಹಾಕಿ ಗುರಿ ತಲುಪಿ ತೋರಿಸುವೆ, ಗುಲಾಮಗಿರಿಯಲ್ಲಿ ನೂಕಿದರೂ ಸೆಡ್ಡು ಹೊಡೆದು ಹೊಸ ಬದುಕನ್ನು ಕಟ್ಟಿ ತೋರಿಸುವೆ ಎಂದು ಹೆಣ್ಣಿನ ಮನದ ನೋವನ್ನು ತಮ್ಮ ಗಜಲ್ ಮೂಲಕ ಅದ್ಭುತವಾಗಿ ತೋರ್ಪಡಿಸಿದ್ದಾರೆ.
      ಹಗೆತನದ ಕರಿಯ ಪರದೆ ಸರಿವುದು ಎಂದೋ
      ಒಗೆತನದ ಪ್ರೀತಿ ನಂಟು ಬೆರೆವುದು ಎಂದೋ
               ಸಮಾಜದಲ್ಲಿ ಶಾಂತಿ ನೆಲೆಸಲು ಮುಖ್ಯ ಕಾರಣ ಪ್ರೀತಿ – ಪ್ರೇಮದಿಂದ ಬದುಕಿರುವುದು. ಅದೇ ಇರದಿದ್ದರೆ ಸಮಾಜ ಶಾಂತಿಯುತವಾಗಿ ಇರಲು ಸಾಧ್ಯವಿಲ್ಲ. ದಿನಬೆಳಗಾದರೆ ಜಾತಿಯತೆಯಿಂದಾಗಿ ಕೊಲೆ – ಗಲಭೆ ಗಳ ಬಗ್ಗೆ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ ಎಷ್ಟೋ ಅಮಾಯಕ ಜೀವಗಳು ಈ ಅನಿಷ್ಟ ಪದ್ಧತಿಗೆ ಬಲಿಯಾಗಿವೆ. ದೇವನೊಬ್ಬ ನಾಮ ಹಲವು ಎಂಬ ತತ್ವ ಎಲ್ಲಾ ಧರ್ಮಗಳಲ್ಲಿ ಇದ್ದರೂ ಅದನ್ನು ಅರಿಯದೇ ಅಧ್ಯಾಯಗಳು ನಡೆಯುತ್ತಿವೆ. ಅಣ್ಣ ತಮ್ಮರಂತೆ ಬಾಲ್ಯದಿಂದ ಬೆಳೆದಿದ್ದರೂ ಅನಿಷ್ಟ ಪದ್ದತಿಯಿಂದಾಗಿ ಹಗಿತನ ಬೆಳೆಸಿಕೊಂಡು ನಂಟು ಇಲ್ಲದೇ ಹೃದಯಗಳು ಕಲುಷಿತಗೊಳ್ಳುವ ಪದ್ದತಿಗಳು ತಾಂಡವವಾಡುತ್ತಿರುವುದರಿಂದ ರಕ್ತದೊಕುಳಿಗಳೂ  ಆಗಿ ಸಮಾಜದ ಶಾಂತಿ ಕದಲುವುದನ್ನು ಕಂಡು ತಮ್ಮ ಗಜಲ್ ಮೂಲಕ ಮರುಗಿದ್ದಾರೆ.
    ಖಾಲಿ ಮಾಡಬೇಡ ಹೃದಯದ ಬಟ್ಟಲದ ಒಲವ ಕಣ್ಣೀರು ಸುರಿಸುತ
    ಕಂಗಳಲಿ ಮೂಡಿದ ನನ್ನ ಬಿಂಬ ಅಳಿಸಿದಂತೆ ಕಾಪಿಡು ಸಾಕು.
            ನನಗೆ ಜೀವನದಲ್ಲಿ ತಾಜಮಹಲ ನೀಡು ಎಂದು ಆಸೆ ಇಲ್ಲ.ನಾನು ಇಲ್ಲದಾಗ ನನ್ನ ಗೋರಿಯ ಮೇಲೆ ಒಂದು ಗುಲಾಬಿ ಹೂ ಇಡು ಎಂದು ತನ್ನ ಪ್ರಿಯಕರನಲ್ಲಿ ತಮ್ಮ ಮನದ ನಿವೇದನೆಯನ್ನು ಇಡುತ್ತಿದ್ದಾರೆ.ಜಗತ್ತಿನಲ್ಲಿ ಪ್ರೀತಿಗೆ ಅಘಾದವಾದ ಶಕ್ತಿ ಇದೆ.ಅದು ಎಂದಿಗೂ ಕಡಿಮೆಯಾಗುವದಿಲ್ಲ.ನಿಜ ಪ್ರೀತಿಯಲ್ಲಿ ಆಸೆ,ಆಕಾಂಕ್ಷೆಗಳು ಇರುವುದಿಲ್ಲ. ಪವಿತ್ರ ಪ್ರೀತಿ ಮಾತ್ರ ಇದ್ದು,ಸದಾಕಾಲ ಪ್ರೀತಿಯ ಝರಿ ಜಿನುಗುತ್ತಿರುತ್ತದೆ. ಕಳೆದ ಮಧುರ ಘಳಿಗೆಗಳನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ನಾನಿಲ್ಲದಾಗ ನನ್ನ ನೆನಪಿನ ಹಣತೆಯನ್ನು ಹಚ್ಚಿಡು ಎಂದು ತಮ್ಮ ಮನದ ನಿವೇದನೆಯನ್ನು ಗಜಲ್ ಮೂಲಕ ತಿಳಿಸಿದ್ದಾರೆ.
        ದುನಿಯಾ ಬಹುರೂಪಿಗಳ ಸಂತೆಯಾಗಿ ಮೆರೆಯುತಿದೆ ಸಖಿ
        ಮುಖವಾಡಗಳ ಹಿಂದಿನ ನಿಜರೂಪ ಅಡಗುತಿದೆ ಸಖಿ.
             ಸಮಾಜದಲ್ಲಿ ಮುಖವಾಡ ಹಾಕಿ ಮೆರೆಯುವವರ ಸಂಖ್ಯೆ ಅಧಿಕವಾಗಿದೆ. ಸುಳ್ಳಿನ ಲೇಪನ ಹಚ್ಚಿ ಕಪಟ ವೇಷದಿಂದ ಬಾಳುವವರಿದ್ದಾರೆ. ಪರರಿಗೆ ಮೋಸ ಮಾಡುವುದೇ ತಮ್ಮ ಗುರಿ ಎಂದು ಧನ ದಾಹದ ಹಿಂದೆ ಬಿದ್ದು ಎಂಜಲು ಕಾಸಿಗೆ ಕೈಯೊಡ್ಡುವವರಿದ್ದಾರೆ. ಭ್ರಷ್ಟರ ಗುಂಪು ತಾಂಡವವಾಡುತ್ತಿದೆ.ಧರ್ಮದ ಸೋಗಿನಲ್ಲಿ ಆಚಾರ ,ನೀತಿ ,ನಿಯಮಗಳನ್ನು ಗಾಳಿಗೆ ತೂರಿ ಅನೀತಿ ಸೋಗಿನಲ್ಲಿ ಬಾಳಿ ಅತ್ಯಾಚಾರ ಎಸಗುವ ಪಾಪಿಗಳಿದ್ದಾರೆ.ಇದರಿಂದ ಸುಂದರ ಸಮಾಜ ನಲುಗುತ್ತಿದೆ ಎಂದು ತಮ್ಮ ಮನದ ರೋಧನವನ್ನು ಗಜಲ್ ಮೂಲಕ ಪ್ರಸ್ತುತ ಪಡಿಸಿದ್ದಾರೆ.
        ತಿಳಿವವರ ನಡುವೆ ಎದ್ದು ನಿಲ್ಲಲು ಕಲಿತುಕೋ ಮತ್ತೆ
        ಹಳಿದವರ ಎದುರು ಮೌನದಿ ಇರಲು ಕಲಿತುಕೋ ಮತ್ತೆ
            ಪ್ರಸ್ತುತ ಸಮಾಜದಲ್ಲಿ ನೀತಿ, ನಿಯಮ ,ಸತ್ಯಕ್ಕೆ ಬೆಲೆ ಇಲ್ಲ.ಗುರಿ ತಲುಪಲು ಬಿಡದ ಜನ ತುಳಿದು ನಮ್ಮ ಸಾಧನೆಗೆ ಅಡ್ಡಿಯಾಗುವವರು .ಅಂತವರ ಮುಂದೆ ಎದ್ದು ನಿಲ್ಲಬೇಕು. ಚುಚ್ಚು ಮಾತುಗಳನ್ನಾಡುವವರ ಮುಂದೆ ಮೌನಿಯಾಗಿದ್ದು ಸಾಧಿಸಿ ತೋರಿಸುವ ಛಲ ಹೊಂದಬೇಕು. ಮರೆಗೆ ನಿಂತು ನಮ್ಮ ಸಾಧನೆಯ ಬಗ್ಗೆ ಮಾತನಾಡುತ್ತಲೇ ಇರುವವರನ್ನು ದೂರ ಸರಿಸಿ ಟೊಂಕ ಕಟ್ಟಿ ಗುರಿ ಸಾಧಿಸಿ ಮುಂದೆ ಸಾಗಿರಿ,ಬಣ್ಣದ ಮಾತುಗಳನ್ನಾಡಿ ಕಣ್ಣೀರು ತರಿಸುವ ಜನ ಕೂಡ ನಮ್ಮ ಮಧ್ಯ ಇರುವಾಗ ಅವರಿಂದ ದೂರ ಸರಿಯದೇ ಅವರಲ್ಲೇ ಇದ್ದು ಅವರ ಬಾಯಿ ಮುಚ್ಚುವ ಹಾಗೆ ಕಾರ್ಯ ಮಾಡಿ ತೋರಿಸು ಎಂದು ಅರಿವಿನ ಮಾತುಗಳನ್ನು ಸೂಕ್ಷ್ಮವಾಗಿ ತಿಳಿಹೇಳಿದ್ದಾರೆ.
            ಒಟ್ಟಾರೆಯಾಗಿ ಹಮೀದಾಬೇಗಂರವರ ಗಜಲ್ ಬಹಳ ಸರಳ ,ಸುಲಲಿತವಾದವುಗಳು.ಎಲ್ಲವನ್ನು ಹೇಳುವ ಅವರ ಸರಳ ಬರವಣಿಗೆ ತುಂಬಾ ಆಪ್ತವಾದುದು.ಪ್ರತಿ ಅಂಶವನ್ನು ಭಾಷೆಯೊಳಗೆ ಕಟ್ಟಿ ಕೊಡುವ ಶೈಲಿ ಅವರಿಗೆ ವಿಶಿಷ್ಟವಾದದ್ದು ‌.ಇವರ ಗಜಲ್ ಕೃತಿಯಲ್ಲಿ ಸಾಮರಸ್ಯದ ಭಾವ ಇದೆ,ಪ್ರೀತಿಯ ಸೆಲೆ ಇದೆ,ವಿರಹದ ನೋವಿದೆ,ಮಳೆಯ ತಂಪು ಇದೆ,ಸಮಯದ ಮಹತ್ವ ಇದೆ,ಹೊಸ ಆಸೆಯ ಚಿಗುರಿದೆ,ಬಣ್ಣದ ಬದುಕಿನ ಆಸೆ ಇದೆ,ಜಗದ ಹೊಸ ಮುಖವಾಡವಿದೆ,ಬರದ ಛಾಯೆ ಇದೆ,ಅನ್ನದಾತನಿಗೆ ನಮನವಿದೆ,ನಯವಂಚಕರಿಗೆ ಧಿಕ್ಕಾರವಿದೆ ಹೀಗೆ ವಿವಿಧ ವಿಷಯದ ಆಯ್ಕೆ ಮಾಡಿಕೊಂಡು ಅರ್ಥಗರ್ಭಿತವಾದ ರಚನೆಗೊಳಪಟ್ಟ ಕೃತಿ ಸಾರಸ್ವತ ಲೋಕದಲ್ಲಿ ಹೆಸರುಗಳಿಸಿ ಜನಮನ್ನಣೆ ಗಳಿಸಲಿ.ಹಮೀದಾ ಬೇಗಂರಿಂದ ಇನ್ನೂ ಹೆಚ್ಚಿನ ಮೌಲ್ಯಯುತ ಕೃತಿಗಳು ಹೊರ ಬರಲೆಂದು ಶುಭ ಕೋರುವೆ.

————————————————-

ಶಬಾನಾ ಅಣ್ಣಿಗೇರಿ

Leave a Reply

Back To Top