ವಚನ ಸಂಗಾತಿ
ಮೋಳಿಗೆ ಮಹಾದೇವಿಯ
ವಚನ ವಿಶ್ಲೇಷಣೆ
ಪ್ರೊ. ಜಿ.ಎ ತಿಗಡಿ.
ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು?
ಸಸಿಯೊಳಗಣ ಲತೆ ಪರ್ಣ ತಲೆದೋರದ
ನಸುಗಂಪಿನ ಕುಸುಮವ ಅದಾರು ಮುಡಿವರು?
ಇಂತೀ ಅರಿವಿನ ಅರಿವ ಕುರುಹಿಟ್ಟು ಕೂಡುವನೆ ಲಿಂಗಾಂಗಿ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಇದು ಸ್ವಾನುಭಾವಿಯ ಸನ್ನದ್ಧಸ್ಥಲ.
ಬೀಜದೊಳಗೆ (ಹಣ್ಣಿನ) ಸಸಿ, ಗಿಡ, ಮರ ಮತ್ತು ಹಣ್ಣುಗಳು ಅಂತರ್ಗತವಾಗಿರುತ್ತವೆ. ಹೀಗಿದ್ದರೂ ಹಣ್ಣಿದೆಯೆಂದು ಬೀಜವನ್ನು ತಿನ್ನಲು ಬರುವುದಿಲ್ಲ. ಹಾಗೆಯೇ ಸಸಿಯಲ್ಲಿ (ಹೂವಿನ) ಬಳ್ಳಿ, ಎಲೆ, ಮೊಗ್ಗು, ಕಂಪು ಹೊರಸೂಸುವ ಹೂವಿರುತ್ತದೆ. ಹಾಗೆಂದು ಸಸಿಯನ್ನು ಹೂವೆಂದು ಯಾರೂ ಮುಡಿದುಕೊಳ್ಳಲಾರರು. ಈ ರೀತಿ ಬೀಜದಲ್ಲಿ ಹಣ್ಣು, ಸಸಿಯಲ್ಲಿ ಪರಿಮಳಯುಕ್ತ ಹೂವು, ಇರುತ್ತವೆ ಎಂದು ಅರಿತುಕೊಳ್ಳಲು ಒಂದಿಷ್ಟು ಜ್ಞಾನ ಮತ್ತು ಸಾಧನೆ ಬೇಕಾಗುತ್ತದೆ. ಕುರುವಿಡಿದು ಅರಿವನ್ನು ಜಾಗೃತ ಮಾಡಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇದೇ ಮಾದರಿಯಲ್ಲಿ ಲಿಂಗಾoಗ ಸಾಮರಸ್ಯವನ್ನು ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರೂ ಇದನ್ನು ಸ್ವಾನುಭವದಿಂದ ತಮ್ಮದೇ ಆದ ಮಾರ್ಗವೊಂದನ್ನು ಕಂಡುಕೊಂಡು ಸಾಧನೆ ಮಾಡಿದಾಗ ಅರಿವು ಮೂಡಿ ಅಂಗ ಲಿಂಗಮಯವಾಗುತ್ತದೆ ಎಂದು ಮೋಳಿಗೆ ಮಹಾದೇವಿ ಅಭಿಪ್ರಾಯಪಡುತ್ತಾಳೆ.
ನಿಸರ್ಗದಲ್ಲಿ ಸ್ವಾಭಾವಿಕವಾಗಿ ನಡೆಯುವ ಎರಡು ಕ್ರಿಯೆಗಳನ್ನು ವಿವರಿಸುವುದರ ಮೂಲಕ ಅನುಭಾವದ ಅರಿವನ್ನು ಮೂಡಿಸುವ ಸರಳ ಮಾರ್ಗವೊಂದನ್ನು ಮಹಾದೇವಿ ಇಲ್ಲಿ ಸೂಚಿಸುತ್ತಾಳೆ. ಬೀಜದಿಂದ ಸಸಿ ಮರವಾಗಿ ಹಣ್ಣಾಗುವ, ಇನ್ನೊಂದೆಡೆ ಸಸಿಯಿಂದ ಬಳ್ಳಿಯಾಗಿ ನರುಗಂಪಿನ ಹೂವಾಗುವ ಪ್ರಕ್ರಿಯೆಯನ್ನು ಎಲ್ಲರೂ ಬಲ್ಲರು. ಇದೊಂದು ಸ್ವಾಭಾವಿಕ ಕ್ರಿಯೆ. ಹಣ್ಣನ್ನು ತಿನ್ನಬಯಸುವವರು ಎಂದಿಗೂ ಬೀಜವನ್ನು ತಿನ್ನಲಾರರು. ಹಾಗೆಯೇ ಹೂವಿನ ಪರಿಮಳದ ಕಂಪಿನ ಮೂಲ ಸಸಿ ಎಂದು ಭಾವಿಸಿ ಮುಡಿದುಕೊಳ್ಳಲು ಸಾಧ್ಯವಿಲ್ಲ. ಬೀಜ ಮತ್ತು ಸಸಿ ಇವೆರಡರ ಜ್ಞಾನ, ಆ ಮೂಲಕ ಮೂಡಿದ ಅರಿವು, ಹಣ್ಣಾಗುವ ಹಾಗೂ ಪರಿಮಳಯುಕ್ತ ಹೂವಾಗುವ ಪರಿಣಾಮವನ್ನು ಮನಗಾಣಿಸುತ್ತವೆ. ಕುರುಹು ಹಿಡಿದು ಅರಿವಿನತ್ತ ಸಾಗುವ ಸಾಧನೆಯ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ. ಷಣ್ಮುಖ ಶಿವಯೋಗಿಗಳು ಕೂಡ,
ಗುರುವಿಡಿದು ಕುರುಹಕಾಣಬೇಕು.
ಕುರುಹುವಿಡಿದು ಅರುಹಕಾಣಬೇಕು.
ಅರುಹುವಿಡಿದು ಆಚಾರವಕಾಣಬೇಕು.
ಆಚಾರವಿಡಿದು ನಿಜವಕಾಣಬೇಕು.
ನಿಜವಿಡಿದು ನಮ್ಮ ಅಖಂಡೇಶ್ವರಲಿಂಗವ ಕೂಡಬೇಕು.
ಎಂದಿದ್ದಾರೆ. ನಿಸರ್ಗದ ಎರಡು ನಿದರ್ಶನಗಳ ಮೂಲಕ ಲಿಂಗಾoಗ ಸಾಮರಸ್ಯವನ್ನು ಇದೇ ರೀತಿಯಲ್ಲಿ ಸಾಧಿಸಬಹುದು ಎನ್ನುತ್ತಾಳೆ ಶರಣೆ ಮೋಳಿಗೆ ಮಹಾದೇವಿ. ಸದ್ಗುರುವಿನಿಂದ ಆಯತವಾಗಿ ಅಂಗೈಯಲ್ಲಿ ಸ್ಥಿತನಾದ ಲಿಂಗಯ್ಯ ನಲ್ಲಿ ಜ್ಞಾನವಿದೆ, ಚೈತನ್ಯವಿದೆ, ಚಲನಶೀಲತೆ ಇದೆ, ಅರಿವಿದೆ, ಅಷ್ಟೇ ಏಕೆ ಮಹಾಬೆಳಗನ್ನು ದರ್ಶಿಸಿ ಅದರಲ್ಲಿ ಒಂದಾಗಿಸಿ ಅಂಗವನ್ನು ಲಿಂಗಮಯವಾಗಿ ಮಾಡಿಕೊಳ್ಳುವ ಮಹಾನ್ ದರ್ಶನವಿದೆ. ಇಷ್ಟಲಿಂಗದ ಕುರುಹುವಿಡಿದು ಸ್ವಾನುಭವದ ಸಾಧನೆಯ ಮೂಲಕ ‘ಪ್ರಾಣಲಿಂಗವನ್ನು ಸ್ವಾಯತ’ ಮಾಡಿಕೊಂಡು ಮುನ್ನಡೆದು ಅರಿವಿನ ಮೂಲಕ ‘ಭಾವಲಿಂಗದಲ್ಲಿ ಸನ್ನಿಹಿತ’ ವಾಗಿ ಮಹಾ ಬೆಳಗಿನ ಪ್ರಕಾಶವನ್ನು ದರ್ಶಿಸುತ್ತಾ, ಜ್ಯೋತಿ ಮುಟ್ಟಿದ ಜ್ಯೋತಿಯಾಗಿ ಪರಮಾನಂದದಲ್ಲಿ ಸುಖಿಸುವುದು ಹಾಗೂ ಆ ಮೂಲಕ ಅಂಗವೆಲ್ಲವೂ ಲಿಂಗಮಯವಾಗಿ ಲಿಂಗಾoಗ ಸಾಮರಸ್ಯ ಸಾಧ್ಯವಾಗುತ್ತದೆ ಎಂಬುದು ಮಹಾದೇವಿಯ ಮನೋಗತವಾಗಿದೆ.
ಪ್ರೊ. ಜಿ.ಎ ತಿಗಡಿ.