ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ರಮೇಶ್ ಹೆಗಡೆ ರವರ ಗಜಲ್ ಗಳಲ್ಲಿ

ಭಾವತೀವ್ರತೆ

ಎಲ್ಲರಿಗೂ ನಮಸ್ಕಾರಗಳು, ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಬಂದಿರುವೆ, ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್ ಓರ್ವರ ಪರಿಚಯದೊಂದಿಗೆ!! ಮತ್ತೇಕೆ ಮಾತಾಯಣ, ಬನ್ನಿ.. ಗಜಲ್ ಗಂಗೋತ್ರಿಯಲ್ಲಿ ಮೀಯಲು…

“ಯಾರವನು, ಎಲ್ಲಿಯವನು; ಏನಾಗಿತ್ತು ಅವನಿಗೆ
ಇಂದು ಯಾರೋ ಸತ್ತಿದ್ದಾರೆಂದು ಕೇಳಿರುವೆ ಗೆಳೆಯ”
-ಶಹರಯಾರ್

        ನಮ್ಮ ಸುತ್ತ ಯಾವಾಗಲೂ ಪರಸ್ಪರ ಆಪಾದನೆ ಮಾಡುವ ತರಂಗವೊಂದು ಕ್ರಿಯಾಶೀಲವಾಗಿರುತ್ತದೆ.‌ ಆ ಕಾರಣಕ್ಕಾಗಿಯೋ ಏನೋ ನಾವು ಒಬ್ಬರನ್ನೊಬ್ಬರು ದೂಷಿಸುವುದರಲ್ಲಿಯೇ ನಮ್ಮ ಜೀವನವನ್ನು ಸವೆಸುತಿದ್ದೇವೆ. ಜೀವನದಲ್ಲಿ ನಾವು ಹುಟ್ಟಿದ ದಿನ ಮತ್ತು ನಾವು ಜನಿಸಿದ್ದು ಏಕೆ ಎಂದು ಕಂಡುಕೊಂಡ ದಿನಗಳು ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂದಂತೂ ಸತ್ಯ, ನಮ್ಮ ಒಪ್ಪಿಗೆಯಿಲ್ಲದೆ ಯಾರೂ ನಮ್ಮನ್ನು ಕೀಳಾಗಿ ಭಾವಿಸಲು ಸಾಧ್ಯವಿಲ್ಲ. ದಿನನಿತ್ಯದ ಬದುಕಿನಲ್ಲಿ ನಮಗೆ ಏನಾದರೂ ಇಷ್ಟವಾಗದಿದ್ದರೆ ಅದನ್ನು ಬದಲಾಯಿಸಲು ಇಲ್ಲವೇ ನಮ್ಮ ಮನೋಭಾವವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಬೇಕು. ಬಾಳು ಹಲವು ಏರಿಳಿತಗಳ, ಕಗ್ಗಂಟುಗಳ ಗೊಂಚಲು. ಯಾವತ್ತೂ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತಿರಬೇಕು, ಅಂದಾಗಲೇ ಜೀವ, ಜೀವನ ಎರಡೂ ಉಸಿರಾಡಲು, ಏನನ್ನಾದರೂ ಸಾಧಿಸಲು ಸಾಧ್ಯ. ಈ ನೆಲೆಯಲ್ಲಿ ಅಮೇರಿಕಾದ ಕಾದಂಬರಿಕಾರ್ತಿ ಎರಿಕಾ ಜೊಂಗ್ ರವರ ಈ ಮಾತು ಸದಾ ಅನುಸರಣೀಯ. “ನೀವು ಏನನ್ನೂ ಅಪಾಯಕ್ಕೆ ತೆಗೆದುಕೊಳ್ಳದಿದ್ದರೆ, ನೀವು ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸುತ್ತೀರಿ.” ಏನು ಮಾಡಿದರೆ, ಇನ್ನೇನಾಗುತ್ತೊ ಎನ್ನುವುದು ಹಲವರಲ್ಲಿ ಚಲನಶೀಲತೆಗೆ ಸಂಚಕಾರ ತಂದು ಅವರಲ್ಲಿ ಜಡತ್ವವನ್ನು ತುಂಬುತ್ತಿದೆ. ನಾವು ಇತರರ ನಡವಳಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದನ್ನು ಪ್ರಯತ್ನಿಸಲುಬಾರದು. ಅವರ ನಡವಳಿಕೆಗೆ ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ನಮ್ಮ ನಿಯಂತ್ರಣದಲ್ಲಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ನಾವು ಇತರ ಜನರಲ್ಲಿ ಒಳ್ಳೆಯದನ್ನು ನೋಡಿದಾಗ ಜೀವನವು ಸುಲಭ ಮತ್ತು ಸುಂದರವಾಗಿರುತ್ತದೆ. ನಾವು ಹಾರಲು ಬಯಸಿದರೆ ಖಂಡಿತವಾಗಿಯೂ ನಮ್ಮ ತೂಕವನ್ನು ನಾವು ತ್ಯಜಿಸಲೇಬೇಕು. ಒಬ್ಬರ ಧೈರ್ಯಕ್ಕೆ ಅನುಗುಣವಾಗಿ ಜೀವನವು ಕುಗ್ಗುತ್ತದೆ ಅಥವಾ ವಿಸ್ತರಿಸುತ್ತದೆ. ನಾವು ನಮ್ಮ ಮನಸ್ಸಿನಲ್ಲಿರುವ ಭಯವನ್ನು ಬದಿಗೊತ್ತಿ ಹೃದಯದಲ್ಲಿರುವ ಕನಸುಗಳ ಮಾರ್ಗವಾಗಿ ಮುನ್ನಡೆಯಬೇಕಿದೆ. ನಾವು ಕಾಮನಬಿಲ್ಲು ನೋಡಲು ಬಯಸಿದರೆ ಅದಕ್ಕೆ ಕಾರಣವಾಗುವ ಮಳೆಯನ್ನು ಸಹಿಸಿಕೊಳ್ಳುವ, ಮಳೆಯನ್ನು ಎಂಜಾಯ್ ಮಾಡುವ ಗುಣವನ್ನು ರೂಢಿಸಿಕೊಳ್ಳುವುದು ಅಗತ್ಯ. ಯಾರು ವೈಫಲ್ಯಕ್ಕೆ ಹೆದರುತ್ತಾರೊ ಅವರು ಎಂದಿಗೂ ಯಶಸ್ಸಿಗೆ ಅರ್ಹರಾಗುವುದಿಲ್ಲ. ನಾವು ಅನುಭವಿಸಿದ ವೈಫಲ್ಯಗಳ ನೆರಳಿನಲ್ಲೇ ಅತ್ಯುತ್ತಮ ಯಶಸ್ಸುಗಳು ಹುದುಗಿಕೊಂಡಿರುತ್ತವೆ. ನಾವು ತುಸು ತೀಕ್ಷ್ಣ ದೃಷ್ಟಿಯಿಂದ ಅವುಗಳನ್ನು ಕಂಡುಕೊಳ್ಳಬೇಕಷ್ಟೇ. “If you want to be happy, do not dwell in the past, do not worry about the future, focus on living fully in the present” ಎಂಬ ಜಿಂಬಾಬ್ವೆ ರಾಜಕಾರಣಿ ಹಾಗೂ ಬರಹಗಾರ ರಾಯ್ ಬೆನೆಟ್ ರವರು ಈ ಮಾತು ಸಕಾರಾತ್ಮಕ ಧೋರಣೆಯ ಪ್ರತಿಬಿಂಬವಾಗಿದೆ. ಕಷ್ಟದ ಸಮಯಗಳು ಜೀವನದ ಶ್ರೇಷ್ಠ ಕ್ಷಣಗಳಿಗೆ ಕಾರಣವಾಗುತ್ತವೆ. ನಾವು ನಿಲ್ಲದೆ ಮುಂದೆ ಹೋಗ್ತಾ ಇದ್ದರೆ ಖಂಡಿತವಾಗಿಯೂ ಕಠಿಣ ಪರಿಸ್ಥಿತಿಗಳು ಕೊನೆಯಲ್ಲಿ ಬಲವಾದ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಇಂಥಹ ಪ್ರೇರಣದಾಯಕ ಮನಸ್ಸುಗಳು ಸಾರಸ್ವತ ಲೋಕದಲ್ಲಿ ಅಸಂಖ್ಯಾತವಾಗಿವೆ. ಅದರಲ್ಲೂ ಪ್ರೀತಿಯನ್ನು ಹಂಚುವ, ಪ್ರೀತಿಗಾಗಿಯೇ ಉದಯಿಸಿದ ಹಾಗೂ ಪ್ರೀತಿಯನ್ನೆ ಉಸಿರಾಡುವ ಗಜಲ್ ಆಗಸದಲ್ಲಿ ಅನುಪಮ ನಕ್ಷತ್ರಗಳನ್ನು ಕಾಣುತ್ತೇವೆ. ಅವರಲ್ಲಿ ಶಿರಸಿಯ ಸುಖನವರ್ ಶ್ರೀ ರಮೇಶ್ ಹೆಗಡೆಯವರು ಮುನ್ನೆಲೆಗೆ ಬರುತ್ತಾರೆ.

      ಶ್ರೀ ರಮೇಶ್ ಹೆಗಡೆ ಯವರು ಉತ್ತರ ಕನ್ನಡದ ಶಿರಸಿಯಲ್ಲಿ ಶ್ರೀ ಗೋವಿಂದ ಹೆಗಡೆ ಹಾಗೂ ಶ್ರೀಮತಿ ಶಕುಂತಲಾ ಹೆಗಡೆ ದಂಪತಿಗಳ ಮುದ್ದಿನ ಮಗನಾಗಿ ೧೯೮೦ ನೇ ಇಸವಿಯ ರಾಮ ನವಮಿಯಂದು ಜನಿಸಿದರು. ಬಾಲ್ಯದ ಕೆಲಕಾಲದ ನಂತರ ಅಂದರೆ ೦೩-೦೪ ನೇ ತರಗತಿಯಲ್ಲಿ ಓದುತ್ತಿರುವಾಗಲೆ ‘ಒಸ್ಟಿಯೋ ಜಿನೆಸಿಸ್ ಇಂಪರ್ಫೆಕ್ಟಾ’ ಎಂಬುದೊಂದು ವಿರಳಾತೀತ ಖಾಯಿಲೆ ಹಸುಗೂಸು ರಮೇಶ್ ಹೆಗಡೆಯವರನ್ನು ಆವರಿಸಿತ್ತು. ಇಬ್ಬರು ಅಕ್ಕಂದಿರ, ಅಣ್ಣ, ಅಪ್ಪ-ಅಮ್ಮನ ಸಹಾಯದಿಂದ ಮನೆಯೊಳಗೆ ಓಡಾಟ ನಡೆಸುತ್ತಿದ್ದರು. ಆದರೆ ದಿನಕಳೆದಂತೆ ಅದೂ ಸಾಧ್ಯವಾಗದೆ ಹಾಸಿಗೆಯ ಅತಿಥಿಯಾಗಿ ಉಳಿದರು. ತರಗತಿಯ ಶೈಕ್ಷಣಿಕ ಶಿಕ್ಷಣ ಸಾಧ್ಯವಾಗಲಿಲ್ಲ. ಕಾಲಾಂತರದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪೂರೈಸಿದರು.  ಹಾಸಿಗೆಯ ಮೇಲೆ ಮಲಗಿಯೇ ಹೊರ ಜಗತ್ತು ಕಾಣಲು ಕುಟುಂಬದವರು, ಗೆಳೆಯರು, ಪುಸ್ತಕಗಳು ಸಹಾಯಕವಾದವು. ಓದು-ಬರಹವೇ ಅವರ ಸಂಗಾತಿಯಾಯಿತು. ಕನ್ನಡ, ಹಿಂದಿ, ಇಂಗ್ಲೀಷ, ಸಂಸ್ಕೃತ ಮತ್ತು ಉರ್ದು ಭಾಷೆಗಳಲ್ಲಿ ಹಿಡಿತವನ್ನು ಹೊಂದಿದ್ದರು. ಶ್ರೀಯುತರು ಚುಟುಕು, ಕವಿತೆ, ಭಾವಗೀತೆ, ಮಕ್ಕಳ ಪದ್ಯಗಳು, ಗಜಲ್ ಸೇರಿದಂತೆ ಹಲವು ಪುಸ್ತಕಗಳನ್ನು ರಮೇಶ್ ಹೆಗಡೆಯವರು ಬರೆದಿದ್ದಾರೆ. ‘ಮನದಲ್ಲಿ ಮನೆಯ ಮಾಡಿ’, ‘ಕಾವ್ಯ ಚಿಗುರು’, ‘ಖರ್ಚಾಗದ ಪದ್ಯಗಳು’ ಎಂಬ ಕವನ ಸಂಕಲನಗಳು, ‘ಚಿಣ್ಣ-ಚಿನ್ನಾಟ’, ‘ಕಲರವ’ ಎಂಬ ಮಕ್ಕಳ ಪದ್ಯಗಳು, ‘ಕಿಟಕಿಯೊಳಗಿನ ಕಣ್ಣು’ ಎಂಬ ಚುಟುಕುಗಳು ಹಾಗೂ ‘ನೋವಿನಲ್ಲಿ ನವಿಲುಗರಿ’, ‘ಒಲವ ಸೊಲ್ಲನು ದಾಟಿ’, ಎಂಬ ಗಜಲ್ ಸಂಕಲನಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇಂಥಹ ಅಪರೂಪದ ಪ್ರತಿಭೆಗೆ ಹತ್ತು ಹಲವಾರು ಪುರಸ್ಕಾರ, ಸನ್ಮಾನ ಹಾಗೂ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ‘ಉತ್ತರ ಕನ್ನಡ ಜಿಲ್ಲಾ ಯುವ ರಾಜ್ಯೋತ್ಸವ ಪ್ರಶಸ್ತಿ’, ‘ಲಯನ್ಸ್ ಕದ್ರಿಯವರಿಂದ ಕಲಕ ರತ್ನ ಜಿಲ್ಲಾ ಯುವ ಕೃತಿ ಪುರಸ್ಕಾರ’… ಪ್ರಮುಖವಾಗಿವೆ.

    ೧೯೮೦ ರ ರಾಮ ನವಮಿಯಂದು ಜನಿಸಿದ ರಮೇಶ್ ಹೆಗಡೆ ಯವರು ೨೦೧೯ ರ ರಾಮನವಮಿಯಂದೇ ಇಹಲೋಕ ತ್ಯಜಿಸಿದರು. ತಮ್ಮ ಜೀವನ ಪ್ರೀತಿಯಿಂದಲೇ ಸದಾಕಾಲ ಅವರು ಸಾಹಿತ್ಯದ ಅಂಗಳದಲ್ಲಿ ಹಸಿರಾಗಿದ್ದಾರೆ. ಗಜಲ್ ಗಳನ್ನೇ ಕಿಟಕಿಯಾಗಿಸಿಕೊಂಡು ಯಾವತ್ತೂ ಪಾಸಿಟಿವ್ ಆಗಿ ಉಳಿದ ಗಜಲ್ ಗೋ ರಮೇಶರನ್ನು ಮುಕ್ತಮನಸ್ಸಿನಿಂದ, ಕೃತಜ್ಞತೆಯಿಂದ ಬೀಳ್ಕೊಡೋಣ!!

         ಪ್ರೀತಿಯು ಕಣ್ಣುಗಳಿಂದ ಅಲ್ಲ, ಹೃದಯದಿಂದ ನೋಡುತ್ತ ಕಣ್ಣಿಗೆ ಕಾಣದಿರುವುದನ್ನು ಗುರುತಿಸುತ್ತದೆ. ಇದು ಒಬ್ಬರ ಅಂತರಂಗದ ತುಡಿತವನ್ನು ಮತ್ತೊಬ್ಬರಿಗೆ ರವಾನಿಸುತ್ತ ಮಳೆಯ ನಂತರದ ಸೂರ್ಯನಂತೆ ಸಾಂತ್ವನ ನೀಡುತ್ತದೆ. ಶತೃವನ್ನೂ ಸ್ನೇಹಿತನನ್ನಾಗಿಸುವ ತಾಕತ್ತು ಇದಕ್ಕಿದೆ. ಇಂಥ ಪ್ರೀತಿಯ ಕೃಪಾಪೋಷಿತ ಗಜಲ್ ಸಾಹಿತ್ಯ ಪ್ರಕಾರವು ಮೃದುವಾಗಿದ್ದು, ಬೌದ್ಧಿಕ ಕ್ರಿಯೆಗಿಂತಲೂ ಮಾನಸಿಕ ಅನುಬಂಧವನ್ನು ಕಾಪಾಡುತ್ತ ಬಂದಿದೆ.‌ ಇಲ್ಲಿ ಅಮೇರಿಕಾದ ಲೇಖಕ ಶಹರಾಜದ್ ಅಲ್-ಖಲೀಜ್ ರವರ ಭಾವದೋಕುಳಿ ಪ್ರೀತಿಯಲ್ಲಿ ಮುಳುಗಿರುವುದನ್ನು ಗಮನಿಸಬಹುದು. “If one day the moon calls you by your name don’t be surprised, because every night I tell her about you.” ಎಂಬುದು ಪ್ರೀತಿಯ ಅಗಾಧತೆಯನ್ನು ಸಾರುತ್ತದೆ. ಪ್ರೀತಿಯಲ್ಲಿ ಚಾಂದಿನಿ ಕೂಡ ಪ್ರೇಮಿಗಳ ಕನವರಿಕೆಗೆ ಕಿವಿಯಾಗಬಲ್ಲಳು ಎಂಬುದು ಅದ್ಭುತ ಹಾಗೂ ಅನನ್ಯ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ರಮೇಶ್ ಹೆಗಡೆಯವರ ಗಜಲ್ ಲೋಕದ ದೇಹಲೀಜ್ ದಾಟಬಹುದು. ರಮೇಶರ ಹೆಚ್ಚಿನ ಗಜಲ್ ಗಳು ಜೀವನ್ಮುಖಿಯಾಗಿವೆ. ಭಾವ ಮತ್ತು ಭಾಷೆಗಳ ಜೊತೆಗೆ ಸಂಘರ್ಷಗೈಯುತ್ತಲೇ ಬದುಕಿನ ನಿಜವನ್ನು ಅವರ ಗಜಲ್ ಗಳು ಶೋಧಿಸುತ್ತವೆ. ಪ್ರೇಮ, ಕಾಮ, ನೋವು, ತಲ್ಲಣಗಳೊಂದಿಗೆ ಮುಖಾಮುಖಿಯಾಗುತ್ತಲೇ ಅನುಪಮ, ಆಪ್ತ ಗಜಲ್ ಗಳು ನಮಗೆ ಎದುರಾಗುತ್ತವೆ. ಪ್ರೇಮ, ನಿವೇದನೆ, ರಮಿಸುವಿಕೆ, ವಿರಹ.. ಹೀಗೆ ಪ್ರೇಮದ ವಿಭಿನ್ನ ಆಯಾಮಗಳು ಸಹೃದಯ ಓದುಗರನ್ನು ಸಶಕ್ತವಾಗಿ ಹಿಡಿದಿಡುತ್ತವೆ. ಮುಡಿದ ಮಲ್ಲಿಗೆಯ ಸುಮವನ್ನು ತೆಗೆದಿಟ್ಟ ನಂತರವೂ ಹೆರಳಲ್ಲಿ ಉಳಿಯುವ ನವಿರಾದ ಗಂಧದಂತೆ ಓದಿ ಮುಗಿಸಿದ ನಂತರವೂ ಹಲವಾರು ಅಶಅರ್ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುತ್ತವೆ.

“ನಾ ನಡೆವ ದಾರಿಯಲಿ ಕನಸು ನೀನು
ಕನಸುಗಳ ತವರುಮನೆ ಮನಸು ನೀನು”

ಈ ಮೇಲಿನ ಷೇರ್ ನಲ್ಲಿ ಕನಸು, ಮನಸು ಎನ್ನುವ ಕವಾಫಿ ಭಾವದ ತೀವ್ರತೆಯನ್ನು ಪ್ರತಿಧ್ವನಿಸುತ್ತವೆ. ಮನುಷ್ಯನ ಬದುಕು ಯಾವತ್ತೂ ಸ್ಥಾವರ ಅಲ್ಲ, ಅದೊಂದು ಜಂಗಮ ಸ್ವರೂಪಿ. ಈ ನೆಲೆಯಲ್ಲಿ ಗಮನಿಸಿದಾಗ ಕನಸುಗಳಿಲ್ಲದೆ ಮನುಷ್ಯ ಮನುಷ್ಯನಾಗಿ ಬಾಳಲು ಸಾಧ್ಯವಿಲ್ಲ. ಹಾಗಾಗಿ ಬಾಳಿನ ತಿರುವಿನಲ್ಲಿ ಕನಸುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆ ಕನಸು ಕಾಣಲು ಮನಸು ಬೇಕು. ಕನಸು-ಮನಸು ಒಂದಕ್ಕೊಂದು ಪೂರಕವಾಗಿದ್ದು, ಮನುಷ್ಯನ ಜೀವನದ ದಿಕ್ಸೂಚಿಯಾಗಿವೆ ಎಂಬುದನ್ನು ಈ ಷೇರ್ ಸಾರುತ್ತಿದೆ. ಇಲ್ಲಿ ಸುಖನವರ್ ರಮೇಶ್ ಹೆಗಡೆ ಯವರು ‘ಮನಸು ಕನಸುಗಳ ತವರುಮನೆ’ ಎಂದು ಹೇಳುತ್ತ ತರುಮನೆಯಾಗಲಿ ಎಂಬ ಸದಾಶಯವನ್ನು ವ್ಯಕ್ತಪಡಿಸಿದ್ದಾರೆ.

“ಈಗ ಬರುವೆನೆಂದು ಹೇಳಿ ಬರದೆ ಹೋದ ನೆನಪು
ಹಾದಿಯಲ್ಲಿ ಬರಿದೆ ನಿಂತು ಕುಳಿತು ಕಾದ ನೆನಪು”

ಬರಹಕ್ಕೂ, ಬರಹ ರೂಪಿಸಿದ ವ್ಯಕ್ತಿಗೂ ಸಂಬಂಧ ಕಲ್ಪಿಸುವ ಕುರಿತು ಮೀಮಾಂಸಕರು ಜಿಜ್ಞಾಸೆ ಮಾಡುತ್ತಲೆ ಬಂದಿದ್ದಾರೆ. ಪಾಶ್ಚಾತ್ಯ ಚಿಂತಕ ಎಡ್ವರ್ಡ್ ಬುಲ್ಲೊ ಅವರು ಪ್ರತಿಪಾದಿಸಿದ ‘ಮಾನಸಿಕ ದೂರ’ ಸಿದ್ಧಾಂತವು ಬರಹವನ್ನು ವ್ಯಕ್ತಿಯಿಂದ ಬೇರ್ಪಡಿಸುತ್ತದೆ. ಆದರೆ ಈ ಷೇರ್ ಶಾಯರ್ ರಮೇಶ್ ಹೆಗಡೆ ಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೆ ಇರುವುದರಿಂದ ‘ಈಗ ಬರುವೆನೆಂದು ಹೇಳಿ ಬರದೆ ಹೋದ ನೆನಪು’ ಎಂಬ ಮಿಸ್ರಾ-ಎ-ಊಲಾ ಸಹೃದಯ ಓದುಗರನ್ನು ತುಂಬಾ ಕಾಡುತ್ತದೆ. ಏಕೆಂದರೆ ಇಂದು ಹೆಗಡೆಯವರು ನಮಗೆ ಬರಿ ನೆನಪು ಮಾತ್ರ! ಇದಕ್ಕೆ ಪೂರಕವಾಗಿ ಮಿಸ್ರಾ-ಎ-ಸಾನಿ ಮೂಡಿಬಂದಿದೆ. ಈ ಹಿನ್ನೆಲೆಯಲ್ಲಿ ಮೇಲಿನ ಷೇರ್ ಅವಲೋಕಿಸಿದಾಗ ‘ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆ’ ಎಂಬ ಜೀವನದ ಅನಿಶ್ಚಿತತೆ ಮತ್ತೊಮ್ಮೆ, ಮಗದೊಮ್ಮೆ ಮನದಟ್ಟಾಗುತ್ತದೆ.

        ಪ್ರೀತಿಯು ಒಬ್ಬ ವ್ಯಕ್ತಿ ಅದಮ್ಯವಾಗಿ ಅಪೇಕ್ಷಿಸಲ್ಪಡುವ ಅನನ್ಯ ಬಯಕೆಯಾಗಿದೆ. ಇದೊಂದು ತೆರೆದ ಬಾಗಿಲಾಗಿದ್ದು ಅಕ್ಷಯ ಪಾತ್ರೆಯಂತಿದೆ. ಈ ಬಾಗಿಲಿನ ಬೀಗದ ಕೈ ಎಂದರೆ ನಿರ್ಮಲವಾದ ಮನಸ್ಸು. ಇದು ಎಂದಿಗೂ ಮುಗಿಯದ ಹಾಡು. ಪ್ರೀತಿಸುವ ಹೃದಯಗಳಿಗೆ ನಿರಂತರವಾಗಿ ಗುನುಗಲು ಹಚ್ಚುತ್ತದೆ. ತೀವ್ರ ಅನಾರೋಗ್ಯದ ನಡುವೆ ಕೆಲವೇ ಕಾಲ ಬದುಕಿ ಜೀವನ ಪ್ರೀತಿಯಿಂದ ತೀವ್ರವಾಗಿ ಬರೆದ ಕನ್ನಡದ ಗಜಲ್ ಕಾರರಲ್ಲಿ ರಮೇಶ ಹೆಗಡೆ ಅವರ ಹೆಸರು ಚಿರಸ್ಮರಣೀಯ. ಅವರಿಂದ ಮತ್ತಷ್ಟು ಮೊಗೆದಷ್ಟೂ ಗಜಲ್ ಗಳು ಮೂಡಿಬರಲಿ ಎಂದು ಹೇಳಲಾಗುತಿಲ್ಲ. ಶಾಯರ್ ರಮೇಶ್ ಹೆಗಡೆ ಯವರು ತಮ್ಮ ಭಾವತೀವ್ರತೆಯ ಗಜಲ್ ಗಳೊಂದಿಗೆ ನಮ್ಮೊಂದಿಗೆ ಜೀವಂತವಿದ್ದಾರೆ! ಈ ಸೆಲೆಯಲ್ಲಿ ಅವರ ಗಜಲ್ ಗಳು ನಮ್ಮ ಗಜಲ್ ಆಗಸದಲ್ಲಿ ಚಾಂದನಿಯಂತೆ ಯಾವಾಗಲೂ ಹೊಳೆಯುತಿರಲಿ ಎಂದು ಆಶಿಸುತ್ತೇನೆ.

“ಅವನು ಯಾವಾಗ ನನ್ನ ಕಥೆಯನ್ನು ಕೇಳುತ್ತಾನೆ
ಮತ್ತೆ ಅದು ಕೂಡ ನನ್ನದೇ ಮಾತುಗಳಲ್ಲಿ”
-ಮಿರ್ಜಾ ಗಾಲಿಬ್  

ಹೃದಯದ ಪಿಸುಮಾತಾದ ಗಜಲ್ ನ ವಿವಿಧ ಆಯಾಮಗಳ ಕುರಿತು ಯೋಚಿಸುವುದಾಗಲಿ, ಮಾತಾಡುವುದಾಗಲಿ ಹಾಗೂ ಬರೆಯುವುದಾಗಲಿ ಮಾಡ್ತಾ ಇದ್ದರೆ ಈ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಗಡಿಯಾರದ ಮಾತು ಕೇಳಲೆಬೇಕಲ್ಲವೇ.‌ ಅಂತೆಯೇ ಈ ಬರಹಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top