ಅಂಕಣ ಬರಹ

ವತ್ಸಲಾ ಶ್ರೀಶ

ನಾವುಮರೆತ ಮಹಿಳಾ

ಸ್ವಾತಂತ್ರ್ಯ ಹೋರಾಟಗಾರರು

ದುರ್ಗಾವತಿ ದೇವಿ (ದುರ್ಗಾ ಭಾಬಿ)

ದುರ್ಗಾವತಿ ದೇವಿ ಅಕ್ಟೋಬರ್ 7 1907 ಒಂದು ಅಲಹಾಬಾದ್ ನಲ್ಲಿ ಜನಿಸಿದರು.  ಈ 1907 ಕ್ರಾಂತಿಕಾರಿ ಇತಿಹಾಸಕ್ಕೆ ಬಹಳ ಮಹತ್ವಪೂರ್ಣ ವರ್ಷವಾಯಿತು. ಅದೇ 1904-05ರಲ್ಲಿ ಜಪಾನ್ ನಂತಹ ಸಣ್ಣ ದೇಶ ರಷ್ಯಾ ವನ್ನು ಸೋಲಿಸಿತ್ತು. ಈ ಬೆಳವಣಿಗೆ ಭಾರತೀಯರಲ್ಲಿ ನಾವು ಕೂಡಾ ಇಂಗ್ಲೀಷರನ್ನು ಸೋಲಿಸಬಹುದು ಎಂಬ ಆಸೆಯನ್ನು ಉಂಟು ಮಾಡಿತು. ದೇಶದಲ್ಲಿ‌ ಕ್ರಾಂತಿಕಾರಿ‌ ಚಟುವಟಿಕೆಗಳು ಭರದಿಂದ ಪ್ರಾರಂಭವಾದವು.
          ದುರ್ಗಾವತಿ ದೇವಿಯ ಮದುವೆ ಅವರ ೧೦ನೇ  ಮನಸ್ಸಿನಲ್ಲಿ ಭಗವತಿ ಚರಣ್ ವೋಹ್ರಾ ಜೊತೆ ನಡೆಯುತ್ತದೆ.
ದುರ್ಗಾವತಿ ದೇವಿಯ ಗಂಡನಾದ ಭಗವತಿ ಚರಣ ವೋಹ್ರಾ ಹಾಗೂ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ರಾಜಗುರು, ಆಜಾದ್ ಇವರ ಮನೆಗಳು ಕ್ರಾಂತಿಕಾರಿ ಚಟುವಟಿಕೆಗಳ ಕೇಂದ್ರವಾಗಿತ್ತು. ದುರ್ಗಾ ದೇವಿ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ​​(HSRA) ಸದಸ್ಯರಾದ ಭಗವತಿ ಚರಣ್ ವೋಹ್ರಾ ಅವರ ಪತ್ನಿಯಾಗಿರುವುದರಿಂದ , HSRA ಯ ಇತರ ಸದಸ್ಯರು ಅವಳನ್ನು ಭಾಬಿ (ಹಿರಿಯ ಸಹೋದರನ ಹೆಂಡತಿ) ಎಂದು ಕರೆಯುತ್ತಿದ್ದರು. ಭಾರತೀಯ ಕ್ರಾಂತಿ ಕಾರಿ ವಲಯದಲ್ಲಿ ದುರ್ಗಾ ಭಾಬಿ”ಎಂದೇ ಜನಪ್ರಿಯರಾದರು.ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಮನೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕಂಡು ದುರ್ಗಾದೇವಿ ಗೆ ಹೆಮ್ಮೆ ಎನಿಸುತ್ತಿತ್ತು. ೧೦ ನೇ ವಯಸ್ಸಿನಲ್ಲಿ ಮದುವೆಯಾದ ದುರ್ಗಾದೇವಿ ಅನಕ್ಷರಸ್ಥಳಾಗಿದ್ದಳು. ಆದರೆ ಗಂಡ ಭಗವತಿ ಚರಣ್ ವಿದ್ಯಾವಂತನಾಗಿದ್ದನು. ಅವನು ತನ್ನ ಹೆಂಡತಿ ದುರ್ಗಾ ದೇವಿಯನ್ನು ಶಾಲೆಗೆ ಕಳುಹಿಸುತ್ತಾನೆ.ಹಾಗೂ ಇಬ್ಬರೂ ತಮ್ಮ ಶಿಕ್ಷಣವನ್ನು ಒಟ್ಟಿಗೆ ಮುಂದುವರಿಸುತ್ತಾರೆ.  ಅವಳು ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿ ನಂತರ ಪದವಿ ಪಡೆಯುತ್ತಾಳೆ. ಬಳಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು .ಅಲ್ಲದೆ ಸಾಯಂಕಾಲದ ಹೊತ್ತಿನಲ್ಲಿ ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದಳು. ಅವರ ಮನೆ ಎಲ್ಲರ ಮನೆಯಂತಿರದೆ ಹೊಸ ಹೊಸ ಕ್ರಾಂತಿಕಾರಿ ವಿಷಯಗಳ ಬಗ್ಗೆ  ಚರ್ಚೆಯ  ಸ್ಥಳವಾಗಿತ್ತು. ಅಲ್ಲದೆ ಬ್ರಿಟಿಷರ ವಿರುದ್ಧ ಹೋರಾಡಲು   ಬಾಂಬ್ ಗಳ ತಯಾರಿಕಾ ಸ್ಥಳವಾಗಿತ್ತು. ಲಾಹೋರ್ ನಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ, ಚಂದ್ರಶೇಖರ್ ಆಜಾದ್, ಭಗವತಿ ಚರಣ್ ವೋಹ್ರಾ ಇವರೆಲ್ಲರೂ ಒಬ್ಬರಿಗೊಬ್ಬರು ನಿಕಟವರ್ತಿಗಳಾಗಿದ್ದರು. ಆದರೆ ಅವರೆಲ್ಲರೂ ಬೇಕಾದಂತೆ ಒಬ್ಬರನ್ನು ಸಂಧಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಒಬ್ಬರಿಂದೊಬ್ಬರಿಗೆ ಮಾಹಿತಿಯನ್ನು ರವಾನಿಸುವ ಜವಾಬ್ದಾರಿಯನ್ನು ಭಗವತಿ ಚರಣ್ ತನ್ನ ಹೆಂಡತಿ ದುರ್ಗಾದೇವಿಗೆ ಒಪ್ಪಿಸುತ್ತಾರೆ.. ಅವಳು ಮಾಹಿತಿಯನ್ನು ರವಾನೆ ಮಾಡುತ್ತಿದ್ದಳು.. ಹಾಗೆಯೇ ಬಾಂಬ್ ಗಳನ್ನು ಒಂದು ಕಡೆಯಿಂದ ಒಂದು ಕಡೆಗೆ ಸಾಗಿಸುವುದು ಹಾಗೂ ಅದಕ್ಕೆ ಬೇಕಾದ ರಾಸಾಯನಿಕಗಳನ್ನು ಗುಪ್ತವಾಗಿ ಸಾಗಿಸುವ ಕೆಲಸ ಮಾಡುತ್ತಿದ್ಧಳು..ಭಗವತಿ  ಚರಣ್ ಅವಳನ್ನು ಆರಿಸಲು ಕಾರಣವೂ ಇತ್ತು. ಆಗಿನ ಕಾಲದಲ್ಲಿ 20- 21 ವರ್ಷದ ಮಹಿಳೆ ಇಂತಹ ಕೆಲಸವನ್ನು ಮಾಡುವುದನ್ನು ಯಾರೂ ಊಹಿಸಲೂ ಸಾಧ್ಯವಿರಲಿಲ್ಲ.  



   ಒಂದು ದಿನ ಗಂಡ ಅವಳ ಕೈಗೆ ಬಂದೂಕನ್ನು ನೀಡುತ್ತಾನೆ. ಮಗುವಿನ ಪಾಲನೆ ಪೋಷಣೆ ಮಾಡಿದ ಕೈಯಲ್ಲಿ ಗಂಡ  ಬಂದೂಕು ನೀಡಿದಾಗ ಅವಳಿಗೆ ಏನು ಹೇಳಬೇಕೆಂದು ತಿಳಿಯದಾಯಿತು.ಅಪಾಯವನ್ನು ಸೆರಗಿಗೆ ಕಟ್ಟಿಕೊಂಡು ಓಡಾಡುವ ಹೆಂಡತಿಗೆ ಇದರ ಅಗತ್ಯ ಇದೆ ಎಂದು ಅರಿತಿದ್ದ ಭಗವತಿ‌ ಚರಣ್ ಪಿಸ್ತೂಲನ್ನು ರಕ್ಷಣೆಗಾಗಿ ಇಟ್ಟುಕೊಳ್ಳಲು ನೀಡಿದ್ದನ್ನು ಅರಿತ ದುರ್ಗಾದೇವಿಗೆ ಗಂಡನ‌ ಮೇಲೆ ಗೌರವ, ಪ್ರೀತಿ, ಅಭಿಮಾನ ಇನ್ನೂ ಹೆಚ್ಚಿತ್ತು.

ಮನೆ ಪಾಠಕ್ಕೆ ಬರುತ್ತಿದ್ದ ಇಂದರ್ ಎಂಬ ಹುಡುಗ ದುರ್ಗಾದೇವಿಯ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದ.
ಮೊದಮೊದಲು ಸೂಚನೆಗಳನ್ನು ಜೋಡಿಸುವುದು ದುರ್ಗಾದೇವಿಯ ಕೆಲಸವಾಗಿದ್ದು ನಂತರ ರಹಸ್ಯ ಕೋಡ್‌ ಗಳನ್ನು ರಚಿಸುವುದು ಅವಳ ಕೆಲಸವಾಯಿತು..


ಪತ್ರಗಳ ಕೆಲವು ಸಾಲುಗಳನ್ನು ಹಾಲಿನಿಂದ ಬರೆಯಲಾಗುತ್ತಿತ್ತು ಅದನ್ನು ಬೆಳಕಿನಲ್ಲಿ ಹಿಡಿದಾಗ ಅಥವಾ ಮೊಂಬತ್ತಿ‌‌ ಬೆಳಕಿನಲ್ಲಿ, ದೀಪದ ಬೆಳಕಿನಲ್ಲಿ  ಹಿಡಿದು ನೋಡಿದಾಗ ಮಾತ್ರ ಹೊಳೆಯುತ್ತಾ ಗುಪ್ತ ಸಂದೇಶಗಳು ಗೋಚರಿಸುತ್ತಿದ್ದವು. ಇದಲ್ಲದೆ ದುರ್ಗಾದೇವಿ  ಘೋಷಣಾ ಪತ್ರಗಳನ್ನು ಎಲ್ಲೆಡೆ ಹಂಚಬೇಕಾಗಿತ್ತು ಹಾಗೂ ತಲುಪಿಸಬೇಕಾಗಿತ್ತು. ಅವಳು ಹಾಗೂ ಇಂದರ್ ಈ ಕೆಲಸವನ್ನು ಮಾಡುತ್ತಿದ್ದರು. ದುರ್ಗಾದೇವಿ ತನ್ನನ್ನು ತಾನು ಪೋಸ್ಟ್ ಬಾಕ್ಸ್  ಎಂದೇ ಕರೆದುಕೊಳ್ಳುತ್ತಿದ್ದಳು. ಒಂದು ದಿನ ಇಂದರ್ ಕರಪತ್ರಗಳನ್ನು ಹಚ್ಚುವುದನ್ನು ತಿಳಿದ ಪೊಲೀಸರು ಅವನ ಮೇಲೆ ಗುಂಡಿನ ದಾಳಿ ಮಾಡುತ್ತಾರೆ.. ಬೇರೆ ಕಡೆ ಕೆಲಸದಲ್ಲಿ ಹೋಗಿರುವ ದುರ್ಗಾದೇವಿ ಮನೆಗೆ ಬಂದಾಗ ಇಂದರ್ ಹೆಣವಾಗಿ ಮಲಗಿದ್ದ.ದುರ್ಗಾದೇವಿ ಸ್ವಂತ ಮಗನನ್ನು  ಕಳೆದುಕೊಂಡಷ್ಟೇ ದುಃಖಿತ ಳಾದಳು.ಇಂದರ್ಗೆ ಗುಂಡೇಟು ತಾಗಿದ್ದರೆ ಅದರ ವಿಷ ಅಲ್ಲಿದ್ದ ಕ್ರಾಂತಿಕಾರಿಗಳೆಲ್ಲರ ಮನದೊಳಗೆ ಹೊಕ್ಕಿತ್ತು. ಪ್ರತಿಕಾರದ ಕಿಚ್ಚು ಎಲ್ಲರಲ್ಲೂ ಹೊತ್ತಿ ಉರಿಯುತ್ತಿತ್ತು. 1928 ರಲ್ಲಿ ಬಂಗಾಳದ, ರಾಜಸ್ಥಾನದ, ಉತ್ತರ ಪ್ರದೇಶದ, ಪಂಜಾಬಿನ ಕ್ರಾಂತಿಕಾರಿಗಳೆಲ್ಲರೂ ಜೊತೆ ಸೇರುತ್ತಾರೆ. ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಎಸೋಸಿಯೇಷನ್ ಸ್ಥಾಪಿಸಲಾಯಿತು. ಅದೇ ಸಮಯದಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸುತ್ತದೆ. ಬ್ರಿಟಿಷರು ತಮ್ಮದೇ ಆದ ಸಂವಿಧಾನವನ್ನು ಜಾರಿಗೆ ತರಲು ಸನ್ನದ್ಧರಾಗುತ್ತಾರೆ. ಆ ಕಮಿಟಿಯಲ್ಲಿ  ಯಾವುದೇ ಭಾರತೀಯ ಸದಸ್ಯನಿರಲಿಲ್ಲ. ಇದರಿಂದ ಭಾರತದೆಲ್ಲೆಡೆ ಅದಕ್ಕೆ ವಿರೋಧ ವ್ಯಕ್ತವಾಯಿತು. ಸೈಮನ್ ಭಾರತದಲ್ಲೆಡೆ ಪ್ರವಾಸ ನಡೆಸಿದ ಸಂದರ್ಭದಲ್ಲಿ ಎಲ್ಲಾ ಕಡೆಯಲ್ಲಿಯೂ ಅವನಿಗೆ ವಿರೋಧ ಉಂಟಾಯಿತು. ಸೈಮನ್ ಗೋ ಬ್ಯಾಕ್ ಎಂಬ ಘೋಷಣೆ ಕೂಗಲು ಪ್ರಾರಂಭಿಸಿದರು. ಅವರ ಕಮಿಟಿ ಲಾಹೋರ್ ತಲುಪಿದಾಗ ಅಲ್ಲಿಯೂ ವಿರೋಧ ವ್ಯಕ್ತವಾಯಿತು.ಅಲ್ಲಿಯ ಸಂಘಟನೆಯ ನೇತೃತ್ವವನ್ನು ಲಾಲಾ ಲಜಪತ ರಾಯ್ ವಹಿಸಿದ್ದರು.ಅಲ್ಲಿ ನಡೆದ ಗಲಭೆಯಲ್ಲಿ ಲಾಲಾ ಲಜಪತ್ ರಾಯರು ಲಾಠಿ ಚಾರ್ಜ್ ನಿಂದ ಗಂಭೀರವಾಗಿ ಗಾಯಗೊಂಡು ನಂತರ ಮರಣ ಹೊಂದುತ್ತಾರೆ.. ದುರ್ಗಾ ಭಾಬಿಯ ಮನೆಯಲ್ಲಿ ಮೌನ ನೆಲೆಸಿತ್ತು. ಎಲ್ಲರೂ ಇದಕ್ಕೆ ಕೊನೆ ಎಂದು? ಎಂಬುದಾಗಿ ಚಿಂತಿಸುತ್ತಿದ್ದರು. ಕೊನೆಗೂ ದುರ್ಗಾಬಾಯಿಯೇ, ಮೌನ ಮುರಿಯುತ್ತಾಳೆ. ಲಾಟಿಚಾರ್ಜ್ ಗೆ ಆದೇಶ ನೀಡಿದ ಸ್ಕಾಟ್ ತಲೆಯೇ ಅವರ ಸಾವಿಗೆ ಉತ್ತರ ಎಂದು ಹೇಳುತ್ತಾಳೆ. ಆಗ ಭಗತ್ ಸಿಂಗ್ ಕೂಡ ಅದಕ್ಕೆ ತಲೆದೂಗುತ್ತಾನೆ. ಭಗತ್ ಸಿಂಗ್, ರಾಜಗುರು, ಸುಖದೇವ್, ಭಗವತಿ ಚರಣ್ ಎಲ್ಲರೂ ಅಧಿಕಾರಿಯನ್ನು ಮುಗಿಸಲು ಯೋಜನೆ ಹಾಕಿಕೊಳ್ಳುತ್ತಾರೆ. ಲಾಲಾ ಲಜಪತ ರಾಯ್ ಅವರಿಗೆ ಬಿದ್ದ ಲಾಠಿ ಏಟು ನಮ್ಮ ದೇಶಕ್ಕೆ ಆದ ಅವಮಾನ ಎಂದು ಅವರು  ಭಾವಿಸಿದ್ದರು.ಆದರೆ ಸ್ಕಾಂಡರ್ ಮತ್ತು ಸ್ಕಾಟ್ ಬಗ್ಗೆ ಗೊಂದಲವಿದ್ದುದ್ದರಿಂದ ಸ್ಕಾಟ್ ಬದಲಾಗಿ ಸ್ಕಾಂಡರ್ಸ್  ಕೊಲೆಯಾಗುತ್ತಾನೆ. ಅಂದು ರಾತ್ರಿ ರೇಡಿಯೋದಲ್ಲಿ ಸ್ಕಾಂಡರ್ಸ್ ನ ಕೊಲೆ ಮಾಡಿದ ಬಗ್ಗೆ ಪ್ರಸಾರವಾಯಿತು. ಹಾಗೂ ಕೊಲೆಗಾರ ಯಾರು ಎಂಬುದನ್ನು ನಮಗೆ ತಿಳಿದಿದೆ ಎಂಬುದನ್ನೂ ಬಿತ್ತರಿಸಲಾಯಿತು.

    ಮೋಟಾರ್ ಬೈಕಿನಲ್ಲಿ ಬಂದು ಕೊಲೆ ಮಾಡಿದವರಲ್ಲಿ ಒಬ್ಬ ಸಿಖ್ ಎಂಬುದು ಅಲ್ಲಿನ‌ ಪ್ರತ್ಯಕ್ಷ ದರ್ಶಿಗಳಿಗೆ ಗೊತ್ತಾಗಿತ್ತು.ಆದುದರಿಂದ ಅದು ಭಗತ್ ಸೀಗ್ ಇರಬಹುದೆಂದು ಊಹಿಸುತ್ತಾರೆ.ಏಕೆಂದರೆ ಭಗತ್ ಸಿಂಗ್ ಕೂಡಾ ಒಬ್ಬ ಸಿಖ್ ಆಗಿದ್ದ..ಅಲ್ಲದೆ ಭಗತ್ ಸಿಂಗ್ ನೋಡಲು ಅತ್ಯಂತ ಸುಂದರ ಯುವಕನಾಗಿದ್ದ.  

ನಂತರ ಬ್ರಿಟಿಷ್ ಅಧಿಕಾರಿಗಳಿಗೆ ಗುರುತು ಸಿಗಬಾರದೆಂದು ಭಗತ್ ಸಿಂಗ್ ತನ್ನ ಗಡ್ಡವನ್ನು ತೆಗೆಯುತ್ತಾನೆ. ಕೂದಲನ್ನು ಕತ್ತರಿಸಿಕೊಳ್ಳುತ್ತಾನೆ. ತನ್ನ ವೇಷಭೂಷಣಗಳನ್ನು ಬದಲಾಯಿಸಿಕೊಳ್ಳುತ್ತಾನೆ. ಅಂದು ಎಂದಿನಂತೆ ಸಂಜೆ ದುರ್ಗಾದೇವಿ ಮಕ್ಕಳಿಗೆ ಪಾಠ ಹೇಳುತಿದ್ದಾಗ ಯಾರೋ ಬಾಗಿಲು ಬಡಿದಂತಾಗಿ ಬಾಗಿಲು ತೆರೆದು ನೋಡಿದಾಗ ಆಜಾದ್ ಹಾಗೂ ಸುಖದೇವದೊಂದಿಗೆ ಬಂದ ಹೊಸ ವ್ಯಕ್ತಿ  ಕಂಡು ಅವನು ಯಾರು ಎಂಬಂತೆ ಪ್ರಶ್ನಾರ್ಥಕವಾಗಿ ನೋಡುತ್ತಾಳೆ.. ಪ್ರತಿದಿನ ನೋಡುತ್ತಿದ್ದ ದುರ್ಗಾದೇವಿಗೇ ಭಗತ್ ಸಿಂಗನನ್ನು ಗುರುತಿಸಲಾಗಿರಲಿಲ್ಲ.ಆಶ್ಚರ್ಯ ಗೊಳ್ಳುತ್ತಾಳೆ. ಆದುದರಿಂದ ಅವನನ್ನು ಬ್ರಿಟಿಷರು ಗುರುತಿಸಲಾರರು ಎಂದು ಅವಳು ಖಂಡಿತವಾಗಿ ನುಡಿಯುತ್ತಾಳೆ. ಹಾಗೂ ಸಂತಸ ಪಡುತ್ತಾಳೆ. ಆದರೆ ಬಹಳ ದಿನಗಳ ನಂತರ  ಎಲ್ಲರನ್ನೂ ಭೇಟಿಯಾದ ಸಂತಸ ತುಂಬಾ ಹೊತ್ತು ಉಳಿಯಲಿಲ್ಲ. ಪೊಲೀಸರು ಅವರ ಬೆನ್ನ ಹಿಂದೆ ಬಿದ್ದಿದ್ದಾರೆ ಎಂಬುದು ತಿಳಿದು ಹೋಯಿತು. ಅವಳು ತಡ ಮಾಡಲಿಲ್ಲ. ತನ್ನ ಶಿಕ್ಷಕಿ ಕೆಲಸಕ್ಕೆ ಸ್ವಲ್ಪ ದಿನಗಳ ರಜವನ್ನು ಬರೆದು ಅವರೆಲ್ಲರನ್ನೂ ಕರೆದು ಅಂದು ರಾತ್ರಿಯೇ ತಾವು ಲಾಹೋರ್ ನಿಂದ ಕಲ್ಕತ್ತಾಕ್ಕೆ ಹೇಗೆ ಹೋಗಬಹುದು ಎಂಬ ಯೋಜನೆಯ ಬಗ್ಗೆ ತಿಳಿಸಿದಳು,
ಅವರೆಲ್ಲರೂ ದುರ್ಗಾದೇವಿಯನ್ನು ತುಂಬಾ ಗೌರವಿಸುತ್ತಿದ್ದರು. ಕೂಡಲೇ ಅವರು ಒಪ್ಪಿಕೊಂಡರು. ದುರ್ಗಾದೇವಿ ತನ್ನ ಪುಟ್ಟ ಮಗು ಸಚ್ಚಿಯನ್ನು ಕರೆದುಕೊಂಡು  ಹೊರಟು ನಿಂತಳು. ಆಗ ಆಜಾದ್ ಹಾಗೂ ಭಗತ್ ಸಿಂಗ್ ಮಗುವನ್ನು ಕರೆದುಕೊಂಡು ಹೋದರೆ ಅವನೂ ಗುಂಡೇಟಿಗೆ ಬಲಿಯಾಗಬಹುದು ಎಂದು ಪರಿಪರಿಯಾಗಿ ಕೇಳಿಕೊಂಡರು. ಆದರೂ ಅವಳು ಸಚ್ಚಿ  ಒಬ್ಬ ಕ್ರಾಂತಿಕಾರಿಯ ಮಗ ದೇಶಕ್ಕಾಗಿ ಅವನ ಪ್ರಾಣವೇ ಬೇಕೆಂದಾದರೆ ಅದು ಅವನ ಸೌಭಾಗ್ಯ ಎಂದು ದೃಢ ನಿರ್ಧಾರದಿಂದ ಹೊರಟು ನಿಂತಳು. ಆಗಿನ ಕಾಲಕ್ಕೆ ಹೆಣ್ಣು ಪತ್ನಿಯಾಗಿ ಮಗುವಿನ ತಾಯಿಯಾಗಿ ಗುರುತಿಸಿಕೊಳ್ಳುತ್ತಿದ್ದರು . ಆದರೆ ದುರ್ಗಾ ಭಾಬಿ ತನ್ನ ದೇಶಕ್ಕಾಗಿ ಅಂದು ತನ್ನ ಪಾತ್ರವನ್ನು ಬದಲಿಸಿಕೊಂಡು ಭಗತ್ ಸಿಂಗ್ ನ ಪತ್ನಿಯಾಗಿ ಪ್ರಯಾಣಿಸಲು ನಿರ್ಧರಿಸುತ್ತಾಳೆ. ಆ ಕಾಲದಲ್ಲಿ ಹೆಣ್ಣಿನ ಮಾನಸಿಕ ಸ್ಥಿತಿ ಇಂತಹವುಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ.ಆದರೂ ದೇಶಕ್ಕಾಗಿ ಅವಳು ಏನು‌ ಮಾಡಲೂ ಸಿದ್ಧಳಿದ್ದಳು..ಹಾಗೂ ಆ ಸಮಯದಲ್ಲಿ ಯಾವುದನ್ನೂ ಚಿಂತಿಸುವುದನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವುದು ಮುಖ್ಯ ವಾಗಿತ್ತು.  ಅವಳು ಅತ್ಯಂತ ಶ್ರೀಮಂತ ಉಡುಪನ್ನು  ಧರಿಸಿ ಭಗತ್ ಸಿಂಗ್ ನೊಂದಿಗೆ ಪ್ರಥಮ ದರ್ಜೆಯ ಭೋಗಿಯಲ್ಲಿ ಕುಳಿತು ಪ್ರಯಾಣಿಸಲು ಟಿಕೆಟ್ ಪಡೆಯಲು ಹೋಗುತ್ತಾಳೆ. ಚಂದ್ರಶೇಖರ್ ಆಜಾದ್ ಸನ್ಯಾಸಿಯ ರೂಪದಲ್ಲಿಯೂ, ಸುಖದೇವ್ ಇವರ ಕೆಲಸಗಾರನಂತೆ ಜೊತೆಗಿರುತ್ತಾರೆ. ಅದ್ಯಾಕೋ ಪೋಲಿಸ್ ಒಬ್ಬನಿಗೆ ಇವರ ಮೇಲೆ ಸಂಶಯ ಬರುತ್ತದೆ. ಅವನು ಇವರ ಹಿಂದೆಯೇ ಟ್ರೈನ್ ಹತ್ತುತ್ತಾರೆ. ಆಗ ಅವರ ಗಮನವನ್ನು ಬದಲಾಯಿಸಲು ದುರ್ಗಾದೇವಿ ತನ್ನ ಅಳುತ್ತಿರುವ ಮಗನನ್ನು ಪೋಲಿಸ್ ಆಫೀಸರ್ ಕೈಗೆ ಕೊಟ್ಟು ಅವನನ್ನು ಸಂಭಾಳಿಸಲು ಹೇಳುತ್ತಾಳೆ. ಇದರಿಂದ ಗಲಿಬಿಲಿಗೊಂಡ ಪೊಲೀಸ್ ಆಫೀಸರ್ ನೆಟ್ಟಗೆ ಎದ್ದು ಹೊರಡುತ್ತಾನೆ..ಇಂತಹ ಚಿಕ್ಕಮಗುವನ್ನು ಕರೆದುಕೊಂಡು ಹೋಗುವವರು ಭಗತ್ ಸಿಂಗ್ ಆಗಿರಲು  ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ. ಹಾಗೆ ಅವರು ಕಲ್ಕತ್ತಾ ತಲುಪಿದಾಗ ಅಲ್ಲಿ ಭಗವತಿ ಚರಣ್ ಹಾಗೂ ಅವನ ಸಹೋದರಿ ಇವರನ್ನು ಕಾದು ಕುಳಿತಿರುತ್ತಾರೆ, ಒಂದು ಪಕ್ಷಿಯೂ ಲಾಹೋರ್ ನಿಂದ ಹೊರ ಹೋಗಲು ಸಾಧ್ಯವಿಲ್ಲದಂತಹ ಆ ಪರಿಸ್ಥಿತಿಯಲ್ಲಿ ದುರ್ಗಾದೇವಿಯು ತನ್ನ ಚಾಕಚಕ್ಯತೆಯಿಂದ  ಅಂದು ಕ್ರಾಂತಿಕಾರಿಗಳೆಲ್ಲರನ್ನೂ ಕಲ್ಕತ್ತಾ ತಲುಪಿಸುತ್ತಾಳೆ. ಕಲ್ಕತ್ತಾದಲ್ಲಿ ಅವರಿಗೆ ಜತೀಂದ್ರ ನಾಥ ನಂತಹ ಕ್ರಾಂತಿಕಾರಿಗಳ ಒಡನಾಟ ಲಭಿಸುತ್ತದೆ. ಬಾಂಬ್ ತಯಾರಿಕೆಯ‌ಬ ಗ್ಗೆ ಅರಿತಿದ್ದ ಜತೀಂದ್ರನಾಥ್ ನಿಂದ ಬಾಂಬ್ ತಯಾರಿಕೆಯನ್ನು ಕಲಿತುಕೊಳ್ಳುತ್ತಾರೆ. ಸ್ವಲ್ಪ ದಿನಗಳ ಬಳಿಕ ದುರ್ಗಾ ಬಾಬಿ ಲಾಹೋರ್ ಗೆ ವಾಪಸ್ ಆಗುತ್ತಾಳೆ. ಲಾಹೋರ್ ಗೆ ಬಂದು ಬಹಳ ದಿನಗಳಾಗಿತ್ತು. ಆ ಸಮಯದಲ್ಲಿ ದೆಹಲಿಯ ತುಂಬಿದ ಅಸೆಂಬ್ಲಿಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಎಂಬ ಕೂಗಿನೊಂದಿಗೆ ಭಗತ್ ಸಿಂಗ್ ಬಾಂಬ್ ಎಸೆಯುತ್ತಾನೆ.  ಭಗತ್ ಸಿಂಗರನ್ನು ಅರೆಸ್ಟ್ ಮಾಡಲಾಗುತ್ತದೆ. ಲಾಹೋರ್‌ ನ ಜೈಲಿನಲ್ಲಿ ಇಡಲಾಗುತ್ತದೆ.

 ದುರ್ಗಾ ಭಾಬಿ ತನ್ನ ಮನೆಯಲ್ಲಿ ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದಳು. ಹಾಗೂ ಜೈಲಿನಲ್ಲಿ ಬಾಂಬ್ ಎಸೆದು ಭಗತ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವುದು ಅವರ ಉದ್ದೇಶವಾಗಿತ್ತು. ಅಲ್ಲಿ ಎರಡು ಜೈಲುಗಳಿದ್ದವು. ಒಂದರಲ್ಲಿ ಭಗತ್ ಸಿಂಗ್ ಇದ್ದರೇ ಇನ್ನೊಂದರಲ್ಲಿ ಅವನ ಸಹಚರರು ಇದ್ದರು. ದಿನಾ ಆ ಜೈಲಿನಿಂದ ಈ ಜೈಲಿಗೆ ಈ ಜೈಲಿಗೆ ಭಗತ್ ಸಿಂಗನನ್ನು ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು. ಆ ಸಮಯದಲ್ಲಿ ಬಾಂಬ್ ಎಸೆದು ಅವನನ್ನು ಬಿಡಿಸುವುದು ದುರ್ಗಾ ಬಾಯಿ  ಹಾಗೂ ಇತರರ ಉದ್ದೇಶವಾಗಿತ್ತು.ಒಂದು ದಿನ ತಾವು ತಯಾರಿಸಿದ ಬಾಂಬಿನ ಪರೀಕ್ಷೆಗಾಗಿ ಭಗವತಿ ಚರಣ್ ದಾಸ್ ತನ್ನ ಸಂಗಡಿಗ ರೊಂದಿಗೆ ನದಿ ತೀರಕ್ಕೆ ಹೋಗುತ್ತಾನೆ.. ಅದನ್ನು ಪರೀಕ್ಷಿಸಲು ಹೊರಟ ವೈಶಂಪಾಯನ ಹಾಗೂ ಯಶ್ಪಾಲ್ ಎಂಬ ಕ್ರಾಂತಿಕಾರರನ್ನು ತಡೆದು ಭಗವತಿ ಚರಣ್ ತಾನೇ ಬಾಂಬ್ ಪರೀಕ್ಷಿಸುವುದಾಗಿ  ಹೇಳುತ್ತಾನೆ.ಕಾರಣ ಅವನು ಬಾಂಬ್ ಬಗ್ಗೆ ಹೆಚ್ಚು ತಿಳಿದವನಾಗಿದ್ದನು.. ಆದರೆ ಬಾಂಬ್ ಪರೀಕ್ಷೆಯ ಸಮಯದಲ್ಲಿ ಭಗವತಿ ಚರಣ್ ಅವರ ಕೈಯಲ್ಲಿಯೇ ಬಾಂಬ್ ಸಿಡಿದು ಅವರ ದೇಹ ಛಿದ್ರವಾಗಿ ಮೃತಪಡುತ್ತಾರೆ.ಆ ಸಮಯದಲ್ಲಿ ಭಗವತಿ ಚರಣ್ ದಾಸ್ ನ‌ ಮೃತದೇಹವನ್ನು ಮನೆಗೆ ತಂದರೆ ಅಥವಾ ಸುಟ್ಟರೆ ಎಲ್ಲರಿಗೂ ಬಾಂಬ್ ತಯಾರಿಸುವ ವಿಷಯ ಗೊತ್ತಾಗಿ ಬ್ರಿಟಿಷರ ವರೆಗೂ ಅದು ತಲುಪುವ ಸಾಧ್ಯತೆ ಇತ್ತು.ಆದುದರಿಂದ ಭಗವತಿ ಚರಣ್ ದಾಸ್ ರವರ ಛಿದ್ರವಾದ ಗುರುತು ಸಿಗದಂತಹ ದೇಹವನ್ನು ನದಿಯಲ್ಲಿ ತೇಲಿಬಿಡುತ್ತಾರೆ ಮನೆಯಲ್ಲಿ ಎಂದಿನಂತೆ ಅಭ್ಯಾಸಕ್ಕಾಗಿ ಬಂದಿದ್ದ  ಮಕ್ಕಳ ಜೊತೆಗೆ ದುರ್ಗಾ ಬಾಯಿ ಅವರ ಹಿಂತಿರುಗುವಿಕೆಯನ್ನು ಕಾತರದಿಂದ ಕಾಯುತ್ತಿದ್ದಳು .   ಕುಂದಿದ ಮುಖದೊಂದಿಗೆ ಭಗವತಿ‌ ಚರಣ್ ನ ಜೊತೆಯಿಲ್ಲದೆ ಬಂದ ವೈಶಂಪಾಯನ‌ಹಾಗೂ ಯಶ್ ಪಾಲ ರನ್ನು ಕಂಡು‌ ನಡೆದಿರಬಹುದಾದ ಅನಾಹುತದ ಅರಿವು ದುರ್ಗಾದೇವಿಗಾಯಿತು.ತನ್ನ ಗಂಡ ಇನ್ನೆಂದೂ ಬರಲಾರ ಎಂಬುದು ಗೊತ್ತಾಗಿ ಹೋಗಿತ್ತು. ಭಗತ್ ಸಿಂಗನನ್ನು  ಬಿಡಿಸುವುದಕ್ಕಾಗಿ ಭಗವತಿ ಚರಣ ಬಾಂಬ್ ತಯಾರಿಸುತ್ತಿದ್ದು, ಅವರು ಸತ್ತಿರುವುದು ಕ್ರಾಂತಿಕಾರಿಗಳಿಗೆ ಮಾತ್ರ ನಷ್ಟವಲ್ಲದೆ ಅವಳ ವೈಯಕ್ತಿಕ ಬದುಕಿಗೂ ನಷ್ಟವಾಗಿತ್ತು.. ದುರ್ಗಾಬಾಯಿ ಕಲ್ಲಾದಳು. ಸಂಪೂರ್ಣವಾಗಿ ತನ್ನನ್ನು ಕ್ರಾಂತಿಕಾರಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಳು. ಬೇರೆ ಬೇರೆ ವೇಷಗಳನ್ನು ಧರಿಸಿ ಒಂದು ಕಡೆಯಿಂದ ಒಂದು ಕಡೆಗೆ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಸಂಚರಿಸುತ್ತಿದ್ದಳು. ಒಂದೊಂದು‌ ಊರಿಗೆ ಹೋದಾಗ ಆ ಊರಿನ‌ಸಾಂಪ್ರದಾಯಿಕ  ಉಡುಪುಗಳನ್ನು ಧರಿಸಿಕೊಳ್ಳುತ್ತಿದ್ದಳು. ಭಗತ್ ಸಿಂಗನನ್ನು ಭೇಟಿಯಾಗಲೂ ಹೋದಾಗ ಅವನ ಚಿಕ್ಕಮ್ಮನಾಗಿ ಹೋಗಿ ಭಗತ್ ಸಿಂಗ್ ಭೇಟಿಯಾಗುತ್ತಾಳೆ. ಸಂಘಟನೆಯ ಗುಪ್ತಚರಳಾಗಿ ಹೋಗಿ ಭಗತ್ ಸಿಂಗ್  ಧೈರ್ಯ ಕುಂದದಂತೆ ಮಾಡಲು ಕ್ರಾಂತಿಕಾರಿ ಚಟುವಟಿಕೆಗಳ ಬೆಳವಣಿಗೆಯ ಬಗ್ಗೆ ಜೈಲಿಗೆ ಸಣ್ಣ ಚೀಟಿಯ ಮೂಲಕ ಆಗುಹೋಗುಗಳನ್ನು ತಿಳಿಸುತ್ತಿದ್ದಳು. ಆಗ ಭಗತ್ ಸಿಂಗ್ ಬಾಂಬ್ ಹಾಕಿದ ಕೇಸ್ ನ ವಿಚಾರಣೆ ನಡೆಯುತ್ತಿತ್ತು..ಅದು ಜೈಲಿನ ಒಳಗೇ ನಡೆಯುತ್ತಿತ್ತು.ಅವನ ವಿಚಾರಣೆ ನಡೆದಾಗಲೆಲ್ಲಾ ಸಾವಿರಾರು  ಜನರು ಹೊರಗೆ ಅದರ ಬಗ್ಗೆ ತಿಳಿಯಲು ಬಂದು ಕುಳಿತಿರುತ್ತಿದ್ದರು.ದುರ್ಗಾವತಿ ದೇವಿ ಅವನನ್ನು ಬಿಡಿಸಲು ತನ್ನಲ್ಲಿರುವ ಚಿನ್ನವನ್ನೆಲ್ಲ ಮಾರಿ ೩೦೦೦ ರೂ.ಗಳನ್ನು ಕೊಡುತ್ತಾಳೆ.. ಹೀಗಿರುವಾಗಲೇ ಒಂದು ದಿನ ಭಗತ್ ಸಿಂಗ್ ರಾಜಗುರು ಸುಖದೇವ್ ಇವರಿಗೆ ನೇಣು ಶಿಕ್ಷೆ ಘೋಷಣೆಯಾಗುತ್ತದೆ..ಇದನ್ನು ಇತಿಹಾಸದಲ್ಲಿ ರಾಜಕೀಯ ಷಡ್ಯಂತ್ರ ಎಂದು‌ ಕರೆಯಲಾಗುತ್ತದೆ. ಈ ಒಂದು ಅನ್ಯಾಯಕ್ಕೆ ಯಾವುದೇ ರೀತಿಯಲ್ಲಾದರೂ ಒಂದು ಉತ್ತರ ಕೊಡಬೇಕೆಂದು ದುರ್ಗಾವತಿ ದೇವಿ ಯಶ್ ಪಾಲ್ ಹಾಗೂ ವೈಶಂಪಾಯನ ಪಣತೊಟ್ಟರು.   ದುರ್ಗಾಬಾಯಿ ತನ್ನ ಸಂಗಡಿಗರೊಂದಿಗೆ ಬಾಂಬೆಗೆ ಬರುತ್ತಾಳೆ. ಗಲ್ಲು ಶಿಕ್ಷೆ ಘೋಷಣೆಗೆ ಉತ್ತರವಾಗಿ ಗವರ್ನರ್ ಅನ್ನು ಕೊಲ್ಲವುದೆಂಬ ತೀರ್ಮಾನ ಅವರದಾಗಿತ್ತು. ಕಾರಿನಲ್ಲಿ ವೈಶಂಪಾಯನ ನೊಂದಿಗೆ ದುರ್ಗಾವತಿ ದೇವಿ ಬರುತ್ತಾಳೆ. ಆದರೆ ಗವರ್ನರ್ ನಿವಾಸದ ಭದ್ರತೆಯಿಂದ ಗವರ್ನರ್ ಅನ್ನು ಕೊಲ್ಲುವುದು ಕಷ್ಟವಾಗಿತ್ತು. ಆದರೆ ಬಂದ ಮೇಲೆ ಯಾರನ್ನಾದರೂ ಬಲಿ ತೆಗೆದುಕೊಳ್ಳಲೇಬೇಕೆಂದು ನಿರ್ಧರಿಸಿದರು. ತುಂಬಾ ಕಾಯುವಿಕೆಯ ನಂತರ ಬ್ರಿಟಿಷ್ ಅಧಿಕಾರಿಗಳು ಹೊರಗೆ ಬರುತ್ತಾರೆ.ದುರ್ಗಾವತಿ ದೇವಿ ಒಬ್ಬ ಪೋಲಿಸ್ ಅಧಿಕಾರಿಗೆ ಗುಂಡು ಹಾರಿಸಿ ಕೊಲ್ಲುತ್ತಾಳೆ. ಹಾಗೂ ಕಾರಿನಲ್ಲಿ ಸ್ವಲ್ಪದೂರ ಹೋಗಿ ತಪ್ಪಿಸಿಕೊಳ್ಳಲು  ಇಳಿದು ಓಡುವಾಗ ಅವಳ ಸೀರೆಯ ಚೂರೊಂದು ಬಾಗಿಲಿಗೆ ಸಿಕ್ಕಿಹಾಕಿಕೊಂಡು ಅಲ್ಲೇ ನೇತಾಡುತ್ತಿರುತ್ತದೆ.. ಆದ ..ಅಷ್ಟೇ ತಪ್ಪು ಅದರಲ್ಲಿದ್ದುದು ಹೆಂಗಸು ಎಂದು ಗೊತ್ತಾಗುತ್ತದೆ.ಅಷ್ಟಾದ ಮೇಲೆ ಅದು ಯಾರು ಎಂದು ಕಂಡು ಹಿಡಿಯುವುದು ಆಗಿನ ಕಾಲದಲ್ಲಿ ಕಷ್ಟವಾಗಿರಲಿಲ್ಲಿ. ಸೀರೆಯ ತುಂಡನ್ನು ಹಿಡಿದು ಭಗವತಿ ಚರಣ್ ಜೊತೆ ಇದ್ದ ಫೋಟೋ ದೊಂದಿಗೆ ಹೊಂದಿಸಿದಾಗ ಅದೇ ಸೀರೆ ಆ ಪೋಟೋದಲ್ಲೂ‌ ಇದ್ದುದರಿಂದ ಕೊಲೆ ಮಾಡಿರುವುದು ದುರ್ಗಾ ಬಾಯಿ ಎಂದು ಪೊಲೀಸರಿಗೆ ಗೊತ್ತಾಗುತ್ತದೆ.. ದುರ್ಗಾಬಾಯಿಯ ಈ ಆಕ್ರಮಣ ಕ್ರಾಂತಿಕಾರಿ ಮಹಿಳೆಯ ಮೊದಲ  ಆಕ್ರಮಣ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಮುಂದೆ ಕ್ರಾಂತಿಕಾರಿಗಳ ಮನೆಯಲ್ಲಿ ಅವಳು ಆಶ್ರಯ ಪಡೆಯುತ್ತಾಳೆ. ಅಲ್ಲಿಗೂ ಬಂದ ಪೊಲೀಸರು ಅವಳನ್ನು ಹುಡುಕುತ್ತಿದ್ದರೆ ಇವಳು ಒಳಗೆ ಅನಾರೋಗ್ಯ ಪೀಡಿತ ಮುದುಕಿಯಂತೆ ಮಲಗಿ  ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಳು.. ಆದರೆ ಅದಾಗಲೇ ಚಂದ್ರಶೇಖರ ಆಜಾದ್ ಎನ್ ಕೌಂಟರ್ ನಲ್ಲಿ ಸತ್ತಿದ್ದರೆ,  ಭಗತ್ ಸಿಂಗ್ ರಾಜಗುರು ಸುಖ್ ದೇವ್, ನೇಣು ಶಿಕ್ಷೆಯಾಗಿತ್ತು.  ಪತಿಯಾದ ಭಗವತಿ ಚರಣರೂ ಸ್ವಲ್ಪ ದಿನಗಳ ಹಿಂದೆ ಮರಣ ಹೊಂದಿದ್ದರು. ಎಲ್ಲರನ್ನೂ ಕಳೆದುಕೊಂಡ ದುರ್ಗಾಬಾಯಿಗೆ ಇನ್ನು ಯಾರೂ ಜೊತೆಗಾರರಿರಲಿಲ್ಲ. ಬ್ರಿಟಿಷರಿಗೆ ಬೇಕಾದ ಕ್ರಾಂತಿಕಾರಿ ಮಹಿಳೆಯಾದುದರಿಂದ ಯಾರೂ ಆಶ್ರಯ ನೀಡಲೂ ಮುಂದೆ‌ ಬರಲಿಲ್ಲ.
ಹೆಂಡತಿಯಾಗಿ ,ಎಲ್ಲರ ಪ್ರೀತಿಯ ಭಾಬಿ ಆಗಿ, ಕ್ರಾಂತಿಕಾರಳಾಗಿ,ಗುಪ್ತಚರಳಾಗಿ ಎಲ್ಲಾ ಕೆಲಸಗಳನ್ನೂ ಉತ್ತಮವಾಗಿ ನಿಭಾಯಿಸಿದರೂ  ತನ್ನ ಮಗ ಸಚ್ಚಿಯ ಶ್ರೇಯಸ್ಸಿಗಾಗಿ ಕೊನೆಗೂ ದುರ್ಗಾವತಿ ದೇವಿ ಪೋಲೀಸರಿಗೆ ಶರಣಾಗುತ್ತಾಳೆ..ಮೂರುವರ್ಷಗಳ ಕಾಲ ಅವಳಿಗೆ ಜೈಲು ಶಿಕ್ಷೆಯಾಗುತ್ತದೆ.ಜೈಲಿನಲ್ಲಿ ಇದ್ದಷ್ಟು ದಿನವೂ ಅವರೆಲ್ಲರಂತೆ  ದೇಶಕ್ಕಾಗಿ ಆತ್ ಮಸಮರ್ಪಣೆ ಮಾಡುವ ಭಾಗ್ಯ ತನಗೆ ಸಿಗಲಿಲ್ಲವಲ್ಲಾ ಎಂದು ದುರ್ಗಾವತಿ ದೇವಿ ಕೊರಗುತ್ತಿದ್ದಳು.  ಬಿಡುಗಡೆಯಾದ ನಂತರ ಲಕ್ನೋಗೆ ಹೋಗುತ್ತಾಳೆ.ಮೊದಲಿನಿಂದಲೂ ಶಿಕ್ಷಕಿಯಾಗಿದ್ದ ಅವಳು ಒಂದು ಬಾಡಿಗೆ ಮನೆ ಪಡೆದು ೪ ಮಕ್ಕಳಿಂದ ಒಂದು‌ ಶಾಲೆ ಶುರುಮಾಡುತ್ತಾಳೆ. ನಿಧಾನವಾಗಿ ಶಾಲೆ ಬೆಳೆಯುತ್ತದೆ..ಅದೇ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ.ಆಗ ಅವರು ರಫೀ ಅಹಮದ್ ಮೆಮೋರಿಯಲ್ ಟ್ರಸ್ಟ್ ಎಂಬ ಟ್ರಸ್ಟ್‌ ತೆರೆಯುತ್ತಾಳೆ..ನಂತರ ಲಕ್ನೋ‌ ಮೋಂಟೆಸೊರಿ ಇಂಟರ್ ಕಾಲೇಜ್ ಸ್ಥಾಪಿಸುತ್ತಾಳೆ.ಆಚಾರ್ಯ ನರೇಂದ್ರ ದೇವ್ ಇದರ ಮೊದಲ ಪ್ರಾಂಶುಪಾಲರಾಗಿದ್ದರು.. ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಮಾತ್ರವಲ್ಲದೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಒಂದು ಸದೃಢ ಸಮಾಜವನ್ನು ನಿರ್ಮಿಸಲು ಶಿಕ್ಷಣ ಅಗತ್ಯ ಎಂದು ದುರ್ಗಾವತಿ ದೇವಿ ಆಗಲೇ ಅರಿತಿದ್ದರು.

ಅವಳು ನಂತರದಲ್ಲಿ ಎಲ್ಲರಿಂದರೂ ಎಲ್ಲದರಿಂದಲೂ ದೂರ ಉಳಿದು ಶಾಂತ ಸರಳ ಬದುಕನ್ನು ಬದುಕಿದಳು ದುರ್ಗಾ ಭಾಬಿ.
15 ಅಕ್ಟೋಬರ್ 1999 (ವಯಸ್ಸು 92)ರಂದು
 ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಿಧನಹೊಂದಿದರು…

(ಆಧಾರ: ಎಪಿಕ್ ಚಾನಲ್, ಅಂತರ್ಜಾಲ)


ವತ್ಸಲಾ ಶ್ರೀಶ

ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ‌ ಮೊದಲ‌ ಗಜ಼ಲ್ ಕೃತಿಯಾಗಿ ಹೊರಬಂದಿದೆ.

2 thoughts on “

  1. ಅರಿವಿಗೆ ಬಾರದಿರುವ ಅಂಶಗಳು ನಿಮ್ಮ ಲೇಖನದ ಮೂಲಕ ಹೊರಬರುವಂತಾಗಲಿ.ಶುಭಹಾರೈಕೆಗಳು.

  2. ನಿಜಕ್ಕೂ ರೋಮಾಂಚಕಾರಿ ಹೋರಾಟದ ಕಥನ ತಾಯಿ ದುರ್ಗಾಮಾತೆಯ ಜೀವನ ಸಾಧನೆ ಕುರಿತಾದ ಲೇಖನ ಮನೋಜ್ಞ

Leave a Reply

Back To Top