ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಬಾಲ್ಯವೆಂದರೇ…
ವರ್ಣಿಸಲಾಗದ ಅನುಬಂಧ..
ಗ್ವಾಡಿಕೇರ್ ಸಿದ್ದಣ್ಣರ ಹಿತ್ತಲ ಗಿಡದ ಹುಣಸೆ ಮರದ ಮೇಲೆ ಪಟಪಟನೆ ಏರಿ ಎಳೆ ಹುಣಸೆ ಮೊಗ್ಗುಗಳನ್ನು ಕಿತ್ತು ಗೆಳೆಯರತ್ತ ಎಸೆದು ಸರಸರನೇ ಇಳಿದು, ಉಪ್ಪು ಕಾರ ಹಚ್ಚಿಕೊಂಡು ತಿಂದ ನೆನಪು…
ಬೊಂಬಾಯಿ ಡ್ರಿಸ್ ಆಡುವಾಗ ಗೋಲಿಗಳನ್ನು ಗೆಳೆಯರಿಂದ ಗೆದ್ದು ಬಿಗಿದ ಸಂಭ್ರಮ, ಸೋತಾಗ ಅತ್ತು ಅತ್ತು ಕಣ್ಣೀರು ಒರೆಸಿಕೊಂಡ ನೆನಪುಗಳು…,
ದನದ ಹುಡುಗರೊಂದಿಗೆ ದನ ಕಾಯಲು ನಮ್ಮನ್ನು ಕಳಿಸಿದಾಗ ದನ ಮೇಯಲು ಬಿಟ್ಟು ಹುಡುಗರೊಂದಿಗೆ ಆಡುತ್ತಾ ಆಡುತ್ತಾ ಮೈಮರೆತಾಗ ಬೇರೆ ಯಾರೋ ಹೊಲಕ್ಕೆ ದನಗಳು ಮೇಯ್ದ ಕಾರಣಕ್ಕೆ, ಹೊಲದ ಮಾಲೀಕರು ನನ್ನ ಮೇಲೆ ಬಿದ್ದ ಕೊಟ್ಟ ಏಟುಗಳ ನೋವಿನ ರುಚಿಗಳ ನೆನಪು…,
ಚಿಕ್ಕೇರಿ, ಹುಲೇಗುಡ್ಡ, ಎರೆಗುಡ್ಡ, ಡೊಣಿಗುಡ್ಡ ಸುತ್ತುತ್ತಾ, ಸುತ್ತುತ್ತಾ ದನಗಳನ್ನು ಮೇಯಿಸಿಕೊಳ್ಳುತ್ತಾ ಮನೆಯಿಂದ ಕಟ್ಟಿಕೊಂಡು ತಂದ ಬಿಸಿ ರೊಟ್ಟಿ ಪುಂಡಿ ಪಲ್ಯ, ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ ತಿನ್ನುತ್ತಾ, ನಿಧಾನವಾಗಿ ಹರಿಯುವ ಎರೆಹಳ್ಳದ ತಿಳಿಯಾದ ಹಾಲಿನಂತಹ ನೀರನ್ನು, ಬೊಗಸೆ ತುಂಬಾ ಕುಡಿದ ನೆನಪುಗಳು…
ನೆನಪುಗಳೇ ಹಾಗೆ…!!
ಅವುಗಳಿಗೆ ಸಾವಿಲ್ಲ !!
ನೆನಪುಗಳು ವ್ಯಕ್ತಿಯೊಡನೆ ಹಾಸು ಹೊಕ್ಕಾಗಿ ಬಿಟ್ಟಿರುತ್ತೇವೆ. ಅದರಲ್ಲೂ ಬಾಲ್ಯದ ನೆನಪುಗಳು ಯಾವತ್ತೂ ಮರೆಯಲಾರದಂತ ಅನುಭೂತಿಯನ್ನು ಕಟ್ಟಿಕೊಡುತ್ತವೆ.
ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದು ಅಳುತ್ತ ಕುಳಿತ ಹುಡುಗನನ್ನು ನಾವುಗಳು ಅತ್ಯಂತ ಸಂಭ್ರಮದಿಂದ ನಾಲ್ಕಾರು ಹುಡುಗರೊಂದಿಗೆ ಅವನ ಕೈ ಕಾಲುಗಳನ್ನು ಹಿಡಿದು ದರದರನೇ ಎಳೆದುಕೊಂಡು ಶಾಲೆಯ ಕಡೆಗೆ ತಂದರೆ ದೊಡ್ಡ ಸಾಹಸವೇ ಮೆರೆದಿದ್ದೇವೆ ಎನ್ನುವ ಗರ್ವ ನಮಗೆ…!!
ಹೋಮ ವರ್ಕ್ ಮಾಡದಿದ್ದಾಗ, ಓದಲು ಬಾರದಿದ್ದಾಗ, ಶಿಕ್ಷಕರಿಂದ ಚಡಿಯೇಟು, ಒದೆತ, ಬೈಗುಳ ನಮ್ಮಷ್ಟು ತಿಂದವರು ಬಹಳ ಕಡಿಮೆ. ಸಮಾಜ ಹೇಳುವ ವಾಸಪ್ಪ ಮೇಷ್ಟ್ರಂತೂ ಪ್ರಶ್ನೆಗಳಿಗೆ ಉತ್ತರ ಹೇಳದೆ ಹೋದರೆ ನಮ್ಮ ಕೆನ್ನೆಗಳು ಕೆಂಪಾಗುತ್ತಿದ್ದವು. ರಪ ರಪ ಕೆನ್ನೆಗೆ ಬಾರಿಸುತ್ತಾ ಬುದ್ಧಿ ಹೇಳುತ್ತಿದ್ದರು. ಬಡಿಸಿಕೊಂಡ ನಾವು ಮನೆಯಲ್ಲಿ ಹೇಳುವಂತಿರಲಿಲ್ಲ..!!
ಮಧ್ಯಾಹ್ನ 1:30 ಕ್ಕೆ ಉಪ್ಪಿಟ್ಟಿನ ಘಮಲು ಶಾಲೆಯ ತುಂಬಾ ಹರಡುತ್ತಿತ್ತು. ಒಬ್ಬರಿಗೊಬ್ಬರು ಹಂಚಿ ತಿನ್ನುವ, ಒಂದೆ ತಟ್ಟೆಯಲ್ಲಿ ನಾಲ್ಕಾರು ಹುಡುಗರು ಕೂಡಿ ಉಪ್ಪಿಟ್ಟನ್ನು ಮುಗಿಸುವ ಸಂಭ್ರಮ ಹೇಳತೀರದು..!! ಅಲ್ಲಿ ಜಾತಿ,ಧರ್ಮಗಳಿಗೆ ಜಾಗವೇ ಇರಲಿಲ್ಲ.
ಗಂಟೆ ಹೊಡೆಯಲು ಎದ್ದೋಬಿದ್ದು ಓಡುತ್ತಿದ್ದ ನಾವುಗಳು ಗಂಟೆ ಬಾರಿಸಿದರೆ ಕೋಟೆಯನ್ನು ಗೆದ್ದಷ್ಟು ಖುಷಿ..! ಅಂತಹ ಸವಿ ನೆನಪುಗಳಲ್ಲಿ ತೇಲಿ ಹೋದ ನಾವುಗಳು ಇಂದಿನ ಬಾಲ್ಯದ ಮಕ್ಕಳಿಗೆ ಇಂತಹ ಅನುಭೂತಿಯ ನೆನಪುಗಳು ಸಿಗಲು ಸಾಧ್ಯವೇ…
ಸಾಧ್ಯವೇ ಇಲ್ಲ..!!
ನಮ್ಮ ಮಕ್ಕಳನ್ನು ಹೊರಗೆ ಆಟವಾಡಲು, ತಿರುಗಾಡಲು, ಸ್ನೇಹಿತರೊಂದಿಗೆ ಹರಟಲು ಬಿಡುವುದಕ್ಕೆ ನಾವು ಇಂದು ಹಿಂಜರಿಯುತ್ತೇವೆ. ಎಲ್ಲಿ ನನ್ನ ಮಗ/ಳ (ನಿ) ಗೆ ನೋವಾಗುತ್ತದೆಯೋ..? ಬಿದ್ದು ಬಿಡುವೆರೋ..? ಗಾಯವಾಗುತ್ತದೆಯೋ..? ಎಲ್ಲಿ ಏನಾದರೂ ಅಪಾಯ ತಗಲಿ ಬಿಡುತ್ತದೆಯೋ..? ಎನ್ನುವ ಅಂಜಿಕೆಯ ಅಪಾಯ ಅಳುಕು ಸದಾ ನಮ್ಮೊಳಗೆ ಇಳಿದುಬಿಟ್ಟಿದೆ.
ಯಾಕೆಂದರೆ ಅವತ್ತಿನ ಕಾಲಘಟ್ಟದಲ್ಲಿ ಒಂದು ಮನೆಯಲ್ಲಿ ಒಬ್ಬರಿಗೆ ಮೂರರಿಂದ ನಾಲ್ಕು ಮಕ್ಕಳು ಇರುತ್ತಿದ್ದರು. ಇಂದು ಒಬ್ಬರಿಗೆ ಒಂದು ಇಲ್ಲವೇ ಎರಡು ಮಕ್ಕಳು ಮಾತ್ರ..!! ಹೀಗಾಗಿ ಕಾಳಜಿ ಹೆಚ್ಚು..!!
ಆ ಮಕ್ಕಳನ್ನು ಕಾಪಾಡುವ ಧಾವಂತದಲ್ಲಿ ಅವರ ಬಾಲ್ಯದ ಸವಿ ಸವಿ ನೆನಪುಗಳನ್ನು ಕಿತ್ತುಕೊಳ್ಳುವ ನಮ್ಮಂತಹ ಪಾಲಕರ ಆತಂಕ ಇದ್ದೇ ಇರುತ್ತದೆ.
ಹಾಗಾದರೆ ಪಾಲಕರಿಗೆ ಇಂತಹ ಆತಂಕ ಏಕೆ..?
ಇಂದಿನ ವಾತಾವರಣ ಹಿಂದಿನಂತೆ ಇಲ್ಲ. ಇವತ್ತು ಜಾಗತೀಕರಣ, ನಗರೀಕರಣ, ಯಾಂತ್ರಿಕರಣ ಹಾಗೂ ಭೌತಿಕ ಕಾರಣದಿಂದಾಗಿ ಸಂಬಂಧಗಳು ಸಂಕುಚಿತಗೊಂಡಿವೆ. ಒಬ್ಬರಿಗೊಬ್ಬರು ನಂಬುವ ಸ್ಥಿತಿಯಲ್ಲಿ ಇಲ್ಲದೆ ಬದುಕುತ್ತಿದ್ದೇವೆ. ಆಂಡ್ರಾಯ್ಡ್ ಕಾಲದಲ್ಲಿ ಬದುಕುವ ನಾವುಗಳು ಮೊಬೈಲ್ ಗಳು ಏನೆಲ್ಲಾ ತೋರಿಸಬೇಕು ಅವು ಅದರ ಆಚೆಯೂ ತೋರಿಸುತ್ತವೆ.
ಮಕ್ಕಳ ಮೇಲೆ ಹಲವಾರು ದುಷ್ಕೃತ್ಯ ನಡೆದಿರುವ ಆತಂಕಗಳು ನಮ್ಮ ಕಣ್ಮುಂದಿವೆ. ಇಂತಹ ಆತಂಕಗಳ ನಡುವೆ ಮಕ್ಕಳನ್ನು ಬೆಳೆಸಬೇಕಾದ ಅನಿವಾರ್ಯತೆ ಇಂದಿನ ಪಾಲಕರಿಗೆ ಇದೆ. ಹಾಗಾಗಿ ಮಕ್ಕಳನ್ನು ಹೊರ ಕಳಿಸುವುದು ಪಾಲಕರಿಗೆ ಅತ್ಯಂತ ಆತಂಕದ ವಿಷಯ.
ಹಾಗೇಯೇ…
ಮಕ್ಕಳು ಮನೆಯಲ್ಲಿದ್ದರೂ ಇನ್ನೂ ಆತಂಕದ ವಿಷಯ. ಕಾರಣ ಮಕ್ಕಳ ಕೈಯಲ್ಲಿ ಯಾವಾಗಲೂ ಮೊಬೈಲ್ ಇಲ್ಲವೇ ಲ್ಯಾಪ್ಟಾಪ್, ಟ್ಯಾಬ್.. ಇದ್ದು ಅವು ಓದಿನ ಕಡೆಗೆ, ಆಟದ ಕಡೆಗೆ, ಗಮನಹರಿಸದೆ ಒಂಟಿತನದಲ್ಲಿ ತಮ್ಮನ್ನು ತಾವು ಅದರಲ್ಲಿ ಮರೆತು ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಮನೆಯ ಹಿರಿಯರಾದ ಅಜ್ಜನೊ ಅಥವಾ ಅಜ್ಜಿಯೋ ಇದ್ದರೆ, ಒಂದಿಷ್ಟು ತಮ್ಮ ಅನುಭವಪೂರಿತವಾಗಿರುವ ಮಾತುಗಳೊಂದಿಗೆ ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುತ್ತಾರೆ.
ಆದರೆ…
ಅದು ಕೂಡ ಇಂದು ಆಗಲಾರದ ಕೆಲಸವಾಗಿದೆ. ಏಕೆಂದರೆ ತಂದೆ ತಾಯಿ ಮಕ್ಕಳು ಮಾತ್ರ ಇವತ್ತು ಮನೆಯಲ್ಲಿರುತ್ತಾರೆ. ಹಿರಿಯರು ಊರಲ್ಲಿಯೋ ಅಥವಾ ಬೇರೆ ಮನೆಯಲ್ಲಿಯೋ ಇರಿಸಿಬಿಡುತ್ತಾರೆ. ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳು ಇರುವುದು ಕೂಡ ಇಂತಹ ಬಾಲ್ಯದ ನೆನಪುಗಳು ದೂರವಾಗಲು ಕಾರಣ.
ಬಾಲ್ಯವೆಂದರೆ ತನ್ನಷ್ಟಕ್ಕೆ ತಾನು ಎಲ್ಲಿಬೇಕಂದರಲ್ಲಿ ಆಡುವ, ಕುಣಿಯುವ, ಗೆಳೆಯರೊಂದಿಗೆ ಹರಟುವ, ಜಗಳ ಮಾಡುವ, ತುಂಟತನದೊಂದಿಗೆ ಸದಾ ತನ್ನ ಓರೆಗೆಯವರನ್ನು ಕಾಲೆಳೆಯುವ, ತನಗೆ ಇಷ್ಟವಾದ ಎಲ್ಲಾ ಕೆಲಸಗಳನ್ನು ಯಾವುದೇ ನಿರ್ಬಂಧಗಳಲ್ಲದೆ ಮಾಡುವ… ಸುಸಂದಂರ್ಭ..!! ಅಂತಹ ಕ್ಷಣಗಳು ಸಿಗುವುದು ಅಪರೂಪ.
ಬಾಲ್ಯವೆಂದರೆ ಹಾಗೆ ಅದು ಅಪರೂಪದ ಅನುಭೂತಿಯ ಅನುಬಂಧ. ನೆನಪಿಸಿಕೊಂಡಷ್ಟು ಮುಗಿಯದ ಆಳ. ಬಾಲ್ಯದ ಗೆಳೆಯರೊಂದಿಗೆ ಈಜುವ, ಮರಕೋತಿಯಾಡುವ, ಗೋಲಿಯಾಡುವ, ಹುಣಸೆ ಬೀಜದ ಆಟ, ಕಡ್ಡಿ ಪೆಟ್ಟಿಗೆಯ ಪಟ್ಟಣದ ಆಟ, ಕೋಲುಚಿಮ್ಮಾಟ, ಬುಗುರಿಯಾಟ, ಕಣ್ಣು ಮುಚ್ಚಾಲೆಯಾಟ.. ಒಂದೇ ಎರಡೇ..!!
ಶಾಲೆ ರಜೆ ಬಿಟ್ಟರೆ ಸಾಕು ಸಂಭ್ರಮವೂ ಸಂಭ್ರಮ ನಮಗೆ..!! ರವಿವಾರವಂತೂ ಒಂದ ಮುಂಜಾನೆಯಿಂದ ಮನೆ ಬಿಟ್ಟವರು ಸಂಜೆಯವರೆಗೂ ಮನೆ ಸೇರದೆ, ಗೆಳೆಯರ ಮನೆಯಲ್ಲಿ ಊಟ, ಆಟ, ನೋಟ, ಸ್ನಾನ ಎಲ್ಲವೂ..! ನಿರ್ಬಂಧರಹಿತವಾಗಿ ನಮ್ಮ ಮನಸ್ಸನ್ನು ತಣಿಸುತ್ತಿದ್ದು ಬಾಲ್ಯ.
ಅಂತಹ ಬಾಲ್ಯ ನಮಗೆ ಕೊಟ್ಟ ನೆನಪುಗಳು ಇವತ್ತಿಗೂ ಕೂಡ ಹಸಿ ಹಸಿಯಾಗಿವೆ. ಮನದೊಳಗೆ ಗೆಳೆಯರು,ಗುರುಗಳು, ಶಾಲೆ, ಕ್ರೀಡಾ ಮೈದಾನ…
ಯಾಕೋ ಒಂದು ಕ್ಷಣ..ಕಣ್ಣುಗಳು ಒದ್ದೆಯಾದವು. ಬಾಲ್ಯದ ನೆನಪುಗಳಿಗೆ ಕೊನೆಯಿಲ್ಲ…ಸ್ನೇಹಿತರ ಒಲವಿಗೆ ಮಿತಿಯಿಲ್ಲ..ಕರುಳ ಸಂಬಂಧಕ್ಕಿಂತ ಮಿಗಿಲೂ ಈ ಸ್ನೇಹ ಸಂಬಂಧ… ಸ್ನೇಹದ ಒಲವಧಾರೆ ನಮ್ಮೊಳಗೆ ಸದಾ ಜಿನುಗಲಿ…ಓ ಬಾಲ್ಯವೇ ಮತ್ತೊಮ್ಮೆ ಬಾ….
ರಮೇಶ ಸಿ ಬನ್ನಿಕೊಪ್ಪ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.