ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಪ್ರಕೃತಿಯನ್ನು ಆರಾಧಿಸೋಣ

ನವೆಲ್ಲಾ ಗಮನಿಸಿದ ಹಾಗೆ ಇಂದು ಸಂಸ್ಕೃತಿ ಉಳಿದಿದೆಯೇ? ಉಳಿಯುತ್ತಿದೆಯೆ? ಬೆಳೆಯುತ್ತಿದೆಯೇ? ನಾವು ಬೆಳೆಸುತ್ತಿದ್ದೇವೆಯೇ? ಇಂದಿನ ನಮ್ಮ ನಿಮ್ಮ ಮಕ್ಕಳ ಬಟ್ಟೆ, ಹಣೆ, ಕೈ, ಕಾಲುಗಳನ್ನು ಒಮ್ಮೆ ಗಮನಿಸಿದಾಗ ತಿಳಿಯುತ್ತದೆ. ಮುಖ ನೋಡಿದಾಗ ಹಣೆಯಲ್ಲಿ ದೊಡ್ಡ ಕುಂಕಮ್ಮವಿದ್ದರೆ ಅವರನ್ನು ಗೌರಮ್ಮ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೈಯಲ್ಲಿ ತುಂಬಾ ಬಳೆಗಳಿದ್ದರೆ ಕೆಲವರು ಅವರನ್ನು ಮಾರಮ್ಮ ಎಂದು ಛೇಡಿಸುವವರೂ ಇದ್ದಾರೆ. ಅಂದವಾಗಿ ಸೀರೆ ಇಟ್ಟು ಬಂದರೆ ಭಾರತ ಮಾತೆ ಎನ್ನುತ್ತಾರೆ. ಅಂದರೆ ಸೀರೆಯುಟ್ಟು, ಕಿವಿ, ಮೂಗು, ಕೈ ಕಾಲಿಗೆ ಆಭರಣ ಧರಿಸಿ ಬಂದವರು ಗೌರಮ್ಮಗಳು. ಇಂದಿನ ಯುವ ಜನಾಂಗದ ಕೆಲವರಿಗೆ ಸೀರೆ ಎಂದರೆ ಮದುವೆ ಮುಂತಾದ ಕಾರ್ಯಕ್ರಮಕ್ಕೆ ಮಾತ್ರ ಹಾಕಿಕೊಳ್ಳುವ ಬಟ್ಟೆ. ಅದು ಕೂಡಾ ಸ್ಲೀವ್ ಲೆಸ್ ಬ್ಲೌಸ್ ಹಾಕಿ, ಎದೆ ಭಾಗಕ್ಕಿಂತಲೂ ಕೆಳಗೆ ಸೆರಗು ಹಾಕಿ, ಅರ್ಧಂಬರ್ಧ ಹೊಟ್ಟೆ, ಬೆನ್ನು ಕಾಣಿಸಿ, ಒಂಥರಾ ಕಣ್ಣು ಕುಕ್ಕುವ ಹಾಗೆ ಕಾಣುವಂತೆ ಸೀರೆ ಉಟ್ಟು ಮೆರೆಯುವ ಇಂದಿನ ಪರಿ ಹೇಗೋ ತಿಳಿಯದು! ಇನ್ನು ಎಲ್ಲಾ ಲೇಟೆಸ್ಟ್. ರೆಡಿ ಸಾರೀ. ರೆಡಿ ಡ್ರೆಸ್, ರೆಡಿ ಅಲ್ಲದ್ದು ಗಿಡದಲ್ಲಿ ಇರುವ ಪೇರಳೆ ಮಾತ್ರವೋ ಏನೋ! ಈಗೆಲ್ಲಾ ರೆಡಿ ಗಳ ಕಾಲವೇ. ಅನ್ನ ರೆಡಿ,ಪಾಯಸ ರೆಡಿ, ಸಾಂಬಾರ್ ರೆಡಿ, ಚಪಾತಿ ರೆಡಿ, ಬಟ್ಟೆ ರೆಡಿ ಎಲ್ಲಾ ರೆಡಿ ಆಗಿ ಸಿಗುವ ಇದು ರೆಡಿ ಕಾಲ ಅಲ್ಲದೆ ಮತ್ತೇನು? ಸಂಪ್ರದಾಯಿಕ ಊಟ ತಿನ್ನಬೇಕು ಎನಿಸಿದರೆ ಸಾಕು, ಆನ್ಲೈನ್ ಸೇವೆ!


ತೊಡುವ ಬಟ್ಟೆ ಬರೆ ಮಾತ್ರವಲ್ಲ ನಮ್ಮ ಗುಣಗಳನ್ನು ಬದಲಾವಣೆ ತುಂಬಾ ಬಂದಿದೆ. ಎರಡು ಕೈಗಳನ್ನು ಒಟ್ಟಿಗೆ ತಂದ ನಮಸ್ಕಾರ ಎಂದು ಕೈ ಮುಗಿದು ಹೇಳುವ ಕಾಲ ಈಗ ಹೋಗಿದೆ. ಅದರಬಂದು ಬದಲು ಒಟ್ಟಿಗೆ ಸಿಕ್ಕಿದ ಕೂಡಲೇ ಜೋರಾಗಿ ಒಬ್ಬರಿಗೊಬ್ಬರು ತಬ್ಬಿಕೊಂಡು ಕೆನ್ನೆಗೆ ಮುತ್ತನ್ನು ಕೊಡುತ್ತಾ ಸಂತಸ ಪಡುವ ಕಾಲ ಬಂದಿದೆ. ಇದು ಪಾಶ್ಚಾತ್ಯ ಸಂಸ್ಕೃತಿಯ ಭಾಗವಲ್ಲವೇ? ಕರೋನಾ ರೋಗವನ್ನು ಹೊತ್ತು ತಂದಾಗ ಭಾರತದ ಪದ್ಧತಿಗಳು ಒಳ್ಳೆಯದು ಅನಿಸಿದ್ದು. ನಮ್ಮ ಸಂಸ್ಕೃತಿಯು ಯಾರಿಗೂ ಏನೂ ಕೆಟ್ಟದು ಬಯಸದಂತಹ ಆಚರಣೆಗಳನ್ನು ಬಳಸಿಕೊಂಡು ಬಂದಿರುವಂತಹದ್ದು. ವಿವಿಧ ಜಾತಿ, ಜನಾಂಗದ ಮದುವೆಯ ಪದ್ಧತಿಯನ್ನು ನೋಡಿ! ಗಂಡು ತನಗೆ ಏನು ಕೂಡ ಬೇಡ ಎಂದು ಕಾಶಿಗೆ ಹೊರಟು ಹೋಗುವುದು! ಹೆಣ್ಣಿನ ತಂದೆ ಆ ರೀತಿ ಹೋಗ ಬೇಡ ನಾನು ನಿನಗೆ ಹೆಣ್ಣು ಕೊಡುತ್ತೇನೆ ಎಂದು ತನ್ನ ಮಗಳು, ಹೆಣ್ಣನ್ನು ದಾನ ಮಾಡಿ ಕೊಡುವುದು! ಇಂತಹ ಪರಿಕಲ್ಪನೆ ಭಾರತೀಯರಿಗೆ ಮಾತ್ರ ಬರಲು ಸಾಧ್ಯ. ಅದನ್ನು ವಿವಾಹ ಪಾಣಿಗ್ರಹಣ, ಧಾರೆ ಎಂಬ ಹೆಸರಿನಿಂದ ಕರೆಯುವುದು. ಅಲ್ಲೂ ಸಪ್ತಪದಿ, ಏಳು ಜನಮದಲ್ಲೂ ಜೊತೆಯಾಗಿ ಇರುವೆ ಎನ್ನುತ್ತಾ ಏಳು ಹೆಜ್ಜೆಯನ್ನು ಒಟ್ಟಾಗಿ ಇರಿಸಿ, ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿ ಹೆಣ್ಣನ್ನು ತನ್ನ ಬಾಳ ಸಂಗಾತಿಯಾಗಿ ಮಾಡಿಕೊಂಡ ಘಳಿಗೆಗೆ ಅರುಂಧತಿ ನಕ್ಷತ್ರದ ಸಾಕ್ಷಿ! ಧಾರೆಯ ಮೂಲಕ ನೀರು, ಹೋಮದ ಮೂಲಕ ಅಗ್ನಿ, ಮಂತ್ರದ ಮೂಲಕ ಗಾಳಿ, ಭೂಮಿ ಸ್ಪರ್ಶದ ಮೂಲಕ ಏಳು ಹೆಜ್ಜೆ, ನಕ್ಷತ್ರ ತೋರಿಸುವುದರ ಮೂಲಕ ಆಕಾಶ! ಪಂಚದೈವಗಳ ಜೊತೆ ಮಿಲನ. ಅಂದರೆ ಬದುಕು ಈ ಜಗತ್ತಿನ ಗಾಳಿ, ನೀರು, ಬೆಂಕಿ, ಆಕಾಶ, ಭೂಮಿಗಳನ್ನು ಬಿಟ್ಟು ಬೇರಿಲ್ಲ. ಪ್ರಕೃತಿಯೇ ಬದುಕು, ಅದಕ್ಕೆ ತಲೆಬಾಗಿ ಬದುಕುವುದೇ ನಿಜವಾದ ಬದುಕು! ಒಂದು ಉಪಗ್ರಹವನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸಿ ಅದನ್ನು ಉಡಾವಣೆ ಮಾಡುವಾಗಲೂ ಒಳ್ಳೆಯ ಸಮಯ ನೋಡಿ, ಗಣಿತ ಶಾಸ್ತ್ರದ ಮೂಲಕ ಲೆಕ್ಕಕ್ಕೆ ಒಳಪಟ್ಟ ಸರಿಯಾದ ಸಮಯವನ್ನು ಅಸ್ಟ್ರಾಲಜಿ ಮೂಲಕ ನೋಡಿ, ದೇವರ ದಯೆ ಕೋರಿ ಉಡಾಯಿಸುವ ನಮಗೆ ಪ್ರಕೃತಿಯಲ್ಲಿ ಸಿಗುವ ಕಲ್ಲು, ಮಣ್ಣು, ಮರ, ಪ್ರಾಣಿ ಎಲ್ಲವೂ ದೇವರೇ. ನಾವು ಪ್ರಕೃತಿಯ ಆರಾಧಕರು. ಕಲ್ಲಿಗೂ ಕೈ ಮುಗಿಯುತ್ತೇವೆ ಎಂದಲ್ಲ, ಕಲ್ಲಿನಲ್ಲಿಯೂ ದೇವರನ್ನು ಕಾಣುವ ಹೃದಯ ಉಳ್ಳ ಅಹಂ ಬ್ರಹ್ಮಾಸ್ಮಿ ಗಳೂ ನಾವೇ. ಸರ್ವಂ ಜಗಣ್ಮಯಂ ಎಂದವರು ಕೂಡಾ ನಾವೇ. ಇದೇ ಭಾರತದ ವೈವಿಧ್ಯತೆಯಲ್ಲಿ ಏಕತೆಯ ಸಂಸ್ಕೃತಿ.
ಯಾವುದೇ ಕಾರ್ಯದ ಆರಂಭಕ್ಕೆ ಮುನ್ನ ಗಣಪತಿಯ ಪೂಜೆ, ಗಣಪನಿಗೆ ಆನೆಯ ಮುಖ ಅಂದರೆ ಪ್ರಕೃತಿಯ ಮೂಕ ಪ್ರಾಣಿಗಳನ್ನು ಮೊದಲು ನೆನೆ. ಕಾರಣ ಅವು ತಮ್ಮ ಆಹಾರದ ಅವಶ್ಯಕತೆಯ ಹೊರತಾಗಿ ಯಾರಿಗೂ ಏನೂ ಮಾಡಲಾರವು. ಮನುಷ್ಯರ ಹಾಗೆ ಪ್ರಾಣಿಗಳು ಮೋಸ, ವಂಚನೆ , ದ್ರೋಹ ಬಗೆಯುವುದಿಲ್ಲ ಅಲ್ಲವೇ? ಗಣಪತಿಯ ಕೆಳಗೊಂದು ಇಲಿ! ಸಣ್ಣ ಜೀವಿಯನ್ನು ಕೂಡಾ ಕಡೆಗಣಿಸಬೇಡಿ ಎನ್ನುವ ತತ್ವ ಅಲ್ಲಿ. ಇಲಿಗಳು ಕೂಡಾ ಪ್ರಾಣಿ ಸಂಕುಲದಲ್ಲಿ ಪರಿಸರದ ಜೈವಿಕ ಕ್ರಿಯೆಯಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತವೆ. ಕೀಟಗಳನ್ನು, ಹೆಚ್ಚಾದ ಧಾನ್ಯಗಳನ್ನು ತಿಂದು, ಹಾವು, ಹದ್ದು, ಗಿಡುಗ, ಗರುಡ ಮುಂತಾದ ಎಲ್ಲಾ ಪ್ರಾಣಿ , ಪಕ್ಷಿ, ಉರಗಗಳಿಗೆ ಆಹಾರವಾಗಿ ಬದುಕುವ ಈ ಜೀವಿ ಮಾನವನ ಡಿ ಎನ್ ಎ, ಆರ್ ಎನ್ ಎ ಹೋಲುವ ಕಾರಣ ಅದು ಮದ್ದುಗಳ ಬಳಕೆಯ ಪರೀಕ್ಷೆಯಲ್ಲಿ ಹೆಚ್ಚು ಬಳಕೆಯಾಗಿ ಸಾಯುವ ಜೀವಿ ಆಗಿದೆ. ಅದಕ್ಕೆ ವಿಷವಿತ್ತು ಕೊಂದರೆ ಪರಿಸರದ ಜೈವಿಕ ಚಕ್ರ ಏರು ಪೇರು ಆಗುತ್ತದೆ. ಕಾರಣ ಹಸಿವೆಯಿಂದ ಬಳಲುವ ಹಾವು, ಹದ್ದುಗಳು ಮನುಷ್ಯರ ಮೇಲೆ ಧಾಳಿ ಮಾಡುತ್ತವೆ. ವಿಷಯುಕ್ತ ಇಲಿಯನ್ನು ತಿಂದ ಹಾವು ಸತ್ತರೆ, ಹದ್ದುಗಳ ಸಾವು. ಇದರಿಂದ ಒಂದು ಜೈವಿಕ ಕೊಂಡಿ ನಾಶ. ಹುಳ, ಕೀಟಗಳ ಬಾಧೆ ಹೆಚ್ಚಾಗಿ ಬೆಳೆ ನಾಶ. ಇಲಿಗಳ ಸಾವು ಇಳಿಜ್ವರಕ್ಕೆ ಕಾರಣ. ನೋಡಿ ಒಂದು ಸಣ್ಣ ಜೀವಿ ಪರಿಸರದಲ್ಲಿ ಅದೆಷ್ಟು ಕಾರ್ಯ ನಿರ್ವಹಿಸುತ್ತದೆ! ಅಂತಹ ಜೀವಿಯ ಕಡೆ ಗಮನ. ಇದು ಹಿರಿಯರು ರೂಪಿಸಿದ ಸಂಸ್ಕೃತಿ. ಅದನ್ನು ಮರೆತ ನಾವು ದೇವಸ್ಥಾನಕ್ಕೆ ಹೋಗುವುದನ್ನು ಕಡಿಮೆ ಮಾಡಿ ಬಿಟ್ಟಿದ್ದೇವೆ.


ದೇವಾಲಯ ಅಥವಾ ಪ್ರಾರ್ಥನಾಲಯಗಳಲ್ಲಿ ಪೂಜೆಗಳಿಗೆ ಬೋರ್ಡು ಹಾಕಿರುತ್ತಾರೆ. ಕೆಲವೊಬ್ಬರಿಗೆ ಇದೇ ಪೂಜೆ ಮಾಡಿಸಬೇಕು ಎಂಬ ಆಸೆಗೆ ಆ ದುಡ್ಡು. ಅದು ದೇವಾಲಯದ ಉದ್ಧಾರಕ್ಕೆ, ಕೆಲವು ಕಡೆ ಸರಕಾರಕ್ಕೆ ಹೋಗಿ ಸೇರಬಹುದು. ಯಾವ ಸರಕಾರ ಆಡಳಿತಕ್ಕೆ ಬರುತ್ತದೋ ಅಲ್ಲಿಗೆ ಸೇರಿ ಉತ್ತಮ ಕೆಲಸಕ್ಕೆ ಬಳಕೆ ಆಗಲಿ ಎನ್ನುವ ಆಶಯ ನಮ್ಮದು. ಭಕ್ತಿಯ ಹಣ ಕೆಟ್ಟ ಕಾರ್ಯಗಳಿಗೆ, ಲಂಚಕೋರರಿಗೆ ಒಳ್ಳೆಯ ಬದುಕು ನೀಡುವುದೇ!
ಸಂಸ್ಕೃತಿಯನ್ನು ಯಾಕೆ ಉಳಿಸಿ ಬೆಳೆಸಬೇಕು? ಎಲ್ಲಾ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯೆ ಕಲಿಸುತ್ತಿದ್ದೇವೆ. ಕನ್ನಡ ಅಥವಾ ಮಾತೃಭಾಷೆ ಮಾತನಾಡಿದರೆ ಶಾಲೆಯಲ್ಲಿ ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಜಿಲ್ಲೆಯ ಶಿಕ್ಷಕರೇ ಶಾಲಾ ನಿಯಮದಂತೆ ಫೈನ್ ಹಾಕುತ್ತಾರೆ. ದುಡ್ಡು ಕೊಟ್ಟು ಪರ ದೇಶದ ಭಾಷೆ ಕಲಿಸಲು ಪೋಷಕರು ಅನುಮತಿ ಕೊಟ್ಟು ಆಗಿದೆ. ಈ ನೆಲದ ಭಾಷೆ ಯಾರಿಗೂ ಬೇಡ. ಕಾರಣ ಹಣ ಮಾಡುವ, ಹೆಚ್ಚು ಗಳಿಸುವ ಆಸೆ! ಭಾಷೆ ಸಂಸ್ಕೃತಿ ಯಾರಿಗೆ ಬೇಕು? ಆದರೆ ಪರ ದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಜನ ಬದಲಾಗಿ ಹೆಚ್ಚು ಹಣ ಕೊಟ್ಟು ಹಳ್ಳಿಯ ತಿನಿಸು ಬಳಸುತ್ತಿದ್ದಾರೆ. ಮೊನ್ನೆ ದುಬೈಯಿಂದ ಬಂದ ಪಕ್ಕದ ಮನೆ ಹುಡುಗನಿಗೆ ಅಲ್ಲಿ ಅವನ ಅಮ್ಮ ಊರಿನ ವಿವಿಧ ರೀತಿಯ ಎಲೆಗಳನ್ನು ಬಳಸಿ ಮಾಡುವ ಅಕ್ಕಿ ಕಡುಬು, ಅಕ್ಕಿ ತಿನಿಸುಗಳನ್ನು ಅಭ್ಯಾಸ ಮಾಡಿಸಿದ್ದಾರೆ. ಅವನು ಅದರ ರುಚಿಯನ್ನು ಇಷ್ಟ ಪಡುತ್ತಾನೆ. ಟಿವಿ, ಮೊಬೈಲ್ ಅಭ್ಯಾಸ ಇಲ್ಲ. ಕಾಡು, ಮರಗಳು, ಪ್ರಾಣಿ ಪಕ್ಷಿಗಳ ಜೊತೆ ಆಟ ಇಷ್ಟ. ಮನೆಯ ಬೆಕ್ಕುಗಳು ಎಂದರೆ ಮುದ್ದು! ಅದೇ ಹಳ್ಳಿಯಲ್ಲಿ ಬೆಳೆಯುತ್ತಿರುವ ಸಹೋದರಿಯ ಮಗುವಿಗೆ ಊಟ ಮಾಡಲು, ತಿಂಡಿ ತಿನ್ನಲು ಯೂ ಟ್ಯೂಬ್ ಇರಬೇಕು! ಇದು ಮಕ್ಕಳನ್ನು ಬೆಳೆಸುತ್ತಿರುವ ಪ್ರತಿ ಪೋಷಕರ ಮೇಲೆ ಅವಲಂಬಿತವಾಗಿದೆ. ಎಷ್ಟು ಜನ ಹತ್ತು ವರ್ಷ ಕಳೆದ ಮಕ್ಕಳು ಒಂದು ಕಿಲೋಮೀಟರ್ ದೂರವನ್ನು ತಂದೆ ತಾಯಿಯರ ಜೊತೆ ನಡೆದುಕೊಂಡು ಹೋಗಲು ಇಷ್ಟ ಪಡುತ್ತಾರೆ? ನಾವೇ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸಿ ನಡೆಯುವುದು ಮರೆಯಿಸಿ ಬಿಟ್ಟಿದ್ದೇವೆ! ಇನ್ನು ಗಿಡ ಮರಗಳನ್ನು ಅವರು ಗುರುತಿಸುವುದು ಎಲ್ಲಿ! ರಸ್ತೆಯ ಬದಿಯಲ್ಲಿ ನಡೆದರೆ ಡಸ್ಟ್ ಅಲರ್ಜಿ! ಕಾಲು ನೋವು! ಹಾಗಾದರೆ ಆರೋಗ್ಯದ ರಕ್ಷಣೆ..
ಮುಂದಿನ ಜನಾಂಗದ ನಮ್ಮದೇ ಮಕ್ಕಳನ್ನು ನಾವೇ ಅತಿಯಾಗಿ ಮುದ್ದಿಸಿ ಡೆಲಿಕೆಟ್ ಮಾಡದೇ ಇರೋಣ. ಗಟ್ಟಿ ಮುಟ್ಟಾಗಿಸೋಣ. ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿ ಅವರನ್ನು ಮಾಡೋಣ. ಆತ್ಮಹತ್ಯೆಗಳನ್ನು ತಪ್ಪಿಸಿ, ಸಂಸ್ಕೃತಿ, ಉತ್ತಮ ಆಲೋಚನೆ, ದೇವರ ಪರಿಕಲ್ಪನೆಯ ಮೂಲಕ ಪ್ರಕೃತಿಯನ್ನು ಆರಾಧಿಸೋಣ. ಆ ಮೂಲಕ ಮುಂದಿನ ಜನಾಂಗಕ್ಕೂ ಪಂಚಾದೈವಗಳು ಎನ್ನುವ ಪ್ರಕೃತಿ ಉಳಿಸಿ ಅವರ ಬದುಕನ್ನೂ ಹಸನಾಗಿಸೋಣ ಅಲ್ಲವೇ? ನೀವೇನಂತೀರಿ?

———————

ಹನಿ ಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

One thought on “

Leave a Reply

Back To Top