ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಪ್ರಕೃತಿಯೊಂದಿಗೆ ಮಾನವನ ಜೂಜಾಟ..

ಧೋ..ಧೋ.. ಎಂದು ಸುರಿಯುವ ಮಳೆಗೆ ಗಿಡಮರಗಳೆಲ್ಲ ಕೊಚ್ಚಿಕೊಂಡು ಹೋದ  ಮನೆ,ಮಠ, ಅಂಗಡಿ ರಸ್ತೆ.. ಕ್ಷಣಾರ್ಧದಲ್ಲಿ ಎಲ್ಲವೂ ನೀರು ಪಾಲಾಗಿ ಜೀವವೇ ತತ್ತರಗೊಂಡ ಪ್ರಸಂಗ…!!
ಇದು  ಒಂದು ಕಡೆ

 ಒಂದು ಹನಿಯೂ ಮಳೆ ಬೀಳದೆ..  ರಣರಣ ಕಾದ ಹಂಚಂತ ನೆಲ,  ಗಿಡ ಮರಗಳು, ಕುಡಿಯಲು ಗುಟುಕು ನೀರು ಸಿಗದೇ ಪರದಾಡುವ ಹಕ್ಕಿ ಪಕ್ಷಿ ಪ್ರಾಣಿಗಳು…

 ಇದು ಇನ್ನೊಂದೆಡೆ

 ಎರಡು ಮೇಲಿನ ಸನ್ನಿವೇಶಗಳು ಒಂದೇ ಕಾಲಮಾನದಲ್ಲಿ ಅದು ವಿಶೇಷವಾಗಿ ಮಳೆಗಾಲದಲ್ಲಿಯೇ ಜರುಗುತ್ತಿದೆ.  ಅಂದರೆ ಅದಕ್ಕೆ ಪ್ರಕೃತಿಯ ಅಸಮತೋಲನ…!!

 ಕಾರಣವೆಂದರೆ…ಏನೆಂದು ಹೇಳಬಹುದು..?? ಇಂತಹ ಅಸಹತೋಲನಕ್ಕೆ ಕಾರಣ ಪ್ರಕೃತಿಯೇ..? ಅಥವಾ ಮಾನವನೇ..? ಎಂದು ಪ್ರಶ್ನೆ ಮಾಡಿಕೊಂಡಾಗ ನಮ್ಮ ಕಣ್ಮುಂದೆ ಸುಳಿವುದು ಮನುಷ್ಯ…!!

 ಗೊತ್ತಿದ್ದು ಗೊತ್ತಿಲ್ಲದೇ ಮಾಡಿರುವ ಹಲವಾರು ತಪ್ಪುಗಳು. ನಗರೀಕರಣ, ಜಾಗತೀಕರಣ ಸೌಂದರ್ಯಿಕರಣ.. ಮುಂತಾದ  ಭೌತಿಕ ಸಂಪನ್ಮೂಲಗಳ ಬದಲಾವಣೆಗಳನ್ನು ಮಾಡಿಕೊಳ್ಳುವ ಧಾವಂತದಲ್ಲಿ ಪ್ರಕೃತಿಯ ಮೇಲೆ ಮನಸೋ ಇಚ್ಛೆ ಹೇಗೆ ಬೇಕೋ ಹಾಗೆ ದಬ್ಬಾಳಿಕೆ ಮಾಡಿಕೊಂಡಿರುವುದು. ಅವನ ಕ್ರೂರತೆಗೆ ಹಿಡಿದ ಕೈಗನ್ನಡಿ. ಹೀಗಾಗಿಯೇ ಮನುಷ್ಯನ ಮೇಲೆ ಪ್ರಕೃತಿ ಮುನಿದಿದೆ.

 ಸಹನೆಗೂ ಒಂದು ಬೆಲೆಯಿದೆ.  ಸಹನೆ ಕಟ್ಟೆಯೊಡೆದು ಹೊರ ಬಂದಾಗ ಪ್ರಕೃತಿಯು “ನೀನೇರಿದ ಎತ್ತರಕ್ಕೆ ನಾನೇರುವೆಯಾ…?ಎನ್ನುವ ಕವಿವಾಣಿಯಂತೆ ಪ್ರಕೃತಿಯೇ ಮನುಷ್ಯನಿಗೆ ಪ್ರಶ್ನೆ ಹಾಕುತ್ತಿದೆ.  “ಎಲ್ಲವೂ ನನ್ನಿಂದಲೇ”  ಎನ್ನುವ ನೀನು ನನ್ನನ್ನು ಮರೆತಿರುವುದು ನಿನ್ನ ಸೊಕ್ಕಿನ ಪರಮಾವಧಿ ಅದಕ್ಕೆ ಈ  ತಕ್ಕ ಶಿಕ್ಷೆ ನಿನಗೆ” ಎಂದು ಪ್ರಕೃತಿ ಮುಸಿ ಮುಸಿ ನಗುತಿದೆ.

ಮನುಷ್ಯರು ನಗರವನ್ನು ಕಟ್ಟುವ ಧಾವಂತದಲ್ಲಿ ನೆಲದ ಮೇಲೆ ಐದರಿಂದ ಹತ್ತು ಅಂತಸ್ತುಗಳು,  ನೆಲದ ಕೆಳಗೆ ಎರಡರಿಂದ ಮೂರು ನೆಲಮಳೆಗೆಗಳನ್ನು ಮನಸೋ ಇಚ್ಛೆ ಕಟ್ಟಿ ಭೂಮಿಯ ಗುರುತ್ವಾಕರ್ಷಣ ಮತ್ತು ಅದರ ಶಕ್ತಿಯನ್ನು ಕುಂದಿಸುವ ಕಾರ್ಯಕ್ರಮ ನಿರಂತರವಾಗಿ ಮಾಡುತ್ತಿದ್ದಾನೆ.

 ಹೀಗಾಗಿ…

 ಭೂಮಿಯ  ಪದರುಗಳು ಸಡಿಲಗೊಂಡಿವೆ. ಸಡಿಲಗೊಂಡ ಪದರುಗಳು ಭೂಕಂಪ, ಭೂಕುಸಿತಕ್ಕೆ ತುತ್ತಾಗುವುದು ಒಂದೆಡೆಯಾದರೆ…

 ಒಂದೂ ಮರವನ್ನು ನಡೆದೆ, ಇದ್ದ ಅಲ್ಪ ಸ್ವಲ್ಪ ಮರಗಳನ್ನು ಮನಸ್ಸೋ ಇಚ್ಛೆ ಕಡಿದು, ಇಡೀ ನೆಲವನ್ನೇ ಬರಡು ಭೂಮಿಯನ್ನಾಗಿ ಮಾಡುವ ವಿಕೃತ ಮನಸ್ಸು ಮನುಷ್ಯನದು.

ನಿಸರ್ಗವು ಬರಗಾಲವಲ್ಲದೆ ಇನ್ನೇನು ಉಡುಗೊರೆ ಕೊಡಬಲ್ಲದು..?

 ಪ್ರಕೃತಿ ಕುರಿತು
ಆಂಗ್ಲಕವಿ ವಿಲಿಯಂ ವರ್ಡ್ಸ್‌ವರ್ತ್, “ಪ್ರಕೃತಿಯನ್ನು ದೇವರು” ಎಂದರೆ ಕನ್ನಡದ ಕುವೆಂಪುರವರು, “ನಿಸರ್ಗವೇ ದೇವರು, ನಿಸರ್ಗ ಆರಾಧನೆಯೇ ದೈವ ಆರಾಧನೆ” ಎಂದಿದ್ದಾರೆ.  ದೈವವನ್ನು ಬಿಡದ ಮನುಷ್ಯನು ದೈವ ಕೊಡುವ ಶಿಕ್ಷೆಗೆಗುರಿ ಯಾಗಿರುವುದು ವಾಸ್ತವಿಕ ಸತ್ಯ.

 ಇಂತಹ ಕಹಿಸತ್ಯಗಳಿಗೆ ಕಾರಣವಾದ ಮನುಷ್ಯನ ಹಲವಾರು ವಿಕೃತ ಕೆಲಸಗಳು ಪರಿಸರ ಅಸಮತೋಲನಿಗೆ ಕಾರಣವಾಗಿದೆ. ಅವನು,  ಸಹಜವಾಗಿ ಬದುಕಬೇಕು ಎನ್ನುವ ಆಸೆ ಎಂದೋ ದೂರವಾಗಿ,

“ನಾನು ಪ್ರಕೃತಿಗಿಂತ ಮಿಗಿಲು..!  ನಿಸರ್ಗಕ್ಕಿಂತ ದೊಡ್ಡವನು.  ಕಡಲು, ಭೂಮಿ, ಆಕಾಶ, ನದಿ, ಗಿಡ – ಮರ- ಬಳ್ಳಿ ಇವೆಲ್ಲವೂ ನಾನು ಹೇಳಿದಂತೆ ಕೇಳುವ ಅಂಶಗಳು”
ಎಂದು ತಿಳಿದುಕೊಂಡಿದ್ದಾನೆ.

 ಆದರೆ…

 ವಿಚಿತ್ರ ನೋಡಿ..!! ಪ್ರಕೃತಿ ಸುಮ್ಮನೆ ಇರುವುದಿಲ್ಲ. ಎಲ್ಲವನ್ನು ತದೇಕಚಿತದಿಂದ ನೋಡುತ್ತಾ, ನೋಡುತ್ತಾ, ತನ್ನ ಇರುವಿಕೆಯ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಸಹಜವಾಗಿ ಮುನಿದುಕೊಳ್ಳುತ್ತದೆ.

ಜಗತ್ತಿನ ಯಾವುದೇ ಅಂಶಗಳು ಮುನಿದರೆ ಸಹಿಸಿಕೊಳ್ಳಬಹುದು.

 ಆದರೆ…

 ನಿಸರ್ಗವೇ ಮುನಿದರೆ ಬದುಕು ಮುಗಿದಂತೆ..!!  ಹಿಂದಿನಿಂದಲೂ ನಮ್ಮ ಹಿರಿಯರು ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತಿದ್ದರು. ಗಿಡ ಮರಗಳನ್ನು ಪೂಜಿಸುತ್ತಿದ್ದರು. “ಭೂಮಿಯನ್ನು ಭೂತಾಯಿ” ಎಂದು ಪೂಜಿಸುತ್ತಿದ್ದರು. ತಾವು ಉಣ್ಣುವ ಒಂದು ತುತ್ತನ್ನು ಭೂಮಿಗೆ ಅರ್ಪಿಸಿ ಹಕ್ಕಿ ಪಕ್ಷಿಗಳಿಗೆ ಹಾಕುತ್ತಾ,

 “ಉಲಿಗ್ಗೋ… ಚಳಂಬರಿಗೋ…”

ಎಂದು ಚರಗ ಚೆಲ್ಲುತ್ತಾ ಪಕ್ಷಿಗಳೂ ಕೂಡ ನಮ್ಮಂತೆ ಆಹಾರವನ್ನು ತಿನ್ನಲಿ ಎನ್ನುವ ಉದಾತ್ತ ಭಾವ ಅವರಲ್ಲಿತ್ತು.

ಇಂದು…

ಅದೆಲ್ಲವನ್ನು ನಾವು ಮರೆಮಾಚಿದ್ದೇವೆ.  ಪ್ರಕೃತಿಗಿಂತ ಹೊಲ, ಗಿಡಮರಗಳಿಗಿಂತ, “ಮನೆ, ಭವನಗಳು, ಕಾರ್ಖಾನೆಗಳೇ… ಸರ್ವಸ್ವವೆಂದು” ತಿಳಿದ ನಾವುಗಳು.  ನಮ್ಮ ಊಟ, ತಿಂಡಿ, ಉಪಚಾರ, ಎಲ್ಲವನ್ನೂ ಮನೆಯಲ್ಲಿಯೇ ಎಂದು ಭಾವಿಸಿಕೊಂಡವರು.!!
 ಹಾಗಾಗಿ ಪ್ರಕೃತಿಯಿಂದ ದೂರವಾಗಿ ಉಳಿದಿದ್ದೇವೆ.  

ಈಗ ಇಂತಹ ಹಲವಾರು ಸಮಸ್ಯೆಗಳಿಗೆ ಒಳಗಾಳಲೇಬೇಕಾಗಿರುವುದು ಸಹಜವಾಗಿದೆ.

ಹಾಗಾದರೆ…

 ಈ ಸಮಸ್ಯೆಗಳಿಂದ ಪಾರಾಗುವುದು ಹೇಗೆ?

 ಇದಕ್ಕೆ ಪರಿಹಾರವೇ ಇಲ್ಲವೇ…? ಎಂದು ಅವಲೋಕನ ಮಾಡಿಕೊಂಡಾಗ..

 ನಮ್ಮ ಕಣ್ಣೆದುರು ಸಿಗುವುದು ನಾವು ಮೊದಲು ಪ್ರಕೃತಿಯನ್ನು ಆರಾಧಿಸಬೇಕು. ನಿಸರ್ಗಕ್ಕೆ ಒಲವನ್ನು, ಪ್ರೀತಿಯನ್ನು ಹಂಚಬೇಕು. ಪ್ರಕೃತಿಯನ್ನು ನಾವು ಪ್ರೀತಿಸಿದರೆ ; ನಮ್ಮನ್ನು ಪ್ರಕೃತಿ ಪ್ರೀತಿಸುತ್ತದೆ.

 ‘ಪ್ರಕೃತಿ ಇಲ್ಲದೆ ಮನುಷ್ಯ ಬಾಳಲಾರ ಆದರೆ ಮನುಷ್ಯನಿಲ್ಲದೆ ಪ್ರಕೃತಿ ಬಾಳಬಹುದು ಉಳಿಯಬಹುದು’
ತನ್ನ ಅಸ್ತಿತ್ವ ಹಿಗ್ಗಿಸಿಕೊಳ್ಳಬಹುದು. ಇತರ ಚರಾಚರ ಜೀವಿಗಳು ಸ್ವಚ್ಛಂದವಾಗಿ ಬದುಕಬಲ್ಲವು.

 ಆದರೆ..
 ಮನುಷ್ಯ ಮಾತ್ರ ಇವೆಲ್ಲವನ್ನೂ ಬಿಟ್ಟು ತಾನೆ ಶ್ರೇಷ್ಠ ಎನ್ನುವ ಅಹಂ ಅನ್ನು ತೊರೆದಾಗ ಮಾತ್ರ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ.

 ಮುಂದಿನ ಪೀಳಿಗೆಗೆ ನಾವು ಕೊಡಬೇಕಾಗಿರುವ ಬಹುದೊಡ್ಡ ಕಾಣಿಕೆ ಎಂದರೆ ಶುದ್ಧವಾದ ಗಾಳಿ, ನೀರು, ಆಹಾರ, ಗುಡ್ಡ, ಬೆಟ್ಟ… ಮುಂತಾದವುಗಳು ಇಂತಹ ಪ್ರಾಕೃತಿಕವಾಗಿ ಬೆರೆತುಕೊಂಡಾಗ ಮನುಷ್ಯನ ಅಸ್ತಿತ್ವ ಉಳಿಯಬಲ್ಲದು. ನಗರೀಕರಣದ, ಜಾಗತೀಕರಣದ ಬದುಕಿನ ಜೊತೆ ಜೊತೆಗೆ ನಾವು ಅತಿ ಹೆಚ್ಚು ಮಹತ್ವ ಕೊಡಬೇಕಾಗಿರುವುದು ಸಹಜ ಬದುಕಿಗೆ. ಬದುಕು ಸಹಜವಾಗಬೇಕಾದರೆ ಪ್ರಕೃತಿಯನ್ನು ಪ್ರೀತಿಸಬೇಕು.

 ಪ್ರಕೃತಿಯನ್ನು ಪ್ರೀತಿಸುವುದೆಂದರೆ..

 ಸಾಧ್ಯವಾದ ಮಟ್ಟಿಗೆ ಗಿಡಮರಗಳನ್ನು ನೆಡುವುದು. ಹರಿಯುವ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಬೀಸುವ ಗಾಳಿಯನ್ನು ಶುದ್ಧವಾಗಿಟ್ಟುಕೊಳ್ಳುವುದು.ಇವೆಲ್ಲವೂ ನಮ್ಮ ಪ್ರಾಥಮಿಕ ಕರ್ತವ್ಯಗಳು.  ಇಂತಹ ಪ್ರಾಥಮಿಕ ಕರ್ತವ್ಯಗಳನ್ನು ಮಾಡುತ್ತಾ ಮಾಡುತ್ತಲೇ ಮನುಷ್ಯರಾದ ನಾವುಗಳು ನಿಸರ್ಗವನ್ನು ಪ್ರೀತಿಸೋಣ. ನಾವೆಷ್ಟು ನಿಸರ್ಗಕ್ಕೆ ಒಲವನ್ನು ಧಾರೆಯಾಗಿ ಎರೆಯುವೆವೋ ಪ್ರಕೃತಿಯು ನಮಗೆ ಅಷ್ಟೇ ಒಲವನ್ನು ಧಾರೆಯಾಗಿ ಎರೆಯುತ್ತದೆ.  ನಿಸರ್ಗ ಪ್ರೀತಿಸುವ ಮನಸ್ಸು ನಮ್ಮದಾಗಲೆಂದಾಗಲೆಂದು  ಬಯಸೋಣ.


 ರಮೇಶ ಸಿ ಬನ್ನಿಕೊಪ್ಪ ಅಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ಪರಿಸರ ನಾಶವೇ ಮಾನವ ಸಂತತಿಯ ನಾಶ, ಪ್ರಕೃತಿಯನ್ನು ಉಳಿಸಿ ಬೆಳೆಸುವುದೇ ಮಾನವನ ಆದ್ಯ ಕರ್ತವ್ಯ ಎಂದು ಮನಮುಟ್ಟುವಂತೆ ಹೇಳಿದ್ದೀರಿ. ಅದರಂತೆ ಕಾರ್ಯೋನ್ಮುಖರಾಗಲೂ ಕಿವಿಮಾತು ಬಹಳ ಚೆಂದ ಹೇಳಿದ್ದೀರಿ. ಅಭಿನಂದನೆಗಳು.

Leave a Reply

Back To Top