ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಕೊಲ್ಲದಿರು ಜೀವಿಗಳ
ಬದುಕುವ ಹಕ್ಕಿನಲಿ
ಇರುವುದೊಂದೇ ಜನ್ಮ
ಪ್ರತಿ ಜೀವಕ್ಕೆ
ಜೀವ ಭಯದಲ್ಲಿ
ಕಳೆಯುವ ದಿನ
ಎಷ್ಟೆಂದು ಯಾರಿಗೊತ್ತು?
ದಿನ ಬೆಳಗಾದರೆ
ಹೊಂಚುಹಾಕಲು
ಕಾಯ್ದು ಕುಳಿತಿವೆಯಲ್ಲ
ಒಂದಕ್ಕೊಂದು
ಹೊಡೆದು ತಿಂದಾಳುವ
ಈ ಜಗದ ನಿಯಮದಲ್ಲಿ
ಮನುಜನೇ ನೀ ಹೇಳು
ನೀನೂ ಅಂತಹ
ಕ್ರೂರಿಯೇನು?
ದುಡಿದು ತಿನ್ನಲು
ಸಧೃಡ ಕಾಯವಿರಲು
ಕೊಲ್ಲದಿರು ಜೀವಿಗಳ
ನಿನ್ನಂತೆ ಜೀವಕುಲಕ್ಕೆ
ಮೃದು ಮನಸಿಹುದು
ತೋರಿಸೊಮ್ಮೆ ಪ್ರೀತಿ
ಮನುಜನಿಗಿಂತಲೂ
ಮೂಕ ಪ್ರಾಣಿಗಳು
ಬಯಸುತಿಹೆ ಆಸರೆ
ನೀನಾಗಿ ಕೆಣಕಿದರೆ
ತಮ್ಮ ಜೀವ ರಕ್ಷಣೆಗೆ
ಎರಗಿಬೀಳುವವು
ಮಾತು ಬರದಿದ್ದರೆನು
ತಮ್ಮ ಮುಖವೇದನೆ
ಕಣ್ಣೀರಿನಿಂದ ತಿಳಿಸುತಿಲ್ಲವೇ?
ಈ ಜಗವೇ ಒಂದು
ಡಂಬರಾಟವಿಹುದು
ಸರಿ ತಪ್ಪುಗಳು ಲೆಕ್ಕಕಿಡು
ಹೇ ಮಾನವಾ ಭೂತಾಯಿ
ನಿನ್ನೊಡಲ ತುಂಬಲಿರಲು
ಕೊಲ್ಲದಿರು ಜೀವಿಗಳ
ಸುಲೋಚನಾ ಮಾಲಿಪಾಟೀಲ.