ವಚನ ಸಂಗಾತಿ
ದಾಸೋಹದ ಸಂಗಣ್ಣನ
ಪ್ರೊ. ಜಿ ಎ ತಿಗಡಿ,ಸವದತ್ತಿ
ಹೆಂಡಿರೆನ್ನದ ಮಕ್ಕಳೆನ್ನದ ತೊತ್ತಿರೆನ್ನದ
ಬಂಟರೆನ್ನದ ಹಗೆಗಳೆನ್ನದ ತಪ್ಪೆನ್ನದಯ್ಯಾ.
ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿ ತಪ್ಪೆನ್ನದಯ್ಯಾ.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ನೀನಿರ್ದವರ ನೀನೆನ್ನದ ತಪ್ಪೆನ್ನದಯ್ಯಾ.
ಹೆಂಡತಿಯಲ್ಲಿ, ಮಕ್ಕಳಲ್ಲಿ, ಸಂಬಂಧಿಕರಲ್ಲಿ, ವೈರಿಗಳಲ್ಲಿ, ಆಳು ಮಕ್ಕಳಲ್ಲಿ ಒಟ್ಟಿನಲ್ಲಿ ಎಲ್ಲರಲ್ಲಿಯೂ ದೈವತ್ವದ ಅಂಶಗಳಿವೆ. ಹೀಗಿದ್ದರೂ ನಾನು ಅವರೆಲ್ಲರಲ್ಲಿಯೂ ದೇವರ ಅಸ್ತಿತ್ವವಿರುವುದನ್ನು ಅರಿಯಲಾರದೆ ತಪ್ಪು ಮಾಡಿದೆನೆಂದು ದಶಗುಣ ಸಿಂಗಿದೇವ ಶರಣರು ವಿಷಾದಿಸುತ್ತಾರೆ. ಜಾಗ್ರತ (ಎಚ್ಚರ), ಸ್ವಪ್ನ (ಕನಸು), ಸುಷುಪ್ತಿ (ನನಸುಗಳ) ಈ ಮೂರು ಅವಸ್ಥೆಗಳಲ್ಲಿಯೂ ದೇವರ ಇರುವಿಕೆಯನ್ನು ಕಾಣಲಾರದೆ ಹೋದೆನೆಂದು ನೊಂದುಕೊಳ್ಳುತ್ತಾರೆ. ಎಲ್ಲರಲ್ಲಿರುವ ದೇವತ್ವವನ್ನು ಗುರುತಿಸಿ ಗೌರವಿಸಬೇಕೆಂಬ ಆಶಯವನ್ನು ಈ ವಚನ ಪ್ರತಿಪಾದಿಸುತ್ತದೆ
ಸೃಷ್ಟಿಯ ಚರಾಚರ ವಸ್ತುಗಳಲ್ಲಿ ಭಗವಂತನ ಅಂಶವಿದೆ. ಹಾಗೆಯೇ ಮನುಷ್ಯನಲ್ಲಿಯೂ ದೇವತ್ವದ ಗುಣವಿರುವುದು ಅತ್ಯಂತ ಸಹಜವಾದಾಗಿದೆ. ಹೀಗಿದ್ದರೂ ತಾನು ಮನುಜರಲ್ಲಿರುವ ದೈವತ್ವದ ಅಂಶವನ್ನು ಗುರುತಿಸದೆ ತಪ್ಪು ಮಾಡಿದೆನೆಂದು ಸಿಂಗಿದೇವ ಶರಣರು ನೊಂದುಕೊಳ್ಳುತ್ತಾರೆ. ತನ್ನ ಹೆಂಡತಿ – ಮಕ್ಕಳು, ಸಂಬಂಧಿಕರು, ಆಳುಗಳು ಅಷ್ಟೇ ಏಕೆ ವೈರಿಗಳು ಹೀಗೆ ಎಲ್ಲರಲ್ಲಿಯೂ ಸ್ಥಿತವಾಗಿರುವ ಭಗವಂತನ ಅಂಶವನ್ನು ಗುರುತಿಸಲಾರದೆ ಹೋಗಿದ್ದೇನೆ. ಹೆಂಡತಿಯು, ತನ್ನ ಹಾಗೂ ತಮ್ಮ ಕುಟುಂಬವನ್ನು ಸಲಹುವವಳೆಂದು ಮಾತ್ರ ತಿಳಿದಿದ್ದೆ. ಯೋಗ್ಯ ಶಿಕ್ಷಣ ಕೊಟ್ಟು ಸದ್ಗುಣವಂತರನ್ನಾಗಿಸಿ ತಮ್ಮ ಮುಪ್ಪಿನ ಕಾಲಕ್ಕೆ ತಮ್ಮನ್ನು ನೋಡಿಕೊಳ್ಳಬೇಕೆಂಬ ಆಸೆಯಿಂದ ಮಕ್ಕಳನ್ನು ಸಾಕಿರುವೆ. ಬಂಧುಗಳು, ಸ್ನೇಹಿತರು, ಆಪ್ತೇಷ್ಟರಲ್ಲಿ ನಮ್ಮವರಾರೋ?, ಹೊರಗಿನವರಾರೋ,? ಸ್ವಾರ್ಥಿಗಳಾರೋ? ಹಿತಚಿಂತಕರಾರೋ?, ಹಿತಶತ್ರುಗಳಾರೋ? ಲಾಭಕ್ಕಾಗಿ ಬಂದವರೋ,? ಕೇಡಿಗಾಗಿ ಬಂದವರೋ? ಎಂದೆಲ್ಲ ಯೋಚಿಸುವುದರಲ್ಲಿಯೇ ಕಾಲ ಕಳೆಯುತ್ತಿರುವೆ. ಕೆಲವೊಮ್ಮೆ ನಾನೂ ಕೂಡ ಸ್ವಾರ್ಥಿಯಾಗಿ, ಇವರಿಂದ ನನಗೇನಾದರೂ ಲಾಭವಿದೆಯೇ ? ಎಂದೂ ಯೋಚಿಸಿದ್ದುಂಟು. ಇನ್ನು ನಮ್ಮ ವೈರಿಗಳನ್ನoತೂ ಶತ್ರುತ್ವ ದೃಷ್ಟಿಯಿಂದಲೇ ನೋಡಿರುವೆ. ಅವರಿಗೆ ಕೇಡು ಮಾಡುವುದು ಇಲ್ಲವೇ ಅವರಿಂದ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವದರಲ್ಲಿಯೇ ಕಾಲ ಕಳೆದಿರುವೆ. ಆದರೆ ಇವರೆಲ್ಲರಲ್ಲಿಯೂ ದೇವತ್ವದ ಒಂದು ಅಂಶವಿದೆ ಎಂದು ಆರಿಯಲಾಗಲಿಲ್ಲ. ಬಹುಶ: ಇವರೆಲ್ಲರೂ ಭಗವಂತನ ಅಂಶ ಹೊಂದಿದವರೆಂಬ ದೃಷ್ಟಿಯಿಂದ ನೋಡಿದ್ದರೆ ಸ್ವಾರ್ಥ, ದ್ವೇಷ, ಅಸೂಯೆ, ವೈರತ್ವಗಳಿಗೆ — ಅವಕಾಶವೇ ಇರುತಿರಲಿಲ್ಲವೇನೋ? ಅಜ್ಞಾನಕ್ಕೊಳಗಾಗಿ ಲೌಕಿಕ ಸುಖ – ಭೋಗಗಳ ಲಾಲಸೆಗಳಿಗೆ ಬಲಿಯಾಗಿದ್ದೇನೆ.
ಇದು ಜಾಗೃತಾವಸ್ಥೆಯಲ್ಲಿ ನಾನು ನಡೆದುಕೊಂಡ ರೀತಿಯಾದರೆ, ಇನ್ನೂ ಸ್ವಪ್ನ- ಸುಷುಪ್ತಿಗಳಲ್ಲಿಯೂ ಕೂಡ ದೇವತ್ವದ ಬಗ್ಗೆ ಚಿಂತಿಸಲಿಲ್ಲ, ಕನಸು ಕಾಣಲಿಲ್ಲ. ಅಲ್ಲಿಯೂ ಮತ್ತದೇ ಮಾಯಾಮೋಹ ಜಾಲ. ಹೆಂಡಿರು ಮಕ್ಕಳು, ಆಸ್ತಿ – ಪಾಸ್ತಿ, ವೈಮನಸ್ಸು ಇತ್ಯಾದಿ ಚಿಂತೆಗಳ ಸರಮಾಲೆಯಲ್ಲಿಯೇ ಬೆಂದು ಹೋಗಿರುವೆ. ಹೀಗೆ ಜಾಗ್ರತ, ಸ್ವಪ್ನ, ಸುಷುಪ್ತಿಗಳ ಅವಸ್ಥೆಗಳಲ್ಲಿಯೂ ನಾನು ತಪ್ಪು ಮಾಡಿಬಿಟ್ಟಿದ್ದೇನೆoದು ನೊಂದುಕೊಳ್ಳುತ್ತಾರೆ. ಭಗವಂತನೇ !, ಎಲ್ಲೆಡೆಯಲ್ಲಿಯೂ ನೀನಿದ್ದ ಇರುವಿಕೆಯನ್ನು
ಕಾಣಲೆತ್ನಿಸಲಿಲ್ಲ. ನಿನ್ನೊಂದು ಅಂಶ, ಗುಣವಿದ್ದವರನ್ನು ಸಾಕ್ಷಾತ್ ನೀನೇ ಎಂದು ತಿಳಿದು ಶರಣಾಗದೆ ದೊಡ್ಡ ತಪ್ಪು ಮಾಡಿಬಿಟ್ಟಿದ್ದೇನೆ ಎಂದು ನೊಂದು ನುಡಿದು ಪಶ್ಚಾತ್ತಾಪ ಪಡುತ್ತಾರೆ.
*—————————
ಪ್ರೊ. ಜಿ ಎ ತಿಗಡಿ,ಸವದತ್ತಿ