ಕಾವ್ಯ ಸಂಗಾತಿ
ನರಸಿಂಗರಾವ ಹೇಮನೂರ
ಮತ್ತೆ ಚಿಗುರುತ್ತೇನೆ!
ನೀವೆಷ್ಟೆ ಕಡಿದರೂ, ಕಡಿದು ಒಗೆದೊಗೆದರೂ,
ಮತ್ತೆ ಚಿಗುರುತ್ತೇನೆ, ಟಿಸಿಲು ಒಡೆಯುತ್ತೇನೆ,
ಹಸಿರು ಬೆಳೆಸುತ್ತೇನೆ!
ಏನನ್ನ್ಯಾಯವನು ಮಾಡಿದ್ದೆ ನಾ ನಿಮಗೆ
ಸುಮ್ಮಸುಮ್ಮನೆ ನನ್ನ ಕಡೆದೊಗೆವ ಹಾಗೆ?
ನನ್ನ ಪಾಡಿಗೆ ನಾನು ಸದ್ದಿರದೆ ಬೆಳೆದಿದ್ದೆ,
ಯಾರನ್ನೂ ಯಾಹೊತ್ತು ಪೀಡಿಸದ ಹಾಗೆ,
ನೂರಾರು ಹಕ್ಕಿಗಳ ಕಲರವಕೆ ನೆಲೆಯಾಗಿ
ಬಿಸಿಲಲ್ಲಿ ಬಸವಳಿದು ಬಂದವರ ಕರೆಕರೆದು
ನೆರಳ ತಂಪನು ಹಾಸಿ, ಮುದ ನೀಡುತ್ತಿದ್ದೆ!
ಫಲಪುಷ್ಪಗಳ ಹೊತ್ತು ಸಂಭ್ರಮಿಸಿ,
ಮತ್ತವನೆ ನಿಮಗಾಗಿ ಅರ್ಪಿಸುತ ಬೀಗುತಿದ್ದೆ!
ಕಂಬಗಳಿಗೆಳೆದಿರುವ ತಂತಿಗಡ್ದಿಯಾಗಿಹೆನೆಂದು
ನನ್ನಂಗವನೆ ಕೊಡಲಿ ಕಾವಾಗಿ ಬಳಿಸುತ್ತ
ಪಟಪಟನೆ ನನ್ನನ್ನು ಕಡೆದು ಬಿಟ್ಟೆ!
ಆದರೂ ಬೆಳೆದಿರುವೆ ಮತ್ತೆ ಚಿಗುರಿ,
ಯಾವುದನು ಲೆಕ್ಕಿಸದೆ, ತೊಂದರೆಗೆ ಹೆದರದೆ
ಬೆಳೆದು ಹೆಮ್ಮರವಾಗಿ, ಎಲ್ಲರಿಗು ನೆರಳಾಗಿ,
ಬಾಳುವದೆ ಗುರಿ ಎನಗೆ,
ಉಳಿದೆಲ್ಲಾ ಬಾಧೆಗಳು ಗೌಣ ನನಗೆ!
ನರಸಿಂಗರಾವ ಹೇಮನೂರ,