ರಸ್ತೆಯ ಮೇಲೊಬ್ಬ ರಾಜಮಾತೆ (ಕಥೆ)ಆದಪ್ಪ ಹೆಂಬಾ ಮಸ್ಕಿ

ಕಥಾ ಸಂಗಾತಿ

ರಸ್ತೆಯ ಮೇಲೊಬ್ಬ ರಾಜಮಾತೆ (ಕಥೆ)

ಆದಪ್ಪ ಹೆಂಬಾ ಮಸ್ಕಿ

ಧಾರವಾಡದ ಮಳೆಯ ಮೇಲೆ ಒಂದು ಅಪವಾದವಿದೆ – “ಧಾರವಾಡ ಮಳೀನ ನಂಬ ಬಾರದು……….” – ಅಂತ. ಅವತ್ತು ಸಂಜೆ ಆಗಿದ್ದೂ ಅದೆ. ಸಾಗರ್ ತನ್ನ ಹೆಂಡ್ತಿ ಸೋನಾಕ್ಷಿಯನ್ನು (ಅವನ ಪ್ರೀತಿಯ ಸೋನು) ಮಾರ್ಕೆಟ್ ಗೆ ಅಂತ ಕರೆದು ಕೊಂಡು ಹೋಗುವಾಗ ಮಳೆಯ ಯಾವ ಲಕ್ಷಣಗಳೂ ಇರಲಿಲ್ಲ. ಆದರೆ ಸ್ಕೂಟರ್ ಮೇಲೆ ಮನೆಯಿಂದ ಹೊರಟ ಅವರಿನ್ನೂ ಮಾರ್ಕೆಟ್ ಮುಟ್ಟಿರಲಿಲ್ಲ ಜಿನಿ ಜಿನಿ ಮಳೆ ಶುರುವಾಗಿ ಬಿಟ್ಟಿತು. ಹನಿ ಹನಿ ಮುಂಗಾರು ಮಳೆಯ ನಡುವೆ ಇವರ ತರಕಾರಿ ವ್ಯಾಪಾರ. ಅವಸರದಲ್ಲಿ ತರಕಾರಿ ತಗೆದುಕೊಳ್ಳಲು ಕೈಚೀಲವನ್ನೇ ಮರೆತು ಬಂದಿದ್ದಳು ಸೋನು.”ರೀ ಚೀಲ ಮರ್ತ ಬಂದ್ ಬಿಟ್ಟೀನಿ” ಅಂದ ಮಡದಿಗೆ, “ಯಾಕ್ ಚಿಂತಿ ಮಾಡ್ತೀ ಬಾ ಇಲ್ಲಿ ಅವೂ ಸಿಗ್ತಾವ” ಅಂದ ಸಾಗರ್ ಕೈ ಚೀಲ ಮಾರುವವರನ್ನು ಹುಡುಕುತ್ತಿದ್ದ. ಅವನ ಕಣ್ಣಿಗೆ ಬಿದ್ದದ್ದು ಅಲ್ಲೇ ಫುಟ್ ಪಾತ್ ನಲ್ಲಿ ತೊಯ್ದ ಸಿಮೆಂಟ್ ಇಟ್ಟಿಗೆಯ ಮೇಲೆ ಕೊಡೆ ಹಿಡಿದುಕೊಂಡು ನಡುಗುತ್ತ ಕುಳಿತಿದ್ದ ಒಬ್ಬ ಮುದುಕಿ. ಅವಳ ಹತ್ತಿರ ಏಳೆಂಟು ವಿವಿಧ ಸೈಜಿನ ಚೀಲಗಳಿದ್ದವು. ಆ ಏಳೆಂಟು ಚೀಲಗಳೇ ಅವಳ ಬದುಕು ! ಎಪ್ಪತೈದರ ಆಸು ಪಾಸಿನಲ್ಲಿರಬಹುದಾಗಿದ್ದ ಆ ಮುದುಕಿ ಸಾಕ್ಷಾತ್ ದೇವತೆಯ ಲಕ್ಷಣಗಳನ್ನು ಹೊಂದಿದ್ದಳು. ಬೆಳ್ಳನೆಯ ಹಾಲಿನಂತಹ ಬಣ್ಣ, ಸಂಪಿಗೆ ಹೂವಿನಂತೆ ತಿದ್ದಿ ತೀಡಿಟ್ಟ ಮೂಗು, ಈ ಇಳಿ ವಯಸ್ಸಲ್ಲೂ ದಣಿವು ಕಾಣಡ ಕಣ್ಣುಗಳು, ಇಷ್ಟಗಲ ಕುಂಕುಮ. ಮಳೆಹನಿಯಂತೆಯೇ ತಂಪು-ಇಂಪು ಸೂಸುವ ಅವಳ ನಗು.ಒಟ್ಟಾರೆ ಅವಳು ರಸ್ತೆಯ ಮೇಲಿನ ರಾಜಮಾತೆ!   ಕೈ ಎತ್ತಿ ಮುಗಿಯಬೇಕೆನಿಸಿತು ಸಾಗರ್ ನಿಗೆ. ಸ್ಕೂಟಿಯನ್ನು ಪಾರ್ಕಿಂಗ್ ನಲ್ಲಿಟ್ಟು ಆ ಅಜ್ಜಿಯ ಹತ್ತಿರ ಬಂದರು ಸಾಗರ-ಸೋನು ದಂಪತಿಗಳು. ಇವ ಕೇಳಿದ, “ಅಜ್ಜಿ ಚೀಲ ಹೆಂಗವಾ” ಅದಕ್ಕವಳು, “ಎಪ್ಪಾ….ದೊಡ್ಡವು ಇಪ್ಪತು ರುಪಾಯಿಪಾ ಸಣ್ಣವು ಹದಿನೈದು ರುಪಾಯಿ ತಗೋರಿ ಯಾವುದ್ ಬೇಕ್ ನೋಡ್ರಿ ತಗಳ್ರಿ”
“ಹೌದಾಮ್ಮಾ ದೊಡ್ಡದನ್ನಾ ಕೊಡು”
ಅಷ್ಟರಲ್ಲಿ ಹಿಂದೆ ಇದ್ದ ಸೋನು ಪಕ್ಕಾ ವ್ಯಾಪಾರಕ್ಕಿಳಿದಳು, “ಬೇ ಅಜ್ಜೀ….ದೊಡ್ಡವನ್ನಾ ತಗಂತೀವಿ….. ಕೊಡಾ ರೇಟ್ ಹೇಳು”
“ಯವ್ವಾ ಹೇಳಾದಾ ಇಪ್ಪತೇಳಿನವ್ವ….. ಎಷ್ಟು ಬುಡ್ಲಿ, ಅದರಾಗ ನಮಗ ಸಿಗಾದ ಒಂದುರುಪಾಯಿ ಎರಡು ರುಪಾಯಿ”
“ಹದಿನೈದು ರುಪಾಯಿ ಮಾಡಬೇ ಎರಡು ತಗಂತೀವಿ” ಸೋನೂಳ ಚೌಕಾಸಿ.
“ಅಲ್ರೀ ಅವ್ವಾರಾ ನಿಮ್ಮಂತೋರ ಹಿಂಗಂದ್ರ ಹ್ಯಾಂಗ್ರೀ…. ನಾವು ಬಡುವ್ರು ಹೆಂಗ್ ಬದಕ ಬೇಕ್ರೀ ಅವ್ವಾರಾ?”
ಅಷ್ಟರೊಳಗೆ ಸಾಗರ್ ಮಧ್ಯೆ ಬಾಯಿ ಹಾಕಿದ, “ಆಯ್ತು ತಗೋ ಬೆ ಅಮ್ಮ ಮೂವತ್ತು ರುಪಾಯಿ ತಗೋ ಎರಡು ಚೀಲ ಕೊಡು” ಅನ್ನುತ್ತಾ ಪರ್ಸ್ ತಗೆದು ಮೂವತ್ತು ರುಪಾಯಿ ಕೊಟ್ಟುಬಿಟ್ಟ. ಸೋನೂಳಿಗೆ ತುಸು ಕೋಪ ಬಂತು ಗಂಡನ ಮೇಲೆ, “ನಿಮಗ ಯಾಪಾರ ಮಾಡಾಕಾ ಬರಾಂಗಿಲ್ಲ, ಸುಮ್ಕೆನರ ಇರಾಂಗಿಲ್ಲ, ಕಡಿಗೆ ಎರಡ ಚೀಲದ ನಡವಿ ಐದು ರುಪಾಯಿನರ ಬುಡತಿದ್ಲು.” ಅವಳ ತಕರಾರು. “ಲೇ ಆ ಐದು ರುಪಾಯಿಲಿಂದ ನೀನಗೇನು ಭಾರೀ ಲಾಸ್ ಆಗಾಂಗಿಲ್ಲ, ಆದರ ಆ ಅಜ್ಜಿಗೆ ಆ ಐದು ರುಪಾಯಿನಾ ಹೆಲ್ಪ್ ಆಕೈತಿ. ಆ ಮುದಕಿನ್ನ ನೋಡು ಪಾಪ ಈ ವಯಸ್ಸಿನ್ಯಾಗ ಮಳ್ಯಾಗ ಹ್ಯಾಂಗ್ ನಡಗಿಕೆಂತ ಕುಂತೈತೆ. ಪಾಪ ಅಕಿತಾಗ ಹಿಂಗ್ ಚೌಕಾಸಿ ಮಾಡ್ತೀಯಲಲೇ” ಅಂದವನಿಗೆ


“ನೋಡ್ರೀ….. ಅಕಿ ಮ್ಯಾಲ ನನಗೂ ಕನಿಕರ ಐತೆ ಅಕಿಗೆ ಬೇಕಂದ್ರ ನೂರು ರುಪಾಯಿ ದಾನ ಮಾಡ್ರಿ, ಇಲ್ಲಾಂದ್ರ ಅಕಿಗೆ ಬೇಕಾದ ಔಷ್ದಿ ಕೊಡಸ್ರಿ ನಾ ಬ್ಯಾಡ ಅನ್ನಾಂಗಿಲ್ಲ. ಆದ್ರ ವ್ಯಾಪಾರ ಅಂದ್ರ ವ್ಯಾಪರ ಇದ್ದಂಗ್ ಇರಬೇಕು.ಇದರಾಗ ನಿಮ್ಮ ಎಮೋಷನ್ಸ್ ತರಬಾರದು” ಅವಳ ತರ್ಕ ಬದ್ಧ ಕೌಂಟರ್ ಗೆ ಮಾತನಾಡದಾದ ಸಾಗರ್. ಕೈಲಿ ದುಡ್ಡಿನ ಪರ್ಸ್ ಹಿಡಿದು ಕೊಂಡಿದ್ದ ಅವಳು ಮುಂದೆ ಮುಂದೆ. ಚೀಲ ಹಿಡಿದುಕೊಂಡಿದ್ದ ಇವನು ಅವಳ ಹಿಂದೆ ಹಿಂದೆ………

ಸಂತೆಯಲ್ಲಿ ಸಾಗರನಿಗೆ ಕೆಲಸವಿಲ್ಲ. ಕೈಚೀಲ ಹಿಡಿದು ಕೊಂಡು ಸೋನುವಿನ ಹಿಂದೆ ಹಿಂದೆ ಹೋದರೆ ಅಷ್ಟೇ ಸಾಕು‌ ಉಳಿದದ್ದೆಲ್ಲ ಅವಳದೇ. ಕೈಯಲ್ಲಿ ಕಾಯಿಪಲ್ಯ ಚೀಲ ಬಿಟ್ಟರೆ ಅವನ ತಲೆಯೆಲ್ಲ ಖಾಲಿ ಖಾಲಿ. ಹೀಗಾಗಿ ಸೋನು ಆ ಮುದುಕಿಯ ಬಗ್ಗೆ ಹೇಳಿದ ಮಾತುಗಳೇ ಇವನ ಕಿವಿಯಲ್ಲಿ ಮತ್ತೆ ಮತ್ತೆ ರಿಂಗಣಿಸುತ್ತಿದ್ದವು. “ಅಕಿಗೆ ಬೇಕಾದ್ರೆ ನೂರು ರುಪಾಯಿ ದಾನ ಮಾಡ್ರಿ, ಇಲ್ಲಂದ್ರ ಅಕಿಗೆ ಬೇಕಾದ ಔಷಧ ಕೊಡಿಸ್ರಿ”……..ಇವೇ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು.
“ಹೌದಲ್ಲ ? ಯಾಕೆ ನಾನು ಆ ಮುದುಕಿಗೆ ಸಹಾಯ ಮಾಡಬಾರದು ? ಅವಳ ಊಟಕ್ಕೋ…… ಔಷಧಕ್ಕೋ…… ತಿಂಗಳಿಗೆ ಇಷ್ಟೂಂತ ಕೊಟ್ಟರಾಯಿತಲ್ಲ ? ಪಾಪ ಮದುಕಿ ಈ ವಯಸ್ಸಿನಲ್ಲೂ ದುಡೀಬೇಕಾ ? ಅಷ್ಟಕ್ಕೂ ಆ ಚೀಲಗಳನ್ನು ಮಾರಿ ಅಕಿ ದುಡಿತಾಳಾದ್ರೂ ಎಷ್ಟು ? ಅಷ್ಟನ್ನು ನಾನು ಕೊಡಬಹುದಲ್ಲ ? ಆ ಮುದುಕಿ ಆರಾಮಾಗಿ ಮನೇಲೇ ಇರಬಹುದಲ್ಲ ? ಹೀಗೆ ತಲೆಯಲ್ಲಿ ನೂರೆಂಟು ವಿಚಾರಗಳು. ನಡು ನಡುವೆ ಸೋನುವಿನ ಮೃದು ಮಧುರ ಬೈಗುಳಗಳು ! “ರೀ ಎತ್ಲಾಗದೀರಿ ? ಬದ್ನೀಕಾಯಿ ಹಾಕಸ್ಕೋರಿ. ಏನ್ ವಿಚಾರ ಮಾಡಕತ್ತೀರತೀರಾ ಏನ…..ತಗರಿ….ಹಿಡೀರಿ ಹಾಗಲಕಾಯಿನೂ ಹಾಕಸ್ಕೋರಿ” ಸೋನುಳ ಮಾತನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ಇವನ ಕೆಲಸ. ಮಾಡಿದ ಕೂಡ. ಆದರೆ ತಲೆ ತುಂಬ ಆ ಮುದುಕಿಯೇ. ತರಕಾರಿ ತಗೆದು ಕೊಂಡು ಮನೆಗೆ ಹೋಯಿತು ಜೋಡಿ. ಸಂತೆಯಿಂದ ತಂದ ತರಕಾರಿಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಒಪ್ಪ ಮಾಡಿ ಫ್ರಿಡ್ಜ್ ನಲ್ಲಿಡುವವರೆಗೂ ಇವರು ಜೊತೆಯಲೀ…… ಜೊತೆ ಜೊತೆಯಲಿ. ಅವರ ಬದುಕು ಸುಮಧುರ ಸುಶ್ರಾವ್ಯ ದಾಂಪತ್ಯ ಗೀತೆ.

ಮರುದಿನ ಸಾಗರ್ ತನ್ನ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದವನು ಸೋನುಳನ್ನು ಕೇಳಿದ, “ಲೇ ಇವತ್ತು ಮಾರ್ಕೆಟ್ ಗೆ ಹೋಗಾದೈತನು ?” ಅದಕ್ಕವಳು,”ಇಲ್ಲ ಬುಡ್ರಿ ಮನ್ಯಾಗ ಎಲ್ಲ ಐತಿ ಏನೂ ತರೂದಿಲ್ಲ” ಅಂದಳು. ಹೆಂಡತಿಗೆ,”ಸರಿ ನಾ ಹೋಗಿ ಬರ್ತೀನಿ” ಎನ್ನುತ್ತಾ ಮನೆಯಿಂದ ಹೊರನಡೆದ. ಅವನ ಸ್ಕೂಟಿ ಸೀದಾ ಮಾರ್ಕೆಟ್ ಗೆ ಹೋಯಿತು. ಆ ಮುದುಕಿಯ ಕಡೆಗೆ. ಅವಳನ್ನು ನೋಡುತ್ತಾ, “ಏನವಾ ಅಜ್ಜೀ ಆರಾಮದೀಯಾ ?”
“ಆರಾಮದಿನಿ ನೋಡಪ್ಪ”
“ಚೀಲ ಬೇಕನಪ್ಪ, ಯಾವದು ಕೊಡ್ಲಿ ಸಣ್ಣದಾ….ದೊಡ್ಡದಾ…”
“ಬೇ ಅಜ್ಜೀ ನಿನ್ನೆರ ತಗೊಂಡಿವಲ್ಲಬೇ, ನಾನು ನನ್ನ ಹೆಂಡ್ತಿ ಬಂದಿದ್ವಲ್ಲ ?”
“ಹೌದಲ್ಲಪಾ….. ವಯಸ್ಸಾಗೈತಲಪಾ…… ಗುರತ ಸಿಗಾಂಗಿಲ್ಲ್ ನೋಡ್”
“ಹೌದ್ ಬುಡವಾ ಅಜ್ಜಿ ನಮ್ಮಂತೋರ್ ಎಷ್ಟ ಮಂದಿ ಬರ್ತಿರ್ತಾರ ಏನೋ ಹ್ಯಾಂಗ್ ನೆನಪಿರತೈತಿ”
“ನಂದೇನ್ ಅಂತ ದೊಡ್ಡ ಯಾಪಾರ ಇಲ್ಲಬುಡಪಾ, ವಯಸ್ಸಾತಲ ದ್ಯಾಸ ಇರಾಂಗಿಲ್ಲ”
“ಅಮ್ಮ ಎಷ್ಟ ಬೆ ವಯಸ್ಸು ಈಗ ನಿನಗ”
“ಎಪ್ಪತೈದ್ ಮ್ಯಾಲಾ ಅದಾವ್ ನೋಡ್ತಿ”
“ಆದ್ರೂ ಗಟ್ಟಿ ಅದೀಯಿ ಬಿಡಬೇ, ಈ ವಯಸ್ಸಿನ್ಯಾಗ ವ್ಯಾಪಾರ ಮಾಡತೀ ಅಂದಮ್ಯಾಲ ಗಟ್ಟೀನಾ “
“ಮಾಡಬೇಕಲ್ರಿ ಯಪ್ಪ, ಹೊಟ್ಟಿ ನಡೀಬೇಕಲ ?”
“ಮಕ್ಕಳು? ಏನ್ಮಾಡತಾರ?”
“ಒಬ್ಬವನಾ ಅದಾನ್ರಿ,……ಅಲ್ಲೆ ಅಚ್ಚಿಕಡೆ ಕರ್ಚೀಫ್ ಮಾರತಿರತಾನ”
“ಯಾಕಬೇ ಓದಸಲಿಲ್ಲನು ಅವನ್ನ”
“ಓದ್…..ಓದ್…..ಓದ್….ಅಂತ ನಾ ಬಡಕೊಂಡಿನ್ರಿ, ನನ್ನ ಮಾತ್ ಎಲ್ಲಿ ಕೇಳತಾನ, ಈಗ ಅಂತಾನ ನಾ ಓದಬೇಕಾಗಿತ್ತು ಅಂತ. ಗಂಡ ಸತ್ ಮ್ಯಾಲ ಗರತಿಗ ಬುದ್ಧಿ ಬಂದಂಗಾಗೈತಿ ಅವನ್ ಬಾಳೆ”
“ಅವರಪ್ಪ ? ನಿಮ್ಮೆಜಮಾನ ?”
“ಸತ್ತೋಗ್ಯಾನ್ರಿ…..ಇಪ್ಪತ್ ವರ್ಸಾತು ನೋಡ್ರಿ”
“ಅಂವ ಏನ್ ಮಾಡತಿದ್ನಬೇ ಎಮ್ಮ ?”
“ಕುಡೀತಿದ್ನ ರೀ”……
ಕುಡಿತವೇ ಅವನ ಉದ್ಯೋಗವಾಗಿತ್ತೇನೋ ಎಂಬಂತೆ ಹೇಳಿತು ಅಜ್ಜಿ ಮುಗ್ಧವಾಗಿ. ಮುಂದೆ ಏನೂ ಕೇಳಬೇಕೆನಿಸಲಿಲ್ಲವನಿಗೆ.
“ಹೋಗ್ಲಿ ಬುಡು ಅಜ್ಜಿ, ಮಗ ದೊಡ್ಡವನದಾನನು ? ಮದವಿ ಮಾಡೀದಿ ?”
“ಹೂನ್ರೆಪ… ಮದವಿ ಮಾಡಿದ್ದೆ , ಚುಣೇ ಹೆರಿಗ್ಯಾಗ ಅಕೀನು ಖಲಾಸು, ಕೂಸು ಖಲಾಸು. ನಮ್ ಬಾಳೇ ಏನ್ ಕೇಳ್ತೀರೀ ಯಪ್ಪಾ…… ನಮ್ ಪಾಲಿಗೆ ಆ ದೇವ್ರು ಸತ್ತಾನ್ ನೋಡ್ರಿ”
ಅಜ್ಜಿಯ ಕಥೆ ಕೇಳಿದ ಸಾಗರ ಮೌನವಾಗಿಬಿಟ್ಟ. ಎಂಥಾ ಕ್ರೂರ ವಿಧಿ! ಮನದೊಳಗೆ ಮರುಗಿದ. ಸಾವರಿಸಿಕೊಳ್ಳುತ್ತಾ, “ಹೋಗ್ಲಿ ಬುಡು ಅಜ್ಜಿ
ನೀನರಾಮದಿಯಿಲ್ಲ ? ಏನ್ಮಾಡತಿ ಬಂದಂಗ ಹೋಗಬೇಕು, ಅದಾ ಅಲ್ಲ ಜೀವನ ಅಂದ್ರ”
“ಹಂಗ ಅನಕೊಂಡ ಜೀವನ ಮಾಡಾಕತ್ತೀನಿ ನೋಡ್ರಿ, ಕೈಲಾದಾಟು ದುಡೀತಿವಿ, ಹೊಟ್ಟಿ ಇಡದಟು ಉಣತೀವಿ. ಇನ್ನೊಬ್ರಿಗೆ ಕೇಡ ಬಗಸಾಂಗಿಲ್ಲ , ಎಟ್ಟರ ತ್ರಾಸ ಇರ್ಲಿ ಮತ್ತೊಬ್ರ ಮುಂದ ಕೈ ಚಾಚಂಗಿಲ್ಲ….ನೋಡ್ರಿ ಸಾವಕಾರ್ರ”
“ನನಗ್ಯಾಕ ಸಾವಕಾರ ಅಂತೀಬೇ ಯಮ್ಮ, ನಾನೂ ನಿನ್ನ ಮಗ ಅಂತ ತಿಳಕ. ನಾನೂ ನಮ್ಮವ್ವನ್ನ ಕಳಕೊಂಡ ಎರಡ ವರ್ಸಾತ್ ‌ನೋಡು. ನೀನು ನಮ್ಮವ್ವ ಕಂಡಂಗ ಕಾಣ್ತಿ. ಅದಕ್ಕ ನಿನ್ನ ಮಾತಾಡಸಾಕ ಬಂದೀನಿ ನೋಡ್”
“ದೊಡ್ಡ ಮಾತ್ರೀ ಯಪ್ಪ ದೇವ್ರು ಸುಖವಾಗಿಟ್ಟಿರ್ಲಿ ನಿಮ್ಮನ್ನ” ಕಿಲಾಡಿ ದೇವ್ರು ಸುಲಭವಾಗಿ ಯಾರೂ ತನ್ನನ್ನು ಮರೆಯಲು ಬಿಡುವದಿಲ್ಲವನು. ಅಜ್ಜಿಯ ಮಾತು ಕೇಳಿ ಮೊಣಕಾಲು ಮಡಿಚಿ ಕುಳಿತೇ ಬಿಟ್ಟ ಸಾಗರ್.
“ಎಲ್ಲ ಛೊಲ ಆಕೈತಿ ಬಿಡಬೆ ಚಿಂತಿ ಮಾಡಬ್ಯಾಡ. ನಿನಗ ಬಿಪಿ, ಸುಗರು, ಇಂತವ ಏನರ ಗಂಟ ಬಿದ್ದಾವೇನ್ ಮತ್ತ ?”
“ಉಳದಿದ್ದ ತ್ರಾಸ ಭಾಳ ಕೊಟ್ಟಾನಲ ಅದಕ್ಕ ಆ ದೇವ್ರು ಅಷ್ಟಾ ಸಾಕ ಇಕಿಗೆ ಅಂತ ಅವನ್ಯಾವು ಕೊಟ್ಟಿಲ್ರಪ ಆರಾಮದೀನಿ”
“ಹಂಗಲ್ಲಬೇ……ಗುಳಿಗೀ ಖರ್ಚೂ, ಔಷಧಿ ಖರ್ಚು ಏನರ ಇದ್ರ ಹೇಳವ ನಾನು ಸ್ವಲ್ಪ ಹೆಲ್ಪ್ ಮಾಡಬೇಕಂತೀನವ ಹೇಳು ನಮ್ಮವ್ವ ಕಂಡಂಗ ಕಾಣ್ತಿ ನೀ……. ಅದಕ್ಕವ…. ನಾ ಏನ್ ಭಾಳ ಕೊಡಾಂಗಿಲ್ಲ ಒಂದ್ ಸಾವ್ರ ರುಪಾಯಿ ಕೊಡತೀನಿ ಇಟ್ಕೋ ಎದಕರ ಬೇಕಾಕೈತಿ ಮುಂದಿನ ತಿಂಗಳದಾಗ ಬಂದು ಮತ್ತೊನ್ಸೊಲ್ಪ ಕೊಡತೀನಿ.ತಗಳವ ಇಟ್ಕೊ” ಎನ್ನುತ್ತಾ ಸಾವಿರ ರುಪಾಯಿ ಕೊಡಲು ಹೋದ ಸಾಗರ್. ಆ ಮುದುಕಿ ಅಷ್ಟೇ ನಯವಾಗಿ “ದುಡ್ಡು ಬೇಡಾ ಸಾರ್” ಅಂದ್ಲು………..
“ನಮ್ಮ ಮ್ಯಾಲೆ ಇಷ್ಟು ಕನಿಕರ ತೋರಿಸ್ತೀರಲ್ಲ ಅಷ್ಟಾ ಸಾಕು. ನೀವು ಚೆಂದಾಗಿರ್ರೆಪಾ ನನಗಷ್ಟಾ ಸಾಕು, ಸಂತೋಷ ” ಎನ್ನುತ್ತ ಸಾಗರನ ತಲೆ ನೇವರಿಸುತ್ತಾ ಕೆನ್ನೆ ಸವರಿದಳು. ಸಾಗರ್ ಮಗುವಂತಾಗಿದ್ದ.
“ಅಜ್ಜಿ ನಿನ್ನ ಹೆಸರ ಕೇಳಾದ ಮರ್ತೀನಿ ನೋಡ್….ಏನಜ್ಜಿ ನಿನ್ ಹೆಸ್ರು ?”
ಅಜ್ಜಿ ಜೋರಾಗಿ ನಗುತ್ತಾ,…..”ಭಾಗ್ಯಲಕ್ಷ್ಮಿ” ಎಂದಳು‌.

ಬಹುತೇಕರ ಜೀವನದಲ್ಲಿ ಹೆಸರಿಗೂ ಬದುಕಿಗೂ ಸಂಬಂಧವೇ ಇರುವುದಿಲ್ಲ. ಭಾಗ್ಯಲಕ್ಷ್ಮಿ ಅಮ್ಮನ ಬದುಕು ಇಂತಹ ವೈರುಧ್ಯಗಳಿಗೆ ಮತ್ತೊಂದು ಉದಾಹರಣೆಯಷ್ಟೆ.
ಅಜ್ಜಿ ಯನ್ನು ಮಾತಾಡಿಸಿದ ಆಕಾಶ್ ತುಸು ಭಾರವಾದ ಮನಸ್ಸನಿಂದ ಮನಗೆ ತೆರಳಲು ಅನುವಾದ. ಇವನನ್ನು ತಡೆದ ಭಾಗ್ಯಲಕ್ಷ್ಮಮ್ಮ ಪಕ್ಕದಲ್ಲಿ ಹೂ ಮಾರುತ್ತಿದ್ದ ಹೆಣ್ಣುಮಗಳಿಂದ ಒಂದು ಮೊಳ ಹೂ ಪಡೆದು, “ನಿನ್ ಹೆಂಡ್ತಿಗೆ ಒಯ್ಯಪಾ, ನೀನು ನನ್ನನ್ನ ಅವ್ವ  ಅಂದಿ ಅಂದಮ್ಯಾಲ ಅಕಿ ನನಗ ಸೊಸಿ ಇದ್ದಂಗ, ಹೂವ ಒಯ್ದು ಕೊಡು.” ಅಂದ್ಲು. ಕೊಡಲು ಬಂದವನಿಗೆ ಪಡೆಯುವ ಭಾಗ್ಯ. ಬೇಡ ಎನ್ನದೇ ಭಾಗ್ಯಮ್ಮನಿಗೊಮ್ಮೆ ನಮಿಸಿ, ಅವಳು ಕೊಟ್ಟ ಹೂ ಪಡೆದು ಮನೆಗೆ ಬಂದ. ನಡೆದ ವೃತ್ತಾಂತವನ್ನೆಲ್ಲ ಸೋನುಗೆ ಹೇಳಿದ. ಅವಳ ಕಣ್ಣಾಲೆಗಳೂ ಒದ್ದೆಯಾದವು.ಅಂದಿನಿಂದ ಭಾಗ್ಯಲಕ್ಷ್ಮಮ್ಮನಿಗೂ  ಸಾಗರ್-ಸೋನು ಅವರಿಗೂ ಒಂದು ವಿಶೇಷ ಅನುಬಂಧ ಬೆಳೆಯಿತು. ಪರಸ್ಪರ ಫೋನ್ ನಂಬರ್ ವಿನುಮಯ ಮಾಡಿಕೊಂಡರು. ಅಮ್ಮನದು ಸಾದಾ ಕೀ ಪ್ಯಾಡ್ ಫೋನ್. ಅಷ್ಟೇ ಸಾಕು ನನಗೆ ಎನ್ನುತ್ತಿತ್ತು ಆ ಹಿರಿಯ ಜೀವ. ಇವರು ಯಾವಾಗ ಮಾರ್ಕೇಟಿಗೆ ಹೋದರೂ ಭಾಗ್ಯಲಕ್ಷ್ಮಮ್ಮನಿಗೆ ತಿನ್ನಲು ಏನಾದರೂ ಒಯ್ಯುತ್ತಿದ್ದರು. ಆ ಅಮ್ಮನೂ ಅಷ್ಟೇ ಇವರಿಗೇನಾದರೂ ಕೊಟ್ಟು ಕಳಿಸುತ್ತಿದ್ದಳು. ಏನಿಲ್ಲವೆಂದರೂ ಒಂದು ಮೊಳ ದುಂಡು ಮಲ್ಲಿಗೆ ಗ್ಯಾರಂಟೀ. ಸೋನು ತನ್ನ ಮನೆಯಲ್ಲಿ ವಿಶೇಷ ಅಡುಗೆ ಏನಾದರೂ ಮಾಡಿದರೆ ಭಾಗ್ಯಮ್ಮಳಿಗೊಂದು ಪಾಲು ಇದ್ದೇ ಇರುತ್ತಿತ್ತು. ಭಾಗ್ಯಮ್ಮಳೂ ಅಷ್ಟೆ ಇವರಿಗೋಸ್ಕರ ಹೂವನ್ನೋ, ಪಪ್ಪಾಯ ಹಣ್ಣನ್ನೋ, ತಗೆದಿಟ್ಟಿರುತ್ತಿದ್ದಳು. ಹೀಗೇ ಒಂದು ದಿನ ಇಬ್ಬರೂ ಮಾರ್ಕೆಟ್ ಗೆ ಹೋಗಿದ್ದರು. ಅಮ್ಮನ ಜಾಗ ಖಾಲಿ ಖಾಲಿ. ಏನೋ ಕಳೆದು ಕೊಂಡಂತಾಗಿತ್ತವರಿಗೆ. ಫೋನ್ ಮಾಡಿದರು. ಭಾಗ್ಯಮ್ಮನ ಫೋನ್ ಸ್ವಿಚ್ಡ್ ಆಫ್ ! ಇವರಿಗೆ ಗಾಬರಿ ! ಪಕ್ಕದವರನ್ನು ಕೇಳಿದರು. ಅವರು ಹೇಳಿದ ಉತ್ತರ ಕೇಳಿ ಸ್ಟನ್ ಆಗಿಬಿಟ್ರು. ನಿನ್ನೆ ದಿನ,  ಕರ್ಚೀಪು ಮಾರುತ್ತಿದ್ದ ಭಾಗ್ಯಮ್ಮಳ ಒಬ್ಬನೇ ಮಗನಿಗೆ ಹಾವು ಕಚ್ಚಿ ಸಾವಾಯಿತಂತೆ ! ಚಡಪಡಿಸಿಬಿಟ್ಟರು ದಂಪತಿಗಳು. ಅಜ್ಜಿಯ ಊರಿಗೆ ಹೋಗೋಣ ಎಂದರೆ ಕತ್ತಲಾಗಿಬಿಟ್ಟಿದೆ. ನಾಳೆ ಹೋಗೋಣ ಎಂದರೆ ಸಾಗರನಿಗೆ ರಜೆ ಇಲ್ಲ. ರವಿವಾರ ಹೋದರಾಯಿತು ಎಂದು ತೀರ್ಮಾನಿಸಿದರು. ಮನೆಗೆ ಬಂದರು. ಅವಳದೇ ಮಾತು. ತುಂಬಾ ನೊಂದುಕೊಂಡಿದ್ದ ಸೋನು, “ರೀ….ಪಾಪ ಆ ಅಜ್ಜಿ, ಎಷ್ಟು ನೋವು ಪಡಾಕತೈತಾ ಏನ, ರವಿವಾರ ಮಾತಾಡಸಾಕ ಹೋಗಿರ್ತೀವಲ್ಲ, ಹಂಗ ಬರೂದ್ ಬ್ಯಾಡ, ಆ ಅಜ್ಜೀನ ನಮ್ಮನಿಗೆ ಕರಕೊಂಡ ಬಂದು ಬಿಡಾಮ.ನಮಗರ ಹಿರ್ಯಾರು ಅಂತ ಯಾರದಾರ. ಪಾಪರೀ ಅಜ್ಜಿ ನಂ ಜೊತಿ ಇರ್ಲಿ” ಅಂದಾಗ, ಸಾಗರ್ ತನ್ನ ಹೆಂಡತಿಯನ್ನು ಹೆಮ್ಮೆಯಿಂದ ನೋಡಿದ. ತನ್ನ ಸೋನು ರತ್ನದಂತಹ ಹುಡುಗಿ ಅಂದುಕೊಳ್ಳುತ್ತಾ ಮೃದುವಾಗಿ ಅಪ್ಪಿಕೊಂಡ. ಮಾತನಾಡದೇ ಹಣೆಗೊಂದು ಮುತ್ತಿಟ್ಟ.

ರವಿವಾರ ಬಂತು. ಇಬ್ಬರೂ ಕಾರ್ ತಗೊಂಡು ಅಜ್ಜಿಯ ಊರಿಗೆ ಹೋದರು. ಸುಮ್ಮನೇ ಮಲಗಿದ್ದ ಅಜ್ಜಿಯ ಕಣ್ಣುಗಳು ಬತ್ತಿ ಹೋಗಿದ್ದವು. ಇವರನ್ನು ನೋಡಿದೊಡನೆ ಅಜ್ಜಿಯ ದುಃಖ ಇಮ್ಮಡಿಸಿತು. ಅಳವಷ್ಟು ಶಕ್ತಿ ಇರಲಿಲ್ಲ. ಇವರೇ ಸಮಾಧಾನ ಮಾಡಿದರು. ಅಕ್ಕ ಪಕ್ಕದ ಮನೆಯವರು ತಂದಿದ್ದ ಊಟವನ್ನೂ ಸರಿಯಾಗಿ ಮಾಡಿರಲಿಲ್ಲ ಅಜ್ಜಿ. ಸೋನು ಅವನ್ನು ತಗೆದಿಟ್ಟು ತಾನು ತಂದಿದ್ದ ಊಟವನ್ನು ಕೈತುತ್ತು ಮಾಡಿ ಉಣಿಸಿದಳು ಅಜ್ಜಿಗೆ. “ಯಾವ ಜನ್ಮದಾಗ….ನೀನು ನಮ್ಮವ್ವ ಆಗಿದ್ಯೋ…. ಮಗಳಾಗಿದ್ಯೋ…… ಕೈ ತುತ್ತು ತಿನಸಾಕತ್ತಿಯಲ್ಲವಾ ತಾಯಿ. ನಿನ್ನ ಋಣ ನಾ ಹ್ಯಾಂಗ್ ತೀರಸಲವಾ ಯವ್ವ” ಅಳುತ್ತಿತ್ತು ಅಜ್ಜಿ. ಇವರು ಸಮಾಧಾನ ಮಾಡುತ್ತಲೇ ಇದ್ದರು. ಕೊನೆಗೆ ಸೋನು, “ಅಜ್ಜೀ ನೀನಿಲ್ಲಿರೋದ್ ಬ್ಯಾಡ, ನಮ್ಮನಿಗೆ ಹೋಗಾಮ ನಡಿ. ನಮ್ಜೊತಿ ಇರವಂತಿ. ನಮ್ಮನ್ಯಾಗೂ ಯಾರೂ ಹಿರಿಯಾರ ಇಲ್ಲ. ನೀನಾ ನಮಗ ತಾಯಿ ಇದ್ದಂಗ” ಅಂದಳು. ಆದರೆ ಅಜ್ಜಿಯದು ಒಂದೇ ಹಠ. “ವಲ್ಯ ನನ್ನಿಂದ ಯಾರಿಗೂ ತ್ರಾಸ್ ಆಗಾಕ ನಾ ಬುಡಾಂಗಿಲ್ಲವ ದೇವರಿಟ್ಟಂಗ ಇರತೀನಿ. ಇಲ್ಲೇ ಇರತೀನಿ. ನಂದರ ಎಷ್ಟ ದಿನಾ ಐತಿ. ಈ ನೆಲದ ಋಣ ಮುಗಿಯಾಕ ಬಂದೈತಿ ಅನಸ್ತದ. ಇಂತಾದ್ರಾಗ ನಿಮಗ್ಯಾಕ ತ್ರಾಸ ಕೊಡ್ಲೆವಾ, ವಲ್ಲೆ. ಇಷ್ಟು ಪ್ರೀತಿ ಸಾಕು” ಅಜ್ಜಿಯ ಈ ಹಠಮಾರಿ ಧೋರಣೆಯನ್ನು ಬಿಡಿಸೋಕೆ ಸೋನು-ಸಾಗರ್ ಹರಸಾಹಸ ಪಟ್ರು. ಒಂದು ಗಂಟೆಯ ಇವರ ಮನವೊಲಿಕೆಯ ಫಲವಾಗಿ ಕೊನೆಗೂ ಅಜ್ಜಿ ಇವರ ಜೊತೆ ಬರಲು ಒಪ್ಪಿದಳು. ಅವರಿಗೋ ಖುಷಿ ಇಗಲೇ ಹೋಗೋಣ ನಡಿರಿ ಎಂದು.ಆದರೆ ಅಜ್ಜೀದು ಒಂದು ಕಂಡೀಷನ್ನು “ಇವತ್ತು ನಿಮ್ಜೊತೆ ಕಾರಿನ್ಯಾಗ ಬರಾಕ್ ವಲ್ಲೆ….. ನಾಳೆ ನಾನು ಮತ್ತೆ ಆ ಮಾರ್ಕೆಟಿಗೆ ಬಂದು  ನನ್ ಜಾಗಕ್ಕ ನಾ ಕುಂತಿರತೀನಿ. ಅವಾಗ್ ನೀವ್ ಬರ್ರಿ ನಿಮ್ಜತಿ ಬರ್ತೀನಿ”. ಇಬ್ಬರಿಗೂ ಖುಷಿ. ಅಜ್ಜಿ ಒಪ್ಪಿದಳಲ್ಲ ಅಂತ. ನಗು ನಗುತ್ತಾ ಅಜ್ಜಿಯ ಮನೆಯಿಂದ ಹೊರಟರು. ಅವರ ನಗು ಆ ಕ್ಷಣ ಸಾವಿನ ನೋವನ್ನೂ ಮರೆಸಿತ್ತು.

ಮರುದಿನ ಸಾಗರ್ ತನ್ನ ಆಫೀಸಿಗೆ ರಜೆ ಹಾಕಿದ್ದ. ಆ ಅಜ್ಜಿಯನ್ನು ಮನೆಗೆ ಕರೆತರುವ ಸಂಭ್ರಮ ಅವನಿಗೆ. ಮುಂಜಾನೆ ಹತ್ತು ಗಂಟೆಯಾಗಿರಬೇಕು, ಅಜ್ಜಿಗೆ ಫೋನ್ ಮಾಡಿದ. ಅಜ್ಜಿ ಮಾರ್ಕೆಟ್ ಗೆ ಎಷ್ಟೊತ್ತಿಗೆ ಬರುತ್ತಾಳೆ ಎಂದು ತಿಳಿದು ಕೊಳ್ಳಲು. ಆ ಕಡೆಯಿಂದ ಸ್ವಿಚ್ಡ್ ಆಫ್….. ಮತ್ತೆ ಗಾಬರಿ. ಸೋನು ಗೆ ಹೇಳಿದ. ಅವಳಿಗೂ ಗಾಬರಿಯಾಯ್ತು. ಮಾರ್ಕೆಟ್ ಗೆ ಹೋದರು. ಅಜ್ಜಿ ಅಲ್ಲಿರಲಿಲ್ಲ. ಅಕ್ಕ ಪಕ್ಕದವರನ್ನು ಕೇಳಿದರೆ ‘ಗೊತ್ತಿಲ್ಲ’ ಅನ್ನೋ ಉತ್ರ.  “ಹಳ್ಳಿಗೇ ಹೋಗಿ ಕರಕೊಂಡ ಬಂದ್ ಬುಡಾಮ ನಡ್ರೀ” ಅಂದಳು ಸೋನು. ಇಬ್ಬರೂ ಅಜ್ಜಿಯ ಹಳ್ಳಿಗೆ ಹೋದರು. ಅಜ್ಜಿಯ ಮನೆ ಅಂಗಳದ ತುಂಬಾ ಜನ. ಎಲ್ಲರ ಹೆಗಲುಗಳ ಮೇಲೆ ಟವಲ್ಲು. ಅಳುವವರಾರೂ ಇಲ್ಲ.ಅಲ್ಲಿ ಕೇಳುತ್ತಿದ್ದದ್ದು ಸಾಗರ-ಸೋನು ರ ಬಿಕ್ಕಳಿಕೆಯ ಸದ್ದು ಮಾತ್ರ.


ಆದಪ್ಪ ಹೆಂಬಾ ಮಸ್ಕಿ

2 thoughts on “ರಸ್ತೆಯ ಮೇಲೊಬ್ಬ ರಾಜಮಾತೆ (ಕಥೆ)ಆದಪ್ಪ ಹೆಂಬಾ ಮಸ್ಕಿ

  1. ಕಥೆ ತೊಂಬಳ ಸುಂದರ. ಓದಿಸಿಕೊಳ್ಳುತ್ತಾ, ಮುನ್ಸೂಚನೆ ನೀಡುತ್ತಾ ಸಾಗುತ್ತದೆ. ಕನಿಕರ, ಪ್ರೀತಿ, ಮಾನವೀಯತೆ, ಬಡತನ, ಸ್ವಾಭಿಮಾನ, ಭಗವಂತನ ಭಂಡತನ ಎಲ್ಲವನ್ನು ಸುಂದರವಾಗಿ ಬೆಸೆದು ಮೇಳೈಸಿದ್ದಾರೆ ಕವಿ ಅದಪ್ಪಾ ಹೆಂಬಾ ಮಸ್ಕಿಯವರು. ಅಭಿನಂದನೆಗಳು.

  2. ಕಥೆ ತುಂಬಾ ಸುಂದರ. ಓದಿಸಿಕೊಳ್ಳುತ್ತಾ ಮುನ್ಸೂಚನೆ ನೀಡುತ್ತಾ ಸಾಗುತ್ತದೆ. ಕನಿಕರ, ಪ್ರೀತಿ, ಮಾನವೀಯತೆ, ಬಡತನ, ಸ್ವಾಭಿಮಾನ, ಭಗವಂತನ ಭಂಡತನ ಎಲ್ಲವನ್ನು ಸುಂದರವಾಗಿ ಬೆಸೆದು ಮೇಳೈಸಿದ್ದಾರೆ ಕವಿ ಆದಪ್ಪಾ ಹೆಂಬಾ ಮಸ್ಕಿಯವರು. ಅಭಿನಂದನೆಗಳು.

Leave a Reply

Back To Top