ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಕವಿತಾ ಸಾಲಿಮಠ ರವರ ಗಜಲ್ ಗಳಲ್ಲಿ

ಕಂಬನಿಯ ಕಡಲು

ಎಲ್ಲರಿಗೂ ನಮಸ್ಕಾರಗಳು..

ಪ್ರತಿ ವಾರದಂತೆ ಈ ಗುರುವಾರವೂ ಕೂಡ ನಿಮ್ಮ ನಿರೀಕ್ಷೆಯಂತೆ ಒಬ್ಬ ಸುಖನವರ್ ಅವರ ಪರಿಚಯದೊಂದಿಗೆ ನಿಮ್ಮ ಮುಂದೆ ಬರುತ್ತಿರುವೆ. ಅವರ ಹೆಜ್ಜೆ ಗುರುತುಗಳೊಂದಿಗೆ ಗಜಲ್ ನಾಕದಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ.. ಬನ್ನಿ, ಮತ್ತೇಕೆ ತಡ…

“ಒಂದು ದಿನ ನಿನ್ನ ಹೃದಯದಲ್ಲಿ ಏನಿದೆಯೋ ಅದನ್ನು ಹೇಳು
ಒಂದು ದಿನ ನನ್ನ ಹೃದಯದಲ್ಲಿರುವುದನ್ನು ಕೇಳು”
-ಜೋಶ್ ಮಲೀಹಬಾದಿ

     ನಮ್ಮ ಭೂಮಂಡಲದಲ್ಲಿ ಅಸಂಖ್ಯಾತ ಜೀವಜಂತುಗಳಿವೆ. ಒಂದೊಂದು ಜೀವಜಂತುವಿನ ಲೈಫ್ ಸ್ಟೈಲ್ ವಿಭಿನ್ನವಾಗಿದ್ದು, ಅನುಪಮ ಫೀಲ್ ನೀಡುತ್ತದೆ. ಅದರಲ್ಲೂ ಮನುಷ್ಯನ ಬದುಕು, ಬದುಕಿನ ರೀತಿ-ನೀತಿ, ಭಾವನೆಗಳ ತೊಳಲಾಟ, ಸಂಬಂಧಗಳ ಅನೂಹ್ಯ ಲೋಕ... ಎಲ್ಲವೂ ಎಣಿಕೆಗೆ ನಿಲುಕದ ನಿಗೂಢ ವಿಚಾರಗಳು! ಇನ್ನೂ ಸುಖ-ದುಃಖಗಳದಂತೂ ಸದಾ ಹಾವು ಏಣಿಯಾಟ. ಈ ಕಾರಣಕ್ಕಾಗಿಯೇ 

ಮನುಷ್ಯನ ಜೀವನ ಸುಖ-ದುಃಖಗಳ ಸಂಗಮ ಎನ್ನಲಾಗುತ್ತದೆ. ಆದರೆ ಒಂದಂತೂ ಸತ್ಯ, ಸಂಗಮದಲ್ಲಿ ಕಂಬನಿಯ ಪಾಲೇ ಅಧಿಕವಾಗಿದೆ. ಅಂತೆಯೇ ಮನುಷ್ಯನ ಹೃದಯ ಹೆಚ್ಚಾಗಿ ಯಾವಾಗಲೂ ತೇವದಿಂದಲೇ ಕೂಡಿರುತ್ತದೆ.‌ ಹಾಗಂತ ಆನಂದಬಾಷ್ಪ ಇಲ್ಲವೆ ಇಲ್ಲ ಎನ್ನಲಾಗದು, ಸಂಭ್ರಮವೂ ಇದೆ ಅವನ ಬಾಳಲ್ಲಿ. ಆದಾಗ್ಯೂ ಇತರರ ಸಂಭ್ರಮದಲ್ಲಿ ಭಾಗಿಯಾಗುತ್ತಾನಾದರೂ ಅದನ್ನು ತನ್ನ ಜೀವನದೊಂದಿಗೆ ತಳುಕು ಹಾಕಿಕೊಳ್ಳುವುದು ತುಂಬಾ ಕಡಿಮೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳನ್ನು ಅರಸಲಾಗದು, ಅರಸಿದರೂ ಸಿಗಲಾರವು. ಆದರೆ ಸಾವು, ನೋವು, ಹತಾಶೆ, ಮೋಸ, ದುಃಖ…ಎಲ್ಲೆ ಕಂಡರೂ ಅವುಗಳಲ್ಲಿ ತನ್ನತನವನ್ನು ಹುಡುಕಲು ಪ್ರಯತ್ನಿಸುತ್ತಾನೆ. ಇದಕ್ಕೇ ಇರಬಹುದು ಮನುಷ್ಯನನ್ನು ಭಾವನಾ ಜೀವಿಯೆಂದು ಕರಿಯೋದು! ಮದುವೆಯಂತಹ ವೈಭವ, ಸಡಗರ ಅವನ ಹೃದಯವನ್ನು ತಾಕಲಾರದು, ಆದರೆ ಅದೇ ಮದುವೆಯಲ್ಲಿ ವಧು ತನ್ನವರೆಲ್ಲರನ್ನೂ ತೊರೆದು ಗಂಡನ ಮನೆಗೆ ಹೋಗುವಾಗಿನ ದೃಶ್ಯ ಮನ ಕಲುಕುತ್ತದೆ. ಮಗುವಿನ ಜನನವಾದರೆ ಆನಂದ ಪಡುತ್ತಾನೆಯಾದರೂ ಕುಂಚಕ್ಕೆ ಕೆಲಸ ಕೊಡುವುದಿಲ್ಲ, ಮಗುವೊಂದು ಸಾವಿಗೀಡಾದರೆ… ಕುಂಚ ವಿರಮಿಸದು! ಅದುವೇ ಬರಹಕ್ಕೆ ಸ್ಪೂರ್ತಿಯಾಗಬಲ್ಲದು. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಕಂಬನಿ ತುಂಬಾ ಪವಿತ್ರವಾದದ್ದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಗುವನ್ನು ಹಂಚಿಕೊಂಡ ಜನರನ್ನು ನೆನಪಿಸಿಕೊಳ್ಳದಿದ್ದರೆ ಅದೇನೂ ಅಪರಾಧ, ತಪ್ಪು ಅನಿಸುವುದಿಲ್ಲ. ಆದರೆ ಕಣ್ಣೀರನ್ನು ಹಂಚಿಕೊಂಡ ಜನರನ್ನು ಮರೆತರೆ ಅಮಾನವೀಯತೆ ಅನಿಸಿಕೊಳ್ಳುತ್ತದೆ. “ಸಮುದ್ರವು ಇತಿಹಾಸದ ಎಲ್ಲಾ ಕಣ್ಣೀರಿನ ಗ್ರಂಥಾಲಯವಲ್ಲದೆ ಬೇರೇನೂ ಅಲ್ಲ” ಎಂಬ ಲೆಮನಿ ಸ್ನಿಕೆಟ್ ರವರ ಮಾತು ಕಣ್ಣೀರಿನ ವಿವಿಧ ಆಯಾಮಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ನಾವು ದಿನನಿತ್ಯ ಬಳಸುವ ಉಪ್ಪಿನಲ್ಲಿ ಅದೆಂತದೋ ವಿಚಿತ್ರವಾದ ಪವಿತ್ರತೆ ಇದೆ. ಅದು ನಮ್ಮ ಕಣ್ಣೀರಿನಲ್ಲಿ ಮತ್ತು ಸಮುದ್ರದಲ್ಲಿ ಬೆರೆತು ಹೋಗಿದೆ. ಯಾರಾದರೂ ಅಳುತ್ತಿರುವಾಗ, ಅವರನ್ನು ಸಾಂತ್ವನಗೊಳಿಸುವುದು ಉದಾತ್ತ ಕೆಲಸ. ಕಣ್ಣೀರಿನ ಉಪ್ಪನ್ನು ಸವಿದ ತುಟಿಗಳು ಯಾವಾಗಲೂ ಸಿಹಿಯಾದ ಮುತ್ತು ನೀಡುತ್ತವೆ ಎಂದು ಪರಂಪರಾಗತವಾಗಿ ನಂಬಿಕೊಂಡು ಬರಲಾಗಿದೆ. ಇಂಥಹ ಪವಿತ್ರ ಕಂಬನಿಯನ್ನು ಪೂಜಿಸುವ, ಪ್ರೀತಿಸುವ ಸಾಹಿತ್ಯ ಪ್ರಕಾರವೆಂದರೆ ಅದುವೇ ಗಜಲ್. ಇದು ಸಂತೈಸುವ, ಕಂಬನಿ ಒರೆಸುವ, ಜೀವನ ಶ್ರದ್ಧೆ ಮೂಡಿಸುವ ಅನನ್ಯ ಕೆಲಸವನ್ನು ಸದ್ದು ಗದ್ದಲವಿಲ್ಲದೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಸಾಹಿತ್ಯ ಪ್ರೇಮಿಗಳಿಗೆ ಗಜಲ್ ಎಂದರೆ ಅದಮ್ಯ ಪ್ರೀತಿ.‌ ಇದು ಅರಬ್ ನ ಮರುಭೂಮಿಯಲ್ಲಿ ಉದಯಿಸಿದರೂ ಜಗತ್ತಿನಾದ್ಯಂತ ತನ್ನ ಮೆದು ಬಾಹುಗಳನ್ನು ಚಾಚಿದೆ. ಇದು ಕನ್ನಡ ಭಾಷೆಗೂ ಹೊರತಲ್ಲ. ಇಂದು ಕನ್ನಡದಲ್ಲಿ ತಾರೆಗಳೋಪಾದಿಯಲ್ಲಿ ಬರಹಗಾರರು ಗಜಲ್ ಗೋಯಿಯಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಶ್ರೀಮತಿ ಕವಿತಾ ಸಾಲಿಮಠ ರವರೂ ಒಬ್ಬರು.

    ಶ್ರೀಮತಿ ಕವಿತಾ ಸಾಲಿಮಠ

ತಂದೆ : ವೈ.ಎಂ.ಅಮರಯ್ಯ ಮತ್ತು ಶ್ರೀಮತಿ ಬಸವಂತಮ್ಮ ದಂಪತಿಗಳ ಮಗಳಾಗಿ ೧೯೮೩ ಡಿಸೆಂಬರ್ ೦೮ ರಂದು ಬಳ್ಳಾರಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ತೋರಣಗಲ್ಲಿನಲ್ಲಿ, ಪದವಿಯನ್ನು ಬಳ್ಳಾರಿಯಲ್ಲಿ ಪೂರೈಸಿದ್ದಾರೆ. ಪ್ರವೀಣ ಪಿ.ಸಾಲಿಮಠ ಅವರನ್ನು ಮದುವೆಯಾಗಿ ಪ್ರಸ್ತುತ ಬಾಗಲಕೋಟೆಯಲ್ಲಿ ವಾಸವಾಗಿದ್ದಾರೆ.

 ಹಿಂದಿ ಹಾಡುಗಳು, ಸಿನಿಮಾಗಳು, ಕವ್ವಾಲಿಗಳನ್ನು ಕೇಳುವುದು ತಮ್ಮ ಬಾಲ್ಯದಿಂದಲೇ ಬೆಳೆದು ಬಂದಿರುವ ಆಸಕ್ತಿ ಎನ್ನುವ ಇವರು ಕಾವ್ಯ, ಚುಟುಕು, ಶಾಯರಿ, ಅನುವಾದ, ಕಥೆ, ಲೇಖನ ಹಾಗೂ ಗಜಲ್ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. "ದರ್ದಿಗೆ ದಾಖಲೆಗಳಿಲ್ಲ" ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರ ಕಥಾ ಸಂಕಲನವೊಂದು ಪ್ರಕಟಣೆಯ ಹಂತದಲ್ಲಿರುವುದು ಇವರ ಸಾಹಿತ್ಯದ ಒಲವನ್ನು ಸಾಬೀತು ಪಡಿಸುತ್ತಿದೆ. ಸದಾ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಹಲವು ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಹತ್ತು ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯ ಪ್ರೀತಿಯನ್ನು ಅರುಹಿದ್ದಾರೆ. ಇವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. 

    ಕಣ್ಣೀರು ಬಾಯಿಯಿಂದ ಹೇಳಲಾಗದ ಪದಗಳು. ಅದೊಂದು ಕಣ್ಣುಗಳ ಉದಾತ್ತ ಭಾಷೆ. ಕಂಬನಿಯಿಂದ ಕಣ್ಣು ಮಾತನಾಡುತ್ತದೆ, ಆವಾಗ ನಾಲಿಗೆಯು ಮೂಕವಾಗುತ್ತದೆ. ಈ ನೆಲೆಯಲ್ಲಿ ನಮ್ಮ ಕಣ್ಣೀರಿನ ಬಗ್ಗೆ ನಾವು ಎಂದಿಗೂ ನಾಚಿಕೆ ಪಡಬೇಕಾಗಿಲ್ಲ. ಕಾರಣ, ನಮ್ಮ ಕಣ್ಣೀರು ಅಮೂಲ್ಯ, ಅಗತ್ಯ ಮತ್ತು ನಮ್ಮನ್ನು ಪ್ರೀತಿಯ ಜೀವಿಗಳನ್ನಾಗಿ ಮಾಡುವ ಭಾಗವಾಗಿದೆ. ಕಣ್ಣೀರು ಬರಲು ಬಿಡದಿದ್ದರೆ ಅವು ವಿಷವಾಗಿ ಪರಿಣಮಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಕಣ್ಣೀರಿನ ಅನುಪಸ್ಥಿತಿಯು ಭಾವನೆಯ ಅನುಪಸ್ಥಿತಿಯನ್ನು ಸಾರುತ್ತದೆ. ಕಣ್ಣೀರು ಹೃದಯವನ್ನು ಶುದ್ಧೀಕರಿಸುವ ದೇವರ ಮಾರ್ಗವಾಗಿದೆ. ನ್ಯೂಯಾರ್ಕ್ ನ ಲೇಖಕ ಸ್ಟೀವ್ ಮರಬೊಲಿಯವರ "ಮುರಿದ ಹೃದಯದಿಂದ ಕಣ್ಣೀರು ಹರಿಯುತ್ತದೆ" ಎಂಬುದು ಕಂಬನಿಯ ಹಿಂದಿನ ಕಾರಣದತ್ತ ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಇಂಥಹ ಅನುಪಮ ಕಂಬನಿಯ ವಾರಸುದಾರ ಎಂದರೆ ಗಜಲ್. ಕಂಬನಿಯನ್ನು ತನ್ನ ಅಶಅರ್ ಮೂಲಕ ಓದುಗ ದೊರೆಗಳ ಹೃದಯದಲ್ಲಿ ಭದ್ರವಾದ ನೆಲೆಯನ್ನು ಕಂಡುಕೊಂಡಿದೆ. ಅಂತೆಯೇ ಸಾಹಿತ್ಯ ಪ್ರೇಮಿಗಳಿಗೆ, ಪಾಗಲ್ ಗಳಿಗೆ ಗಜಲ್ ಅಂದರೆ ಅದಮ್ಯ ಹುಚ್ಚು. ಈ ನೆಲೆಯಲ್ಲಿ ಸುಖನವರ್ ಶ್ರೀಮತಿ ಕವಿತಾ ಸಾಲಿಮಠ ರವರ "ದರ್ದಿಗೆ ದಾಖಲೆಗಳಿಲ್ಲ" ಎಂಬ ಗಜಲ್ ಸಂಕಲನವನ್ನು ಗಮನಿಸಿದಾಗ ನಮ್ಮ ದರ್ದ್ ಗಳಿಗೆ ದಾಖಲೆ ಹುಡುಕುವ ಪ್ರಯತ್ನ ಮಾಡಿ, ಸೋಲುತ್ತೇವೆ. ಈ ಸಂಕಲನದಲ್ಲಿ ಪ್ರೇಮದ ಧ್ಯಾನವಿದೆ, ಪ್ರೀತಿಯ ವಿವಿಧ ಮಜಲುಗಳಿವೆ, ನಿರೀಕ್ಷೆ, ಕನವರಿಕೆ, ನಿವೇದನೆ, ಆಲಿಂಗನ, ವಿರಹ, ಹೃದಯಗಳ ತಾಕಲಾಟ, ಒಡೆದ ಹೃದಯದ ಕನ್ನಡಿ, ಹತಾಶೆ, ನೋವು, ಕಂಬನಿ, ಸ್ತ್ರೀ ಸಂವೇದನೆ... ಇವುಗಳ ಜೊತೆಗೆ ದೇವರನ್ನು, ಪ್ರಭುತ್ವವನ್ನು ಪ್ರಶ್ನಿಸುವ, ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರುವ, ಸಾಮಾಜಿಕ ಕಳಕಳಿ ತೋರುವ, ಅನ್ನದಾತನ ಒಡಲ ಹಸಿವು,

ವಾಸ್ತವದ ನೆಲೆಯಲ್ಲಿ ನಿಲ್ಲುವ ಹಲವು ವಿಚಾರಧಾರೆಗಳು ಇಲ್ಲಿ ಒಪ್ಪವಾಗಿ ಜೋಡಿಸಲಾಗಿದೆ. ಇಂಥಹ ಗಜಲ್ ಗಳನ್ನು ಓದುತ್ತಾ ಹೋದಾಗ ನಮಗೆ ಅರಿವೆ ಇಲ್ಲದಂತೆ ನಮ್ಮ ಕಂಗಳು ಸ್ಪಂದಿಸುತ್ತವೆ.

‘ನಿನ್ನ ಮೌನಕ್ಕೆ ಕಿವಿಯಾಗುವೆ ಮಾತಾಗುವೆ
ನಿನಗಾಗಿಯೇ ಬಾಳುತ್ತೇನೆ ನಿನ್ನೊಳಗೊಂದಾಗಿ”

ಮೌನವು ಶಾಂತಿಯುತವಾಗಿರುತ್ತದೆ ಎಂದು ಅನೇಕರು ಭಾವಿಸುತ್ತಾರೆ.‌ ಅದು ಕೆಲವೊಮ್ಮೆ ನಿಜವಾಗಿರಲೂ ಬಹುದು. ಆದರೆ ಯಾವಾಗಲೂ ಅಲ್ಲ. ಹಲವು ಬಾರಿ ಅದು ನೋವಿನಿಂದ ಕೂಡಿರುತ್ತದೆ. ಅಂಥಹ ಮೌನವನ್ನು ಅರ್ಥಮಾಡಿಕೊಳ್ಳದವರಿಗೆ ಬಹುಶಃ ಮಾತುಗಳೂ ಅರ್ಥವಾಗುವುದಿಲ್ಲ ಎಂದನಿಸುತ್ತದೆ. ಅಂತೆಯೇ ಮೌನದಷ್ಟು ಅಧಿಕಾರವನ್ನು ಯಾವುದೂ ಬಲಪಡಿಸುವುದಿಲ್ಲ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಜನರು ಮೌನಕ್ಕೆ ಸಂಪೂರ್ಣವಾಗಿ ಹೆದರುತ್ತಾರೆ. ಇಲ್ಲಿ ಶಾಯರಾ ಶ್ರೀಮತಿ ಕವಿತಾ ಸಾಲಿಮಠ ರವರು ಪ್ರೇಮಿಗಳ ಮೌನ, ಅದರ ಅರ್ಥ, ಆ ಮೌನಕ್ಕೆ ಕಿವಿಯಾಗುವ, ಮಾತಾಗುವ ಹಾಗೂ ಅದರೊಂದಿಗೆ ಹೆಜ್ಜೆ ಹಾಕುವ, ಅದರೊಳಗೊಂದಾಗುವ ಭಾವಯಾನವನ್ನು ಷೇರ್ ರೂಪದಲ್ಲಿ ದಾಖಲಿಸಿದ್ದಾರೆ.

“ಮನುಜ ಮಾನವೀಯತೆ ಮರೆಯುತ್ತಾ ಸಾಗುತ್ತಿರುವನು
ಧರ್ಮಕ್ಕೆ ದಾರಿಯುದ್ದಕ್ಕೂ ದ್ವೇಷಿಸುತ್ತಾ ಸಾಗುತ್ತಿರುವನು”

ಈ ಮೇಲಿನ ಷೇರ್ ನಲ್ಲಿ ಬಳಕೆಯಾಗಿರುವ ‘ಸಾಗುತ್ತಿರುವನು’ ಎಂಬ ರದೀಫ್ ತುಂಬಾ ಸಶಕ್ತವಾಗಿದೆ. ಇದು ಮನುಷ್ಯನ ನಡೆಯನ್ನು ವಿಡಂಬಿಸುತ್ತ ಸಾಗಿದೆ. ಮನುಷ್ಯ ಮನುಷ್ಯತ್ವ ಮರೆತು ತುಂಬಾ ವಸಂತಗಳೆ ಉರುಳಿವೆ. ಇಂದಂತೂ ಮಾನವೀಯತೆ ಎಂಬುದು ಪಳೆಯುಳಿಕೆಯಂತೆ ಭಾಸವಾಗುತ್ತಿದೆ. ನಡೆ, ನುಡಿಯನ್ನು ನಿರ್ದೇಸಿಸಬೇಕಾಗಿದ್ದ ಧರ್ಮವು ಇಂದು ಅನಗತ್ಯವಾಗಿ ಸಮಾಜದ ನೆಮ್ಮದಿಗೆ ಕನ್ನ ಹಾಕುವ ಸಾಧನವಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಇಲ್ಲಿ ಗಜಲ್ ಗೋ ಕವಿತಾ ಸಾಲಿಮಠ ರವರು ಮನುಕುಲ ಸಾಗುತ್ತಿರುವ ನಡೆಯನ್ನು ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.

   ಭಯವನ್ನು ತೊಳೆಯುವ ಮತ್ತು ದ್ವೇಷವನ್ನು ತಣ್ಣಗಾಗಿಸಕವ ಮಂತ್ರದಂಡವೆಂದರೆ ಕಣ್ಣೀರು. ಇದು ಹೃದಯವನ್ನು ಶುದ್ಧೀಕರಿಸುವ ಮಾರ್ಗದ ಜೊತೆಗೆ ಸಂವಹನದ ಒಂದು ರೂಪವೂ ಆಗಿದ್ದು ಗಜಲ್ ಸಾಹಿತ್ಯ ಪ್ರಕಾರದ ಮೂಲಕ ಹೃದಯಗಳನ್ನು ಬೆಸೆಯುತ್ತಿದೆ. ಇಂಥಹ‌ ಗಜಲ್ ಗಳು ಗಜಲ್ ಗೋ ಶ್ರೀಮತಿ ಕವಿತಾ ಸಾಲಿಮಠ ರವರಿಂದ ಮತ್ತಷ್ಟು ಮೊಗೆದಷ್ಟೂ ಮೂಡಿಬರಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. 

“ಮನುಷ್ಯ ಹೇಗೆ ಒದ್ದಾಡುತಿದ್ದಾನೆ ಜೀವಿಸಲು
ದಡದಲ್ಲೊಂದು ಮೀನು ಹೇಗೆ ಜೀವಂತವಾಗಿದೆ”
-ಗುಲಾಮ್ ಮುರ್ತಜಾ ರಾಹಿ

ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಬರೆಯುತಿದ್ದರೆ ಕಾಲದ ಗೊಡವೆಯೇ ಇರುವುದಿಲ್ಲ. ಆದಾಗ್ಯೂ ಆ ಕಾಲದ ಮುಂದೆ ಮಂಡಿಯೂರಲೆಬೇಕಲ್ಲವೇ.‌ ಅಂತೆಯೇ ಈ ಲೇಖನಿಗೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

Leave a Reply

Back To Top