ಕವಿ ಕಾವ್ಯ ಕುರಿತು-ನರಸಿಂಗರಾವ ಹೇಮನೂರ

ವಿಶೇಷ ಲೇಖನ

ನರಸಿಂಗರಾವ ಹೇಮನೂರ

ಕವಿ ಕಾವ್ಯ ಕುರಿತು

“ನರತ್ವಮ್ ದುರ್ಲಭಮ್  ಲೋಕೇ,
ವಿದ್ಯಾ ತತ್ರಸು ದುರ್ಲಭಮ್
ಕವಿತ್ವಮ್  ದುರ್ಲಭಮ್
ತತ್ರಶಕ್ತಿಸ್ತತ್ರಸು ದುರ್ಲಭಮ್”

 ಈ ಲೋಕದಲ್ಲಿ ಮಾನವ ಜನ್ಮ ಲಭಿಸುವುದು ಬಹಳ ಕಷ್ಟ. ಮಾನವ ಜನ್ಮ ಸಿಕ್ಕಿದರೂ ವಿದ್ಯೆ ದೊರೆತು ವಿದ್ಯಾವಂತರಾಗಿ ಬದುಕು ಸಿಗುವುದು ಅತ್ಯಂತ ದುರ್ಲಭ. ಅದು ಹೇಗೋ ವಿದ್ಯೆ ದೊರಿತರೂ ಕವಿತ್ವ ಅಂದರೆ ವಿದ್ಯೆಯಲ್ಲಿ ಕಾವ್ಯ ರಚನಾ ಪಾಂಡಿತ್ಯ ಸಿಗುವುದು ಕಷ್ಟ. ಪಾಂಡಿತ್ಯ ದೊರೆತರೂ ಒಳ್ಳೆಯ ಕಾವ್ಯರಚನೆ ಮಾಡುವ ಶಕ್ತಿ ಸಿಗುವುದು ಬಹಳ ಕಷ್ಟ.

ಕವಿಗೆ ಪ್ರತಿಭೆಯೇ ಮುಖ್ಯ. ಪರಿಸರ, ಸ್ಫೂರ್ತಿ, ಮುಂತಾದವುಗಳು ಸೂಲಗಿತ್ತಿಯಂತೆ ಕೆಲಸ ಮಾಡುತ್ತವೆ. ಪ್ರತಿಭೆ ಹೊರ ತರಲು ಇವೆಲ್ಲ ಬೇಕೇ ಬೇಕು. ಡಾಕ್ಟರ್ ಅಬ್ದುಲ್ ಕಲಾಂ ಹೇಳುತ್ತಾರೆ :

“We all have equal talent, but we do not have equal opportunity to develop our talent .”

ಹಾಗಾಗಿ ಪ್ರತಿಭೆ ಇದ್ದರೂ ಅವಕಾಶಗಳಿಲ್ಲದಿದ್ದರೆ ಆ ಪ್ರತಿಭೆ ಕಮರಿ ಹೋಗುವುದು. ವರ್ಡ್ಸವರ್ತ್ ಹೇಳಿದಂತೆ “poetry is a spontaneous flow of overwhelming feelings.” ಅತಿ ದುಃಖದಲ್ಲಿದ್ದಾಗ ಅಥವಾ ಅತೀವ ಆನಂದದಲ್ಲಿದ್ದಾಗ ಕವಿ ಭಾವಸ್ಪುರಿತನಾಗಿ ಕವಿತೆಯನ್ನು ರಚಿಸುತ್ತಾನೆ. ಯಾವುದೋ ಸುಳಿವು ಹೊಳೆದು ಅದು ಆತನಿಗೆ ಇಡೀ ಕವಿತೆಯ ರಚನೆಗೆ ಪ್ರೇರಕವಾಗುತ್ತದೆ. ಕವಿ ತಾನು ಕಂಡ, ಅನುಭವಿಸಿದ ಘಟನೆಗಳನ್ನು ಯಾವುದೋ ಒಂದು ಗಳಿಗೆಯಲ್ಲಿ ಹೊರಹಾಕಲು ಪ್ರೇರೇಪಿತನಾದಾಗ ಅದನ್ನು ಅದುಮಿ ಹಿಡಿಯಬಾರದು. ಕವಿಯ ಭಾವನೆಗಳು ರೂಪ ಪಡೆದು ಹೊರ ಬಂದಾಗ ಕವಿಗೆ ಸಾರ್ಥಕತೆಯ ಅನುಭವವಾಗುವುದು. ಸಹಜ ಸ್ಪೂರ್ತಿ ಮತ್ತು ಗರಿಷ್ಠ ಪ್ರಮಾಣದ ಭಾವತೀವ್ರತೆ ಸಾರ್ಥಕ ಕವಿ ಒಬ್ಬನ ನಿಜವಾದ ಅಂತಸ್ಸತ್ವ ಎನಿಸುತ್ತದೆ.    

ಕವಿ ಕಾವ್ಯ ಸಂಬಂಧವನ್ನು ತಾಯಿ ಮಗುವಿನ ಅರ್ಥಪೂರ್ಣ ಬೆಸುಗೆಯಲ್ಲಿ ಕಾಣಬೇಕು. ಭ್ರಮಿತ ಲೋಕದ ಅಪಸವ್ಯಗಳಿಂದ ಕವಿ ಕಾವ್ಯ ಸಂಬಂಧವನ್ನು ನಿರ್ದೇಶಿಸಲಾಗದು, ಬದಲಾಗಿ ಕವಿಯ ಕಲ್ಪನೆಗಳನ್ನು ತಾಯಿಯ ಬಸಿರು ಮತ್ತದರ ಕುಡಿಗೆ ಹೋಲಿಸಬಹುದಾಗಿದೆ. ಬೇಂದ್ರೆಯವರು ನಿನ್ನ ನೀ ಹೊತ್ತೆ ನನ್ನ ನಾಲಿಗೆಯದು ಬರಿ ಸೂಲಗಿತ್ತಿ ಎಂದಿರುವರು. ಕಲ್ಪನೆಗಳು ಕಣ್ಣು ಬಿಟ್ಟು ಎದೆ ತಟ್ಟಿದಾಗ ಹುಟ್ಟುವ ಅಂತರಂಗ ಸ್ಪಂದನದ ಫಲಶ್ರುತಿಯೇ ಕವಿತೆ. ಕವಿತೆ ಮೂಲಕ ಮಾತಾಡದೆ ಇರಲು ಕವಿಗೆ ಸಾಧ್ಯವೇ ಇಲ್ಲ. ಹಾಗೇನಾದರೂ ಆದರೆ ಕವಿಗೆ ಬದುಕೇ ಇಲ್ಲ. ಈ ನೆಲದ ಹಿರಿಯ ಕವಿ ಗುರುನಾಥರೆಡ್ಡಿ ಕೆರಲ್ಲಿಯವರು ಇದನ್ನು ಸ್ಪಷ್ಟಪಡಿಸುತ್ತಾ – “ಇದು ಹುಟ್ಟದಿದ್ದರೆ ಚಿಂತೆ ಇಲ್ಲ, ಹುಟ್ಟಿ ಸತ್ತರೆ ದುಃಖ ಇಲ್ಲ, ಆದರೆ  ಒಡಲೊಳಗೆ ಸತ್ತರೆ ನನಗೆ ಬದುಕೇ ಇಲ್ಲ,” ಎಂದಿರುವರು.

ಸೂಕ್ಷ್ಮತೆ, ಸ್ವಚ್ಛತೆ, ಧ್ವನಿಪೂರ್ಣತೆ,ಶ್ರೇಷ್ಠ ಕಾವ್ಯದ ಲಕ್ಷಣಗಳು. ಅದರಂತೆ ಸ್ವಂತಿಕೆ, ಸಾಮಾಜಿಕ ಸ್ಪಂದನವೂ   ಅಗತ್ಯ.

“ಬಾನವರನರ್ಚಿಸುತ,ದಾನಿಗಳ ಕೀರ್ತಿಸುತ, ಮ್ಲಾನ ಕವಿಯಾಗುವ ಬಯಕೆ ಎನಗಿಲ್ಲ, ದೀನರನು  ಅರಿತು ಅವರನೇ  ಕುರಿತು ಬರೆಯುವ ಸಾಮಾನ್ಯ ಕವಿಯಾಗಿಸೈ ಮರಳುಸಿದ್ದ.”

ಎಂದಿರುವ ಕಾವ್ಯಾನಂದರು  ಕವಿಗಳು ಜನಸಾಮಾನ್ಯರ ಬದುಕನ್ನು ಬಿಂಬಿಸುವ ಕವನವನ್ನು ರಚಿಸಬೇಕು, ಕವಿಗೆ ಬುದ್ಧಿ ಭಾವಗಳೆರಡೂ ಒಂದಾಗಬೇಕೆಂದು  ಹೀಗೆ ಹೇಳಿರುವರು.

 “ಮದ್ದಿಲ್ಲ ಮರಣಕ್ಕೆ ಹದ್ದಿಲ್ಲ   ಪ್ರೇಮಕ್ಕೆ ಸಿದ್ಧಿಯಿಲ್ಲಳಿಮನದ ಸಾಧಕಗೆ,
ಬುದ್ಧಿ ಭಾವಗಳೆರಡು ಮುದ್ದಾಗಿ ಬೆರೆಯದಿರೆ  ಪದ್ಯವೆಲ್ಲೆಂದಾತ ಮರುಳಸಿದ್ದ.”  

ಪದ ಬರೆಯಲು ಹದ ಬೇಕು. ಗೀಚಿದ್ದೆಲ್ಲ ಕವಿತೆ ಆಗುವುದಿಲ್ಲ. ಪದ್ಯ ರಚನಕಾರರು ಬಹಳ ಇದ್ದರೂ ಕವಿಗಲೆನಿಸಿಕೊಳ್ಳುವವರು ವಿರಳ. ಜೀವನದ ಸಿಹಿ ಕಹಿಯ ಅನುಭವವೇ ಕಾವ್ಯ. ಆದಕಾರಣ ಕವಿ ಹೃದಯ ಜನರ ದುಃಖ ದುಮ್ಮಾನಗಳಿಗೆ ಮಿಡಿಯಬೇಕು.  ಪ್ರತಿಭೆಯ ಜೊತೆಗೆ ಕವಿಗೆ ಪೂರ್ವ ತಯಾರಿ ಅವಶ್ಯ. ಹೊಸತನವನ್ನು ಕಾಣುವ ಒಳನೋಟ, ಭಾಷಾ ಪ್ರೌಢಿಮೆ, ನಯಗಾರಿಕೆ, ಕವಿಗೆ ಅವಶ್ಯವಾಗಿವೆ. ಕವನ ಹುಟ್ಟುವುದಕ್ಕೆ ಇಂಥದೇ ಕಾರಣ ಸಂದರ್ಭಗಳು ಬೇಕಾಗಿಲ್ಲ ಅನುಭವದ ಮೂಸೆಯಿಂದ ಕಂಡುಂಡ ಸತ್ಯವನ್ನು ನೋವು ನಲಿವುಗಳನ್ನು, ಸುಖ ದುಃಖಗಳನ್ನು ಪ್ರೀತಿ, ಹತಾಶೆ ಹೀಗೆ ಎಲ್ಲವನ್ನು ಸಮಾಜಮುಖಿಗೊಳಿಸುವುದೇ ಕಾವ್ಯ.


ನರಸಿಂಗರಾವ ಹೇಮನೂರ

One thought on “ಕವಿ ಕಾವ್ಯ ಕುರಿತು-ನರಸಿಂಗರಾವ ಹೇಮನೂರ

Leave a Reply

Back To Top