ಕಾವ್ಯ ಸಂಗಾತಿ
ನೆಪಕ್ಕೆ ಹೃದಯ ದೂರಾಗುತ್ತವೆ
ಒಲವು
ಸಣ್ಣ ಪುಟ್ಟ ಕಾರಣಗಳಿಗೆ,
ಎತ್ತರೆತ್ತರದ ಗೋಡೆಗಳು
ತಲೆ ಎತ್ತುತ್ತವೆ,
ಹೃದಯಗಳ ನಡುವೆ.
ಅವಳು ಹಾಗೆ ಹೇಳಬಾರದಿತ್ತು,
ಇವನು, ಛೆ!.. ನನಗೇ
ಹೀಗೆ ಮಾಡಬಾರದಿತ್ತು.
ಕಾರಣವಲ್ಲದ ಕಾರಣಗಳು,
ನೆಪಗಳಲ್ಲದ ನೆಪಗಳು,
ಆಳೆತ್ತರಕ್ಕೆ ಬೆಳೆಯುತ್ತವೆ,
ಹೃದಯಗಳ ನಡುವೆ.
ಕರಗದ ಕಲ್ಲುಗಳ ಬಳಸಿ,
ಕಟ್ಟಿದ ಸಿಮೆಂಟು, ಇಟ್ಟಿಗೆ,ಮಣ್ಣು,
ಸರಳು, ಮರಗಳ ಮನೆಗಳು,
ಥಟ್ ಅಂತ ಕುಸ್ತಿ ಬೀಳುತ್ತವೆ.
ಸಣ್ಣದೊಂದು ಮಾತು
ಕತ್ತಿಯ ಮೊನಚಿನಂತೆ ತಿವಿಯುತ್ತದೆ.
ಆಗಸದೆತ್ತರದ ಗೋಡೆಗಳು
ದುತ್ತೆಂದು ಎದುರಾಗುತ್ತವೆ.
ಗಂಧದ ಸುವಾಸನೆ ಭರಿತ
ಕವಿತೆಯೊಂದನ್ನು ಹೊಸಕಿ ಹಾಕುವಾಗಲು,
ಕವಿತೆಯ ಜೇನ ಸವಿ
ನೆನಪಾಗದೆ ಹೋಗುವುದು ಏಕೋ?
ನೆನಪಿಗೆ ಬಾರದೆ ಹೋಗುವುದು ಏತಕ್ಕೋ?….
ಒಲವು