ಕಟ್ಟೆ ಎಂ ಎಸ್ ಕೃಷ್ಣಸ್ವಾಮಿಯವರ ಕೃತಿ ಚಿತ್ತಸಂಪಿಗೆಯ ಅವಲೋಕನ-ಸೌಮ್ಯ ಪ್ರಸಾದ್

ಪುಸ್ತಕ ಸಂಗಾತಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿಯವರ ಕೃತಿ ಚಿತ್ತಸಂಪಿಗೆಯ

ಅವಲೋಕನ-ಸೌಮ್ಯ ಪ್ರಸಾದ್

ಸಾಹಿತಿ ನಟ ಸಂಘಟಕ ಕಲಾವಿದರಾದ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು , ಅವರ ಚಿತ್ತ ಸಂಪಿಗೆ ಸುಂದರ ಕವನ ಸಂಕಲನ ಪುಸ್ತಕ ಓದಿದೆ , ಒಂದೊಂದು ಕವನವು ತುಂಬಾ ಅರ್ಥಗರ್ಭಿತವಾಗಿದೆ , ಕಡಿಮೆ ಪದದಲ್ಲಿ ನಾನಾರ್ಥ ತಿಳಿಸುವ ಪದಗಳ ಬಳಕೆ ಮಾಡಿದ್ದಾರೆ, ಕವಿಯ ಮನದಾಳದ ನುಡಿಯು ಅಷ್ಟೇ ಸ್ವಾರಸ್ಯಕರವಾಗಿದೆ , ಇದರಲ್ಲಿ ಒಟ್ಟು 79 ಕವನಗಳಿದೆ ಒಂದು ಕ್ಕಿಂತ ಒಂದು ಕವನವು ಸೊಗಸಾಗಿದೆ , ಇದು ಇವರ ನಾಲ್ಕನೇ ಕೃತಿಯಾಗಿದ್ದು ಮುಖ ಪುಟದಿಂದ ಹಿಡಿದು ಕಾವ್ಯ ಧಾರೆ ಲಹರಿಯಾಗಿ ಹರಿದಿದೆ , ಇದಕ್ಕೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು  ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ . ಜಿ ಟಿ ವೀರಪ್ಪ ಅವರು ಮುನ್ನುಡಿ ಬರೆದಿದ್ದಾರೆ , ಇವರು ಒಂದೊಂದು ಕವನವನ್ನು ಓದಿ ತುಂಬಾ ಆಳವಾಗಿ ವಿಮರ್ಶೆ ಮಾಡಿ ಬರೆದಿದ್ದಾರೆ , ಇವರು ಲೇಖಕರ ಕುರಿತಾಗಿ ಇವರು ಕಲಾವಿದರಾಗಿ ಸಾಹಿತಿಗಳಾಗಿ ಶ್ರೇಷ್ಠ ಸಂಘಟಕರಾಗಿ ಪ್ರಸಿದ್ಧರಾಗಿದ್ದಾರೆ , ಇಂಥ ಬಹುಮುಖ ಪ್ರತಿಭೆಯ ಶ್ರೀಯುತರು ಈಗಾಗಲೇ ಮನಸ್ಸು ನಕ್ಕಾಗ , ಮನಸು ಮಲ್ಲಿಗೆ ನವಿರು , ಹಾಗೂ ಮೀಮಾಂಸೆ ಎಂಬ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ , ಇದು ಇವರ ನಾಲ್ಕನೇ ಕೃತಿಯಾಗಿದೆ . ಇವರು ಉತ್ತಮ ಸಂಘಟಕರಾಗಿ  ‘ ಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ‘ ರಾಜ್ಯ ವೇದಿಕೆಯ ಸಂಸ್ಥಾಪಕರಾಗಿ ಹಲವು ಸಾಹಿತ್ಯ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಜನಮನ್ನಣೆಗೆ ಪಾತ್ರರಾಗಿದ್ದಾರೆ , ಎಂದು ತುಂಬಾ ಆತ್ಮೀಯವಾದ ಶ್ಲಾಘನೀಯ ನುಡಿಗಳಿಂದ ಮುನ್ನಡಿ ಬರೆದಿದ್ದಾರೆ .

” ಚಿತ್ತ ಸಂಪಿಗೆ ” ಕವನ ಸಂಕಲನ ಕವಿಗಳ ಲೋಕಾನುಭವ ಸಾಕ್ಷಿ ಪ್ರಜ್ಞೆಯಾಗಿದೆ . ಪ್ರಸ್ತುತ ಸಮಾಜ , ಪ್ರಕೃತಿ ,  ಕೌಟುಂಬಿಕ ಸಂಬಂಧಗಳು , ಲೋಕಮಾನ್ಯ ಗಣ್ಯರ ಕುರಿತಾಗಿ ಚಿತ್ರಣ , ಹೆಣ್ಣಿನ ಮಹತ್ವ ಮುಂತಾದ ವಸ್ತು ವೈವಿಧ್ಯತೆಗಳಿಂದ ಕೂಡಿದ ಉತ್ತಮ ಕೃತಿಯಾಗಿದೆ . ಪದ ಜೋಡಣೆಗಳಷ್ಟೇ ಕಾವ್ಯವಾಗಲಾರದು ಮನಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವಲ್ಲಿ ಅಕ್ಷರ ರೂಪ ಕೊಡುವಲ್ಲಿ ಕವಿ ಹೃದಯ ಜಾಗೃತವಾಗಿರಬೇಕು ಎಂದು ಹೇಳುವುದರ ಮೂಲಕ ಇವರನ್ನು ಪ್ರಶಂಸಿದ್ದಾರೆ .

ಪ್ರಕೃತಿಯ ಮಹತ್ವವನ್ನು ಕುರಿತು ‘ ಹಸಿರೆಲೆ ‘ ಕವನ ಮಹತ್ವದ್ದಾಗಿದೆ .
ಮನುಷ್ಯನ ಸ್ವಾರ್ಥಕ್ಕೆ ಮಿತಿಯಿಲ್ಲದೇ ಕಾಡನ್ನು ಕಡಿದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿರುವ ಕ್ರಿಯೆಯನ್ನು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ .
” ಆತ್ಮವೇ ಗಿಡ ಮರಗಳ ಪೋಷಿಸು
ದೇಹಕ್ಕೆ ಅರೋಗ್ಯ ಭಾಗ್ಯ ನೀಡುವುದು , ನೀ ರಕ್ಷಿಸಿದರೆ ಜೀವನಪೂರ್ತಿ ನಿನ್ನ ಕೈ ಹಿಡಿದು ಕಾಪಾಡುವುದು “
“ಹಸಿರ ಕೊಂದು ನೀನಾಗಬೇಡ ಮೃಗ ಪಕ್ಷಿಗಿಂತ ಕಡೆ  “
ಎಂಬ ಸಾಲುಗಳು ಪ್ರಸ್ತುತ ಪ್ರಕೃತಿ ರಕ್ಷಣೆಯ ಅವಶ್ಯಕತೆಯ ಅರಿವು ಮೂಡಿಸುತ್ತದೆ .
ಇಂದಿನ ಸಮಾಜದಲ್ಲಿ ಅಕ್ಷರಸ್ಥ ಮೂಢರು ಅವಿದ್ಯಾವಂತರಿಗಿಂತ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಸಿದ್ದಾರೆ . ಅನಕ್ಷರಸ್ಥ ಸಹೃದಯರಿಗಿಂತ ಅಕ್ಷರಸ್ಥ ಮೂಢರಿಂದಲೇ ಸಮಾಜಕ್ಕೆ ಹೆಚ್ಚು ಅಪಾಯವಿದೆ . ಅಕ್ಷರಸ್ಥರೆಲ್ಲ ಜ್ಞಾನಿಗಳಲ್ಲಾ , ಹೃದಯವಂಥರಲ್ಲಾ ಎಂಬುದು ಇಂದಿನ ಅನುಭವದಿಂದ ವೇದ್ಯವಾಗಿದೆ .
” ವಿದ್ಯೆಗೆ ಸದ್ಗುಣ ವಿನಯವೇ ಭೂಷಣ ” ಮೇಲುಡುಪು ಧರಿಸಿದರೆ ಸಾಲದು ಚಿನ್ನ , ಒಳ ಧಿರಿಸ ಒಳಗಣ್ಣ ತೆರೆದೆಮ್ಮೆ ನೋಡು ಶಿವನ ”  ಎಂಬ ಸಾಲುಗಳು ವಿದ್ಯಾವಂತರ ಜವಾಬ್ದಾರಿ , ಸಮಾಜ ಪರ ಕಾಳಜಿಗಳ ಮಹತ್ವದ ಅರಿವನ್ನು ಅರ್ಥೈಸುವಂತಹದಾಗಿದೆ .
ಕಾಣದ ದೇವರುಗಳಿಗೆ ಕೈ ಮುಗಿದು ಮೂಢರಾಗಿರುವ ಜನಕೆ ಕಾಣುವ ದೇವರಾದ ಮಾತ  –  ಪಿತೃಗಳ ಕಾಣಲಿಲ್ಲವೇಕೆ ಎಂಬ ಪ್ರಶ್ನೆಯೊಂದಿಗೆ , ಅವರ ಹಿರಿಮೆಯನ್ನು ಇವರ ಕವನದಲ್ಲಿ ಹೃದಯOಗಮವಾಗಿ ಚಿತ್ರಿಸಿದ್ದಾರೆ .
ಮಾತೃದೇವೋಭವ ಪಿತೃದೇವೋಭವ , ಆಚಾರ್ಯ ದೇವೋಭವ ಎಂದು ಹೇಳಿದ್ದಾರೆ .
ಆದರೆ , ಕಣ್ಣ ಮುಂದಿರುವ ಈ ದೇವತೆಗಳನ್ನು ಕಡೆಗಣಿಸಿ , ಕಾಣದ ಕಲ್ಲುದೇವರುಗಳಿಗೆ ಕರ ಮುಗಿಯುವ ಮೂರ್ಖ ಜನರೇ ಸಮಾಜದಲ್ಲಿ ಅಧಿಕವಾಗಿದ್ದಾರೆ .

ಅಮ್ಮ ಅಂದರೆ ನನ್ನ ದೈವ ಅವಳಿಲ್ಲದೆ ಕ್ಷಣ ನಾನಿಲ್ಲ – ಜೀವನ ಪೂರ್ಣವಾಗದು , ಅವಳು ಉಂಡಳೋ ಇಲ್ಲವೋ ನಾವು ಕಾಣೋ ,  ಒಂದು ಹೆಣ್ಣು ರಕ್ಷಣೆಯ ಆತ್ಮಶಕ್ತಿಯಾಗಿ ಛಲದಿ ಪೋಷಿಸುವಳು ತಾನು ಹಸಿದು ನಮ್ಮನ್ನೆಲ್ಲ ಸಲುಹುವಳು ದೇವತೆಯಾಗಿ ಕೂಸಿನ ಮೋರೆ ಕಂಡು ನೋವು ಕಷ್ಟ ಹಸಿವನ್ನೇ ಮರೆವಳು ಅಮ್ಮ
ಪತಿಯ ಮುಖ ಕಂಡು ಕೃತಜ್ಞತಾ ಭಾವದಿ ಮಲ್ಲಿಗೆ ಸಂಪಿಗೆ ಸುಮದಂತೆ ನಕ್ಕವಳು ನನ್ನಮ್ಮ –  ಎಂಬ ಅಂದದ ಸಾಲುಗಳು ತಾಯಿಗೆ ಕವಿಯು ಕೊಟ್ಟಿರುವ ಸ್ಥಾನದ ಹಿರಿಮೆ ತಿಳಿಸುತ್ತದೆ .
ಪಿತೃ ದೇವೋಭವ ಎಂದು ಕರೆಯುತ್ತೇವೆ ಪ್ರತಿ ಕುಟುಂಬದಲ್ಲಿಯೂ ತಂದೆಯೇ ಅದರ ಪೋಷಕ , ರಕ್ಷಕರಾಗಿರುತ್ತಾರೆ . ಅಂಥ ತಂದೆಯನ್ನು ಕುರಿತು   ” ಅಪ್ಪ ” ಎಂಬ ಕವನದಲ್ಲಿ ಪಿತೃವಿನ ಪ್ರಾಮುಖ್ಯತೆಯನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ .
 ”  ಅನುಭವದಲ್ಲಿ ಗುಡಿಗೆ ಹಿರಿಯನು ಪಾಪಪುಣ್ಯದ ಅರಿವಿರುವ ಜೀವ ನಮಗಾಗಿ ನೋವುಂಡು ಕೃಶವಾದ ದೇಹ  ಕುಟುಂಬದ ಶ್ರೇಯಸ್ಸಿಗೆ ನೀನಾದೆ ದೈವ.., ಅಮ್ಮನ ಗುಡಿಯ ದೇವತೆಯ ಮಾಡಿ ಮನೆಗೆ ನೀನಾದೆ ಕಾವಲುಗಾರ ಅಪ್ಪ , ಸಲುಹಿದ ಅಮ್ಮನ ಕಡಲ ಮುತ್ತು ಮಾಡಿ ಅಮ್ಮನ ಎಂಬ ಮುತ್ತ ಕಾಯುವ ಚಿಪ್ಪು ನೀನಾದೆ ಅಪ್ಪ ” ಎಂಬ ಮಾತುಗಳು ತಂದೆಯ ಹಿರಿಮೆ  – ಗರಿಮೆಯನ್ನು ಸ್ಮರಿಸುವ ಶಬ್ದಗಳಾಗಿದೆ .

ಆಚಾರ್ಯ ದೇವೋಭವ ಎಂಬಂತೆ ತಮ್ಮ ವಿದ್ಯೆ ಕಲಿಸಿದ ಪ್ರಾರ್ಥಮಿಕ ಶಾಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ  ಅವರ ಗುರುಗಳಾದ ಕೃಷ್ಣಶೆಟ್ಟರನ್ನು ಸ್ಮರಿಸಿದ್ದಾರೆ . ಇಂಥ ಶಿಷ್ಯ ವಾತ್ಸಲ್ಯ ಇಂದು ಮರೆಯಾಗುತ್ತಿರುವುದು ನಾಡಿನ ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ  .
ಮಹಾ ಕವಿ ಕುವೆಂಪುರವರು ರೈತನನ್ನು   ‘ ನೇಗಿಲ ಯೋಗಿ ‘ ಎಂದು ಕರೆದಿದ್ದಾರೆ .
ಜಗತ್ತಿನ ಅನ್ನದಾತ ರೈತ ,  ಆದರೆ , ಅಂಥ ರೈತನನ್ನೇ ಮರೆಯುವ ಆಳುವ ವರ್ಗ, ಅವನ ಬದುಕನ್ನೇ ಬರಡು ಮಾಡಿದೆ  ,  ಅನ್ನದಾತನನ್ನು ಕುರಿತಾಗಿ ರಚಿಸಿರುವ ಈ ಕವನವು ಶ್ರೇಷ್ಠ ಕವನವಾಗಿದೆ  .
”  ಈ ಸುಂದರ ಭೂಮಿಯ ಮಡಿಲಿನಲಿ ರೈತನ ದುಡಿಯುವ ಕರದಿಂದ ತೆನೆಯಾಗಿತ್ತು ,  ಬೆವರು ಹನಿ ಜೀವನಾಡಿ ನೀರಾಗಿ ಹರಿದಾಗ ಕಬ್ಬು ಭತ್ತ ರಾಗಿ ದವಸ ಧಾನ್ಯ ಫಸಲಾಗಿತ್ತು , ಉಳುವ ಅನ್ನದಾತನೇ ಈ ಲೋಕಕ್ಕೆ ಬೇಕಾದ ನಿಜವಾದ ಆಪ್ತ ಗೆಳೆಯ , ಅವನ ಕಡೆಗಣಿಸಿ ನಡೆದರೆ ಉಳಿಗಾಲವುಂಟೆ ? “
 ” ಈ ಸಸ್ಯ ಶ್ಯಾಮಲೆಯ ನೆಲಕೆ ಜಗದೊಡೆಯ  ” ರೈತನನ್ನು ಜಗದೊಡೆಯ ಎಂದು ಕವಿಯು ಗೌರವಿಸಿದ್ದಾರೆ .
ಜಗತ್ತಿನ ಪ್ರಚಲಿತ ಬಹುದೊಡ್ಡ ಸಮಸ್ಯೆಯಾಗಿ ಕರೋನ ವೈರಣು ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು , ಇಂಥ ಮಹಾಮಾರಿ ಜಗದ ಜನರನ್ನೇ ಹೇಗೆ ಅನಾಥರನ್ನಾಗಿಸಿದೆ ಎಂಬುದನ್ನು  ” ಅನಾಥವಾಗಿಸಿ ”  ಎಂಬ ಕವನದಲ್ಲಿ ಹೃದಯOಗಮವಾಗಿ ಚಿತ್ರಿಸಿದ್ದಾರೆ .
” ಕರೋನ ಬಂದು ಕಾಯ್ದಿರಿಸಿದ ಅಂತರ ಕಾಯಗಳ ನಡುವೆ ಹಾಕಿದೆ ಕಡಿವಾಣ , ಒಬ್ಬರ ಮೋರೆ ಮೊತ್ತೊಬ್ಬರು ನೋಡದಂತೆ ಸ್ನೇಹ ಅನುರಾಗ ಬಾಂಧವ್ಯವ ದೂರವಾಗಿಸಿದೆ ರೋಗ ಕಾಣಿಸಿಕೊಂಡ ತಕ್ಷಣ ಕಠಿಣವಾಗಿಸಿ ಮಮತೆಯ ಗೆಳೆತನ ಬಾಂಧವ್ಯಗಳ ದೂರವಾಗಿಸಿದೆ . “
ಓ ದೇವ , ಸಾವು ನೋವಿನಿಂದ ಹೃದಯ ಛಿದ್ರವಾಗಿಸಿ ಅನಾಥವಾಗಿಸಿ ಮುಟ್ಟಲಾಗದೆ ಶವವಾಗಿಸಿದೆ  ”  ಈ ಮಾತುಗಳಿಂದ ಪ್ರಚಲಿತ ಸಮಾಜದ ವಸ್ತು ಸ್ಥಿತಿಯ ಅನಾವರಣವಾಗಿಸಿದೆ .  ಇಡೀ ಜಗತ್ತು ಇಂಥ ಕೂಪದಲ್ಲಿ ಬಿದ್ದಿದೆ .
ನಾಡಿಗೆ ಕೊಡುಗೆ ನೀಡಿರುವ ಗಣ್ಯ ಮಹೋದಯರಾದ ಮಹಾಕವಿ ಕುವೆಂಪು , ಬಾಬಾ ಸಾಹೇಬ್ ಅಂಬೇಡ್ಕರ್ , ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು , ನಡೆದಾಡುವ ದೇವರೆಂದೇ ಪ್ರಸಿದ್ದಿ ಪಡೆದಿದ್ದ ಪೂಜ್ಯ ಶಿವಕುಮಾರ ಸ್ವಾಮೀಜಿ , ನಾದಬ್ರಹ್ಮ ಎಸ್ ಪಿ ಬಾಲಸುಬ್ರಮಣ್ಯ , ದಲಿತ ಕವಿಗಳಾದ ಸಿದ್ದಲಿಂಗಯ್ಯ , ಕಲಾವಿದೆ ಜಯಂತಿ ಮುಂತಾದ ಮಹನೀಯರ ಕುರಿತಾಗಿ ಹೃದಯಸ್ಪರ್ಶಿಯಾದ ಕವನ ರಚಿಸಿದ್ದಾರೆ . ಈ ದೇಶದ ಮಹಾನ್ ನೇತಾರರಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ಎಂದು ರೈತ ಮತ್ತು ಸೈನಿಕರನ್ನು ಗೌರವಿಸಿದ್ದರೆ .
ಇವರಿಬ್ಬರೂ ಈ ನಾಡಿನ ಎರಡು ನೇತ್ರಗಳಿದ್ದಂತೆ  ಅಂಥ ದೇಶ ಕಾಯುವ ಯೋಧನನ್ನು ಕುರಿತಾಗಿ  ” ಸೈನಿಕ  ”  ಎಂಬ ಉತ್ತಮ ಕವನವನ್ನು ರಚಿಸಿದ್ದಾರೆ , ಈ ಮಹನೀಯರನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೇ ಸರಿ .
” ದೇಶ ಕಾಯುವ ಸೈನಿಕ ಸೈನಿಕ
ನಮ್ಮ ದೇಶದ ಗಡಿ ರಕ್ಷಸಿಸುವ ರಕ್ಷಕ ಜಾತಿ ಭೇದ ಮರೆತು  ಭೇದಿಸುವ ನಾವಿಕ
ವಿರೋಧಿಗಳ ಗುಂಡಿಗೆ ಎದೆ ಒಡ್ದುವ ಜಗದೇಕ
ದೇಶದ ರಕ್ಷಣೆಯೊಂದೇ ಕಾಯಕ ಪ್ರೇರಕ
ನೀನೇ ನಮ್ಮ ನಾಡಿನ ಪ್ರಭಾವಿ ದಂಡನಾಯಕ . “
ಎಂಬ ನುಡಿಯು ದೇಶಕ್ಕೆ ಸೈನಿಕರ ಮಹತ್ವದ ಹಿರಿಮೆಯನ್ನು ತಿಳಿಸುತ್ತದೆ .
ಇದೆಲ್ಲಾ ಜಾಗೃತ ಲೇಖಕರೊಬ್ಬರ ಸಾಕ್ಷಿ ಪ್ರಜ್ಞೆಯಂತಿದೆ .
ಒಟ್ಟಾರೆ ಶ್ರೀಯುತ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರು ವಸ್ತು ವೈವಿದ್ಯಗಳಿಂದ ತಮ್ಮ ಲೋಕಾನುಭವವನ್ನು ನುಡಿಗಟ್ಟುಗಳಲ್ಲಿ ಸೆರೆ ಹಿಡಿದಿದ್ದಾರೆ .  ಅವರ ಕಾವ್ಯ ಪ್ರವಾಹ ಹೀಗೆ ಮುಂದುವರಿಯಲಿ ,  ಕನ್ನಡ ಸಾಹಿತ್ಯ ಗಣ್ಯರಲ್ಲಿ ಒಬ್ಬರಾಗಲಿ ಎಂದು ಹಾರೈಸಿದ್ದಾರೆ . ಮಂಡ್ಯ ಜೆಲ್ಲೆಯ ಹೊಸ ತಲೆಮಾರಿನ ಕವಿಗಳಲ್ಲಿ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರು ಪ್ರಮುಖರಾಗಿದ್ದಾರೆ ಎಂಬ ಸುಂದರ ಪದಪುಂಜಗಳಿಂದ ಹರಸಿ ಖುಷಿಯಾಗಿ ಮುನ್ನುಡಿ ಬರೆದಿದ್ದಾರೆ .
ಹಾಗೇ ಕವಿಗಳ ಮನದಾಳದ ಮಾತಿನಲ್ಲಿ  ,  ಸಮಾಜವ ನೋಡಿದ ದೃಷ್ಟಿ ಅನುಭವಿಸಿದ ಸತ್ಯ ಘಟನೆಗಳು ಕಾವ್ಯದಿ ಅಂಕುರಿಸಿದೆ , ಪ್ರಕೃತಿ ವಾಸ್ತವಿಕ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ , ಪ್ರೋತ್ಸಾಹಿಸಿದ ಸರ್ವರಿಗೂ ಧನ್ಯವಾದವನ್ನು ತಿಳಿಸಿದ್ದಾರೆ .
ಈ ಕೃತಿಗೆ ಶರಣ ಸಾಹಿತ್ಯ ಪರಿಷತ್ತನ ಅಧ್ಯಕ್ಷರಾದ ಎಂ ಎಸ್ ಶಿವಪ್ರಕಾಶ್ ಅವರು ಕವಿ ಕಾವ್ಯ ಕುರಿತಾಗಿ ಬೆನ್ನುಡಿಯನ್ನು ಬರೆದಿದ್ದಾರೆ .
ಇದರೊಳಗೆ ಒಂದೊಂದು ಕವನವು ಒಬ್ಬಟ್ಟಿನ ರುಚಿಯಷ್ಟು ಜೇನಿನ ಹನಿಯ ಸವಿದಷ್ಟು ಗೆಲವುವಾಗಿದೆ ಮೊದಲ ಕವನ ಹಸಿರೆಲೆ ಯಿಂದ ಶಿಖರವೇರಿ ಬಂದಷ್ಟು ಖುಷಿ ತಂದು ನಾಂದಿಯಾಗಿ  ನಮ್ಮ ಸಂಸಾರ ಆನಂದ ಸಾಗರದಷ್ಟು  , ಅಮ್ಮ ನೋಡಮ್ಮ ಎಂಬ ಗೀತೆಯವರೆಗೂ ಮನವ ಒಂದಡೆ ಹಿಡಿದಿಟ್ಟು ಓದುವಷ್ಟು ಮುದನೀಡಿತ್ತು .
ಎಲ್ಲರು ಕೊಂಡು ಓದುವಷ್ಟು ಒಳ್ಳೆಯ ಸದಾಭಿರುಚಿಯುಳ್ಳ ಅರ್ಥಗರ್ಭಿತವಾದ ಕವನದ ಸಾಲುಗಳಿಂದ ಕೂಡಿದ  ” ಚಿತ್ತ ಸಂಪಿಗೆ  ” ಕವನ ಸಂಕಲನವಾಗಿದೆ .
ಕವಿಗಳ ಲೇಖನಿಯಿಂದ ಇನ್ನಷ್ಟು ಕವನ ಸಂಕಲನಗಳು ಸಾರಸ್ವತ ಲೋಕಕ್ಕೆ ಲಭಿಸುವಂತಾಗಲಿ ಎಂದು ಶುಭ ಆಶಿಸುವೆ 


ಸೌಮ್ಯ ಪ್ರಸಾದ್

One thought on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿಯವರ ಕೃತಿ ಚಿತ್ತಸಂಪಿಗೆಯ ಅವಲೋಕನ-ಸೌಮ್ಯ ಪ್ರಸಾದ್

  1. ಸುಂದರವಾಗಿ ಮೂಡಿ ಬಂದಿದೆ.., ಧನ್ಯವಾದಗಳು ಸಾರ್

Leave a Reply

Back To Top