ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಹೇಮಗಂಗಾ ರವರ ಗಜಲ್ ಗಳಲ್ಲಿ
ಪ್ರೀತಿಯ ಅಂತಃಕರಣ
ಎಲ್ಲರಿಗೂ ಮಲ್ಲಿಯ ಮಲ್ಲಿಗೆಯ ನಮಸ್ಕಾರಗಳು..
ಹೇಗಿದ್ದೀರಿ ತಾವೆಲ್ಲರು, ಚೆನ್ನಾಗಿದ್ದೀರಲ್ಲವೇ! ಪ್ರತಿ ವಾರದಂತೆ ಈ ವಾರವೂ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಆ ಹೆಜ್ಜೆ ಗುರುತುಗಳೊಂದಿಗೆ ಗಜಲ್ ಜನ್ನತ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ.. ಬನ್ನಿ, ಮತ್ತೇಕೆ ಮೀನಾಮೇಷ ಎಣಿಸುವುದು..
“ರೂಢಿಯಂತೆ ನೀಡಿದೆ, ಭಾಷೆ ನೀನು
ರೂಢಿಯಂತೆ ತೋರಿದೆ ನಾನು ವಿಶ್ವಾಸವನು”
-ಗುಲ್ಜಾರ್
ಮನುಷ್ಯ ಇಂದು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಊರ್ಧ್ವಮುಖವಾಗಿ ಬೆಳೆದಿದ್ದಾನೆ, ಇನ್ನೂ ಬೆಳೆಯುತಿದ್ದಾನೆ. ಆದರೆ ದುರಂತವೆಂದರೆ ತಾನು ಬದುಕುವುದನ್ನೇ ಮರೆತಿದ್ದಾನೆ, ಮರೆಯುತ್ತಲೇ ಇದ್ದಾನೆ. ಗಾಳಿಯ ಬದಲಿಗೆ ಒತ್ತಡವನ್ನು ಉಸಿರಾಡುತ್ತ, ನೆಮ್ಮದಿಗೆ ಗೋರಿ ಕಟ್ಟುತಿದ್ದಾನೆ. ಈ ಒತ್ತಡವು ಸಿದ್ಧತೆಯ ಕೊರತೆಯಿಂದ ಉಂಟಾಗುತ್ತದೆ ಎಂಬುದನ್ನೂ ಮರೆಯುತಿದ್ದಾನೆ! ಒತ್ತಡವು ಅಸ್ತಿತ್ವದಲ್ಲೇ ಇಲ್ಲ. ಹಲವು ಬಾರಿ ನಾವೇ ಅದನ್ನು ನಮಗಾಗಿ ರಚಿಸುತ್ತೇವೆ. “ಒತ್ತಡಕ್ಕೆ ಹೆದರಬೇಡಿ. ಒತ್ತಡವು ಕಲ್ಲಿದ್ದಲಿನ ಉಂಡೆಯನ್ನು ವಜ್ರವನ್ನಾಗಿ ಪರಿವರ್ತಿಸುತ್ತದೆ” ಎಂಬ ಅಮೇರಿಕನ್ ಲೇಖಕ ನಿಕಿ ಗುಂಬೆಲ್ ರವರ ಮಾತು ಇಲ್ಲಿ ಉಲ್ಲೇಖನೀಯ. ಅಸಹನೆಯು ನಮಗೆ ತಾಳ್ಮೆಯ ಪಾಠಗಳನ್ನು ಉತ್ತಮವಾಗಿ ಕಲಿಸುತ್ತದೆ. ಮನುಷ್ಯ ಒತ್ತಡದಿಂದ ಹೊರಬರಬೇಕಾದರೆ ಎಲ್ಲಾ ಸಮಯದಲ್ಲೂ ಶಾಂತತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಯಾವತ್ತೂ ವಾದದಿಂದ ವಾದವನ್ನು ಗೆಲ್ಲಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಶಾಂತವಾಗಿರುವುದು ಯಶಸ್ವಿಗೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಹೃದಯ ಸೆಳೆಯುವದನ್ನು ಅನುಸರಿಸಬೇಕು, ಕಣ್ಣುಗಳು ಸೆಳೆಯುವುದನ್ನಲ್ಲ ಎನ್ನಲಾಗುತ್ತದೆ. ಇದನ್ನು ನಮಗೆ ಸಾಹಿತ್ಯ ಕಲಿಸಿಕೊಡುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಾವ್ಯ ಇದನ್ನು ತುಂಬಾ ಸುಲಲಿತವಾಗಿ ಮಾಡುತ್ತ ಬಂದಿದೆ. ಇಂಥಹ ಕಾವ್ಯದ ಸತ್ವ ಅಡಗಿರುವುದು ಪುಸ್ತಕದ ಪುಟಗಳಲ್ಲಿ ಅಲ್ಲ, ಬದಲಿಗೆ ಜನಸಾಮಾನ್ಯರ ನಾಲಿಗೆಯ ತುದಿಯಲ್ಲಿ! ಅರಬ್ ನ ಮರುಭೂಮಿಯಲ್ಲಿ ಚಿಗುರೊಡೆದ ಗಜಲ್ ಪರ್ಷಿಯನ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಭಾರತೀಯ ಮಣ್ಣಿನಲ್ಲಿ ಹುಲುಸಾಗಿ ಬೆಳೆದಿದೆ, ಬೆಳೆಯುತ್ತ ಕರುನಾಡನ್ನು ಪ್ರವೇಶಿಸಿದೆ. ಕನ್ನಡ ಸಾರಸ್ವತ ಲೋಕವು ಗಜಲ್ ನ ಸುವರ್ಣ ಯುಗಕ್ಕೆ ಮುನ್ನುಡಿ ಬರೆಯುತ್ತಿದೆ. ಇಂದು ಅಗಣಿತ ಎನ್ನುವಂತೆ ಅಸಂಖ್ಯಾತ ಬರಹಗಾರರು ಗಜಲ್ ರಚನೆಯಲ್ಲಿ ತೊಡಗಿದ್ದಾರೆ. ಅವರಲ್ಲಿ ಹಿರಿಯರಾದ ಶ್ರೀಮತಿ ಎ. ಹೇಮಗಂಗಾ ಅವರೂ ಒಬ್ಬರು.
ಶ್ರೀ. ಎನ್. ಅಶ್ವತ್ಥನಾರಾಯಣ ಹಾಗೂ ಶ್ರೀಮತಿ ಲಕ್ಷ್ಮೀ ದಂಪತಿಯ ಪುತ್ರಿಯಾಗಿ ಎ. ಹೇಮಗಂಗಾ ರವರು ೧೯೬೧ ರ ಜುಲೈ ೦೧ ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಪ್ರತಿಭಾವಂತರಾದ ಇವರು . ಶಾಲಾ ದಿನಗಳಲ್ಲಿ ಒಳ್ಳೆಯ ಬ್ಯಾಡ್ಮಿಂಟನ್ ಹಾಗೂ ಖೋಖೋ ಆಟಗಾರರಾಗಿದ್ದರು . ಮೈಸೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಎಂ.ಎಸ್ಸಿ.ಯಲ್ಲಿ (೧೯೮೩) ಮೂರನೇ ಸ್ಥಾನ ಗಳಿಸಿದ್ದಾರೆ. ಅಧ್ಯಾಪಕಿಯಾಗಿ ದುಡಿದ ಅನುಭವವೂ ಇವರಿಗಿದೆ. ಸಿತಾರ್ ವಾದಕರಾಗಿ ರಾಜ್ಯ ಮಟ್ಟದ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಕ್ರಮವಾಗಿ ತೃತೀಯ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸಿರುವ ಇವರು ಮೈಸೂರು ಆಕಾಶವಾಣಿಯಲ್ಲಿ ಹವ್ಯಾಸಿ ಕಲಾವಿದೆಯಾಗಿದ್ದಾರೆ. ಉತ್ತಮ ಸಂಘಟಕರಾಗಿರುವ ಇವರು ಈಗಾಗಲೇ “ಸಿರಿಗನ್ನಡ ವೇದಿಕೆ”ಯ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಮೈಸೂರಿನ ಜಿಲ್ಲಾಧ್ಯಕ್ಷರಾಗಿ ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಜ್ಯಾಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. “ಹೇಮಗಂಗಾ ಕಾವ್ಯ ಬಳಗ”ದ ಗೌರವ ಅಧ್ಯಕ್ಷರಾಗಿ ನೂರಾರು ಕವಿಗಳನ್ನು ಬೆಳಕಿಗೆ ತಂದಿದ್ದಾರೆ. ಅನೇಕ ಸಂಘ ಸಂಸ್ಥೆಗಳ ಪೋಷಕರಾಗಿಯೂ ದುಡಿದಿದ್ದಾರೆ. ಪ್ರಸ್ತುತ ‘ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ’ದ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಹೇಮಗಂಗಾರವರು ಕಾವ್ಯ, ಭಾವಗೀತೆ, ವಚನ, ಮುಕ್ತಕ, ವಿಮರ್ಶೆ, ಹೈಕು ಹಾಗೂ ಗಜಲ್ ಕಾವ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇಲ್ಲಿಯವರೆಗೆ “ಮುಕ್ತ ವಚನಾಮೃತ” ಎಂಬ ನೂರು ವಚನಗಳ ಸಂಗ್ರಹ, “ಹೃದಯಗಾನ” ಎಂಬ ಭಾವಗೀತೆಗಳ ಸಂಕಲನ, “ಮತಾಪು” ಎಂಬ ಹೈಕು ಸಂಕಲನ ಹಾಗೂ “ಬರಬಾರದೇ ನೀನು..?” ಎಂಬ ಗಜಲ್ ಸಂಕಲನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.
ಮೈಸೂರು ದಸರಾ ಪ್ರಾದೇಶಿಕ ಕವಿಗೋಷ್ಠಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವೂ ಸೇರಿದಂತೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕವನ ಹಾಗೂ ಗಜಲ್‌ಗಳನ್ನು ವಾಚಿಸಿ ಸಹೃದಯಿಗಳ ಮನವನ್ನು ಗೆದ್ದಿದ್ದಾರೆ. ಇದರೊಂದಿಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಉತ್ತಮ ನಿರೂಪಕರಾಗಿರುವ ಇವರು ಬೆಳಗ್ಗೆ ೯ ರಿಂದ ಸಂಜೆ ೧೦ ಗಂಟೆಯವರೆಗೆ ಏಕವ್ಯಕ್ತಿ ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಇವರ ಹೆಗ್ಗಳಿಕೆಯಾಗಿದೆ. ಇವರ ಸಾಹಿತ್ಯದ ಹಲವು ಪ್ರಕಾರಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದಾ ಸಮಾಜ ಸೇವೆ, ಸಾಹಿತ್ಯ, ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇವರಿಗೆ ವಿವಿಧ ಸಂಘ ಸಂಸ್ಥೆಗಳು ಸನ್ಮಾನ, ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಡಾ. ಡಿ.ಎಲ್. ವಿಜಯಕುಮಾರಿ ಸಾಧನಾ ಪ್ರಶಸ್ತಿ, ಸಾಹಿತ್ಯ ಸಿಂಧು ಪ್ರಶಸ್ತಿ.. ಮುಂತಾದವುಗಳನ್ನು ಹೆಸರಿಸಬಹುದು.
ನಮ್ಮನ್ನು ನಾವು ಇದಿರುಗೊಂಡು, ಬದುಕಿನ ಸಾರ್ಥಕತೆಯನ್ನು ಸಾಧಿಸುವ ರಹದಾರಿಯೇ ಸೂಫಿಸಂ. ಇದರ ಸೆಲೆಯಲ್ಲಿ ‘ಫಕೀರ’ ಎನ್ನುವ ಶಬ್ದಕ್ಕೆ ಬಹುದೊಡ್ಡ ಅರ್ಥವಿದೆ. ಸಂತ, ಭೋಗವನ್ನು ಮೀರಿದವನು, ನಿರ್ಮೋಹಿ, ಎಲ್ಲವನ್ನೂ ಹೊಂದಿದವನು, ಸಂತೃಪ್ತ.. ಎಂಬೆಲ್ಲ ಅರ್ಥವನ್ನು ಕಾಣುತ್ತೇವೆ. ಈ ನೆಲೆಯಲ್ಲಿ ಗಮನಿಸಿದಾಗ ಒಬ್ಬ ವ್ಯಕ್ತಿ ಫಕೀರನಾಗುವುದು ಅಷ್ಟು ಸುಲಭವಲ್ಲ. ಆದರೆ, ಆದರೆ.. ಓರ್ವ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಾಯಭಾರಿಯ ಹೆಜ್ಜೆ ಆ ಮಾರ್ಗದಲ್ಲಿಯೇ ಸಾಗುತ್ತಿರುತ್ತದೆ. ‘ಗಜಲ್’ ಎನ್ನುವ ಕಾವ್ಯ ಪ್ರಕಾರವು ಹೃದಯದ ಬಡಿತವನ್ನು ಆಲಿಸುವ ಪ್ರೇಮಿಯಂತೆ, ಚಿರಜವ್ವನಿಗ! ಪ್ರೀತಿಯ ಹೊರತು ಇಲ್ಲಿ ಏನೂ ಇಲ್ಲ, ಎಲ್ಲವೂ ಪ್ರೀತಿಯೇ. ಈ ಅನುಪಮವಾದ ಪ್ರೀತಿಯನ್ನು ಹಾಸಿಕೊಂಡು, ಹೊದ್ದುಕೊಂಡು; ಅದನ್ನೇ ಉಸಿರಾಡುತ್ತಿರುವ ಪ್ರೀತಿಯ ಅನ್ವರ್ಥಕರೂಪವೇ ಗಜಲ್. ಮನುಕುಲದ ವಿವಿಧ ಆಯಾಮಗಳಿಗೂ ಪ್ರೀತಿಯ ಸಿಂಚನ ಮಾಡಿಸುವ ಮೋಡಿ ಈ ಗಜಲ್ ಗೆ ಇದೆ. ಶಾಯರಾ ಶ್ರೀಮತಿ ಎ. ಹೇಮಗಂಗಾ ರವರ ‘ಬರಬಾರದೇ ನೀನು?’ ಗಜಲ್ ಸಂಕಲನವನ್ನು ಆಸ್ವಾದಿಸಾಗ ಓದುಗರ ಸ್ಮೃತಿ ಪಟಲದ ಮೇಲೆ ಪ್ರೇಮದ ಕಾಮನಬಿಲ್ಲು ಚಿಗುರುತ್ತದೆ. ಇಲ್ಲಿ ಪ್ರೀತಿ-ಪ್ರೇಮ-ವಿರಹದ ಹೆಜ್ಜೆ ಗುರುತುಗಳೊಂದಿಗೆ ಸ್ತ್ರೀ ಸಂವೇದನೆ, ಸಾಮಾಜಿಕ ಸಂವೇದನೆ, ಪರಿಸರ ಸಂವೇದನೆ, ಮೌಲ್ಯಗಳ ಹುಡುಕಾಟ, ರಾಷ್ಟ್ರಪ್ರೇಮದ ರಿಂಗಣ, ಬರಹದ ತುಡಿತ, ವೈಚಾರಿಕತೆಯ ತೊರೆಗಳು, ವಾಸ್ತವದ ಅರಳುಮಲ್ಲಿಗೆ… ಎಲ್ಲವೂ ಇಲ್ಲಿ ಮುಪ್ಪರಿಗೊಂಡು ಸಹೃದಯ ಓದುಗರ ಮನಕ್ಕೆ ಮುದ ನೀಡುವಂತಿವೆ.
“ನೀನಿತ್ತ ಭರವಸೆಯ ಬೆಳಕ ಕಿರಣಗಳೇ ಬಾಳ ಹಾದಿ ಬೆಳಗುತಿವೆ ಬರಬಾರದೇ ನೀನು?
ನಿನ್ನೊಲವ ಪುಳಕಗಳೇ ‘ಹೇಮ’ಳಲ್ಲಿ ಜೀವಂತಿಕೆ ತುಂಬುತಿವೆ ಬರಬಾರದೇ ನೀನು?”
ಈ ಮೇಲಿನ ಷೇರ್ ನಲ್ಲಿ ಬಳಕೆಯಾಗಿರುವ ‘ಬರಬಾರದೇ ನೀನು?’ ಎನ್ನುವ ರದೀಫ್ ತುಂಬಾ ಧ್ವನಿಪೂರ್ಣವಾಗಿದೆ. ಕಳೆದುಕೊಂಡ ಮನವು ಪ್ರತಿ ಕ್ಷಣ ಹಲುಬುವ ಸ್ಥಿತಿ ಇಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ಈ ಷೇರ್ ನಲ್ಲಿ ‘ಯಾತನೆ’ ಜೀವಂತಿಕೆಯ ರೂಪವನ್ನು ಪಡೆದಿದ್ದು ಹೃದಯವಂತರೊಂದಿಗೆ ಸಂವಾದಕ್ಕೆ ಇಳಿಯುವಂತೆ ಭಾಸವಾಗುತ್ತದೆ. ಪ್ರೀತಿಸುವ ವ್ಯಕ್ತಿ ಅಗಲಿದಾಗ ಪ್ರೇಮಿಯ ಮನಸು ಶೂನ್ಯಾವಸ್ಥೆ ತಲುಪುತ್ತದೆ ಎಂಬುದನ್ನು ಗಜಲ್ ಗೋ ಎ. ಹೇಮಗಂಗಾ ರವರು ಮನ ಮಿಡಿಯುವಂತೆ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
“ನಡುರಾತ್ರಿ ಎದ್ದು ಹೋಗುವ ಮುನ್ನ ಒಮ್ಮೆ ಹಿಂತಿರುಗಿ ನೋಡಬೇಕಿತ್ತು
ಯಶೋಧರೆಯ ಅಳಲ ಕೊನೆಯ ಬಾರಿಗಾದರೂ ಕೇಳಬೇಕಿತ್ತು”
ಪ್ರೀತಿಯ ನೂರ್ ನಮಗೆ ಅನುಭವವಾಗುವುದೆ ಅಗಲಿಕೆಯ ಕತ್ತಲಲ್ಲಿಯೆ. ಬರೆದ ಭಾವಗಳಿಗಿಂತ ಬರೆಯದ ಭಾವಗಳೆ ಹೆಚ್ಚು. ಆಡಿದ ಮಾತಿಗಿಂತ ಆಡದೆ ಉಳಿದಿರುವ ಮಾತುಗಳೇ ಅಧಿಕ. ಈ ನೆಲೆಯಲ್ಲಿ ಯಶೋಧರೆಯ ಮನಸ್ಥಿತಿ ಅರಿಯುವುದು ಇಂದು ಮುಖ್ಯವಾಗಿದೆ. ಪುರುಷ ಪ್ರಧಾನ ಸಮಾಜದ ವ್ಯವಸ್ಥೆಯಲ್ಲಿ ಮಹಿಳೆಯ ಅಂತರಂಗಕ್ಕೆ ಕತ್ತಲು ಕವಿಯದಿರಲಿ ಎಂಬ ಸದಾಶಯ ಮೇಲಿನ ಷೇರ್ ನಲ್ಲಿದೆ.
ಮನುಷ್ಯನಿಗೆ ಇಂದು ತನ್ನ ಒಡಲ ಹಸಿವು ನೀಗಿಸಿಕೊಳ್ಳುವುದು ಸುಲಭವಾಗಿದೆ. ಆದರೆ ಮನದ ಹಸಿವು … ಅದಕ್ಕಾಗಿ ಸದಾ ಹಂಬಲಿಸುತಿದ್ದಾನೆ. ತುಸು ಪ್ರೀತಿಗಾಗಿ ಜೀವನವಿಡೀ ಕಾಯುತಿದ್ದಾನೆ. ಕಾರಣ, ಪ್ರೀತಿಯೇ ಬಾಳಿನ ಜನ್ನತ್ ಆಗಿದೆ. ಇಂಥಹ ಜನ್ನತ್ ನ ಮತ್ತೊಂದು ರೂಪವೇ ಗಜಲ್. ಸುಖನವರ್ ಹೇಮಗಂಗಾ ಅವರಿಂದ ಗಜಲ್ ಗುಲ್ಜಾರ್ ಹಸಿರಾಗಲಿ, ಸಮೃದ್ಧವಾಗಲಿ ಎಂದು ಮನಸಾರೆ ಶುಭ ಕೋರುತ್ತೇನೆ.
“ಗೆಜ್ಜೆ ಕಟಗೊಂಡು ನಡದರೂನು ಆಕಿ ಹೆಜ್ಜೀಯೊಳಗ ಸಪ್ಪಳಾನs ಆಗಂಗಿಲ್ಲ!
ಆಹಾ! ಏನ್ ನಡಿಗಿದು ಈ ಹುಡಿಗೀದು? ಉಸುಕಿನ್ಯಾಗ ಒಂಟೆರ ಹಿಂಗ ನಡೀತಾವs ಇಲ್ಲ?!”
-ಇಟಿಗಿ ಈರಣ್ಣ
ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಓದುತ್ತಿದ್ದರೆ, ಮಾತಾಡುತಿದ್ದರೆ ; ಬರೆಯುತಿದ್ದರೆ ಸಮಯದ ಪರಿವೇ ಇರುವುದಿಲ್ಲ. ಆದಾಗ್ಯೂ ಸಮಯದ ಮುಂದೆ ಮಂಡಿಯೂರಲೆಬೇಕಲ್ಲವೇ. ಅದಕ್ಕಾಗಿಯೇ ಪರಿಚಯದ ಈ ಲೇಖನಿಗೆ, ಲೇಖನಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಬಾಯ್, ಸಿ-ಯುವ್, ಟೇಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ