ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಸರಳ ಪದಗಳ ವಿರಳಸಾಹಿತಿ

ಸಾಹಿತ್ಯರತ್ನ ಚಿ ಉದಯಶಂಕರ್

“ಆಡಿಸಿದಾತ ಬೇಸರ ಮೂಡಿ ಆಟ ನಿಲ್ಲಿಸಿದ”  ಅಂದು ೩ ಜುಲೈ ೧೯೯೩ ರೇಡಿಯೋ ವಾರ್ತೆಯಲ್ಲಿ ಚಿ. ಉದಯಶಂಕರ್ ಇನ್ನಿಲ್ಲ ಎಂಬ ಸುದ್ದಿ.  ನಂತರ ದೂರದರ್ಶನ ವಾಹಿನಿಯಲ್ಲಿ ಅದೇ ವಿಚಾರ.  ತುಂಬಾ ದುಃಖ ಆಘಾತ ತಂದ ಸಮಯ ಅದು. ನಿಜಕ್ಕೂ ೫೯ ವರ್ಷ ಸಾಯುವ ವಯಸ್ಸಲ್ಲ.  ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ನರಳುತ್ತಿದ್ದರೂ ಒಂದು ರೀತಿಯ ಒಡಂಬಡಿಕೆ ಮಾಡಿಕೊಂಡು ಅದನ್ನು ತಮಾಷೆಯ ವಿಷಯದಂತೆ ಹಾಸ್ಯ ಚಟಾಕಿ ಹಾರಿಸುತ್ತಿದ್ದ ಚಿ ಉದಯಶಂಕರ್ ಅವರಿಗೆ ಪುತ್ರ ರವಿಶಂಕರ್ ಅಪಘಾತದಲ್ಲಿ ನಿಧನರಾದ ದುಃಖ ಹೆಚ್ಚು ದಿನ ಸಹಿಸಲಾಗಲಿಲ್ಲ.  ಅವನನ್ನು ಹಿಂಬಾಲಿಸಿಕೊಂಡು ಹೊರಟುಬಿಟ್ಟರು.  ಎಷ್ಟಾದರೂ ಪುತ್ರ ಶೋಕಂ ನಿರಂತರಂ ಅಲ್ಲವೇ ?

ಫೆಬ್ರವರಿ ೧೮ ೧೯೩೪ ರಲ್ಲಿ ಚಿಟ್ನಹಳ್ಳಿಯಲ್ಲಿ ಜನಿಸಿದ ಉದಯಶಂಕರ್ ಅವರ ತಂದೆ ಜಿ ಸದಾಶಿವಯ್ಯ ಖ್ಯಾತ ಚಿತ್ರ ಸಾಹಿತಿಗಳಾಗಿದ್ದರು.  ಮೊದಮೊದಲಿಗೆ ತಂದೆಯ ಜೊತೆ ಕೆಲಸ ಮಾಡುತ್ತಿದ್ದವರು ಸ್ವತಂತ್ರವಾಗಿ ಚಿತ್ರ ಸಾಹಿತಿಯಾಗಿದ್ದು ಸಂತ ತುಕಾರಾಂ ಚಿತ್ರದ ಮೂಲಕ . ಅಲ್ಲಿಂದ ಹಿಂದೆ ನೋಡಿದ್ದೇ ಇಲ್ಲ ಮುಟ್ಟಿದ್ದೆಲ್ಲ ಚಿನ್ನವಾಯಿತು.  ಸುಮಾರು ೪೦೦೦ ಹಾಡುಗಳನ್ನು ಬರೆಯುವ ಮೂಲಕ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ .ಇವರ ಜೀವನ ಸಂಗಾತಿ ಶಾರದಮ್ಮನವರು ಇತ್ತೀಚೆಗೆ ಮಿಧನ ಹೊಂದಿದರು.  ಗುರುದತ್ ರವಿಶಂಕರ್
ಸೇರಿದಂತೆ ಮೂವರು ಮಕ್ಕಳು . ಸುಮಾರು ನಾನೂರಕ್ಕೂ ಹೆಚ್ಚು ಗೀತೆಗಳನ್ನು ಡಾ ರಾಜ್ಕುಮಾರ್ ಅವರಿಗಾಗಿ ಬರೆದಿರುವ ಇವರ ಮತ್ತು ವರನಟನ ಸ್ನೇಹ ಸಂಬಂಧ ಸಹ ತುಂಬಾ ಆತ್ಮೀಯವಾಗಿತ್ತು.  ರಾಜ್ಕುಮಾರ್ ಅವರು ಚಿ ಉದಯಶಂಕರ್ ಅವರ ಅಗಲಿಕೆಯನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದರು.

೧೯೬೩ ರಲ್ಲಿ ಸಂತ ತುಕಾರಾಂ ಚಿತ್ರದಿಂದ ಹಿಡಿದು ೧೯೯೩ ರಲ್ಲಿ ನಿಧನರಾಗುವವರೆಗೆ  ಉದಯಶಂಕರ್ ಅವರ ಕಲಾ ಸೇವೆ ಅನುಪಮ.  ಗೀತ ರಚನಾಕಾರರಾಗಿ, ಚಿತ್ರಕಥೆ ಸಾಹಿತ್ಯ ಸಂಭಾಷಣೆಕಾರ ಸಾಹಿತಿಯಾಗಿ, ನಿರ್ದೇಶಕರಾಗಿ ಅಲ್ಲದೆ ನಟರಾಗಿಯೂ ತಮ್ಮ ಛಾಪು ಮೂಡಿಸಿದ್ದ ಇವರದು ಬಹುಮುಖ ಪ್ರತಿಭೆ.

ಚಿತ್ರಸಾಹಿತಿಯಾಗಿ;

೫೭೪ ಚಿತ್ರಗಳಲ್ಲಿ ಚಿತ್ರಕಥೆ ಸಾಹಿತ್ಯ ಸಂಭಾಷಣೆಗಳನ್ನು ಬರೆದಿದ್ದರು ರಾಜ್ ಮತ್ತು ಇವರ ಕಾಂಬಿನೇಷನ್ ನಲ್ಲಿಯೇ ಎಂಬತ್ತೆಂಟು ಚಿತ್ರಗಳು ಬಂದಿವೆ.  ಇವರ ಸಂಭಾಷಣೆಗಾಗಿ ಕುಲಗೌರವ ನಾಗರಹಾವು ಪ್ರೇಮದ ಕಾಣಿಕೆ ಮತ್ತು ಜೀವನಚೈತ್ರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ ಭಾಗ್ಯದ ಲಕ್ಷ್ಮೀ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಂದಿದೆ.

ನಟನಾಗಿಚಿಉದಯಶಂಕರ್;

 ಶರೀರಕ್ಕೂ ಶಾರೀರಕ್ಕೂ ಸಂಬಂಧವೇ ಇರದಂತಹ ಕಂಠ ಇವರದು.  ವಿಶಿಷ್ಟ ಕಂಠದಿಂದ ಜನಮನ ಸೆಳೆದಿದ್ದು ಇವರು ವಹಿಸಿದ ಪೋಷಕ ಪಾತ್ರಗಳು ಜನಮಾನಸದಲ್ಲಿ ಅಚ್ಚಳಿಯದೆ ನಿಂತಿವೆ.

ಗೀತರಚನೆಕಾರರಾಗಿಚಿಉದಯಶಂಕರ್ ;

ಸುಮಾರು ೪೦೦೦ ಗೀತೆಗಳನ್ನು ರಚಿಸಿರುವ ಅಗಾಧ ಸಾಧನೆ . ಅದರಲ್ಲೂ ನಾನೂರು ಹಾಡುಗಳು ರಾಜ್ ಕುಮಾರ್ ಅವರಿಗಾಗಿ.  ಸರಳ ಪದಗಳ ಬಳಕೆ ಇವರ ರಚನೆಗಳ ವೈಶಿಷ್ಟ್ಯ.  “ನನ್ನ ಬಳಿ ಇನ್ನೂರು ಮುನ್ನೂರು ಪದಗಳಿವೆ ಅವುಗಳನ್ನೇ ಆಚೆ ಈಚೆ ಮಾಡಿ ಬರೆಯುತ್ತೇನೆ”  ಅನ್ನುತ್ತಿದ್ದರೂ ಇವರ ಬರೆಹದ ಹಿಂದಿನ ಓದಿನ ಕಾಣಿಕೆ ಅಪಾರ.  ದಾಸ ಸಾಹಿತ್ಯ ವಚನ ಡಿವಿಜಿ ಮೊದಲಾದ ಕವಿಗಳ ಕೃತಿಗಳನ್ನು ಓದಿ ಅರಗಿಸಿಕೊಂಡಿದ್ದ ಇವರ ಸಾಹಿತ್ಯ ಎಂದೂ “ಸಂತೆಗೆ ಮೂರು ಮಾರು ನೇಯುವಂಥದ್ದು” ಅಲ್ಲವೇ ಅಲ್ಲ . ಸರಳ ಪದಗಳಲ್ಲೂ ಜೀವನದ ಗಹನ ವಿಚಾರಗಳನ್ನು ತುಂಬಾ ಸುಲಭವಾಗಿ ಅಳವಡಿಸುತ್ತಿದ್ದುದು ಇವರ ವೈಶಿಷ್ಟ್ಯ ಅದಕ್ಕೆ “ಆಡಿಸಿ ನೋಡು ಬೀಳಿಸಿ ನೋಡು”( ಕಸ್ತೂರಿ ನಿವಾಸ) ” ಆಗದು ಎಂದು ಕೈಲಾಗದು ಎಂದು” (ಬಂಗಾರದ ಮನುಷ್ಯ) ಹಾಡುಗಳೇ ಸಾಕ್ಷಿ . ಕನ್ನಡದ ಪ್ರೇಮವನ್ನು ಮೆರೆದ ಹಾಡುಗಳಲ್ಲಿ ನನಗಿಷ್ಟವಾದವು “ಕನ್ನಡವೇ ತಾಯ್ನುಡಿಯು”   “ಜೇನಿನ ಮಳೆಯೋ ಹಾಲಿನ ಹೊಳೆಯೋ”  “ಅ ಆ ಈ ಕನ್ನಡದ ಅಕ್ಷರಮಾಲೆ” ಇವುಗಳು ಉಲ್ಲೇಖನೀಯ.  “ತರೀಕೆರೆ ಏರಿಮೇಲೆ” ಒಂಥರಾ ಟಂಗ್ ಟ್ವಿಸ್ಟರ್ ಆಗಿ ವಿಶೇಷವಾಗಿತ್ತು.  ಶೃಂಗಾರವಾಗಲೀ ಅನುರಾಗವಾಗಲಿ ಅವರ ಲೇಖನಿಯಿಂದ ಸುಂದರ ಸುಮಧುರವಾಗಿ ಬರೆಸಿಕೊಳ್ಳುತ್ತಿದ್ದವು.  ನನಗಿಷ್ಟವಾದ ಕೆಲವು ಹಾಡುಗಳು  “ಜೊತೆಯಾಗಿ ಹಿತವಾಗಿ”   “ಮನಸ್ಸು ಮನಸ್ಸು ಒಂದಾದರೆ”  ” ಮನೆಯನು ಬೆಳಗಿದೆ ಇಂದು”  “ಕನಸಲು ನೀನೆ ಮನಸಲು ನೀನೆ”  “ಆಕಾಶವೆ ಬೀಳಲಿ ಮೇಲೆ”  ” ನೀ ಯಾರೋ ಏನೋ ಸಖ”   “ಎಲ್ಲೇ ಇರು ಹೇಗೇ ಇರು”  ಈ ಪಟ್ಟಿಗೆ ಕೊನೆ ಇಲ್ಲ .

ಪ್ರಮುಖವಾಗಿ ಗೀತರಚನೆಕಾರರೆಂದೇ ಗುರುತಿಸಿಕೊಂಡಿದ್ದ ಇವರಿಗೆ ಯಾವುದೇ ಪ್ರಶಸ್ತಿ ಗೀತರಚನೆಗಾಗಿ ಸಂದಿಲ್ಲ ಎಂಬುದು ವಿಷಾದದ ಹಾಗೂ ವಿಪರ್ಯಾಸದ ಸಂಗತಿ.
ಶಿವಾಜಿ ಗಣೇಶನ್ ಅವರು ತುಂಬಾ ಅಭಿಮಾನದಿಂದ ಇವರನ್ನು ಕನ್ನಡದ ಕಣ್ಣದಾಸನ್ ಎಂದು ಕರೆಯುತ್ತಿದ್ದರು. ಕಣ್ಣದಾಸನ್ ತಮಿಳಿನ ಸುಪ್ರಸಿದ್ಧ ಚಿತ್ರ ಸಾಹಿತಿ .  “ಸಾಹಿತ್ಯ ರತ್ನ” ಎಂಬ ಜನತೆ ಕೊಟ್ಟ ಬಿರುದು ಮತ್ತು ಚಿರಂತನವಾಗಿ ಜನರೆದೆಯಲ್ಲಿ ಮಾಸದೆ ಉಳಿದಿರುವ ಇವರ ಸಾಹಿತ್ಯದ ನರುಗಂಪು ! ಲೇಖಕನಿಗೆ ಇದಕ್ಕಿಂತ ಹೆಚ್ಚಿನ ಪ್ರಶಸ್ತಿ ಬೇಕೆ?  ಅವರ ಹಾಡುಗಳಲ್ಲಿ ಕೆನೆಗಟ್ಟುವ ಭಾವ ಸಾಂದ್ರತೆ ಆಪ್ತತೆ ಮೂಡಿಸುತ್ತದೆ ಆತ್ಮೀಯತೆ ಹೆಚ್ಚಿಸುತ್ತದೆ.  ನಿಜವಾದ ಬರಹದ ಶಕ್ತಿ ಅದು.  

ಅವರ ಹಾಸ್ಯ ಸ್ವಭಾವ ತಮ್ಮನ್ನೇ ಗೇಲಿ ಮಾಡಿಕೊಂಡು ತಮಾಷೆ ಮಾಡಿ ಸುತ್ತಲಿದ್ದವರನ್ನು ನಗಿಸುತ್ತಿದ್ದ ಪ್ರಸಂಗಗಳು ಅನೇಕ ಅವುಗಳಲ್ಲಿ ಒಂದು .
ಉದಯಶಂಕರ್ ಸ್ವೀಟೀ ನನ್ನ ಜೋಡಿ… ಹಾಡು ಬರೆದಾಗ ಅವರ ಮಿತ್ರರು ಏನ್ರೀ ಉದಯಶಂಕರ್ ಈ ವಯಸ್ಸಲ್ಲಿ ಯಾರ್ರೀ ನಿಮ್ ಸ್ವೀಟಿ ಅಂದಾಗ ಉದಯಶಂಕರ್
ಇದ್ಯಲ್ಲ ಸಕ್ಕರೆ ಕಾಯಿಲೆ ಅದೇ ನನ್ನ ಸ್ವೀಟಿ ಅಂದರಂತೆ.

ಉದಯಶಂಕರ್ ಅವರು ಎಷ್ಟು ಬೇಗ ಹಾಡುಗಳನ್ನು ರಚಿಸುತ್ತಿದ್ದರು ಎನ್ನುವುದಕ್ಕೆ ಈ ಸಂದರ್ಭದ ಉದಾಹರಣೆ ನೋಡಿ .

ದೇವರ ಕಣ್ಣು ಚಿತ್ರದ ಸಮಯದಲ್ಲಿ ಸಂ.ನಿ. ಟಿ.ಜಿ.ಲಿಂಗಪ್ಪ ನವರ ಬಳಿ ಬಂದ ಉದಯಶಂಕರ್  ಒಂದು ಹಾಡು ಬರೆದುಕೊಡಲಾ ಅಂದಾಗ ಟಿ.ಜಿ.ಸಮಯ ಆಗೋಗಿದೆ ೫ ನಿಮಿಷದಲ್ಲಿ ಬರೆದುಕೊಡೋದಾದರೆ ಆಗಬಹುದು ತಮ್ಮ ಅಂದರು.

ಮೊದಲೇ ಸಕ್ಕರೆ ಕಾಯಿಲೆ,ಸಿಹಿಮೂತ್ರರೋಗಿಯಾಗಿದ್ದ ಚಿ.ಉ ಸರಸರನೆ ಬಾತ್ ರೂಮಿಗೆ ಹೋದರು.ಅಲ್ಲಿ ೨ ನಿಮಿಷ ಕಳೆದುಹೋಯ್ತು,ಸರಿ,ಪೇಚಾಡಿಕೊಂಡು ಛೇ ಎಂಥಾ ಕೆಲಸ ಆಗೋಯ್ತು ನನ್ನ ನಾನೇ ಮರೆತುಹೋದನಲ್ಲ, ಪ್ರಕೃತಿ, ಗಾಳಿ ಇವೆಲ್ಲ ಯಾವತ್ತಿಗೂ ತಮ್ಮ ಕರ್ತವ್ಯ ಮರೆಯೋಲ್ಲ, ನಾನು ನನ್ನ ಕರ್ತವ್ಯ ಮರೆತುಬಿಟ್ಟೆ ಅಂದುಕೊಂಡ  ಚಿ.ಉ ೩ ನಿಮಿಷದಲ್ಲಿ ನಿನ್ನ ನೀನು ಮರೆತರೇನು ಸುಖವಿದೆ ತನ್ನತನವ ತೊರೆದರೇನು ಸೊಗಸಿದೆ ಹಾಡು ಬರೆದುಕೊಟ್ಟಾಗ ಟಿ.ಜಿ. ಶಭಾಷ್ ತಮ್ಮಯ್ಯ ಅಂದರು. ಅಭೇರಿ ರಾಗದಲ್ಲಿ ಈ ಗೀತೆ ಇಂದಿಗೂ ಅಮರ ಅಜರಾಮರ ವಾಗಿ ಉಳಿದಿದೆ.

ಇಂತಹ ಪ್ರತಿಭಾಶಾಲಿ ಹಸನ್ಮುಖಿ ಬರಹಗಾರನಿದ್ದ ಕಾಲದಲ್ಲಿ ನಾವು ಇದ್ದೆವು ಎಂಬುದೇ ಹೆಮ್ಮೆಯ ವಿಷಯ.
ಡಾ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಡಾ ದೊಡ್ಡರಂಗೇಗೌಡ ಅವರ ಮಾರ್ಗದರ್ಶನದಲ್ಲಿ “ಕನ್ನಡ ಚಿತ್ರರಂಗಕ್ಕೆ ಚಿ. ಉದಯಶಂಕರ್ ಕೊಡುಗೆ” ಎಂಬ ವಿಷಯದಲ್ಲಿ ಎಂ. ಫಿಲ್ ಮಾಡಿದ್ದಾರೆ .ಕನ್ನಡ ಚಿತ್ರರಂಗದ ಎಪ್ಪತ್ತೈದನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಚಿ ಉದಯಶಂಕರ್ ಅವರ ಬಗ್ಗೆ ಒಂದು ಪುಸ್ತಕವೂ ಹೊರಬಂದಿದೆ. ಈ ಸಾಹಿತ್ಯ ರತ್ನನಿಗೆ ನಾಡು ತನ್ನ ಗೌರವಪೂರ್ಣ ನಮನವನ್ನು ಸಲ್ಲಿಸುತ್ತಿದೆ . ಮತ್ತೊಮ್ಮೆ ಇಲ್ಲಿಯೇ ಹುಟ್ಟಿ ಬನ್ನಿ ಉದಯ ಶಂಕರ್. ನಿಮ್ಮ ಪದಗಳ ಗಾರುಡಿ ಮತ್ತೊಮ್ಮೆ ಮಾಡಿ .

——————–


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

  1. ಅಮೋಘವಾದ ಆಶ್ಚರ್ಯ ಭರಿತ,ತಿಳಿಯಲೆ ಬೇಕಾದ ವಿಷಯ ಅನಾಯಾಸವಾಗಿ ದೊರಕಿತು ಧನ್ಯವಾದಗಳು

Leave a Reply

Back To Top