ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಗಿರಿಜಾ ಮಾಲಿಪಾಟೀಲ ರವರ

ಗಜಲ್ ಗಳಲ್ಲಿ ಪ್ರೀತಿಯ ಕನವರಿಕೆ

ಎಲ್ಲರಿಗೂ ಮಲ್ಲಿಯ ಮಲ್ಲಿಗೆಯಂಥಹ ನಮಸ್ಕಾರಗಳು..

ಹೇಗಿದ್ದೀರಿ ತಾವೆಲ್ಲರು, ಚೆನ್ನಾಗಿದ್ದೀರಲ್ಲವೇ! ಪ್ರತಿ ವಾರದಂತೆ ಈ ವಾರವೂ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಆ ಹೆಜ್ಜೆ ಗುರುತುಗಳೊಂದಿಗೆ ಗಜಲ್ ಜನ್ನತ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ.. ಬನ್ನಿ, ಮತ್ತೇಕೆ ಮೀನಾಮೇಷ ಎಣಿಸುವುದು..

“ನಿನ್ನ ಪ್ರತಿ ರಹಸ್ಯವನ್ನು ಮುಚ್ಚಿಟ್ಟುಕೊಂಡು ಕುಳಿತಿದ್ದಾರೆ ಯಾರೋ
ತನ್ನನ್ನು ತಾನು ಹುಚ್ಚನಾಗಿಸಿಕೊಂಡು ಕುಳಿತಿದ್ದಾರೆ ಯಾರೋ”
-ಅಕ್ತರ್ ಸಿದ್ಧಿಕಿ

         ಮನುಷ್ಯನ ಮನಸ್ಸು ಪ್ರವೃತ್ತಿಗಳು, ಸಂಘಗಳು ಮತ್ತು ಮುನ್ಸೂಚನೆಗಳಿಂದ ಚಲಿಸುತ್ತದೆಯೇ ಹೊರತು ನಿಗದಿತ ದಿನಾಂಕಗಳು ಅಥವಾ ಪೂರ್ಣಗೊಂಡ ಪ್ರಕ್ರಿಯೆಗಳಿಂದಲ್ಲ. ಕ್ರಿಯೆ ಮತ್ತು ಪ್ರತಿಕ್ರಿಯೆಯು ಏಕಕಾಲದಲ್ಲಿ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಮನುಷ್ಯನ ಭಾವನೆಗಳು ಜ್ಞಾನದ ಅತ್ಯಂತ ನಿಜವಾದ ಮಾರ್ಗಗಳಾಗಿವೆ. ಕೋಪ, ಅಸಮಾಧಾನ ಮತ್ತು ಅಸೂಯೆ ಇತರರ ಹೃದಯವನ್ನು ಯಾವತ್ತೂ ಬದಲಾಯಿಸಲಾರವು. ಅವು ಅವನ, ಅವಳ ಹೃದಯವನ್ನು ಮಾತ್ರ ಬದಲಾಯಿಸಬಲ್ಲವು. ಮನುಷ್ಯನಲ್ಲಿ ಎರಡು ಮೂಲಭೂತ ಪ್ರೇರಕ ಶಕ್ತಿಗಳಿವೆ. ಅವುಗಳೆಂದರೆ ಒಂದು ಭಯ ಮತ್ತೊಂದು ಪ್ರೀತಿ. ಮನುಷ್ಯ ಭಯಗೊಂಡಾಗ ಜೀವನದಿಂದ ಹಿಂದೆ ಸರಿಯುತ್ತಾನೆ, ಅದೇ ಪ್ರೀತಿಯಲ್ಲಿರುವಾಗ, ಜೀವನವು ಉತ್ಸಾಹ ಮತ್ತು ಸ್ವೀಕಾರದೊಂದಿಗೆ ನೀಡುವ ಎಲ್ಲದಕ್ಕೂ ತನ್ನನ್ನು ತಾನು ತೆರೆದುಕೊಳ್ಳುತ್ತಾನೆ. ಬದುಕಿನಲ್ಲಿ ಸಂಭವಿಸುವ ವೈಭವ ಮತ್ತು ಅಪೂರ್ಣತೆಗಳಲ್ಲಿ ಮನುಷ್ಯ ತನ್ನನ್ನು ತಾನು ಪ್ರೀತಿಸಲು ಕಲಿಯುತ್ತಾನೆ, ಕಲಿಯಬೇಕು ಕೂಡ. ಮನುಷ್ಯ ತನ್ನನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ, ಇತರರನ್ನು ಪ್ರೀತಿಸುವ ಸಾಮರ್ಥ್ಯ ಅವನಲ್ಲಿ/ಅವಳಲ್ಲಿ ಕುಂಠಿತವಾಗುತ್ತದೆ. ವಿಕಸನ ಮತ್ತು ಉತ್ತಮ ಪ್ರಪಂಚದ ಎಲ್ಲಾ ಭರವಸೆಗಳು ಜೀವನವನ್ನು ಅಳವಡಿಸಿಕೊಳ್ಳುವ ಜನರ ನಿರ್ಭಯತೆ ಮತ್ತು ಮುಕ್ತ ಹೃದಯದ ದೃಷ್ಟಿಯಲ್ಲಿ ವಿಶ್ರಾಂತಿ ಪಡೆಯುತ್ತವೆ. ಸಮಯವು ನಾವು ಸ್ಪರ್ಶಿಸಬಹುದಾದ ವಸ್ತುಗಳನ್ನು ಮಾತ್ರ ಕಸಿದುಕೊಳ್ಳಬಹುದು; ಅದು ನಮ್ಮ ಭಾವನೆಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸ್ವಯಂ ನಿಯಂತ್ರಣವೇ ಶಕ್ತಿ. ಶಾಂತತೆಯೇ ಪಾಂಡಿತ್ಯ. ಬೇರೊಬ್ಬರ ಅತ್ಯಲ್ಪ ಕ್ರಿಯೆಗಳ ಆಧಾರದ ಮೇಲೆ ನಮ್ಮ ಮನಸ್ಥಿತಿ ಬದಲಾಗದ ಹಂತಕ್ಕೆ ನಾವು ಹೋಗಬೇಕು. ನಮ್ಮ ಜೀವನದ ದಿಕ್ಕನ್ನು ನಿಯಂತ್ರಿಸಲು ಇತರರಿಗೆ ಅನುಮತಿ ನೀಡಬಾರದು. ಜೊತೆಗೆ ನಮ್ಮ ಭಾವನೆಗಳು ನಮ್ಮ ಬುದ್ಧಿವಂತಿಕೆಯನ್ನು ಮೀರಲು ಬಿಡಬಾರದು. ಈ ಎಲ್ಲ ಜೀವನದ ಸಾರವನ್ನು ಗಜಲ್ ತನ್ನ ಅಶಅರ್ ನಲ್ಲಿ ಕಾಪಿಟ್ಟುಕೊಂಡು ಬಂದಿದೆ, ಬರುತ್ತಿದೆ. ಇದಕ್ಕೆ ಗಜಲ್ ನ ಪರಂಪರೆಯೇ ಸಾಕ್ಷಿ. ಕನ್ನಡದಲ್ಲೂ ಗಜಲ್ ಪರಂಪರೆ ಹುಲುಸಾಗಿ ಬೆಳೆಯುವ ಲಕ್ಷಣಗಳು ಗೋಚರಿಸುತ್ತಿವೆ. ಇಂದು ಅಸಂಖ್ಯಾತ ಬರಹಗಾರರು ಗಜಲ್ ಮಧುಶಾಲೆಯ ದೇಹಲೀಜ್ ತುಳಿದು ಕೃಷಿ ಮಾಡುತ್ತಿದ್ದಾರೆ. ಅವರಲ್ಲಿ ಶ್ರೀಮತಿ ಗಿರಿಜಾ ಮಾಲಿಪಾಟೀಲ ರವರೂ ಒಬ್ಬರು.

      ಶ್ರೀ ತಿಮ್ಮನಗೌಡ ಮತ್ತು ಶ್ರೀಮತಿ ಸರೋಜಮ್ಮ ದಂಪತಿಗಳ ಮುದ್ದಿನ ಮಗಳಾದ  ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ರವರು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಂಗಾಪೂರದವರು. ಇವರ ಪ್ರಾಥಮಿಕ ಶಿಕ್ಷಣವು ರಾಯಚೂರಿನ ಹಾಶ್ಮಿಯ ಹಿರಿಯ ಪ್ರಾಥಮಿಕ ಶಾಲಯಲ್ಲಿ, ಪೌಢ ಶಾಲೆಯು ಕೆ.ಇ.ಬಿ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಎಸ್. ಎಸ್ ಆರ್. ಜಿ ಮಹಿಳಾ ವಿದ್ಯಾಲಯದಲ್ಲಿ ಪದವಿಯನ್ನು ಪೂರೈಸಿ ಮುಂದೆ ಎಂ.ಎ ಕನ್ನಡ, ಬಿ.ಎಡ್ ಪದವಿಯನ್ನೂ ಪೂರ್ಣಗೊಳಿಸಿದ್ದಾರೆ. ಕೆಲ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ರಾಯಚೂರು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಕಾಲೇಜು ದಿನಗಳಿಂದಲೇ ಸಾಹಿತ್ಯದ ಅಭಿರುಚಿಯನ್ನು ಹೊಂದಿರುವ ಇವರು ವಚನ, ಹೈಕು, ತಂಕಾ, ರುಬಾಯಿ, ಮುಕ್ತಕ, ನ್ಯಾನೋಕಥೆಗಳು ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ‘ಸಾಹಿತ್ಯದ ವೈವಿಧ್ಯಮಯ ರೂಪಗಳು’, ‘ಭಾವದೊನಲು’,
‘ಕಡಲು ಮತ್ತು ಮೌನ’ ಹಾಗೂ ‘ಆರಾಧ್ಯೆಯ ಗಜಲ್ ಗಳು’ ಎಂಬ ಪ್ರಮುಖ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇನ್ನೂ ಹಲವು ಕೃತಿಗಳು ಅಚ್ಚಿನಲ್ಲಿದ್ದು, ಓದುಗರ ಕೈಗೆ ಸೇರಬೇಕಿವೆ.

       ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ರಾಜ್ಯ ಅಧ್ಯಕ್ಷರಾದ ಇವರು ಹತ್ತಾರು ಆನ್ ಲೈನ್, ಆಫ್ ಲೈನ್ ಕಾರ್ಯಕ್ರಮಗಳನ್ನು ಮಾಡುತ್ತ, ಬಹಳಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಇವರ ಹಲವಾರು ಬರಹಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡು ಜನಮನ್ನಣೆ ಗಳಿಸಿವೆ. ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಶ್ರೀಮತಿ ಗಿರಿಜಾ ಮಾಲಿಪಾಟೀಲ ರವರು ಹಲವು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಸಾಧನೆಗಳನ್ನು ಗಮನಿಸಿ ಇವರಿಗೆ ನಾಡಿನ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಹೊನಕಲ್ ಸಾಹಿತ್ಯ ಪ್ರಶಸ್ತಿ ಹಾಗೂ ಸಾಹಿತ್ಯ ಸಿಂಧು ಪ್ರಶಸ್ತಿಗಳು ಪ್ರಮುಖವಾಗಿವೆ.

       ಗಜಲ್ ಎಂಬುದು ಅತ್ಯಂತ ಸುಂದರವಾದ ಪದ. ಪ್ರೀತಿಯ ಸೌಂದರ್ಯ ಮತ್ತು ಹೆಣ್ಣಿನ ಬಗ್ಗೆ ಹಾಡುವುದು, ಅವಳು ಆನಂದಿಸುವ ಎಲ್ಲಾ ಗುಣಗಳನ್ನು ಅಭಿವ್ಯಕ್ತಿಸುವುದು. ಈ ದಿಸೆಯಲ್ಲಿ ಗಜಲ್ ಯಾವಾಗಲೂ ಪ್ರೀತಿ ಮತ್ತು ಪ್ರೀತಿಯ ಪ್ರಮಾಣವನ್ನು ಸೂಚಿಸುತ್ತದೆ. ಅವಳ ಆಧ್ಯಾತ್ಮಿಕ ಗುಣಗಳಿಂದ ಪ್ರಾರಂಭಿಸಿ, ದೈಹಿಕ ಗುಣಗಳೊಂದಿಗೆ ಕೊನೆಗೊಳ್ಳುತ್ತದೆ. ಎಲ್ಲೆಲ್ಲೂ ಪ್ರೇಮಿಗಳು ಪರಸ್ಪರ ಮುಖವನ್ನು ನೋಡುವುದು, ಪುಸ್ತಕಗಳಲ್ಲಿ, ಕನಸಿನಲ್ಲಿ, ಎಚ್ಚರದ ಜೀವನದಲ್ಲಿ. ಪ್ರೇಮಿಗಳು ತಮ್ಮ ಪ್ರೀತಿಯ ತೀವ್ರತೆಯಿಂದ ಪುಳಕಗೊಳ್ಳುವುದನ್ನು ಸೆರೆಹಿಡಿಯುತ್ತದೆ.‌ ನಮ್ಮ ಹೃದಯದಲ್ಲಿರುವ ಅತ್ಯಂತ ಸುಂದರವಾದ ಪದ ಮತ್ತು ನಮ್ಮ ಜೀವನದಲ್ಲಿ ಉತ್ತಮವಾದ ವಿಷಯವೆಂದರೆ ಅದು ಪ್ರೀತಿ. ಈ ಪ್ರೀತಿಯ ಹೆಜ್ಜೆ ಗುರುತುಗಳನ್ನು ಗಜಲ್ ತನ್ನ ಅಶಅರ್ ನಲ್ಲಿ ಕಾಪಿಟ್ಟುಕೊಂಡು ಬಂದಿದೆ, ಬರುತ್ತಿದೆ; ಬರಬೇಕು ಸಹ.‌ಈ ನೆಲೆಯಲ್ಲಿ ಸುಖನವರ್ ಶ್ರೀಮತಿ ಗಿರಿಜಾ ಮಾಲಿಪಾಟೀಲ ರವರ ‘ಆರಾಧ್ಯೆಯ ಗಜಲ್ ಗಳು’ ಸಂಕಲನವನ್ನು ಗಮನಿಸಿದಾಗ ಪ್ರೀತಿ, ಪ್ರೇಮ, ಪ್ರಣಯ, ವಿರಹ, ನೋವು, ಯಾತನೆ, ಕನವರಿಕೆ, ನಿವೇದನೆ, ನಿಸರ್ಗದ ರಮಣೀಯತೆ, ಸ್ತ್ರೀ ಸಂವೇದನೆ, ಸುಖ-ದುಃಖ, ಒಳಿತು-ಕೆಡಕು, ಮನದ ತೊಳಲಾಟ, ಸಾಮಾಜಿಕ ವ್ಯವಸ್ಥೆಯ ಅನಾವರಣ, ರಾಜಕೀಯ ಅರಾಜಕತೆ, ಬಡತನ, ಹಸಿವು, ಅಪಮಾನ, ಪ್ರಚಾರದ ಗೀಳು, ವೈಚಾರಿಕತೆ… ಎಲ್ಲವೂ ನಮ್ಮೊಂದಿಗೆ ಅನುಸಂಧಾನಕ್ಕೆ ಇಳಿಯುತ್ತವೆ.

      ದುಃಖವು ಸದಾ ಸಮಯದ ರೆಕ್ಕೆಗಳ ಮೇಲೆ ಹಾರಿಹೋಗುತ್ತದೆ. ಪ್ರೀತಿ ಸುಖ ನೀಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅದು ದುಃಖವನ್ನೂ ಬಳುವಳಿಯಾಗಿ ನೀಡುತ್ತದೆ ಎಂಬುದಕ್ಕೆ ನಮ್ಮ ಇತಿಹಾಸವೇ ಸಾಕ್ಷಿಯಾಗಿದೆ. ಪ್ರೀತಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬದರ ಜೊತೆಗೆ ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು. ಅದೆಂದರೆ, ಪ್ರೀತಿಗಾಗಿ ಜೀವನಪರ್ಯಂತ ನಾವು ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಹೆಚ್ಚು ಹೆಚ್ಚು ಪಾವತಿಸಲೇ ಬೇಕಾಗುತ್ತದೆ. ಇಲ್ಲಿ ಗಜಲ್ ಗೋ ಶ್ರೀಮತಿ ಗಿರಿಜಾ ಮಾಲಿಪಾಟೀಲ ರವರು ಪ್ರೀತಿಯಿಂದ ಒಂದಾಗುವ ನೋವನ್ನು ತಮ್ಮ ಷೇರ್ ಮೂಲಕ ಅನಾವರಣಗೊಳಿಸಿದ್ದಾರೆ.

“ನೀ ಮಾಡಿದ ಮೋಸ ಹೃದಯವನು ತುಂಬಾ ಕಾಡಿದೆ ಗೆಳೆಯ
ನಿನ್ನೊಂದಿಗಿನ ಕ್ಷಣವು ಮತ್ತೆ ನಿನ್ನನೇ ಬೇಡಿದೆ ಗೆಳೆಯ”

ಪ್ರೀತಿಯಲ್ಲಿ ಬೀಳುವುದು ಸರಳ. ಆದರೆ ಪ್ರೀತಿಯಿಂದ ಹೊರಗುಳಿಯುವುದು ಕಷ್ಟ. ಅಂತೆಯೇ ಪ್ರೀತಿಯಲ್ಲಿ ಸಿಗುವ ನೋವು, ಯಾತನೆ, ಮೋಸ, ಅವಮಾನಗಳನ್ನೂ ಸಹಿಸಿಕೊಂಡೂ ಬಂಡೆಗಲ್ಲಿನಂತೆ ಅಚಲವಾಗಿರುವವರನ್ನು ನೋಡುತ್ತೇವೆ. ಅಂತೆಯೇ ಪ್ರೀತಿಸುವುದು ಎಂದರೆ ಯುದ್ಧಕ್ಕೆ ಹೋದಂತೆ; ರಣಭೂಮಿಯಲ್ಲಿ ಏನು ಬೇಕಾದರೂ ಘಟಿಸಬಹುದು ಎಂಬುದನ್ನು ಈ ಮೇಲಿನ ಷೇರ್ ಪ್ರತಿಧ್ವನಿಸುತ್ತದೆ.

“ನಾಯಕರಾಗುವುದೇನೂ ಅಷ್ಟು ಸುಲಭವಲ್ಲ
ಸವಾಲುಗಳಿಗೆ ಎದೆಯೊಡ್ಡುವುದೇನೂ ಅಷ್ಟು ಸುಲಭವಲ್ಲ”

‘ಅಷ್ಟು ಸುಲಭವಲ್ಲ’ ಎನ್ನುವ ರದೀಫ್ ಇಡೀ ಗಜಲ್ ಗೆ ಒಂದು ವಝನ್ ನೀಡಿದೆ. ಒಬ್ಬ ಉತ್ತಮ ನಾಯಕನೆಂದರೆ ಭರವಸೆಯ ವ್ಯಾಪಾರಿ. ದೃಷ್ಟಿಯನ್ನು ವಾಸ್ತವಕ್ಕೆ ಭಾಷಾಂತರಿಸುವ ಸಾಮರ್ಥ್ಯ ನಾಯಕನಿಗಿರುತ್ತದೆ, ಇರಬೇಕು ಕೂಡ. ಅಂತೆಯೇ ನಾಯಕತ್ವದ ಕಾರ್ಯ ಹೆಚ್ಚಿನ ನಾಯಕರನ್ನು ಉತ್ಪಾದಿಸುವುದಾಗಿದೆಯೇ ಹೊರತು ಅನುಯಾಯಿಗಳಲ್ಲ ಎಂದು ಹೇಳಲಾಗುತ್ತದೆ. ಇಂಥ ನಾಯಕತ್ವದ ಕುರಿತು ಮೇಲಿನ ಷೇರ್ ಮಾತನಾಡುತ್ತದೆ. ಪರಿಣಾಮಕಾರಿ ನಾಯಕತ್ವ ಭಾಷಣಗಳನ್ನು ಮಾಡುವುದು ಅಥವಾ ಇಷ್ಟವಾಗುವುದು ಅಲ್ಲ; ಫಲಿತಾಂಶಗಳಿಂದ ಅದನ್ನು ವ್ಯಾಖ್ಯಾನಿಸಲಾಗುತ್ತದೆ, ಗುಣಲಕ್ಷಣಗಳಿಂದಲ್ಲ. ಇಲ್ಲಿ ಗಜಲ್ ಕಾರ್ತಿ ಗಿರಿಜಾ ಮಾಲಿಪಾಟೀಲ ರವರು ನಾಯಕತ್ವದ ಕಷ್ಟ, ಸಮಸ್ಯೆಗಳನ್ನು ಎದುರಿಸುವ ಪರಿ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

       ಹೃದಯವು ಎಲ್ಲವನ್ನೂ ಸುಂದರವಾಗಿ ಪ್ರೀತಿಸುವಂತೆ ಮಾಡುವಲ್ಲಿ ಗಜಲ್ ನ ಪಾತ್ರ ಅನನ್ಯ. ಜಗತ್ತು ಚಂದ್ರನೊಂದಿಗೆ ನಿರತವಾಗಿರುವಾಗ ನಕ್ಷತ್ರವನ್ನು ನೋಡಿ ನಗುವುದನ್ನು ಕಲಿಸುವುದೇ ಈ ಗಜಲ್.  ಇಂಥಹ ಗಜಲ್ ಗಳು ಗಜಲ್ ಗೋ ಶ್ರೀಮತಿ ಗಿರಿಜಾ ಮಾಲಿಪಾಟೀಲ ಅವರಿಂದ ಹೇರಳವಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸುತ್ತೇನೆ.

“ಇಂದು ಪ್ರೀತಿ ಎನ್ನುವುದು ತಮಾಷೆಯಂತಾಗಿದೆ
ಈ ತಮಾಷೆಯಲ್ಲಿ ನೀನು ಮೈ ಮರೆಯಬೇಡ”
 -ತೌಕೀರ್ ತಕೀ

ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಓದುತ್ತಿದ್ದರೆ, ಮಾತಾಡುತಿದ್ದರೆ ; ಬರೆಯುತಿದ್ದರೆ ಸಮಯದ ಪರಿವೇ ಇರುವುದಿಲ್ಲ. ಆದಾಗ್ಯೂ ಸಮಯದ ಮುಂದೆ ಮಂಡಿಯೂರಲೆಬೇಕಲ್ಲವೇ.‌ ಅದಕ್ಕಾಗಿಯೇ ಪರಿಚಯದ ಈ ಲೇಖನಿಗೆ, ಲೇಖನಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಬಾಯ್, ಸಿ-ಯುವ್, ಟೇಕೇರ್…!!

ಧನ್ಯವಾದಗಳು.. 


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top