ಇಂದಿರಾ ಮೋಟೆಬೆನ್ನೂರ ಕವಿತೆ-ಕಮರುವುದಿಲ್ಲ ಕನಸುಗಳು

ಕಾವ್ಯ ಸಂಗಾತಿ

ಕಮರುವುದಿಲ್ಲ ಕನಸುಗಳು

ಇಂದಿರಾ ಮೋಟೆಬೆನ್ನೂರ

ನೆನಪ ತಂತಿ ಮೀಟಿ
ಮಿಡಿದೆ ಹೃದಯ..
ನೋವ ಕಡಲ ದಾಟಿ
ನುಡಿದೆ ಒಲವ..
ಕನಸು ಕವಿತೆ ಹಾಡೆ
ನೀನೇ ಕಾರಣ…

ಭಾವ ಬುಗ್ಗೆ ಚಿಮ್ಮಿ
ಜೀವ ನಲಿಯೆ
ಕನಸ ಹಾದಿಯಲ್ಲಿ
ಜೊತೆಯಾಗಿ ಹೆಜ್ಜೆ
ಕುಣಿವ ಗೆಜ್ಜೆ ನಾದಕೆ
ನೀನೇ ಕಾರಣ…

ಮುನಿಸ ರಮಿಸಿ
ಮನಸ ಬೆರೆಸಿ
ಜೀವ ಭಾವ ಸೇರಿ
ಎದೆಯ ಗೂಡ
ತಾವಿನಲಿ ಕನವು
ಅರಳಿ ನಗಲು
ನೀನೇ ಕಾರಣ…

ಕನಸ ಹಾದಿಯಲಿ
ಕೈ ಹಿಡಿದು ನಡೆಸಿ
ಕಮರದಂತೆ ಕಾಪಿಟ್ಟು
ಭದ್ರ ಭಾವಕೋಟೆ ಕಟ್ಟಿ
ಪೊರೆದ ಸ್ನೇಹ ಜೀವಿ..
ಭಾವ ಬಿತ್ತನೆಯ ರಾಗ
ಎದೆಯ ದೀಪ ಬೆಳಗೆ
ನೀನೇ ಕಾರಣ…

ಕಂಗಳಂಗಳಕೆ ಕನಸ
ತೋರಣ ಕಟ್ಟಿ..
ಕಣ್ಣರೆಪ್ಪೆ ಕಾವಲಿರಿಸಿ…
ಕೊಲ್ಲುತ ಮೌನದಲಿ
ಕನಸ ಕಮರದಂತೆ ಪೊರೆವ
ಎದೆ ಕದವ ಮುಚ್ಚಿ ತೆರೆವ
ಕಣ್ಣಮುಚ್ಚಾಲೆ ಸೂತ್ರಧಾರಿ
ನೀನೇ ಕಾರಣ…


ಇಂದಿರಾ ಮೋಟೆಬೆನ್ನೂರ.

Leave a Reply

Back To Top