ವಿಶೇಷ ಲೇಖನ
ಸುವಿಧಾ ಹಡಿನಬಾಳ
ಬದಲಾದ ಕಾಲಘಟ್ಟದಲ್ಲಿ
ವಿದ್ಯಾರ್ಥಿ – ಶಿಕ್ಷಕರ ಸಂಬಂಧ
ಮತ್ತು ಪಾಲಕರ ಮನಸ್ಥಿತಿ
ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಆಗಿದೆ; ಶಿಕ್ಷಣದ ಪರಿಕಲ್ಪನೆ ಬದಲಾಗಿದೆ; ಪರೀಕ್ಷೆಯ ವಿಧಾನದಲ್ಲಿ ಬದಲಾವಣೆ ಆಗಿದೆ; ಬೋಧನಾ ತಂತ್ದದಲ್ಲಿ ಬದಲಾವಣೆ ಆಗಿದೆ; ಶಾಲೆಯ ಭೌತಿಕ ಪರಿಸರದಲ್ಲಿ ಅಭೂತಪೂರ್ವ ಅಭಿವೃದ್ಧಿಯ ತಂಗಾಳಿ ಬೀಸಿದೆ. ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, ಟಿವಿ, ಮೊಬೈಲ್, ಡಿಜಿಟಲ್ ಸಲಕರಣೆಗಳ ಬಳಕೆಯಿಂದಾಗಿ ಕಲಿಕೆ ಆಕರ್ಷಣೀಯ, ಸುಲಭವಾಗಿದೆ… ಎಲ್ಲವೂ ಓಕೆ.ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯ ಕೂಡ. ಈ ಎಲ್ಲಾ ಸುಧಾರಣೆಗಳು ಅರ್ಧದಷ್ಟು ಶಾಲೆಗಳಲ್ಲಿ ಮಾತ್ರವೇ ಸಾಧ್ಯವಾಗಿದ್ದು ಹಲವು ಶಾಲೆಗಳು ಇನ್ನೂ ಓಬಿರಾಯನ ಕಾಲದ ಕಟ್ಟಡ, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ನಿರಾಶಾದಾಯಕ.ಈ ಅಭಿವೃದ್ಧಿ, ಸುಧಾರಣೆಯ ಹಿಂದೆ ಹಳೆ ವಿದ್ಯಾರ್ಥಿಗಳ, ವಿವಿಧ ಸಂಘ ಸಂಸ್ಥೆಗಳ, ಜನ ಪ್ರತಿನಿಧಿಗಳ, ಶಿಕ್ಷಕರ ಇಚ್ಛಾಶಕ್ತಿ, ಶೈಕ್ಷಣಿಕ ಕಾಳಜಿ ಕಾರಣವಾಗಿದೆ.
ಮೇಲಿನ ಎಲ್ಲಾ ಬದಲಾವಣೆ, ಸುಧಾರಣೆ ಆಶಾದಾಯಕ, ರಚನಾತ್ಮಕ ಎನಿಸಿದರೂ ಇತ್ತೀಚಿನ ವಿದ್ಯಾರ್ಥಿ ಶಿಕ್ಷಕರ ಭಾವನಾತ್ಮಕ ಸಂಬಂಧ, ಶಿಕ್ಷಕರು ಪಾಲಕರ ನಡುವಿನ ಸಂಬಂಧ ತುಸು ನಿರಾಶಾದಾಯಕ, ಆತಂಕಕಾರಿ ಎನಿಸುತ್ತದೆ… ಒಮ್ಮೆ ನೆನಪಿಸಿಕೊಳ್ಳೋಣ ನಮ್ಮ ಪ್ರಾಥಮಿಕ ಶಾಲಾ ದಿನಗಳನ್ನು. ಈಗಿನಂತೆ ಏನೆಂದರೆ ಏನೂ ಇಲ್ಲದ ದಿನಗಳವು, ಅಕ್ಕನ ಅಣ್ಣನ ಯುನಿಫಾರ್ಮ್, ಹಳೆ ಪುಸ್ತಕಗಳು, ಒಂದೇ ಪೆನ್ನು ಪೆನ್ಸಿಲ್ ಹೀಗೆ. ಸರ್ಕಾರದಿಂದ ಯಾವ ಸೌಲಭ್ಯವೂ ಇಲ್ಲದ ಕಾಲ ಅದು. ಬೆಳಿಗ್ಗೆ ಎಂಟು ಗಂಟೆಗೇ ಶಾಲೆ, ದಿನಕ್ಕೆ ನಾಲ್ಕು ಬಾರಿ ಕಾಲ್ನಡಿಗೆಯಲ್ಲಿ ಶಾಲೆ ಮನೆ ಅಂತ ಒಂದು ಎರಡು ಕಿಲೋಮೀಟರ್ ಕೆಲವರು ಇನ್ನೂ ದೂರದಿಂದ ನಡೆದು ಬರುವವರು. ವರ್ಷದ ಕೊನೆಯಲ್ಲಿ ನಡೆಯುವ ನೂರು ಅಂಕದ ವಾರ್ಷಿಕ ಪರೀಕ್ಷೆಗೆ ಹೇಗೆಲ್ಲಾ ಓದಿ ಸಜ್ಜಾಗುತ್ತಿದ್ದೆವು. ನಮ್ಮ ಪಾಲಕರಂತೂ ಶಾಲೆ ಕಡೆ ತಲೆ ಕೂಡ ಹಾಕುತ್ತಿರಲಿಲ್ಲ! ಶಿಕ್ಷಕರೆಂದರೆ ಮಕ್ಕಳಿಗೂ ಪಾಲಕರಿಗೂ ಅಷ್ಟೇ ಭಯ ಭಕ್ತಿ.
ಆದರೆ ಇಂದು ಎಲ್ಲವೂ ಉಚಿತ; ಹತ್ತಾರು ಸೌಲಭ್ಯ, ಯೋಜನೆಗಳು, ಪರೀಕ್ಷೆಯಂತೂ ತುಂಬಾ ಲಿಬರಲ್, ಉದಾರತೆ! ಇಷ್ಟಾಗಿಯೂ ಹಲವು ಮಕ್ಕಳಿಗೆ ಅಭ್ಯಾಸದ ಬಗ್ಗೆ ಶ್ರದ್ಧೆ ಇಲ್ಲ; , ಶಾಲೆ , ಶಿಕ್ಷಕರ ಬಗೆಗೆ ಪ್ರೀತಿ ಅಭಿಮಾನ
ಮೊದಲಿನಂತಿಲ್ಲ. ಪಾಲಕರಿಗೆ ಅಂಕವೇ ಮುಖ್ಯ; ಎಲ್ಲರಿಗೂ ತಮ್ಮ ಮಕ್ಕಳೇ ಫಸ್ಟ್ ಬರಬೇಕು! ಶಿಕ್ಷಕರ ಬಗೆಗೆ ಸದರ ಭಾವನೆ, ಮಕ್ಕಳ ಎದುರೇ ಶಿಕ್ಷಕರ ಬಗೆಗೆ ಆಡಿಕೊಳ್ಳುವುದು , ಶಾಲೆಗೆ ಬಂದು ಗದರುವುದು, ಕಡ್ಡಿಯನ್ನು ಗುಡ್ಡ ಮಾಡಿ ತಮ್ಮ ಮಕ್ಕಳ ಪರ ವಕಾಲತ್ತು ವಹಿಸುವುದು, ಅನಗತ್ಯವಾಗಿ ಶಾಲೆವರೆಗೆ ಮಕ್ಕಳ ಬ್ಯಾಗ್ ಹೊತ್ತು ಬರುವುದು, ಮತ್ತೆ ಸಂಜೆ ಬ್ಯಾಗ್ ಒಯ್ಯಲು ಬರುವುದು, ಮಕ್ಕಳ ಕೈಗೆ ಬಿಡಿಗಾಸು ಕೊಟ್ಟು ಕಳಿಸುವುದು , ಶಾಲೆಯಿಂದ ಬಂದೊಡನೆ ಟ್ಯೂಷನ್ ಗೆ ಕಳಿಸುವ ನಗರ ಸಂಸ್ಕೃತಿ, ಕಾನ್ವೆಂಟ್ ಸಂಸ್ಕೃತಿ ಹೀಗೆ..
ಈ ತರದ ಮನಸ್ಥಿತಿಯ ಕೆಲ ಪಾಲಕನ್ನು ಅಲ್ಲಲ್ಲಿ ಕಾಣುತ್ತೇವೆ. ಇವೆಲ್ಲವೂ ಆ ಕ್ಷಣಕ್ಕೆ ಪರಿಣಾಮ ಬೀರಲಾರವು ಆದರೆ ಮಕ್ಕಳಲ್ಲಿ ಹಿರಿಯರು , ಶಿಕ್ಷಕರ ಬಗೆಗೆ ಉಡಾಫೆ ಧೋರಣೆ, ಮೈಗಳ್ಳತನ, ಅಂಗಡಿ ತಿಂಡಿ ತಿನ್ನುವ ಶೋಕಿ, ತಾವೇನು ಮಾಡಿದರೂ ತಮ್ಮ ಹಿಂದೆ ಪಾಲಕರಿರುತ್ತಾರೆ ಎಂಬ ಬೇಜವಾಬ್ದಾರಿತನ , ಶಿಕ್ಷಕರ ವಿರುದ್ಧ ಪಾಲಕಲ್ಲಿ ದೂರುವ ದುರ್ಗುಣವನ್ನು ಬೆಳೆಸದೇ ಇರದು! ಹಿಂದೆಲ್ಲಾ ಕಾಣದ ,ಕೇಳದ ಇಂತಹ ಸನ್ನಿವೇಶಗಳು ಇತ್ತೀಚೆಗೆ ಅಲ್ಲಲ್ಲಿ, ಆಗಾಗ ಘಟಿಸುತ್ತಿರುವುದು ವಿಷಾದದ ಸಂಗತಿ. ಇವೆಲ್ಲ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಧನಾತ್ಮಕ ಅಂಶವಲ್ಲ.. ಮಕ್ಕಳ ವಿಷಯದಲ್ಲಿ ಪಾಲಕರ ಅತಿ ಸ್ವಾರ್ಥ ಧೋರಣೆ ಸಹ್ಯವಲ್ಲ. ಹೀಗಾಗಿ ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಮುಂದೆ ಕೂಡ ಬಹು ದೊಡ್ಡ ಸವಾಲಿದೆ ; ಗುರುತರ ಜವಾಬ್ದಾರಿಯೂ ಇದೆ.ಹೇಗಾದರೂ ನಡೆದೀತು ಎಂಬ ಕಾಲ ಮುಗಿದಿದೆ. ಹಿಂದಿಗಿಂತ ಹತ್ತು ಪಟ್ಟು ಹೆಚ್ಚು ಸಂಬಳ ಪಡೆಯುತ್ತೇವೆ ಎಂಬ ಸತ್ಯ ಸದಾ ಜಾಗೃತರನ್ನಾಗಿರಿಸಬೇಕು. ಕರ್ತವ್ಯದ ಜೊತೆಗೆ ಸೇವಾ ಮನೋಭಾವ, ಇಚ್ಛಾಶಕ್ತಿಯೂ ಬೇಕು.
ಹಾಗಂತ ಇಂದಿಗೂ ವಿದ್ಯೆ ಕಲಿಸಿದ ಗುರುಗಳನ್ನು ಅತ್ಯಂತ ಗೌರವದಿಂದ ಕಾಣುವ ಹಲವು ಪಾಲಕರು ಇದ್ದಾರೆ . ಮೇಲಾಗಿ ಶ್ರದ್ಧೆ ಪ್ರಾಮಾಣಿಕತೆ, ಇಚ್ಛಾ ಶಕ್ತಿಯಿಂದ ಕೆಲಸ ಮಾಡುವ ಶಿಕ್ಷಕರಿಗೆ ಮಾನ ಸಮ್ಮಾನ ಯಾವತ್ತೂ ಇದೆ.
. ಇನ್ನೂ ಒಂದು ಬೇಸರದ ಸಂಗತಿ ಮಾರಿ ಕೊರೋನಾ ಇಡೀ ಜಗತ್ತಿನ ಆರ್ಥಿಕ , ಸಾಮಾಜಿಕ ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದು ಮಾತ್ರವಲ್ಲ; ಶಿಕ್ಷಣ ಕ್ಷೇತ್ರದಲ್ಲಿ ತುಂಬಲಾರದ ದೊಡ್ಡ ನಷ್ಟವನ್ನೇ ಉಂಟುಮಾಡಿದೆ.
. ದೀರ್ಘಕಾಲದ ಕಲಿಕೆಯಿಂದ ದೂರ ಉಳಿದ ಬಹುತೇಕ ಮಕ್ಕಳು ಅಭ್ಯಾಸದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಅಲ್ಲದೆ
ಮೊಬೈಲ್ ಅನ್ನುವ ಮಾಯಾಂಗನೆಯಿಂದ ದೂರವಿದ್ದ ಪ್ರಾಥಮಿಕ ಶಾಲಾ ಮಕ್ಕಳ ಕೈಗೂ ಮೊಬೈಲ್ ಬಂದಿದೆ! ಸ್ಮಾರ್ಟ್ ಫೋನ್ ಬಂದಮೇಲೆ ಮಕ್ಕಳಿಗೂ ವರ್ಗ ಕೋಣೆಯ ಕಲಿಕೆ ಆಸಕ್ತಿದಾಯಕವಾಗಿಲ್ಲ; ಶಿಕ್ಷಕರು ರೋಲ್ ಮಾಡೆಲ್ ಗಳೂ ಅಲ್ಲ. ಕಣ್ಣಿಗೆ ಮನಸ್ಸಿಗೆ ಹಿತ ನೀಡುವ ಬೇಕಾದ ಎಲ್ಲವೂ ಅಂಗೈಯಲ್ಲಿ ದೊರಕುವಂತಾದ ಮೇಲೆ ಕಷ್ಟಪಟ್ಟು ಕೇಳುವ ,ಓದುವ ಸಹನೆ ಕಳೆದುಹೋಗಿದೆ. ಬೇಕಾದ ಎಲ್ಲಾ ಮಾಹಿತಿ ಅಂಕಿ ಅಂಶ ಪ್ರಬಂಧ ಎಲ್ಲಕ್ಕೂ ಮೊಬೈಲ್ ನಲ್ಲಿ ತಕ್ಷಣದಲ್ಲಿ ಹುಡುಕಿ ಉತ್ತರ ಕಂಡುಕೊಳ್ಳುತ್ತಾರೆ ಮೊಬೈಲ್ ವೀರರು!ಹೀಗಾಗಿ ಶ್ರಮಪಟ್ಟು ಓದುವ, ತಡಕಾಡುವ, ಓದಿದ್ದನ್ನು ನೆನಪಿಟ್ಟುಕೊಳ್ಳುವ, ಗ್ರಹಿಸುವ ಮನೋಭಾವ ದೂರವಾಗಿದೆ. ಎಲ್ಲದಕ್ಕೂ ಅವಲಂಬನೆ ಹೆಚ್ಚಾಗಿದೆ. ಮತ್ತೆ ಕೆಲ ಪಾಲಕರು ಹುಟ್ಟಿನಿಂದಲೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವ, ಚಿತ್ರ ತೋರಿಸುವ ಕೆಟ್ಟ ಪರಿಪಾಠವನ್ನು ಬೆಳೆಸುತ್ತಿದ್ದಾರೆ . ಹಿಂದೆ ಮನೆ ಮನೆಯಲ್ಲಿ ಹೇಳಿಸುತ್ತಿದ್ದ ‘ ಬಾಯಿಪಾಠ’ ಸಂಸ್ಕಾರವೇ ಕಣ್ಮರೆಯಾಗಿದೆ!!. ಎಳೆದಷ್ಟೂ ಹಿಗ್ಗುವ ಅಸಂಬದ್ಧ ಧಾರವಾಹಿಗಳೇ ಹಲವು ಮನೆಗಳ ಮುಸ್ಸಂಜೆಯ ಮಂತ್ರಾಕ್ಷತೆ ಆಗಿದೆ ! ಹೀಗಾಗಿ ಇಂದು ಬಾಯಿಪಾಠ ಹೇಳಿಸಲು ಬಹುತೇಕ ಅಮ್ಮಂದಿರಿಗೆ ಪುರುಸೊತ್ತಿಲ್ಲ.ಇದರಿಂದ ನಮ್ಮ ಮಕ್ಕಳಿಗೆ ಪಂಚಾಂಗ , ಹಬ್ಬ, ಹರಿದಿನ ಇದಾವುದರ ಗಂಧಗಾಳಿ ಇಲ್ಲ. ಶಾಲೆಯಲ್ಲಿ ಪ್ರಾರ್ಥನೆ ವೇಳೆಯಲ್ಲಿ ಯಾಂತ್ರಿಕವಾಗಿ ಪಠಿಸುತ್ತಾರಷ್ಟೆ! ಬಾಯಿಪಾಠ ಬರೀ ಕಂಠಪಾಠ ಮಾತ್ರವಲ್ಲ; ನಮ್ಮ ನಿತ್ಯ ಜೀವನದ ಜಾತಕವದು. ಇವೆಲ್ಲವನ್ನು ಕಲಿಸುವ ಉತ್ತಮ ಸಂಸ್ಕಾರ ಮನೆಯಿಂದಲೇ ಆರಂಭವಾಗಬೇಕು. ಕನ್ನಡ ಶಾಲೆಯಲ್ಲಿ ಓದುವ ಯಾವೊಬ್ಬ ಮಗುವಿಗೂ ಟ್ಯೂಷನ್ ಅಗತ್ಯ ಇಲ್ಲ. ಇವೆಲ್ಲವೂ ಪಾಲಕರ ಪ್ರೆಸ್ಟೀಜ್ ಡಿಗ್ನಿಟಿಗಾಗಿ ಅಷ್ಟೇ. ಪಾಲಕರು ಮಕ್ಕಳು ಅಭ್ಯಾಸ ಮಾಡುವುದನ್ನು ವೀಕ್ಷಣೆ ಮಾಡಿದರೆ ಅಥವಾ ಅಂದಿನ ಕೆಲಸ ಅಂದೇ ಮಾಡಲು ಪ್ರೇರೇಪಿಸಿದರೇ ಸಾಕು.
ಹಳ್ಳಿ ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಕಾನ್ವೆಂಟ್ಗಳಿಂದಾಗಿ ಕನ್ನಡ ಶಾಲೆಗಳು ಕುಂಟುತ್ತಿರುವ ಪರಿಸ್ಥಿತಿ ಒಂದೆಡೆಯಾದರೆ ಹುಟ್ಟಿದ ಮಕ್ಕಳಿಗೆ ಅಮ್ಮ ,ಅಪ್ಪ ಬೆಕ್ಕು ,ನಾಯಿ ಎಂದು ಮುದ್ದು ಮುದ್ದಾಗಿ ಅಚ್ಚ ಕನ್ನಡದಲ್ಲಿ ಕಲಿಸುವ ಬದಲು ಮಮ್ಮಿ ಡ್ಯಾಡಿ ಕ್ಯಾಟ್, ಡಾಗ್ ಎಂದು ಹರಕು ಮುರುಕು ಇಂಗ್ಲಿಷ್ ಕಲಿಸಿ ಮಾತೃ ಭಾಷೆಯ ಮೇಲಿನ ಹಿಡಿತ, ಪ್ರೀತಿ ಅಭಿಮಾನ ಗ್ರಾಮೀಣ ಪ್ರದೇಶದಲ್ಲಿಯೂ ಕಡಿಮೆಯಾಗುತ್ತಿರುವುದು ದೊಡ್ಡ ದುರಂತ…
ಎಲ್ಲ ಪರಿಹಾರ ಪಾಲಕರ, ಶಿಕ್ಷಕರ ಬಳಿಯೇ ಇದೆ. ಮಕ್ಕಳಿಗಾಗಿ ಹೆಚ್ಚಿನ ಸಮಯ ಮೀಸಲಿಡುವುದು ,ಮಕ್ಕಳು ಕೆಲಸ ಮಾಡುವಾಗ ವೀಕ್ಷಿಸುವುದು, ಮಾರ್ಗದರ್ಶಿಸುವುದು, ಮೊಬೈಲ್ ಬದಿಗಿಟ್ಟು ತಾವು ಕೂಡ ಪುಸ್ತಕ ಓದುವ, ಮನೆಗೆ ದಿನಪತ್ರಿಕೆ ತರಿಸುವ, ಮಕ್ಕಳಿಂದ ಓದಿಸುವ ರೂಢಿ ಅಗತ್ಯವಿದೆ…
ಸುವಿಧಾ ಹಡಿನಬಾಳ