ಕಾವ್ಯ ಸಂಗಾತಿ
ಸುರೇಶ್ ಕಲಾಪ್ರಿಯಾ
ಗಜಲ್
ಮನವಾದವಳಿಂದು ಮರೆಯಾದುದ ಕಂಡು ನೋಯುತ್ತಿದೆ ಜೀವ
ಸದಾ ಅವಳ ನೆನಪ ಹೊದ್ದು ಬೇಯುತ್ತಿದೆ ಜೀವ
ಕಾರಣವ ತಿಳಿಸದೇ ಮೌನಿಯಾದಳು ಅವಳು
ಕಾದ ಕಾವಲಿಯಲಿ ಕುಳಿತಂತೆ ಸೀಯುತ್ತಿದೆ ಜೀವ
ನಿರೀಕ್ಷಿಸದೇ ಜೊತೆಯಾದಳಂದು ಆಕಸ್ಮಿಕ ಮಾತಿನಲಿ
ನೋವ ಮಡುವಿನಲಿ ಕೆಡವಿ ಹೋದವಳ ನೆನೆದು ಕುದಿಯುತ್ತಿದೆ ಜೀವ
ಕಳೆದುಕೊಳ್ಳುವುದಾದರೂ ಏನು ನಾಲ್ಕು ದಿನದ ಬದುಕಿನಲಿ
ಹಠವಾದಿಯಂತೆ ಮಾತ ಮರೆತವಳ ನಡೆಗೆ ನಲುಗುತ್ತಿದೆ ಜೀವ
ಗಟ್ಟಿಯಾಗಿ ಅವಳ ಮರೆತುಬಿಡು ಎನ್ನುತ್ತಿದೆ ಮನಸ್ಸು
ಮಾತಿಗೆ ಮರಳುವಳೇನೋ ಎನ್ನುತಾ ನಿರೀಕ್ಷಿಸುತ್ತಿದೆ ಜೀವ
ಬಿಡುವುದಾಗಿದ್ದರೆ ಹೀಗೆ ಜೊತೆಯಾದದ್ದೇಕೆ? ಮನದ ಪ್ರಶ್ನೆ
ಉತ್ತರದ ನಿರೀಕ್ಷೆಯಲ್ಲಿ ದಿನ ದಿನಗಳಿಂದ ಕಾಯುತ್ತಿದೆ ಜೀವ
ನೋವೇ ಮುಳ್ಳಿನ ಹಾಸಿಗೆಯಾಗಿದೆ ‘ಕಲಾಪ್ರಿಯಾ’ ನ ಬದುಕಿಗೆ
ಅವಳ ಸಿಹಿಯ ಮಾತಿಗೆ ಕಾದು ಹಂಬಲಿಸುತ್ತಿದೆ ಜೀವ
ಸುರೇಶ್ ಕಲಾಪ್ರಿಯಾ