ಕಾವ್ಯ ಸಂಗಾತಿ
ಅನ್ನಪೂರ್ಣ ಹಿರೇಮಠ
ಗಜಲ್
ಮನದ ಮಾಮರವು ಬಾಡಿ ಬರಡಾಗಿದೆ ಗೆಳೆಯಾ
ತನುವ ತಲ್ಲಣ ಕಾಡಿ ಕದಡಿ ಕೊರಡಾಗಿದೆ ಗೆಳೆಯಾ
ಬಿರುಗಾಳಿಯೇ ಬೀಸಿ ಬೀಸಿ ಸುತ್ತುತ ದಣಿವಾಗಿಸಿದೆ
ನೋಡುವ ಕಂಗಳಿನ ದೃಷ್ಟಿ ಕುರುಡಾಗಿದೆ ಗೆಳೆಯಾ
ಸುಡು ಬಿಸಿಲು ಸೋಕಿ ಸೋಕಿ ಮೈಸುಟ್ಟು ಹೋಗಿದೆ
ದೇಹವೀಣೆಯಾ ತಂತಿ ಬಿಗಿದು ಜಡವಾಗಿದೆ ಗೆಳೆಯಾ
ಉಸಿರಾಟಕೆ ಬಿಸಿ ಗಾಳಿ ತಾಕಿ ತಾಕಿ ಜೀವ ಬೇಸತ್ತಿದೆ
ಅಡೆತಡೆಗಳ ಸುಳಿಗೆ ಸಿಕ್ಕಿ ಪಯಣ ತಡವಾಗಿದೆ ಗೆಳೆಯಾ
ಕಷ್ಟದಬ್ಬರದ ಕಡಲ ತೆರೆಗಳುಕ್ಕಿ ಉಕ್ಕಿ ದಡ ಕೊರೆದಿದೆ
ಆಸರೆ ಇಲ್ಲದಲೆ ಮನ ನರಳುತ ಬಡವಾಗಿದೆ ಗೆಳೆಯಾ
ನೋವಿನಲೆಗಳ ದುಃಖಸಾಗರ ಬಿಕ್ಕಿ ಬಿಕ್ಕಿ ಬತ್ತಿ ಹೋಗಿದೆ.
ಅಂತರಂಗದ ಭರವಸೆ ಕುಗ್ಗಿ ಕೊರಗಿ ಕೃಷವಾಗಿದೆ ಗೆಳೆಯಾ
ಹೃದಯ ತಮಟೆ ಬಡಿದು ಬಡಿದು ಅನುಳ ಭಾವ ತಡಕಾಡಿದೆ
ತೋಳಸೆರೆ ಬಯಸಿ ಚಾಚಿರುವ ಕೈ ಸೋತೋಗಿದೆ ಗೆಳೆಯಾ
ಅನ್ನಪೂರ್ಣ ಹಿರೇಮಠ