ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥಾ ಸಂಗಾತಿ

ಬಿ.ಟಿ.ನಾಯಕ್

ಕದಡಿದ ಮನ ನಲಿಯಿತು

ರಾಮಾಂಜನಪ್ಪ ಮತ್ತು ನಾರಾಯಣಪ್ಪ ಇಬ್ಬರು ಒಳ್ಳೆಯ ಸ್ನೇಹಿತರು. ಕನಿಷ್ಠ ವಾರಕ್ಕೊಮ್ಮೆಯಾದರೂ ಅವರು ಪರಸ್ಪರ ಭೇಟಿಯಾಗುತ್ತಿದ್ದರು. ಅವರವರ ಮನೆಗಳು ಪರಸ್ಪರ ಒಂದರ್ಧ ಕಿಲೋ ಮೀಟರ್ ದೂರದಲ್ಲಿ ಇದ್ದವಾದರೂ, ಅವರು ಇಬ್ಬರೂ ಸೇರಿ ತಮ್ಮ ಕಷ್ಟ ಸುಖಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಲ್ಲದೇ, ಅವರವರ ಕುಟುಂಬದವರು ಇವರ ಸ್ನೇಹ ನೋಡಿ ಆನಂದ ಪಡುತ್ತಿದ್ದರು. ಆ ಸಲಿಗೆಯಿಂದ ಎರಡೂ ಕುಟುಂಬಗಳು ಒಬ್ಬರಿಗೊಬ್ಬರು                                                                                                                     ನೆರಳಿನಂತೆ ಇದ್ದರು.

ಹಾಗಿರುವಾಗ, ಒಂದು ದಿನ ನಾರಾಯಣಪ್ಪ ಬೆಳಗ್ಗೆ ಎಂಟು ಗಂಟೆಗೆಲ್ಲಾ ರಾಮಂಜನಪ್ಪನ ಮನೆಗೆ ಧಾವಿಸಿ ಬಂದನು. ಬಂದವನೇ, ರಾಮಂಜನಪ್ಪನನ್ನು ಕಂಡು ;
‘ರಾಮಣ್ಣ ನಿನ್ನ ಜೊತೆ ಮಾತಾಡುವುದಿದೆ ಸ್ವಲ್ಪ ಹೊರಗೆ ಹೋಗೋಣ ಬಾ.’ ಎಂದ.
‘ನಾರಾಯಣ ನಿನ್ನ ಸಮಸ್ಯೆ ಏನು ?ಇಲ್ಲೇ ಮಾತಾಡಿ ಬಿಡೋಣ. ಇಲ್ಲಿ ಯಾವ ಅಡೆ ತಡೆಗಳಿಲ್ಲ’ ಎಂದ ರಾಮಾಂಜನಪ್ಪ.
‘ಏಕೋ ನನಗೆ ದುಃಖ ಒತ್ತಿ ಬರುತ್ತಿದೆ. ನಿನ್ನ ಶ್ರೀಮತಿ ಅದನ್ನು ನೋಡಿದರೇ ಕಷ್ಟ.’ ಎಂದಾಗ;
‘ಹಾಗಾದರೇ ಮೇಲಿರುವ ಕೋಣೆಗೆ ಹೋಗೋಣ ನಡೆ’ ಎಂದು ಮೇಲ್ಮಾಳಿಗೆ ಕಡೆ ಹೋಗುವಾಗ ರಾಮಂಜನಪ್ಪನವರ ಶ್ರೀಮತಿ ಚಹಾದೊಂದಿಗೆ ಬಂದೇ ಬಿಟ್ಟಳು.
‘ಅಣ್ಣಾ ಚಹಾ ಸೇವನೆಮಾಡಿ’ ಎಂದಳು.
‘ಆಯ್ತಮ್ಮಾ ಕೊಡಿ’ ಎಂದು ಚಹಾ ಪಡೆದು ಗುಟುಕು ಹಾಕುತ್ತಲೇ ಇದ್ದಾಗ ಕೂಡಾ                                      ಆತ ಚಿಂತಿಸುತ್ತಿದ್ದ. ಅದನ್ನು ಗಮನಿಸಿದ ರಾಮಾಂಜನಪ್ಪ ;
‘ಅಯ್ಯೋ ಬಿಡುನಾರಾಯಣ..ನಿನ್ನ ಚಿಂತೆ ಚಿಟಿಕೆ ಹೊಡೆಯುವದರಲ್ಲಿ ಸರಿ ಮಾಡಿಬಿಡ್ತೇನೆ. ಈಗ ಲಕ್ಷ್ಯ ಕೊಟ್ಟು ಚಹಾ ಕುಡಿ’ ಎಂದ.
‘ಆಯ್ತು ಕಣಪ್ಪ’ ಎಂದು ಚಹಾ ಸೇವನೆ ಮಾಡಿದ ಇಬ್ಬರೂ ಮೇಲ್ಮಾಳಿಗೆ ಮನೆಗೆ ಹೋದರು.
ಅಲ್ಲಿ ನಾರಾಯಣಪ್ಪ ರಾಮಾಂಜನಪ್ಪನ ಎರಡೂ ಕೈ ಗಳನ್ನು ಗಟ್ಟಿಯಾಗಿ ಹಿಡಿದು ಆತನ ಮುಖ ನೋಡಿ ಗೊಳೋ ಎಂದು ಆಳತೊಡಗಿದ.
‘ಏನು ಸಮಸ್ಯೆ ಹೇಳು ನಾರಾಯಣ?’ ಎಂದಾಗ;
‘ಅಯ್ಯೋ ..ಅದ್ಹೇಗೆ ಹೇಳಲಿ. ಇಂದು ನಾನು ನನ್ನ ಸೊಸೆಗೆ ಹೀಗೆ ಹೇಳಿದೆ;
‘ಏನಮ್ಮಾ ಆಶಾ, ಅದೇನು ನಿನ್ನ ಯಜಮಾನ ಅಂದ್ರೇ ನನ್ನ ಮಗ ಏನೂ ತಿಂಡಿ ತಿನ್ನದೆಯೇ ಆಫೀಸಿಗೆ ಹೊರಟು ಹೋದ. ಸ್ವಲ್ಪ ಬೇಗ ಎದ್ದು ಏನಾದರೂ ತಿಂಡಿ ಮಾಡಿ ಕೊಡಬಹುದಿತ್ತಲ್ಲ. ನಿನಗೆ ಆಷ್ಟು ಸೋಮಾರಿತನವೇ ?’ ಎಂದಾಗ ಅದಕ್ಕವಳು;
‘ನನಗೆ ತಿಳಿಸದೆಯೇ ಹಾಗೆ ಒಮ್ಮಿಂದಮ್ಮೆಲೇ ತಯಾರಾಗಿ ಹೊರಡುವಾಗ ನಾನು ಏನು ತಾನೆ ಮಾಡಬಲ್ಲೆ ಮಾವ ?’ ಎಂದು ಮರು ಪ್ರಶ್ನೆ ಮಾಡಿದಳು. ಆಗ ನಾನು;
‘ಅದೆಂಥವಳು ನೀನು, ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ, ಅವನ ಮನಸ್ಸನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದ ಹಾಗಾಯಿತು’ ಎಂದಾಗ;.
‘……… ‘ ಅವಳು ಅದಕ್ಕೆ ಏನೂ ಉತ್ತರ ಕೊಡಲಿಲ್ಲ.
‘ಇಷ್ಟೇ..ಆದದ್ದು ರಾಮಣ್ಣ. ಆದರೇ, ಆಶಾ ಅಳ ತೊಡಗಿದಳು. ಅವಳು ಅಳುವದನ್ನು ನೋಡಿ ನಿನ್ನ ಅತ್ತಿಗೆ ಭಾಗಾ ನನ್ನನ್ನೇ ಗುರಿ ಮಾಡಿ ;
‘ನಿಮಗೇಕೆ ಬೇಕಿತ್ತು ಉಸಾಬರಿ.  ಅವಳುಂಟು ಅವಳ ಸಂಸಾರ ಉಂಟು. ಸುಮ್ಮನೇ, ಅದರಲ್ಲಿ ಯಾಕೆ ತಲೆ ಹಾಕಿದಿರಿ’ ಎಂದಳು. ಅಂತೂ ಇಂತೂ ಇಬ್ಬರೂ ಸೇರಿ ನನಗೆ ಉಗಿದ ಹಾಗೆ ಆಯಿತು. ಇದರಲ್ಲಿ ನನ್ನ ತಪ್ಪು ಏನಿದೆ ರಾಮಣ್ಣ ?’
‘ಓ…ಹೀಗಾಯಿತಾ ?.ಈಗಿನ ಕಾಲದ ಹುಡ್ಗಿಯರ ಕೋಪ ಮೂಗಿನ ಮೇಲೆಯೇ.’ ಎಂದು ಹೇಳಿ;
‘ಈಗ ಸಮಸ್ಯೆ ಏನಾಗಿದೆ ?.ಏನೂ ಅನಿಸ್ತಾ ಇಲ್ಲವಲ್ಲ?’
‘ನೀನು ಹಾಗೆ ತಿಳಿದುಕೊಂಡಿಯಾ.  ಆದರೇ, ಅತ್ತೆ ಸೊಸೆ ಇಬ್ಬರೂ ಸೇರಿ ನನ್ನನ್ನು ತೊಳೆದು ಬಿಟ್ಟದ್ದೇ ನನ್ನ ದುಃಖ. ‘ ಏಂದಾಗ;
‘ಸರಿ..ನಾನು ಬರಲೇ ..ಅವರಿಗೆ ತಿಳುವಳಿಕೆ ಹೇಳಲೇ ?’
‘ಹೌದು ರಾಮಣ್ಣ, ನೀನು ಹೊರಗಿನವನಾದ್ರೂ ನನ್ನ ಪರಮ ಸ್ನೇಹಿತ. ನೀನೇ ಈಗ ಮನೆಯಲ್ಲಿನ ಮೋಡ ಕವಿದ ವಾತಾವರಣವನ್ನು ತಿಳಿ ಮಾಡಬೇಕು’ ಎಂದ.
ಆಮೇಲೆ ಇಬ್ಬರೂ ಅಲ್ಲಿಂದ ಹೊರಟು ನಾರಾಯಣಪ್ಪನ ಮನೆ ತಲುಪಿದಾಗ, ರಾಮಣ್ಣನನ್ನು ಭಾಗಮತಿ ಒಳಕ್ಕೆ ಕರೆದಳು.ಆಗ ಆಕೆ ಹೀಗೆ ಹೇಳಿದಳು;
‘ಅಣ್ಣಾ ಚಹಾ ತರುತ್ತೇನೆ’ ಏಂದು ಹೊರಡಲನುವಾಗಾಗ, ಆಕೆಯನ್ನು ತಡೆದ ರಾಮಾಂಜನಪ್ಪ ಹೀಗೆ ಠೀಕೆಗಳ ಪ್ರಹಾರ ಆರಂಭಿಸಿದ.
‘ಏನು ಅತ್ತಿಗೆ, ನೀವೂ ನಿಮ್ಮ ಸೊಸೆ ಸೇರಿ ನನ್ನ ಸ್ನೇಹಿತನನ್ನು ಚೆನ್ನಾಗಿ ರುಬ್ಬಿ ಬಿಟ್ಟೀದ್ದೀರಿ . ಏನು ಆತನ ಮಾತಿಗೆ ಬೆಲೆನೇ ಇಲ್ವಾ ?
ಆಗ ಭಾಗಮ್ಮ ನಾರಾಯಣಪ್ಪನ ಕಡೆ ನೋಡಿ ತನ್ನ ಕೆಂಗಣ್ಣು ಬೀರಿದಳು.ಅಲ್ಲೇ ಹತ್ತಿರದಲ್ಲಿ ಇದ್ದ ಸೊಸೆ ಆಶಾ ಕೂಡಾ ಇವರ ಮಾತು ಕೇಳಿ ದುಃಖಿತಳಾದಳು. ಆಶಾಳನ್ನು ನೋಡಿ ರಾಮಣ್ಣ ಹೀಗೆ ಛೇಡಿಸಿದ;
‘ಏನಮ್ಮ ಮಗಳೇ, ಹಿರಿಯರನ್ನು ಗೌರವಿಸುವುದು ನಿನಗೆ ಹೇಳಬೇಕೇ ? ಈ ಸಂಸ್ಕಾರ ನೀನು ತವರಿನಿಂದ ಬರುವಾಗ ತಂದಿಲ್ಲವೇ ?  ‘ಆಗ ಮಧ್ಯದಲ್ಲಿ ಭಾಗಮ್ಮ ಮಾತಾಡಿದಳು;
‘ಏನಣ್ಣ, ಏನೋ ಅನಾಹುತ ಆಗಿದೆ ಏಂದ ಹಾಗೆ ಹೇಳುತ್ತಿದ್ದೀರಾ. ನಮ್ಮನೆಯವರು ನಿಮ್ಮ ತಲೆಗೆ ಅದೇನು ತುಂಬಿದರು ?’
‘ಯಾಕಮ್ಮ ನೀನೂ ಸಹ ನನ್ನ ಸ್ನೇಹಿತನ ಗೋಳಿಗೆ ಇನ್ನೂ ಖಾರ ಹಾಕ್ತಿಯಾ.?’ ಎಂದನು ರಾಮಣ್ಣ.
‘ಇದರ ಬಗ್ಗೆ ನನಗೆ ಏನೂ ಅರ್ಥವಾಗದ ಹಾಗಿದೆ.  ನೀವು ಏನಾದರೂ ಮಾಡಿ ಕೊಳ್ಳಿ’ ಎಂದು ಸರ ಸರನೇ ಅಲ್ಲಿಂದ ಭಾಗಾ ಹೊರಟು ಹೋದಳು. ಆಗ ಆಶಾ ಕೂಡ ಮುಖ ತಿರುಗಿಸಿಕೊಂಡು ಒಳಕ್ಕೆ ಹೋದಳು. ಈಗ ನಿಜವಾಗಿಯೂ ಕಾರ್ಮೋಡ ಕವಿದು ಕತ್ತಲಾಯಿತು.  

ಅತ್ತೆ ಸೊಸೆ ಹೋದ ಮೇಲೆ ರಾಮಣ್ಣ ಹಾಗು ನಾರಾಯಣಪ್ಪ ಸ್ವಲ್ಪ ಹೊತ್ತು ಏನೂ ತೋಚದೆಯೇ ಹಾಗೆಯೇ ಸುಮ್ಮನೇ ಕುಳಿತು ಕೊಂಡರು.  ಆಮೇಲೆ ರಾಮಣ್ಣ ತಮ್ಮ ಮನೆಗೆ ಹೊರಟು ಹೋದ. ಇತ್ತ ನಾರಾಯಣಪ್ಪ ತಲೆ ಮೇಲೆ ಕೈ ಹೊತ್ತು ಮೂಕನಾಗಿ ಕುಳಿತು ಬಿಟ್ಟನು.
ಅದಾದ ಮೇಲೆ ಅತ್ತೆ, ಸೊಸೆ ಗೋಜಿಗೆ ಹೋಗದೇ ನಾರಾಯಣಪ್ಪ ಒಂದು ರೂಮಿನೊಳಕ್ಕೆ ಹೋಗಿ ಕುಳಿತುಕೊಂಡನು. ಏಕೋ ಆತನ ಮನಸ್ಸು ತಳಮಳಗೊಂಡಿತು. ಆತನಿಗೆ ಆಗ ಹಸಿವು ಕೂಡಾ ಆಗಿತ್ತು. ಅವೆರಡೂ ಶಮನವಾಗಬೇಕಾದರೆ,  ಭಾಗಮ್ಮಳ ಬಳಿ ಹೋಗಿ ತಪ್ಪಿನ ಅರಿವನ್ನು ನಿವೇದಿಸಿ ಕೊಳ್ಳಬೇಕೆಂದಿನಿಸಿತು.
ಆಗ ತಮ್ಮ ಕೋಣೆಯಿಂದ ಹೊರಗೆ ಬಂದು ಭಾಗಮ್ಮಳನ್ನು ಹುಡುಕಿದನು.  ಆದರೇ, ಆಕೆ ಎಲ್ಲಿಯೂ ಕಾಣ ಸಿಗಲಿಲ್ಲ. ಆಮೇಲೆ, ಆಶಾಳ ಕೋಣೆಗೆ ಹೋದಾಗ ಅಲ್ಲಿ ಆಕೆ ಕೂಡಾ ಇರಲಿಲ್ಲ. ಅದಾದ ಮೇಲೆ. ಅಡುಗೆ ಕೊಣೆಯಲ್ಲಿ ಹೋದಾಗ ಅಲ್ಲಿ ಇಬ್ಬರೂ ಕಾಣಲಿಲ್ಲ. ಇದೇನಿದು ಇಬ್ಬರೂ ಕಾಣುತ್ತಿಲ್ಲವಲ್ಲ ಎಂದು ಮನೆಯಿಂದ ಹೊರಗೆ ಬಂದು ಇಣುಕಿ ನೋಡಿದ. ಏನೋ ಅನುಮಾನ ಮೂಡಿ ಮನೆಯ ಮೇಲ್ಛಾವಣಿಗೆ ಹೋದ. ಅಲ್ಲಿಯೂ ಯಾರೂ ಕಾಣಲಿಲ್ಲ. ಈಗ ಮನಸ್ಸಿಗೆ ಆತಂಕವಾಯಿತು.  ಆತನ ಚಡ ಪಡಿಕೆ ಹೆಚ್ಚಾಯಿತು. ಸುಮಾರು ಒಂದು ಗಂಟೆಯಾಯಿತು ಅವರಿಬ್ಬರ ಸುಳಿವೇ ಇಲ್ಲದ ಹಾಗೆ ಆಯಿತು. ಹಾಗೆಯೇ ತಡವರಿಸುತ್ತಾ ಪಕ್ಕದ ಮನೆಯ ಅಂಬುಜಾಕ್ಷಮ್ಮನಲ್ಲಿ ವಿಚಾರಿಸಲು ಹೋದಾಗ;
‘ಅಣ್ಣಾ..ಅವರ್ಯಾರೂ ಇಲ್ಲಿಗೆ ಬಂದಿಲ್ಲ. ಏಕೆ ಅವರು ನಿಮಗೆ ಏನೂ ತಿಳಿಸದೆಯೇ ಹೊರಗೆ ಹೋಗಿದ್ದಾರೆಯೇ ?’ ಎಂದು ಏನೆಲ್ಲಾ ಕೇಳಿದಾಗ ನಾರಾಯಣಪ್ಪ ತೆಪ್ಪಗೆ ಅಲ್ಲಿಂದ ಮರಳಿದನು.
ಈಗ ಸ್ನೇಹಿತ ರಾಮಂಜನ ಬಳಿ ಹೋಗಬೇಕೆಂದಿನಿಸಿತು. ಆದರೇ, ಆತನ ಬಳಿ ಹೋಗಿ ಬಂದದ್ದೇ ದೊಡ್ಡ ರಾದ್ಧಾಂತವಾಗಿದೆ, ಮತ್ತೇ ಈಗ ಆತನ ಬಳಿ ಹೋದರೇ, ಇದ್ದ ಸಮಸ್ಯೆ ಇನ್ನಷ್ಟು ಜಟಿಲವಾದರೆ ಏನು ಮಾಡೋದು ? ಹಾಗಾಗಿ, ಆತನ ಬಳಿ ಹೋಗುವ ವಿಚಾರ ಕೈ ಬಿಟ್ಟ.
ಸುಮಾರು ಎರಡೂವರೆ ಗಂಟೆಗಳಾದರೂ ಅತ್ತೆ, ಸೊಸೆ ಇಬ್ಬರೂ ಬರಲಿಲ್ಲ. ಈಗ
ನಾರಾಯಣಪ್ಪ ನಿಜವಾಗಿಯೂ ಗಾಭರಿಗೊಂಡನು. ಆಗ ದೇವರ ಕೊಣೆಗೆ ಹೋಗಿ, ಕಣ್ಮುಚ್ಚಿ ನಿಂತು ಮನದಲ್ಲಿ ‘ದೇವರೇ, ನನ್ನ ಸಮಸ್ಯೆಗೆ ಪರಿಹಾರ ನೀಡು’ ಎಂದು ಪ್ರಾರ್ಥಿಸಿದನು.
ಅಲ್ಲದೇ, ಇನ್ನು ಮುಂದೆ ಮನೆಯಲ್ಲಿ ಏನೇ ವಿಚಾರಗಳು ಬರಲಿ ಅಥವಾ ವಿವಾದಗಳು ಬಂದರೂ ಅದರಲ್ಲಿ ನಾನು ತೂರುವುದಿಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡ. ಆತನ
ಮಾನಸಿಕ ತುಮುಲ ಹೆಚ್ಚಾಯಿತು. ಇನ್ನೇನು ಆತಂಕದಲ್ಲಿದ್ದಾಗ, ಕುರುಡನ ಕಣ್ಣಿಗೆ ಒಂದು ಸಣ್ಣ ಕಿರಣ ಮೂಡಿದಂತೆ ಭಾಗಮ್ಮ ಹೊರಗಿನಿಂದ ಮನೆಯೊಳಕ್ಕೆ ಬಂದಳು. ಆಕೆ ನಾರಾಯಣಪ್ಪನನ್ನು ನೋಡಿ;
‘ಏನು ಮಾಡ್ತಾ ಇದ್ದೀರಿ ?’ ಎಂದು ಕೇಳಿದಳು.
‘ನಾನೀಗ ಏನು ಮಾಡಬಲ್ಲೆ ?ನಾನಾಗಲೇ ಅವಾಂತರ ಮಾಡಿಯಾಗಿದೆ. ಈಗ ಏನಿದ್ದರೂ ಪಶ್ಚಾತಾಪ ಪಡುತ್ತಿದ್ದೇನೆ ಅಷ್ಟೇ’ ಎಂದನು.
‘ಅಯ್ಯೋ, ಏನಾಗಿದೆ ನಿಮಗೆ ?ನಾನು ಕೇಳೊದೇನು ನೀವು ಹೇಳೋದೇನು ?’
‘ನಾನು ಏನೂ ಹೇಳೋ ಹಾಗಿಲ್ಲ..ಮಾತಾಡೋ ಹಾಗಿಲ್ಲ, ಸಾಕು ಈ ಸಂಸಾರ’ ಎಂದನು ನಾರಾಯಣಪ್ಪ.
‘ಸಂಸಾರ ಝಾಡಿಸಿಕೊಳ್ತೀನಿ ಅನ್ನಲು ಅದೇನು ವಸ್ತುವೇ ?’
ಆ ಮಾತಿಗೆ ಉತ್ತರ ಕೊಡದೆಯೇ ಆಕೆಗೆ ಹೀಗೆ ಕೇಳಿದ;
‘ಅದು ಬಿಡು, ನೀನೆಲ್ಲಿಗೆ ಹೋಗಿದ್ದೆ ಮತ್ತು ಆಶಾ ಮನೇಲಿ ಇಲ್ಲವಲ್ಲ, ಅವಳೆಲ್ಲಿಗೆ ಹೋಗಿದ್ದಾಳೆ ?’
‘ನಾನು ಮಂದಿರಕ್ಕೆ ಹೋಗಿದ್ದೆ. ಅಲ್ಲಿ ಕಾರ್ಯಕ್ರಮಗಳಿದ್ದವು, ಅರ್ಧಕ್ಕೆ ಮೊಟಕು ಮಾಡಿಕೊಂಡು ಬಂದಿದ್ದೇನೆ’ ಎಂದಳು.
‘ಹಾಗಾದರೆ, ಆಶಾಎಲ್ಲಿ ?’
‘ನನಗೆ ತಿಳಿದಿಲ್ಲ. ಏಕೆ ಮನೆಯಲ್ಲಿ ಇಲ್ಲವೇ ?’ ಮರು ಪ್ರಶ್ನೆ ಹಾಕಿದಳು.
‘ಇಲ್ಲ..ಆಕೆ ಕಾಣಿಸುತ್ತಿಲ್ಲ’ ಎಂದಾಗ;
‘ಹುಚ್ಚು ಹುಡುಗಿ..ನೊಂದು ಕೊಂಡು ಇಲ್ಲೇ ಹತ್ತಿರ ಎಲ್ಲಿಯಾದರೂ ಹೋಗಿರಬೇಕು. ಆಕೆ ಬರ್ತಾಳೆ ಬಿಡಿ ‘ ಎಂದಳು.
‘ಏಕೋ ಅನುಮಾನ ಕಣೆ..ಮನೆಯಲ್ಲಿಯ ಎಲ್ಲಾ ವಿಷಯಗಳಲ್ಲಿ ನಾನು ಮೂಗು ತೂರಿಸಬಾರದಿತ್ತು’ ಎಂದ ನಾರಾಯಣಪ್ಪ.  
‘ಅಯ್ಯೋ ಬಿಡಿ, ಇದೇನು ಮಹಾ. ಅವಳೇನೂ ಮುನಿಸಿಕೊಂಡಿಲ್ಲ ಎಂದನಿಸುತ್ತೆ. ಆದರೇ, ತಾನು ಹೋಗುವಾಗ ಮನೆಯಲ್ಲಿದ್ದ ನಿಮಗೆ ಹೇಳಬೇಕಾಗಿತ್ತು ಆಲ್ವಾ.?’
‘ಭಾಗಾ..ಆಕೆ ಮುನಿಸಿಕೊಂಡು ಏನಾದ್ರೂ ತವರಿಗೆ ಹೋದಳೇ ?’
‘ಥೂ..ನೀವು ಗಂಡಸರೇ ಇಷ್ಟು.ನಿಮಗೆ ತಾಳ್ಮೆ ಇಲ್ಲ ಮತ್ತು ಧೈರ್ಯಾನೂ ಇಲ್ಲ. ಈಗ ಸ್ವಲ್ಪ ತಿಂಡಿ ತಿನ್ನಿ ಮನಸ್ಸಿಗೆ ಶಕ್ತಿ ಮೂಡುತ್ತದೆ’ ಎಂದು ಅವಲಕ್ಕಿ ಚೂಡಾ ತಂದು ಕೊಟ್ಟಳು.
ಆದರೇ, ನಾರಾಯಣಪ್ಪಗೆ ಏನೂ ತಿನ್ನಲು ಮತ್ತು ಕುಡಿಯಲು ಮನಸ್ಸೇ ಆಗುತ್ತಿಲ್ಲ. ಆಶಾ ಬಂದರೆ ಸಾಕು, ಆಕೆಯ ಕ್ಷಮೆ ಕೋರಿ ಇನ್ಮೇಲೆ ಆಕೆಯ ತಂಟೆಗೆ ಬರೋದಿಲ್ಲ ಎಂದು ಹೇಳಿ ಬಿಡುತ್ತೇನೆ ಎಂದು ಧೃಡ ನಿರ್ಧಾರ ಮಾಡಿದನು.

ಸುಮಾರು ಹೊತ್ತು ಕಳೆದ ಮೇಲೆ ಆಶಾ ಮನೆಗೆ ಮರಳಿದಳು.  ಆಕೆ ತನ್ನ ಅತ್ತೆ ಮತ್ತು ಮಾವನವರ ಮುಖ ನೋಡಿದಳು. ಅವರ ಮುಖದಲ್ಲಿ ಆತಂಕದ ಛಾಯೆ ಕಂಡಳು. ಆಗ ಆಕೆಯೇ ಹೀಗೆ ಹೇಳಿದಳು ;
‘ನಾನು ನನ್ನ ಸ್ನೇಹಿತೆಯ ಮನೆಗೆ ಹೋಗುವಾಗ ಅತ್ತೆ ಮನೆಯಲ್ಲಿರಲಿಲ್ಲ, ಅಲ್ಲದೇ, ಮಾವ ರೂಮಿನಲ್ಲಿದ್ದದ್ದು ನೋಡಿದೆ. ಆದಷ್ಟು ಬೇಗ ಬಂದರಾಯಿತೆಂದು ಅವರಿಗೆ ಹೇಳದೆಯೇ ಅವಸರದಲ್ಲಿ ಹೊರಟು ಹೋದೆ.’ ಎಂದಳು.
‘ಸರಿ ಬಿಡು, ನೀನೂ ಅವಲಕ್ಕಿ ಚೂಡಾ ಸೇವಿಸಿ ಬಿಡು, ಮಧ್ಯಾನ್ಹ ಊಟ ಮಾಡಿದರಾಯಿತು’ ಎಂದು ಆಶಾಗೆ ಹೇಳಿದಳು ಅತ್ತೆ.
‘ನನ್ನ ತಿಂಡಿ ಸ್ನೇಹಿತೆಯ ಮನೆಯಲ್ಲಿ ಆಯಿತು, ನೀವು ಮುಗಿಸಿಬಿಡಿ’ ಎಂದಳು ಆಕೆ.
ಭಾಗಮ್ಮ ಅಡುಗೆ ಕೋಣೆಗೆ ಹೋದಾಗ,ಆಶಾ ಅಲ್ಲೇ ಇದ್ದುದನ್ನು ಕಂಡು
ನಾರಾಯಣಪ್ಪ ತನ್ನ ಸೊಸೆಯನ್ನು ಕರೆದು ಹೀಗೆ ಹೇಳಿದ;
‘ಅಮ್ಮಾ ಆಶಾ ನನ್ನ ಮಾತಿನಿಂದ ನಿನಗೆ ನೋವಾಯಿತೇ ? ನಿನಗೆ ನಾನು ಹಾಗೆ ಹೇಳಬಾರದಿತ್ತು. ಏನೋ, ನನ್ನ ಮಗ ಬರೀ ಹೊಟ್ಟೆಯಲ್ಲಿ ಆಫೀಸಿಗೆ ಹೋಗುವುದು ನನಗೆ ಸಂಕಟವೆನಿಸಿತು.  ಹಾಗಾಗಿ ಏನೋ ದುಡುಕಿ ಹೇಳಿದೆ.’ ಎಂದಾಗ;
‘ಮಾವಾ, ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ನಿಮ್ಮ ಮಗ ಅರ್ಜೆಂಟಾಗಿ ಹೋಗಬೇಕಾಗಿ ಬಂದುದಕ್ಕೆ, ಹೊರಗಡೇನೇ ತಿಂಡಿ ತಿನ್ನುವದಾಗಿ ಹೇಳಿ ಅವಸರವರದಿಂದ ಹೊರಟುಹೋದರು. ಅದನ್ನು ನಿಮಗೆ ಹೇಳಿದರೇ, ಎಲ್ಲಿ ನೀವು ನೊಂದು ಕೊಳ್ಳುತ್ತೀರೆಂದು ನಾನು ಹೇಳಲಿಲ್ಲ.’ ಎಂದಳು. ಆಗ ನಾರಾಯಣಪ್ಪನವರ ಕಣ್ಣಲ್ಲಿ ನೀರು ಬಂದವು. ಅದನ್ನು ಗಮನಿಸಿದ ಆಶಾ;
‘ಹಾಗೆ ಕಣ್ಣೀರು ಹಾಕಬೇಡಿ ಮಾವಾ, ಅಂಥಹದು ಏನೂ ಆಗಿಲ್ಲ. ಇದು ನಮ್ಮ ನಮ್ಮಲ್ಲಿ ಮೂಡಿದ ತಪ್ಪು ತಿಳುವಳಿಕೆ ಅಷ್ಟೇ’ ಎಂದು ಹೇಳಿ ಸಮಾಧಾನಿಸಿದಳು.
‘ನೀನು ಸೊಸೆಯಲ್ಲಮ್ಮ ನಮ್ಮ ಮನೆ ಮಗಳು’ ಆತ ಎಂದಾಗ ;
‘ಹೌದು ಮಾವ..ನಾನು ನಿಮ್ಮ ಮಗಳೇ ಸರಿ, ತಂದೆ ಇಲ್ಲದ ನನಗೆ ನೀವೇ ತಂದೆ’ ಎಂದಳು.
ಆ ಮಾತುಗಳನ್ನು ಆಲಿಸಿದ ನಾರಾಯಣಪ್ಪ ಮುಜುಗರದಿಂದ ಹೊರ ಬಂದು, ಭಾರವಾಗಿದ್ದ ತನ್ನ ಮನಸ್ಸಿನ ಉದ್ವೇಗ ಹಗುರವಾದದ್ದು ತಾನು ಕಂಡುಕೊಂಡ. ಆಗ ತುಂಬಾ ಪುಳಕಿತ ಗೊಂಡು ಸೊಸೆಯ ಮಾತಿಗೆ ಮನದಲ್ಲಿಯೇ ಒಂದು ಸಲಾಮು ಹೊಡೆದ.  

————————————————-

 

About The Author

3 thoughts on “ಕದಡಿದ ಮನ ನಲಿಯಿತು-ಸಣ್ಣ ಕಥೆ,ಬಿ.ಟಿ.ನಾಯಕ್”

  1. ಸರಾಗವಾಗಿ ಓದಿಸಿಕೊಂಡು ಹೋಗುವ ಕಥೆ. ಅಭಿನಂದನೆಗಳು.

Leave a Reply

You cannot copy content of this page

Scroll to Top