ಸುವಿಧಾ ಹಡನಬಾಳ ಕವಿತೆ-ಇರುವುದೊಂದೇ ಭೂಮಿ

ಕಾವ್ಯ ಸಂಗಾತಿ

ಸುವಿಧಾ ಹಡಿನಬಾಳ

ಇರುವುದೊಂದೇ ಭೂಮಿ

ಇರುವುದೊಂದೇ ಭೂಮಿ
ಸ್ವಚ್ಛ ಸುಂದರ ಭೂಮಿ
ಮಾತೆಯಂತೆ ಮಮತಾಮಯಿ
ಸಿರಿವಂತೆ ಆದರೂ ತ್ಯಾಗಮಯಿ

ಪ್ರಾಣಿಗಳು ನಡೆದಾಡಿದಲ್ಲಿ
ಮೂಡುವವು ತರತರದ ಚಿತ್ರ
ಮಾನವ ಓಡಾಡಿದಲ್ಲಿ ಪ್ಲಾಸ್ಟಿಕ್
ಕಸ ಕೊಳೆ ಹೇಸಿಗೆ ಯಾಕೊ ವಿಚಿತ್ರ!

ಒಡಲ ತುಂಬಾ ಅಸಂಖ್ಯಾತ
ಮಕ್ಕಳು
ತಲೆತುಂಬಾ ಬಣ್ಣ ಬಣ್ಣದ ಹೂಗಳು
ಋತುವಿಲಾಸಕ್ಕೆ ಮೈನೆರೆವ ನೀರೆ
ಹೇಳೆ ನಿನಗೆ ಸರಿ ಸಮನಾರೆ??

ಹಸಿರು ಸೀರೆಯಲಿ ನಿನ್ನ ಚಿತ್ತಾರ
ನೋಡಿ ಕಣ್ತುಂಬಿಕೊಂಡು ತಣಿಯದ
ನಿನ್ನದೇ ಮಕ್ಕಳು ಹೆತ್ತೊಡಲಿಗೆ
ಕೊಡಲಿಯಿಡುವ ಕಟುಕರು!

ಮತ್ತೆ ಬಂದಿದೆ ನೆನಪಿಸಲು
‘ವಿಶ್ವ ಪರಿಸರ ದಿನಾಚರಣೆ’
ಹೆತ್ತ ತಾಯಿಯ ಋಣಭಾರ ತೀರಿಸಲು
ನೊಂದ ಮೊಗದಲಿ ನಗೆಮೊಗ್ಗು
ಚಿಗುರಿಸಲು

ಸುತ್ತಲೂ ಮೂಡಿಸುವ ಜಾಗೃತಿ ಪ್ರಜ್ಞೆ
ತೊಡುವ ಇಂದೆ ಆತ್ಮ ಮೆಚ್ಚುವ ಪ್ರತಿಜ್ಞೆ
ಉಳಿಸಿ ಹೋಗುವ ಹೊಸ ತಲೆಮಾರಿಗೆ
ನಯನ ಮನೋಹರ ಪೃಥ್ವಿ


ಸುವಿಧಾ ಹಡಿನಬಾಳ

suvidha

1 thought on “ಸುವಿಧಾ ಹಡನಬಾಳ ಕವಿತೆ-ಇರುವುದೊಂದೇ ಭೂಮಿ

  1. ವಾವ್ ಚೆಂದ. ನಿಮಗೂ ಸಹ ವಿಶ್ವ ಪರಿಸರ ದಿನ ದ ಶುಭಾಶಯಗಳು

Leave a Reply