ಕಾವ್ಯ ಸಂಗಾತಿ
ಎ. ಹೇಮಗಂಗಾ
ತನಗಗಳು
- ಇರಬೇಕು ರಚನೆ
ಪುಟ್ಟ ತನಗದಂತೆ
ಭಾವಗಳ ಹರಿವು
ತುರಗದೋಟದಂತೆ - ಸಪ್ತಾಕ್ಷರಗಳಲಿ
ಸುಪ್ತ ಮನದಲ್ಲಿನ
ಭಾವಗಳ ತಪನೆ
ತನಗದ ರಚನೆ - ಕಣ್ಣಲ್ಲೇ ಪ್ರೇಮ ಭಾಷ್ಯ
ಬರೆದ ಕವಿ ನೀನು
ಜೀವ ವೀಣೆ ಮೀಟಿದ
ನಿಜ ವೈಣಿಕ ನೀನು - ಅಗ್ನಿಪರೀಕ್ಷೆಗಳ
ಎದುರಿಸಲೇಬೇಕು
ಎದೆ ಗುಂಡಿಗೆ ಗಟ್ಟಿ
ಮಾಡಿಕೊಳ್ಳಲೇಬೇಕು - ಮಡದಿಯ ಮಡಿಲು
ಹೊಂಗೆಯ ನೆರಳಂತೆ
ಪ್ರೀತಿ ತುಂಬಿದ ಮಾತು
ಮಧುರ ಗೀತೆಯಂತೆ - ಗುಲಾಬಿ ಜೊತೆಗಿವೆ
ತಪ್ಪದೇ ಮುಳ್ಳುಗಳು
ಸುಖದ ಜೊತೆಯಲ್ಲಿ
ಕಷ್ಟವೂ ಇರುವಂತೆ - ಆತ್ಮಗಳ ಬೆಸುಗೆ
ಎಂದಿಗೂ ಅಳಿಯದು
ಜನ್ಮ ಜನುಮಗಳ
ನಂಟೊಂದೇ ಉಳಿವುದು - ಕಾಣಿಸನು ಚಂದಿರ
ಇರುಳಾಗಸದಲ್ಲಿ
ಇಹನಲ್ಲ ನಲ್ಲೆಯ
ಸುಂದರ ಮೊಗದಲ್ಲಿ - ಚಿತ್ತ ಭಿತ್ತಿಯ ಮೇಲೆ
ಚಿತ್ತಾಗದಿರುವಂತೆ
ಚಿತ್ತಾರ ಬಿಡಿಸುವ
ಚಿತ್ತ ಚೋರನೇ ನೀನು - ಹಗಲೂ ಇರುಳಂತೆ
ಜೊತೆಯಲಿ ನೀನಿಲ್ಲ
ಸಿಹಿಯೂ ಕಹಿಯಂತೆ
ಈ ಬದುಕು ಬೇಕಿಲ್ಲ
ಸುಂದರ ರಚನೆ ಹೇಮಾ . ಅಭಿನಂದನೆಗಳು.
ಸುಜಾತಾ ರವೀಶ್