ವಿಜಯಪುರ ಸಂಸ್ಕೃತಿ ನೆನಪಿಸುವ
ಮೇ ಸಾಹಿತ್ಯ ಮೇಳ

ವಿಶೇಷ ಲೇಖನ

ವಿಜಯಪುರ ಸಂಸ್ಕೃತಿ ನೆನಪಿಸುವ

ಮೇ ಸಾಹಿತ್ಯ ಮೇಳ

ರಂಜಾನ್ ದರ್ಗಾ

ಸೌಹಾರ್ದ ಸಂಸ್ಕೃತಿಗೆ ಹೆಸರಾದ  ಮೊಘಲ್ ಆಳ್ವಿಕೆ ಪ್ರಾರಂಭವಾಗುವುದಕ್ಕಿಂತ ೩೭ ವಷ ಮೊದಲೇ ಅಸ್ತಿತ್ವಕ್ಕೆ ಬಂದ ವಿಜಯಪುರದ ಆದಿಲಶಾಹಿ ಆಳ್ವಿಕೆ (೧೪೮೯–೧೬೮೬), ಮೊಘಲರಿಗೆ ಸೌಹಾರ್ದ ಸಂಸ್ಕೃತಿಯ ಪಾಠ ಹೇಳಿಕೊಟ್ಟ ಹೊಗಳಿಕೆಗೆ ಪಾತ್ರವಾಗಿದೆ. ಅಂತೆಯೆ ಆದಿಲಶಾಹಿಯ ವಿಜಯಪುರ,  ದೇಶದ ಸಾಂಸ್ಕೃತಿಕ ತೊಟ್ಟಿಲು ಎಂದು ಕರೆಯಿಸಿಕೊಂಡಿದೆ.

 ಶರಣ ಸಂಸ್ಕೃತಿಯೊಂದಿಗೆ ಸೂಫಿ ಸಂಸ್ಕೃತಿ ಬೆರೆತು, “ಖಾದರಲಿಂಗನಿಗೆ ಸಾವಿರ ಸಲಾಂ” ಎಂದು ಹೇಳುವ ಸಮ್ಮಿಶ್ರ ಸಂಸ್ಕೃತಿ ನಮ್ಮದು. ವಿಜಯಪುರ ಮಂದಿ ಈ ಮಾನವೀಯ ಸಂಸ್ಕೃತಿಯ ವಕ್ತಾರರು. ಆದರೆ ಕೆಲ ಜನಾಂಗದ್ವೇಷಿ ರಾಜಕೀಯ ಪುಢಾರಿಗಳಿಂದ ಇಂದು ಕೋಮುದ್ವೇಷದ ತಾಣವಾದಂತೆ ಕಾಣುತ್ತಿದೆ. ಈ ಅಸಹ್ಯ ವಾತಾವರಣ ಬಹಳ ದಿನ ಉಳಿಯುವಂಥದ್ದಲ್ಲ. ವಿಜಯಪುರ ಸಂಸ್ಕೃತಿ ತನ್ನತನವನ್ನು ಉಳಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಜನಸಮುದಾಯಕ್ಕೆ ಮನವರಿಕೆ ಮಾಡುವ ರೀತಿಯಲ್ಲಿ ಇದೇ ಮೇ ೨೭ ಮತ್ತು ೨೮ರಂದು ವಿಜಯಪುರ ನಗರದಲ್ಲಿ ʼಮೇ ಸಾಹಿತ್ಯ ಮೇಳʼ ನಡೆಯುವುದು. ಈ ಮೇಳದ ರೂವಾರಿ ಬಸು ಸೂಳಿಭಾವಿ ಸದಾ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತಲ್ಲೀನರಾದವರು. ಈ ಬಾರಿಯ ಮೇ ಸಾಹಿತ್ಯ ಮೇಳ, “ಭಾರತೀಯ ಪ್ರಜಾತಂತ್ರ: ಸವಾಲು, ಮೀರುವ ದಾರಿಗಳು” ಕುರಿತು ವಿಜಯಪುರದಲ್ಲಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ.

 ವಿಜಯಪುರದವರು ಸ್ವಧರ್ಮವನ್ನು ಪ್ರೀತಿಸುವುದರ ಜೊತೆಗೆ ಪರಧರ್ಮಗಳನ್ನು ಗೌರವಿಸುತ್ತಾರೆ. ಅಲ್ಲಿನ ಗಣಪತಿ, ನಾಡಹಬ್ಬ, ಬಸವ ಜಯಂತಿ ಮುಂತಾದ ಉತ್ಸವಗಳಲ್ಲಿ ಮುಸ್ಲಿಮರೂ ಮುಂದಾಳಾಗಿ ಇರುತ್ತಾರೆ. ಮೊಹರಂ, ಉರುಸ್ ಮುಂತಾದ ಸಂದರ್ಭಗಳಲ್ಲಿ ಹಿಂದುಗಳೂ ಮುಂದಾಳಾಗಿರುತ್ತಾರೆ. ಅಲ್ಲಿ ಗುಣಕ್ಕೆ ಮತ್ಸರವಿಲ್ಲ. ಕೆಟ್ಟದ್ದಕ್ಕೆ ಸೆಟೆದು ನಿಲ್ಲುತ್ತಾರೆ, ಒಳ್ಳೆಯದಕ್ಕೆ ತಲೆ ಬಾಗುತ್ತಾರೆ. ಸ್ವಾಭಿಮಾನಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧ. ಆದರೆ ಪ್ರೀತಿಗೆ ಸೋಲುತ್ತಾರೆ.

 ಆದಿಲಶಾಹಿ ಸಾಮ್ರಾಜ್ಯದ ಮೊದಲ ದೊರೆ ಯೂಸುಫ್ ಆದಿಲ್ ಖಾನ್ (೧೪೮೯-೧೫೧೦) “ತಾನು ನಂಬಿದ ಧರ್ಮ ಆಚರಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು” ಎಂದು ಸಾರಿದ. ಆತ ಸೂಫಿ ಪರಂಪರೆಯನ್ನು ಮೆಚ್ಚಿಕೊಂಡಿದ್ದ.
 ಇಡೀ ಆದಿಲಶಾಹಿ ಆಳ್ವಿಕೆಯಲ್ಲಿ ಸೂಫಿಗಳ ಪಾತ್ರ ಹಿರಿದಾಗಿದೆ. ಸೂಫಿಗಳ ಮಾರ್ಗದರ್ಶನದಲ್ಲೇ ಅವರು ೨೦೦ ವರ್ಷ ಆಳ್ವಿಕೆ ಮಾಡಿದರು. ಯೂಸುಫ್ ಆದಿಲ್ ಖಾನ್ ಮೂಲಕ ಸೂಫಿ ಮತ್ತು ಶರಣ ಸಂಸ್ಕೃತಿಯ ಸಂಗಮವಾಯಿತು. ಈ ಹಿನ್ನೆಲೆಯಲ್ಲಿ ಕೊಡೆಕಲ್ ಬಸವಣ್ಣನವರು ಯೂಸುಫ್ ಆದಿಲ್ ಖಾನ್ನನ್ನು ಭೇಟಿ ಮಾಡಿದ್ದು ಐತಿಹಾಸಿಕವಾಗಿದೆ. ಕೊಡೆಕಲ್ ಸಂಪ್ರದಾಯ ಸೂಫಿ ಶರಣ ಸಂಸ್ಕೃತಿಗಳನ್ನು ಒಂದಾಗಿಸಿದ ಕೀರ್ತಿಗೆ ಭಾಜನವಾಗಿದೆ.

 ಪ್ರಿಯೆ ನಿನ್ನ ಪ್ರೇಮದ ಗಾಳಿ
ಸದಾ ಸುಳಿಯುತ್ತದೆ ನನ್ನ ಬಳಿ
ಅದೇ ಜೀವವನ್ನು ಬೆಳಗಿಸುತ್ತದೆ.
ಇಲ್ಲದಿದ್ದರೆ ನನ್ನ ಪ್ರಾಣ ನಂದಿಹೋಗುತ್ತದೆ.
ದಿನ ರಾತ್ರಿ ಸ್ಮರಿಸುತ್ತೇನೆ
ಮಧುರ ನುಡಿಗಳ

ಎಂದು ಹಾಡಿದ ಕವಿ ಮತ್ತು ರಾಜ ಎರಡನೇ ಇಬ್ರಾಹಿಂ ಆದಿಲಶಾಹಿ (೧೫೮೦-೧೬೨೬) ತನ್ನ “ಕಿತಾಬೇ ನೌರಸ್” ಸಂಗೀತ ಗ್ರಂಥದಲ್ಲಿ ಗಣಪತಿ ಸರಸ್ವತಿಯರನ್ನು ಸ್ಮರಿಸಿದ್ದಾನೆ. ತನ್ನ ಸಾತ್ ಮಂಜಿಲ್ ಅರಮನೆಯ ಪಕ್ಕದಲ್ಲೇ ನರಸಿಂಹ ದೇವಸ್ಥಾನ ಕಟ್ಟಿಸಿದ್ದಾನೆ.

“ಭಾಕಾ ನ್ಯಾರಿ ನ್ಯಾರಿ ಭಾವ ಏಕ
ಕಹಾ ತುರ್ಕ ಕಹಾ ಬರ್ಹಾಮನ್.
ಉತ್ತಿಮ್ ಭಾಗ ನೀಕೋ ಸೋ ಸೋಹೆ
ಜಾ ಸರ್ಸತಿ ಹೋಯೆ ಪರ್ಸನ್.
(ಭಾಷೆಗಳು ಭಿನ್ನವಾದರೂ ಭಾವ ಒಂದೇ. ಮುಸಲ್ಮಾನನಾದರೇನು ಬ್ರಾಹ್ಮಣನಾದರೇನು ಯಾರ ಮೇಲೆ ಸರಸ್ವತಿ ಪ್ರಸನ್ನಳಾಗುವಳೋ ಅವನೇ ಭಾಗ್ಯಶಾಲಿ.)
 ಎಂದು ಇಬ್ರಾಹಿಂ ʼಕಿತಾಬೇ ನೌರಸ್ʼನಲ್ಲಿ ಬರೆದಿದ್ದಾನೆ.

 ಬಸು ಸೂಳಿಭಾವಿ ಇಂಥ ಸಂಸ್ಕೃತಿಯ ಪರಿಚಯವನ್ನು ʼಮೇ ಸಾಹಿತ್ಯ ಮೇಳʼದ ಮೂಲಕ ನಾಡಿನ ಸಾಹಿತಿಗಳಿಗೆ ಮಾಡಿಸುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ವಿಜಯಪುರದ ಕಾಮ್ರೇಡ್ ಪ್ರಕಾಶ ಹಿಟ್ನಳ್ಳಿ, ಕಾಮ್ರೇಡ್ ಭೀಮಶಿ ಕಲಾದಗಿ, ನಜ್ಮಾ ಬಾಂಗಿ ಮತ್ತು ತುಕಾರಾಮ ಚಂಚಲಕರ ಅವರಂಥ ಪ್ರಜ್ಞಾವಂತರ ಭೇಟಿ ಮಾಡಿಸುತ್ತಿದ್ದಾರೆ.

  ೮೫ ವರ್ಷಗಳಷ್ಟು ಹಿಂದೆಯೆ ದಲಿತ ಮಕ್ಕಳಿಗೆ ಶೈಕ್ಷಣಿಕ ಆಶ್ರಯವಿಲ್ಲದ ಕಾಲದಲ್ಲಿ ಕಾಕಾ ಕಾರ್ಖಾನಿಸ ಅವರು ವಿಜಯಪುರದಲ್ಲಿ ಹರಿಜನ ಬೋಡಿಂಗ್ ಪ್ರಾರಂಭಿಸಿದರು. ಬ್ರಾಹ್ಮಣ ಸಮಾಜವಷ್ಟೇ ಅಲ್ಲದೆ ತಮ್ಮ ಮನೆಯವರಿಂದಲೂ ಬಹಿಷ್ಕೃತರಾದರು.

 ಜನಾಬ್ ಬಾಲಸಿಂಗ್ ಮಾಸ್ತರರು ೭೦ ವರ್ಷಗಳಷ್ಟು ಹಿಂದೆಯೆ ವಿಜಾಪುರದಲ್ಲಿ ಕಮ್ಯುನಿಸ್ಟ್ ವಿಚಾರಧಾರೆ ಹಬ್ಬಲು ಕಾರಣರಾದರು. ನಂತರ ಲಿಂಗಧಾರಿ ಕಾಮ್ರೇಡ್ ಎಲ್.ಬಿ. ಲಾಯದಗುಂದಿ ಅವರು ಕಮ್ಯುನಿಸ್ಟ್ ಚಳವಳಿಯನ್ನು ಪ್ರಾರಂಭಿಸಿದರು. ಶರಣರಂಥ ಅವರ ವ್ಯಕ್ತಿತ್ವಕ್ಕೆ ಎಲ್ಲರೂ ಗೌರವ ಕೊಡುತ್ತಿದ್ದರು. ದಲಿತ ಹಿನ್ನೆಲೆಯ ಲಾಯಪ್ಪ ಚಂಚಲಕರ ಅವರು ವಿಜಾಪುರದಲ್ಲಿ ಕಮ್ಯುನಿಸ್ಟ್ ವಿಚಾರಧಾರೆ ಬೆಳೆಯಲು ಸೇವೆ ಸಲ್ಲಿಸಿದರು.

ಕಡಿಮೆ ಕಲಿತ ಕಾಮ್ರೇಡ್ ಭೀಮಶಿ ಕಲಾದಗಿ ಹೆಚ್ಚು ಕಲಿತವರಿಗೆ ಮಾರ್ಗದರ್ಶನ ಮಾಡುವಷ್ಟು ಕ್ರಾಂತಿಕಾರಿ ವಿಚಾರಗಳನ್ನು ಮೈಗೂಡಿಸಿಕೊಂಡರು. ಮಂಗಳೂರು ಕಡೆಯಿಂದ ಬಂದು ಸಿ.ಪಿ.ಎಂ. ಪಕ್ಷ ಕಟ್ಟಿದ ಕಾಮ್ರೇಡ್ ಎನ್.ಕೆ. ಉಪಾಧ್ಯಾಯ,  ಕುಲಕರ್ಣಿ ಮನೆತನದ ಪ್ರಕಾಶ ಹಿಟ್ನಳ್ಳಿ ಅವರು ಸಿ.ಪಿ.ಐ. ಪಕ್ಷದ ಮೂಲಕ ಕಮ್ಯುನಿಸ್ಟ್ ಚಳವಳಿಗಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟರು.

ನಿವೃತ್ತ ಸೈನಿಕ ಮೂಕಿಹಾಳ ಅವರು ವಿಜಾಪುರಕ್ಕೆ ಅಂಬೇಡ್ಕರರನ್ನು ಪರಿಚಯಿಸಿದ ಮೊದಲಿಗರಲ್ಲಿ ಪ್ರಮುಖರು. ಬಾಬುರೆಡ್ಡಿ ತುಂಗಳ ಅವರು ಕುರುಕ್ಷೇತ್ರ ವಾರಪತ್ರಿಕೆ ಮೂಲಕ ವೈಚಾರಿಕತೆಯನ್ನು ಬೆಳೆಸಿದವರು. ಕಾಮ್ರೇಡ್ ನರಸಿಂಗರಾವ ಕುಲಕರ್ಣಿ ಮಹಾನ್ ಮಾರ್ಕ್ಸ್ವಾದಿ ವಿದ್ವಾಂಸರಾಗಿದ್ದರು. ಇಂಥ ನೂರಾರು ಜನರು ವಿಜಾಪುರವನ್ನು ವಿಚಾರವಾದಿಗಳ ಸುಸಂಸ್ಕೃತ ನಗರವಾಗಿ ಉಳಿಸಿ ಬೆಳೆಸಿಕೊಂಡು ಬಂದರು.

 ʼಮೇ ಸಾಹಿತ್ಯ ಮೇಳʼದಿಂದಾಗಿ ಇಂಥವರ ತ್ಯಾಗ ಬೆಳಕಿಗೆ ಬಂದು ದ್ಚೇಷ ಸಂಸ್ಕೃತಿಯನ್ನು ಬೆಳೆಸುವವರಿಗೆ ಪಾಠವಾಗುವ ವಾತಾವರಣ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ.

ನಜ್ಮಾ ಬಾಂಗಿ ವಿಜಾಪುರದ ಜನ ಬೆರಗಾಗುವಂತೆ ಬದುಕಿದ ಏಕಾಂಗ ವೀರೆ. ಅವರ ದೃಢ ನಿರ್ಧಾರ ಮತ್ತು ಮಾನವ ಘನತೆಯ ಬಗ್ಗೆ ಇರುವ ಅವರ ನಿಷ್ಠೆ ಅನುಕರಣೀಯವಾಗಿದೆ. ನಜ್ಮಾ ಬಾಂಗಿ ಮಹಿಳಾ ಸ್ವಾತಂತ್ರ್ಯದ ಸಂಕೇತವಾಗಿ ಬಿಬಿಸಿಯಲ್ಲೂ ಸುದ್ದಿಯಾದರು. ನಿರ್ಭೀತಿಯ ಭೀಮಶಿ ಕಲಾದಗಿ ಅವರು ಹೋರಾಟಕ್ಕೆ ಬದುಕನ್ನೇ ಪಣಕ್ಕಿಟ್ಟವರು. ಕಮ್ಯುನಿಜಂ ಚಿಂತನಾಕ್ರಮವನ್ನು ಪ್ರಕಾಶ ಹಿಟ್ನಳ್ಳಿ ಅವರಿಂದ ಕಲಿಯಬೇಕು. ಕಮ್ಯುನಿಸ್ಟ್ ಸಿದ್ಧಾಂತ, ಸಾಹಿತ್ಯ, ಇತಿಹಾಸ, ವಿವಿಧ ತತ್ತ್ವಜ್ಞಾನಗಳ ಬಗ್ಗೆ ಆಸಕ್ತಿ, ಯಾವುದನ್ನು ಬಯಸದ ಮನಸ್ಥಿತಿ, ಸದಾ ಹೋರಾಟದ ಗುಂಗು ಅವರನ್ನು ಆದರ್ಶ ವ್ಯಕ್ತಿಯಾಗಿಸಿವೆ. ತುಕಾರಾಮ ಚಂಚಲಕರ ಮಾರ್ಕ್ಸ್ವಾದ ಮತ್ತು ಅಂಬೇಡಕರವಾದದ ಚಿಂತನಾಕ್ರಮದ ಮೂಲಕ ಭಾರತೀಯ ಸಮಾಜದ ಒಳಸುಳಿಗಳನ್ನು ಅರಿತುಕೊಂಡವರು. ಮೇ ಸಾಹಿತ್ಯ ಮೇಳದ ಗೌರವಕ್ಕೆ ಪಾತ್ರರಾದ ನಾಲ್ವರ ಸಾಮಾಜಿಕ ಕಾರ್ಯಗಳ ಜೊತೆಗೂ ನನ್ನ ಸಹಭಾಗಿತ್ವವಿದೆ.

ನಾವೆಲ್ಲ ಜೊತೆಗೇ ಬೆಳೆದವರು.

 ತುಕಾರಾಮ ಚಂಚಲಕರ ಅವರು ೧೯೭೨ರಲ್ಲಿ ಸಿ.ಪಿ.ಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜಕೀಯದಲ್ಲಿ ಪ್ರವೇಶ ಮಾಡಿದರು. ವೇಶ್ಯಾವೃತ್ತಿ ನಿರ್ಮೂಲನಾ ಸಂಘದ ಅಧ್ಯಕ್ಷರಾಗಿ ದೇವದಾಸಿ ಪದ್ಧತಿ ಮತ್ತು ನೀರೋಕಳಿ ವಿರುದ್ಧ ಜನಜಾಗೃತಿ ಮಾಡಿದರು. ಸಿದ್ಧಾರ್ಥ ಮಿಲಿಂದ ಬಾಬಾಸಾಹೇಬ ಅಸೋಸಿಯೇಶನ್ ಅಧ್ಯಕ್ಷರಾಗಿ ಮತ್ತು ದಲಿತ ಪ್ಯಾಂಥರ್ನ ಪ್ರಥಮ ರಾಜ್ಯಾಧ್ಯಕ್ಷರಾದರು. ದಲಿತರ ಮೇಲೆ ಆಗುವ ಅನ್ಯಾಯದ ವಿರುದ್ಧ ಹೋರಾಡಿದರು. ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ಇವರ ಹೋರಾಟಕ್ಕೆ ಬೆಂಬಲ ನೀಡಿದರು. ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು ಇವರ ಕಾರ್ಯಗಳನ್ನು ಮೆಚ್ಚಿ ಸಹಕರಿಸಿದರು. ಹೀಗಾಗಿ ಅನೇಕ ದಲಿತರಿಗೆ ಕಾನೂನಿನ ರಕ್ಷಣೆಯೊಂದಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿತು.

 ಕೊಲೆ, ಸುಲಿಗೆ ಮತ್ತು ಅತ್ಯಾಚಾರಕ್ಕೆ ಒಳಗಾದವರ ಮನೆಗಳ ಬಳಿ ಹೋಗಿ ಅವರಿಗೆ ಧೈರ್ಯತುಂಬಿ ನ್ಯಾಯ ಒದಗಿಸಿದ ಗೌರವ ಇವರಿಗೆ ಸಲ್ಲುತ್ತದೆ.
ತುಕಾರಾಮ ೧೯೮೪ರಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪೌಢಶಾಲೆ ಆರಂಭಿಸಿದರು. ಅಂಬೇಡ್ಕರ್ ಜನ್ಮಶತಾಬ್ದಿ ಸಂದರ್ಭದಲ್ಲಿ ವಿಜಾಪುರದಲ್ಲಿ ಬೃಹತ್ ಸಮಾರಂಭ ಏರ್ಪಡಿಸಿದರು. ವಿವಿಧ ಕಡೆಗಳಿಂದ ಒಂದು ಲಕ್ಷ ದಲಿತರು ಬೌದ್ಧಧರ್ಮಕ್ಕೆ ಮತಾತಂತರ ಹೊಂದಲು ಬಂದಿದ್ದರು. ಆದರೆ ಭಾರಿ ಮಳೆಯ ಕಾರಣ ೫೦೦೦ ಜನರಿಗೆ ಮತಾಂತರದ ಅವಕಾಶ ದೊರೆಯಿತು.

 ೧೯೯೨ರಲ್ಲಿ ಬುದ್ಧ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಪ್ರಾಥಮಿಕ ಶಾಲೆ ಪ್ರಾರಂಭಿಸಿದರು. ಹೀಗೆ ಶಿಕ್ಷಣ, ಹೋರಾಟ, ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆ ಮುಂತಾದವುಗಳಲ್ಲಿ ತೊಡಗಿಕೊಂಡು ಜನಜಾಗೃತಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
 ಎಲೆ ಮರೆಯ ಕಾಯಿಯಂತಿರುವ ಬಸು ಸೂಳಿಭಾವಿ ಅವರ ನೇತೃತ್ವದಲ್ಲಿ ನಡೆಯುವ ಈ ಮೇ ಸಾಹಿತ್ಯ  ಮೇಳದಿಂದ ವಿಜಯಪುರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವದರಲ್ಲಿ ಸಂಶಯವಿಲ್ಲ    


 ರಂಜಾನ್ ದರ್ಗಾ

                                           
                                                *

One thought on “ವಿಜಯಪುರ ಸಂಸ್ಕೃತಿ ನೆನಪಿಸುವ
ಮೇ ಸಾಹಿತ್ಯ ಮೇಳ

  1. ಕರ್ನಾಟಕದ ಬಹುತ್ವ ಅಂದರೆ ಇದು.
    ಇವತ್ತು ತಾವು ಕವಿ, ಕವಯಿತ್ರಿ ,ಗಜಲ್ಕಾರರು ಎಂದು ಹೇಳಿಕೊಳ್ಳುವವರು , ಓದಬೇಕಾದ ಲೇಖನ ಇದು‌. ಥ್ಯಾಂಕ್ಸ ಟು ರಂಜಾನ್ ಸರ್.

Leave a Reply

Back To Top