ಇಂದಿರಾ ಮೋಟೆಬೆನ್ನೂರ ಕವಿತೆ-ಏಕೆ?

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಏಕೆ?

ಜಗಕ್ಕೆ ಬೆಳಕು ನೀಡುವ ದಾರಿ ತೋರುವ ಸೂರ್ಯ ನೀನು
ಎದೆಯ ಗೂಡಲಿ ಕಿರುದೀಪ ಬೆಳಗಿಸಲಾರದೇ ನಿಂದೆಯಲ್ಲ
ಅಷ್ಟು ಕೃಪಣನಾದೆ ಏಕೆ?…

ತಮವ ಕಳೆಯುತ ಜ್ಞಾನ ಘಮವ ಬೀರುವ ಸುಮದ
ತೆರದ ಬಾಳು ನಿನದು..
ಮಲ್ಲಿಗೆ ಮೊಗಕೆ ಕಿರು ನಗುವ ನೀಡಲಾರದೇ ಹೋದೆಯಲ್ಲ
ಅಷ್ಟು ಬಡವನಾದೆ ಏಕೆ?

ಕೋಟೆ ಕೊತ್ತಲ ಕಟ್ಟಿ ಭಾವ ಭಧ್ರತೆಯ ಸಾಮ್ರಾಟ ವಿಶಾಲ ಹೃದಯ ಸಾಮ್ರಾಜ್ಯ ನಿನದು..
ಎದೆಗೂಡ ಮೂಲೆಯಲಿ ಕೊಂಚ ತಾವು ಕೊಡದೆ
ನಡೆದೆಯಲ್ಲ ಅಷ್ಟು ಜಿಪುಣನಾದೆ ಏಕೆ? .

ನಡೆವ ಹಾದಿಯಲಿ ಹಣತೆ ಹಚ್ಚಿ ಬೆಳಕ ಸ್ಫುರಿಸಿ ⁰
ಅರಿವ ಜ್ಯೋತಿ ಬೆಳಗಿಸುವ ಸ್ಫೂರ್ತಿ ನೀನು
ಒಂದು ಕಿರಣ ಕೂಡ ಇಣುಕಿ ಹಣುಕಲಾರದೇ ಮುಂದೆ
ನಡೆದೆ ಅಷ್ಟು ಹೃದಯ ಹೀನನಾದೆ ಏಕೆ?

ಮನದಂಗಳದಿ ನೆಟ್ಟ ಪ್ರೀತಿಯ ಮಾವಿನಗಿಡ ಸ್ನೇಹ ವಂಚಿತವಾಗಿ ನೋವು ಸಂಚಿತವಾಗಿ ನಲುಗುತ್ತಿದೆ.
ಸ್ನೇಹ ಪ್ರೀತಿಯ ಬಂದುಂಬಿ ಉಸಿರಿವೆ ಬೇರೆ ಮನದಂಗಳದಿ ನೀ ನೆಟ್ಟ ಗಿಡಗಳು…ಈ ತಾರತಮ್ಯ ಭಾವತರವೇ..?
ಅಷ್ಟು ಪಕ್ಷ ಪಾತಿಯಾದೆ ಏಕೆ?


Leave a Reply

Back To Top