ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಅಸಹಾಯಕ ವೃದ್ಧರ ಪಾಡು

ಅಂದು ನಗರದ ಮುಖ್ಯ ಬೀದಿ ಒಂದರಲ್ಲಿ ಖರೀದಿಗೆಂದು ನಾನು ಮತ್ತು ಗೆಳತಿ ಹೊರಟಿದ್ದೆವು. “ಎರಡು ದಿನದಿಂದ ಏನೂ ತಿಂದಿಲ್ಲ ಏನಾದರೂ ಕೊಡ್ರವ್ವ”
ಎಂದು ಹಣ್ಣು ಹಣ್ಣು ಮುದುಕಿ ಒಬ್ಬರು ನಮ್ಮ ಬಳಿ ಕೇಳಿದರು.  ಹಣ ತೆಗೆಯುವ ವೇಳೆಗೆ ತಲೆ ಸುತ್ತಿ ನಮ್ಮ ಮುಂದೆಯೇ ಬಿದ್ದುಬಿಟ್ಟರು . ನಮ್ಮ  ಬಳಿ ಇದ್ದ ನೀರನ್ನೇ ಕೊಟ್ಟು ಸ್ವಲ್ಪ ಪಕ್ಕದ ಅಂಗಡಿಯಿಂದ ಜ್ಯೂಸ್ ತರಿಸಿಕೊಟ್ಟು ಸುಧಾರಿಸಿಕೊಂಡಾಗ “ನಿಮ್ಮ ಮನೆ ಎಲ್ಲಿ ಹೇಳಿ ಬಿಟ್ಟು ಬರುತ್ತೇವೆ” ಎಂದೆ ನಾನು.  “ಯಾವ ಮನೆ ಕಣವ್ವಾ ಎಲ್ಲಾ ಸೇರ್ಕೊಂಡು ಮನೆ ಬಿಟ್ಟು ಓಡಿಸವರೇ  ಕೂಳ್ಗೆ ದಂಡ ಅಂತ” ಅಳಕ್ಕೆ ಶುರು ಮಾಡಿದ್ರು . ಅಲ್ಲೇ ಒಂದೆರಡು ಬಾಳೆಹಣ್ಣು ಕೊಟ್ಟು ನೆರಳಲ್ಲಿ ಕೂಡಿಸಿ ಸುಧಾರಿಸಿಕೊಳ್ಳುವಷ್ಟರಲ್ಲಿ ವೃದ್ದಾಶ್ರಮ ನಡೆಸುತ್ತಿದ್ದ ನನ್ನ ಗೆಳತಿ ಒಬ್ಬರಿಗೆ ಫೋನ್ ಮಾಡಿದೆ.  “ಕರೆದುಕೊಂಡು ಬನ್ನಿ” ಎಂದರು ನಮ್ಮ ಕಾರಿನಲ್ಲಿ ಕೂಡಿಸಿಕೊಂಡು ದಾರಿಯಲ್ಲಿ ಹೋಗುವಾಗ ಆ ಅಜ್ಜಿ ಹೇಳಿದ ಕಥೆ . ಕೊಳ್ಳೇಗಾಲದ ಹತ್ತಿರ ಊರಿನಿಂದ ಕೆಲಸ ಹುಡುಕಿಕೊಂಡು ಗಂಡ ಹೆಂಡತಿ ಬಂದರು. ಅಪ್ಪ ಅಮ್ಮ ಎಲ್ಲ ಸತ್ತ ಮೇಲೆ ಊರಿನ ನಂಟೂ ಕಡಿದುಹೋಯಿತು ಸಾಲಾಗಿ ಐದು ಮಕ್ಕಳು.  ಗಂಡ ಬೇರೆ ಹೋಗಿಬಿಟ್ಟರು.  ಎರಡು ಹೆಣ್ಣು ಮೂರು ಗಂಡು ಮಕ್ಕಳನ್ನು ಬೆಳೆಸಲು ನಾಲ್ಕು ಮನೆಕೆಲಸ ಮಾಡಿ ಕಷ್ಟಪಟ್ಟರು. ಯಾರಿಗೂ ವಿದ್ಯೆ ಹತ್ತಲಿಲ್ಲ.  ಸಾಲ ಸೋಲ ಮಾಡಿ ಹೆಣ್ಣು ಮಕ್ಕಳ ಮದುವೆಯಾಯಿತು .ನಂತರ ಗಂಡು ಮಕ್ಕಳು ದುಡಿಯಲು ಆರಂಭಿಸಿ ಅವರ ಮದುವೆಗಳು ಆಯಿತು. ಪತಿಯ ದೇಹಾಂತವಾದ ಮೇಲೆ ಇವರ ಕೈಯಲ್ಲಿ ದುಡಿಯಲು ಶಕ್ತಿ ಇರುವ ತನಕ ಮೂವರ ಮನೆಗೂ ಫುಟ್ಬಾಲಿನಂತೆ ಹೋಗಿ ಬಂದು ಮಾಡುತ್ತಿದ್ದರು. ಈಗ ಸ್ವಲ್ಪವೂ ಕೆಲಸ ಮಾಡಲು ಕೈಲಾಗಲ್ಲ ಎಂದಾಗ ಸೊಸೆಯರ ಗೊಣಗಾಟ ಕೂಗಾಟ ಅಸಮಾಧಾನ ಕಿರಿಕಿರಿ ಎಲ್ಲವೂ ಶುರುವಾಯಿತು. ಕೊನೆಗೊಂದು ದಿನ ನೀನು ನಾನು ಎಂದು ಜಗಳ ಆರಂಭವಾಗಿ ಬೇಸರಗೊಂಡು ಅವರೇ ಊರು ಬಿಟ್ಟು ಬೇರೆ ಊರಿಗೆ ಬಸ್ ಹತ್ತಿ ಬಂದುಬಿಟ್ಟಿದ್ದಾರೆ ಇನ್ನೇನು ಮಾಡಲು ತೋಚದೆ ಭಿಕ್ಷೆ ಬೇಡುತ್ತಾ ನಾಲ್ಕೈದು ದಿನ ಕಳೆಯುವಷ್ಟರಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದಾರೆ. “ಊರಿಗೆ ವಾಪಸ್ ಹೋಗುತ್ತೀರಾ ಕಳಿಸಿಕೊಡುತ್ತೇವೆ “ಎಂದರೆ “ಖಂಡಿತ ಬೇಡವ್ವಾ” ಅಂದರು.  “ಸರಿ ನಿಮ್ಮನ್ನು ಒಂದು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ಅಲ್ಲಿ ಇರಿ.  ತೊಂದರೆ ಇಲ್ಲ ನಿಮಗೆ ಮನಸ್ಸು ಬಂದಾಗ ನಿಮ್ಮ ಮಕ್ಕಳ ಅಡ್ರೆಸ್ ಕೊಡಿ ಕಳಿಸಿಕೊಡುತ್ತೇವೆ” ಎಂದು ಹೇಳಿದಾಗ ಮತ್ತೆ “ನಾ ಹೋಗಲ್ಲ ಎಲ್ಲಾದರೂ ಇರುತ್ತೇನೆ” ಅಂತ ಶುರು ಮಾಡಿದರು ಸರಿ ಅಂತ ಹೇಳುವಷ್ಟರಲ್ಲಿ ಆಶ್ರಮ ಬಂತು . ಅಲ್ಲಿ ಬಿಟ್ಟು ಬಂದೆವು.

 3 _ 4 ದಿನಗಳಾದರೂ ಮನಸ್ಸಿನಲ್ಲಿ ಅದೇ ಕೊರೆಯುತ್ತಿತ್ತು ಎಷ್ಟೇ ಕಷ್ಟವಿರಲಿ ಇರುವುದನ್ನು ಹಂಚಿಕೊಟ್ಟು ತಾಯಿ ಮಕ್ಕಳನ್ನು ಸಾಕುತ್ತಾಳೆ ವಿನಹ ಮನೆ ಬಿಟ್ಟು ಓಡಿಸುವುದಿಲ್ಲ.  ಆದರೆ ಅದೇ ಮಕ್ಕಳು ತಾಯಿ ತಿನ್ನುವ ಅನ್ನಕ್ಕೆ ಖರ್ಚು ಮಾಡಲು ಹಿಂದೇಟು ಹೊಡೆಯುತ್ತಾರಲ್ಲ ಎಂದು ಬೇಸರವಾಯಿತು. ಬಹುತೇಕ ಕುಟುಂಬಗಳಲ್ಲಿ ವಯಸ್ಸಾದವರ ಪಾಡು ಇದೇ.  ಮಾನವೀಯತೆ ಮಮತೆ ಪ್ರೀತಿ ಮಮಕಾರಗಳು ಎಲ್ಲಿ ಹೋದವು? ಹಳ್ಳಿಗಳಲ್ಲಾದರೂ ಹೇಗೋ ಒಂದಿಷ್ಟು ಕರೆದು ಊಟ ಹಾಕುತ್ತಾರೆ.  ನಗರಗಳಲ್ಲಿ ಅವರವರ ಪಾಡು ಅವರವರಿಗೆ.  ಭಿಕ್ಷೆ ಎತ್ತಿದರೂ ಮಲಗಲು ಇರಲು ಜಾಗವಿರುವುದಿಲ್ಲ . ನಿಸ್ವಾರ್ಥದಿಂದ ತನ್ನದೆಲ್ಲವನ್ನು ಮಕ್ಕಳಿಗೆ ಖರ್ಚು ಮಾಡಿ ಕೈಯಲ್ಲಿ ಸ್ವಲ್ಪವೂ ಹಣವಿಲ್ಲದ ಇಂತಹ ತಾಯಂದಿರ ಪಾಡು ನೆನಸಿಕೊಂಡಾಗ ನಿಜಕ್ಕೂ ಕರುಳು ಕಿತ್ತು ಬರುತ್ತದೆ.

ಈ ಸಮಸ್ಯೆಗೆ ಪರಿಹಾರವೇನು?  ಬರೀ ಮಾತಿನ ಪ್ರೀತಿ ಮಾತೆಯರ ದಿದ ಶುಭಹಾರೈಕೆ ಸಲ್ಲಿಸುವ ಬದಲು ಇಂತಹ ಗಂಭೀರ ವಿಷಯಗಳ ಬಗ್ಗೆ ಯೋಚಿಸಿ ಪರಿಹಾರದ ಕಡೆಗೆ ದೃಷ್ಟಿ ಹರಿಸುವ ಅಗತ್ಯ ಅನಿವಾರ್ಯತೆ ಇದೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top