ಡಾ ಅನ್ನಪೂರ್ಣ ಹಿರೇಮಠ ಕವಿತೆ-

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಸೆರಗಂಚಿನ ಮಿಂಚು ನಾನಮ್ಮಾ

ಕರುಣೆಯ ಕಡಲೆ ಮಮತೆಯ ಮಡಿಲೆ ಒಲವಿನ ಸಿರಿಯೇ
ಮರೆಯಾದೆ ಏಕೆ ನೀನಿರದ ಈ ಬಾಳು ಬೇಕೇ//ಪ//

ಅರಿಕೆಯ ಗುರು ನೀ ಅರಿವಿನ ತೇರಮ್ಮಾ
ನಿಸ್ವಾರ್ಥದ ಬಂಧುವೇ ಸರಳತೆಯ ಮಾತೆಯೆ
ಸೀರೆಯ ಸಿರಿಯೇ ಸವಿಮಾತಿನರಗಿಳಿಯೇ
ನಿನ್ನಂತರಂಗದಿ ಅರಳಿದ ಹೂ ನಾನು
ನೀನಿರದೆ ರಕ್ಷೆಯೆಲ್ಲಿ ಹೂವಲ್ಲಿ ಗಂಧವಾಗಿರಬಾರದಿತ್ತೆ
ಅಮ್ಮಾ ಅಮ್ಮಾ ನನ್ನಮ್ಮಾ ಪೊರೆದ ತಾಯೇ//

ನಿನ್ನ ಕಣ್ಣ ಬಿಂಬದಲಿ ಆವಿತ್ತಿದ್ದೆನಮ್ಮಾ
ಕಣ್ಣೀರೊಳು ಇಣುಕಿ ನೋಡುತ್ತಿದ್ದೆ ಮರುಳತನದಿ
ಸೆರಗಂಚಲಿ ಮರೆಯಾಗಿ ಮಿಂಚಂತೆ ನಿಂತು
ಮೊಗನೋಡಿನಕ್ಕು ಕೆಲೆದು ತೋಳ ಸೆರೆಯಲಿ
ಬಂಧಿಯಾಗಿ ಸ್ವರ್ಗಸುಖವ ಕಾಣುತ್ತಿದ್ದೇನಮ್ಮಾ
ಅಮ್ಮಾ ಅಮ್ಮಾ ನನ್ನಮ್ಮಾ ಪೊರೆದ ತಾಯೇ//

ತುದಿಬೆರಳ ಬಾಯೊಳಿಟ್ಟು ಮುಂಗುರುಳ ಸರಿಸಿ
ಕರ ಕಮಲದಿ ಮುಖವನ್ನೆತ್ತಿ ಕಣ್ಣೊಳು ಕಣ್ಣಿಟ್ಟು
ಮುದ್ದಿಸಿ ತಲೆ ನೇವರಿಸಿ ಜೇನ ತೊಡೆಯ ನೀಡಿ
ಲಾಲಿ ಹಾಡಿ ಮಲಗಿಸಿದ ಲಲನೆ ಲತೆಯೆ
ಕಂಠ ಬಿಗಿದು ಗಂಟಲೊನಗಿ ಕಣ್ಣೀರು ಬತ್ತಿದೆಯಮ್ಮಾ
ಕೊರಳದನಿಯೇ ಸವಿಹೊನಲೆ ಸಿರಿ ಸೌಖ್ಯದ ನಿಧಿಯೆ
ಅಮ್ಮಾ ಅಮ್ಮಾ ನನ್ನಮ್ಮಾ ಪೊರೆದ ತಾಯೆ//

ಹಬ್ಬದ ಹರುಷವೇ ಸಜ್ಜಿಗೆಯ ಸವಿಯೇ
ತೋಟದ ಹಸಿರೆ ಗಿಡಮರದ ಹಣ್ಣ ರುಚಿಯೆ
ಮನೆಯ ತೋರಣ ಅಂಗಳ ರಂಗೋಲಿಯ ನಗುವೆ
ಊರವನಿತೆ ಮನೆ ಮನೆಯ ನೀರ ವರತೆ
ನೀನಿರದೆ ದಾಹ ಹಿಂಗದಾಗಿದೆ ಹೊಟ್ಟೆ ತುಂಬದಾಗಿದೆ
ಊಟನಿಕ್ಕಬಾರದೇ ತುತ್ತ ತಿನಿಸಬಾರದೆನಮ್ಮಾ
ಅಮ್ಮಾ ಅಮ್ಮಾ ನನ್ನಮ್ಮಾ ಪೊರೆದ ತಾಯೆ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top