ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಹೊಸ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ

ಮೊದಲ ಅದ್ಯಾಯ

Photo Of Flowers Near Wine Glasses

ಒಲವಿನ ಅಧಿವೇಶನವೇ ಈ ಗಜಲ್

ಗಜಲ್ ಎನ್ನುವ ಪದ ಕೇಳಿದರೆ ಸಾಕು ಇದರಲ್ಲಿ ಏನೋ ಇದೆ ಎಂದು ತನ್ನಷ್ಟಕ್ಕೇ ತಾ ಹಿಡಿದಿಟ್ಟು ಕಾಡುವ ಒಂದು ಭಾವ ಕಣ್ಣು ಮುಂದೆ ಬರುತ್ತದೆ. ಹೌದು ಗಜಲ್ ಎಂದರೆ ಹಾಗೆ ಮನಸ್ಸಿಗೆ ಮುಟ್ಟಿ ಬಿಟ್ಟ ನಂತರವೂ ಸಹ ಆವರಿಸುವ ಒಂದು ಬೆಚ್ಚನೆ ಅನುಭೂತಿ. ಅದಕ್ಕೆ ಅಡೆತಡೆಗಳಿಲ್ಲದೆ ಸದಾ ಹರಿಯುವುದು ಮಾತ್ರವಲ್ಲದೆ ಪುಟಿಯುವುದು ಗೊತ್ತು. ಬಿಡದೇ ಸುರಿಯುವ ಜಡಿ ಮಳೆಯಂತೆ ಗಜಲ್, ಚಳಿಗಾಲದ ಒಲವಿನ ಅಧಿವೇಶನಕ್ಕಾಗಿ ಕಾಯುತ್ತಿರುವ ಪ್ರೇಮಿಗಳ ನಾಡಿ ಮಿಡಿತ ಈ ಗಜಲ್. ಹೊತ್ತಲ್ಲದ ಹೊತ್ತಲ್ಲಿ ನೆನಪುಗಳ ಹೊತ್ತು ತರುವ ಪರಿಮಳವೇ ಗಜಲ್. ಹೌದು ಗಜಲ್ ಎಂದರೆ ಹಾಗೆ ಹೀಗೆ ಮತ್ತು ಅದಕ್ಕೆ ಇರುವ ಶಕ್ತಿಯೇ ಅಷ್ಟು ಅನನ್ಯ ಮತ್ತು ಅಪೂರ್ವ. ಅಂತಹ ಅಮೋಘ ಕಾವ್ಯ ಪ್ರಕಾರವಾದ ಗಜಲ್ ಕುರಿತ ಅಂಕಣಕ್ಕೆ ತಮಗೆ ಇದೋ ಸ್ವಾಗತ.

ಗಜಲ್ ಬಹುತೇಕವಾಗಿ ಎಲ್ಲರೂ ಒಮ್ಮೆ ಆದರೂ ಓದಿಯೇ ಇರುತ್ತೀರಿ ಇಲ್ಲ ಅಂದ್ರೆ ಆ ಬಗ್ಗೆ ಕೇಳಿಯೇ ಇರುತ್ತೀರಿ. ಈ ಮೊದಲು ತುಂಬಾ ಅಪರೂಪವಾಗಿದ್ದ ಗಜಲ್ ಇತ್ತಿಚೆಗೆ ಕನ್ನಡದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಆ ಮೂಲಕ ನಮ್ಮ ವಿಶಾಲ ಕನ್ನಡ ಸಾಹಿತ್ಯ ಗಜಲಗಳಿಗೂ ತೆರೆದುಕೊಂಡಿದ್ದೂ ಹೊಸ ಹೊಸ ಬರಹಗಾರರು ಇದರಲ್ಲಿ ತೊಡಗಿಸಿಕೊಂಡಿರುವುದು ಆಸಕ್ತಿಕರ ವಿಷಯ. ಈಗಾಗಲೇ ಕೆಲವು ಬೆರಳಣಿಕೆ ಸಂಖ್ಯೆಯ ಪರಿಣತಿ ಹೊಂದಿದ ಉತ್ತಮ ಗುಣಮಟ್ಟದ ಖ್ಯಾತ ಗಜಲಕಾರರು ಕನ್ನಡದಲ್ಲಿ ಇದಾರೆ. ಅಂತೆಯೇ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಗಜಲಕಾರರು ಹೊರ ಹೊಮ್ಮುತ್ತಿರುವುದು ಸಹ ಖುಷಿಯ ವಿಚಾರ

ಗಜಲ್ ಏನನ್ನು ನಿರೀಕ್ಷಿಸುವುದು

ಯಾವುದೇ ಸಾಹಿತ್ಯ ಪ್ರಕಾರವಾದರೂ ಸರಿ ನಾವು ಬರೆಯಬೇಕು ಎಂದರೆ ಅದಕ್ಕೆ ಆ ಬಗ್ಗೆ ತಿಳುವಳಿಕೆ, ಆಳವಾದ ಜ್ಞಾನ, ಸತತ ಅಧ್ಯಯನ, ಉತ್ತಮ ಓದು ಮೊದಲಾದವು ಬಹು ಅಗತ್ಯ. ಅದು ಇಲ್ಲವಾದರೆ ಪೊಳ್ಳು ಜೊಳ್ಳುಗಳಾಗಿ ಬೆಲೆ ಕಳೆದುಕೊಳ್ಳುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಈ ಡಿಜಿಟಲ್ ಯುಗದಲ್ಲಿ ಫೇಸ್ಬುಕ್, ಟ್ವಿಟ್ಟರ್, ಇನಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ದಿನಕ್ಕೆ ಒಬ್ಬರು ಬರಹಗಾರರು ಹುಟ್ಟುತ್ತಿದ್ದಾರೆ. ಹಾಗೆ ಅದೊಂದು ಒಳ್ಳೆಯ ಬರಹವೇ ಎಂದು ನೋಡಿದರೆ ಖಂಡಿತ ಅದರಲ್ಲಿ ಏನು ಇರುವುದಿಲ್ಲ. ಆ ಬಗ್ಗೆ ವಿಚಾರಿಸಿದರೆ ಅವರಿಗೆ ಆ ವಿಷಯದ ಕುರಿತು ಕನಿಷ್ಠ ಜ್ಞಾನದ ಅರಿವು ಇರುವುದಿಲ್ಲ. ಬರಿದಿದ್ದೂ ಎಲ್ಲಾ ಬರಹಗಳು ಆಗಲ್ಲ ಅಂತೆಯೇ ಕವಿಗಳು ಸಹ ಆಗುವುದಿಲ್ಲ. ಹಾಗೆಯೇ ಗಜಲ್ ಕೂಡ ಸಾಕಷ್ಟು ಅರ್ಹತೆಗಳನ್ನು, ಕೌಶಲಗಳನ್ನು ನಿರೀಕ್ಷಿಸುತ್ತದೆ. ಇತರ ಸಾಹಿತ್ಯ ಪ್ರಕಾರಗಳಿಗಿಂತ ಗಜಲ್ ಬರಹಗಳಿಗೆ ಹೆಚ್ಚಿನ ಪೂರ್ವ ಸಿದ್ದತೆಗಳೇ ಬೇಕು ಯಾಕೆಂದರೆ ಗಜಲ್ ಅಷ್ಟು ಸುಲಭವಾಗಿ ಒಗ್ಗುವಂತದಲ್ಲ, ಇಲ್ಲಿ ಪ್ರತಿ ಬರಹಗಳು ಧ್ಯಾನದಂತೆ ಜೀವಿಸಬೇಕು.

ಗಜಲ್ ಛಾಯೆ

ಕನ್ನಡದ ಪ್ರಸಿದ್ಧ ಹಿರಿಯ ಕಿರಿಯ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಅಂತರ್ಜಾಲ ಪತ್ರಿಕೆಗಳು ಮೊದಲಾದವುಗಳಲ್ಲಿ ಗಜಲ್ ಎಂದು ಪ್ರಕಟವಾಗುವ ಎಷ್ಟೋ ಬರಹಗಳು ಗಜಲಗಳೇ ಆಗಿರುವುದಿಲ್ಲ. ಗಜಲ್ ಅಲ್ಲದ ಇಂತಹ ಗಜಲಗಳನ್ನು ಗಜಲ್ ಎಂದು ಪ್ರಕಟಿಸುವುದಕ್ಕೆ ಇರುವ ಮಾನದಂಡಗಳು ಏನು ಎಂದು ಇತ್ತೀಚೆಗೆ ಸಾಕಷ್ಟು ಗಜಲಕಾರರು ಆಕ್ಷೇಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಲವರು ಪತ್ರಿಕೆಗಳಿಗೆ ಪತ್ರ ಬರೆದು ಕರೆ ಮಾಡಿ ವಿವರಣೆ ಕೇಳಿಯೂ ಇದ್ದಾರೆ. ಹಾಗೆ ನೋಡಿದಾಗ ಗಜಲ್ ಬರಹಗಳನ್ನು ಪ್ರಕಟಿಸಲು ಅಲ್ಲಿ ಪ್ರತ್ಯೇಕ ಗಜಲ್ ತಜ್ಞರು ಇರುವುದಿಲ್ಲ ಮತ್ತು ಓದಿದಾಗ ಸ್ವಲ್ಪ ಚೆನ್ನಾಗಿ ಇದೆ ಎನಿಸಿದರೆ ಪ್ರಕಟಿಸಿ ಬಿಡುವುದು ಅವರ ರೀತಿ ನೀತಿಗಳು. ಹೀಗೆಂದು ಪತ್ರಿಕೆಯೊಂದರ ಸಂಪಾದಕರೇ ತಿಳಿಸಿದಾಗ ಒಂದಿಷ್ಟು ಬೇಸರ ಆಗಿದ್ದೂ “ಓದುಗರು ಏನೋ ಚೆನ್ನಾಗಿ ಇದ್ದರೆ ಓದಿ ಖುಷಿ ಪಡಬಹುದು. ಆದರೆ ಅದನ್ನು ಓದುವ ಇತರ ಬರಹಗಾರರು ಆಕರ್ಷಣೆಗೆ ಒಳಗಾಗಿ ಅಲ್ಲಿನ ಬರಹವನ್ನೇ ಗಜಲ್ ಎಂದು ಅನುಸರಿಸಿದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಮತ್ತು ಒಂದು ಒಳ್ಳೆಯ ಪ್ರಕಾರವನ್ನು ಬೇಕಾಬಿಟ್ಟಿ ಹರಿಯ ಬಿಟ್ಟು ಹಾಳು ಮಾಡಿದಂತೆ” ಎಂದಾಗ ಈ ಬಗ್ಗೆ ಗಮನಿಸಿ ಇನ್ನೂ ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೌದು ಈಗಾಗಲೇ ಹಲವಾರು ಬರಹಗಾರರು ಗಜಲ್ ಅಲ್ಲದ ಆದರೆ ಗಜಲ ಛಾಯೆ ಹೊಂದಿದ ಬರಹಗಳನ್ನು ಅನುಸರಿಸಿ ಗಜಲ್ ಹೆಸರಿನಲ್ಲಿ ಏನೇನೋ ಬರೆಯುತ್ತಿದ್ದಾರೆ. ಆದರೆ ಮೌಲ್ಯ ಕಳೆದುಕೊಳ್ಳುವ ಅಂತಹ ಬರಹಗಳು ಇತರ ಉದಯೋನ್ಮುಖ ಬರಹಗಾರರನ್ನು ಗೊಂದಲಕ್ಕೆ ಒಳಗಾಗಿಸುತ್ತವೆ. ಆದರೆ ಗಜಲ್ ಅಂತಹ ಬರಹಗಳನ್ನು ಕಾಲಕ್ರಮೇಣ ಮೂಲೆ ಗುಂಪಾಗಿಸುತ್ತದೆ

ಗಜಲ್ ಬರೆಯಲು ಏನು ಬೇಕು

ಕವನ ಆಗಬಹುದು, ಚುಟುಕು ಆಗಬಹುದು, ಭಾವಗೀತೆ ಆಗಿರಬಹುದು ಅಥವಾ ನೀಳ್ಗವಿತೆಯೇ ಆಗಿರಬಹುದು ಯಾವುದೇ ಕಾವ್ಯ ಪ್ರಕಾರವನ್ನು ನೋಡಿ ಪ್ರತಿಯೊಂದು ಸಹ ತನ್ನದೇ ಆದ ಚೌಕಟ್ಟು, ಗುಣ ಲಕ್ಷಣಗಳು ಮೊದಲಾದವುಗಳನ್ನು ಹೊಂದಿವೆ. ಇದನ್ನು ಗಜಲಗಳಿಗೆ ಹೋಲಿಸಿದರೆ ಇದರ ಚೌಕಟ್ಟು ಅತ್ಯಂತ ಕಟ್ಟುನಿಟ್ಟಾಗಿದ್ದೂ ಗುಣ ಲಕ್ಷಣಗಳೊಂದಿಗೆ ನಿಯಮಗಳನ್ನು ಸಹ ಹೊಂದಿದೆ. ಪ್ರತಿ ಸಾಲು ಹೀಗೆ ಇರಬೇಕು ಹಾಗೆ ಇರಬೇಕು ಎಂದು ಬಯಸುವ ಗಜಲ್, ಬರೆಯಲು ಅದರ ಬಗೆಗಿನ ಅರಿವು ಮೊದಲ ಮತ್ತು ಕನಿಷ್ಠ ಅವಶ್ಯಕತೆ. ಜೊತೆಗೆ ಗಜಲ್ ಇತಿಹಾಸ, ಬೆಳೆದು ಬಂದ ರೀತಿ, ತನ್ನೊಳಗೆ ಹಲವು ಪ್ರಕಾರಗಳನ್ನು ಅಡಗಿಸಿಗೊಂಡಿರುವ ನೀತಿ ಹೀಗೆ ಗಜಲ್ ಬಗ್ಗೆ ಉತ್ತಮ ಬರವಣಿಗೆಗೆ ಏನು ಬೇಕು, ಏನು ಬೇಕು, ಹೇಗೆ ಇರಬೇಕು ಎನ್ನುವ ಮೊದಲಾದ ಅಂಶಗಳನ್ನು ನಿಮ್ಮ ಮುಂದೆ ತೆರೆದಿಡುವುದು ಗಜಲ್ ಲೋಕ ಎನ್ನುವ ಈ ಅಂಕಣದ ಹೊಣೆಯಾಗಿರಲಿದೆ. ಇನ್ನೂ ಮುಂದೆ ಇದರ ಬಗ್ಗೆ ಪ್ರತಿ ಸಂಚಿಕೆಯಲ್ಲಿ ಮಾಹಿತಿ ನೀಡುತ್ತಾ ಸಾಗಲಾಗುವುದು.

***********

ಬಸವರಾಜ ಕಾಸೆ

Leave a Reply

Back To Top