ಬಸವ ಜಯಂತಿ ವಿಶೇಷ

ಡಾ. ಪ್ರಿಯಂವದಾ ಮ ಹುಲಗಬಾಳಿ.

ಪರಮ ದಾಸೋಹಿ ಕಾಯಕ ಪ್ರೇಮಿ ಶಿವಶರಣ ಮೇದಾರ ಕೇತಯ್ಯ
ಎನ್ನ ಚಿತ್ತಕ್ಕೆ ಆಚಾರ ಲಿಂಗವಾದಾತ ಬಸವಣ್ಣ.
ಎನ್ನ  ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಶೋತ್ರಕ್ಕೆ ಪ್ರಸಾದ ಲಿಂಗವಾದಾತ ಬಸವಣ್ಣ.
ಎನ್ನ ಹೃದಯಕ್ಕೆ ಮಹಾಲಿಂಗವಾದತ ಬಸವಣ್ಣ. ಇಂತಿದನರಿದೇನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ.

ಎಂದು ತಮ್ಮ ಸರ್ವಸ್ವವೂ ಬಸವಣ್ಣ ಎಂದು ಸದಾ ಅಪ್ಪ ಬಸವರ ಧ್ಯಾನದಲ್ಲಿಯೇ ಬದುಕಿದವರು ಶರಣ ಮೇದಾರ ಕೇತಯ್ಯನವರು.
12ನೆಯ ಶತಮಾನವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ಬಸವಯುಗ’ ವೆಂದೆ ಗುರುತಿಸುತ್ತೇವೆ. ವಚನಕಾರರಲ್ಲಿ ಜನಪ್ರಿಯತೆ ಪಡೆದ ವಚನಕಾರ ಬಸವಣ್ಣನವರು ಎಂಬುದು ವಿದ್ವಾಂಸರಾದಿಯಾಗಿ ಎಲ್ಲರೂ ಒಪ್ಪಿಕೊಂಡಿದ್ದೇವೆ. ವಚನ ಕ್ರಾಂತಿಯ ಹರಿಕಾರನಾಗಿ ತನ್ನೊಂದಿಗೆ ಅನೇಕ ಶರಣರನ್ನು ವಚನ ರಚನೆಗೆ ಪ್ರೇರೇಪಿಸಿದವರು ಬಸವಣ್ಣನವರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಮುಂದಾಳುಗಳಾಗಿ ಬಸವಣ್ಣನವರು ಮಾಡಿದ ಕಾರ್ಯಗಳು ಅನೇಕ. 12ನೇ ಶತಮಾನದ ಈ ಕ್ರಾಂತಿ ಪುರುಷರ ತತ್ವಗಳು ಇಂದಿಗೂ ಜನರಿಗೆ ದಾರಿದೀಪಗಳಾಗಿವೆ. ಬಸವಣ್ಣ ತೋರಿದ ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣದ ದಾರಿ ಹಲವರಿಗೆ ಹೆದ್ದಾರಿ. ಜಾತ್ಯಾತೀತ ಸಮಾಜ ನಿರ್ಮಿಸಿದ ಬಸವಣ್ಣನವರು ಎಲ್ಲರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಅನುವು ಮಾಡಿಕೊಟ್ಟ ಧೀಮಂತರು. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಅನೇಕ ಶರಣರಲ್ಲಿ ಮೇದಾರ ಕೇತಯ್ಯನವರು ಒಬ್ಬರು. ಮೇದಾರ ಕೇತಯ್ಯನವರು ಬಸವಣ್ಣನವರಿಗೆ ಅತ್ಯಂತ ಆಪ್ತರು ಎನ್ನುವುದು ಕೂಡ ಅಷ್ಟೇ ಸತ್ಯ.

ಮೊದಲಿಲ್ಲದ ಲಾಭವುಂಟೆ?
ನಿರೀಕ್ಷಣೆ ಇಲ್ಲದೆ ಪರೀಕ್ಷೆಯುಂಟೆ? ಗುರುವಿಲ್ಲದೆ ಲಿಂಗವುಂಟೆ?
ಇಂತಿ ವೇಷದ ಭಾಷೆಗೆ ಹೇಸಿದೆನು ಕಾಣಾ ಗವರೇಶ್ವರಾ
.
ಗುರುವಿರಲಾರದೆ ನಾವು ಯಾವ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಹೇಳುವುದರೊಂದಿಗೆ, ನಾವು ಯಾವುದೇ ರೀತಿಯ ಲಾಭ, ಯಶಸ್ಸು ಪಡೆಯಬೇಕಾದರೆ ಕಷ್ಟ ಪಡಬೇಕು. ಮೊದಲು ಕೆಲಸಮಾಡಬೇಕು ನಂತರ ಅದರ ಪ್ರತಿಫಲ ಪಡೆಯಲು ಸಾಧ್ಯ. ಕಷ್ಟವೇ ಇಲ್ಲದೆ ನಿಮಗೆ ಫಲ ಸಿಗಲು ಸಾಧ್ಯವೆ? ಹಾಗೆಯೇ ಕಾಯಕದಿಂದ ಮಾತ್ರ ನಮಗೆ ಫಲ ಎನ್ನುವ ಭಾವ ಇಲ್ಲಿದೆ. ಗುರು ಲಿಂಗ ಜಂಗಮದ ಆರಾಧಕರಾದ ಕೇತಯ್ಯನವರಿಗೆ, ವೇಷದ ಭಾಷೆ ಅಂದರೆ ಡಾಂಭಿಕ ಭಕ್ತರ ನಡುವಳಿಕೆ ಅಸಹ್ಯವಾಗಿ ಕಾಣುತ್ತದೆ. ನಿಜ ಭಕ್ತರು ತೋರಿಕೆಯ ಭಕ್ತಿ ಮಾಡುವವರನ್ನು ಕಂಡರೆ ಅಸಹ್ಯ ಪಟ್ಟುಕೊಳ್ಳತ್ತಾರೆ. ನಿಜಭಕ್ತ ಕೇತಯ್ಯ ನವರು ಇದಕ್ಕೆ ಹೊರತಾದವರಲ್ಲ.
ಮೇದಾರ ಕೇತಯ್ಯನವರ ಜೀವನದ ಕುರಿತಾದ ಹೆಚ್ಚಿನ ಮಾಹಿತಿ ನಮಗೆ ದೊರೆಯುವುದು ಜನಪದ ಸಾಹಿತ್ಯದಲ್ಲಿ ಮೇದಾರಕೇತಯ್ಯನವರ ವೈಯಕ್ತಿಕ ಜೀವನದ ಕುರಿತಾಗಿ ಅವರ ಯಾವ ವಚನಗಳಲ್ಲಿಯೂ ನಮಗೆ ಮಾಹಿತಿ ದೊರೆಯುವುದಿಲ್ಲ. ಜನಪದ ಸಾಹಿತ್ಯದ ಆಧಾರವಾಗಿಟ್ಟುಕೊಂಡು ಶಿಷ್ಟ ಸಾಹಿತ್ಯದಲ್ಲೂ ಕೂಡ ಅವರ ಜನ್ಮಸ್ಥಳವನ್ನು ಬೇಲೂರು ಎಂದು ಗುರುತಿಸುತ್ತಾರೆ. ಅದು ಉಳಮೆ ಬೆಟ್ಟದ ಕೆಳಗಿನ ಬೇಲೂರು ಅಂದರೆ ಉಳವಿ ಹತ್ತಿರದ ಬೇಲೂರು ಇರಬಹುದು ಎಂದು ಹಲವರ ಅಭಿಮತ. ಕೇತಯ್ಯ ನವರ  ಪುಣ್ಯಸ್ತ್ರೀ ಸಾತವ್ವೆ ಎನ್ನುತ್ತಾರೆ.
ಕಾಯಕ ಜೀವಿಗಳಾಗಿ ವಚನ ರಚನೆಯಂತಹ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜ ಚಿಂತನೆಯನ್ನು ನಡೆಸಿದ ಶ್ರೇಷ್ಠವಚನಕಾರ ಮೇದಾರ ಕೇತಯ್ಯನವರು. ಆಧ್ಯಾತ್ಮದ ತಳಹದಿಯ ಮೇಲೆ ಸುಸ್ಥಿರ ಸಮಾಜವನ್ನು ಕಟ್ಟವಯಸಿದ ಅಗ್ರಗಣ್ಯ ವಚನಕಾರರು. ಬಸವಣ್ಣನವರನ್ನು ಗುರುಗಳೆಂದು ಸ್ವೀಕರಿಸಿದರು ಗುರುಲಿಂಗ ಜಂಗಮದಲ್ಲಿ ನಿಜ ಸುಖ ಕಂಡ ಶರಣರಿವರು, ಬಸವಣ್ಣನವರ ಸಮಕಾಲಿನ ಶರಣ. ಅನುಭಾವಿ, ಶುದ್ಧ ಕಾಯಕ ಜೀವಿ ಎಂದೆನಿಸಿಕೊಂಡ ಮೇದಾರ ಕೇತಯ್ಯನವರು ಬಸವಣ್ಣನವರಿಗೆ ಅತ್ಯಂತ ಆಪ್ತರು.
ಕೇತಯ್ಯನವರದು ಸ್ವಾರ್ಥವಿಲ್ಲದ ಬದುಕು ಅವರ ಬದುಕಿನಲ್ಲಿದ್ದದ್ದು ನಿಸ್ವಾರ್ಥ ಗರಿಗೆದರಿದ ಸತ್ಯ ಸುಂದರ ಶಿವನ ಬೆಳಕು. ಕೇತಯ್ಯನವರದು ಬಿದಿರು ಕಾಯಕ.’ಗವರೇಶ್ವರ’ ಇವರ ವಚನಾಂಕಿತ.’ಗವರ’ ಎಂದರೆ ಬಿದಿರು. ಕೇತಯ್ಯ ನವರು ಕಾಡಿನಿಂದ ತಂದ ಬಿದಿರಿನಿಂದ ಮೊರ,ಬುಟ್ಟಿ, ಬೀಸಣಿಕೆ,ತೊಟ್ಟಿಲು, ಮೊದಲಾದ ವಸ್ತುಗಳನ್ನು ತಯಾರಿಸುತ್ತಿದ್ದರು. ಅವುಗಳನ್ನು ಕಲ್ಯಾಣದ ಪೇಟೆಯಲ್ಲಿ ಮಾರಿ ಬಂದ ಹಣದಲ್ಲಿ ದಾಸೋಹ ಮಾಡುವುದು ಇವರ ಪ್ರತಿನಿತ್ಯದ ಕಾಯಕವಾಗಿತ್ತು. ಕಾಯಕಮೂಲದಿಂದ ಬಂದ ಸಂಪಾದನೆ ಮಾತ್ರ ಸ್ವಂತದ್ದು, ಅನಾಯಾಸವಾಗಿ ಬಂದ ಯಾವ ಸಂಪತ್ತು ನಮ್ಮದಲ್ಲ ಎಂದು ತಿಪ್ಪೆಗೆಸೆದ ಮಹಾನುಭಾವಿ ಶರಣರಿವರು.
ದಂತಕಥೆಗಳು ಏನೇ ಹೇಳಲಿ ಕೇತಯ್ಯನವರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಕಾಯಕವನ್ನು ಪ್ರೀತಿಸಿದವರು. ಜಂಗಮ ದಾಸೋಹಕ್ಕಾಗಿ ಸದಾ ಕಾಯಕನಿರತರಿವರು.ಪ್ರತಿನಿತ್ಯ ಸೂರ್ಯಾಸ್ತಕ್ಕಿಂತ ಮೊದಲೇ ಕಾಯಕ ಮಾಡಿ ಮಾಡುವ ಸಂಕಲ್ಪ ಹೊಂದಿದ ಶರಣರಿವರು. ಆಶೆ ಆಮಿಷೆಗಳನ್ನು ಮೀರಿ ನಿಲ್ಲಬೇಕು, ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ತತ್ವ ಇವರದು.

ಭಕ್ತಂಗೆ ಸುಖವೂ ಸರಿ ದುಃಖವೂ ಸರಿ
ಉರಿ ಸಿರಿ ಉಭಯವೂ ಸರಿ ಎನ್ನದಿರ್ದಡೆ ಭಕ್ತನಿಗದೇ ಹಾನಿ
ಜಂಗಮವೆಂದು ಪ್ರಮಾಣಿಸಿ

ತನ್ನಂಕಗಳ ಮುಂದೆ ಕಂಡವರ ಭಂಜಿಸಲಿಕ್ಕೆ ಹೊರೆದಡೆ ತೀರ್ಥ ಪ್ರಸಾದಕ್ಕೆ ಅವನಂದೇ ಹೊರಗು, ಗವರೇಶ್ವರಾ
ಬದುಕಿನಲ್ಲಿ ಬಂದ ಕಷ್ಟಗಳ ಎದುರಿಸಿ ಶರಣ ಜೀವನ ನಡೆಸಿದ ಕೇತಯ್ಯನವರು ಭಕ್ತನಾದವನು ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಈ ವಚನದಲ್ಲಿ ಹೇಳುತ್ತಾರೆ. ನೋವು – ನಲಿವುಗಳು ಶಿವನ ದಯೆ ಎಂದು ಭಾವಿಸಿದ್ದ ಕೇತಯ್ಯನವರು ಶಿವ ನಮಗೆ ಕಷ್ಟಗಳನ್ನು ನೀಡಿದ್ದಾನೆಂದರೆ ಅದು ನಮ್ಮ ಮೇಲಿನ ಪ್ರೀತಿಯಿಂದ ಎಂದು ತಿಳಿಯಬೇಕು. ಆತ ನೀಡುವ ಕಷ್ಟಗಳ ಮೂಲಕ ನಮ್ಮಿಂದ ಬೇರೆ ಎನನ್ನೊ ಬಯಸಿದ್ದಾನೆ ಎಂದು ಭಾವಿಸಬೇಕು. ನಮ್ಮಲ್ಲಿ ಅಡಗಿರುವ ಒಳ್ಳೆಯ ಗುಣವನ್ನು ಅರಸಲೆಂದೇ ಆತ ನಮಗೆ ಕಷ್ಟ ನೀಡುತ್ತಾನೆ ಅರಿವು ಆಚಾರ ಸಮ್ಯಜ್ಞಾನ ಉಳ್ಳವರೇ ಭಕ್ತರು. ಕಾಯಕ ದಾಸೋಹದಲ್ಲಿಯೇ ನಿರತರಾದವರು ಭಕ್ತರು, ಉರಿಯೂ ಅಂದರೆ ಕಷ್ಟವೂ ಶಿವನ ಪ್ರಸಾದ,ಸಿರಿಯೂ ಅಂದರೆ ಶ್ರೀಮಂತಿಕೆ ಅಥವಾ ಸುಖ ಅದು ಕೂಡ ಶಿವನಪ್ರಸಾದ ಎಂದು ಭಾವಿಸುವವರು ಭಕ್ತರು. ಸುಖ ದುಃಖಗಳ ಸಮರಸವೇ ಜೀವನ. ಕೇವಲ ಸುಖ ಅದು ನೀರಸ. ಬದುಕಿನಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದರಲ್ಲಿಯೇ ಸಾರ್ಥಕತೆ ಅಡಗಿದೆ. ಕಷ್ಟ-ಸುಖಗಳೆರಡನ್ನೂ ಸ್ವೀಕರಿಸುವವ ನಿಜವಾದ ಭಕ್ತ ಎನ್ನುವ ಭಾವ ಕೇತಯ್ಯನವರಲ್ಲಿದೆ. ಯಾರನ್ನಾದರೂ ಮೆಚ್ಚಿಸಲಿಕ್ಕೆ ನಾವು ಭಕ್ತಿಯನ್ನು ಮಾಡಿದರೆ ಅಂತಹ ಭಕ್ತ ಜಂಗಮ,ಪ್ರಸಾದ,ಪಾದೋದಕ ಇವೆಲ್ಲವುಗಳಿಂದ ದೂರ ಉಳಿಯುತ್ತಾನೆ ಎಂದು ಹೇಳುತ್ತಾರೆ. ಅಂದರೆ ಅಂತಹ ಸ್ವಾರ್ಥ ಭಕ್ತರು ಗವರೇಶ್ವರ ದರ್ಶನಕ್ಕೆ ಅರ್ಹರಲ್ಲ ಎನ್ನುತ್ತಾರೆ.
ಉನ್ನತ ತತ್ವಗಳನ್ನು ವಚನಗಳ ಮೂಲಕ ಅಷ್ಟೇ ಅಲ್ಲ ತಮ್ಮ ಬದುಕಿನ ಮೂಲಕವೂ ಸಾರಿದವರು ಮೇದಾರ ಕೇತಯ್ಯನವರು. ಅವರ ಕೇವಲ ಹದಿನೆಂಟು ವಚನಗಳು ಮಾತ್ರ ನಮಗೆ ದೊರಕಿದ್ದರೂ ಅಪಾರ ಉನ್ನತ ವಿಚಾರಗಳು ಅವುಗಳಲ್ಲಿ ಅಡಗಿರುವುದನ್ನು ಕಾಣುತ್ತೇವೆ. ಬಸವಣ್ಣನವರ ಪ್ರಾಣ ಕೇತಯ್ಯನವರಲ್ಲಿ ಅಡಗಿತ್ತೆಂದರೆ ಕೇತಯ್ಯನವರ ಬದುಕು ಎಂತಹದು ಎಂದು ನಮಗೆ ಅರ್ಥವಾಗುತ್ತದೆ.
ಪ್ರಾಣ ಹೋಗುವ ಮುಂಚೆ ಕಾಯಕ ಪೂರೈಸಿದ ಶರಣರಿವರು. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂಬ ವಚನದಂತೆ ಬಾಳಿದವರು ಕೇತಯ್ಯ ಸಾತವ್ವೆಯರು.ಸಕಲ ಚರಾಚರಗಳಲ್ಲೂ ತನ್ನ ಆರಾಧ್ಯದೈವ ಗವರೇಶ್ವರರನ್ನು ಕಂಡವರು.
‘ಇಂದ್ರಿಯಂಗಳ ಕೊಂದೆಹನೆಂದಡೆ,ಅವು ಕಂದರ್ಪನ ಹಂಗು
ಕಂದರ್ಪನ ಕೊಂದೆಹೆನೆಂದಡೆ ಅವು ಕಂಗಳ ಲಾಭ
ಕಂಗಳ ಮುಚ್ಚಿಯ
ಲ್ಲದೆ ಲಿಂಗವ ಕಾಣಬಾರದು
ಅದು ನಿರಂಗಂಗಲ್ಲದೆ, ಜಗದ ಹಂಗಿನವರಿಗಿಲ್ಲಾ ಎಂದೆ ,ಗವರೇಶ್ವರಾ’
.
ಪಂಚೇಂದ್ರೀಯಗಳ ಮೋಹದಾಚೆಗಿನ ಬದುಕು ಶರಣರದು. ವಿಷಯ ಸುಖಗಳನ್ನು ಗೆದ್ದು ನಿಂತವರು ಲಿಂಗ ಸಂಗಿಗಳು. ಕಂಗಳ ಮುಂದೆ ಯಾವ ಆಶೆ ಆಮಿಷಗಳು ಇರಬಾರದು.ಕಂಗಳ ಮುಂದಿನ ಕಾಮವನ್ನು ಕೊಂದವರು ಮಾತ್ರ ಲಿಂಗದ ಸಾಮೀಪ್ಯ ಸಾಧಿಸುವರು. ಲಿಂಗಾಂಗ ಸಾಮರಸ್ಯ ಹೊಂದಬೇಕಾದರೆ ಲೌಕಿಕ ಬದುಕಿನ ಜಂಜಡದಿಂದ ದೂರ ಇರಬೇಕು. ಅಂಗಮೋಹಿ ಎಂದೂ ಲಿಂಗಮೋಹವನ್ನು ಸಾಧಿಸಲಾರ. ಇಷ್ಟಲಿಂಗದ ಆರಾಧನೆಗೆ ಚಿತ್ತ ಶುದ್ಧವಾಗಿರಬೇಕು ಎಂಬ ಭಾವವ ಬಿತ್ತಿದವರು ಮೇದಾರ ಕೇತಯ್ಯ. ಬಾಹ್ಯ ಲೋಕದ ಮೋಹ ಮುರಿದು ಅಂತರಂಗ ಶುದ್ಧವಾಗಿಟ್ಟುಕೊಂಡ ಭಕ್ತನಿಗೆ ಮಾತ್ರ ಇಷ್ಟಲಿಂಗದ ಆರಾಧನೆ ಸಾಧ್ಯ. ಅಂಥ ಭಕ್ತರುಮಾತ್ರ ಗವರೇಶ್ವರನಿಗೆ ಹತ್ತಿರ. ಜಗದ ಮೋಹದಲ್ಲಿ ಮುಳುಗಿದವರಿಗೆ ಗವರೇಶ್ವರ ಬಹು ದೂರ ಎಂದಿದ್ದಾರೆ ಶಿವಶರಣ ಕೇತಯ್ಯನವರು.
ಕರಣದ ಶರಣ[ನ]ನು ಕಂಡಿಹೆ, ಕೇಳಿಹೆ,
ಉಂಡುಟ್ಟುದ್ದವಾಗಿ ಹೇಳಿ ಜೋಗೈಸಿಹೆನೆಂಬ
ಬಾಲರಿಗಿನ್ನೆಲ್ಲಿಯ ಅನುಭಾವ,
ಪರಮ ಗುರುವೆ, ಗವರೇಶ್ವರ ಬಲ್ಲ’.

ಅನುಭಾವ ಆಧ್ಯಾತ್ಮ ಅರಿಯಬೇಕಾದರೆ ಹುಡುಗಬುದ್ಧಿ ಇರಬಾರದು. ಗಂಭೀರತೆಯಿಂದ, ಆಳವಾದ ಅಧ್ಯಯನದ ಮೂಲಕ, ಸತತ ಪ್ರಯತ್ನದ ಮೂಲಕ ಮಾತ್ರ ಅನುಭಾವ ಸಾಧ್ಯ. ತಿಂದು,ಉಂಡು,ಮಲಗುವ ಅಂದರೆ ಬರೀ ಸಂಸಾರಿಕ ಮೋಹದಲ್ಲಿ ಮುಳುಗಿದವರಿಗೆ ಅನುಭಾವ ಸಾಧಿಸಲು ಸಾಧ್ಯ ಇಲ್ಲ ಎನ್ನುವುದು ಕೇತಯ್ಯ
ಹಂಗು ಹರಿದು ನಿರಂಗನಾಗುವ ಪರಿ ಎಂತಹುದು ಎಂಬುದನ್ನು ಶರಣ ಕೇತಯ್ಯನವರ ವಚನದಲ್ಲಿ ಕಾಣುತ್ತೇವೆ.

ನವರ ಅಭಿಪ್ರಾಯ ಅದು ನಿಜವೂ ಹೌದು. ಇಂದ್ರೀಯಗಳ ಮೋಹದಲ್ಲಿ ಮುಳುಗಿದವ ಶರಣತ್ವಕ್ಕೆ ಏರಲಾರ ಎನ್ನುವ ಭಾವವುಳ್ಳ ಕೇತಯ್ಯನವರು, ಪಂಚೇಂದ್ರೀಯಗಳ ದಾಸರರಾಗಿ ಭೋಗ ಜೀವನ ನಡೆಸುವವರಿಗೆ ಯೋಗ ಜೀವನ ನಡೆಸಲು ಸಾಧ್ಯವಿಲ್ಲ. ಈಷಾರಾಮಿ ಬದುಕು ನಡೆಸುತ್ತ ನಾನು ಯೋಗಿ ಎಂದರೆ ಅದು ಹೇಗೆ ಸಾಧ್ಯ? ಯೋಗಿ ಎನಿಸಿಕೊಳ್ಳುವವ ತ್ಯಾಗ ಜೀವನ ನಡೆಸಬೇಕು ಎಂದು ತನ್ನ ಪರಮ ಗುರುವಾದ ಹಾಗೂ ಆರಾಧ್ಯ ದೈವವಾದ ಗವರೇಶ್ವನಿಗೆ ಸಕಲವೂ ತಿಳಿದಿದೆ, ಆತ ಎಲ್ಲವನ್ನೂ ಬಲ್ಲವ ಎಂಬ ವಿಚಾರ ಕೇತಯ್ಯನವರದು. ಪರಮಾತ್ಮನಿಗೆ ಎಲ್ಲರ ಬಗ್ಗೆಯೂ ತಿಳಿದಿದೆ, ಯಾರೂ ಆತನನ್ನು ಮನದಿಂದ ಆರಾಧಿಸುತ್ತಾರೆ, ಯಾರು ಡಾಂಭಿಕರು, ಯಾರು ಯೋಗಿಗಳಂತೆ ವೇಷ ಹಾಕುತ್ತಾರೆ ಇದೆಲ್ಲವನ್ನು ಪರಮ ಗುರು ಅರಿತಿರುತ್ತಾನೆ.
ಕಾಯಕ ಜೀವಿಯಾದ ಕೇತಯ್ಯ ದಾಸೋಹವನ್ನೇ ತಮ್ಮ ಉಸಿರಾಗಿಸಿಕೊಂಡವರು. ಅವರ ಪುಣ್ಯಸ್ತ್ರೀ ಸಾತವ್ವೆ ಪತಿಯ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುವವರು. ತನ್ನ ಪ್ರಾಣ ಹೋಗುವ ಸಂದರ್ಭದಲ್ಲೂ ದಾಸೋಹ ಮಾಡಲೇಬೇಕು ಎಂದು ಹಥ ಹಿಡಿದ ಪತಿಯ ವಿಚಾರಕ್ಕೆ ಮನ್ನಣೆ ಇತ್ತವಳು ಶರಣೆ ಸಾತವ್ವೆ.
ಜಾನಪದ ಸಾಹಿತ್ಯದಲ್ಲಿ ಕೇತಯ್ಯನ ಪ್ರಾಣ ಹೋದಾಗ ಬಸವಣ್ಣವರೂ ಪ್ರಾಣ ತೊರೆದರು ಎಂಬ ಕಥೆ ಬರುತ್ತದೆ. ಅದರ ಸತ್ಯಾಸತ್ಯತೆ ಏನೇ ಇರಲಿ ಬಸವಣ್ಣನವರು ಕೇತಯ್ಯನವರ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದರು ಎನ್ನುವುದು ಸುಳ್ಳಲ್ಲ. ಧನ ಕನಕ ಯಾವ ಮೋಹವೂ ಕೇತಯ್ಯನ ಕಾಯಕಕ್ಕೆ ದಾಸೋಹಕ್ಕೆ ಅಡ್ಡಿ ಬರಲಿಲ್ಲ. ಅಂಥಹ ಸಂದರ್ಭ ಬಂದಾಗ ಕೇತಯ್ಯ ಅದನ್ನು ಮೆಟ್ಟಿ ಸಾಗಿದ್ದಾನೆ. ನಿಷ್ಕಲ್ಮಷ ಮನದಿಂದ ಮಾಡುವ ಭಕ್ತಿ ನಮಗೆ ಇಷ್ಟಲಿಂಗದ ಸಾಕ್ಷಾತ್ಕಾರ ಮಾಡಿಸುತ್ತದೆ. ಮಾನವರಾಗಿ ಹುಟ್ಟಿ ಬಂದ ನಾವು ಜೀವನವನ್ನು ಸಾರ್ಥಕ ಮಾಡಿಕೊಳ್ಳುವ ಪರಮ ಗುರಿ ಹೊಂದಿರಬೇಕು. ಗುರು, ಲಿಂಗ ಜಂಗಮಕ್ಕೆ ನಿಷ್ಠೆಯುಳ್ಳವರಾಗಿರಬೇಕು. ಅರಿಷಡ್ ವರ್ಗಗಳನ್ನು ಗೆದ್ದವನಾಗಿರಬೇಕು. ಮಾಯಾ ಮೋಹಗಳಿಂದ ದೂರವಿರಬೇಕು, ತಾಮಸ ಬುದ್ಧಿಯ ಬಿಟ್ಟಿರಬೇಕು. ಸಕಲ ತತ್ವಗಳ ಸಾರ ಅರಿತವರು ಅಣ್ಣಬಸವಣ್ಣ, ಅವರೇ ತನಗೆ ಗುರು ಎನ್ನುವ ಕೇತಯ್ಯನವರು ಶ್ರೇಷ್ಠ ಶಿವಯೋಗ ಸಾಧಕರು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
   ‘ ಗುರು ಹುಸಿ, ಲಿಂಗ ದಿಟವೆನಲಿಲ್ಲ.
     ಲಿಂಗ ಹುಸಿ, ಜಂಗಮ ದಿಟವೆನಲಿಲ್ಲ
     ಜಂಗಮ ಹುಸಿ, ಪಂಚಾಚಾರ ದಿಟವೆನಲಿಲ್ಲ
.
     ಇಂತಿವರಂಗವನು ಗವರೇಶ್ವರ ಬಲ್ಲ’.    ಯಾವುದನ್ನೂ ಕೀಳು ಮಾಡಿ ಮಾತನಾಡಬಾರದು ಎಲ್ಲವೂ ಶ್ರೇಷ್ಠ ಎಂಬ ವಿಚಾರಧಾರೆ ಶಿವಶರಣ ಕೇತಯ್ಯನವರದಾಗಿತ್ತು. ಪಂಚ ಆಚರಣೆಗಳೇ ಇರಲಿ, ಅಷ್ಟಾವರಣದಲ್ಲಿ ಬರುವ ಗುರು ಲಿಂಗ ಜಂಗಮ ಎಂಬ ತ್ರಿವಿಧಗಳೇ ಇರಲಿ ಎಲ್ಲವೂಗಳಿಗೆ ಅವುಗಳದೇ ಆದ ವೈಶಿಷ್ಠ್ಯವಿರುತ್ತದೆ. ಪಂಚಾಚಾರಗಳೆಂದರೆ ಲಿಂಗಾಚಾರ,ಸದಾಚಾರ,ಶಿವಾಚಾರ,ಗಣಾಚಾರ,ಭೃತ್ಯಾಚಾರವೆಂಬವುಗಳಾಗಿವೆ. ಗುರುವನ್ನು ಅಲ್ಲಗಳೆದು ಲಿಂಗವನ್ನು ಸತ್ಯವೆಂದು ಹೇಳಲಿಲ್ಲ, ಲಿಂಗವನ್ನು ತಿರಸ್ಕರಿಸಿ ಜಂಗಮವನ್ನು ಉನ್ನತಿಕರಿಸಲಿಲ್ಲ, ಜಂಗಮವನ್ನು ನಿರಾಕರಿಸಿ ಪಂಚಾಚಾರಗಳೇ ಮೇಲು ಎನ್ನುವಂತಿಲ್ಲ. ಲಿಂಗಾಯತ ಧರ್ಮದಲ್ಲಿ ಎಲ್ಲವೂಗಳು ಸಮಾನ. ಧರ್ಮದ ಎಲ್ಲ ತತ್ವಗಳನ್ನು, ಆಚರಣೆಗಳನ್ನು ಅವುಗಳ ಸಾರವನ್ನು ಗವರೇಶ್ವರನೇ ಬಲ್ಲ.
   ಹೀಗೆ ಬಿದಿರು ಕಾಯಕ ಮಾಡುವ ಒಬ್ಬ ಶರಣ ಇಂತಹ ಆಳವಾದ ವಿಚಾರವನ್ನು ಹೊಂದಿದ್ದ ಎಂದರೆ ಆ ಕಾಲದ ಚಿಂತನೆಗಳು ಎಷ್ಟು ಉನ್ನತವಾಗಿದ್ದವು ಎಂಬುದು ನಮಗೆ ಅರಿವಾಗುತ್ತದೆ. ಅರಿವು, ಆಚಾರ, ಸಮ್ಯಜ್ಞಾನಗಳ ಅರಿತವ, ಗುರು ಲಿಂಗ ಜಂಗಮವ ಗೌರವಿಸುವವ, ಪಂಚಾಚಾರಗಳ ಬಗ್ಗೆ ತಿಳಿದವ, ಸುಖ ದುಃಖಗಳ ಸಮನಾಗಿ ಕಂಡವ, ಲಾಭಕ್ಕೆ ಬೆನ್ನು ಹತ್ತದೆ ಕಾಯಕಕ್ಕೆ ಮುಖಮಾಡಿ ನಿಲ್ಲುವವ ನಿಜ ಭಕ್ತ ಎನ್ನುವುದು ಕೇತಯ್ಯನ ವಿಚಾರ.
    ತನ್ನ ಕಾಯಕವನ್ನು ಆದÀರಿಸಿ ಅದಕ್ಕೆ ಆಧ್ಯಾತ್ಮದ ನಂಟನ್ನು ಅಂಟಿಸಿ ವಚನ ರಚನೆ ಮಾಡಿದವರು ಕೇತಯ್ಯನವರು.
ಮೊರನ ಹೊಲಿವ ಗವರ ನಾನೆತ್ತ ಬಲ್ಲೆನು?
ಕಟ್ಟಿಕೊಂಡಾತ ಭಕ್ತನಪ್ಪನೆ, ಕೆಡಹಿದಾತ ದ್ರೊಹಿಯಪ್ಪನೆ?
ಆ ಲಿಂಗವು ಕಟ್ಟಲಿಕೆ, ತನ್ನ ಕೈಯಲ್ಲಿಪ್ಪುದೆ?
ಕೆಡಹಲಿಕೆ, ಬೀಳಲು ಬಲ್ಲುದೆ?
ಆ ಲಿಂಗ ಬಿದ್ದ ಬಳಿಕ, ಜಗತ್ತು ಉಳಿಯ ಬಲ್ಲುದೆ.
ಆ ಪ್ರಾಣ ಲಿಂಗ ಬಿದ್ದ ಬಳಿಕ ಆ ಪ್ರಾಣ ಉಳಿಯಬಲ್ಲುದೆ.
ಆ ಲಿಂಗ ಬಿದ್ದಿತ್ತೆಂಬ ಸೂತಕದ ಶಬ್ದ ಭ್ರಂತುವಿನ ಪುಂಜ
ಅಂತು ಅದ ಕೇಳಲಾಗದು.
ಯುಗಜುಗಂಗಳು ಗತವಹವಲ್ಲದೆ, ಲಿಂಗಕ್ಕೆ ಗತ ಉಂಟೆ?

ಲಿಂಗ ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಗಳ
ಮಾತ ಕೇಳಲಾಗದು,ಗವರೇಶ್ವರಾ.

ತಾನೊಬ್ಬ ಬಿದಿರು ಕಾಯಕ ಮಾಡುವ ಗವರ ಎನ್ನುವ ಕೇತಯ್ಯ ಇಷ್ಟಲಿಂಗದ ಕುರಿತು ಹೇಳುತ್ತಾನೆ. ಇಷ್ಟಲಿಂಗ ಕೆಳಗೆ ಬಿದ್ದರೆ ನಿಂದಿಸಿ ನುಡಿಯಬಾರದು. ಲಿಂಗಕೆಳಗೆ ಬಿದ್ದರೆ ಜಗತ್ತು ಉಳಿಯಲು ಸಾಧ್ಯವೇ? ಕಾಯಕದಲ್ಲಿ ನಿರತನಾದಾಗ ಲಿಂಗ ಬಿದ್ದಿರಬಹುದು. ಒಬ್ಬ ಲಿಂಗ ಮೋಹಿ ತಾನಾಗಿಯೇ ಲಿಂಗವನ್ನು ಕೆಡುವಲಾರ. ಲಿಂಗವಿಲ್ಲದೆ ಜಗತ್ತು ಇಲ್ಲ, ಪ್ರಾಣವೂ ಇಲ್ಲ. ಲಿಂಗ ಬಿದ್ದಿತೆಂದು ಹಿಯಾಳಿಸುವವರ ಮಾತು ಕೇಳಲಾಗದು. ಯುಗಯುಗಾಂತರಗಳಲ್ಲಿ  ಮೋಸ ಇರಬಹುದು ಆದರೆ ಲಿಂಗಕ್ಕೆ ಎಂದಿಗೂ ಮೋಸವಿಲ್ಲ. ಅಂದರೆ ಲಿಂಗವ ನಂಬಿದವ ಎಂದಿಗೂ ಸೋತಿಲ್ಲ. ಲಿಂಗ ಬಿದ್ದಿದೆ ಎಂಬ ಮೈಲಿಗೆಯ ಮಾತು ಕೇಳಲು ಸಾದ್ಯವಿಲ್ಲ. ಲಿಂಗಾಂಗ ಸಾಮರಸ್ಯ ಹೊಂದಿದ ಶರಣ ಲಿಂಗ ಇಲ್ಲ ಎನ್ನುವವರನ್ನು ದ್ರೋಹಿಗಳು ಎನ್ನುತ್ತಾನೆ. ಶರಣನ ಅಂಗಕ್ರಿಯೆ ಲಿಂಗಕ್ರಿಯೆಗಳಾಗಬೇಕು ಎಂದು ನಂಬಿದ ಕೇತಯ್ಯನವರಿಗೆ ಲಿಂಗ ಇಲ್ಲ, ಲಿಂಗ ಬಿದ್ದಿತು ಎಂದು ಮಾತನಾಡುವವರನ್ನು ದ್ರೋಹಿಗಳು, ಅವರ ಮಾತುಗಳನ್ನು ಕೇಳಲು ಸಾಧ್ಯವಿಲ್ಲ ಎನ್ನುತ್ತಾನೆ. ಅಪಾರ ಜ್ಞಾನಿಯಾದ ಕೇತಯ್ಯ ತನ್ನ ವಚನಗಳಲ್ಲಿ ಸಮಕಾಲೀನ ಶರಣರಾದ ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣ, ಘಟ್ಟಿವಾಳಯ್ಯ, ಮದ್ದಯ್ಯ, ಸಿದ್ಧರಾಮಯ್ಯ, ಮರುಳ ಶಂಕರದೇವ, ಮಡಿವಾಳ ಮಾಚಿದೇವ ಮೊದಲಾದ ಶರಣರನ್ನು ಸ್ಮರಿಸುತ್ತಾನೆ.


ಡಾ. ಪ್ರಿಯಂವದಾ ಮ ಹುಲಗಬಾಳಿ.

Leave a Reply

Back To Top