ಬಸವ ಜಯಂತಿ ವಿಶೇಷ

ಡಾ. ಪುಷ್ಪಾ ಶಾಲವಡಿಮಠ

ಸಾಹೇಬಮ್ಮನ ಚಂದಿರ

ರಂಜಾನ್ ನ ಚಂದಿರ
ಮೆಲ್ಲಮೆಲ್ಲಗೆ
ಬೆಳ್ಳಬೆಳ್ಳಗೆ
ಮನೆಯ ಚಾವಣಿಯ
ಮೇಲೆ ಕಾಣಿಸಿಕೊಂಡ

ಥೇಟ್ ಯುಗಾದಿಯ
ಚಂದ್ರನಂತೆ ಇದ್ದ
ಕೊಂಚವೂ ವ್ಯತ್ಯಾಸ ಇರಲಿಲ್ಲ

ಪಕ್ಕದ ಮನೆಯ ಸಾಹೇಬಮ್ಮ
ಬಟ್ಟಲ ತುಂಬ
ಕಮ್ಮನೆ ತುಪ್ಪ ಹಾಲಿನಲಿ
ಮಾಡಿದ ಪಾಯಸ ತಂದಳು
ಅಕ್ಕರೆಯ ಸಕ್ಕರೆ ಬೆರೆಸಿ ತಿನಿಸಿದಳು

ಚಂದಿರ ನಕ್ಕ
ಯುಗಾದಿಗಷ್ಟೇ ಹೀಗೇ
ಸುಶೀಲಮ್ಮ ಬೇವು ಬೆಲ್ಲ ತಿನಿಸಿದ್ದಳು
ಅಕ್ಕರೆ ಬೆರೆಸಿ
ಹೋಳಿಗೆ ತುಪ್ಪ ಉಣಿಸಿದ್ದಳು

ರಂಜಾನ್ ನಲ್ಲೂ ಅದೇ ಸಕ್ಕರೆ
ಯುಗಾದಿಯಲ್ಲೂ ಅದೇ ಅಕ್ಕರೆ
ಅದೇ ತಾಯ್ತನ ಇಬ್ಬರಲ್ಲೂ

ರಂಜಾನ್ ನ ಚಂದಿರ
ಸಾಹೇಬಮ್ಮನ ಹಿತ್ತಲಲ್ಲಿ
ಹಸಿರಾಗಿ ಕಾಣುತ್ತಿರಲಿಲ್ಲ
ಬೆಳ್ಳಗೇ ಹೊಳೆಯುತ್ತಿದ್ದ
ಹೂ ನಗೆಯ ಚೆಲ್ಲಿ

ಥೇಟ್ ಹೀಗೇನೇ….
ಅಂದು ಯುಗಾದಿಯ ಚಂದಿರ
ಸುಶೀಲಮ್ಮನ ಹಿತ್ತಲಲ್ಲಿ
ಕೇಸರಿಯಾಗಿ ಕಂಡಿರಲಿಲ್ಲ
ಬೆಳ್ಳಗೇ ಹೊಳೆಯುತ್ತಿದ್ದ
ಹೂ ನಗೆಯ ಚೆಲ್ಲಿ

ರಾಮ್ ರಹೀಮ್ ಇಬ್ಬರೂ
ಇದ್ದ ಚಂದಿರನನ್ನೇ ಹಂಚಿಕೊಂಡಿದ್ದರು
ಹಚ್ಚಿಕೊಂಡಿದ್ದರು
ರಹೀಮ್ ನ ಅಮ್ಮಿ ಕೊಟ್ಟ
ಪಾಯಸ ಅವನು ಕುಡಿದ
ರಾಮ್ ನ ಅಮ್ಮ ಕೊಟ್ಟ
ಹೋಳಿಗೆ ಇವನು ಸವೆದ

ರಾಮ್ ರಹೀಮ್ ಇಬ್ಬರೂ
ಅಪ್ಪಿಕೊಂಡರು ಒಪ್ಪಿಕೊಂಡರು
ತಾಯ್ತನದ ಪ್ರೀತಿಯ

ದೂರದಲ್ಲಿ
ಈಶ್ವರ ಅಲ್ಲಾ ನಗುತ್ತಿದ್ದರು
ಎಲ್ಲದಕ್ಕೂ ಸಾಕ್ಷಿಯಾದ
ಚಂದಿರ ಮಾತ್ರ ಶಾಂತನಾಗಿದ್ದ
ಬೆಳ್ಳಗೇ ಹಾಲoತೆ ಇದ್ದ
ಹೂ ನಗೆಯ ಚೆಲ್ಲಿ…..


6 thoughts on “

  1. ತುಂಬಾ ಚೆನ್ನಾಗಿದೆ ಕವನ. ಅಭಿನಂದನೆಗಳು ಮೇಡಂ.

  2. ನಮಸ್ಕಾರ,
    *ಸಾಹೇಬಮ್ಮನ ಚಂದಿರ* ಈ ಕಾಲಘಟಕ್ಕೆ ಬೇಕಾದ ವಸ್ತು ನಿರೂಪಣೆಯಿಂದ ಮನದಲ್ಲಿ ಉಳಿಯುತ್ತದೆ. ಕೋಮುಭಾವನೆ ಕೆರಳಿಸಿ, ಸೌಹಾರ್ದತೆ ಹಾಳು ಮಾಡುವ ಜನರ ನಡುವೆ, ರಂಜಾನ ಚಂದ್ರ ಯುಗಾದಿ ಚಂದ್ರನಂತೆ ಬಿಳಿಯಾಗಿ ಹಾಲಿನಂತಿದ್ದ. ಅವನು ಹಸಿರಾಗಿರಲಿಲ್ಲ! ಅರ್ಥಪೂರ್ಣ ಕಾವ್ಯ ಬಂಧ.
    ನನ್ನದೊಂದು ಬೀದಿ ನಾಟಕದ ಹೆಸರು – *ಸಲೀಮನ ಚಂದಿರ*. ಅದು ಕೋಮು ಸೌಹಾರ್ದತೆ, ಸಾಕ್ಷರತೆಯ ವಸ್ತು ಒಳಗೊಂಡದ್ದು. ಅದೆಲ್ಲ ಈ ಕ್ಷಣ ನೆನಪಾಯಿತು.
    ಪುಷ್ಪಾ, ಅಭಿನಂದನೆ. ಪ್ರಕಟಿಸಿದ *ಸಂಗಾತಿಗೂ*

  3. ನಿಜ ಸರ್ ಸೌಹಾರ್ದತೆಗೆ ತುಡಿಯುವ ಪ್ರತಿ ಮನಸ್ಸು ಬಯಸೋದು ಬಿಳಿಯ ಚಂದಿರನನ್ನೇ…..
    ಓದಿ ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್.

  4. ಕವಿತೆ ಚೆನ್ನಾಗಿದೆ ಮೇಡಂ… ಕೋಮು ಸೌಹಾರ್ದತೆಗೆ ಚಂದಿರನನ್ನ ಸಾಂಕೇತಿಕವಾಗಿ ಬಳಸಿಕೊಂಡಿದ್ದು ಉತ್ತಮವಾಗಿದೆ. ಅದಕ್ಕಿಂತ ಮುಖ್ಯವಾಗಿ ಎದೆಯಿಂದದೆಗೆ ಹರಿಯಬೇಕಾದ ಪ್ರೀತಿಯ ಐಕ್ಯತೆಯನ್ನು ಸಮೀಕರಿಸಿದ್ದು ಚೆನ್ನಾಗಿದೆ…

Leave a Reply

Back To Top